ಹೆಚ್ಚಿನವರು ಮೊಬೈಲ್ ಫೋನ್ ಬಳಸಿದಾಗ ನಿಮ್ಮ ಮೊದಲ ಮೊಬೈಲ್ ಫೋನ್ ಯಾವುದಾಗಿತ್ತು..?? ನೆನಪು ಮಾಡಿಕೊಂಡಿರಾ..?? ಹೆಚ್ಚಿನವರು, ನೋಕಿಯಾ ಎಂದೇ ಹೇಳುತ್ತೀರಿ. ಅಲ್ಲವೇ..? ಹೆಚ್ಚು-ಕಡಿಮೆ 2007 ರವರೆಗೂ ನೋಕಿಯಾ ಪ್ರಾಬಲ್ಯವೇ ಹೆಚ್ಚಿತ್ತು. ಇನ್ನು ಚುಕ್ಕಿಗೆ ಚುಕ್ಕಿ ಸೇರಿಸಿ ಸ್ನೇಕ್ ಗೇಮ್ ಆಡಿದವರಂತೂ.. ನೋಕಿಯಾ ಫೋನ್ ಅನ್ನು ಮರೆಯುವಂತೆಯೇ ಇಲ್ಲ. ಏನಾದರೂ ತಗುಲಿ ಕೊಂಚ ಒಡೆದರೆ ಹಾಳಾಗುವ ಸ್ಮಾರ್ಟ್ ಫೋನ್ ಗಳನ್ನು ಕಂಡಾಗಲೆಲ್ಲಾ.. ಬಿದ್ದು ಚೂರು-ಚೂರಾದರೂ.. ಮತ್ತೆ ಜೋಡಿಸಿದಾಗ ಮೊದಲಿನಂತೆಯೇ ನೋಕಿಯಾ ರಿಂಗ್ ಟೋನ್ ಬಂದು "ಕನೆಕ್ಟಿಂಗ್ ಪೀಪಲ್" ಎನ್ನುವ ಎರಡು ಕೈಗಳು ಜೋಡಿಸಿಕೊಳ್ಳುತ್ತಿದ್ದವು. ಇದು ನೋಕಿಯಾ ಫೋನ್ ಗಿದ್ದ ವಿಶೇಷತೆಯೂ ಹೌದು. ಕೆಲವೊಮ್ಮೆ, ವಿಶೇಷತೆಯೇ ಅವರ ದೌರ್ಬಲ್ಯ ಕೂಡಾ ಆಗಬಹುದು. ಹೀಗೆಯೇ ಆಯಿತಾ..? ಏಕೆಂದರೆ ಬ್ಯುಸಿನೆಸ್ ನಲ್ಲಿ ಯಾವಾಗಲೂ ಸಕ್ಸಸ್ ರೇಟ್ ಎಂದಿನಂತೆ ಇರುವುದಿಲ್ಲ. ಅಲ್ಲದೇ.. ಬ್ಯುಸಿನೆಸ್ ಎಂಬುದು ಏಳು-ಬೀಳಿನ ಹಾದಿ. ಈ ಏಳು-ಬೀಳಿನ ಹಾದಿಯಲ್ಲಿ ನಡೆದ ನೋಕಿಯಾ ಈಗ ಕಣ್ಮರೆಯಾಗಿಬಿಟ್ಟಿದೆಯೇನೋ ಎಂಬಂತೆ ಮೂಲೆಗುಂಪಾಗಿದೆ. ನೋಕಿಯಾ ಮೊಬೈಲ್ ನಂ.1 ಸ್ಥಾನದಿಂದ ಕೆಳಗಿಳಿದದ್ದು ಹೇಗೆ..?? ಎಂದಿಗೂ ಸೋಲು ಒಂದೇ ಒಂದು ಅಂಶದಿಂದ ಉಂಟಾಗುವುದಿಲ್ಲ.. ಹಠಾತ್ತನೆ, ಪತನವೂ ಆಗುವುದಿಲ್ಲ. ಎಲ್ಲವೂ.. ಹಂತ-ಹಂತವಾಗಿಯೇ ಆಗುತ್ತದೆ. ನೋಕಿಯಾ ನಡೆದು ಬಂದಿರುವ ಈ ಹಾದಿಯನ್ನು ಗಮನಿಸೋಣ ಬನ್ನಿ.
ನೋಕಿಯಾ ಮೂಲತಃ ಭಾರತದ ಕಂಪನಿಯಲ್ಲ. ಇದು ಫಿನ್ಲ್ಯಾಂಡ್ ನ ಕಂಪನಿ. ನಮಗೆ ಗೊತ್ತಿರುವ ನೋಕಿಯಾ ಕೇವಲ ಮೊಬೈಲ್ ಬ್ರ್ಯಾಂಡ್ ಮಾತ್ರವೇ.. ಆದರೆ, ನೋಕಿಯಾ ಎಂದರೆ ಅಷ್ಟೇ ಅಲ್ಲ. ನೋಕಿಯಾ ಮೊದಲು ಶುರುವಾದದ್ದು ಹೇಗೆ ಗೊತ್ತಾ..??
1865 ಮೇ 12ರಂದು ಮೈನಿಂಗ್ ಇಂಜಿನಿಯರ್ ಆಗಿದ್ದ ಫ್ರೆಡ್ರಿಕ್ ಇಸ್ಟ್ಯಾಮ್ ಹಾಗೂ ಲಿಯೊ ಮೆಕ್ಲಿನ್ ಎಂಬ ಇಬ್ಬರು ಸ್ನೇಹಿತರು ಸೇರಿ ಫಿನ್ಲ್ಯಾಂಡ್ ಉತರದಲ್ಲಿ ಒಂದು ಫಿನಿಷ್ ಮಲ್ಟಿ ನ್ಯಾಷನಲ್ ಕಾರ್ಪೊರೇಷನ್ ಅನ್ನು ಸ್ಥಾಪಿಸಲು ಹೊರಡುತ್ತಾರೆ.
ಫಿನ್ಲ್ಯಾಂಡ್ ನ ತಾಮರ್ಕೋಸ್ಕಿ ನದಿ ದಂಡೆಯ ಮೇಲಿದ್ದ ಟಾಂಪೇರ್ ಎನ್ನುವ ಪಟ್ಟಣದ ಮೇಲೆ ಮೊಟ್ಟಮೊದಲಿಗೆ ಮರದ ಮಿಲ್ ಒಂದನ್ನು ಸ್ಥಾಪಿಸುತ್ತಾರೆ. ಅದಾದ ನಂತರ ಎರಡನೇ ಮಿಲ್ ಅನ್ನು ಸ್ಥಾಪಿಸಿದ್ದು ಅಲ್ಲಿಂದ 15 ಕಿಲೋಮೀಟರ್ ಪಶ್ಚಿಮಕ್ಕಿದ್ದ ನೋಕಿಯನ್ವಿಟ್ರಾ ಎನ್ನುವ ನದಿ ಪಕ್ಕದ ನೋಕಿಯಾ ಎಂಬ ಪಟ್ಟಣದಲ್ಲಿ. ಇದು ಪೇಪರ್ ಮಿಲ್. ನೋಕಿಯಾ ಎನ್ನುವ ಹೆಸರು ಬಂದದ್ದು ಇಲ್ಲಿಂದಲೇ..
ಅವರ ಬ್ಯುಸಿನೆಸ್ ಕೇವಲ ಇಷ್ಟಕ್ಕೇ ನಿಲ್ಲುವುದಿಲ್ಲ. ಇದಾದ ನಂತರ ತಮ್ಮನ್ನು ತಾವು ಬೇರೆ ಬೇರೆ ಬ್ಯುಸಿನೆಸ್ ನಲ್ಲಿ ತೊಡಗಿಸಿಕೊಳ್ಳಲು ಶುರು ಮಾಡುತ್ತಾರೆ. 1896ರಲ್ಲಿ ಫ್ರೆಡ್ರಿಕ್ ಎಲೆಕ್ಟ್ರಿಸಿಟಿ ಬ್ಯುಸಿನೆಸ್ ಶುರು ಮಾಡುವುದನ್ನು ನಿರಾಕರಿಸುತ್ತಾನೆ. ಅದೇ ವರ್ಷ ಅವನು ಕಂಪನಿಯಿಂದ ನಿವೃತ್ತಿ ಹೊಂದುತ್ತಾನೆ. ಇಲ್ಲಿಂದ ಮುಂದೆ ಮೆಕ್ಲಿನ್ ನ ಸಾಮ್ರಾಜ್ಯವಾಗುತ್ತದೆ. ಮೊದಲ ವಿಶ್ವಯುದ್ಧ ಮುಗಿದ ನಂತರ.. 1914ರ ಸಂದರ್ಭದಲ್ಲಿ ನೋಕಿಯಾ ದಿವಾಳಿಯಾಗುವತ್ತ ಸಾಗುತ್ತದೆ. ಆಗ, ಇದರ ಜೊತೆಗೂಡಿದ್ದು ಫಿನ್ನಿಶ್ ರಬ್ಬರ್ ವರ್ಕ್. 1932ರ ಹೊತ್ತಿಗೆ ಅದನ್ನು ಸಹ ಫಿನ್ನಿಷ್ ಕೇಬಲ್ ವರ್ಕ್ಸ್ ನವರು ಕೊಂಡುಕೊಳ್ಳುತ್ತಾರೆ.
1938 ರಲ್ಲಿ ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ನೋಕಿಯಾ ಎ.ಬಿ ಎನ್ನುವ ಹೆಸರಿನಲ್ಲಿ ಎಲೆಕ್ಟ್ರಿಸಿಟಿ ಬ್ಯುಸಿನೆಸ್ ಅನ್ನು ಶುರುಮಾಡುತ್ತದೆ ನೋಕಿಯಾ. 1947ರಲ್ಲಿ ಫಿನ್ನಿಷ್ ಕೇಬಲ್,ಫಿನ್ನಿಷ್ ರಬ್ಬರ್ ವರ್ಕ್ ಹಾಗೂ ನೋಕಿಯಾ ಕಂಪನಿಗಳು ಸೇರಿ ನೋಕಿಯಾ ಎಂಟರ್ಪ್ರೈಸಸ್ ಆಗುತ್ತದೆ. ಇಲ್ಲಿಂದ ಶುರುವಾದದ್ದು ಅವರ ಬ್ಯುಸಿನೆಸ್ ಸಾಮ್ರಾಜ್ಯ. ಪೇಪರ್ ಐಟಂಗಳು, ಕಾರ್&ಬೈಸಿಕಲ್ ಟೈರ್, ರಬ್ಬರ್ ಬೂಟ್ ಗಳು, ಕಮ್ಯುನಿಕೇಷನ್ ಕೇಬಲ್, ಎಲೆಕ್ಟ್ರಾನಿಕ್ಸ್, ಪರ್ಸನಲ್ ಕಂಪ್ಯೂಟರ್, ಜನರೇಟರ್, ರೋಬೋಟಿಕ್ಸ್, ಕೆಪ್ಯಾಸಿಟರ್ಸ್, ಮಿಲಿಟರಿ ಉತ್ಪನ್ನಗಳು, ಪ್ಲಾಸ್ಟಿಕ್, ಅಲ್ಯೂಮಿನಿಯಂ ಕೇಬಲ್.. ಹೀಗೆ ಎಲ್ಲದರಲ್ಲಿಯೂ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತಾರೆ.
1960ರಲ್ಲಿ ತಮ್ಮದೇ ಆದ ಕೇಬಲ್ ಡಿವಿಷನ್ ಅನ್ನು ಮಾಡಿಕೊಳ್ಳುತ್ತಾರೆ. ಅದೇ ಸಂದರ್ಭದಲ್ಲಿ "ಮೊಬಿರಾ ಓವೈ" ಮೊಬೈಲ್ ಕಂಪನಿಯ ಮೇಲೆ ಕಣ್ಣು ಬಿದ್ದು ಅದನ್ನು ಕೊಂಡುಕೊಂಡ ನೋಕಿಯಾ ಅದನ್ನು ಅಭಿವೃದ್ಧಿಗೊಳಿಸುತ್ತದೆ. 1982ರ ಹೊತ್ತಿಗೆ ಕಾರಿನಲ್ಲಿ ಕೊಂಡೊಯ್ಯಬಹುದಾದಂತಹಾ ಟೆಲಿಫೋನ್ ಅನ್ನು ಬಿಡುಗಡೆ ಮಾಡುತ್ತಾರೆ. ಅದೇ "ಮೊಬಿರಾ ಸೆನೆಟೋರ್". ಅದು ಹತ್ತು ಕೆ.ಜಿ ಯಷ್ಟಿರುತ್ತದೆ.
1960ರಲ್ಲಿಯೇ ಆ ಕಂಪನಿಯನ್ನು ಕೊಂಡುಕೊಂಡರೂ.. 1982 ರಲ್ಲಿ ಮೊದಲ ಫೋನ್ ಅನ್ನೋ ಬಿಡುಗಡೆ ಮಾಡಿದ್ದೇಕೆ ಗೊತ್ತೆ..??
1962 ರಲ್ಲಿ ಅವರು ಪಲ್ಸ್ ಅನಲೈಸರ್ ಅನ್ನು ಬಳಸಿ ನ್ಯೂಕ್ಲಿಯರ್ ಪವರ್ ಪ್ಲಾಂಟ್ ಗಳನ್ನು ಅನಲಿಸಿಸ್ ಮಾಡುತ್ತಾರೆ. 1967ರಲ್ಲಿ ಎಲೆಕ್ಟ್ರಾನಿಕ್ ಡಿವಿಷನ್ ನತ್ತ ಕಣ್ಣು ಹಾಯಿಸುತ್ತಾರೆ. ಅದಾವುದೂ ಕೈಹಿಡಿಯದೆ 15 ವರ್ಷಗಳ ಕಾಲ ಲಾಭ-ನಷ್ಟಗಳ ಏರಿಳಿತಗಳನ್ನು ಕಾಣುತ್ತಾ ಅದಾವುದು ಅವರಿಗೆ ಸೆಟ್ ಆಗದೆ.. ಎಲ್ಲದರ ಮೇಲೆಯೂ ಗಮನ ಹರಿಸುವುದರ ಬದಲು, ಯಾವುದಾದರೂ ಒಂದು ವಿಭಾಗದತ್ತ ಗಮನವಿಟ್ಟರೆ ಸರಿಯಾಗುತ್ತದೆ ಎನ್ನುವಾಗ.. ಅವರ ಆಯ್ಕೆ ಮೊಬೈಲ್. ಹೀಗಾಗಿ ತಮ್ಮ ಸಮಯವನ್ನು, ಗಮನವನ್ನು ಮೊಬೈಲ್ ನತ್ತ ವಿನಿಯೋಗಿಸುತ್ತಾರೆ.
10 ಕೆ.ಜಿ ಯಷ್ಟಿದ್ದ ಕಾರ್ ಟೆಲಿಫೋನ್ ಈಗ 5 ಕೆ.ಜಿ ಗೆ ಬರುತ್ತದೆ. 1984ರಲ್ಲಿ ಬಿಡುಗಡೆಯಾದ ಅದರ ಹೆಸರು "ಮೊಬಿರಾ ಟಾಕ್ ಮ್ಯಾನ್". 1987ರ ಹೊತ್ತಿಗೆ ಕೈಯಲ್ಲಿ ಹಿಡಿದು ಓಡಾಡುವಂತಹ ಹ್ಯಾಂಡ್ ಫೋನ್ ಅನ್ನು ಬಿಡುಗಡೆಗೊಳಿಸುತ್ತಾರೆ. ಅದೇ "ಮೊಬಿರಾಸಿಟಿ". ಅದರ ತೂಕ ಕೇವಲ 800 ಗ್ರಾಂ.
1991ರ ಹೊತ್ತಿಗೆ ಮೊದಲ ಜಿ.ಎಸ್.ಎಂ ಅಥವಾ 1-ಜಿ ಫೋನ್ ಗಳು ಎಂದು ಕರೆಯಬಹುದಾದ ಮೊಬೈಲ್ ಗಳನ್ನು ತಯಾರಿಸುತ್ತಾರೆ. ಆ ಮೊಬೈಲ್ ಅನ್ನು ಅಂದಿನ ಫಿನ್ಲೆಂಡ್ ಪ್ರಧಾನಿಯಾಗಿದ್ದ ಹ್ಯಾರಿ ಹೋಲ್ಕೇರಿಯವರು ಮೊಟ್ಟ ಮೊದಲ ಕರೆ ಮಾಡಿ ಬಿಡುಗಡೆಗೊಳಿಸುತ್ತಾರೆ. 1992ರ ಹೊತ್ತಿಗೆ ಜಗತ್ತಿನ ಮೊದಲ ಎಸ್.ಎಮ್.ಎಸ್ ಕಳುಹಿಸುವಂತಹಾ ಮೊಬೈಲ್ ಅನ್ನು ಬಿಡುಗಡೆಗೊಳಿಸುತ್ತಾರೆ ಅದೇ ನೋಕಿಯಾ 1011 ಸೀರೀಸ್.
ಆದರೆ, ಬೆಳೆಯುತ್ತಿರುವ ಟೆಕ್ನಾಲಜಿಯಲ್ಲಿ ಅದಷ್ಟೇ ಸಾಕಾಗುವುದಿಲ್ಲ. ಆಗ, 1994 ರಲ್ಲಿ ನೋಕಿಯಾ ಫೀಚರ್ಡ್ ಫೋನ್ ಗಳನ್ನು ಬಿಡುಗಡೆಗೊಳಿಸುತ್ತದೆ. ಅದರ ಜೊತೆಗೆ ತನ್ನದೇ ಆದ ಒಂದು ಯೂನಿಕ್ ರಿಂಗ್ ಟೋನ್ ಅನ್ನು ಸೃಷ್ಟಿಸುತ್ತದೆ. ಅದೇ ನೋಕಿಯಾ ರಿಂಗ್ಟೋನ್. ಈ ರಿಂಗ್ಟೋನ್ ಅನ್ನು ಹೊತ್ತ ಈ ಫೀಚರ್ಡ್ ಫೋನ್ ಗಳೇ ನೋಕಿಯಾ 2100 ಸೀರೀಸ್. ಈ ಫೋನ್ ಗಳು ಗ್ರಾಹಕರಿಗೆ ಎಷ್ಟು ಇಷ್ಟವಾಗುತ್ತವೆಂದರೆ.. ನೋಕಿಯಾ ಕೇವಲ 4 ಲಕ್ಷ ಫೋನ್ ಗಳು ಮಾರಾಟವಾಗುತ್ತವೆಂದುಕೊಂಡಿದ್ದರೆ.. ಬರೋಬ್ಬರಿ ಎರಡು ಕೋಟಿ ಮೊಬೈಲುಗಳು ಮಾರಾಟವಾಗುತ್ತವೆ. ಅಂದಿನ ಮೊಬೈಲ್ ಮಾರ್ಕೆಟ್ ನಲ್ಲಿ 50% ಮಾರಾಟ ನೋಕಿಯಾದ್ದು. ಯಾವುದೇ ಮೊಬೈಲ್ ಅಂಗಡಿಗೆ ಹೋಗಿ ಕೇಳಿದರೂ.. 100 ರಲ್ಲಿ 50 ಹೆಚ್ಚು ಮಾರಾಟವಾಗುವ ಮೊಬೈಯುಗಳು ನೋಕಿಯಾದ್ದೇ ಆಗಿದ್ದವು.
1998ರಲ್ಲಿ ಅಂದಿನ ಮೊಬೈಲ್ ಮಾರ್ಕೆಟ್ ನ ನಂ.1 ಸ್ಥಾನದಲ್ಲಿದ್ದ ಮೋಟೊರೋಲಾವನ್ನು ಹಿಂದಿಕ್ಕಿ ನಂ.1 ಆಗುತ್ತದೆ ನೋಕಿಯಾ. ಇಷ್ಟೆಲ್ಲಾ ಆದರೂ.. ನೋಕಿಯಾ ಫೋನ್ ಗಳು ಭಾರತಕ್ಕೆ ಹಾಗೂ ಚೀನಾಗೆ ಕಾಲಿಟ್ಟು ವ್ಯಾಪಕವಾಗಿದ್ದು 2003ರಲ್ಲಿ. ಆ ಫೋನುಗಳೇ ನೋಕಿಯಾದ ಅತಿ ಹೆಚ್ಚು ಚರ್ಚೆಯಾಗುವ 1100 ಮಾಡೆಲ್ ಗಳು. 50% ನಷ್ಟಿದ್ದ ಮಾರ್ಕೆಟ್ ಈಗ 70% ಗೆ ಏರಿತ್ತು.
ಆದರೆ, ಕಾಲ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಏರಿದವರು ಎಂದಾದರೂ ಇಳಿಯಲೇಬೇಕು. ನೋಕಿಯಾಗೆ ಆ ಕಾಲವೂ ಬಂದಿತ್ತು ಅದೇ ನೋಕಿಯಾ ಪಾಲಿನ ದುರಾದೃಷ್ಟಕರ ದಿನ ಎಂದರೂ ತಪ್ಪಾಗಲಾರದು. ಅದು ಆ್ಯಪಲ್ ಕಂಪನಿಯ ಅದೃಷ್ಟದ ದಿನವೂ ಹೌದು. 29 ಜೂನ್ 2007 ರಂದು ಆ್ಯಪಲ್ 'ಐ-ಫೋನ್'ಗಳನ್ನು ಬಿಡುಗಡೆ ಮಾಡಿತು. ಆದರೆ, ಅದಕ್ಕೆ ತಲೆಕೆಡಿಸಿಕೊಳ್ಳದ ನೋಕಿಯಾ ತನ್ನ ಫೋನುಗಳ ಹಾರ್ಡ್ವೇರ್ ಮೇಲೆ ಮಾತ್ರ ಹೆಚ್ಚಿನ ಗಮನ ಹರಿಸಿತು. ನೋಕಿಯಾ ಅದುವರೆಗೂ ಬಳಸುತ್ತಿದ್ದ ಆಪರೇಟಿಂಗ್ ಸಿಸ್ಟಮ್ ನ ಹೆಸರು ಸಿಂಬಿಯನ್ ಎಂದು. ಆ್ಯಪಲ್ ನ ಜಾಡು ಹಿಡಿದ ಗೂಗಲ್ 2008ರಲ್ಲಿ ತನ್ನ ಸಾಫ್ಟ್ವೇರ್ ಹೊಂದಿದ್ದ ಆಂಡ್ರಾಯ್ಡ್ ಫೋನ್ ಗಳನ್ನು ಹೊರ ತಂದಿತು. ಅಷ್ಟರಲ್ಲಾಗಲೇ.. ನೋಕಿಯಾವನ್ನು ಹೊರತುಪಡಿಸಿ ಭಾರತ ಹಾಗೂ ಚೀನಾಗಳಲ್ಲಿ ಸ್ಯಾಮ್ಸಂಗ್, ವಿವೋ, ಒಪ್ಪೋ, ಇಂಟೆಕ್ಸ್, ಲಾವಾ, ಮೈಕ್ರೋಮ್ಯಾಕ್ಸ್, ಐಟಿಸಿ ಹೀಗೆ ಹತ್ತು-ಹಲವು ಬ್ರ್ಯಾಂಡ್ ಗಳು ಕಾಲಿಟ್ಟಾಗಿತ್ತು. ಸ್ಯಾಮ್ಸಂಗ್ ಹಾಗೂ ಮೋಟೊರೋಲಾಗಳು ಮಡಚಿ ತೆಗೆಯಬಹುದಾದ ಫ್ಲಿಪ್ ಫೋನ್ ಗಳನ್ನು ಸಹಾ ಬಿಡುಗಡೆಗೊಳಿಸಿದ್ದವು. ಆದರೆ, ನೋಕಿಯಾ ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ.. ನಾನೇ ಮೊಬೈಲ್ ಮಾರ್ಕೆಟ್ ದಿಗ್ಗಜ ಎಂಬಂತೆ ನಿರ್ಲಕ್ಷಿಸಿ ಸುಮ್ಮನಿತ್ತು. ಜನರು ಫ್ಲಿಪ್ ಫೋನ್ ನಂತಹಾ ಹೊಸ ಡಿಸೈನ್ ಗಳ ಕಡೆಗೆ ಮಾರುಹೋದರೂ.. ಅಷ್ಟರಲ್ಲಾಗಲೇ ಮೊಬೈಲ್ ಮಾರ್ಕೆಟ್ ನಲ್ಲಿ ಚೈನಾ ಸೆಟ್ ಗಳು ಕಾಲಿಟ್ಟಾಗಿತ್ತು.
ಮೊಬೈಲ್ ಲೋಕದಲ್ಲಿ ತಾನೇ ದಿಗ್ಗಜ ಎನ್ನುವ ಅದರ ಅತಿಯಾದ ಆತ್ಮವಿಶ್ವಾಸ ಅದರ ಪಾಲಿಗೆ ಕುತ್ತಾಯಿತು. ಟೆಕ್ನಾಲಜಿ ಕಡೆಗೆ ಗಮನ ನೀಡದೆ.. ಕೇವಲ ಹಾರ್ಡ್ವೇರ್ ಕಡೆಗೆ ಮಾತ್ರ ತನ್ನ ದೃಷ್ಟಿ ಹರಿಸಿತು. ಅಲ್ಲದೇ, ಹೊಸತನ್ನು ಕಂಡುಹಿಡಿಯುವುದಕ್ಕಿಂತ.. ಅದಕ್ಕೆ ಈಗಾಗಲೇ ಬಿಡುಗಡೆಯಾಗಿದ್ದ ಮೊಬೈಲುಗಳ ಉತ್ಪಾದನೆಯನ್ನು ಹೆಚ್ಚು ಮಾಡುವುದೇ ಮುಖ್ಯವಾಗಿತ್ತು. ಬ್ಯುಸಿನೆಸ್ ನಲ್ಲಿ ದಿನೇ-ದಿನೇ ನಮ್ಮನ್ನು ನಾವು ಅಪ್ಡೇಟ್ ಗೊಳಿಸಿಕೊಳ್ಳಬೇಕು. ಇಲ್ಲವಾದರೆ... ಬಹಳ ಹಿಂದೆ ಉಳಿದುಬಿಡುತ್ತೇವೆ.
ಅಲ್ಲದೆ, ಬಳಕಿದಾರರು ಯಾವುದಾದರೂ ಮೊಬೈಲ್ ಬ್ರ್ಯಾಂಡ್ ಗಳನ್ನು ಖರೀದಿಸಿದಾಗ ಅವರದ್ದೇ ಬೇರೆಯ ಉತ್ಪನ್ನಗಳನ್ನು ಬಳಸಲು ಶುರುಮಾಡುತ್ತಾರೆ. ಉದಾಹರಣೆಗೆ ಆಪಲ್ ನ ಐಪ್ಯಾಡ್, ಮ್ಯಾಕ್ ಬುಕ್, ಸ್ಮಾರ್ಟ್ ವಾಚ್ ಈ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ. ಈ ಎಕೋ ಸಿಸ್ಟಮ್ ಅನ್ನು ಸೃಷ್ಟಿಸುವುದೂ ಮುಖ್ಯವಾಗುತ್ತದೆ. ಆದರೆ, ನೋಕಿಯಾ.. ಮೊಬೈಲ್ ಅನ್ನು ಹೊರತುಪಡಿಸಿ ಮತ್ತಾವುದರ ಕಡೆಗೂ ಗಮನ ಹರಿಸಲೇ ಇಲ್ಲ.
ಹಾಗಾದರೆ, ಆ್ಯಪಲ್ ನಲ್ಲಿ ನೋಕಿಯಾ ಗಿಂತ ಹೆಚ್ಚು ಬುದ್ಧಿವಂತ ಹಾಗೂ ಸೃಜನಶೀಲ ಉದ್ಯೋಗಿಗಳಿದ್ದರು ಎನ್ನಬಹುದಾ..? ಹಾಗೆನ್ನಲಾಗುವುದಿಲ್ಲ. ಆ ಸಂದರ್ಭದಲ್ಲಿ ನೋಕಿಯಾದಲ್ಲಿದ್ದ ಬ್ರೈಟ್ ಮೈಂಡ್ಗಳು ಅಲ್ಲಿಂದ ಹೊರ ನಡೆಯುತ್ತಾರೆ. ಅದಕ್ಕೆ, ಹಲವಾರು ಉದ್ಯೋಗಿಗಳು ನೀಡಿರುವ ಕಾರಣಗಳು ಸೀದಾ ಮ್ಯಾನೇಜ್ಮೆಂಟ್ ನತ್ತ ಬೊಟ್ಟು ಮಾಡುತ್ತವೆ.
"ಯಾವುದೇ ನಿರ್ಧಾರ ಮಾಡಲೂ ಮ್ಯಾನೇಜ್ಮೆಂಟ್ ಬಹಳ ತಡ ಮಾಡುತ್ತದೆ. ಅಷ್ಟರಲ್ಲಾಗಲೇ ನಮಗೆ ಸಿಕ್ಕ ಅವಕಾಶಗಳು ಕಳೆದೇ ಹೋಗಿರುತ್ತವೆ"
"ಅವರು ಅವರ ಒಳ ರಾಜಕೀಯದಲ್ಲಿಯೇ ಮುಳುಗಿ ಹೋಗಿ ಹೊಸತನದ ಡಿಸೈನ್ ಗಳನ್ನು ನಿರ್ಲಕ್ಷಿಸಿ ಬಿಡುತ್ತಾರೆ"
"ಹಿರಿಯ ಅಧಿಕಾರಿಗಳು ಕಿರಿಯರ ಸಲಹೆಗಳಿಗೆ ಮನ್ನಣೆ ನೀಡದೆ.. ತಮ್ಮದೇ ನಡೆಯಬೇಕು ಎನ್ನುವ ಈಗೋ ತೋರಿಸಿದರು" ನೋಕಿಯಾದ ಅಧಃಪತನಕ್ಕೆ ಇದೂ ಕಾರಣವೇ..
2019ರಲ್ಲಿ ಮೈಕ್ರೋಸಾಫ್ಟ್ ಆಫೀಸ್ ನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಪ್ರತಿಭಾವಂತ ವ್ಯಕ್ತಿ ಸ್ಟೀಫನ್ ಎಲೋಪ್ ನನ್ನು ಕರೆತಂದು ನೋಕಿಯಾದ ಸಿ.ಇ.ಓ ಮಾಡುತ್ತಾರೆ.
ಮೊದಲೇ ಗೂಗಲ್ ನ ಆಂಡ್ರಾಯ್ಡ್ ಸಾಫ್ಟ್ವೇರ್ ಜೊತೆಗೆ ನೋಕಿಯಾ ಒಪ್ಪಂದ ಮಾಡಿಕೊಳ್ಳಬಹುದು ಎನ್ನುವ ಸಲಹೆಯನ್ನು ತಳ್ಳಿ ಹಾಕಿದ್ದ ನೋಕಿಯಾ.. ಎಲೋಪ್ ಬಂದ ನಂತರದಲ್ಲಿ ಮೈಕ್ರೋಸಾಫ್ಟ್ ಜೊತೆಗೆ ಪಾರ್ಟ್ನರ್ ಆಗಲು ಒಪ್ಪುತ್ತಾರೆ. ಮೈಕ್ರೋಸಾಫ್ಟ್ ವಿಂಡೋಸ್ ಫೋನ್ ಜೊತೆಗೆ ತಾವು ಕೈಜೋಡಿಸಿ ಲೂಮಿಯಾ 800 ಎನ್ನುವ ಫೋನನ್ನು ಹೊರತರುತ್ತಾರೆ. ಆದರೆ, ಅಷ್ಟರಲ್ಲಾಗಲೇ ಆಂಡ್ರಾಯ್ಡ್ ಗೆ ಒಗ್ಗಿಕೊಂಡಿದ್ದ ಗ್ರಾಹಕರು ಇದನ್ನು ಸ್ವೀಕರಿಸುವುದಿಲ್ಲ. ಇದಕ್ಕೆ ಮತ್ತೊಂದು ಕಾರಣವೆಂದರೆ, ವಿಂಡೋಸ್ ಫೋನ್ ಗಳು ಯಾವತ್ತಿಗೂ ಆಂಡ್ರಾಯ್ಡ್ ಫೋನ್ ಗಳಿಗಿಂತ ಹೆಚ್ಚು ಸಂಕೀರ್ಣವಾಗಿದ್ದವು. ಅಲ್ಲದೇ, ಹೆಚ್ಚು ಆಪ್ ಡೆವಲಪ್ ಕೂಡಾ ಆಗಿರಲಿಲ್ಲ. ಬಳಸಲು ಹಲವಾರು ನಿರ್ಬಂಧಗಳೂ ಇದ್ದವು. ಇದೆಲ್ಲದರಿಂದ ಆ ಫೋನ್ ಕೂಡ ಫೇಲ್ ಆಯಿತು.
ಅಲ್ಲದೆ, ನೋಕಿಯಾದ ಬ್ರಿಲಿಯೆಂಟ್ ಎನ್9 ಎನ್ನುವ ಫೋನ್ ನ ಬಿಡುಗಡೆಗೂ ಎಲೋಪ್ ಒಪ್ಪದೆ, ಎರಡು ವರ್ಷ ಮುಂದೂಡಿಕೊಂಡು ಬರುತ್ತಾರೆ. ಅದು ನೋಕಿಯಾ ತನ್ನದೇ ಒಂದು ಯೂಸರ್ ಫ್ರೆಂಡ್ಲಿ ಆಪರೇಟಿಂಗ್ ಸಿಸ್ಟಮ್ ಮೀ-ಗೋ ವನ್ನು ಬಳಸಿ ತಯಾರಿಸಿರುತ್ತದೆ. ಆದರೆ, ಅದು ಬಿಡುಗಡೆಯಾಗುವಷ್ಟರಲ್ಲಿ.. ಅದಕ್ಕಿಂತ ಮುಂದುವರಿದ ಟೆಕ್ನಾಲಜಿಗಳಿಂದ ನೋಕಿಯಾ ಸೋತು ಹೋಗುತ್ತದೆ.
ಮೈಕ್ರೋಸಾಫ್ಟ್ ಜೊತೆಗೆ ಮರ್ಜ್ ಮಾಡುವ ಎಲೋಪ್ ನ ನಿರ್ಧಾರವೇ ನೋಕಿಯಾದ ಹೆಚ್ಚಿನ ಪತನಕ್ಕೆ ಕಾರಣವಾಯಿತು ಎಂದು ಹೇಳುವವರೂ ಇದ್ದಾರೆ. ಮೈಕ್ರೋಸಾಫ್ಟ್ ಎಂದಿಗೂ ನೋಕಿಯಾವನ್ನು ನೋಡಿದ್ದು ಚಿನ್ನದ ಮೊಟ್ಟೆ ಇಡುವ ಕೋಳಿಯಂತೆಯೇ.. ಅದು ತನ್ನ ವಿಂಡೋಸ್ ಫೋನ್ ಗಳನ್ನು ಜನಪ್ರಿಯಗೊಳಿಸಲು ನೋಕಿಯಾವನ್ನು ಬಳಸಿಕೊಳ್ಳಲು ನೋಡಿತ್ತು ಅಷ್ಟೇ ಎನ್ನುವವರೂ ಇದ್ದಾರೆ. ಇದಾದ ಮೂರೇ ವರ್ಷದಲ್ಲಿ.. ಅಂದರೆ 2014ರಲ್ಲಿ 50 ಬಿಲಿಯನ್ ಡಾಲರ್ ಇದ್ದ ಕಂಪನಿ ಕೇವಲ 7.2 ಬಿಲಿಯನ್ ಡಾಲರ್ ಮೌಲ್ಯಕ್ಕಿಳಿಯುತ್ತದೆ. ಆಗ ಮೈಕ್ರೋಸಾಫ್ಟ್ ನೋಕಿಯಾವನ್ನು ಖರೀದಿಸುತ್ತದೆ.
2014ರ ಹೊತ್ತಿಗೆ ಮೊದಲಿದ್ದ ನೋಕಿಯಾ ಬಳಿ ನೋಕಿಯಾ ನೆಟ್ವರ್ಕ್ಸ್ ಅಷ್ಟೇ ಉಳಿದಿರುತ್ತದೆ. 2018ರಲ್ಲಿ 5-ಜಿ ಟೆಕ್ನಾಲಜಿಯುಳ್ಳ ಕೆನಡಿಯನ್ ಸಿಸ್ಟಮ್ಗಳ ಜೊತೆ ಸೇರಿ 6 ಸ್ಮಾರ್ಟ್ ಫೋನ್ ಗಳನ್ನು ಹೊಸದಾಗಿ ಲಾಂಚ್ ಮಾಡುತ್ತಾರಾದರೂ ಅದು ವಿಫಲ ಪ್ರಯತ್ನವೇ ಆಗುತ್ತದೆ.
ಬ್ಯುಸಿನೆಸ್ ನಲ್ಲಿ ಒಬ್ಬರನ್ನು ಮತ್ತೊಬ್ಬರು ಸೋಲಿಸಬಹುದಾದರೂ.. ಹೆಚ್ಚಿನ ಬಾರಿ ಸೋತು ಹೋಗುವುದು ಅವರದ್ದೇ ನಡೆ ಹಾಗೂ ನಿರ್ಧಾರಗಳಿಂದಲೇ. ನೋಕಿಯಾ ಮೂಲೆಗುಂಪಾಗಿದ್ದು ತನ್ನಿಂದ ಹಾಗೂ ಎದುರಾಳಿಗಳಿಂದಲೂ.. "ಆಜ್ಕೇರ್ ರಾಜ, ಕಲ್ಕೇರ್ ಫೋಕಿರ್" ಎನ್ನುವ ಬೆಂಗಾಲಿಯ ಒಂದು ಪ್ರಸಿದ್ಧವಾದ ಮಾತಿನ ಅರ್ಥ ಹೀಗಿದೆ. "ಇಂದಿನ ರಾಜ, ನಾಳೆಯ ಭಿಕ್ಷುಕನೂ ಆಗಬಹುದು". ನೋಕಿಯಾದ ನಡೆ ನೋಡಿದಾಗ ಇದು ಹೌದು ಎನ್ನಿಸಿತು.
ಯಾವತ್ತಿಗೂ.. ನಮ್ಮ ಗೆಲುವನ್ನು ಸಂಭ್ರಮಿಸಬೇಕು. ಹೌದಾದರೂ.. ಅದನ್ನು ತಲೆಗೇರಿಸಿಕೊಳ್ಳಬಾರದು. ನೋಕಿಯಾ ಇಲ್ಲಿ ಅದೇ ತಪ್ಪು ಮಾಡಿತ್ತು. ಅದು ತನ್ನ ಗೆಲುವನ್ನು ತಲೆಗೇರಿಸಿಕೊಂಡು ತಾನೇ ಇಲ್ಲಿನ ಮಹಾರಾಜ ಎನ್ನುವ ಅತಿಯಾದ ಆತ್ಮವಿಶ್ವಾಸದಲ್ಲಿ ಎಲ್ಲವನ್ನೂ ಪಕ್ಕಕ್ಕೆ ಸರಿಸಿ ಹಿಂದುಳಿಯಿತು. ಗ್ರಾಹಕರ ಬೇಡಿಕೆಗೆ ತಕ್ಕಂತೆ ಉತ್ಪನ್ನಗಳ ಪೂರೈಕೆ ಎಷ್ಟು ಮುಖ್ಯವೋ.. ಅದನ್ನು ಮಾರಾಟ ಮಾಡುವುದು ಹಾಗೂ ಮಾರ್ಕೆಟಿಂಗ್ ಮಾಡುವುದು ಕೂಡಾ ಅಷ್ಟೇ ಮುಖ್ಯ. ಇಲ್ಲಿ ಕೂಡ ಸೋತಿತ್ತು ನೋಕಿಯಾ. ಇನ್ನು, ಕಂಪನಿಯ ಮ್ಯಾನೇಜ್ಮೆಂಟ್ ಅನ್ನು ನಿರ್ವಹಿಸುವುದು ಎಲ್ಲಕ್ಕಿಂತಲೂ ಮುಖ್ಯವಾದದ್ದು.ನೋಕಿಯಾ ಇಲ್ಲಿ ಕೂಡ ಎಡವಿತ್ತು. ಐದು ವರ್ಷದ ಹಿಂದಿದ್ದ ಮನುಷ್ಯ ಅಥವಾ ಬ್ಯುಸಿನೆಸ್ ಹಾಗೆಯೇ ಇದ್ದರೆ, ಅಲ್ಲಿ ಏನೋ ಸರಿಯಿಲ್ಲ ಎಂಬುದಂತೂ ಹೌದು. ಮನುಷ್ಯನೇ ಆಗಲಿ ಅಥವಾ ಬ್ಯುಸಿನೆಸ್ ಆಗಲಿ ಎಂದಿಗೂ ನಿಂತ ನೀರಾಗಬಾರದು. ಸದಾ ಚಲನೆಯಲ್ಲಿರಬೇಕು ಟೆಕ್ನಾಲಜಿಗೆ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುತ್ತಾ ಮುಂದುವರೆಯಬೇಕು. ನೋಕಿಯಾ ಇಲ್ಲಿಯೂ ಹಿಂದೆಯೇ ಉಳಿದಿತ್ತು.
ಅತಿಯಾದ ಆತ್ಮವಿಶ್ವಾಸ ತೋರದೆ, ತಮ್ಮದೇ ಆದ ಎಕೋ ಸಿಸ್ಟಮ್ ಅನ್ನು ನಿರ್ಮಿಸಿಕೊಂಡು, ಸುತ್ತಲಿನ ಬದಲಾವಣೆಗೆ ಹೊಂದಿಕೊಂಡು, ಬದಲಾಗುತ್ತಾ.. ಇನ್ನೋವೇಟಿವ್ ಆಗಿ ಜೊತೆಗೆ ಪ್ರೊಡಕ್ಷನ್ ಅನ್ನು ಒಟ್ಟೊಟ್ಟಿಗೆ ಮುನ್ನಡೆಸಿಕೊಂಡು, ಟೆಕ್ನಾಲಜಿಯ ಕಡೆಗೆ ಗಮನಹರಿಸುತ್ತಾ, ಮ್ಯಾನೇಜ್ಮೆಂಟ್ ಅನ್ನು ಸರಿಯಾಗಿ ನಿರ್ವಹಿಸಿದಾಗ ಬ್ಯುಸಿನೆಸ್ ನಲ್ಲಿ ಹಿಂದುಳಿಯದೇ ಮುಂದೆ ಬರಬಹುದು ಎನ್ನುತ್ತಾ ತನ್ನ ಸೋಲಿನ ಮೂಲಕ ಬ್ಯುಸಿನೆಸ್ ನ ಗೆಲುವಿನ ತಂತ್ರಗಳನ್ನು ಹೇಳಿಕೊಡುತ್ತಿದೆ ನೋಕಿಯಾ.
( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ