ಬುಧವಾರ, ಏಪ್ರಿಲ್ 22, 2026

ಡಿ-ಮಾರ್ಟ್ ನ ಡಿಫರೆಂಟ್ ತಂತ್ರ, ಡೆಫಿನೆಟ್ ಲಾಭ ( ಬ್ಯುಸಿನೆಸ್ ಡೈರಿ ಪುಟ - 32)


ಹಿಂದೆಲ್ಲಾ ದಿನಸಿ ಅಂಗಡಿಗೆ ಹೋಗಿ ಬೇಕಾದ ಸಾಮಾನುಗಳನ್ನು ಅಳೆದು ತೂಗಿ ಕೊಳ್ಳುತ್ತಿದ್ದ ದಿನಗಳಿಂದ ಇತ್ತೀಚೆಗೆ ಮಾಲ್ ನಲ್ಲಿ ಬೇಕಾದ ವಸ್ತುಗಳನ್ನು ಬೆಲೆ ಸಹಾ ನೋಡದಂತೆ.. ಅವಶ್ಯಕತೆ ಇರಲಿ ಅಥವಾ ಇಲ್ಲದಿರಲಿ ಇಷ್ಟವಾದರೆ ಕೊಂಡು ತರುವ ಪ್ರವೃತ್ತಿಯತ್ತ ಸಾಗುತ್ತಿರುವ ಸಮಯದಲ್ಲಿ.. ಅದರಲ್ಲಿಯೂ ಆಕರ್ಷಕ ಡಿಸ್ಕೌಂಟ್ ಕಂಡರೆ ಸುಮ್ಮನಿರುವುದು ಕಡಿಮೆಯೇ. ರಿಯಾಯಿತಿಯ ಜೊತೆಗೆ ಗುಣಮಟ್ಟದ ಪ್ರಾಡಕ್ಟ್ ಗಳನ್ನೂ ಕೊಟ್ಟರೆ..?? ಈ ರೀತಿಯಲ್ಲಿ ಗ್ರಾಹಕರನ್ನು ಸೆಳೆಯುತ್ತಾ ಇರುವುದು ಡಿ-ಮಾರ್ಟ್. ಡಿ-ಮಾರ್ಟ್ ಭಾರತದ ಅತಿ ದೊಡ್ಡ ರಿಟೇಲ್ ಉದ್ಯಮಗಳಲ್ಲಿ ಒಂದಾಗಿ ಸ್ಥಾನ ಪಡೆದು.. ತನ್ನ ಬ್ಯುಸಿನೆಸ್ ತಂತ್ರಗಳು, ತನ್ನ ಬದ್ಧತೆಯಿಂದ ಗ್ರಾಹಕರ ತೃಪ್ತಿಗೆ ಪಾತ್ರವಾಗಿ ದಿನೇ ದಿನೇ ತನ್ನ ಹೈಪರ್ ಮಾರ್ಕೆಟ್ ಗಳನ್ನು ಭಾರತದಾದ್ಯಂತ ವಿಸ್ತರಿಸುತ್ತಿದೆ.


ಭಾರತದಲ್ಲಿ ಇಂದಿಗೂ ಆಹಾರ ಹಾಗೂ ಗೃಹಬಳಕೆಯ ವಸ್ತುಗಳನ್ನು ಕೊಳ್ಳಲು ಎಲ್ಲವೂ ಒಂದೆಡೆ ದೊರೆಯುವಂತೆ ಅಪೇಕ್ಷಿಸುತ್ತಾರೆ. ಅಲ್ಲದೆ, ತಮಗೆ ಪರಿಚಿತವಾಗಿರುವ ಬ್ರ್ಯಾಂಡ್ ಗಳನ್ನೇ ಹೆಚ್ಚು ಬಯಸುತ್ತಾರೆ. ಅದೆಲ್ಲವೂ ನಿರೀಕ್ಷಿಸಿದಂತೆ, ಒಂದೇ ಕಡೆ ಅದರಲ್ಲೂ ರಿಯಾಯಿತಿ ದರದಲ್ಲಿ ದೊರೆತರೆ ಹಾಗೂ ಉಳಿದ ಅಂಗಡಿಗಿಗಿಂತಲೂ ಕಡಿಮೆ ಹಣಕ್ಕೆ ದೊರೆತರೆ, ಯಾರಿಗೆ ತಾನೇ ಅದನ್ನು ನಿರಾಕರಿಸಲು ಸಾಧ್ಯ..!?


ಈ ರೀತಿಯ ಹಲವಾರು ಸೂಪರ್ ಮಾರ್ಕೆಟ್ ಗಳು ಬಂದಿದ್ದರೂ.. ಕೆಲವು ಹೈಪರ್ ಮಾರ್ಕೆಟ್ ಗಳು ಕೊಂಚ ದಿನ ಗ್ರಾಹಕರನ್ನು ಆಕರ್ಷಿಸಲು ಆಕರ್ಷಕವಾದ ಡಿಸ್ಕೌಂಟ್‌ಗಳನ್ನು ನೀಡಿ ನಂತರ ನಷ್ಟದ ಹಾದಿ ಹಿಡಿದ ನಿದರ್ಶನಗಳು ಕಣ್ಮುಂದೆ ಇದೆ. ಅದಕ್ಕೆ ಬಿಗ್ ಬಜಾರ್ ಅನ್ನು ಉದಾಹರಣೆಯಾಗಿ ನೀಡಬಹುದು. ಮತ್ತೆ ಕೆಲವು ಹೈಪರ್ ಮಾರ್ಕೆಟ್ ಗಳು ತಮ್ಮದೇ ಆದ ಪ್ರಾಡಕ್ಟ್ ಗಳನ್ನು ತಯಾರಿಸುತ್ತಾ.. ಇತರೆ ಬ್ರ್ಯಾಂಡ್ ಗಳಿಗಿಂತ ತಮ್ಮದೇ ಬ್ರ್ಯಾಂಡ್ ಅನ್ನು ಹೆಚ್ಚಿನ ಮಾರ್ಕೆಟಿಂಗ್ ಮಾಡುತ್ತಿರುವುದೂ ಹೌದು. ಆದರೆ, ತಮ್ಮದೇ ಆದ ಸ್ವಂತ ಪ್ರಾಡಕ್ಟ್ ಕೂಡಾ ಇಲ್ಲದೆ, ಕೇವಲ ಮಾರ್ಕೆಟಿಂಗ್ ತಂತ್ರಗಳ ಮೂಲಕ ಬ್ಯುಸಿನೆಸ್ ನಡೆಸುತ್ತಾ ತನ್ನದೇ ಛಾಪು ಮೂಡಿಸಿದ್ದು ರಾಧಾಕಿಶನ್ ಧಮಾನಿ. ಅದೇ ಧಮಾನಿ ಮಾರ್ಟ್. ಎಂದರೆ ಡಿ-ಮಾರ್ಟ್ ಎಂದು ಪ್ರಖ್ಯಾತವಾಗಿರುವ ಹೈಪರ್ ಮಾರ್ಕೆಟ್. 


ಆರ್. ಕೆ. ಧಮಾನಿ ಎಂದರೆ ರಾಧಾ ಕಿಶನ್ ಧಮಾನಿ. ಇಂದು ಶೇರ್ ಮಾರ್ಕೆಟ್ ನಲ್ಲಿ ಟಾಪ್ ನಲ್ಲಿರುವ, ಭಾರತದ ವಾರೆನ್ ಬಫೆಟ್ ಎಂದೇ ಖ್ಯಾತರಾಗಿರುವ ರಾಕೇಶ್ ಜುಂಜುನ್ವಾಲಾ ತನ್ನ ಗುರು ಎಂದೇ ಗೌರವಿಸುವ ವ್ಯಕ್ತಿ . ತಮ್ಮ ಸರಳತೆಯಿಂದ ಬ್ಯುಸಿನೆಸ್ ನಲ್ಲಿ ಮಿಸ್ಟರ್ ವೈಟ್ ಅಂಡ್ ವೈಟ್ ಎಂದೇ ಪ್ರಖ್ಯಾತಿಯಾಗಿರುವ ರಾಧಾಕಿಶನ್ ಧಮಾನಿ. 


1954 ಜನವರಿ 1ರಂದು ರಾಜಸ್ಥಾನಿನ ಬಿಕಾನೇರಿನಲ್ಲಿ ಮಹೇಶ್ವರಿ ಎನ್ನುವ ಮಾರ್ವಾಡಿ ಕುಟುಂಬವೊಂದರಲ್ಲಿ ಹುಟ್ಟಿದ ಇವರು ಬಹಳ ಶ್ರೀಮಂತಿಕೆಯ ವಾತಾವರಣದಲ್ಲೇನೂ ಬೆಳೆದಿರಲಿಲ್ಲ. ಅಲ್ಲಿಂದ ತಂದೆಯ ಉದ್ಯೋಗದ ಸ್ಥಳಕ್ಕೆ ಬದಲಾದ ಇವರ ವಾಸಸ್ಥಳ ಮುಂಬೈಯ ಒಂದು ಬೆಡ್ರೂಮಿನ ಅಪಾರ್ಟ್ಮೆಂಟ್ ಒಂದರಲ್ಲಿ ಶುರುವಾಗುತ್ತದೆ. ಮುಂಬೈ ಯೂನಿವರ್ಸಿಟಿಯಿಂದ ಕಾಮರ್ಸ್ ನಲ್ಲಿ ಬಿ.ಕಾಂ ಮಾಡಲು ಹೊರಟರೂ ಕಾರಣಾಂತರಗಳಿಂದ ಮೊದಲ ವರ್ಷದಲ್ಲಿಯೇ ಓದನ್ನು ನಿಲ್ಲಿಸಿ, ಕಾಲೇಜ್ ನಿಂದ ಹೊರನಡೆಯುತ್ತಾರೆ. ಅಲ್ಲಿಂದ ಅವರು ಸೇರಿದ್ದು ತಂದೆಯ ಮೆಟಲ್ ರೋಲರ್ ಹಾಗೂ ಬಾಲ್ ಬೇರಿಂಗ್ ಬ್ಯುಸಿನೆಸ್ ನಲ್ಲಿ. ಇವರು ತಂದೆಗೆ ಸಹಾಯವಾಗಲಿ ಎಂದು ಅವರ ಬ್ಯುಸಿನೆಸ್ ಗೆ ಸೇರಿದರೂ.. ವ್ಯಾಪಾರ ಲಾಭದ ಹಾದಿಯನ್ನೇನೂ ಹಿಡಿಯುವುದಿಲ್ಲ. ಬದಲಾಗಿ ನಷ್ಟದ ಹಾದಿಯತ್ತಲೇ ಸಾಗುತ್ತಿರುತ್ತದೆ. ಅದೇ ಸಮಯಕ್ಕೆ ತಂದೆಯ ಸಾವು ಸಹಾ ಆಗಿ, ಅವರನ್ನು ಕುಸಿಯುವಂತೆ ಮಾಡುತ್ತದೆ. ಆ ಬ್ಯುಸಿನೆಸ್ ತಮಗಲ್ಲ ಎಂದು ತೀರ್ಮಾನಿಸಿದವರು ಮುಖ ಮಾಡಿದ್ದು ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ನತ್ತ.


ಓದಿನ ಹಿನ್ನೆಲೆ ವಾಣಿಜ್ಯಕ್ಕೆ ಸಂಬಂಧಿಸಿದ್ದಾಗಿದ್ದರಿಂದ ಸ್ಟಾಕ್ ಮಾರ್ಕೆಟ್ ಬ್ರೋಕರ್ ಆಗಿ ಕೆಲಸಕ್ಕೆ ಸೇರಿದರಾದರೂ.. ಅತ್ಯಂತ ಅಲ್ಪ ಕಾಲದಲ್ಲಿಯೇ ಅವರಿಗೆ ಅರಿವಾದ ಸತ್ಯವೆಂದರೆ.. ಸ್ಟಾಕ್ ಮಾರ್ಕೆಟ್ ಬ್ರೋಕರ್ ಆದರೆ ಹೆಚ್ಚು ಲಾಭವೇನೂ ಆಗುವುದಿಲ್ಲ. ಬದಲಾಗಿ ನಮ್ಮದೇ ಸ್ವಂತ ಹಣವನ್ನು ಇಲ್ಲಿ ಹೂಡಿಕೆ ಮಾಡಿದರೆ ನಾವು ಲಾಭದತ್ತ ಸಾಗಬಹುದು ಎಂಬುದು. 1980 ರಿಂದ ಹೆಚ್ಚು ಪ್ರಸಿದ್ಧಿಯಲ್ಲದ ಶಾರ್ಟ್ ಸೆಲ್ಲಿಂಗ್ ಸ್ಟಾಕ್ ವಿಧಾನದಿಂದ ತಮ್ಮ ಹಣವನ್ನು ಹೂಡಿಕೆ ಮಾಡಲು ಶುರು ಮಾಡುತ್ತಾರೆ ಧಮಾನಿ.


1990ರ ಸಮಯದಲ್ಲಿ ಸ್ಟಾಕ್ ಮಾರ್ಕೆಟ್ ನಲ್ಲಿ ಹರ್ಷದ್ ಮೆಹ್ತಾ ಮಾಡಿದ್ದ ಹಗರಣ ಬಯಲಿಗೆ ಬರುತ್ತಿರುವ ಸಂದರ್ಭದಲ್ಲಿಯೇ.. ಇವರ ಶಾರ್ಟ್ ಸೆಲ್ಲಿಂಗ್ ನಿಂದಾಗಿ ಹೆಚ್ಚು ಲಾಭಗಳಿಸುತ್ತಾ ಹೋಗುತ್ತಾರೆ. 1995ರಲ್ಲಿ ಹೆಚ್. ಡಿ. ಎಫ್. ಸಿ ಬ್ಯಾಂಕಿನ ಅತಿ ದೊಡ್ಡ ಹೂಡಿಕೆದಾರರು ಕೂಡಾ ಆಗುತ್ತಾರೆ ರಾಧಾಕಿಶನ್ ಧಮಾನಿ.


1999ರ ಹೊತ್ತಿಗೆ ತಮ್ಮಲ್ಲಿದ್ದ ಹಣ ಸ್ಟಾಕ್ ನಲ್ಲಿ ಮಾತ್ರ ಹೂಡಿಕೆ ಮಾಡಿದರೆ ಸಾಲದು.. ಇದು ಎಂದಿದ್ದರೂ ಲಾಭ-ನಷ್ಟದ ತೂಗುಗತ್ತಿಯ ನಡಿಗೆ ಎಂದು ಅರಿವು ಮೂಡಿಸಿಕೊಂಡಿದ್ದವರು, ತಮ್ಮದೇ ಆದ ಬ್ಯುಸಿನೆಸ್ ಐಡಿಯಾಗಳಿದ್ದುದರಿಂದ 'ಅಪ್ನಾ ಬಜಾರ್' ಎನ್ನುವ ಕೋ-ಆಪರೇಟಿವ್ ಡಿಪಾರ್ಟ್ಮೆಂಟಲ್ ಸ್ಟೋರಿನ ಫ್ರಾಂಚೈಸಿಯನ್ನು ತೆಗೆದುಕೊಳ್ಳುತ್ತಾರೆ. ಆದರೆ, ಅವರ ಬ್ಯುಸಿನೆಸ್ ರೀತಿ ಇವರಿಗೆ ಸರಿ ಬರುತ್ತಿರಲಿಲ್ಲ. ಯಾವುದಾದರೂ ಹೊಸ ಆವಿಷ್ಕಾರ ಅಥವಾ ಪ್ರಯೋಗಗಳಿಗೆ ಕಾರಣವಾಗುವುದೇ ಅತೃಪ್ತಿ. ಇಲ್ಲಿಯೂ ಅಂತಹಾ ಆರೋಗ್ಯಕರ ಅತೃಪ್ತಿಯೇ ಇವರನ್ನು ತಮ್ಮದೇ ಸ್ವಂತ ಬ್ಯುಸಿನೆಸ್ ಶುರು ಮಾಡುವಂತೆ ಪ್ರೇರೇಪಿಸುತ್ತದೆ. 


2000-2002 ರ ಸಮಯದಲ್ಲಿ ರಿಯಲ್ ಎಸ್ಟೇಟ್ ಕುಸಿದಿದ್ದ ಸಮಯದಲ್ಲಿ ಹಲವಾರು ಜಾಗಗಳನ್ನು ಕೊಂಡುಕೊಳ್ಳುತ್ತಾರೆ. 2002ರಲ್ಲಿ ತಮ್ಮದೇ ಆದ ಬ್ಯುಸಿನೆಸ್ ಅನ್ನು ಶುರು ಮಾಡಿಯೇ ಬಿಡುತ್ತಾರೆ. 2022ರಲ್ಲಿ ಪೋವೈನಲ್ಲಿ ಒಂದು ಸಣ್ಣ ಅಂಗಡಿಯನ್ನು ಸ್ಥಾಪಿಸುವ ಮೂಲಕ ಡಿ-ಮಾರ್ಟ್ ಅನ್ನು ಶುರು ಮಾಡುತ್ತಾರೆ. ಬಿಗ್ ಬಜಾರ್ ಹಾಗೂ ಸುಭಿಕ್ಷಾ ಸ್ಟೋರ್ ಗಳಿಂದ ಸಮಯದಲ್ಲಿ ಡಿ-ಮಾರ್ಟ್ ಭಾರೀ ಲಾಭಗಳಿಸುತ್ತದೆ.  ಅದೇ ಡಿ-ಮಾರ್ಟ್ 2010 ರ ಹೊತ್ತಿಗೆ 25 ಸ್ಟೋರ್ ಗಳಿದ್ದದ್ದು.. ಹೈಪರ್ ಮಾರ್ಕೆಟ್ ನ ಚೈನ್ ಆಗಿ ಬೆಳೆಯುತ್ತದೆ.  2017ರ ಹೊತ್ತಿಗೆ ನಾಲ್ಕನೇ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ ರಾಧಾಕಿಶನ್ ಧಮಾನಿ. 2020ರ ಹೊತ್ತಿಗೆ ಅವರ ಆಸ್ತಿಯ ಮೌಲ್ಯ 16.5 ಬಿಲಿಯನ್ ಡಾಲರ್ ಗಳಷ್ಟು ಹೆಚ್ಚುತ್ತದೆ. 2011ರಲ್ಲಿ ಕೇವಲ 25 ಡಿ-ಮಾರ್ಟ್ ಗಳಿದ್ದು, 2021ರ ಹೊತ್ತಿಗೆ ಅಂದರೆ ಹತ್ತೇ ವರ್ಷದಲ್ಲಿ 230ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ತನ್ನ ಸ್ಟೋರ್ ಗಳನ್ನು ಸ್ಥಾಪಿಸುತ್ತದೆ. 


ಒಂದು ಬ್ಯುಸಿನೆಸ್ ಸ್ಥಾಪನೆಯಾಗಿ ಕೇವಲ 20 ವರ್ಷ ಕಳೆದರೂ.. ಬ್ಯುಸಿನೆಸ್ ನಲ್ಲಿ ತನ್ನದೇ ಆದ ಅತ್ಯುತ್ತಮ ತಂತ್ರಗಾರಿಕೆಯಿಂದ ಭರವಸೆಯ ಬ್ರ್ಯಾಂಡ್ ಆಗಿದೆ ಡಿ-ಮಾರ್ಟ್. ಕರೋನಾ ಸಮಯದಲ್ಲಿ ಎಷ್ಟೋ ಹೆಸರಾಂತ ಬ್ಯುಸಿನೆಸ್ ಗಳು, ದೊಡ್ಡ-ದೊಡ್ಡ ಮಾಲ್ ಗಳು, ರೀಟೇಲ್ ಅಂಗಡಿಗಳು ಮುಚ್ಚಿ ಹೋದವು. ಅಂತಹಾ ದುರಿತ ಕಾಲವನ್ನೂ ದಾಟಿ ಅಂತಹಾ ಸಮಯದಲ್ಲಿಯೂ ಹೆಚ್ಚಿನ ಲಾಭದತ್ತ ಮುನ್ನಡೆದಿದ್ದು ಡಿ-ಮಾರ್ಟ್. ಇದಕ್ಕಾಗಿ ಅವರು ಅನುಸರಿಸಿದ ಹಾಗೂ ಇಂದಿಗೂ ಅನುಸರಿಸುತ್ತಿರುವ ಬ್ಯುಸಿನೆಸ್ ತಂತ್ರಗಳ ಬಗ್ಗೆ ಕೊಂಚ ನೋಡಿ ಬರೋಣ.  


ಯಾವುದೇ ಒಂದು ವಸ್ತು ಬೇರೆಡೆ ಸಿಗುತ್ತಿರುವುದಕ್ಕಿಂತ ಹಾಗೂ ಎಂ.ಆರ್.ಪಿ ಎಂದರೆ ಮ್ಯಾಕ್ಸಿಮಮ್ ರಿಟೈಲಿಂಗ್ ಪ್ರೈಸ್ ಗಿಂತ ಕಡಿಮೆ ಹಣಕ್ಕೆ ಸಿಗುತ್ತಿದ್ದಾಗ.. ಅದನ್ನು ಮೊದಲಿಗೆ ಒಪ್ಪಿಕೊಳ್ಳುವುದಕ್ಕಿಂತ ಸಂದೇಹಿಸುವುದೇ ಹೆಚ್ಚು. ಅದರ ಗುಣಮಟ್ಟ ಕಡಿಮೆಯಾಗಿರಬಹುದು ಅಥವಾ ಅದರ ಎಕ್ಸ್ಪೈರಿ ಡೇಟ್ ಏನಾದರೂ ತೀರಾ ಹತ್ತಿರವಿರಬಹುದು ಅಥವಾ ಮೀರಿರಬಹುದು. ಇಲ್ಲವೇ ಏನಾದರೂ ಕಲಬೆರಕೆ ಇರಬಹುದು.. ಆದರೆ, ಡಿ-ಮಾರ್ಟ್ ನ ತಂತ್ರವೇ ಬೇರೆ. ಅವರು ಯಾವುದೇ ಪ್ರಾಡಕ್ಟ್ ಗಳನ್ನು ಖರೀದಿಸುವಾಗ ಅತಿ ಹೆಚ್ಚು ಪ್ರಾಡಕ್ಟ್ ಗಳನ್ನು ಆಯಾ ವ್ಯಾಪಾರಿಗಳಿಂದಲೇ ನೇರವಾಗಿ ಖರೀದಿಸುವುದರಿಂದ ಮಧ್ಯವರ್ತಿಗಳ ಅಗತ್ಯವಿರುವುದಿಲ್ಲ. ಮಧ್ಯವರ್ತಿಗಳಿಗೆ ಹಣ ನೀಡಬೇಕಾದ ಪ್ರಮೇಯವಿರುವುದಿಲ್ಲ. "ಹೈ ವಾಲ್ಯೂಮ್, ಲೋ ಮಾರ್ಜಿನ್" ಎನ್ನುವ ಸೂತ್ರವನ್ನು ಅನುಸರಿಸಿ.. ಹೆಚ್ಚು ಪ್ರಮಾಣದ ಪ್ರಾಡಕ್ಟ್ ಗಳನ್ನು ತಯಾರಿಸುವವರಿಂದಲೇ ಕೊಳ್ಳುವಾಗ ನೀಡುತ್ತಿದ್ದ ರಿಯಾಯಿತಿ ದರದಿಂದಾಗಿ.. ಅವರು ಗ್ರಾಹಕರಿಗೆ ಹೆಚ್ಚಿನ ರಿಯಾಯಿತಿಯನ್ನು ನೀಡಲು ಸಾಧ್ಯವಾಯಿತು. 


ಇತರ ಬ್ಯುಸಿನೆಸ್ ಗಳಂತಲ್ಲದೇ.. ಅಂದು ಕರೀದಿಸಿದ ಅಷ್ಟೂ ಪ್ರಾಡಕ್ಟ್ ಗಳಿಗೆ ಆಯಾ ವ್ಯಾಪಾರಿಗಳಿಗೆ ಅಂದಂದೇ.. ಪೂರ್ಣ ಹಣವನ್ನು ಚುಕ್ತಾ ಮಾಡುತ್ತಿದ್ದುದರಿಂದ ನಂಬಿಕೆಯೂ ಉಳಿಯುತ್ತಿತ್ತಲ್ಲದೆ, ತಮಗೆ ಬೇಕಾದ ಸ್ಟಾಕ್ ಹಾಗೂ ರಿಯಾಯಿತಿಯೂ ಸಿಗುತ್ತಿತ್ತು. ಇದರಿಂದ ಗ್ರಾಹಕರಿಗೆ ಎಂ.ಆರ್.‌ಪಿಯ ಬದಲಿಗೆ ಯು. ಎಸ್. ಪಿ ಎಂದರೆ ಯುನಿಕ್ ಸ್ಪೆಲ್ಲಿಂಗ್ ಪಾಯಿಂಟ್ ನಲ್ಲಿ ನೀಡುತ್ತಿದ್ದರು. ಯು. ಎಸ್. ಪಿ ಆಯಾ ವ್ಯಾಪಾರಿ ಸಂಸ್ಥೆ ಎದುರಾಳಿಗಳಿಗಿಂತ ವಿಭಿನ್ನ ದರವನ್ನು ನಿಗದಿಪಡಿಸಿ ಗ್ರಾಹಕರಿಗೆ ಮಾರಾಟ ಮಾಡುವ ಬೆಲೆ. 


ಈ ರೀತಿ ಗ್ರಾಹಕರಿಗೆ ಅಗತ್ಯವಿರುವ ಪ್ರಾಡಕ್ಟ್ ಗಳನ್ನು ತಮ್ಮ ಮಾರ್ಟ್ ನಲ್ಲಿಡಲು ಅವರು ಸಾಕಷ್ಟು ಸರ್ವೇ ಮಾಡುತ್ತಿದ್ದರಲ್ಲದೆ, ಯಾವ ಬ್ರ್ಯಾಂಡ್ ನ ಪ್ರಾಡಕ್ಟ್ ಅನ್ನು ಅತಿ ಹೆಚ್ಚು ಗ್ರಾಹಕರು ಬಯಸುತ್ತಾರೋ. ಅದನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪೇರಿಸಿರುತ್ತಿದ್ದರು. ಅಷ್ಟೇ ಅಲ್ಲದೆ, ಇವುಗಳನ್ನು ಮಾರಾಟದ ಸ್ಥಳಗಳಲ್ಲಿ ಇಡುವಾಗ ಅವರು ಆ ಪ್ರಾಡಕ್ಟ್ ಗಳಿಗೆ ಆಕರ್ಷಕವಾಗಿ ಜೋಡಿಸಿಡುವುದಕ್ಕಿಂತ, ಹೆಚ್ಚು ಪ್ರಾಡಕ್ಟ್ ಗಳನ್ನು ಕಡಿಮೆ ಸ್ಥಳದಲ್ಲಿ ಇಡುವತ್ತ ಗಮನಹರಿಸಿ, ಫ್ಯಾಷನಬಲ್ ಆಗಿ ಅವು ಸೆಳೆಯುವುದಕ್ಕಿಂತ, ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಗ್ರಾಹಕರನ್ನು ಸೆಳೆಯುವಂತೆ ಡಿಸೈನ್ ಮಾಡಿದ್ದರು. 


ಗ್ರಾಹಕರು ಕಡಿಮೆ ಬಳಸುವ ಪ್ರಾಡಕ್ಟ್ ಗಳನ್ನು ಕಡಿಮೆ ಪೇರಿಸುವುದರಿಂದ ಜನರ ಮನಸ್ಸಿನಲ್ಲಿ ಈ ಪ್ರಾಡಕ್ಟ್ ಹೆಚ್ಚು ಖರ್ಚಾಗಿದೆ ಎಂಬ ಭಾವವನ್ನು ಮೂಡಿಸಿ ಅದರತ್ತ ಸೆಳೆಯುತ್ತಿದ್ದರು. ಅಷ್ಟೇ ಅಲ್ಲದೆ, ಹೊಸ ಪ್ರಾಡಕ್ಟ್ ಗಳನ್ನು ಮಾರಾಟ ಮಾಡುವವರು ಅಲ್ಲಿ ತಮ್ಮ ಪ್ರಾಡಕ್ಟ್ ಅನ್ನು ಸ್ಟೋರ್ ಮುಂಭಾಗದಲ್ಲಿಯೋ ಅಥವಾ ಹೆಚ್ಚು ಸೆಳೆಯುವ ಜಾಗದಲ್ಲಿಯೋ ಅಥವಾ ಕ್ಯಾಶ್ ಕೌಂಟರ್ ಬಳಿ ಇರಲು ಡಿಮ್ಯಾಂಡ್ ಮಾಡಿದಲ್ಲಿ ಅದಕ್ಕಾಗಿ ಅವರು ಸ್ಲಾಟಿಂಗ್ ಫೀಸ್ ಅನ್ನು ವಿಧಿಸುತ್ತಿದ್ದರು. ಉಳಿದ ಪ್ರಾಡಕ್ಟ್ ಮಾರಾಟಗಾರರಿಗೆ ಈ ಸ್ಲಾಟಿಂಗ್ ದರ ಅನ್ವಯಿಸುವುದಿಲ್ಲ. 


ಡಿ-ಮಾರ್ಟ್ ತೆರೆಯಲು ಮಾಡಿಕೊಳ್ಳುವ ಸ್ಥಳದ ಕುರಿತಾದ ಆಯ್ಕೆಯೂ ವಿಭಿನ್ನವಾದದ್ದು. ಬಹಳಷ್ಟು ಸಂಶೋಧನೆ ನಡೆಸಿದ ನಂತರ ರೆಸಿಡೆನ್ಷಿಯಲ್ ಏರಿಯಾಗಳಿಗೆ ಹತ್ತಿರವಿರುವಂತೆ.. ಆದರೆ, ಕಡಿಮೆ ಟ್ರಾಫಿಕ್ ಇರುವ ಜಾಗ ಶಾಪಿಂಗ್ ಗೆ ಅನುಕೂಲವಾಗುವಂತೆ ಡಿಸೈನ್ ಮಾಡುತ್ತಾರೆ. ಇದರಿಂದಾಗಿ ಪಾದಾಚಾರಿಗಳು ಹೆಚ್ಚಾಗುತ್ತಾರಲ್ಲದೆ.. ಬ್ರ್ಯಾಂಡ್ ನ ಹೆಸರು ಎದ್ದು ಕಾಣುತ್ತದೆ.


ಡಿ-ಮಾರ್ಟ್ ಕಟ್ಟಡಗಳೆಲ್ಲವೂ ಅವರದ್ದೇ ಸ್ವಂತ ಜಾಗದಲ್ಲಿಯೋ ಅಥವಾ ಕಡಿಮೆ ಹಣದಲ್ಲಿ ಹೆಚ್ಚು ವರ್ಷಕ್ಕೆ ಮಾಡಿಕೊಂಡ ಒಪ್ಪಂದದ ಸ್ಥಳಗಳಾಗಿವೆ. ಹೀಗಾಗಿ, ಬಾಡಿಗೆಗೆ ನೀಡಬೇಕಾದ ಹಣ ಉಳಿತಾಯವಾಗುವುದಲ್ಲದೇ.. ಅವರು ಫರ್ನಿಚರ್ ಹಾಗೂ ಫಿಕ್ಸ್ ಮಾಡುವಂತಹವುಗಳನ್ನು ಬಳಸಿದ್ದು ಕಡಿಮೆಯೇ.. ಸೌಂದರ್ಯಕ್ಕಿಂತ ಪ್ರಾಡಕ್ಟ್ ಗಳ ಗುಣಮಟ್ಟ ಹಾಗೂ ಸಂಖ್ಯೆಗೆ ಹೆಚ್ಚು ಒತ್ತು ನೀಡುತ್ತಾರೆ. ದುಬಾರಿ ಮಾಲ್ ಗಳಲ್ಲಿ ತಮ್ಮ ಜಾಗವನ್ನು ಪಡೆಯುವುದರ ಬದಲಾಗಿ ತಮ್ಮದೇ ಆದ ಸ್ಥಳಗಳನ್ನು ಕೊಂಡುಕೊಂಡು ಅವುಗಳನ್ನೇ ದೊಡ್ಡ ದೊಡ್ಡ ಮಾರ್ಟ್ ಗಳಾಗಿ ಮಾಡುತ್ತಾರೆ. 30,000 ದಿಂದ 35000 ಚದರ ಅಡಿಯಲ್ಲಿ ಡಿ-ಮಾರ್ಟ್ ಹೈಪರ್ ಮಾರ್ಕೆಟ್ ಗಳನ್ನು, 7,000 ದಿಂದ 10,000 ಚದರ ಅಡಿಯಲ್ಲಿ ಡಿ-ಮಾರ್ಟ್ ಎಕ್ಸ್ಪ್ರೆಸ್ ಗಳನ್ನು, 11 ಲಕ್ಷ ಚದರ ಅಡಿಯಲ್ಲಿ ಡಿ-ಮಾರ್ಟ್ ಸೂಪರ್ ಸೆಂಟರ್ ಗಳನ್ನು ನಿರ್ಮಿಸಿದ್ದಾರೆ.


ದಿನಸಿ ಅಂಗಡಿಗಳಂತೆ ಇಲ್ಲಿ ಸಾಮಾನುಗಳ ಸರಬರಾಜು ಮಾಡುವವರು ಇಲ್ಲದಿರುವುದರಿಂದ.. ಉದ್ಯೋಗಿಗಳ ಸಂಖ್ಯೆ ಕಡಿಮೆಯೇ.. ಕ್ಯಾಶ್ ಕೌಂಟರ್ ಗಳೂ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದಿರುವುದರಿಂದ ತಮ್ಮ ಉದ್ಯೋಗಿಗಳಿಗೆ ಕೊಡಬೇಕಾದ ಸಂಬಳದ ಹಣವನ್ನು ಉಳಿತಾಯ ಮಾಡುವುದಲ್ಲದೆ.. ಅಲ್ಲಿ ಸರದಿಯಲ್ಲಿ ಕಾಯಬೇಕಾಗಿರುವುದರಿಂದ, ಹೆಚ್ಚು ಜನರು ತುಂಬಿರುತ್ತಾರೆ ಎನ್ನುವ ಕೃತಕ ಜನಸಂದಣಿ ಸೃಷ್ಟಿಯಾಗುತ್ತದೆ. ಇದು ಪರೋಕ್ಷವಾಗಿ ಜನರ ಮನಸ್ಸಿನಲ್ಲಿ ಭರವಸೆಯನ್ನು ಮೂಡಿಸುತ್ತದೆ. ಆದರೆ ಇಲ್ಲಿನ ಕಸ್ಟಮರ್ ಸರ್ವಿಸ್ ಗಳಿಗೆ ಒಳ್ಳೆಯ ಜ್ಞಾನವಿರುವ ಹಾಗೂ ಗ್ರಾಹಕ ಸ್ನೇಹಿ ಅಸಿಸ್ಟೆಂಟ್ ಗಳನ್ನೇ ನೇಮಿಸಿ ಜನರ ನಂಬಿಕೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. 


ಅವಶ್ಯಕತೆಯಿದ್ದಲ್ಲಿ, ನಿಗದಿತ ಸಮಯಕ್ಕಿಂತ ಹೆಚ್ಚಿನ ಅವಧಿಯವರೆಗೂ ಸ್ಟೋರ್ ಗಳನ್ನು ತೆಗೆದು ನಾವು ಗ್ರಾಹಕರಿಗಾಗಿ ಹೆಚ್ಚಿನ ಸಮಯ ಸೇವೆಗಾಗಿ ಸಿದ್ದ ಎಂದು ಹೇಳುತ್ತಾರೆ. ಹೋಂ ಡೆಲಿವರಿ ಫೆಸಿಲಿಟಿಯನ್ನು ಕೊಡುವುದರಿಂದ ಹೆಚ್ಚಿನ ಜನರನ್ನು ತಲುಪುತ್ತಾರೆ. ಕೋವಿಡ್ ಲಾಕ್ ಡೌನ್ ಸಂಧರ್ಭದಲ್ಲಿ ಇವರು ಹೆಚ್ಚಿನ ಜನರನ್ನು ತಲುಪಿದ್ದೂ ಹೀಗೆಯೇ.. ಇದರಿಂದ ಉಳಿದ ಬ್ಯುಸಿನೆಸ್ ನಷ್ಟದಲ್ಲಿದ್ದಾಗಲೂ ಇವರ ಬ್ಯುಸಿನೆಸ್ ಲಾಭದ ಹಾದಿಯಲ್ಲಿಯೇ ಇತ್ತು.


ಡಿಜಿಟಲ್ ಹಾಗೂ ಸಾಂಪ್ರದಾಯಿಕ ಎರಡೂ ರೀತಿಯ ಜಾಹೀರಾತುಗಳಿಗೆ ಆದ್ಯತೆ ನೀಡಿದರು. ವಾರ್ತಾ ಪತ್ರಿಕೆಯ ಜಾಹೀರಾತುಗಳಿಂದ ತಮ್ಮ ಪ್ರತಿನಿತ್ಯದ ಡಿಸ್ಕೌಂಟ್ ಗಳು, ಪ್ರಾಡಕ್ಟ್ ಡೀಲ್ಸ್ ಜೊತೆಗೆ ಓಚರ್ ಗಳನ್ನು ನೀಡುತ್ತಿದ್ದರು. ಡಿ-ಮಾರ್ಟ್ ಅನ್ನು ನಿಯಮಿತವಾಗಿ ಬಳಸುವ ಗ್ರಾಹಕರಿಗೆ ಲಾಯಲ್ಟಿ ಪಾಯಿಂಟ್ ಗಳನ್ನು ನೀಡಿ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಾರೆ. ಫೇಸ್ಬುಕ್ ಚಾಟ್ ಬಾಟ್ ಮೂಲಕ ಗ್ರಾಹಕರಿಗೆ ಸಹಕಾರಿಯಾಗುತ್ತಿದ್ದರು. ಈಗೀಗ ಬಾಯಿಂದ ಬಾಯಿಗೆ ಹರಡುವ ಪಬ್ಲಿಸಿಟಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. 


2014ರಲ್ಲಿ 4 ರಾಜ್ಯಗಳಲ್ಲಿ ಮಾತ್ರ ಇದ್ದವರು, 2017ರ ಹೊತ್ತಿಗೆ ಹೆಚ್ಚು ಪಬ್ಲಿಕ್ ಆದರೂ.. ಹೊಸ ಸ್ಥಳಗಳಲ್ಲಿ ತಮ್ಮ ಬ್ಯುಸಿನೆಸ್ ಅನ್ನು ವಿಸ್ತರಿಸುವ ಆಯ್ಕೆಗಿಂತ ಇರುವ ಸ್ಥಳದಲ್ಲಿಯೇ ಹೆಚ್ಚು ಬ್ಯುಸಿನೆಸ್ ಮಾಡಬೇಕು.. 'ಸ್ಲೋ ಅಂಡ್ ಸ್ಟೀಡಿ' ಎನ್ನುವತ್ತ ಹೆಚ್ಚು ಗಮನ ಹರಿಸುತ್ತಾರೆ. ಈಗ ಇವರ ಪ್ರತಿ ದಿನದ ಲಾಭ 1.6 ಕೋಟಿಗಿಂತಲೂ ಹೆಚ್ಚು. 


ಬ್ಯುಸಿನೆಸ್ ತಂತ್ರಗಳ ವಿಭಿನ್ನತೆ ಹಾಗೂ ವೈವಿಧ್ಯಮಯತೆಯಿಂದ, ತಮ್ಮ ತರಹೇವಾರಿ ತಂತ್ರಗಳಿಂದ.. ಪ್ರತಿನಿತ್ಯವೂ ಕಡಿಮೆ ಬೆಲೆಗೆ, ರಿಯಾಯಿತಿ ನೀಡುತ್ತಾ.. ಮಧ್ಯಮ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ.. ಗುಣಮಟ್ಟದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದೆ, ದಿನೇ-ದಿನೇ ಬೆಳೆಯುತ್ತಿರುವ ಬ್ಯುಸಿನೆಸ್.. ಹೊಸದಾಗಿ ಬ್ಯುಸಿನೆಸ್ ಶುರು ಮಾಡುವವರಿಗೆ.. ತಮ್ಮದೇ ಆದ ತಂತ್ರಗಳನ್ನು ರೂಪಿಸಿಕೊಳ್ಳುವ ಅವಶ್ಯಕತೆ ಹಾಗೂ ಅದರಿಂದ ಆಗುವ ಲಾಭದ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಡಿಫರೆಂಟ್ ತಂತ್ರದಿಂದ ಡೆಫಿನೆಟ್ ಲಾಭ ಮಾಡಿಕೊಳ್ಳುವ ಬ್ಯುಸಿನೆಸ್ ನ ಪಾಠ ಹೇಳುತ್ತಿದೆ ಡಿ-ಮಾರ್ಟ್. 


( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ