ಪುಸ್ತಕದ ಶೀರ್ಷಿಕೆ : ಮಿಂಚಿದ್ದಕ್ಕೆ ಚಿಂತಿಸಿ....
ಲೇಖಕರು : ತನುಜ
ಪ್ರಕಾಶಕರು : ವಿಶ್ವಾಸ್ ಗ್ರಂಥಮಾಲೆ, ಶಿವಮೊಗ್ಗ
ಪ್ರಥಮ ಮುದ್ರಣ : 1990
ಪುಟಗಳು : 171
ಇದು ನಾನು ಓದಿದ ತನುಜ ಅವರ ಮೊದಲ ಪುಸ್ತಕ. ಮಿಂಚಿದ್ದಕ್ಕೆ ಚಿಂತಿಸಿ.. ಎಂಬ ಸಾಮಾಜಿಕ ಕಾದಂಬರಿಯಲ್ಲಿ ಮನುಷ್ಯನಲ್ಲಿರುವ ಗ್ರೇ ಶೇಡ್ ಗಳನ್ನು ಅವರು ಬಹಳ ಚಂದವಾಗಿ ಚಿತ್ರಿಸಿದ್ದಾರೆ. ಒಬ್ಬರು ಒಳ್ಳೆಯವರಾ ಅಥವಾ ಕೆಟ್ಟವರಾ ಎಂಬುದನ್ನು ತೀರ್ಮಾನಿಸುವುದು, ನಾವು ನೋಡುವ ಗುಣ ಜೊತೆಗೆ ಆ ಸಮಯ ಹಾಗೂ ಸಂದರ್ಭದಲ್ಲಿ ಅವರವರ ವರ್ತನೆಗಳು ಹೇಗಿರುತ್ತವೆ ಎಂಬುದು ಆಯಾ ಸಂದರ್ಭ ಹಾಗೂ ಸಮಯದ ಮೇಲೆ ನಿರ್ಧರಿತ. ಕೆಲವರು ಎಷ್ಟೇ ಒಳ್ಳೆಯವರಾಗಿದ್ದರೂ.. ಕೆಲ ಸಂದರ್ಭದಲ್ಲಿ ಅವರು ವರ್ತಿಸುವ ರೀತಿ ಅವರನ್ನು ಕೆಟ್ಟವರನ್ನಾಗಿಸಬಹುದು ಅಥವಾ ಕೆಟ್ಟವರನ್ನಾಗಿ ಪರಿವರ್ತಿಸಬಹುದು. ಸಂಬಂಧಗಳಲ್ಲಿ ತಾಳ್ಮೆ ಹಾಗೂ ಸಹನೆ ಎಷ್ಟು ಮುಖ್ಯ ಎಂಬುದನ್ನು ತೋರಿಸಿಕೊಡುತ್ತದೆ ಈ ಕಾದಂಬರಿ. ಇಷ್ಟೇ ಅಲ್ಲದೆ, ಬಿರುಕು ಬಿಟ್ಟ ಸಂಬಂಧಗಳಲ್ಲಿ ಒಬ್ಬರನ್ನೊಬ್ಬರು ನೋಡುವ ದೃಷ್ಟಿ ಸಮಯ ಕಳೆದರೆ ಹೇಗೆ ಬದಲಾಗಬಹುದು ಎಂಬುದರ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.
ನಾನು ಈ ಕಾದಂಬರಿಯಲ್ಲಿ ಗಮನಿಸಿದಂತೆ ಹೆಚ್ಚಿನ ಪಾತ್ರಗಳಿಲ್ಲ. ನೇರವಾಗಿ ಹಾಗೂ ಸರಾಗವಾಗಿ ಸಾಗುವ ಕಥೆಯಲ್ಲಿ ಪಾತ್ರಗಳು ಬಂದರೂ.. ಅದನ್ನು ಮುಖ್ಯಪಾತ್ರದ ತಂದೆ, ತಾಯಿ ಅಥವಾ ಅಕ್ಕ-ತಂಗಿ ಈ ರೀತಿಯಲ್ಲಿ ಪರಿಚಯಿಸುತ್ತಾರೆಯೇ ಹೊರತು ಅವರ ಹೆಸರುಗಳನ್ನು ನಮೂದಿಸಿಲ್ಲ. ಇದು ಲೇಖಕಿಯ ಶೈಲಿಯಾ ಅಥವಾ ಅವರ ಆರಂಭಿಕ ದಿನಗಳ ಕಾದಂಬರಿ ಇರಬಹುದಾ ತಿಳಿದಿಲ್ಲ. ಅವರ ಬೇರೆ ಪುಸ್ತಕಗಳನ್ನು ಓದಿದ ನಂತರ ಶೈಲಿಯನ್ನು ಅರಿಯಬಹುದು.
ದೀಪ್ತಿ ತನ್ನ ಮಗ ಎರಡು ವರ್ಷದ ಅಭಿನಂದನ್ ನನ್ನು ಸುಧಾರಿಸುವಷ್ಟರಲ್ಲಿ ಸಾಕಾಗಿ ಹೋಗಿರುತ್ತಿದ್ದಳು. ಅವನ ಎಲ್ಲವನ್ನು ತಿಳಿಯುವ ದೃಷ್ಟಿ ಹಾಗೂ ಗಮನಿಸಿ ಕೇಳುವ ಪ್ರಶ್ನೆಗಳಿಗೆ ಆತನಿಗೆ ಸಮಾಧಾನವಾಗುವಂತೆ ಉತ್ತರ ನೀಡಬೇಕಿತ್ತು. ಆದರೆ, ಅವನದ್ದು ಇನ್ನೂ ಬಾಲ ಭಾಷೆಯಾದ್ದರಿಂದ ಮಾತನಾಡಲು ಬರುತ್ತಿರಲಿಲ್ಲವಾದ್ದರಿಂದ.. ಅದನ್ನು ಅರ್ಥೈಸಿಕೊಳ್ಳುವುದೇ ಒಂದು ಸವಾಲಾಗುತ್ತಿತ್ತು. ದೀಪ್ತಿ ದಂಪತಿಗಳು ಮಗನನ್ನು ಮುದ್ದಿನಿಂದ ನಂದು ಎಂದು ಕೂಗುತ್ತಿದ್ದರು. ಉಜ್ವಲ್ ಹಾಗೂ ದೀಪ್ತಿಯರ ಮುದ್ದಿನ ಕೂಸಾಗಿ ಬೆಳೆಯುತ್ತಿದ್ದ.
ಇತ್ತ ಉಜ್ವಲ್ ಗೆ ನಂದುವನ್ನು ನೋಡಿದಾಗಲೆಲ್ಲಾ.. ನಂದುವಿನ ಬಾಲ್ಯದ ದಿನಗಳು ಹಾಗೂ ತುಂಟಾಟವನ್ನು ಕಂಡಾಗಲೆಲ್ಲಾ ಮೊದಲಿಗೆ ನೆನಪಾಗುತ್ತಿದ್ದದ್ದು ಸಂಭ್ರಮ್.
ಐಶ್ವರ್ಯ ಹಾಗೂ ಉಜ್ವಲ್ ರ ಮಗ ಸಂಭ್ರಮ್. ಈಗ ಅವರಿಬ್ಬರ ದಾಂಪತ್ಯ ಬದುಕಿಗೆ ವಿಚ್ಛೇದನ ಸಿಕ್ಕಿತ್ತು. ಸಂಭ್ರಮ್ ಐಶ್ವರ್ಯಳ ಬಳಿ ಬೆಳೆಯುತ್ತಿದ್ದ. ಭೇಟಿ ಮಾಡುವ ಆಸೆ ಇದ್ದರೂ.. ಐಶ್ವರ್ಯಳ ಶಿಸ್ತು, ಕೋಪ ಹಾಗೂ ಮಗನಿಗೆ ನೀಡುತ್ತಿದ್ದ ಶಿಕ್ಷೆಯನ್ನು ಕಂಡು ಹೆದರುತ್ತಿದ್ದ ಉಜ್ವಲ್. ಆದರೂ ಕದ್ದುಮುಚ್ಚಿ ಭೇಟಿಯಾಗುವುದು ತಪ್ಪಿರಲಿಲ್ಲ. ತನ್ನ ಮಗ ತಂದೆಯೆಡೆಗೆ ಹೆಚ್ಚೆಚ್ಚು ಆಕರ್ಷಿತನಾಗುತ್ತಿದ್ದಾಗಲೆಲ್ಲಾ ಐಶ್ವರ್ಯಾಳಿಗೆ ಅಭದ್ರತೆ ಕಾಡಿ, ಎಲ್ಲಿಲ್ಲದ ಕೋಪ ಬರುತ್ತಿತ್ತು. ಶೀಘ್ರ ಕೋಪಿತನವನ್ನು ಹೊರತುಪಡಿಸಿ ಆಕೆ ಉತ್ತಮ ತಾಯಿ, ಧೈರ್ಯವಂತ ಹೆಣ್ಣು.
ಶ್ರೀಮಂತರ ಮನೆಯ ಮಗಳಾಗಿದ್ದ ಅವಳು ಉಜ್ವಲ್ ನ ಪತ್ನಿಯಾಗಿ ಮನೆ ತುಂಬಿದ್ದಳು. ಉಜ್ವಲ್ ಮನೆಯಲ್ಲಿದ್ದ ತುಂಬು ಕುಟುಂಬದಲ್ಲಿ ಎಷ್ಟೇ ಹೊಂದಿಕೊಂಡರೂ ಸಹಕಾರ ಸಿಗಲಿಲ್ಲ. ಅದು ಪ್ರೇಮ ವಿವಾಹವೂ ಅಲ್ಲವಾದ್ದರಿಂದ ತನ್ನ ಸ್ವಾಭಿಮಾನವನ್ನು ಬದಿಗೊತ್ತಿ, ತೀರಾ ತಗ್ಗಿ-ಬಗ್ಗಿ ನಡೆಯಲಾಗದಾದಾಗ ತನ್ನ ಆತ್ಮಾಭಿಮಾನಕ್ಕೆ ಪೆಟ್ಟು ಬಿದ್ದಾಗ ಮಗನೊಡನೆ ಬೇರಾಗಿದ್ದಳು. ಐಶ್ವರ್ಯ ತನ್ನ ತಂದೆ-ತಾಯಿ ತೀರಿಕೊಂಡ ನಂತರ, ಅಣ್ಣಂದಿರು ಆಸ್ತಿಯನ್ನು ಪಾಲು ಮಾಡಿಕೊಂಡ ನಂತರ, ಕೆಲಸಕ್ಕೆ ಸೇರಿ ಸ್ವತಂತ್ರವಾಗಿ ಜೀವನ ಕಟ್ಟಿಕೊಂಡಿದ್ದಳು. ರಾಮು ಅವಳಿಲ್ಲದಾಗ ಸಂಭ್ರಮ್ ನ ಕೇರ್ ಟೇಕರ್ ಆಗಿದ್ದ. ಮನೆಯಲ್ಲಿ ಅಡುಗೆ ಮಾಡಿಕೊಂಡು ಮನೆಯನ್ನು ನಿಭಾಯಿಸುತ್ತಿದ್ದ. ಉಜ್ವಲ್ ಹಾಗೂ ಸಂಭ್ರಮ್ ನ ಭೇಟಿ ಆತನಿಗೆ ತಿಳಿಯದ ವಿಷಯವೇನಲ್ಲ. ಇದು ಐಶ್ವರ್ಯಾಳಿಗೆ ತಿಳಿದು ಪರಿಸ್ಥಿತಿ ವಿಕೋಪಕ್ಕೆ ಹೋದಾಗಲೆಲ್ಲಾ ಆಕೆಯನ್ನು ಸಂತೈಸುತ್ತಿದ್ದನು.
ಕೋಪದಿಂದ ಹೆಚ್ಚು ಪೆಟ್ಟುಗಳನ್ನು ತಿಂದ ಸಂಭ್ರಮ್ ಗೆ ಜ್ವರ ಬಂದದ್ದೇ ನೆಪವಾಗಿ, ತೀವ್ರವಾಗಿ ನರಳಿ ಕಣ್ಣನ್ನು ಬಿಡಲಾಗದೇ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಇತ್ತ ನಂದುವನ್ನು, ಅವನ ಹಠವನ್ನು ಸಂಭಾಳಿಸಲು ಹೊರ ಕರೆದುಕೊಂಡು ಹೋಗಿದ್ದ ಉಜ್ವಲ್ ಗೆ ಅಪಘಾತವಾಗಿ ಆತ ಆಸ್ಪತ್ರೆ ಸೇರುವಂತಾಗಿತ್ತು.
ದೀಪ್ತಿ ಉಜ್ವಲನ ಪತ್ನಿಯಾಗುವಷ್ಟರಲ್ಲಿ ಉಜ್ವಲ್ ಒಡಹುಟ್ಟಿದವರಿಗೆಲ್ಲಾ ವಿವಾಹವಾಗಿ ತಮ್ಮ-ತಮ್ಮ ಕುಟುಂಬಕ್ಕೆ ಸೇರಿ ಹೋಗಿದ್ದರು. ಆತನ ತಂದೆ-ತಾಯಿಯೂ ತೀರಿಕೊಂಡದ್ದರಿಂದ ಆತನ ಹಿಂದಿನ ವಿಚಾರಗಳಾವುವೂ ದೀಪ್ತಿಗೆ ತಿಳಿದಿರಲಿಲ್ಲ. ಅಪರಿಮಿತವಾಗಿ ಅವನನ್ನು ಪ್ರೀತಿಸುತ್ತಿದ್ದವಳು. ಆತನು ತನ್ನಿಂದ ಏನನ್ನು ಮರೆಮಾಚಬಾರದೆಂದು ಅಪೇಕ್ಷಿಸುತ್ತಿದ್ದಳು. ಸಂಭ್ರಮ್ ಪೋಷಣೆಯ ಜವಾಬ್ದಾರಿ ಉಜ್ವಲನದ್ದೇ ಆದರೂ ಈಗ ಮಗು ತಾಯಿಯ ಬಳಿ ಬೆಳೆಯಬೇಕೆಂದು ಕೋರ್ಟ್ ಹೇಳಿತ್ತು. ಮುಂದಾದರೂ ದೀಪ್ತಿಗೆ ಈ ವಿಚಾರ ತಿಳಿಯಲೇಬೇಕಿತ್ತು.
ಅಪಘಾತವಾಗಿ ಆಸ್ಪತ್ರೆ ಸೇರಿದ ಉಜ್ವಲ್ ಪರಿಸ್ಥಿತಿ ತಿಳಿದ ರಾಮು ಇದನ್ನು ಹೇಗೆ ನಿಭಾಯಿಸಿದ..? ಉಜ್ವಲ್ ಹಾಗೂ ಸಂಭ್ರಮ್ ಪರಿಸ್ಥಿತಿಗಳು ಹೇಗೆ ಸುಧಾರಿಸಿದವು..?
ದೀಪ್ತಿ ಹಾಗೂ ಐಶ್ವರ್ಯ ಅಪರಿಚಿತರೇನೂ ಆಗಿರಲಿಲ್ಲ. ಆದರೆ, ಒಬ್ಬರಿಗೊಬ್ಬರ ಬದುಕಿನ ಅರಿವಿರಲಿಲ್ಲ ಅಷ್ಟೇ.. ಅಚಾನಕ್ಕಾಗಿ ಆಸ್ಪತ್ರೆಯಲ್ಲಿ ಭೇಟಿಯಾದ ದೀಪ್ತಿ ಹಾಗೂ ಐಶ್ವರ್ಯರಿಗೆ ಮತ್ತೆ ಆತ್ಮೀಯರಾಗುವ ಸಂದರ್ಭ ಒದಗಿ ಬಂದಿತ್ತು. ಅವರಿಬ್ಬರೂ ಹೇಗೆ ಪರಸ್ಪರ ಪರಿಚಿತರು ಹಾಗೂ ಅಪರಿಚಿತರಾಗಿದ್ದ ಸಂದರ್ಭವಾದರೂ ಏನಿತ್ತು..?
ಐಶ್ವರ್ಯ ದೀಪ್ತಿಯ ಬಳಿ ತನ್ನ ವಿಚಾರವನ್ನೆಲ್ಲ ಹೇಳಿಕೊಂಡರೂ ಉಜ್ವಲ್ ನ ಹೆಸರನ್ನು ಬಳಸಲಿಲ್ಲ. ದೀಪ್ತಿಯೂ ತನ್ನ ಅಸಹಾಯಕತೆಯನ್ನು ತೋಡಿಕೊಂಡರೂ ಉಜ್ವಲ್ ನ ಪತ್ನಿ ಅವಳೆಂದು ಐಶ್ವರ್ಯಗಳಿಗೆ ತಿಳಿಯಲಿಲ್ಲ. ಅದು ಬೇಕೆಂದು ಮರೆಮಾಚಿದ್ದಲ್ಲ. ಆದರೆ, ಸಂದರ್ಭ ಆಗಿತ್ತು.
ಸಂಭ್ರಮ್ ನ ದೃಷ್ಟಿಯಲ್ಲಿ ಕಾಣುವ ತಾಯಿ ಐಶ್ವರ್ಯ, ಉಜ್ವಲನ ಪತ್ನಿಯಾಗಿ ಕಾಣುವ ಐಶ್ವರ್ಯಳಿಗೂ ಕೊಂಚ ಹೊಂದುತ್ತಿದ್ದರೂ.. ದೀಪ್ತಿ ಕಂಡಿದ್ದ ಐಶ್ವರ್ಯಾಳಿಗೂ ಹಾಗೂ ತನ್ನ ಬದುಕನ್ನು ಬಿಚ್ಚಿಡುವ ಐಶ್ವರ್ಯಳಿಗೂ ಅಜಗಜಾಂತರ ವ್ಯತ್ಯಾಸ. ಉಜ್ವಲ್ ವಿಷಯದಲ್ಲಿಯೂ ಹೀಗೆಯೇ.. ಐಶ್ವರ್ಯ ಹೇಳುತ್ತಿದ್ದಾಗಿನ ಉಜ್ವಲ್ ಗೂ.. ದೀಪ್ತಿಯ ಪತಿ ಉಜ್ವಲ್ ಗೂ ಅಜಗಜಾಂತರ ವ್ಯತ್ಯಾಸ.
ಎಲ್ಲರಿಗೂ ಪರಸ್ಪರ ವಿಚಾರಗಳು ಅರಿವಾಗಿತೇ..? ಇಲ್ಲಿ ಯಾರ ನೋಟ ಸರಿ ಹಾಗೂ ಯಾರದ್ದು ತಪ್ಪು ಎನ್ನುವುದಕ್ಕಿಂತ ಪರಿಸ್ಥಿತಿ ಹಾಗೂ ಸಂದರ್ಭದಲ್ಲಿ ಅವರ ಮುಂದಿನ ಬದುಕು ಏನಾಯ್ತು ಎಂಬುದನ್ನು ಕುತೂಹಲವಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕಿ.
ಮಿಂಚಿದ್ದಕ್ಕೆ ಚಿಂತಿಸಿ.. ಫಲವಿಲ್ಲವೆಂದು ಬದುಕು ಕಟ್ಟಿಕೊಂಡರೇ ಅಥವಾ ಮಿಂಚಿದ್ದಕ್ಕೆ ಚಿಂತಿಸಿ.. ತಮ್ಮ ಈಗಿನ ಹಾಗೂ ಮುಂದಿನ ಬದುಕಿನ ನೆಮ್ಮದಿಯನ್ನು ಹಾಳು ಮಾಡಿಕೊಂಡರೇ..? ತಿಳಿಯಲು ಓದಿ ಮಿಂಚಿದ್ದಕ್ಕೆ ಚಿಂತಿಸಿ.. ಕಾದಂಬರಿಯನ್ನು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ