"ಹಣ್ಣೆಲೆ ಉದುರುವಾಗ ಚಿಗುರಿಲೆ ನಕ್ಕಿತಂತೆ" ಎನ್ನುವ ಮಾತನ್ನು ವೃದ್ಯಾಪ್ಯವನ್ನು ನೋಡಿ ಆಡಿಕೊಳ್ಳುವವರ ಅಥವಾ ಅಪಹಾಸ್ಯ ಮಾಡುವವರ ಕುರಿತಾಗಿ ಹೇಳುತ್ತಾರೆ. ಆದರೆ, ಒಂದಲ್ಲಾ ಒಂದು ದಿನ ಆ ಚಿಗುರೆಲೆ ಕೂಡಾ ಹಣ್ಣೆಲೆ ಆಗಬೇಕಲ್ಲವೇ..?? ಅದು ಸಾರ್ವಕಾಲಿಕ ಸತ್ಯವೂ ಹೌದು. ಅದನ್ನು ಅರ್ಥ ಮಾಡಿಕೊಂಡಾಗ ಹಣ್ಣೆಲೆಯನ್ನು ನೋಡಿ ಚಿಗುರೆಲೆ ಮಾಡುವ ಅಪಹಾಸ್ಯ ಮಾತ್ರವೇ ಅಲ್ಲ.. ಅದರ ಅಹಂಕಾರವೇ ಅಳಿದು ಹೋಗುತ್ತದೆ. ಅಷ್ಟಕ್ಕೂ "ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಬಗು" ಎನ್ನುವ ಮಾತೇ ಇಲ್ಲವಾ..? ಹಿರಿಯರ ಅನುಭವ ಹಾಗೂ ಕಿರಿಯರ ಉತ್ಸಾಹ ಸೇರಿದರೆ ಎಂತಹಾ ಕೆಲಸವೂ ಮೇಲುಗೈ ಸಾಧಿಸಿದಂತೆಯೇ..
ಆದರೆ ಈಗ ಕಾಲ ಬದಲಾಗುತ್ತಿದೆ. "ದೊಡ್ಡವರೆಲ್ಲಾ ಜಾಣರಲ್ಲ" ಎನ್ನುವ ಮಾತನ್ನು ಕೇಳಿರುತ್ತೇವೆ. ಕೆಲವರಿಗೆ ಅನುಭವವೂ ಇಲ್ಲದೆ, ಯೋಚಿಸುವ.. ತಿಳುವಳಿಕೆಯೂ ಇಲ್ಲದೆ ಕೇವಲ ವಯಸ್ಸಿನಿಂದ ಮಾತ್ರ ವೃದ್ಧರೆಂದು ಗುರುತಿಸಿಕೊಳ್ಳಬಹುದು. ಅಂತಹವರ ಹಿರಿತನವನ್ನು ಒಪ್ಪುವುದು ಸಹಾ ಕಷ್ಟವೇ. ಹಿರಿಯರು ಅಥವಾ ವೃದ್ಧರು ಎನ್ನುವುದಕ್ಕಿಂತಲೂ ಅನುಭವಿಗಳು ಎನ್ನುವುದೇ ಸಮಂಜಸವೆಂಬುದು ನನ್ನ ಅನಿಸಿಕೆ.
ಮನೆಯ ಮುಖ್ಯಸ್ಥ ಅಥವಾ ಕುಟುಂಬದ ಹಿರಿಯ ಎನ್ನುವ ಗೌರವವನ್ನು ಎಲ್ಲರೂ ನೀಡಿ ಅವರ ಹಿರಿಮೆಯನ್ನು ಒಪ್ಪಿಕೊಂಡಿದ್ದಾಗ.. ಅನುಭವವಿಲ್ಲದ ಕಿರಿಯರು ಅವರಿಗೆ ಒಂದು ಮಾತನ್ನೂ ಹೇಳದೆ, ಕೇಳದೆ ತಮ್ಮದೇ ನಿರ್ಧಾರವನ್ನು ಬೇಕೆಂದಾಗ, ಬೇಕಾದ ಕಡೆ ತೆಗೆದುಕೊಂಡರೆ ಅದರ ಪ್ರತಿಫಲವನ್ನು ಮನೆಯವರೆಲ್ಲರೂ ಅನುಭವಿಸಬೇಕಾಗುತ್ತದೆ. ಅದು ಹಿರಿಯರೂ ಸೇರಿದಂತೆ..! ಅದು ಅವರ ಆರೋಗ್ಯದ ಮೇಲೆಯೂ ದುಷ್ಪರಿಣಾಮವನ್ನು ಬೀರಬಹುದು ಹಾಗೂ ಚಿಂತೆಗೂ ಕಾರಣವಾಗುತ್ತದೆ. ಇದಕ್ಕೆ ಉದಾಹರಣೆ ನೀಡುವುದಾದರೆ ಮನೆಯವರ ನಿರ್ಧಾರದ ವಿರುದ್ಧ ಅವರಿಗೆ ಇಷ್ಟವಿಲ್ಲದ ಹುಡುಗಿಯನ್ನು ವಿವಾಹವಾಗುವ ಪ್ರೇಮ ವಿವಾಹವಾಗುವ ಕಿರಿಯನನ್ನು ಕಾಣಬಹುದು. ಮುಂದೆ ಅವರ ಬಾಳಸಂಗಾತಿ ಕುಟುಂಬದೊಡನೆ ಹೊಂದಾಣಿಕೆಯಾಗದಿದ್ದಲ್ಲಿ ಅದರ ಪರಿಣಾಮ ಕೇವಲ ಒಬ್ಬರ ಮೇಲಲ್ಲ.. ಇಡೀ ಮನೆಯ ಮೇಲೆ. ಹಾಗೆಂದ ಮಾತ್ರಕ್ಕೆ ಕಿರಿಯರು ತೆಗೆದುಕೊಳ್ಳುವ ಎಲ್ಲಾ ನಿರ್ಧಾರವೂ ತಪ್ಪು ಎಂದಲ್ಲ. ಆದರೆ, ಚರ್ಚಿಸಿ ತೆಗೆದುಕೊಂಡ ನಿರ್ಧಾರ, ಹಿರಿಯರ ಮಾರ್ಗದರ್ಶನದಲ್ಲಿ ತೆಗೆದುಕೊಂಡ ನಿರ್ಧಾರ ಹೆಚ್ಚು ಸೂಕ್ತ ಎನ್ನಿಸುತ್ತದೆ. ಇದು ನನ್ನ ಬದುಕು, ನನ್ನ ನಿರ್ಧಾರಕ್ಕೆ ಬಂದ ಫಲವನ್ನು ನಾನೇ ಅನುಭವಿಸುತ್ತೇನೆ ಎನ್ನುವುದು ಉದ್ದಟತನವೂ ಆಗುತ್ತದೆ. ಏಕೆಂದರೆ, ಕಿರಿಯರ ಒಂದು ನಿರ್ಧಾರ ಕೇವಲ ಅವರ ಭವಿಷ್ಯದ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲದೆ.. ಅದು ಈಡೀ ಕುಟುಂಬದ ಮೇಲೆಯೂ ಪರಿಣಾಮ ಬೀರುತ್ತದೆ. ಅಂತೆಯೇ ಹಿರಿಯರ ನಿರ್ಧಾರವೂ..
ಇಂತಹಾ ಹೋಲಿಕೆಯ ಕಥಾಹಂದರವಿರುವ ಹಾಗೂ ಹಿರಿಯರ ಮಹತ್ವವನ್ನು ಹೇಳುವಂತಹಾ ಕಾದಂಬರಿ ಹೆಚ್. ಜಿ. ರಾಧಾದೇವಿಯವರ "ಒಲಿದು ಬಂದ ಸಿರಿ". ರಾಮಾಚಾರ್ಯರು ತಮ್ಮ ಹಿರಿಯರ ಕಾಲದಿಂದಲೂ ರೂಢಿಸಿದ್ದ ಪೌರೋಹಿತ್ಯ ಹಾಗೂ ಅರ್ಚಕ ವೃತ್ತಿಯನ್ನೇ ಮುಂದುವರಿಸಿದ್ದವರು. ಅವರಿಗೆ ತಕ್ಕ ಪತ್ನಿ ಸಾವಿತ್ರಮ್ಮನವರು. ತಂದೆಯ ಬಲಗೈಯಂತೆಯೇ ಇದ್ದ ಶ್ರೀಧರ ಲೈಬ್ರರಿಯನ್ ಆಗಿಯೂ ಕೆಲಸ ಮಾಡುತ್ತಿದ್ದ. ಆದರೆ, ಆತನಿಗೆ ವಿವಾಹ ಮಾಡಲು ಕನ್ನೆಯದ್ದೇ ಸಮಸ್ಯೆ. ಕಷ್ಟಗಳ ಅರಿವಿರುವ ಹುಡುಗಿ ಪದ್ಮಿನಿ ಸೊಸೆಯಾಗಿ ಬಂದದ್ದು ಸಾವಿತ್ರಮ್ಮನವರ ಅದೃಷ್ಟವೆಂಬಂತೆ ಮಗ-ಸೊಸೆಯ ಅನ್ಯೋನ್ಯ ಜೀವನ ಸಾಗುತ್ತಿತ್ತು.
ಅವರಿಗೊಂದು ಮಗುವಾದ ನಂತರ ಸಾವಿತ್ರಮ್ಮನವರಿಗೆ ಎಲ್ಲಾ ಅಡುಗೆ ಹಾಗೂ ನೈವೇದ್ಯದ ಕೆಲಸವೂ ಹೊರೆಯಾಗಿದ್ದು.. ಜೊತೆಗೆ ವೃದ್ಧಾಪ್ಯವೂ ಸೇರಿದ್ದು ಮತ್ತಷ್ಟು ಕಷ್ಟವಾಗಿತ್ತು. ಇನ್ನು ತಾವು ಮೊಮ್ಮಗನ ಜವಾಬ್ದಾರಿಯನ್ನು ತೆಗೆದುಕೊಂಡು, ಸೊಸೆಗೆ ತಮ್ಮ ಜವಾಬ್ದಾರಿಯನ್ನು ನೀಡಿದರಾದರೂ.. ಪದ್ಮಿನಿ ಅರ್ಥೈಸಿಕೊಳ್ಳದೇ ಲಲಿತಮ್ಮನವರ ದುರ್ಬೋಧನೆಯಂತೆ.. ತಾನು ಮೊದಲಿದ್ದ ಪರಿಸ್ಥಿತಿಯನ್ನೆಲ್ಲಾ ಮರೆತು ಅತ್ತೆ ಹೊರೆಸಿದ್ದ ಜವಾಬ್ದಾರಿಯನ್ನು ಹೊರೆ ಎಂದು ಗಂಡ ಹಾಗೂ ಮಗುವಿನ ಜೊತೆ ಪಟ್ಟಣ ಸೇರಿದಳು. ಇತ್ತ ವೃದ್ಧ ದಂಪತಿಗಳಿಗೆ ಕಷ್ಟವಾಗುತ್ತಿದ್ದರೂ.. ದೇವರ ಕೈಂಕರ್ಯ ಬಿಡದಂತೆ ನಿರ್ವಹಿಸುತ್ತಿದ್ದರು. ಆಗ ಅವರ ಕಷ್ಟಕ್ಕಾದವರು ಸಂದರ್ಭವನ್ನು ಉಪಯೋಗಿಸಿಕೊಂಡು ಲಾಭ ಮಾಡಿಕೊಂಡರು.
ಹಿರಿಯರ ನೆರಳಿಲ್ಲದೆ, ಪಟ್ಟಣದ ಬಿಸಿಯೂ ತಾಗಿ ಪದ್ಮಿನಿ ಗಂಡ, ಮಗುವಿನ ಜೊತೆ ಮತ್ತೆ ಅತ್ತೆ-ಮಾವರನ್ನು ಸೇರಿದಳು. ಶ್ರೀಧರ ಇಕ್ಕಟ್ಟಿನಲ್ಲಿ ಸಿಲುಕಿ ಒದ್ದಾಡುವ ಯುವ ಪೀಳಿಗೆಯನ್ನು ಪ್ರತಿನಿಧಿಸುತ್ತಾನೆ. ತಂದೆ-ತಾಯಂದಿರು ವೃದ್ಧಾಪ್ಯದಲ್ಲಿ ತಮ್ಮ ಮಕ್ಕಳು ಜೊತೆಯಲ್ಲಿಯೇ ಇರಲಿ ಎಂದು ಬಯಸುತ್ತಾರೆ. ಹಾಗೆಂದು, ರಾಮಾಚಾರ್ಯರು ಹಾಗೂ ಸಾವಿತ್ರಮ್ಮ ಒತ್ತಾಯದಿಂದ ತಮ್ಮ ಮಕ್ಕಳನ್ನು ತಮ್ಮ ವೃದ್ಧಾಪ್ಯಕ್ಕಾಗಲೆಂದು ನಿಲ್ಲಿಸಿಕೊಳ್ಳಲಿಲ್ಲ. ಬದಲಾಗಿ, ಅವರಿಗೆ ಒಳ್ಳೆಯದಾಗಲಿಂದ ಹರಸಿದರು. ಇಂತಹಾ ಅರ್ಥ ಮಾಡಿಕೊಂಡ ಅನುಭವಿ ಹಿರಿಯರು ಅಪರೂಪವೇ ಸರಿ. ಮಕ್ಕಳ ಒಳಿತನ್ನೇ ಬಯಸುವ ಹಿರಿಯರ ಬದುಕಿಗೆ ಮತ್ತೆ ಬೆಳಕಾಗಿದ್ದು "ಒಳಿತು ಮಾಡುವವರಿಗೆ ಒಳಿತೇ ಆಗುತ್ತದೆ" ಎಂಬ ಸಂದೇಶ ನೀಡಿತು.
ಜೋಗಿ ಅವರ 'ನಿರ್ಗಮನ' ಕಾದಂಬರಿ ವೃದ್ಧರ ಬದುಕಿನ ಬೇರೆ ರೀತಿಯ ಆಲೋಚನೆಯ ಮೇಲೆ ಬೆಳಕು ಚೆಲ್ಲುತ್ತದೆ. ಮುಖಪುಟದ ಮೇಲೆ "ನೋ ಕಂಟ್ರಿ ಫಾರ್ ಓಲ್ಡ್ ಮ್ಯಾನ್" ಎಂಬ ಮಾತಿದೆ. ಆದರೆ, ಒಳಗಿನ ಕಥೆ ಬೇರೆಯದನ್ನೇ ಹೇಳುತ್ತಾ ಸಾಗುತ್ತದೆ.
ಶಾರದಾಪ್ರಸಾದ್ ರವರು ತಮ್ಮ ಇಳಿ ಬದುಕಿನ ಸಂಜೆಯಲ್ಲಿ ಒಬ್ಬರೇ ಇರಬೇಕೆಂದು ಇದ್ದೊಬ್ಬ ಮಗ ಹಾಗೂ ಮಗಳಿಂದ ದೂರದಲ್ಲಿದ್ದು ತಮ್ಮ ಕೆಲಸದಲ್ಲಿ ತಾವು ತೊಡಗಿಕೊಂಡಿದ್ದರು. ಅವರು ಕಾಣೆಯಾಗಿದ್ದಾರೆ ಎಂಬ ವಿಚಾರ ತಿಳಿದದ್ದೇ ಕೆಲಸದವಳಿಂದ. ವಿದೇಶದಲ್ಲಿದ್ದ ಮಗಳು ಪ್ರತಿಕ್ರಿಯಿಸಿದ ರೀತಿಯಂತೂ ಅಚ್ಚರಿ ಹುಟ್ಟಿಸಿತು. ಪತ್ರಿಕೋದ್ಯಮ ವೃತ್ತಿಯಲ್ಲಿದ್ದ ಅನಿರುದ್ಧ ತನ್ನ ತಂದೆ ಕಾಣೆಯಾದ ಕುರಿತು ಯೋಚಿಸುತ್ತಾ ಹೋದಂತೆ ಅವನಿಗೆ ಅನೇಕ ಆಲೋಚನೆಗಳು ಬಂದವು. "ಗೋಧಿ ಬಣ್ಣ ಸಾಧಾರಣ ಮೈಕಟ್ಟು" ಎನ್ನುವ ಸಿನಿಮಾದ ಕಥೆಯನ್ನು ಕೂಡಾ ನಾವು ಇಲ್ಲಿ, ಈ ಘಟ್ಟದಲ್ಲಿ ನೆನಪಿಸಿಕೊಳ್ಳಬಹುದು. ಆದರೆ, ಕಥೆ ಬೇರೆಯದ್ದೇ ಜಾಡಿನಲ್ಲಿ ಸಾಗುತ್ತದೆ.
ಇಲ್ಲಿ ಆ ವೃದ್ಧರು ಕಾಣೆಯಾದದ್ದಕ್ಕೆ ಕಾರಣವೇನು ಎಂಬುದಕ್ಕಿಂತಲೂ ನನ್ನನ್ನು ಹೆಚ್ಚು ಕಾಡಿದ್ದು ಅವರು ಒಂಟಿಯಾಗಿರಲು ಬಯಸಿದ್ದೇಕೆ ಎನ್ನುವುದು. ಹಾಗೆ ಎಷ್ಟು ಜನ ಹಿರಿಯರು ಒಂಟಿಯಾಗಿರಲು ಬಯಸುತ್ತಾರೆ..? ವಯಸ್ಸು ಮಾಗುತ್ತಾ ಹೋದಂತೆ ಜೊತೆಗೊಬ್ಬ ಸಂಗಾತಿಯ ಅವಶ್ಯಕತೆಯೇ ಹೆಚ್ಚು ಕಾಣುತ್ತಾ ಹೋಗುತ್ತದೆ. ಯೌವ್ವನದಲ್ಲಿ ಶರಂಪರ ಕಿತ್ತಾಡುತ್ತಿದ್ದ ದಂಪತಿಗಳು ವೃದ್ಧಾಪ್ಯದಲ್ಲಿ ಒಬ್ಬರಿಗೊಬ್ಬರು ಆಸರೆಯಾಗುವುದನ್ನು ನೆನಪಿಸಿಕೊಳ್ಳಬಹುದು. ಅನಿರುದ್ಧನಿಗೆ ತನ್ನ ತಂದೆಯ ಬಗ್ಗೆ ತಿಳಿದದ್ದು ಅಷ್ಟೆಯಾ..? ಎಂದು ಆತ ತೆರೆದಿಡುವ ಪ್ರಸಂಗಗಳು ಹಾಗೂ ಅವನಿಗೆ ಎದುರಾಗುವ ಸಂದರ್ಭಗಳು ಬಿಚ್ಚಿಡುತ್ತಾ ಸಾಗುತ್ತವೆ.
ಈ ಘಟನೆಗಳನ್ನೆಲ್ಲಾ ಕಂಡಾಗ ವಿದೇಶದಲ್ಲಿ ನೆಲೆಸಬೇಕಾದ ಅನಿವಾರ್ಯತೆ ಇರುವ ಮಕ್ಕಳು ತಮ್ಮ ತಾಯಿ-ತಂದೆಯರಿಗೆ ಮಾಡುವ ವ್ಯವಸ್ಥೆಯ ಕುರಿತು ಆಲೋಚನೆ ಹುಟ್ಟುತ್ತದೆ. ಇಲ್ಲಿಯ ನೆಲವನ್ನು ಬಿಟ್ಟು ಹೊರಡಲಾಗದ ಹಿರಿಯರ ಅಸಹಾಯಕತೆ, ಅಲ್ಲಿಯ ಸೆಳೆತ, ಕೆಲಸ ಅಥವಾ ಅಗತ್ಯತೆಗಳನ್ನು ಬಿಟ್ಟು ಇಲ್ಲಿಗೆ ಬರಲಾಗದ ಮಕ್ಕಳ ಪರಿಸ್ಥಿತಿ. ಇಂತಹಾ ಸಮಯದಲ್ಲಿ ಹಲವಾರು 'ಓಲ್ಡ್ ಏಜ್ ಹೋಮ್'ಗಳು ಹಲವರಿಗೆ ಆಸರೆಯಾದಂತೆ ಕಾಣುತ್ತವೆ. ಇದನ್ನು ಎರಡು ದೃಷ್ಟಿಯಲ್ಲಿಯೂ ವಿಶ್ಲೇಷಿಸಬಹುದು. ಕೆಲವರಿಗೆ ಇದು ಅನಿವಾರ್ಯತೆಯಾದರೆ, ಕೆಲವರಿಗೆ ಅಗತ್ಯತೆ. ಆದರೆ, ಕ್ರಮೇಣ ಮಕ್ಕಳ ಕಾಂಟ್ಯಾಕ್ಟ್ ತಪ್ಪಿ ಹೋಗಿ ಮತ್ತಷ್ಟು ಒಂಟಿಯಾಗುವ ಸಾಧ್ಯತೆಗಳನ್ನೂ ತಳ್ಳಿ ಹಾಕಲಾಗುವುದಿಲ್ಲ. ಆದರೆ, ಅವರು ತೆರೆದ ಮನಸ್ಸಿನಿಂದ ಅಲ್ಲಿರುವ ತಮ್ಮಂತಹಾ ಜೀವಗಳ ಜೊತೆ ಬೆರೆತಾಗ, ಸ್ನೇಹಮಯಿಯಾದಾಗ ಅವರಿಗೆ ಅದೇ ಬದುಕು ಒಗ್ಗಿ ಹೋಗಬಹುದೇನೋ.. ಪುನೀತ್ ರಾಜಕುಮಾರ್ ಅಭಿನಯದ 'ರಾಜಕುಮಾರ' ಚಲನಚಿತ್ರದ ಸನ್ನಿವೇಶಗಳು ಕೂಡಾ ನೆನಪಾಗುತ್ತವೆ.
ಈಗಲಾದರೂ.. ಓಲ್ಡ್ ಏಜ್ ಹೋಮ್ ಗಳು ಕಾಣುತ್ತವೆ. ಆದರೆ, ಹಿಂದಿನ ಕಾಲದಲ್ಲಿ ಹಿರಿಯರ ಅದರಲ್ಲಿಯೂ ಗಂಡ ಸತ್ತ ಹೆಣ್ಣು ಮಕ್ಕಳು ಮತ್ತೊಬ್ಬರ ಹಂಗಿನಲ್ಲಿಯೇ ಬದುಕುವ ಸನ್ನಿವೇಶ ಅವರ ಅಸಹಾಯಕತೆ ನೆನಪಾದರೆ ಇಂದಿನ ಕಷ್ಟಗಳು ಅಂದಿನ ಕಷ್ಟದ ಮುಂದೆ ಏನೇನೂ ಅಲ್ಲವೆಂಬ ಭಾವ ಹುಟ್ಟುತ್ತದೆ. ಇಂತಹಾ ಸನ್ನಿವೇಶದ ದರ್ಶನ ಮಾಡಿಸುವುದು ಎಂ. ಕೆ ಇಂದಿರಾ ಅವರ 'ಫಣಿಯಮ್ಮ' ಕಾದಂಬರಿ. ಇದು ಕಾದಂಬರಿಯ ರೂಪದಲ್ಲಿರುವ ಅವರ ಅಜ್ಜನ ತಂಗಿ ಫಣಿಯಮ್ಮನವರ ಬದುಕಿನಗಾಥೆ. 112 ವರ್ಷ ಬದುಕಿದ್ದ ಹಿರಿಜೀವವನ್ನು ಎಲ್ಲರಿಗೂ ಪರಿಚಯಿಸುವ ನಿಟ್ಟಿನಲ್ಲಿ.. ಕಾದಂಬರಿಯ ರೂಪ ಕೊಟ್ಟಿರುವ ಜೀವನ ಚರಿತ್ರೆ. ಇದು ಮಡಿ ಹೆಂಗಸರ ವೃದ್ಧಾಪ್ಯದ ದಿನಗಳ ಚಿತ್ರವನ್ನು ನಿಚ್ಚಳವಾಗಿ ತೆರೆದಿಡುತ್ತದೆ. ಫಣಿಯಮ್ಮನವರ ಒಂದೊಂದು ಆಲೋಚನೆ ಹಾಗೂ ಪ್ರತಿಕ್ರಿಯೆಗಳನ್ನು ಕಂಡಾಗಲೂ ಅವರು ಬದುಕನ್ನು ಕಂಡ ಬಗೆಗೂ.. ಪಡೆದ ಅನುಭವಕ್ಕೂ ಹಿರಿಮೆಯಂತೆ ಕಾಣುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಗಂಡನನ್ನು ಕಳೆದುಕೊಂಡು, ಸಂಸಾರದ ಸುಖವನ್ನೇ ಕಾಣದೆ, ವೃದ್ಧಾಪ್ಯದಲ್ಲಿ ಎಲ್ಲರಿಗೂ ಬೇಕಾದವರಾಗಿ.. ಆಲೋಚನೆ ಹಾಗೂ ಹಿರಿತನದಿಂದ ಗೆದ್ದ ಫಣಿಯಮ್ಮನನ್ನು ನೆನದರೆ ಈಗಲೂ ಮನಸ್ಸು ಆರ್ದ್ರ.
ಹಿರಿಯರಿಂದ ದೂರವಿರಬೇಕಾದ ಸಂದರ್ಭ ಅನಿವಾರ್ಯತೆ ಇದ್ದರೆ ಕನೆಕ್ಟ್ ಆಗಿ ಇರಲು ಹಾಗೂ ಕ್ವಾಲಿಟಿ ಸಮಯವನ್ನು ಕಳೆಯಲು ಯಾವುದಾದರೂ ದಾರಿಗಳನ್ನು ಹುಡುಕಿಕೊಳ್ಳಲೇಬೇಕು. ಕಿರಿಯರು ಅವರ ಬದುಕಿನ ಕಷ್ಟದ ಸಂದರ್ಭದಲ್ಲಿ ಜೊತೆಯಾದಾಗ ಮಾತ್ರವೇ ಹಣ್ಣೆಲೆಗೂ ಬಣ್ಣ ತುಂಬಲು ಸಾಧ್ಯ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ