ಪುಸ್ತಕದ ಶೀರ್ಷಿಕೆ : ಹುತಾತ್ಮ ಭಗತ್ ಸಿಂಗ್
ಲೇಖಕರು : ಕುಲದೀಪ ನಯ್ಯರ್
ಕನ್ನಡಕ್ಕೆ : ಜಿ. ಪಿ. ಬಸವರಾಜು
ಪ್ರಕಾಶಕರು : ಲೋಹಿಯಾ ಪ್ರಕಾಶನ
ಪ್ರಥಮ ಮುದ್ರಣ : 2002
ತೃತೀಯ ಮುದ್ರಣ : 2011 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 128
ಬೆಲೆ : 60 ರೂ.
ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯದ್ದೇ ಒಂದು ಹಾದಿಯಾದರೆ, ಭಗತ್ ಸಿಂಗ್ ನದ್ದೇ ಮತ್ತೊಂದು ಹಾದಿ. ಇಬ್ಬರ ಗುರಿ ಒಂದೇ ಆದರೂ ಮಾರ್ಗಗಳು ವಿಭಿನ್ನ. ಮೊದಲ ಬಾರಿಗೆ ಗಾಂಧೀಜಿ ಮತ್ತು ಭಗತ್ ಸಿಂಗ್ ಭೇಟಿಯಾದಾಗ ಗಾಂಧೀಜಿಗೆ 59 ವರ್ಷ. ಭಗತ್ ಗೆ 21 ವರ್ಷ. ವಯೋಜಹಜವಾಗಿ ಗಾಂಧೀಜಿಯವರಲ್ಲಿ ಶಾಂತಿ ಮತ್ತು ಸಮಾಧಾನಗಳು ಎದ್ದು ಕಾಣುತ್ತಿದ್ದರೆ.. ಭಗತ್ ಸಿಂಗ್ ನಲ್ಲಿ ಹುಮ್ಮಸ್ಸು ಹಾಗೂ ತುಡಿತ ಕಾಣುತ್ತಿತ್ತು.
ಕ್ರಾಂತಿ ಎಂದರೆ ಹಿಂಸೆ, ರಕ್ತದ ಚೆಲ್ಲಾಟ, ಜೀವಗಳ ಬಲಿ ಎಂದು ಭಗತ್ ಎಂದೂ ಭಾವಿಸಿರಲಿಲ್ಲ. ಬಾಂಬ್ ತಯಾರಿಕೆಯಲ್ಲಿ ತರಬೇತಿ ಪಡೆದರೂ.. ಭಗತ್ ಸಿಂಗ್ ಬಾಂಬುಗಳನ್ನು ದೇಶದ ತುಂಬಾ ಸ್ಪೋಟಿಸಿ ಭಯವನ್ನು ಹುಟ್ಟು ಹಾಕಿ, ಜೀವಗಳನ್ನು ಬಲಿಕೊಟ್ಟು ಸ್ವಾತಂತ್ರ್ಯ ಪಡೆಯಬೇಕೆಂದು ಎಂದೂ ಆಶಿಸಲಿಲ್ಲ. ಮನುಷ್ಯನ ಜೀವಕ್ಕೆ ತೀರಾ ಬೆಲೆ ಕೊಡುತ್ತಿದ್ದ ವ್ಯಕ್ತಿ. ಅಂತಹದ್ದೇ ಒಂದು ಆಪಾದನೆಯ ಮೇಲೆ ಸೆರೆಮನೆ ಸೇರಬೇಕಾಗಿ ಬಂದದ್ದು ವಿಪರ್ಯಾಸ. ಆದರೆ, ಅದಕ್ಕೂ ಕಾರಣವಿತ್ತು. ಇದು ಭಗತ್ ಸಿಂಗ್ ನ ದೃಷ್ಟಿಯಿಂದ ರಚಿಸಲ್ಪಟ್ಟಿರುವ ಪುಸ್ತಕ.
ಧೈರ್ಯ, ತ್ಯಾಗ ಅತ್ಯಂತ ಅಗತ್ಯ ಎಂದು ಗಾಂಧೀಜಿ ಭಾವಿಸಿದ್ದರೆ.. ಭಗತ್ ಸಿಂಗ್ ಭಾವಿಸಿದ್ದೂ ಹಾಗೆಯೇ.. ಈ ಹೋರಾಟದಲ್ಲಿ ತಮ್ಮಂತಹವರ ಬಲಿದಾನ ಅನಿವಾರ್ಯ ಎಂದು ಭಾವಿಸಿದ್ದ ಭಗತ್ ಸಿಂಗ್ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಗಲ್ಲಿಗೇರುವ ಧೈರ್ಯವನ್ನು ತೋರಿಸಿದರು. ಭಗತ್ ಸಿಂಗ್ ಜೊತೆಗೆ ಗಲ್ಲಿಗೇರಿದ ಮತ್ತಿಬ್ಬರು ಸಂಗಾತಿಗಳು ಸುಖದೇವ್ ಹಾಗೂ ರಾಜಗುರು. ಭಗತ್ ಗೆ ಆಗ ಕೇವಲ 23 ವರ್ಷ. ಪುಸ್ತಕದಲ್ಲಿ ಭಗತ್ ಸಿಂಗ್ ನ ಅಪ್ರತಿಮ ಓದಿನ ಪ್ರೀತಿಯನ್ನು ಕಾಣಬಹುದು. ಆತ ಚಿಕ್ಕ ವಯಸ್ಸಿಗೇ ಅಷ್ಟು ಜ್ಞಾನದಾಹಿಯಾಗಬೇಕಾದರೆ ಅದೆಷ್ಟು ಓದಿರಬೇಕು..! ತನ್ನ ಕ್ರಾಂತಿಕಾರಿ ಚಟುವಟಿಕೆಗಳು, ಹೋರಾಟದ ಜೊತೆಗೆ ಓದನ್ನೂ ಮುಂದುವರಿಸಿದ್ದ. ಭಗತ್ ನನ್ನು ನೇಣುಗಂಬಕ್ಕೆ ಕರೆದೊಯ್ಯುವ ಸಂದರ್ಭದಲ್ಲಿಯೂ ತಾನು ಓದುತ್ತಿರುವ ಪುಸ್ತಕವನ್ನು ಪೂರ್ಣಗೊಳಿಸಲು ಅವಕಾಶ ಕೊಡಿ ಎಂದು ಕೇಳಿದರು.
ತಮ್ಮ ಜೈಲುವಾಸದ ಅವಧಿಯಲ್ಲಿ ಭಗತ್ ಸಿಂಗ್ ಬರೆದಿರುವುದು ನಾಲ್ಕು ಕೃತಿಗಳು, ಹಿಸ್ಟರಿ ಆಫ್ ರೆವಲ್ಯೂಷನ್ ಮೂವ್ಮೆಂಟ್ ಇನ್ ಇಂಡಿಯಾ, ಡಿ ಐಡಿಯಲ್ ಆಫ್ ಸೋಶಿಯಲಿಸಂ, ಆಟೋಬಯೋಗ್ರಫಿ ಮತ್ತು ಅಟ್ ದ ಡೋರ್ ಆಫ್ ಡೆತ್. ಭಗತ್ ಬರೆದ ಈ ಕೃತಿಗಳ ಹಸ್ತಪ್ರತಿಗಳನ್ನು ಜೈಲಿನಿಂದ ಕ್ರಾಂತಿಕಾರಿಗಳು ಗುಟ್ಟಾಗಿ ಹೊರಕ್ಕೆ ಸಾಗಿಸಿದರೆಂಬ ಮಾಹಿತಿ ಇದೆಯಾದರೂ.. ಈ ಹಸ್ತಪ್ರತಿಗಳು ಈವರೆಗೂ ಸಿಕ್ಕಿಲ್ಲ ಹಾಗೂ ಪ್ರಕಟವಾಗಿಯೂ ಇಲ್ಲ. ಇದು ಸಂಶೋಧನೆಯ ಆಧಾರಿತ ಮಾಹಿತಿ.
ಖ್ಯಾತಪತ್ರಕರ್ತ ಕುಲದೀಪ ನಯ್ಯರ್ ಅವರು ಹಲವು ದಾಖಲೆಗಳನ್ನು ಶೋಧಿಸಿ, ಕಾಗದಪತ್ರಗಳನ್ನು ಪರಿಶೀಲಿಸಿ ಹಲವಾರು ಸಂದರ್ಶನಗಳನ್ನು ಹಾಗೂ ಅಧ್ಯಯನವನ್ನು ನಡೆಸಿ ರಚಿಸಿದ ಕೃತಿ 'ದಿ ಮಾರ್ಟಿಯರ್ ಭಗತ್ ಸಿಂಗ್ : ಎಕ್ಸ್ಪರಿಮೆಂಟ್ ಇನ್ ರೆವಲ್ಯೂಷನ್'. ಈ ಕೃತಿ ಪ್ರಕಟವಾಗುವ ಮುನ್ನವೇ ಕೆಲವು ಆಯ್ದ ಭಾಗಗಳನ್ನು ಕನ್ನಡದಲ್ಲಿ ಪ್ರಕಟಿಸಿದ್ದು ಪ್ರಜಾವಾಣಿ. ಆ ಸಂಗ್ರಹರೂಪದ ಅನುವಾದ ಮಾಡಿದ್ದು ಜೆ. ಪಿ ಬಸವರಾಜು. ಹಾಗೆ ಓದುತ್ತಾ ಅನುವಾದಿಸುತ್ತಾ ಹೋದಂತೆ ಅದರ ಫಲವಾಗಿ ಕನ್ನಡದಲ್ಲಿ ಪುಸ್ತಕ ಪ್ರಕಟವಾಯಿತು. ಅದೇ 'ಹುತಾತ್ಮ ಭಗತ್ ಸಿಂಗ್'.
ರಾಷ್ಟ್ರಪ್ರೇಮ ಹಾಗೂ ರಾಷ್ಟ್ರ ದ್ರೋಹ ಎರಡು ವಿಭಿನ್ನ ಪದಗಳು. ಆದರೆ ರಾಷ್ಟ್ರ ಪ್ರೇಮವನ್ನು ರಾಷ್ಟ್ರದ್ರೋಹದ ನೆಲೆಗಟ್ಟಿನಲ್ಲಿ ನೋಡುತ್ತಿದ್ದ ಕಾಲವಿತ್ತು. ಅದು ಸ್ವಾತಂತ್ರ್ಯ ಪೂರ್ವಕಾಲ. ಅಂತಹಾ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವಂಶದಿಂದ ಬಂದ ಕುಡಿಯೇ ಭಗತ್ ಸಿಂಗ್. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಆತನ ಒಳಒತ್ತಡ ಸಹಜವಾಗಿಯೇ ಬಂದದ್ದು ಹೌದಾದರೂ ಆತನ ಬಾಲ್ಯದ ಹಲವಾರು ಘಟನೆಗಳು ಆತನ ಧೈರ್ಯವನ್ನು ನಿರೂಪಿಸುತ್ತವೆ.
ಒಮ್ಮೆ ತಾಯಿಗೆ ಪತ್ರ ಬರೆದಿದ್ದ ಭಗತ್ "ನನ್ನ ದೇಶ ಒಂದು ದಿನ ಸ್ವಾತಂತ್ರ ಪಡೆಯುತ್ತದೆ ಎಂಬ ಬಗ್ಗೆ ನನಗೆ ಅನುಮಾನವಿಲ್ಲ. ಆದರೆ, ಭಯವಿರುವುದು ಬಿಳಿ ಸಾಹೇಬರು ಖಾಲಿ ಮಾಡುವ ಕುರ್ಚಿಯಲ್ಲಿ ಕಂದು ಸಾಹೇಬರು ಕುಳಿತುಕೊಳ್ಳುತ್ತಾರೆಂದು" ಎನ್ನುವಾಗ ಆತನ ಸ್ವಾತಂತ್ರದ ಕುರಿತಾದ ನೋಟ ಯಾವ ರೀತಿಯದ್ದು ಎಂಬುದನ್ನು ಅರ್ಥೈಸಿಕೊಳ್ಳಬಹುದಾಗಿದೆ. ಪ್ರಗತಿಯ ಹಾದಿಯಲ್ಲಿ ಹಳೆಯ ವ್ಯವಸ್ಥೆಯನ್ನು ನಾಶಪಡಿಸದೇ... ಹೊಸ ಬದಲಾವಣೆ ತರಲು ಸಾಧ್ಯವಿಲ್ಲವೆಂಬುದನ್ನು ಭಗತ್ ಅರ್ಥೈಸಿಕೊಂಡಿದ್ದ. ಭಗತ್ ಮಾತ್ರವಲ್ಲ ಸುಖದೇವ್ ಹಾಗೂ ರಾಜಗುರು ಸಹಾ ಇದೇ ಕನಸನ್ನು ಕಂಡವರು.
ಅಜ್ಜ ಅರ್ಜುನ್ ಸಿಂಗ್ ಅವರೇ ಭಗತ್ ಗೆ ಹೆಸರಿಟ್ಟವರು. ಪ್ರೀತಿಯಿಂದ ಭಗತು ಎಂದು ಕರೆಯುತ್ತಿದ್ದವರು. ತಂದೆ ಕಿಶನ್ ಸಿಂಗ್. ತಮ್ಮ ಕುಲ್ಬೀರ್, ಹತ್ತು ವರ್ಷದ ಕೊನೆಯ ತಮ್ಮ ಕುಲ್ತಾರ್. ಮೂವರು ಸಹೋದರಿಯರು. ಕ್ರಾಂತಿಕಾರಿ ಕೆಲಸದಲ್ಲಿ ತೊಡಗಿದ್ದಕ್ಕಾಗಿ ಮಗನನ್ನು ತಂದೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾಗಲೆಲ್ಲಾ ಮಗನ ಬೆಂಬಲಕ್ಕೆ ನಿಲ್ಲುತ್ತಿದ್ದಳು. ತಾಯಿ ಗಂಡನನ್ನು ವಿರೋಧಿಸುತ್ತಿರಲಿಲ್ಲವಾದರೂ.. ಸಮಾಧಾನಪಡಿಸುತ್ತಿದ್ದಳು. ಭಗತ್ ಸಿಂಗ್ ಮೇಲೆ ತಾಯಿಯ ಪ್ರಭಾವ ಬಹಳ ಗಾಢವಾದದ್ದು. ಭಗತ್ ಸಿಂಗ್ ತನ್ನನ್ನಾಗಲಿ ಅಥವಾ ಚಿಕ್ಕಪ್ಪ ಅಜಿತ್ ಸಿಂಗನನ್ನಾಗಲಿ ಎಂದು ಅನುಸರಿಸಬಾರದು ಎಂದು ಭಗತ್ ನ ತಂದೆ ಬಯಸಿದ್ದರು. ಆದರೆ, ಅದು ಸಾಧ್ಯವಾಗದಾದಾಗ ಮಗನಿಗೆ ಬುದ್ಧಿವಾದ ಹೇಳಿದ್ದು "ಹುಷಾರಾಗಿರು" ಎಂಬುದಾಗಿ. ಬ್ರಿಟಿಷರ ಬಂಧನದಿಂದ ರಾಷ್ಟ್ರವನ್ನು ಬಿಡುಗಡೆ ಮಾಡಬಯಸುವವರು ಬಹಿರಂಗವಾಗಿ ಹೊರಬಂದು ಕಾಣಿಸಿಕೊಳ್ಳಬೇಕೆಂದು ಭಗತ್ ನ ನಂಬಿಕೆ.
ನೇಣನ್ನು ತಡೆಯಲು ಗಾಂಧಿ ವೈಸರಾಯ್ ಜೊತೆಗೆ ಸಂಪರ್ಕವನ್ನು ಇಟ್ಟುಕೊಂಡಿದ್ದರು. ಆದರೆ, ಅದಾವುದೂ ಫಲ ಕೊಡಲಿಲ್ಲ. ಬ್ರಿಟಿಷರ ವಿರುದ್ಧ ಆರಂಭಿಸಿದ್ದ ಅಸಹಕಾರ ಚಳುವಳಿ, ಕಾಯ್ದೆ ಭಂಗ ಚಳುವಳಿಗಳನ್ನು ಗಾಂಧಿ ಹಿಂತೆಗೆದುಕೊಂಡಿದ್ದಕ್ಕಾಗಿ ಭಗತ್ ನ ಪ್ರತಿಕ್ರಿಯೆ ಹೇಗಿತ್ತು..? ಚೌರಿ ಚೌರಾ ಘಟನೆಯ ಕುರಿತಾಗಿ ಭಗತ್ ನ ಅಭಿಪ್ರಾಯವೆನಿತ್ತು ಓದಿ ನೋಡಿ.
ಕ್ರಾಂತಿ ಯಶಸ್ವಿಯಾಗಬೇಕಾದರೆ ಅದಕ್ಕೆ ನಿರಂತರ ಪರಿಶ್ರಮ, ಯಾತನೆಯನ್ನು ಸಹಿಸುವ ಶಕ್ತಿ, ತ್ಯಾಗಗಳು ಬೇಕಾಗುತ್ತವೆ. ಒಂದು ದಿನ ಕ್ರಾಂತಿಯಾಗುತ್ತದೆ ಎಂಬ ಆಲೋಚನೆ ಭಗತ್ ನಲ್ಲಿ ಇದ್ದೇ ಇತ್ತು. ಹಾಗಾಗಿಯೇ.. ಆತ ಕ್ರಾಂತಿ ಚಿರಾಯುವಾಗಲಿ ಎಂಬುದನ್ನು ಸದಾ ಹೇಳುತ್ತಿದ್ದ.
ಲಾಲಾ ಲಜಪತ ರಾಯ್ ಅವರ ಮೇಲೆ ಸ್ಕಾರ್ಟ್ ದಂಡ ಕೈಗೆತ್ತಿಕೊಂಡ ಘಟನೆ ಭಗತ್ ನ ಕ್ರೋಧಕ್ಕೆ ಮಾತ್ರವಲ್ಲದೆ.. ಇಡೀ ದೇಶದ ಕ್ರೋಧಕ್ಕೆ ಕಾರಣವಾಯಿತು. ಇದಕ್ಕೂ ಜಲಿಯನ್ ವಾಲಾಬಾಗ್ ಘಟನೆಗೂ ಭಗತ್ ಬದುಕು ತಳುಕಿ ಹಾಕಿಕೊಂಡಿರುವುದೇಕೆ ಓದಿ ತಿಳಿಯಿರಿ. ಜಲಿಯನ್ ವಾಲಾಬಾಗ್ ಗೆ ಭೇಟಿ ನೀಡಿದಾಗ ಭಗತ್ ಮನಸ್ಸಿನಲ್ಲಿ ಮೂಡಿದ್ದ ಕೃತ್ಯವೇ ಲಜಪತರಾಯರವರು ನೆಲದ ಮೇಲೆ ಬಿದ್ದು ಯಾತನೆ ಪಡುವುದನ್ನು ನೋಡಿದಾಗ ಮತ್ತೆ ಹೆಡೆ ಎತ್ತಿತ್ತು. ಭಗತ್ ಹಾಗೂ ಲಜಪತರಾಯ್ ಅವರ ನಡುವೆ ಕೆಲವು ವಿಚಾರಗಳಿಗೆ ಭಿನ್ನಾಭಿಪ್ರಾಯವಿದ್ದರೂ.. ಭಗತ್ ಈ ಸಂದರ್ಭದಲ್ಲಿ ಕೈಕಟ್ಟಿ ಕೂರಲಿಲ್ಲ. ಬದಲಾಗಿ ,ಇದಕ್ಕೆ ಸೇಡು ತೀರಿಸಿಕೊಳ್ಳಲು ಸಿದ್ಧನಾದ.
ಈ ಸಂದರ್ಭದಲ್ಲಿ ಕ್ರಾಂತಿಕಾರಿ ಭಗವತಿ ಚರಣ್ ದಾಸ್ ಅವರ ಪತ್ನಿ ದುರ್ಗಾಬಾಬಿ ನೇತೃತ್ವದಲ್ಲಿ ಇದರ ಚರ್ಚೆಯಾಯಿತು. ಸ್ಕಾರ್ಟ್ ನನ್ನು ಕೊಲ್ಲುವವರು ಯಾರು ಎಂದು ಕೇಳಿ ತಾನೇ ಕೈ ಮೇಲೆತ್ತಿದ್ದಳು ದುರ್ಗಾದೇವಿ. ಆದರೆ, ಇಂತಹಾ ಅಪಾಯಕಾರಿ ಕೆಲಸಕ್ಕೆ ಆಕೆಯನ್ನು ತೊಡಗಿಸಲು ಬಯಸದೆ ಅಂದು ಆಯ್ಕೆಯಾದವರು ಭಗತ್ ಸಿಂಗ್, ರಾಜಗುರು, ಚಂದ್ರಶೇಖರ ಆಜಾದ್ ಮತ್ತು ಜೈ ಗೋಪಾಲ್. ಸ್ಕಾರ್ಟ್ ನನ್ನು ಗುರುತಿಸಲೆಂದೇ ನಿಯೋಜಿಸಿದ್ದ ವ್ಯಕ್ತಿ ಜೈ ಗೋಪಾಲ್. ಆದರೆ, ವಿಚಿತ್ರವೆಂದರೆ ಜೈ ಗೋಪಾಲ್ ಎಂದೂ ನೋಡಿಯೇ ಇರಲಿಲ್ಲ. ಇದನ್ನು ಆತ ಯಾರಿಗೂ ಹೇಳಲಿಲ್ಲ. ಹಾಗಾಗಿ ಸ್ಕಾರ್ಟ್ ಬದಲಾಗಿ ಸಾಂಡರ್ಸ್ ಇದಕ್ಕೆ ಬಲಿಯಾದ. ಆದರೆ ಇದಕ್ಕೆ ನಿಮಿತ್ತರಾದವರ ಹುಡುಕಾಟ ಎಲ್ಲೆಡೆ ನಡೆದರೂ ಯಾರೂ ಸಿಗಲಿಲ್ಲ. ಬದಲಾಗಿ, ಭಿತ್ತಿ ಪತ್ರಗಳು ಸಿಕ್ಕವಷ್ಟೇ.. ದುರ್ಗಾದೇವಿಯ ಸಹಾಯದಿಂದ ಎಲ್ಲರೂ ಅಲ್ಲಿಂದ ಪಾರಾಗಿ ಸೇರಿದ್ದು ಕಲ್ಕತ್ತಾವನ್ನು. ಇಲ್ಲಿ ಭಗತ್ ಸಿಂಗ್ ಗೆ ಹೊಸ ನಾಮಕರಣವಾಯಿತು. ಭಗತ್ ಹರಿ ಆದ.
ಇಲ್ಲಿ ಹಲವಾರು ಕ್ರಾಂತಿಕಾರಿಗಳ ಪರಿಚಯ ಹಾಗೂ ಅವರೊಂದಿಗಿನ ಬದುಕು ಭಗತ್ ಬದುಕನ್ನು ಮತ್ತಷ್ಟು ಬದಲಾಯಿಸಿತು ಹಾಗೂ ಮತ್ತಷ್ಟು ಸ್ವಾತಂತ್ರ್ಯದತ್ತ ಸೆಳೆಯಿತು. ಹಿಂಸೆಯ ಬಗ್ಗೆ ಭಗತ್ ಬೇಸತ್ತಿದ್ದನಾದರೂ.. ಗಾಂಧಿಯ 'ಬೇಜವಾಬ್ದಾರಿಯ ಯುವಕರು' ಎಂಬ ವರ್ಣನೆ ಆತನಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು.
ಎರಡು ಮಸೂದೆಗಳ ಚರ್ಚೆಗೆ ವೈಸರಾಯ್ ಇರ್ವಿನ್ ನಿಗದಿಪಡಿಸಿದ್ದು 1929 ಏಪ್ರಿಲ್ ಎಂಟನೇ ತಾರೀಕನ್ನು. ಕ್ರಾಂತಿಕಾರಿಗಳು ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಅದೇ ದಿನವನ್ನು ಆಯ್ಕೆ ಮಾಡಿಕೊಂಡರು. ಅಂದು ನಡೆದ ಘಟನೆಯೇ ಭಗತ್ ಸಿಂಗ್ ಅನ್ನು ಜೈಲಿನ ಬಂಧಿಯಾಗಿಸಿದ್ದು. ನಂತರ ನಡೆದ ವಿಚಾರಣೆ ಹಾಗೂ ಬ್ರಿಟಿಷರ ಧೋರಣೆಗಳು ಆತನನ್ನು ನೇಣುಗಂಬದವರೆಗೂ ಕರೆದೊಯ್ದವು. ಅದೆಲ್ಲದರ ಕುರಿತು ವಿಷದವಾಗಿ ತಿಳಿಯಲು ಪುಸ್ತಕ ಓದಿ.
ಈ ಮೂವರು ಯುವಕರು ಗಲ್ಲುಗಂಬವನ್ನು ಧೈರ್ಯವಾಗಿ ನಗುನಗುತ್ತಾ ಏರಿದ್ದರು. ಈ ಕುರಿತು ಚರತ್ ಸಿಂಗ್ ವರ್ಣನೆ ಮನ ಕಲಕುವಂತೆ ಮಾಡುತ್ತದೆ. ಸ್ವಾತಂತ್ರ್ಯದ ಪಂಜು ಉರಿಯಬೇಕಾದರೆ ಹಲವರು ಪ್ರಾಣತ್ಯಾಗವಾಗಬೇಕಾದದ್ದು ಅನಿವಾರ್ಯವೆಂಬುದು ಹೌದಾದರೂ.. ಗೌರವಯುತವಾದ ಅಂತಿಮ ನಮನವನ್ನು ಸಲ್ಲಿಸಿದ್ದರೆ ಅದರ ಘನತೆ ಬೇರೆಯೇ ಇರುತ್ತಿತ್ತು. ಆದರೆ, ಇವರನ್ನು ಗಲ್ಲಿಗೇರಿಸಿದ ಸುದ್ದಿ ತಲುಪಿದ ತಕ್ಷಣವೇ ಲಾಹೋರ್ ಮತ್ತು ಪಂಜಾಬ್ ನಲ್ಲಿನ ಪರಿಸ್ಥಿತಿಯೇ ಉದ್ವಿಗ್ನವಾಗಿತ್ತು. ಅಧಿಕಾರಿಗಳು ಶವಗಳನ್ನು ವಿಲೇವಾರಿ ಮಾಡಿದ ಕ್ರಮದ ಬಗ್ಗೆ ಎಲ್ಲೆಡೆ ಕ್ರೋಧ ವ್ಯಕ್ತವಾಯಿತು. ಈ ಪ್ರಸಂಗ ಎರಡೂ ಕಡೆಯವರ ಮನಸ್ಥಿತಿಯನ್ನು ಬಿಚ್ಚಿಡುತ್ತದಾದರೂ.. ಅಂತಿಮ ಸಂಸ್ಕಾರದ ಕುರಿತು ನಿಜಕ್ಕೂ ದುಃಖ ಹುಟ್ಟಿಸುತ್ತದೆ. ಭಗತ್ ಸಿಂಗ್ ಸುಖದೇವ್ ಮತ್ತು ರಾಜಗುರು ಅವರ ಚಿತಾಭಸ್ಮವನ್ನು ಫಿರೋಜ್ ಪುರದ ಬಳಿ ಇಟ್ಟಾಗ ಅಂತಿಮ ನಮನ ಸಲ್ಲಿಸಲು ಸಾವಿರಾರು ಜನ ಸೇರಿದ್ದರು.
ಭಗತ್ ಸಿಂಗ್ ಬದುಕಿನ ಜೊತೆಗೆ ಈ ಪುಸ್ತಕದಲ್ಲಿ ಸುಖದೇವ್ ಒಬ್ಬ ಹೀರೋ ಆಗಿದ್ದು ಏಕೆ ಹಾಗೂ ವ್ಹೋರಾ ಹಾಗೂ ಸುಖದೇವ್ ನಡುವಿನ ವ್ಯತ್ಯಾಸವನ್ನು ಹೇಳುತ್ತಾ.. ಆ ಪ್ರಸಂಗದ ಪ್ರಸ್ತಾಪವನ್ನು ಮಾಡಿದ್ದಾರೆ.
ತನ್ನ ಸ್ಪಷ್ಟ ನಿರ್ಧಾರಗಳನ್ನು ಜಗತ್ತಿನದುರಿಗಿಡಲು ಭಗತ್ ಸಿಂಗ್ ಆಯ್ದುಕೊಂಡಿದ್ದ ದಾರಿ ಆತನ ಬದುಕಿಗೆ ಮುಳುವಾಗಿದ್ದು ಹೌದಾದರೂ.. ಆತನ ಧೈರ್ಯ, ಶೌರ್ಯ, ತಪ್ಪೊಪ್ಪಿಗೆ ಪಡೆಯದೇ ದಿಟ್ಟವಾಗಿ ನಿಂತದ್ದು, ದೇಶದ ಕುರಿತ, ಸ್ವಾತಂತ್ರ್ಯದ ಕುರಿತ ಆತನ ನಿಲುವು ಎಲ್ಲವೂ ಆತನನ್ನು ನಿಜಕ್ಕೂ ರಿಯಲ್ ಹೀರೋವನ್ನಾಗಿ ಮಾಡಿದೆ.
ಸ್ವಾತಂತ್ರ್ಯೋತ್ಸವದ ಈ ಸಪ್ತಾಹದಲ್ಲಿ ನಾನು ಬರೆದಿರುವ ಆರು ಪರಿಚಯಗಳು ಗಾಂಧಿವಾದವನ್ನು ಹಾಗೂ ಅಹಿಂಸಾವಾದವನ್ನು ಓಪ್ಪಿ, ಅಪ್ಪಿ ನಡೆದವರ ಕುರಿತಾಗಿದ್ದರೆ.. ಈ ಕೊನೆಯ ಬರಹ ಮಾತ್ರ ಕ್ರಾಂತಿಕಾರಿ ಭಗತ್ ಸಿಂಗ್ ಕುರಿತು. ವೈಯಕ್ತಿಕವಾಗಿ ನಾನು ಇಷ್ಟಪಡುವ ಸ್ವಾತಂತ್ರ್ಯ ಹೋರಾಟಗಾರನ ಬದುಕಿನ ಕುರಿತ ಸಣ್ಣಸಣ್ಣ ಘಟನೆಗಳ ಮೂಲಕ ಕುತೂಹಲ ಹುಟ್ಟಿಸಲಷ್ಟೇ.. ಭಗತ್ ನಂತಹಾ ಹೀರೋ, ಆತನ ದಿಟ್ಟತನ, ಸೂಕ್ಷ್ಮತೆ, ಆಲೋಚನಾ ಲಹರಿ ನಿಜಕ್ಕೂ ಅನುಕರಣೀಯ. ನನ್ನಿಷ್ಟದ ಸ್ವಾತಂತ್ರ್ಯ ಹೋರಾಟಗಾರನಿಗೆ ನನ್ನ ಪುಟ್ಟ ನುಡಿ ನಮನ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ