ಮಂಗಳವಾರ, ಏಪ್ರಿಲ್ 21, 2026

ಮೋಹನ ಮಾಲೆ (ಪುಸ್ತಕ ಯಾನ - 286)


ಪುಸ್ತಕದ ಶೀರ್ಷಿಕೆ : ಮೋಹನ ಮಾಲೆ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 2003

ಎರಡನೇ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)


ಮೋಹನ ಮಾಲೆ ಕಾದಂಬರಿಯ ಉಷಾ ಯಾರ ಸಹಾಯವೂ ಇಲ್ಲದೆ, ಕೇವಲ ಪ್ರಾಮಾಣಿಕತೆಯಿಂದ ಕೆಲಸ ಮಾಡಿ, ತನ್ನ ಎಚ್ಚರಿಕೆಯಲ್ಲಿ ತಾನಿದ್ದು.. ಅದರಿಂದ ದೊರೆತ ಬಲದಿಂದ ಹಾಗೂ ಅದೃಷ್ಟವೂ ಜೊತೆಗೂಡಿದಾಗ ಬದುಕಿನಲ್ಲಿ ಗೆದ್ದ ಕಥೆ. ಮೋಹನ ಮಾಲೆ ಕಾದಂಬರಿಯಲ್ಲಿ ಯಾವ ಕೆಲಸವೂ ನಿಕೃಷ್ಟವಲ್ಲ ಎಂಬ ಚೆಂದದ ಆಶಯ ಬಹಳ ಇಷ್ಟವಾಯಿತು.


ಸುಶೀಲಾಬಾಯಿಯವರ ಜೊತೆಗೆ ಕೇಶವರಾಯರ ಬಂಗಲೆಗೆ ಕೆಲಸಕ್ಕೆಂದು ಬಂದಿದ್ದಳು ಉಷಾ. ಉಷಾ ಎಸ್. ಎಸ್. ಎಲ್. ಸಿ ಫೇಲ್ ಆಗಿದ್ದಳಾದರೂ.. ಕೆಲಸದಲ್ಲಿ ಬಹಳ ಚುರುಕಾಗಿದ್ದಳು. ಸುಶೀಲಾಬಾಯಿಯವರ ಮಾವನವರು ಕಾಯಿಲೆ ಬಿದ್ದು ಮಲಗಿದ್ದಾಗ ಈಕೆ ಅವರ ಸೇವೆ ಮಾಡಿ ನೋಡಿಕೊಂಡಿದ್ದಳು. ಆಸ್ಪತ್ರೆಯಲ್ಲಿ ನರ್ಸ್ ಜೊತೆಯಲ್ಲಿದ್ದು ಇಂಜೆಕ್ಷನ್ ಕೊಡುವುದನ್ನು ಸಹಾ ಕಲಿತುಕೊಂಡಿದ್ದಳು. ಇದಿಷ್ಟನ್ನು ಕೇಶವರಾಯರಿಗೆ ಹೇಳಿದಾಗಲೂ ಅವರಿಗೆ ಚಿಂತೆಯಿತ್ತು. ಏಕೆಂದರೆ, ಅವರ ತಾಯಿ 80 ವರ್ಷದವರು. ಅವರು ಮೇಲೇಳಲಿಕ್ಕೂ ಆಗುತ್ತಿರಲಿಲ್ಲ. ಉಚ್ಚ, ನೀಚ ಎಂಬ ಭಾವನೆ ಇಲ್ಲದೆಯೇ ಅವರ ಸೇವೆ ಮಾಡುವವರು ಬೇಕಾಗಿತ್ತು. ಬೆಡ್ ಪಾನ್ ಕೊಟ್ಟು, ಸ್ನಾನ ಮಾಡಿಸಿ, ಮಾತ್ರೆಗಳನ್ನು ನೀಡಿ ಅವರ ಊಟ-ತಿಂಡಿ ಎಲ್ಲದರ ಮೇಲ್ವಿಚಾರಣೆ ನೋಡಿಕೊಂಡು ವಾರದುದ್ದಕ್ಕೂ ಅವರನ್ನು ಗಮನಿಸಿ ಚೆಕಪ್ ಗೆ ಬಂದಾಗ ಅವರ ಆರೋಗ್ಯದ ಸ್ಥಿತಿಗತಿ ಹೇಳಬೇಕಿತ್ತು. ಹಿಂದೆ ಬಂದವರು ಒಂದೆರಡು ತಿಂಗಳಿದ್ದು ಹೋಗಿದ್ದರು. ಹಾಗಾಗಿ, ಉಷಾಳನ್ನು ಎಲ್ಲವನ್ನು ಹೇಳಿಯೇ ಸೇರಿಸಿಕೊಂಡಿದ್ದರು. 


ಕೇಶವರಾಯರ ಹೆಂಡತಿ ಬೃಂದಾ ಹಾಗೂ ಮೂವರು ಹೆಣ್ಣುಮಕ್ಕಳು ಯಾರೂ ಅವರ ಸೇವೆ ಮಾಡಲು ಸಿದ್ಧವಿರಲಿಲ್ಲ. 


ಉಷಾಳೇನೂ ತೀರಾ ಬಡತನದ ಕುಟುಂಬದಿಂದ ಬಂದವಳಲ್ಲ. ಅವಳ ತಂದೆ ಶ್ರೀನಿವಾಸಪ್ಪನವರಿಗೆ ಹತ್ತು ಎಕರೆ ಜಮೀನಿತು. ಉಷಾ ಎರಡು ವರ್ಷದ ಮಗುವಿದ್ದಾಗ ಅವಳ ತಾಯಿ ತುಂಗಮ್ಮ ಕಾಯಿಲೆ ಬಿದ್ದು ಕಣ್ಮುಚ್ಚಿದ್ದರು. ಆ ಸಂದರ್ಭದಲ್ಲಿ ಮಾಡುತ್ತಿದ್ದ ಬೋರಪ್ಪನ ಹೆಂಡತಿ ಬೀರಿ ಹಾಗೂ ಅವರ ಮಗಳು ತುಳಸಿ ಕಾಯಿಲೆ ಬಿದ್ದ ತುಂಗಮ್ಮ ಹಾಗೂ ಮಗುವನ್ನು ನೋಡಿಕೊಳ್ಳುತ್ತಿದ್ದರು. ತುಂಗಮ್ಮ ತೀರಿಕೊಂಡ ನಂತರ ಆಕೆಯ ಜಾಗವನ್ನು ತುಳಸಿಯೇ ಆಕ್ರಮಿಸಿದ್ದಳು. ತುಳಸಿಯ ಲಗ್ನದ ವಿಚಾರ ಬಂದಾಗ ಆಕೆ ಕುಡುಕನಾದ ಬೀರಮ್ಮನ ತಮ್ಮನನ್ನು ವಿವಾಹವಾಗಲು ನಿರಾಕರಿಸಿದಳು. ಶ್ರೀನಿವಾಸಪ್ಪ ತಾನೇ ಆಕೆಯನ್ನು ವಿವಾಹವಾದರು. ಅಂತರ್ಜಾತಿಯ ವಿವಾಹವಾದರೂ ಎಲ್ಲವನ್ನು ಅಣಿ ಮಾಡಿಕೊಟ್ಟಿದ್ದರು. ಅವರಿಗೂ ಇಬ್ಬರು ಹೆಣ್ಣುಮಕ್ಕಳು. ರೂಪ ಹಾಗೂ ಪ್ರೀತಿ. ಇಬ್ಬರೂ ಓದಿ ಉದ್ಯೋಗಕ್ಕೆ ಸೇರಿ ವಿವಾಹವಾಗಿದ್ದರು. ಶ್ರೀನಿವಾಸಪ್ಪ ಬಚ್ಚಲಲ್ಲಿ ಜಾರಿ ಹಾಸಿಗೆ ಹಿಡಿದಾಗ ಚಿಕಿತ್ಸೆಗೆಂದು ತುಳಸಿ ಉಪಾಯವಾಗಿ ಅಲ್ಲಿದ್ದ ಹೊಲ ಮಾರಿ, ಸ್ವಲ್ಪವನ್ನು ಚಿಕಿತ್ಸೆಗೆ ಬಳಸಿಕೊಂಡು ಹೆಣ್ಣುಮಕ್ಕಳ ಮನೆ ಸೇರಿದಳು. ಈಗ ಉಷಾ ಹಳ್ಳಿಯಲ್ಲಿ ಒಬ್ಬಂಟಿ. ತುಳಸಿ ಬೀರಿಗೆ ತಮ್ಮದೇ ಜಾತಿಯ ಯಾವುದಾದರೂ ಹುಡುಗನನ್ನು ನೋಡಿ ವಿವಾಹವಾದ ಮಾಡಲು ಕಿವಿಮಾತು ಹೇಳಿದ್ದಳು. ಮುಂದೆ ಅಲ್ಲಿ ಬಹಳವೇ ತೊಂದರೆಯಾದಾಗ ತನ್ನ ತಾಯಿಯ ತಂಗಿ ಪಾರ್ವತಿಯ ಮನೆಗೆ ಹೋಗಿ ದುಃಖ ಹೇಳಿಕೊಂಡಳು.


ಪಾರ್ವತಿಯವರು ತನ್ನ ವಾರಗಿತ್ತಿ ಸುಶೀಲಾಬಾಯಿಯ ಮನೆಗೆ ಕಳುಹಿಸಿದ್ದರು. ನಂತರ ಸುಶೀಲಾಬಾಯಿಯಿಂದ ಇಲ್ಲಿ ಈಗ ಕೇಶವರಾಯರ ತಾಯಿ ರಾಜಮ್ಮನವರನ್ನು ನೋಡಿಕೊಳ್ಳುವ ಕೆಲಸ ಸಿಕ್ಕಿತ್ತು. ಆಧುನಿಕ ಉಪಕರಣಗಳಿದ್ದರೂ.. ಶರೀರ ಜೀರ್ಣವಾಗಿದ್ದ ಅವರಿಗಾಗಿ ಅದೆಲ್ಲವನ್ನೂ ಬಳಸುವಂತಿರಲಿಲ್ಲ. ಅದೆಲ್ಲವೂ ಬಂದವರಿಗೆ ತೋರಿಕೆಗಷ್ಟೇ.. ಯಾವುದೇ ಅಸಹ್ಯವಿಲ್ಲದೆ ಎಲ್ಲ ಕೆಲಸವನ್ನು ಮಾಡುತ್ತಿದ್ದಳು ಉಷಾ. ಬಟ್ಟೆ ತೊಳೆಯಲು ಓಬಮ್ಮ ಇದ್ದಳು. ಅವರ ಜೊತೆ ಆ ಮನೆಯಲ್ಲಿದ್ದದ್ದು ಅಂಬಮ್ಮ ಹಾಗೂ ಅವರ ಮೂವರು ಹೆಣ್ಣುಮಕ್ಕಳು ಸರೋಜಾ, ನೀರಜಾ, ವಾರಿಜಾ ಹಾಗೂ ಅವರ ಮಗ ಅನಿರುದ್ಧ. ಅನಿರುದ್ಧ ಹೋಟೆಲ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. 


ಉಷಾ ಕೇಶವರಾಯರ ಬಳಿ ಹೇಳಿ ನಾಟಿ ವೈದ್ಯರನ್ನು ಕರೆತಂದು ರಾಜಮ್ಮನವರಿಗೆ ಮಾಡಿಸಿದ ಚಿಕಿತ್ಸೆ ಫಲ ಕೊಟ್ಟಿತ್ತು. ಅದಕ್ಕೆ ಕಾರಣವಾಗಿದ್ದು ಅಂಬಮ್ಮನವರ ಮಾತು. ಅಂಬಮ್ಮನವರ ಪ್ರಕಾರ ಅವರ ಸೊಸೆ ಅಂದರೆ ಕೇಶವರಾಯರ ಹೆಂಡತಿ ಬೃಂದಾಳೇ ಅವರಿಗೆ ನಿಧಾನವಾದ ವಿಷ ನೀಡಿದ್ದಳೆಂದು.. ಚೆನ್ನಾಗಿಯೇ ಇದ್ದ ಅವರು ಹಾಸಿಗೆ ಹಿಡಿದದ್ದು, ಚೇತರಿಸಿಕೊಳ್ಳದಿದ್ದದ್ದು ಅದಕ್ಕೇ ಎಂಬ ಗುಮಾನಿ. ಅದು ಸತ್ಯವೇ.. ಅಥವಾ ರಾಜಮ್ಮನವರು ಚೇತರಿಸಿಕೊಂಡದ್ದು ಚಿಕಿತ್ಸೆಯ ಫಲವೇ..??


ರಾಜಮ್ಮನವರ ಹಿಂದಿನ ಬದುಕು ಹೇಗಿತ್ತು ಎಂಬುದನ್ನು ನೀವೇ ಓದಿ ನೋಡಿ. ಕಷ್ಟ ಪಟ್ಟದ್ದಕ್ಕೆ ಸಿಕ್ಕ ಫಲ ಅವರದ್ದಾದರೂ.. ಇದ್ದ ಒಬ್ಬ ಕೇಶವರಾಯರಿಗೆ ತಮ್ಮ ಕಂಪನಿಗೆ ಕೆಲಸಕ್ಕೆ ಬಂದಿದ್ದ ಚುರುಕಾಗಿದ್ದ ಹುಡುಗಿ ಬೃಂದಾಳನ್ನು ಇಷ್ಟಪಟ್ಟು ವಿವಾಹ ಮಾಡಿದ್ದರು. ಆದರೆ, ಆಕೆ ನಿಧಾನವಾಗಿ ತನ್ನದೇ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡು ಇವರನ್ನು ಮೂಲೆಗುಂಪು ಮಾಡಿದ್ದಳು. 


ರಾಜಮ್ಮನವರು ಚೇತರಿಸಿಕೊಂಡ ನಂತರ ಮೂವರು ಮೊಮ್ಮಕ್ಕಳು ಬಂದು ರಾಜಮ್ಮನವರ ಬಳಿಯಲ್ಲಿ ಬಂಗಾರದ ಉಡುಗೊರೆಯನ್ನು ಅಪೇಕ್ಷಿಸಿದ್ದರು. ಅದು ತಾಯಿಯ ಮಾತು ಕೇಳಿ.. ಆದರೆ, ರಾಜಮ್ಮನವರು ತಮ್ಮ ಒಡವೆಗಳನ್ನು ಹಂಚಿಕೊಡುವಾಗ ಮೋಹನಮಾಲೆಯನ್ನು ಉಷಾಳಿಗೆ ಕೊಟ್ಟರು. ಬೃಂದಾ ಅದನ್ನು ಅದೃಷ್ಟದ ಸರವೆಂದು ಭಾವಿಸಿದ್ದಳು. ಆದರೆ, ರಾಜಮ್ಮನವರು ಅದನ್ನು ಆಕೆಗೆ ಕೊಡದೆ ಉಷಾಳಿಗೆ ನೀಡಿದ್ದೇಕೆ..? ಬೃಂದಾ ಮೋಹನ ಮಾಲೇ4ಗೆ ಅಷ್ಟು ಹಾತೊರೆಯುತ್ತಿದ್ದದ್ದೇಕೆ..? ಅವಳಿಗೂ ಆ ಸರಕ್ಕೂ ಯಾವ ರೀತಿಯ ಅವಿನಾಭಾವ ಸಂಬಂಧವಿತ್ತು..?


ಉಷಾಳಿಗೆ ಎರಡು ವಿವಿಧ ವರಗಳ ಸಂಬಂಧ ಬಂದಾಗಲೂ.. ಆಕೆ ಅವರಿಬ್ಬರನ್ನು ಉಪಾಯವಾಗಿಯೇ ನಿವಾರಿಸಿಕೊಂಡಳು. ಹಾಗೆ ನಿವಾರಿಸಿಕೊಳ್ಳುವಾಗ ಹೇಳಿದ ಕಾರಣವೆಂದರೆ.. ಆಕೆ ತಾನು ರಾಜಮ್ಮನವರ ಸೇವೆ ಮಾಡಬೇಕೆಂದು. ರಾಜಮ್ಮ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರಾದರೂ ಉಷಾ ಅವರ ಬಳಿಯಲ್ಲಿಯೇ ಉಳಿಯಲು ಕಾರಣವೇನಿತ್ತು..? ಉಷಾಳಿಗೆ ಆ ಇಬ್ಬರು ವರನನ್ನು ಸೂಚಿಸಿದ್ದಾದರೂ ಯಾರು..?


ಮುಂದೆ ಉಷಾ ಅಂಬಮ್ಮನವರ ಮಗ ಅನಿರುದ್ದನನ್ನು ವಿವಾಹವಾಗುತ್ತಾಳೆ. ಅವರಿಬ್ಬರ ವಿವಾಹಕ್ಕೆ ಕಾರಣವಾಗಿದ್ದೇನು.. ಅಂಬಮ್ಮನ ಹೆಣ್ಣುಮಕ್ಕಳಿಗೂ ತಾನೇ ಹಣ ನೀಡಿ ವಿವಾಹವಾಗಲು ಕಾರಣವಾಗುತ್ತಾಳೆ. ಮುಂದೆ ಅನಿರುದ್ಧ ನಡೆಸುತ್ತಿದ್ದ ಹೋಟೆಲ್ ಸಹ ಅವರ ಸ್ವಂತದ್ದೇ ಆಗುತ್ತದೆ. ಆ ಸಂದರ್ಭದಲ್ಲಿ ರಾಜಮ್ಮನವರು ನೀಡಿದ ಎಚ್ಚರಿಕೆಯೇನು..? ಕೇಶವರಾವ್ ಅವರು ಸಹಾ ತಮ್ಮ ತಾಯಿಯ ವಿರುದ್ಧ ತಿರುಗಿ ಬೀಳಲು ಕಾರಣವೇನು..?


ಅದೃಷ್ಟದ ಒಡವೆ ಎನ್ನಲಾದ ಮೋಹನಮಾಲೆಯ ಸುತ್ತವೇ ತಿರುಗುವ ಕಥೆ ಹಣ ಹಾಗೂ ಮನುಷ್ಯ ಸಂಬಂಧವನ್ನು ಸಹ ಹೆಣೆಯುತ್ತದೆ. ನಿಜಕ್ಕೂ, ಹಾಗೆ ಅದೃಷ್ಟ-ದುರಾದೃಷ್ಟ, ಪಾಪ-ಪುಣ್ಯ ಎಲ್ಲವನ್ನೂ ನಂಬಬಹುದಾ ಎಂಬ ರಾಜಮ್ಮನ ಪ್ರಶ್ನೆಗೆ ಉಷಾ, ಕೃಷ್ಣನಿಗೆ ಪಾಂಚಜನ್ಯ ಸಿಕ್ಕಿದ ಸನ್ನಿವೇಶವನ್ನು ಉದಾಹರಣೆಯಾಗಿ ನೀಡಿದ್ದೇಕೆ..? ಅದಕ್ಕೂ ಇದಕ್ಕೂ ಇರುವ ಸಂಬಂಧವೇನು..?


ಉಷಾ ಹಾಗೂ ಅನಿರುದ್ಧರ ಮದುವೆಯಲ್ಲಿ ಊಟದಲ್ಲಿ ಅಸ್ತವ್ಯಸ್ತವಾಗಿ ಅವರಿಬ್ಬರೂ ಸಾವಿನ ದವಡೆಯಿಂದ ಪಾರಾಗಿ ಬಂದರು. ಅದಕ್ಕೆ ಕಾರಣವೇನು.. ಮೋಹನ ಮಾಲೆ ಕಳುವಾದುದರ ಹಿಂದಿನ ರಹಸ್ಯವೇನು.. ಕೊನೆಯಲ್ಲಿ ಮೋಹನ ಮಾಲೆ ಯಾರ ಕೈಸೇರಿತು..? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಹೆಚ್. ಜಿ. ರಾಧಾದೇವಿಯವರ 'ಮೋಹನ ಮಾಲೆ' ಕಾದಂಬರಿಯನ್ನು. 


ನಾವು ಮಾಡಿದ ಕರ್ಮದ ಫಲ ನಮಗೆ ವಾಪಸ್ ಬರುತ್ತದೆ ಎನ್ನುವ ತತ್ವ ಈ ಕಾದಂಬರಿಯಲ್ಲಿದೆ. ಪ್ರಾಮಾಣಿಕವಾಗಿ, ಕಷ್ಟಪಟ್ಟು ಬದುಕಿದವರಿಗೆ ಅವರ ಪಾಲಿನ ಪ್ರಾಪ್ತಿ ದೊರಕಿತು. ಹಾಗೆಯೇ ಅನ್ಯಾಯ ಮಾಡಿ ಬದುಕಿದವರಿಗೆ ಅವರ ಪಾಲಿನ ಶಿಕ್ಷೆಯಂತಹಾ ಬದುಕು ಸಹ ದೊರಕಿತು. ಈ ಕಾದಂಬರಿ ಅದೃಷ್ಟ ಹಾಗೂ ಪ್ರಾಮಾಣಿಕತೆ ಎರಡರ ಮಿಳಿತವೂ ಆಗಿದೆ. ಕಷ್ಟಪಟ್ಟು ಮೇಲೇರುವವರಿಗೆ ಎಂದಿಗೂ ಒಳಿತೇ ಆಗುತ್ತದೆ. 'ಒಳಿತಿಗೇ ಜಯ' ಎನ್ನುವ ಸಂದೇಶ ಸಾರುವ ಕಾದಂಬರಿ ಇಷ್ಟವಾಯಿತು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ