ಮಂಗಳವಾರ, ಏಪ್ರಿಲ್ 21, 2026

ದೀಪಮಾಲೆ - ಜಮನಾಲಾಲ್ ಬಜಾಜ್


ಸ್ವಾತಂತ್ರ್ಯ ಹೋರಾಟಗಾರ : ಜಮನಾಲಾಲ್ ಬಜಾಜ್

ಪುಸ್ತಕದ ಶೀರ್ಷಿಕೆ : ದೀಪಮಾಲೆ

ಲೇಖಕರು : ಸಿದ್ದವನಹಳ್ಳಿ ಕೃಷ್ಣಶರ್ಮ

ದ್ವಿತೀಯ ಮುದ್ರಣ : 1943


ಗಾಂಧೀಜಿಯ ಐದನೇ ಮಗನಿದ್ದಂತೆ ಜಮನಾಲಾಲ್ ಬಜಾಜ್ ಎನ್ನುವ ಮಾತನ್ನು ಒಂದೆಡೆ ಓದಿದಾಗ.. ಜಮನಾಲಾಲ್ ಬಜಾಜ್ ಬಾಪೂಜಿಯವರ ಬದುಕಿನಲ್ಲಿ ಎಷ್ಟು ಮಹತ್ವದ ಪಾತ್ರ ವಹಿಸಿರಬಹುದು ಎಂದು ಹುಡುಕಿ ಹೊರಟಾಗ ಸಿಕ್ಕ ಮಾಹಿತಿ ಇಂತಿದೆ. ಜಮನಾಲಾಲ್ ಅವರು ಕೊಡುಗೈ ದಾನಿ ಎಂಬುದು ಹಿಂದೂಸ್ಥಾನಕ್ಕೆ ಚೆನ್ನಾಗಿ ಗುರುತಾಗುವಂತೆ ಆಗಿದ್ದು ಗಾಂಧೀಜಿಯವರ ಸರ್ವತೋಮುಖ ಸೃಷ್ಟಿಯ ಮೂಲಕ ಎಂಬುದು ಹೌದಾದರೂ.. ದಾನ ಮಾಡುವಾಗ ಅದಕ್ಕೆ ಬೇಕಾದ ಮನಸ್ಸು ಹಾಗೂ ಆತ್ಮ ಸಂತೋಷದಿಂದ, ಸಂಪೂರ್ಣ ತೃಪ್ತಿಯಿಂದ ಮಾಡಿದಾಗಲಷ್ಟೇ ಅದು ಸಾಧ್ಯ. 


ಸ್ವಾತಂತ್ರ್ಯ ಹೋರಾಟ ಎಂಬುದು ಕೇವಲ ಇಲ್ಲದವರ ಅಥವಾ ಹಿಂದುಳಿದವರ ಹೋರಾಟವಾಗಿ ಉಳಿದಿರಲಿಲ್ಲ. ಇದಕ್ಕೆ ಶ್ರೀಮಂತರು ಸಹಾ ತಮ್ಮ ತನು, ಮನ, ಧನಗಳನ್ನು ಅರ್ಪಿಸಿ ದೇಶಕ್ಕಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಅಂತಹವರಲ್ಲಿ ಜಮನಾಲಾಲ್ ಅವರನ್ನು ಗುರುತಿಸಬಹುದು. ಗಾಂಧೀಜಿ ಎಂದಾಕ್ಷಣ ಸೇವಾ ಗ್ರಾಮ ಎಂಬ ಹೆಸರು ನಮಗೆ ನೆನಪಾಗುತ್ತದೆ. ಇದು ಸೇಗಾಂವ್ ಎಂಬ ಹಳ್ಳಿಯಂತಹಾ ಜಾಗ. ಆದರೆ, ಈ ಜಾಗ ನೀಡಿದ್ದು ಜಮುನಾ ಲಾಲ್ ಬಜಾಜ್. ಸಬರಮತಿಯ 'ಉದ್ಯೋಗ ಮಂದಿರ'ವನ್ನು ತ್ಯಾಗ ಮಾಡಿ ಸ್ವರಾಜ್ಯ ಸಿಗುವವರೆಗೂ.. ಅಲ್ಲಿಗೆ ಕಾಲಿಡನೆಂದು ಶಪಥ ತೊಟ್ಟು ಮಹಾತ್ಮರು ಸ್ವಾತಂತ್ರ್ಯ ಹೋರಾಟಕ್ಕಿಳಿದಾಗ ಅವರಿಗೆ ವಸತಿ ಕಲ್ಪಿಸಿಕೊಟ್ಟವರು ಜಮನಾಲಾರರು. ರಾಷ್ಟ್ರಸೇವೆಯಲ್ಲಿ ಮನೆ ಕಳೆದುಕೊಂಡ ಕೆಲಸಗಾರರ ಮಕ್ಕಳಿಗಾಗಿ ಆಶ್ರಯ ಸ್ಥಾನವನ್ನು ಕಟ್ಟಿಕೊಟ್ಟರು. ಇದು ಈಗ ಮಹಿಳಾ ಆಶ್ರಮವಾಗಿದೆ. ಓದುವ ಹುಡುಗರಿಗೆ ಛಾತ್ರವೃತ್ತಿ, ರಾಷ್ಟ್ರಕಾರ್ಯಕ್ಕೆ ಪ್ರೋತ್ಸಾಹ, ಕಾರ್ಯಕರ್ತರಿಗೆ ಅನುಕೂಲ, ಆಪತ್ತಿನಲ್ಲಿರುವವರಿಗೆ ಸಹಾಯ ಹೀಗೆ ಅವರ ಔದಾರ್ಯದ ಗುರುತುಗಳು ಬೆಳೆಯುತ್ತಾ ಹೋಗಿವೆ.


ಬಜಾಜವಾಡಿ, ಬಜಾಜ ವ್ಯವಹಾರ ಎಂಬ ಕುಟುಂಬದ ಅಧಿಕಾರದ ಕೊಂಡಿಯ ಮುಖ್ಯಸ್ಥರಾಗಿದ್ದವರು ಇವರು. ಆದರೆ, ಮೇಲು-ಕೀಳು ಎಂಬ ಭಾವನೆಯನ್ನು ತೊರೆದು, ಹಿರಿಯರು-ಹಿರಿಯರೆನ್ನದೆ ಎಲ್ಲರ ಸಮಸ್ಯೆಗಳನ್ನು ತಮ್ಮದೇ ಎಂದು ಪರಿಗಣಿಸಿ ಸಹಾಯ ಹಸ್ತ ಚಾಚುತ್ತಾ ಇದ್ದವರು. ಯಾರಿಗೂ ಇವರು ಸೇಠ್ ಜೀ ಆಗಿರಲಿಲ್ಲ.. ಬದಲಾಗಿ ಕಾಕಾಜಿ ಆಗಿದ್ದರು. 


ಆದರೆ, ಜಮುನಾಲರ ಜೀವನದಲ್ಲಿ ಅವರ ತ್ಯಾಗ, ದಾನಗಳಿಗಿಂತಲೂ.. ಅವರ ವಿರಕ್ತ ಸ್ವಭಾವ, ವಿಶಾಲ ದೃಷ್ಟಿ, ಶಾಂತತೆ, ಧೀರತೆ, ವಜ್ರ ಹೃದಯ, ರಾಷ್ಟ್ರ ಹಿತಕ್ಕಾಗಿ ಮಾಡಿದ ಮೂಕ ಸೇವೆ ಅವರ ಸ್ಥಾನಮಾನವನ್ನು ಹೆಚ್ಚಿಸಿದೆ. ಗಾಂಧೀಜಿಯ ತತ್ವದಲ್ಲಿ ಅವರಿಗೆ ಅಚಲ ಶ್ರದ್ಧೆ. ಸೇಠ್ ಜೀ ಆಗಿ ಹಣ ಗಳಿಸುವುದು, ಅಧಿಕಾರಿಗಳ ಅನುಗ್ರಹಕ್ಕೆ ಪಾತ್ರರಾಗಿ ರಾವ್ ಬಹದ್ದೂರ್ ಪದವಿ ಪಡೆಯುವುದನ್ನು ಮಾಡಬಹುದಾಗಿತ್ತು.  ಆದರೆ, ಹಾಗೆ ಮಾಡಲಿಲ್ಲ. ಮ್ಯಾಜಿಸ್ಟ್ರೇಟ್ ಎಂಬ ಗೌರವದ ಕೆಲಸ ಅವರ ಕೊರಳಿಗೆ ಬಿದ್ದಿತ್ತು. ಅದನ್ನೇ ದಾಳ ಮಾಡಿಕೊಂಡಿದ್ದರೆ ಅವರು ಸರ್ ಇತ್ಯಾದಿ ಆಗಬಹುದಾಗಿತ್ತು. ಆದರೆ, ಗಾಂಧೀಜಿಯ ರಣದುಂದುಭಿ ಇವರನ್ನು ಬೇರೆಡೆಗೆ ಕರೆತಂತು. 


1921ರ ಕಾಲಕ್ಕೆ ಜಮನಾಲಾಲರು ರಾಷ್ಟ್ರ ಸಭೆ ಸೇರಿದರು. ನಂತರ ಸತ್ಯಾಗ್ರಹ ಸೇನೆಯ ಸಾಮಾನ್ಯ ಸಿಪಾಯಿಯಂತೆ ಸಿದ್ದರಾದರು. ಇಡೀ ಹಿಂದೂಸ್ಥಾನದಲ್ಲಿ ಶಾಸನ ಉಲ್ಲಂಘನಕ್ಕಾಗಿ, ಸತ್ಯಾಗ್ರಹ ಮಾರ್ಗವನ್ನು ಪರಿಶೀಲಿಸಲು 1922 ರಲ್ಲಿ ಒಂದು ಸಮಿತಿ ಏರ್ಪಾಡಾಯಿತು. ಅದಕ್ಕಾಗಿ ಭಾರತವನ್ನೆಲ್ಲಾ ಸುತ್ತಿ ಕೆಲವು ಸೂಚನೆ ಮಾಡಿದವರಲ್ಲಿ ಜಮನಾಲಾಲರು ಒಬ್ಬರು. ನಾಗಪುರದ ದ್ವಜ ಸತ್ಯಾಗ್ರಹದಲ್ಲಿ ಇವರೇ ಮುಂದಾಳು. ಸೆರೆಮನೆ ವಾಸದಲ್ಲಿ ಕಷ್ಟಕೋಟಲೆಗಳನ್ನು ಅನುಭವಿಸಿದರು. ಜೈಲಿನಲ್ಲಿ ದಿನಕ್ಕೆ ಎಂಟು-ಹತ್ತು ಸೇರು ದವಸವನ್ನು ಬೀಸುವುದಲ್ಲದೆ, ದಂಡವನ್ನೂ ಕಟ್ಟಬೇಕಿತ್ತು. ಇವರ ಮೋಟಾರನ್ನು ಸ್ವಾಧೀನ ಪಡಿಸಿಕೊಂಡು ಅದನ್ನು ಮಾರಿ ದಂಡದ ಹಣ ವಸೂಲಿ ಮಾಡಿಕೊಳ್ಳಲು ಹೊರಟಿತ್ತು ಬ್ರಿಟಿಷ್ ಸರ್ಕಾರ. ಆದರೆ, ಇಡೀ ಜಿಲ್ಲೆಯಲ್ಲಿಯೇ.. ಅದನ್ನು ಯಾರೂ ಕೊಳ್ಳಲು ಮುಂದೆ ಬರದಾದಾಗ ಅದನ್ನು ಬೇರೆಲ್ಲಿಯೋ ಮಾರಿ ದಂಡದ ಹಣವನ್ನು ಚುಕ್ತಾ ಮಾಡಿಕೊಂಡರು. 


ನಂತರದ ದಿನಗಳಲ್ಲಿ ಹೆಂಡತಿ ಮಕ್ಕಳನ್ನು ಸಹಾ ಸ್ವಾತಂತ್ರ್ಯ ಹೋರಾಟಕ್ಕಿಳಿಸಿದರು. ಹಿಂದೂ-ಮುಸ್ಲಿಂ ಐಕ್ಯ, ವರ್ಣಾಂತರ ಸೌಹಾರ್ದಗಳಿಗಾಗಿಯೂ ಜಮನಾಲರ ಪ್ರಯತ್ನಗಳು ನಡೆದಿದೆ. ದೇವದಾಸ ಗಾಂಧಿ ಹಾಗೂ ರಾಮದಾಸ ಗಾಂಧಿಯ ರಾಷ್ಟ್ರೀಯ ವಿವಾಹಗಳು ಇವರದ್ದೇ ಕೈವಾಡ. 


ಸತ್ಯಾಗ್ರಹ ಸರ್ಕಾರದೊಡನೆ ಹೊಡೆದಾಡುವ ಶಸ್ತ್ರವಲ್ಲ. ಅದೊಂದು ಜೀವನದ ರೀತಿ, ಹಾದಿ. ಅದು ಜೀವನದ ಮೂಲತತ್ವ ಎಂದುಕೊಂಡು ಬದುಕಿದವರು. ಇವರಿಗೆ ಅಷ್ಟಾಗಿ ವಿದ್ಯಾಭ್ಯಾಸವೂ ಇರಲಿಲ್ಲ. ವಾರ್ಧಾದ ಸೇವಾಗ್ರಾಮದಲ್ಲಿ ತಾವು ಎಲ್ಲವನ್ನು ಬಿಟ್ಟು ಸಹಜ, ಸಾಮಾನ್ಯ ಜೀವನ ನಡೆಸಿದ ಇವರ ನೆನಪು ಅಹಿಂಸಾ ಹಾದಿಯ ಸೇವೆಯಲ್ಲಿ ಸದಾ ಅಜರಾಮರ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ