ಬುಧವಾರ, ಏಪ್ರಿಲ್ 22, 2026

ಲಾಕ್ ನಿಂದ ಮಿಸೈಲ್ ವರೆಗೂ ಗೋದ್ರೆಜ್ ( ಬ್ಯುಸಿನೆಸ್ ಡೈರಿ ಪುಟ - 12)


ಗೋದ್ರೆಜ್ ಈ ಹೆಸರು ಕೇಳಿದಾಗ ಮೊದಲಿಗೆ ನೆನಪಾಗುವುದೇ ಲಾಕ್ ಹಾಗೂ ಕೀ ಗಳು. ಭಾರತದ ನಂಬಿಕೆಯ ಲಾಕ್ ಮ್ಯಾನ್ ಎಂದರೂ ತಪ್ಪಾಗಲಾರದು ಗೋದ್ರೆಜ್ ಅನ್ನು. ಆದರೆ, ಇದು ಇಷ್ಟಕ್ಕೆ ನಿಲ್ಲುವುದಿಲ್ಲ. ಭಾರತದಲ್ಲಿಯೇ ತಯಾರಾಗಿ ಎಲ್ಲೆಡೆಯೂ ಬೇಡಿಕೆಯಲ್ಲಿರುವ ವಸ್ತುಗಳ ಮಾರಾಟದಲ್ಲಿ ಗೋದ್ರೆಜ್ ಮುಂಚೂಣಿಯಲ್ಲಿದೆ. ಅದು ಹೆಚ್ಚು-ಕಡಿಮೆ ಎಲ್ಲ ರಂಗದಲ್ಲಿಯೂ ಆವರಿಸಿದೆ. ಗೋದ್ರೆಜ್ ಎಕ್ಸ್ಪರ್ಟ್ ಎನ್ನುವ ಹೇರ್ ಡೈ, ಗುಡ್ ನೈಟ್, ಇನ್ಸೆಕ್ಟ್ ರಿಪೆಲ್ಲರ್ ಹಿಟ್, ಗೋದ್ರೆಜ್ ಇಂಟೀರಿಯೋ ಎನ್ನುವ ಫರ್ನಿಚರ್ ಗಳು, ಗೋದ್ರೆಜ್ ಸ್ಟೋರ್ ವೆಲ್ ಎನ್ನುವ ಸ್ಟೀಲ್ ಅಲ್ಮೆರಾ ಹಾಗೂ ಕ್ಯಾಬಿನೆಟ್ ಗಳು, ಪಾಮ್ ಆಯಿಲ್ ಡೆವಲಪರ್ ಆಗಿ, ಗೋದ್ರೆಜ್ ಆಗ್ರೋ ವೆಟ್ ಎನ್ನುವ ಪ್ರಾಣಿಗಳ ಫೀಡ್ ಕಂಪನಿ, ಗೋದ್ರೆಜ್ 1, ಗೋದ್ರೆಜ್ 2, ಸಿಂಥಾಲ್ ಸೋಪುಗಳ ತಯಾರಿಕೆಯಲ್ಲಿ, ಬ್ಯಾಟರಿಗಳು, ಬ್ಯಾಂಕ್ ವಾಲ್ಟ್ ಗಳು, ಎ.ಸಿ, ವಾಷಿಂಗ್ ಮಷೀನ್, ಮೈಕ್ರೋವೇವ್ , ಸಿ.ಸಿ ಟಿ.ವಿ ಇನ್ನೂ ಮುಂತಾದ ಗೃಹಬಳಕೆಯ ವಸ್ತುಗಳು, ಕನ್ಸ್ಟ್ರಕ್ಷನ್, ಡೈರಿ ಪ್ರಾಡಕ್ಟ್ ಗಳು, ಲಿಫ್ಟ್ ಗಳು, ಫೋಟೋ ಸ್ಟುಡಿಯೋಗಳು, ಮಿಸೈಲ್ ಗಳಿಗಾಗಿ ಏರ್ ಫ್ರೇಮ್ ಗಳು, ರಿಯಲ್ ಎಸ್ಟೇಟ್ ಬ್ಯುಸಿನೆಸ್.. ಹೀಗೆ ಇಡೀ ಭಾರತದ ಇಂಡಸ್ಟ್ರಿಯನ್ನೇ ಆವರಿಸಿಕೊಂಡು ಶ್ರೀಮಂತರ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ ಗೋದ್ರೆಜ್. ಇದು ನಡೆದು ಬಂದ ಹಾದಿಯೇನೂ ಸುಗಮವಾಗಿರಲಿಲ್ಲ. ಆ ಹಾದಿಯಲ್ಲಿ ಒಮ್ಮೆ ಕಣ್ಣು ಹಾಯಿಸಿ ಬರೋಣ ಬನ್ನಿ.


ಗೋದ್ರೆಜ್ ಕಂಪನಿಯ ಪ್ರಮುಖ ಸಂಸ್ಥಾಪಕರು ಅರ್ದೇಶಿರ್ ಬುರ್ಜೋರ್ಜಿ ಸೊರಾಬ್ಜಿ ಗೋದ್ರೆಜ್ ಹಾಗೂ ಫಿರೋಜ್ ಷಾ ಗೋದ್ರೆಜ್. ಇವರಿಬ್ಬರೂ ಅಣ್ಣತಮ್ಮಂದಿರು. 1868ರಲ್ಲಿ ಶ್ರೀಮಂತ ಪಾರ್ಸಿ ಕುಟುಂಬದಲ್ಲಿ ಹುಟ್ಟಿದ ಅರ್ದೇಶಿರ್ ಕುಟುಂಬದಲ್ಲಿ ಅವರ ತಂದೆ ಹಾಗೂ ತಾತ ರಿಯಲ್ ಎಸ್ಟೇಟ್ ಬ್ಯುಸಿನೆಸ್ ನಡೆಸುತ್ತಿದ್ದರು. ಅರ್ದೇಶಿರ್ ಅವರ ತಂದೆಗೆ ಆರು ಜನ ಮಕ್ಕಳು. ಅರ್ದೇಶಿರ್ ಓದಿದ್ದು ಕಾನೂನು ಪದವಿ. ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಅವರು 1894 ರಲ್ಲಿ ತಂಜಾನಿಯಾದ ಒಂದು ಒಳ್ಳೆಯ ಲಾ ಫರ್ಮ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿರು. ಅಲ್ಲಿ ಒಂದು ಕೇಸ್ ಅನ್ನು ನಿರ್ವಹಿಸುವಾಗ ತನ್ನ ಕಕ್ಷಿದಾರರೇ ತಪ್ಪು ಮಾಡಿದ್ದು ಕಂಡು ಬಂದು.. ಅವರ ವಿರುದ್ಧವೇ ದಾವೆ ಹೂಡಿ ನಿರಪರಾಧಿಗಳನ್ನು ಕಾಪಾಡಿದರು. ಅವರ ಪ್ರಾಮಾಣಿಕತೆ ಹಾಗೂ ಸತ್ಯಕ್ಕಾಗಿ ಮುನ್ನುಗುವ ಈ ಗುಣದಿಂದ ಅಲ್ಲಿ ಕೆಲಸ ಮಾಡಲು ಸಾಧ್ಯವಾಗದೆ.. ಅದನ್ನು ತೊರೆದು ಮತ್ತೆ ಭಾರತಕ್ಕೆ ಬಂದರು.


ಭಾರತದಲ್ಲಿ ವಕೀಲರಾಗಿ ಮುಂದುವರಿಯಲು ಇಚ್ಛಿಸದೆ, ಒಂದು ಫಾರ್ಮಸಿ ಕಂಪನಿಯಲ್ಲಿ ಕೆಮಿಸ್ಟ್ ಆಗಿ ಸೇರಿಕೊಂಡರು. ಆದರೆ, ಅವರ ಆಸಕ್ತಿ ಅದರಲ್ಲಿರಲಿಲ್ಲ. ಬದಲಾಗಿ ಸರ್ಜಿಕಲ್ ಎಕ್ಯೂಪ್ಮೆಂಟ್ ಗಳನ್ನು ತಯಾರಿಸುವ ಬ್ಯುಸಿನೆಸ್ ನತ್ತ ವಾಲಿತು. ಅದನ್ನೇ ತನ್ನ ಮುಂದಿನ ಹಾದಿಯನ್ನಾಗಿ ಆಯ್ಕೆ ಮಾಡಿಕೊಂಡು, ಅವರ ಫ್ಯಾಮಿಲಿ ಫ್ರೆಂಡ್ ಆಗಿದ್ದ ಬ್ಯುಸಿನೆಸ್ ಮ್ಯಾನ್ ಕೂಡ ಆಗಿದ್ದ ಮೆರವಂಜೀ ಕಾಮಾ ಅವರಿಂದ 3000 ರೂಪಾಯಿ ಸಾಲ ತೆಗೆದುಕೊಂಡರು. ಇವರು ತಯಾರಿಸಿದ ಸರ್ಜಿಕಲ್ ಇನ್ಸ್ಟ್ರುಮೆಂಟ್ ಗಳು, ಅಲ್ಲಿಯವರೆಗೂ ತಯಾರಾಗಿದ್ದವಕ್ಕಿಂತ ಒಳ್ಳೆಯ ಗುಣಮಟ್ಟದ್ದಾಗಿತ್ತು. ಅಲ್ಲದೆ, ಉಳಿದವುಗಳಿಗೆ ಹೋಲಿಸಿದರೆ ಬೆಲೆಯೂ ಕಡಿಮೆ ಇತ್ತು. ಜೊತೆಗೆ ಆ ಇನ್ಸ್ಟ್ರುಮೆಂಟ್ ಗಳ ಮೇಲೆ "ಮೇಡ್ ಇನ್ ಇಂಡಿಯಾ" ಎನ್ನುವ ಲೇಬಲ್ ಅನ್ನು ಅಂಟಿಸಿದ್ದರು. 


ಆ ಸರ್ಜಿಕಲ್ ಇನ್ಸ್ಟ್ರುಮೆಂಟ್ ಗಳನ್ನು ಇಂಗ್ಲೆಂಡ್ ಗೂ ರಫ್ತು ಮಾಡಲು ನಿರ್ಧರಿಸಿದರು. ಆ ಸಮಯದಲ್ಲಿ ಬ್ರಿಟಿಷರ ಆಳ್ವಿಕೆ ಇತ್ತು. ಅವರು "ಮೇಡ್ ಇನ್ ಇಂಡಿಯಾ" ಎನ್ನುವ ಲೇಬಲ್ ಅನ್ನು ತೆಗೆದು ಮಾರಾಟ ಮಾಡಲು ಸೂಚಿಸಿದರು. ಆದರೆ, ಅರ್ದೇಶಿರ್ ಅದಕ್ಕೆ ಒಪ್ಪಲಿಲ್ಲ. ಹಾಗಾಗಿ ಆ ಬ್ಯುಸಿನೆಸ್ ಮುಂದುವರಿಯಲಿಲ್ಲ. ಬ್ರಿಟಿಷರ ದೆಸೆಯಿಂದ ಅದನ್ನು ಅಲ್ಲಿಗೇ ಕೈ ಬಿಡಬೇಕಾಗಿ ಬಂದಿತು. 


ಇಂತಹಾ ಸಮಯದಲ್ಲಿ ಮುಂದೇನು ಮಾಡುವುದು ಎಂದು ಆಲೋಚಿಸುತ್ತಿದ್ದಾಗ.. ನ್ಯೂಸ್ ಪೇಪರ್ ನಲ್ಲಿ ಬಂದಿದ್ದ ಸಮಾಚಾರ ಒಂದು ಅವರ ಗಮನಸೆಳೆಯಿತು. ಅದೇನೆಂದರೆ, ಇತ್ತೀಚಿಗೆ ನಗರದಲ್ಲಿ ಬಹಳ ಕಳ್ಳತನವಾಗುತ್ತಿದ್ದವು. ಅದಕ್ಕೆ ಪ್ರಮುಖ ಕಾರಣ ಬೀಗಗಳು ಎಂದು ಅರಿವಾಯಿತು ಅರ್ದೇಶಿರ್ ಅವರಿಗೆ. ತಾವೇಕೆ ಒಳ್ಳೆಯ ಗುಣಮಟ್ಟದ ಬೀಗಗಳನ್ನು ತಯಾರಿಸಿ ಮಾರಾಟ ಮಾಡಬಾರದು ಎಂದು ಯೋಚಿಸಿದರು. ಆದರೆ, ಅದಕ್ಕೆ ಬೇಕಾದಷ್ಟು ಹಣ ಅವರ ಬಳಿ ಇರಲಿಲ್ಲ. ಮತ್ತೆ ಮೆರ್ವನ್ಜಿ ಕಾಮಾ ಅವರ ಬಳಿಯೇ ಸಾಲ ತೆಗೆದುಕೊಳ್ಳಲು ಹೋದರು. ಆದರೆ, ಪ್ರಾಮಾಣಿಕತೆಯಿಂದ "ನಾನು ಇನ್ನೂ ಸಾಲವನ್ನು ಹಿಂದಿರುಗಿಸಿಲ್ಲ.. ಅಲ್ಲದೆ, ಮತ್ತೆ ಅಷ್ಟೇ ಸಾಲ ಬೇಕು." ಎಂದು ಕೇಳಿದಾಗ ಇವರ ಪ್ರಾಮಾಣಿಕತೆ ಇಷ್ಟವಾಗಿತ್ತು ಅವರಿಗೆ. ಅಲ್ಲದೆ, ಸಾಧಿಸುವ ಇವರ ಪ್ರಯತ್ನಕ್ಕೆ ಬೆಂಬಲವಾಗಿ ನಿಂತ ಅವರು " ನಾನು ಆ ಹಿಂದಿನ ಸಾಲದ ಕುರಿತಾಗಿ ಏನನ್ನೂ ವಿಚಾರಿಸಲಿಲ್ಲ. ನಿನ್ನ ಬಗ್ಗೆ ನಂಬಿಕೆ ಇದೆ." ಎಂದು ಇವರ ಹೊಸ ಬ್ಯುಸಿನೆಸ್ ಗೆ ಮತ್ತೆ ಸಾಲ ನೀಡಿದರು.


ಒಳ್ಳೆಯ ಗುಣಮಟ್ಟದ ಹಾಗೂ ಹೆಚ್ಚಿನ ಸೆಕ್ಯೂರಿಟಿ ಇರುವ ಬೀಗಗಳನ್ನು ತಯಾರಿಸುವ ಕಂಪನಿಗೆ ಪಾಲುದಾರರಾಗಿದ್ದು ಅವರ ತಮ್ಮ ಫಿರೋಜ್ ಷಾ ಗೋದ್ರೆಜ್. ಈ ಕಂಪೆನಿ ಶುರು ಮಾಡಿದಾಗ ಅರ್ದೇಶಿರ್ ಅವರಿಗೆ 29 ವರ್ಷ ವಯಸ್ಸು. 1897ರಲ್ಲಿ ಶುರುವಾದ ಈ ಕಂಪೆನಿಗೆ ಈಗ 120ಕ್ಕೂ ಹೆಚ್ಚು ವರ್ಷ. ಸೆಂಟ್ರಲ್ ಮುಂಬೈಯ ಚಿಕ್ಕ ಶೆಡ್ ಒಂದರಲ್ಲಿ ಶುರುವಾಗಿ ತಯಾರಾದ ಈ ಬೀಗಗಳಿಗೆ "ಆಂಕರ್" ಎಂದು ಹೆಸರಿಡಲಾಯಿತು. ಇವುಗಳ ಮಾರಾಟದ ಜೊತೆಗೆ ಒಂದು ವಾರೆಂಟಿ ಡಾಕ್ಯುಮೆಂಟ್ ಅನ್ನೂ ನೀಡುತ್ತಿದ್ದರು. ಅದೇನೆಂದರೆ, ಈ ಆಂಕರ್ ಬೀಗ ಗಳನ್ನು ಮುರಿಯಲಸಾಧ್ಯವೆಂದು. 


ಅರ್ದೇಶಿರ್ ಅವರ ತಂದೆ ಅವರ ಕುಟುಂಬದ ಹೆಸರನ್ನು 'ಗೋದ್ರೆಜ್' ಎಂದು ಬದಲಾಯಿಸಿಕೊಂಡದ್ದರಿಂದ ಕಂಪನಿಗೆ ಅದೇ ಹೆಸರಾಯಿತು. ಅಲ್ಲದೆ ಕಂಪನಿಯ ಲೋಗೋವಾಗಿ ಆಯ್ಕೆ ಮಾಡಿದ್ದು ಫಿರೋಜ್ ಷಾ ಅವರ ಸಹಿಯನ್ನು. 


ಮೊದಲೇ ದೇಶಪ್ರೇಮಿಯಾಗಿದ್ದ ಅರ್ದೇಶಿರ್ ಅವರಿಗೆ 1906 ರಲ್ಲಿ ಸ್ವದೇಶಿ ಚಳುವಳಿ ಅಂದರೆ ಭಾರತದಲ್ಲಿಯೇ ಉತ್ಪಾದನೆಯಾಗಿ ಇರುವ ವಸ್ತುವನ್ನು ಬಳಸುವ ಚಳುವಳಿ ಮನಸೆಳೆಯಿತು. ಇದಕ್ಕಾಗಿ ರಾಷ್ಟ್ರೀಯ ಫಂಡ್ ಗೆ ಮೂರು ಲಕ್ಷ ರೂಪಾಯಿ ಯನ್ನು ದಾನವನ್ನಾಗಿ ಕೊಟ್ಟರು. ಆ ಕಾಲಕ್ಕೆ ಅದೇ ಬಹಳ ದೊಡ್ಡ ಮೊತ್ತ. ಇದಕ್ಕಾಗಿ ಗೋದ್ರೆಜ್ ಕಂಪನಿಗೆ ಗಾಂಧೀಜಿಯವರು ಪತ್ರ ಬರೆದು ಧನ್ಯವಾದಗಳನ್ನು ತಿಳಿಸಿದ್ದರು. ಅಂದಿನಿಂದ ಟ್ರಸ್ಟ್ ಮಾಡಿ ಅದರ ಹೆಸರಲ್ಲಿ ಜನೋಪಯೋಗಿ ಕೆಲಸಗಳನ್ನು ಮಾಡುತ್ತಿದೆ ಗೋದ್ರೆಜ್.


ಅದರ ನಂತರ, 1918ರಲ್ಲಿ ಅವರು ಮೊದಲ ಬಾರಿಗೆ ವೆಜಿಟೇಬಲ್ ಆಯಿಲ್ ಅನ್ನು ಬಳಸಿ ಸೋಪ್ ತಯಾರಿಸಿದರು. ಅಲ್ಲಿಯವರೆಗೂ ಸೋಪ್ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು  ಬಳಸಲಾಗುತ್ತಿತ್ತು. ಹೀಗೆ ಪ್ರಪ್ರಥಮವಾಗಿ ತಯಾರಾದ ಸಸ್ಯಜನ್ಯ ಸೋಪ್ ನ ಹೆಸರು 'ಚವಿ'. ಇದನ್ನು ಗೋದ್ರೆಜ್ ನಂಬರ್ 1 ಎಂಬ ಹೆಸರಿನಿಂದ ಮಾರಾಟಕ್ಕಿಟ್ಟರು. ಈ ಸೋಪ್ ನ ಜನಪ್ರಿಯತೆ ಎಷ್ಟಿತ್ತು ಎಂದರೆ 1921 ರಲ್ಲಿ ಇಂಗ್ಲೆಂಡಿನ ರಾಣಿ ಭಾರತಕ್ಕೆ ಬಂದಾಗ ಅವರು ಇದೇ ಸೋಪನ್ನು ಆಯ್ಕೆ ಮಾಡಿಕೊಂಡರು.


1931 ರಂದು ಅರ್ದೇಶಿರ್ ಅವರು ತೀರಿಕೊಂಡರು. ಅವರಿಗೆ ಮಕ್ಕಳಿಲ್ಲದ ಕಾರಣ ಆ ಕಂಪನಿಯಗೆ ಫಿರೋಜ್ ಷಾ ಅವರೇ ವಾರಸುದಾರರಾದರು.


1944ರಲ್ಲಿ ಅಲ್ಮೆರಾ ಅಂದರೆ ವಾರ್ಡ್ರೋಬ್ ಬ್ಯುಸಿನೆಸ್ ನತ್ತ ಗಮನಹರಿಸಿದರು. ಹಾಗೆ ತಯಾರಾದ ವಾರ್ಡ್ರೋಬ್ ಗಳ ವಿಶೇಷತೆ ಏನೆಂದರೆ, ಅವು ಕಳ್ಳರಿಂದ ರಕ್ಷಣೆ ನೀಡುವುದು ಮಾತ್ರವಲ್ಲದೆ ಬೆಂಕಿಯಿಂದಲೂ ರಕ್ಷಣೆ ನೀಡುತ್ತಿದ್ದವು. ಅಂತಹ, ಬೆಂಕಿ ನಿರೋಧಕ ವಾರ್ಡ್ರೋಬ್ ಗಳು ಅದೇ ಮೊದಲ ಬಾರಿಗೆ ತಯಾರಾಗಿದ್ದು. 


1943ರಲ್ಲಿ ಮುಂಬೈ ಸರ್ಕಾರ ಒಂದು ಹಳ್ಳಿಯನ್ನು ಹರಾಜಿಗಿಟ್ಟಿತು. ಆಗ ಫಿರೋಜ್ ಷಾ ಗೋದ್ರೆಜ್ ಆ ಹಳ್ಳಿಯನ್ನು ತೆಗೆದುಕೊಂಡು.. ಮುಂದಿನ ಐವತ್ತು ವರ್ಷಗಳಲ್ಲಿ ಹಸಿರು ತುಂಬಿದ ಇಂಡಸ್ಟ್ರಿಯಲ್ ಟೌನ್ ಆಗಿ ಮಾರ್ಪಡಿಸಿದರು. ಈಗ ಆ ನಗರವನ್ನು ಫಿರೋಜ್ ಷಾ ನಗರ ಎಂದೇ ಕರೆಯಲಾಗುತ್ತಿದೆ.


1951 ರಲ್ಲಿ ಮೊದಲ ಬಾರಿಗೆ ಭಾರತದ ಚುನಾವಣೆ ಘೋಷಣೆಯಾದಾಗ ಅದಕ್ಕೆ ಹದಿನೇಳು ಲಕ್ಷ ಬ್ಯಾಲೆಟ್ ಬಾಕ್ಸ್ ಗಳು ಬೇಕಾಗಿದ್ದವು. ಆಗ ಅದನ್ನು ಮಾಡಿಕೊಟ್ಟದ್ದು ಇದೇ ಗೋದ್ರೆಜ್ ಕಂಪನಿ. ಅತಿ ಕಡಿಮೆ ಸಮಯದಲ್ಲಿ ದಿನಕ್ಕೆ 22,000 ಬ್ಯಾಲೆಟ್ ಬಾಕ್ಸ್ ಗಳನ್ನು ತಯಾರಿಸಿ ಕಳುಹಿಸಿದರು. 


ಈಗಲೂ ಪ್ರಸಿದ್ಧಿಯಾಗಿರುವ ಸಿಂತಾಲ್ ಸೋಪ್ ತಯಾರಿಕೆ ಶುರುವಾದದ್ದು 1952 ರಲ್ಲಿ. 1955ರಲ್ಲಿ ಮೊದಲ ಭಾರತೀಯ ಟೈಪ್ ರೈಟರ್ ಗಳನ್ನು ತಯಾರಿಸಿದರು. 1958 ರಲ್ಲಿ ರೆಫ್ರಿಜರೇಟರ್ ಗಳು ಹಾಗೂ 1974ರಲ್ಲಿ ಭಾರತದ ಮೊದಲ ಲಿಕ್ವಿಡ್ ಹೇರ್ ಕಲರ್ ಅನ್ನು ತಯಾರಿಸಿ ಮಾರಾಟ ಮಾಡಲು ಶುರು ಮಾಡಿದರು. ಪ್ರೈವೇಟ್ ಕಂಪನಿಯಾಗಿ ಇದೆಲ್ಲವನ್ನು ಅವರು ತಮ್ಮ ಬ್ಯುಸಿನೆಸ್ ಅನ್ನು ಹೆಚ್ಚಿಸಿಕೊಳ್ಳಲು ತಯಾರಿಸಿದರು. ಅಷ್ಟೇ ಅಲ್ಲದೆ, ಭಾರತದ ಬಾಹ್ಯಾಕಾಶದ ರಂಗದ ಕೆಲಸಕ್ಕೂ ಸಹಭಾಗಿತ್ವ ಪಡೆದುಕೊಂಡರು.


2008ರಲ್ಲಿ ಚಂದ್ರಯಾನ ಒಂದು ಎನ್ನುವ ಭಾರತದ ಮೊದಲ ಲೂನಾರ್ ಪ್ರೋಬ್ ಒಂದನ್ನು ಉಡಾವಣೆ ಮಾಡಲಾಯಿತು. ಹೀಗೆ ಚಂದ್ರನ ಮೇಲೆ ಪ್ರಯೋಗ ಮಾಡಿದ ಐದನೇ ದೇಶವೇ ಭಾರತ. ಇದಕ್ಕೆ ಲಾಂಚ್ ವೆಹಿಕಲ್ ಅನ್ನು ತಯಾರಿಸಿದ್ದು ಇದೇ ಗೋದ್ರೆಜ್ ಕಂಪನಿ.


2014 ಸೆಪ್ಟೆಂಬರ್ 24 ರಂದು ನಡೆದ ಮಂಗಳಯಾನ ನೆನಪಿದೆಯೇ..?? ಭಾರತದಿಂದ ತಯಾರಾದ ಸ್ಯಾಟಲೈಟ್ ಒಂದು 298 ದಿನಗಳು ಪ್ರಯಾಣ ಮಾಡಿ ಮಂಗಳನ ಅಂಗಳ ತಲುಪಿತ್ತು. ಮಾರ್ಸ್ ಆರ್ಬಿಟರ್ ಮಿಷನ್ ನ ವಿಕಾಸ್ ಇಂಜಿನ್ ತಯಾರಿಕೆಯಲ್ಲಿ ಹೈ ಟ್ರಸ್ಟ್ ಎಂಜಿನ್ ಅನ್ನು ತಯಾರು ಮಾಡಿದ್ದು ಇದೇ ಗೋದ್ರೆಜ್ ಕಂಪನಿ. 


ಒಂದು ಬೀಗಕ್ಕೆ ಎರಡು ಬೀಗದ ಕೈ ಇರುವ ಲಾಕ್ ನೋಡಿದ್ದೀರಾ..?? ಅಂತಹಾ ವಿಶೇಷ ಬೀಗ ತಯಾರಿಸಿತು ಗೋದ್ರೆಜ್ ಕಂಪನಿ. ಮೊದಲನೇ ಕೀ ಓನರ್ ಬಳಿ ಇದ್ದು, ಎರಡನೇ ಬೀಗದ ಕೈಯನ್ನು ತಮ್ಮ ಹತ್ತಿರದವರು ಯಾರಾದರೂ ಬಳಸಬಹುದಾಗಿತ್ತು .ಆದರೆ, ಅದನ್ನು ತೆರೆಯುವ ಅಥವಾ ತೆರೆಯದಂತೆ ಮಾಡುವುದು ಮೊದಲ ಕೀ ಹೊಂದಿದ್ದ ಓನರ್ ನ ಆಯ್ಕೆಯಾಗಿತ್ತು. ಇಂತಹ ಇನ್ನೋವೇಟಿವ್ ಐಡಿಯಾ ಬಂದು ಆ ಪ್ಯಾಡ್ ಲಾಕ್ ಅನ್ನು ತಯಾರಿಸಿದ್ದು 2007ರಲ್ಲಿ. ಮೊದಲ ಬಾರಿಗೆ ಕೀಯಲ್ಲಿ ಚಿಪ್ ಅನ್ನು ಅಳವಡಿಸಿದ್ದೂ ಗೋದ್ರೆಜ್.


ಇಷ್ಟೇ ಅಲ್ಲ.. ಗೋದ್ರೆಜ್ ಕಂಪನಿಯ ಮೊದಲುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. 

ಒಂದು ರೂಪಾಯಿಗೆ ದೊರೆಯುವ ಗುಡ್ ನೈಟ್ ಫಾಸ್ಟ್ ಕಾರ್ಡ್ ಅಷ್ಟು ಕಡಿಮೆಗೆ ದೊರೆಯುವ ಸೊಲ್ಯೂಷನ್ ಆಗಿತ್ತು. ಇದನ್ನು ಮೊದಲು ಬಳಸಿದ್ದು ಗೋದ್ರೆಜ್.

ಭಾರತದ ಪ್ರಥಮ ಹೇರ್ ಕಲರ್ ಕ್ರೀಮ್ ಸ್ಯಾಚೆಟ್ ನಲ್ಲಿ ಬಂದದ್ದು ಗೋದ್ರೆಜ್ ಕಡೆಯಿಂದ. ಅದೇ ಗೋದ್ರೆಜ್ ಎಕ್ಸ್ಪರ್ಟ್ ರಿಚ್ ಏರ್ ಕ್ರೀಂ.

ಏರ್ ಪಾಕೆಟ್ ಎನ್ನುವ ಹೆಸರನಲ್ಲಿ ಮೊದಲ ಪೇಪರ್ ಬೇಸ್ಡ್ ಜೆಲ್ ಬಾತ್ರೂಂ ಏರ್ ಫ್ರೆಶ್ ನರ್ ಅನ್ನು ಬಿಡುಗಡೆ ಮಾಡಿತು.

ಇನ್ಸೆಕ್ ರಿಪೆಲೆಂಟ್ ಬಟ್ಟೆಗಳ ಮೇಲೆ ಬಳಸುವಂತೆ ಗುಡ್ ನೈಟ್ ಫ್ಯಾಬ್ರಿಕ್ ರೋಲ್ ಆನ್ ಅನ್ನು ಸಿದ್ಧಪಡಿಸಿತು. 

ಗೋದ್ರೆಜ್ ಪ್ರೊಟೆಕ್ಟ್ ಮ್ಯಾಜಿಕ್ ಎನ್ನುವ ಹೆಸರಿನಲ್ಲಿ ಲಿಕ್ವಿಡ್ ಹ್ಯಾಂಡ್ ವಾಶ್ ಮಾತ್ರ ಬಳಕೆ ಇದ್ದ ಜಾಗದಲ್ಲಿ ಪೌಡರ್ ಲಿಕ್ವಿಡ್ ಹ್ಯಾಂಡ್ ವಾಶ್ ಬಳಕೆಗೆ ಮುನ್ನುಡಿ ಬರೆಯಿತು. ಹೀಗೆ ಇನ್ನೋವೇಟಿವ್ ಆದ ಐಡಿಯಾಗಳ ಮೂಲಕ ಮೊದಲ ಬಾರಿಗೆ ಬೇರೆ, ಬೇರೆ ರೀತಿಯಲ್ಲಿ ಪ್ರಾಡಕ್ಟ್ ಗಳನ್ನು ಬಿಡುಗಡೆ ಮಾಡಿದ ಹೆಗ್ಗಳಿಕೆ ಗೋದ್ರೆಜ್ ನದ್ದು.


ಒಂದೇ ಬಾರಿಗೆ ಹೆಚ್ಚು ಪ್ರಾಡಕ್ಟ್ ಗಳನ್ನು ಅಂದರೆ ಮಾಸ್ ಪ್ರಾಡಕ್ಟ್ ಗಳನ್ನು ರಫ್ತು ಮಾಡಲು ಏರ್ ಕ್ರಾಫ್ಟ್ ಅನ್ನೋ ಟ್ರಾನ್ಸ್ಪೋರ್ಟ್ ಆಗಿ ಬಳಸಿದ ಮೊದಲ ಕಂಪನಿ ಗೋದ್ರೆಜ್. ರೆಫ್ರಿಜರೇಟರ್ ಗಳನ್ನು ರಫ್ತು ಮಾಡಲು.


ಭಾರತದಲ್ಲಿ ಬ್ಯುಸಿನೆಸ್ ನ ಬೆಳವಣಿಗೆಗೆ ಗೋದ್ರೆಜ್ ನ ಪಾತ್ರ ಬಹಳವಿದೆ. ಇದಕ್ಕಾಗಿ 2003 ರಲ್ಲಿ ಚೇರ್ಮನ್ ಹಾಗೂ ಎಂ.ಡಿ ಆಗಿದ್ದ ಜೆಮ್ಶೆಡ್ ಗೋದ್ರೆಜ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ. 2016ರಲ್ಲಿ ಎಕನಾಮಿಕ್ ಟೈಮ್ಸ್ ಕಡೆಯಿಂದ ನಂಬುಗೆಯ ಬ್ರಾಂಡ್ ಎನ್ನುವ ಪ್ರಶಸ್ತಿಯನ್ನು ಗೋದ್ರೆಜ್ ಕಂಪನಿಯ ಸಿಂಥಾಲ್ ಸೋಪಿಗೆ ನೀಡಲಾಗಿದೆ.


ಗೋದ್ರೆಜ್ ಗೆ ಪ್ರತಿಸ್ಪರ್ಧಿಗಳೇ ಇರಲಿಲ್ಲವೆಂದಲ್ಲ. ಸ್ಯಾಮ್ಸಂಗ್, ಐ.ಟಿ.ಸಿ, ಡಾಬರ್, ಕೋಲ್ಗೇಟ್, ವರ್ಲ್ ಪೂಲ್, ಬಜಾಜ್ ಹೀಗೆ ಹಲವಾರು ಪ್ರತಿಸ್ಪರ್ಧಿಗಳ ನಡುವೆಯೂ ತನ್ನ ಬ್ಯುಸಿನೆಸ್ ಅನ್ನು ಹೆಚ್ಚುಗೊಳಿಸಿಕೊಂಡಿದೆ ಗೋದ್ರೆಜ್.


55 ಬಿಲಿಯನ್ ಗೂ ಹೆಚ್ಚು ಟರ್ನ್ ಓವರ್ ಇರುವ ಈ ಕಂಪನಿ ಕೇವಲ ಏಷ್ಯಾ ಖಂಡದಲ್ಲಿ ಮಾತ್ರವಲ್ಲದೆ.. ಎಲ್ಲಾ ಖಂಡಗಳಲ್ಲಿಯೂ ವ್ಯಾಪಿಸಿದೆ. 52ಕ್ಕೂ ಹೆಚ್ಚು ದೇಶಗಳಲ್ಲಿ, 462ಕ್ಕೂ ಹೆಚ್ಚು ಕಂಪೆನಿಗಳ ಮೂಲಕ ಕೆಲಸ ನಿರ್ವಹಿಸುತ್ತಿದೆ. 


ಈಗ ಗೋದ್ರೆಜ್ ಸಂಸ್ಥಾಪಕರ ಮೂರನೇ ತಲೆಮಾರಿನ ಕೆಲವರು ಗೋದ್ರೆಜ್ ಕಂಪನಿಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅದರಲ್ಲಿ ಪ್ರಮುಖ ರಾಗಿರುವವರು ನಿಸ್ಬಾ ಗೋದ್ರೆಜ್, ಆದಿ ಗೋದ್ರೆಜ್, ನಾದಿರ್ ಗೋದ್ರೆಜ್, ಜೆಮ್ಶೆಡ್ ಗೋದ್ರೆಜ್ ಹಾಗೂ ಫಿರೋಜ್ ಷಾ ಗೋದ್ರೆಜ್. 


ಗೋದ್ರೆಜ್ ಕೂಡ ಜಾಹೀರಾತಿನಿಂದ ಎಲ್ಲರನ್ನೂ ತನ್ನ ಪ್ರಾಡಕ್ಟ್ಗಳನ್ನು ಗ್ರಾಹಕರ ಮುಂದಿಟ್ಟಿತು. ಈ ಜಾಹೀರಾತುಗಳು ಕೌಟುಂಬಿಕ ಜಾಹೀರಾತುಗಳಾಗಿದ್ದವು. ಟಿ.ವಿ, ನ್ಯೂಸ್ ಪೇಪರ್, ಪ್ರಿಂಟ್ ಮೀಡಿಯಾ ಮತ್ತು ಬಿಲ್ ಬೋರ್ಡ್ ಗಳನ್ನು ಜಾಹೀರಾತು ಪ್ರಚಾರಕ್ಕೆ ಬಳಸಿಕೊಂಡಿತು. ತನ್ನ ಪ್ರಾಡಕ್ಟ್ ಗಳು ಕಲರ್ಫುಲ್ ಆಗಿದ್ದಷ್ಟು ತನ್ನ ಗ್ರಾಹಕರನ್ನು ಸೆಳೆಯುತ್ತವೆ ಎನ್ನುವ ಆಲೋಚನೆಯಿಂದ ಆದಷ್ಟು ತನ್ನ ಪ್ರಾಡಕ್ಟ್ ಗಳ ಪ್ಯಾಕೇಜ್ ಗಳನ್ನು ಕಲರ್ಫುಲ್ ಆಗಿ ಮಾರ್ಪಡಿಸಿತು. ಅಷ್ಟೇ ಅಲ್ಲದೆ ಲೋಗೋವನ್ನು ಕಲರ್ಫುಲ್ ಆಗಿ ಬದಲಿಸಿತು. 


ಸ್ವದೇಶಿ ಪ್ರಾಡಕ್ಟ್ ಗಳು,ಎಲ್ಲರಿಗೂ ತಲುಪುವ ಜಾಹೀರಾತುಗಳು, ಕಣ್ಮನ ಸೆಳೆಯುವ ಪ್ರಾಡಕ್ಟ್ ಪ್ಯಾಕೇಜ್ ಗಳು, ಕಡಿಮೆ ದರದಲ್ಲಿ ಹೆಚ್ಚು ಕ್ವಾಲಿಟಿಯ ಪ್ರಾಡಕ್ಟ್ ಗಳು, ಹೊಸ ವಿಧಾನದಲ್ಲಿ ಇನ್ನೊವೆಟಿವ್ ಆದ ಪ್ರಾಡಕ್ಟ್ ಗಳನ್ನು ನೀಡಿ ಬ್ಯುಸಿನಸ್ ನ ಮಾರ್ಕೆಂಟಿಂಗ್ ಮಾಡಿದಾಗ ಬ್ಯುಸಿನೆಸ್ ಅತ್ಯುತ್ತಮವಾಗಿರುತ್ತದೆ ಎನ್ನುವ ಪಾಠ ಹೇಳುತ್ತದೆ ಗೋದ್ರೆಜ್.


( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ