ಪುಸ್ತಕದ ಶೀರ್ಷಿಕೆ : ಅಮೃತ ಬಿಂದು
ಲೇಖಕರು : ಈಚನೂರು ಶಾಂತ
ಪ್ರಕಾಶಕರು : ಬೃಂದಾವನ ಪ್ರಕಾಶನ
ಪ್ರಥಮ ಮುದ್ರಣ : 1995
ಪುಟಗಳು : 200
ಈಚನೂರು ಶಾಂತ ಅವರ ಅಮೃತಬಿಂದು ಕಾದಂಬರಿ ಕರ್ಮವೀರ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. ಈ ಕಾದಂಬರಿ ಸಿನಿಮಾಗಾಗಿ ಬರೆದದ್ದಾಗಿರಬಹುದೇನೋ ಎಂದೆನಿಸಿತು. ಈ ಕಾದಂಬರಿಯಲ್ಲಿ ಕಂಡ ಶೈಲಿ ನನಗೆ ಸಿನಿಮೀಯ ಶೈಲಿ ಎಂದೆನಿಸಿತು. ನಾನು ಈ ಲೇಖಕಿಯ ಮೊದಲನೇ ಪುಸ್ತಕ ಓದುತ್ತಿರುವುದರಿಂದ ಇವರ ಕಥಾವಸ್ತು ಹಾಗೂ ಶೈಲಿಯ ಹೆಚ್ಚಿನ ಪರಿಚಯವಿರಲಿಲ್ಲ. ಇವರ ಬೇರೆಯ ಕಾದಂಬರಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಪರಿಚಯಿಸುವೆ.
ಬಲರಾಮ ತುಮಕೂರಿನಿಂದ ಬೆಂಗಳೂರಿಗೆ ಬರುವ ಪ್ರಯಾಣದಲ್ಲಿ ಜೊತೆಯಾದ ಪ್ರಯಾಣಿಕರೆಲ್ಲರೂ ಆತನಿಗೆ ಕಿರಿಕಿರಿ ಮಾಡಿದ್ದರು. ಅದೇ ಸಮಯಕ್ಕೆ ಕಾವೇರಿಯು ಆತನ ಸಹ ಪಯಣಿಗಳಾದಳು. ಕಾವೇರಿಯ ಪ್ರಯಾಣದ ಅಸ್ವಸ್ಥತೆ ಹಾಗೂ ನಿದ್ದೆಯೂ ಆತನಿಗೆ ಒಂದು ರೀತಿಯ ಕಿರಿಕಿರಿ ಉಂಟುಮಾಡಿತ್ತು. ಹೆಣ್ಣು ಮಕ್ಕಳೆಂದರೆ ದೂರ ಸರಿಯುತ್ತಿದ್ದ ಆತನಿಗೆ, ಆಕೆ ಬೆಂಗಳೂರಿನಲ್ಲಿ ವಿಳಾಸ ಕೇಳಿದಾಗಲೂ.. ಒಂಟಿ ಹೆಣ್ಣಿಗೆ ಸಹಾಯ ಮಾಡುವ ಸೌಜನ್ಯವನ್ನು ತೋರಲಿಲ್ಲ. ಆದರೆ, ಅದು ನಿಜವಾಗಿಯೂ ಆತನ ಸ್ವಭಾವವವಲ್ಲ. ಆತ ವೃತ್ತಿಯಲ್ಲಿ ವಕೀಲನಾಗಿದ್ದವನು. ಹಣದ, ಕೀರ್ತಿಯ ಹಿಂದೆ ಹೋಗುವುದಕ್ಕಿಂತ ನ್ಯಾಯದ ಪರವಾಗಿ ನಿಂತು ಅಸಹಾಯಕರಿಗೆ, ಬಡವರಿಗೆ ಸಹಾಯ ಮಾಡುತ್ತಾ.. ನ್ಯಾಯಕ್ಕೆ ಬೆಲೆ ಕೊಡುತ್ತಾ ಕಾನೂನು ರೀತಿಯಲ್ಲಿ ಹೋರಾಡುತ್ತಿದ್ದವನು. ಹಾಗೆಂದು, ಆತ ಉಳ್ಳವರ ಮನೆಯಿಂದ ಬಂದವನಲ್ಲ. ಬದಲಾಗಿ ಆತನ ಹಿನ್ನೆಲೆಯನ್ನು ಕೇಳಿದವರು ಆತನ ಈಗಿನ ಪರಿಸ್ಥಿತಿಯನ್ನು ಅನುಮಾನಿಸುವಂತಿರುತ್ತಿತ್ತು. ಏಕೆಂದರೆ, ಆತ ಜೈಲಿನಲ್ಲಿದ್ದು ಬಂದವನು.
ಜನಪ್ರಿಯ ಕ್ರಿಮಿನಲ್ ಲಾಯರ್ ಆಗಿದ್ದ ಬಲರಾಮನನ್ನು ತನ್ನ ಅಳಿಯನನ್ನಾಗಿ ಮಾಡಿಕೊಳ್ಳುವ ಮನಸ್ಸು ಮಾಡಿದ್ದು ಆ ಊರಿನ ಶ್ರೀಮಂತ ಉದ್ಯಮಿಯಾದ ಪೃಥ್ವಿರಾಜ್. ಆತನ ಪತ್ನಿ ತಾರಾದೇವಿ ಎಂ.ಎಲ್.ಎ ಆಗಿದ್ದವರು. ಬಡತನದಲ್ಲೇ ಬೆಳೆದು ಬಂದಿದ್ದ ತಾರಾದೇವಿ ಪತಿಯ ಮನೆಗೆ ಕಾಲಿರಿಸಿದ ಮೇಲೆ ಐಶ್ವರ್ಯ ಕಂಡವಳು. ಆದರೆ, ಅಂತಸ್ತಿಗೆ ತಕ್ಕಂತೆ ಬದಲಾಗುತ್ತಿದ್ದ ಅವಳು ಈಗ ಮಕ್ಕಳ ಕುರಿತು ಸಹಾ ಯೋಚಿಸದೆ ಸಂಪೂರ್ಣ ಬದಲಾಗಿದ್ದವಳು.
ಆಕೆಯ ಮಗಳು ಕಲ್ಪನಾ ಮೆಡಿಕಲ್ ಓದುತ್ತಿದ್ದಳು. ಆದರೆ, ಆಕೆಯ ಹೆಸರು ಸುಧಾಕರನ ಜೊತೆ ಹೆಚ್ಚು ಕೇಳಿ ಬರುತ್ತಿದ್ದಾಗ ಪೃಥ್ವಿರಾಜ ಆಕೆಯ ಮದುವೆಯ ಕುರಿತು ಆಲೋಚಿಸಿ ಬಲರಾಮನೆ ತಕ್ಕವನೆಂದು ನಿರ್ಧರಿಸಿ ಅವರಿಬ್ಬರ ಸಲಗೆ ಬೆಳೆಯುವಂತೆ ನೋಡಿಕೊಳ್ಳುತ್ತಿದ್ದ. ಆದರೆ, ಕಲ್ಪನಾ ಸುಧಾಕರನೊಟ್ಟಿಗೆ ಹೆಚ್ಚು ಬೆರೆಯುತ್ತಿದ್ದಳು. ಬಲರಾಮ ಪ್ರೀತಿ-ಪ್ರೇಮ ಎಂದು ತೀರಾ ನಾಜೂಕಿನವನಲ್ಲದಿದ್ದರಿಂದ.. ಆತ ಸಭ್ಯತೆಯ ಮಿತಿಯಲ್ಲಿ ದೂರವೇ ಇದ್ದ.
ಕಲ್ಪನಾಳ ಅಣ್ಣ ಅವಿನಾಶನದ್ದು ಮತ್ತೊಂದು ರೀತಿಯ ಸಮಸ್ಯೆ. ಇಂಜಿನಿಯರಿಂಗ್ ಓದುತ್ತಿದ್ದ. ಶ್ರೀಮಂತಿಕೆ ಜೊತೆಗೆ ಗೆಳೆಯರ ಸ್ನೇಹದಿಂದ ಕಾಲೇಜಿಗೂ ಸರಿಯಾಗಿ ಹೋಗಿರಲಿಲ್ಲ. ಅಲ್ಲದೆ, ಗಾಂಜಾ ಸೇವನೆಯಿಂದಾಗಿ ಆತನ ಪರಿಸ್ಥಿತಿ ಹದಗೆಟ್ಟಿತ್ತಾದರೂ.. ಪೃಥ್ವಿರಾಜನ ಪ್ರಭಾವದಿಂದ ವಿಷಯ ಮುಚ್ಚಿಹೋಗಿತ್ತು.
ಸಂಬಂಧಿಕರಿಲ್ಲದ ಬಲರಾಮನನ್ನು ಮಗಳ ಬರ್ತಡೆ ಪಾರ್ಟಿ ಎಂದು ಆಹ್ವಾನಿಸಿ ಈ ವಿಚಾರವಾಗಿ ಮಾತನಾಡಬೇಕು ಎಂದುಕೊಂಡಿದ್ದರು ಪೃಥ್ವಿರಾಜ. ಕಲ್ಪನಾಳ ಆತ್ಮೀಯ ಗೆಳತಿ ಕಾವೇರಿ ಅಲ್ಲಿನ ಪಾರ್ಟಿಗೆ ಬಂದಿದ್ದಳು. ಕಲ್ಪನಾ ಹೇಳುತ್ತಿದ್ದ ವ್ಯಕ್ತಿ ಹಾಗೂ ಕಾವೇರಿ ಹೇಳುತ್ತಿದ್ದ ವ್ಯಕ್ತಿ ಬಲರಾಮನೇ ಎಂದು ಇಬ್ಬರಿಗೂ ಅರಿವಾಗಿತ್ತು. ತಾರಾದೇವಿಗೆ ತನ್ನ ಅಂತಸ್ತಿಗೆ ಸರಿಯಲ್ಲದ ಕಾವೇರಿ ಸರಿ ಹೋಗದೆ ಆಕೆಯನ್ನು ನೆಪ ಮಾಡಿ ಮೇಲೆ ಕಳುಹಿಸಿದಾಗ.. ಅವಿನಾಶನ ದೃಷ್ಟಿ ಆಕೆಯ ಸೌಂದರ್ಯದ ಮೇಲೆ ಬಿದ್ದು, ಅತ್ಯಾಚಾರಕ್ಕೆ ಪ್ರಯತ್ನಿಸುವಾಗ ಬಲರಾಮನೇ ಬಂದು ಕಾಪಾಡಿದ್ದ. ಅಂದಿನ ರಾದ್ಧಾಂತದಿಂದ ಎಲ್ಲರ ಮನಸ್ಸು ಕೆಟ್ಟು ಹೋಗಿತ್ತು. ಇಷ್ಟಾದರೂ.. ಬಲರಾಮನಿಗೆ ಕಾವೇರಿ ಕಲ್ಪನಾಳ ಸ್ನೇಹಿತೆ ಎಂಬುದರ ಹೊರತಾಗಿ ಉಳಿದ ವಿಚಾರಗಳೆಲ್ಲದರಲ್ಲಿಯೂ ಆಕೆ ಅಪರಿಚಿತಳೇ.
ಕಲ್ಪನಾಳ ಮನೆಯಲ್ಲಿ ಬಡತನ. ತಂದೆ-ತಾಯಿ ವಯಸ್ಸಾದ ಮುದುಕನಿಗೆ ಆಕೆಯನ್ನು ವಿವಾಹ ಮಾಡಿಕೊಡಲು ಪ್ರಯತ್ನಿಸಿದಾಗ ಮನೆ ಬಿಟ್ಟು ಬಂದು ಪೃಥ್ವಿರಾಜರ ಪ್ರಭಾವದಿಂದ ಅನಾಥಾಶ್ರಮದ ಕೆಲಸವೊಂದಕ್ಕೆ ಸೇರಿದ್ದಳು. ಆ ಅನಾಥಾಶ್ರಮಕ್ಕೆ ಬಲರಾಮನೂ ಸಹಾಯ ಮಾಡುತ್ತಿದ್ದ. ಅಲ್ಲದೇ, ಆತನ ಪ್ರಭಾವಳಿಯ ಪರಿಚಯವಿದ್ದ ಗುರುಬಸಪ್ಪಜ್ ಆತ ಬಂದಾಗ ಸರಿಯಾದ ಆಡಳಿತ ನಡೆಸುತ್ತಿದ್ದನು. ಉಳಿದಂತೆ ಅನಾಥಾಶ್ರಮವನ್ನು ಅಧ್ವಾನವಾಗಿಟ್ಟುಕೊಂಡಿದ್ದ. ಶಂಕರ ಎಂಬ ಹುಡುಗನಿಂದ ಕಾವೇರಿಗೆ ಸತ್ಯ ತಿಳಿದು, ಅದನ್ನು ತಿಳಿಸಲು ಯತ್ನಿಸಿದಾಗಲೂ.. ಗುರುಬಸಪ್ಪ ಅಡ್ಡವಾದರೂ.. ಬಲರಾಮನಿಗೆ ಅದರ ಸುಳಿವು ದೊರೆತು ಬಿಗಿ ಬಂದೋಬಸ್ತಾಯಿತು.
ಪೃಥ್ವಿರಾಜನ ಉಪಾಯದಂತೆ ಕಲ್ಪನಾ ಹಾಗೂ ಬಲರಾಮ ಇಬ್ಬರೂ ಹೋಗಬೇಕಾದ ನಂದಿ ಬೆಟ್ಟಕ್ಕೆ ಕಾವೇರಿ ಹಾಗೂ ಬಲರಾಮ ಹೋಗುವಂತಾಯಿತು. ಕಲ್ಪನಾ ಸುಧಾಕರನೊಟ್ಟಿಗೆ ಹೊರಟಳು. ಬಲರಾಮ ಹಾಗೂ ಕಾವೇರಿಯ ನಿಕಟ ಪರಿಚಯವಾಗಿ ಮೊದಲ ಭೇಟಿಯಲ್ಲಿ ಕಳೆದ ಸಮಯದಲ್ಲಿಯೇ ಪ್ರೇಮಾಂಕುರವಾಯಿತು.
ಇತ್ತ ಕಲ್ಪನಾಳಿಗೆ ಸುಧಾಕರನ ಸ್ನೇಹ ಹೆಚ್ಚಾಗಿ ಆಕೆ ಗರ್ಭಿಣಿಯೂ ಆದಳು. ಸುಧಾಕರ ಮದುವೆಯಾಗಲು ಒಪ್ಪಲಿಲ್ಲ. ಕಲ್ಪನಾ, ಪೃಥ್ವಿರಾಜ್ ನನ್ನು ಬಿಟ್ಟರೆ ಬೇರೆ ಯಾರಿಗೂ ಈ ವಿಚಾರ ತಿಳಿದಿರಲಿಲ್ಲ.
ಈ ಮಧ್ಯದಲ್ಲಿ ಪೃಥ್ವಿರಾಜನ ಗೆಳೆಯರಾದ ಪೊಲೀಸ್ ಆಗಿದ್ದ ಭರಣಿಯವರು ಅವಿನಾಶನ ವಿಚಾರವನ್ನು ತಿಳಿಸಿ, ಆತನನ್ನು ಬದಲಾಯಿಸುವ ವಿಚಾರ ಮಾತನಾಡುತ್ತಿದ್ದಾಗ ಅದು ಸಾಧ್ಯವಾ ಎನ್ನುವಾಗ ಒಂದು ಉದಾಹರಣೆಯನ್ನು ನೀಡುತ್ತಾರೆ. ಜೈಲಿನಲ್ಲಿದ್ದು ಬಂದವನು, ಹಲವು ಕಷ್ಟಗಳನ್ನು ಅನುಭವಿಸಿದವನು ಇಂದು ತಿದ್ದಿಕೊಂಡು.. ಪ್ರಸಿದ್ಧ ಪ್ರಸಿದ್ಧ ವಕೀಲನಾಗಿಲ್ಲವೇ ಎಂದು ಪ್ರಶ್ನಿಸಿದಾಗ ಪೃಥ್ವಿರಾಜರವರಿಗೆ ಆತ ಬಲರಾಮನೇ ಎಂದು ಅರಿವಾಗುತ್ತದೆ. ಸಂಪೂರ್ಣ ವಿಚಾರವನ್ನು ತಿಳಿದುಕೊಳ್ಳದ ಅವರು ಆತನಿಗೆ ಮಗಳನ್ನು ಕೊಡಲು ಹಿಂಜರಿಯುತ್ತಾರೆ.
ಇದಾದ ನಂತರ ನಡೆದ ಘಟನೆ ಎಲ್ಲರ ಬದುಕಲ್ಲಿಯೂ ಅಲ್ಲೋಲಕಲ್ಲೋಲವನ್ನೇ ಎಬ್ಬಿಸುತ್ತದೆ. ಕಲ್ಪನಾ ತಾನು ಬಲರಾಮನನ್ನೇ ಮದುವೆಯಾಗುತ್ತೇನೆ. ಅಲ್ಲದೆ, ಮಗುವನ್ನು ಉಳಿಸಿಕೊಳ್ಳುತ್ತೇನೆ. ಅವಿನಾಶ, ಸುಧಾಕರನಿಗಿಂತ ಆತ ಎಷ್ಟೋ ಮೇಲು ಎಂದಾಗ ಪೃಥ್ವಿರಾಜರ ಮನಸ್ಸು ಹೊಯ್ದಾಡುತ್ತದೆ. ಅಷ್ಟರಲ್ಲಾಗಲೇ ಕಾವೇರಿ ಆತನ ಮನೆದೊಡತಿಯಾಗಲು ಒಪ್ಪಿರುತ್ತಾಳೆ.
ಕಾಲೇಜಿನಲ್ಲಿ ಹಾಡಹಗಲಿನಲ್ಲಿಯೇ ಸುಧಾಕರನ ಕೊಲೆಯಾಗುತ್ತದೆ. ಆ ಕೊಲೆ ಮಾಡಿದ್ದು ಮತ್ತಾರೂ ಅಲ್ಲ. ಕಲ್ಪನಾಳ ಅಣ್ಣ ಅವಿನಾಶ್. ಸುಧಾಕರನನ್ನು ಅವಿನಾಶ್ ಕೊಲೆ ಮಾಡಿದ್ದು ಕಲ್ಪನಾಳ ವಿಚಾರಕ್ಕಲ್ಲ. ಅಸಲಿಗೆ ಆತನಿಗೆ ಈ ವಿಚಾರದ ಅರಿವೇ ಇರುವುದಿಲ್ಲ. ಹಾಗಾದರೆ ಈ ಕೊಲೆಯಾದದ್ದೇಕೆ..?
ಅವಿನಾಶ್ ನನ್ನು ಬಿಡಿಸಲು ಭರಣಿ ಬಲರಾಮನ ಸಹಾಯ ಪಡೆಯಲು ಹೇಳಿದಾಗ.. ಪೃಥ್ವಿರಾಜರಿಗೂ ಹಾಗೂ ಬಲರಾಮನಿಗೂ ಆದ ಜಟಾಪಟಿಯೇನು..?
ಬಲರಾಮನ ಹಿಂದಿನ ಪ್ರಸಂಗ ಕಾವೇರಿಗೆ ತಿಳಿದಿತ್ತೇ ಅಥವಾ ಆತ ಅದೆಲ್ಲವನ್ನೂ ಆಕೆಯಿಂದ ಮುಚ್ಚಿಟ್ಟಿದ್ದನೇ..? ಅಷ್ಟಕ್ಕೂ ಬಲರಾಮ ಜೈಲಿನಲ್ಲಿದ್ದದ್ದೇಕೆ..? ಬಲರಾಮನ ಬದುಕಲ್ಲಿ ಭರಣಿ ಎಂಬ ಗಾಡ್ ಫಾದರ್ ಪಾತ್ರವೆಷ್ಟು..₹
ಕಾವೇರಿ, ಬಲರಾಮ ಹಾಗೂ ತಮ್ಮನಂತಿದ್ದ ಬಲರಾಮನ ಬಲಗೈ ಭಂಟ ರಾಜ ಕಾವೇರಿಯ ಊರಿಗೆ ಹೊರಟಾಗ ಅವರ ಮೇಲೆ ಅಟ್ಯಾಕ್ ನಡೆದದ್ದೇಕೆ.. ಅವರನ್ನು ರಕ್ಷಿಸಿದ ಬಾಬು ಯಾರು..
ಈ ಎಲ್ಲದರ ಉತ್ತರ ತಿಳಿಯಲು ಓದಿ 'ಅಮೃತ ಬಿಂದು' ಕಾದಂಬರಿಯನ್ನು. ಪ್ರತಿಯೊಬ್ಬರ ಬದುಕಿನಲ್ಲಿಯೂ ಕಷ್ಟದ ದಿನಗಳು ಇರುತ್ತವೆ. ವಿಷಮ ಘಳಿಗೆಗಳು ಬರುತ್ತವೆ. ಅದೆಲ್ಲದರಾಚೆಗೆ ಅಮೃತ ಸಿಕ್ಕು, ಬದುಕನ್ನು ಹಸನಾಗಿಸಿಕೊಳ್ಳುವ, ಪುನರುಜ್ಜೀವನಗೊಳಿಸಿಕೊಳ್ಳುವ ದಾರಿ ಎಲ್ಲರ ಬಳಿಯೂ ಇರುತ್ತದೆ. ಆದರೆ, ಮನುಷ್ಯ ಅದಕ್ಕೆ ಮನಸ್ಸು ಮಾಡಬೇಕು ಅಷ್ಟೇ..
ಇಲ್ಲಿನ ಪಾತ್ರಗಳನ್ನು ಕಾಣುವಾಗ ಇವರು ಸಂಪೂರ್ಣ ಒಳ್ಳೆಯವರು ಅಥವಾ ಸಂಪೂರ್ಣ ಕೆಟ್ಟವರು ಎಂಬ ಭಾವ ಬರುವುದಿಲ್ಲ. ಎರಡು ಶೇಡ್ ಗಳನ್ನು ಸಹಾ ಚಿತ್ರಸಿದ್ದಾರೆ. ಮೊದಲಿಗೆ ಒಳ್ಳೆಯವರಾಗಿ ಕಂಡವರು, ನಂತರ ಕೆಟ್ಟವರಾಗಿಯೂ ಕಾಣಬಹುದು ಅಥವಾ ವ್ಯತಿರಿಕ್ತವಾಗಿಯೂ ಇರಬಹುದು. ಬದುಕಿನ ಗತಿಯಲ್ಲಿ ನಡೆ-ನುಡಿ, ಸಹವಾಸ ಎಲ್ಲವೂ ಜೀವನದ ದಿಕ್ಕನ್ನು ಹೇಗೆ ಬದಲಿಸಬಲ್ಲದು ಎಂಬುದರ ಚಿತ್ರಣವಿದೆ. ಸರಿಯಾದ ಮಾರ್ಗದರ್ಶನ ದೊರೆತರೆ ಮನುಷ್ಯ ಎಷ್ಟು ಚೆಂದದ ಜೀವನ ಕಟ್ಟಿಕೊಳ್ಳಬಲ್ಲ ಎಂಬುದರ ಉದಾಹರಣೆ ಇರುವ, ಹಾಗೆಯೇ ಬದಲಾವಣೆ ಆತನ ಬದುಕಲ್ಲಿ ಬರದೇ ಇದ್ದರೆ, ಯಾರೂ ಆತನನ್ನು ತಿದ್ದದೇ ಹೋದರೆ ಆತ ಹೇಗೆ ಅಧಃಪತನಕ್ಕಿಳಿಯಬಲ್ಲ ಎಂಬುದರ ಉದಾಹರಣೆಯೂ ಇದೆ. ಕೆಟ್ಟವರಲ್ಲಿನ ಒಳ್ಳೆಯತನ ಹಾಗೂ ಒಳ್ಳೆಯವರಲ್ಲಿನ ಕೆಟ್ಟತನದ ಬಿಂಬ ಕಾಣುತ್ತದೆ. ಕುತೂಹಲದಿಂದ ಕೊನೆಯವರೆಗೂ ಓದಿಸಿಕೊಂಡು ಹೋದ ಕಾದಂಬರಿ ತನ್ನ ರಹಸ್ಯವನ್ನು ಬಿಟ್ಟುಕೊಡದೆ ಸಾಗುತ್ತಾ ಹೋಗುತ್ತದೆ. ಸಿನಿಮಾ ಶೈಲಿಯ ಕಥಾವಸ್ತುವಾದರೂ ನಮ್ಮ ಬದುಕಿಗೊಂದು ಪಾಠವಾಗಬಲ್ಲಂತಹಾ ಕಾದಂಬರಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ