ಮಂಗಳವಾರ, ಏಪ್ರಿಲ್ 21, 2026

ಸ್ವಾತಂತ್ರ್ಯೋತ್ತರ ಭಾರತ

ಸ್ವಾತಂತ್ರ್ಯಪೂರ್ವ ಭಾರತಕ್ಕೂ ಸ್ವಾತಂತ್ರ್ಯೋತ್ತರ ಭಾರತಕ್ಕೂ ಬಹಳಷ್ಟು ಬದಲಾವಣೆಗಳು ನಡೆದಿವೆ. ಧಾರ್ಮಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹೀಗೆ ಎಲ್ಲಾ ರೀತಿಯಲ್ಲಿಯೂ ಬಹಳಷ್ಟು ಮಹತ್ತರ ಬದಲಾವಣೆಗಳಾಗಿವೆ. ಮುಖ್ಯವಾಗಿ, ಸಂವಿಧಾನ ಚಾಲ್ತಿಗೆ ಬಂದಿತು. ರಾಜರ ಆಳ್ವಿಕೆ ಕೊನೆಗೊಂಡು ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರವೇ ಗಣರಾಜ್ಯವಾದ ಭಾರತ ಪ್ರತಿಯೊಂದು ರಂಗದಲ್ಲಿಯೂ ಮುನ್ನಡೆ ಸಾಧಿಸುತ್ತಾ ಬಂದಿದೆ. ಹಾಗೆಂದು, ಸ್ವಾತಂತ್ರ್ಯ ಪೂರ್ವದ ಸಮಸ್ಯೆಗಳು ನಿವಾರಣೆಯಾಗಿ ಎಲ್ಲವೂ ಸರಾಗವಾಯಿತು ಎಂದಲ್ಲ.. ಬದಲಾಗಿ, ಸಮಸ್ಯೆಗಳಿಗೂ ಹಲವಾರು ಹೊಸ ರೂಪವೇ ಬಂದಿತು. ಹಾಗೆಂದು, ಯಾರೂ ಸುಮ್ಮನೆ ಕೂರದಿದ್ದರೂ ಆಯಾ ಕಾಲಘಟ್ಟಕ್ಕೆ ತಕ್ಕ ಸಮಸ್ಯೆಗಳಿದ್ದೇ ಇದೆ. ಆದರೆ, ಇದು ಹೊರಗಿನಿಂದ ಬಂದಂತಹಾ ಸಮಸ್ಯೆಗಳಲ್ಲ.. ಬದಲಾಗಿ, ದೇಶದ ಆಂತರಿಕ ಸಮಸ್ಯೆಗಳು. ಆದರೆ, ಈ ಸಮಸ್ಯೆಗಳನ್ನು ನಗಣ್ಯವೆನ್ನಿಸುವಂತೆ ಮಾಡಿರುವುದು ದೇಶದ ಪ್ರಗತಿಯ ಹಾದಿ. 


ಸ್ವಾತಂತ್ರ್ಯದ ಕನಸು ಕಾಣುತ್ತಿದ್ದವರೆಲ್ಲರೂ ಜೈಲಿಗೆ ಹೋಗಿ ಬಂದು ಅಥವಾ ತೀವ್ರವಾದ ಹೋರಾಟದ ಹಾದಿಗೆ ಇಳಿದವರಲ್ಲ.. ಬದಲಾಗಿ, ತಮ್ಮ ಬರಹದ ಮೂಲಕವೂ ದೇಶಭಕ್ತಿ ಬಿತ್ತಿದವರು. ಕುವೆಂಪುರವರು ಆಗಸ್ಟ್ 15 ರ ಮಧ್ಯರಾತ್ರಿಯ ವೀಕ್ಷಕ ವಿವರಣೆ ಕೇಳುತ್ತಲೇ 'ಶ್ರೀ ಸ್ವಾತಂತ್ರ್ಯೋದಯ ಮಹಾ ಪ್ರಗಾಥಾ' ಎನ್ನುವ ಕವಿತೆಯನ್ನು ಸ್ವಾತಂತ್ರ್ಯೋತ್ತರದ ಭಾರತವನ್ನು ಕಲ್ಪಿಸಿಕೊಂಡು ಬರೆಯುತ್ತಾರೆ. ಅವರು ಸ್ವಾತಂತ್ರ್ಯ ಹಾಗೂ ಗಣರಾಜ್ಯದ ಪರಿಕಲ್ಪನೆಯಿಂದ ಜನರನ್ನು "ಶ್ರೀಸಾಮಾನ್ಯ" ಎಂಬ ಹೆಸರಿನಿಂದ ಕರೆಯುತ್ತಾರೆ. ಶ್ರೀಸಾಮಾನ್ಯರ ಶಕ್ತಿ ಈಗ ಮತ ಚಲಾವಣೆಯ ಮೂಲಕ ಪ್ರಕಟವಾಗುವುದನ್ನೂ ನಾವು ಕಾಣಬಹುದು.


ಕನ್ನಡದ ಸಾಹಿತ್ಯದಲ್ಲಿಯೂ ಇಂತಹಾ ಬದಲಾವಣೆಗಳನ್ನು ಕಾಣಬಹುದು. ಸ್ವಾತಂತ್ರ್ಯ ತಾವಂದುಕೊಂಡ ಹಾಗೆ ಇರದಿದ್ದಾಗ ಆ ಕೂಗು ವಿಷಾದದ ಛಾಯೆ ತಾಳಿದ್ದನ್ನೂ ಕಾಣಬಹುದು. ಪತ್ರಿಕೆಗಳ ಸುದ್ದಿ ಸಾರುವ ಹಾಗೂ ಜನರಿಗೆ ತಲುಪುವ, ತಲುಪಿಸುವ ಕ್ರಮವೂ ಬದಲಾದದ್ದನ್ನು ಕಾಣಬಹುದು. ಉದಾಹರಣೆಗೆ, ಕಲ್ಯಾಣಮ್ಮನವರು 'ಸರಸ್ವತಿ' ಪತ್ರಿಕೆಯನ್ನು ಮಹಿಳೆಯರಿಗಾಗಿಯೇ ಶುರು ಮಾಡಿದ್ದನ್ನು ಗಮನಿಸಬಹುದು. ಮತ್ತೊಂದು ವಿಚಾರವೆಂದರೆ ಇದರಲ್ಲಿ ಜಾಹೀರಾತು ಹಾಗೂ ಸಿನಿಮಾ ವಿಭಾಗಗಳಿರಲಿಲ್ಲ. ಹಣದ ಅಡಚಣೆಯುಂಟಾದಾಗಲೂ ಮತ್ತೆ ಸಾವರಿಸಿಕೊಂಡು ಎಲ್ಲರಿಗೂ ತಲುಪಿದ್ದು ಅದ್ಭುತ. ಅಲ್ಲಿಂದ ಇಂದಿನ ದಿನಮಾನಗಳನ್ನು ಕಂಡಾಗ ಟಿ. ಆರ್. ಪಿ ಗಾಗಿ ತಲುಪುತ್ತಿರುವ, ಅದಕ್ಕಾಗಿಯೇ ನೀಡುವ ಸುದ್ದಿಗಳನ್ನೂ ಕಾಣಬಹುದು. ಬದಲಾವಣೆ ಕೇವಲ ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ಮಾತ್ರವಲ್ಲದೇ, ಸ್ವಾತಂತ್ರ್ಯ ಸಿಕ್ಕ ಆರಂಭಿಕ ದಿನಗಳಿಗೂ ಪ್ರಸ್ತುತ ಬದುಕಿಗೂ ಬದಲಾದ ಪರಿಯನ್ನೂ ಗಮನಿಸಬಹುದು. ಹೊಸತು ದಕ್ಕದೆ, ಹಳತು ಉಳಿಯದೇ ನಿಂತ ಪತ್ರಿಕೆಗಳನ್ನು ಸಹಾ ಗಮನಿಸಬಹುದು. 


1971 ರ ಕಸ್ತೂರಿಯಲ್ಲಿ ಮಾರುತಿ ರಾವ್ ಅವರು ಸ್ವಾತಂತ್ರೋತ್ತರ ಭಾರತ ಸಾಧಿಸಿದ್ದದರೂ ಏನು ? ಎಂಬ ಪ್ರಶ್ನೆ ಎತ್ತಿ ಬಡತನ, ಲಂಚ, ರೋಗ-ರುಜಿನಗಳ ಕುರಿತು ಪ್ರಸ್ತಾಪಿಸುತ್ತಾರೆ. ಇಂದಿಗೂ ಈ ಬರಹ ಪ್ರಸ್ತುತವೆಂದೇ ಎನ್ನಿಸಿತು. ತಂತ್ರಜ್ಞಾನದಲ್ಲಿ ಮುಂದುವರಿದರೂ ಕರೋನಾ ದಿನಗಳು ಸೃಷ್ಟಿಸಿದ ಬಿಕ್ಕಟ್ಟುಗಳನ್ನು ನೆನಪಿಸಿಕೊಳ್ಳಬಹುದು. ಈಗ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅನ್ನು ಅಂಗೈಯಲ್ಲಿ ಇಟ್ಟುಕೊಂಡಿದ್ದೇವಾದರೂ.. ವ್ಯಕ್ತಿ ಸ್ವಾತಂತ್ರ್ಯ ಇದೆಯಾದರೂ ಅದನ್ನು ದುರುಪಯೋಗಗೊಳಿಸಿಕೊಳ್ಳುವ ಆಲೋಚನೆಗಿಳಿಯಬಾರದು. ನಮ್ಮ ಸ್ವಾತಂತ್ರ್ಯ ಎಂದಿಗೂ ಸ್ವೇಚ್ಛೆಯಾಗಬಾರದು ಎನ್ನುವ ಕನಿಷ್ಠಪ್ರಜ್ಞೆಯಿಂದ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸದುಪಯೋಗವಾಗುವಂತೆ ಬಾಳೋಣ.

ಆಕರಗಳು :

ಕುವೆಂಪು ಸಾಹಿತ್ಯ ದರ್ಶನ - ಡಿ. ಎಸ್ ನಾಗಭೂಷಣ 


ಕನ್ನಡ ಪತ್ರಿಕಾಸೂಚಿ - ಡಾ. ಶ್ರೀನಿವಾಸ ಹಾವನೂರ (ಸಂಪಾದಕರು)

1971 ಮೇ ತಿಂಗಳ ಕಸ್ತೂರಿ



~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ