ಸೋಮವಾರ, ಏಪ್ರಿಲ್ 20, 2026

ಬಳ್ಳಿ ಚಿಗುರಿತು (ಪುಸ್ತಕ ಯಾನ - 261)


ಪುಸ್ತಕದ ಶೀರ್ಷಿಕೆ : ಬಳ್ಳಿ ಚಿಗುರಿತು

ಲೇಖಕರು : ದೇವಕಿ ಮೂರ್ತಿ

ಪ್ರಕಾಶಕರು : ಕಾವ್ಯಾಲಯ ಪಬ್ಲಿಶರ್ಸ್

ಎರಡನೇ ಮುದ್ರಣ : 2004

ಪುಟಗಳು : 141

ಬೆಲೆ : 70 ರೂ.


'ಉಪಾಸನೆ' ಕಾದಂಬರಿ ಆಧಾರಿತ ಚಲನಚಿತ್ರ ನೋಡಿದ್ದವರಿಗೆ ಉಪಾಸನೆ ಕಾದಂಬರಿಯ ಲೇಖಕಿ ದೇವಕಿ ಮೂರ್ತಿಯವರ ಪರಿಚಯವಿರುತ್ತದೆ. ವಸಂತ ಗಣೇಶ್ ಮೇಡಂ ಅವರ ದೇವಕಿ ಮೂರ್ತಿಯವರ ಪರಿಚಯ ಲೇಖನವನ್ನು ನೋಡಿ ಈ ಲೇಖಕಿಯ ಯಾವುದಾದರೂ ಕೃತಿ ಸಿಕ್ಕರೆ ಓದಬೇಕು ಎಂದುಕೊಂಡಿದ್ದವಳಿಗೆ ಸಿಕಿದ್ದು 'ಬಳ್ಳಿ ಚಿಗುರಿತು' ಎಂಬ ಕಾದಂಬರಿ. ಇದು ನಾನು ಓದಿದ ಅವರ ಮೊದಲನೇ ಕಾದಂಬರಿ. 


'ಬಳ್ಳಿ ಚಿಗುರಿತು' ಕಾದಂಬರಿ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದೆ. 1974ರಲ್ಲಿಯೇ ಈ ಕಾದಂಬರಿ ಸಾಹಿತ್ಯ ಜ್ಯೋತಿ ಪ್ರಕಾಶನದಿಂದ ಪುಸ್ತಕ ರೂಪದಲ್ಲಿ ಬೆಳಕು ಕಂಡಿತ್ತು. ಇದು ಎರಡನೇ ಮುದ್ರಣ.


ಚಿಕ್ಕಮಗಳೂರಿನ ಕಾಫಿ ತೋಟದ ಒಡೆಯರಲ್ಲಿ ರಘುರಾಮಯ್ಯನವರು ಗಣ್ಯರು. ಅವರಿಗೆ ಚಿತ್ರಕೂಟ ಎಸ್ಟೇಟು ವಂಶಪಾರಂಪರ್ಯವಾಗಿ ಬಂದಿತ್ತು. ಜಾನಕಮ್ಮನವರನ್ನು ಮದುವೆಯಾದ ಮೇಲೆ ರಘುರಾಮಯ್ಯ ನವನವೀನ ರೀತಿಯ ಭವ್ಯ ಮನೆಯನ್ನು ಕಟ್ಟಿಸಿದರೆ, ಜಾನಕಮ್ಮನವರು ಮನೆಯ ಸುತ್ತ ಅಂದವಾದ ಹೂದೋಟ ನಿರ್ಮಿಸಿದ್ದರು. ಪತಿ-ಪತ್ನಿಯರಿಬ್ಬರೂ ಸೇರಿ ಚಿತ್ರಕೂಟವನ್ನು ಎಲ್ಲಾ ತೋಟಗಳಿಗಿಂತ ನಯನಮನೋಹರವನ್ನಾಗಿಸಿದ್ದರು. ರಘುರಾಮಯ್ಯನವರು ಬೇರೆ ವಿಚಾರಗಳಿಗೆ ಅಷ್ಟು ತಲೆಕೆಡಿಸಿಕೊಳ್ಳುವವರಲ್ಲ. ತೋಟದ ಆರೈಕೆ ಮಾಡುತ್ತಾ, ತೋಟದ ಕೆಲಸ ನೋಡುತ್ತಾ.. ಆಳುಗಳ ಜೊತೆಗೂ ಸ್ನೇಹದ ಮಾತುಗಳನಾಡುತ್ತಾ ಅವರಿಂದ ಕೆಲಸ ತೆಗೆಯುತ್ತಿದ್ದರು. ತೋಟದಲ್ಲಿ ಕೆಲಸ ಮಾಡುತ್ತಿದ್ದ ಆಳುಗಳ ಕಷ್ಟ-ಸುಖಕ್ಕೆ ಆಗುತ್ತಿದ್ದವರು.


ಜಾನಕಮ್ಮ ಮದುವೆಯಾದ ಹೊಸದರಲ್ಲಿಯೇ ಆಕೆಯ ತಂದೆ-ತಾಯಿ ತೀರಿಕೊಂಡಿದ್ದರು. ತವರಿನಲ್ಲಿ ಈಗ ಅವರಿಗೆಂದು ಇದ್ದದ್ದು ತಮ್ಮ ಕೇಶವಮೂರ್ತಿ ಮಾತ್ರ. ಆತ ಈಗ ಬ್ಯುಸಿನೆಸ್ ಮಾಡಿಕೊಂಡು ಮುಂಬೈಯಲ್ಲಿ ನೆಲೆಸಿದ್ದ. ಮೊದಮೊದಲು ತಮ್ಮನ ಮನೆಗೆ ಹೋಗಿ ಬರುತ್ತಿದ್ದ ಜಾನಕಮ್ಮ ಇತ್ತ ಸಂಸಾರದ ಜವಾಬ್ದಾರಿ ಹೆಚ್ಚಿದ ಮೇಲೆ ಹೋಗುವುದು ಅಪರೂಪವಾಗಿತ್ತು.


 ಮದುವೆಯಾಗಿ 10 ವರ್ಷಗಳವರೆಗೂ ಈ ದಂಪತಿಗಳಿಗೆ ಮಕ್ಕಳಿರಲಿಲ್ಲ. ಪೂರ್ವಿಕರ ಆಸ್ತಿ ಹಾಗೆಯೇ ಉಳಿದು ಹೋಗುವುದಲ್ಲಾ ಎಂದು ಮನಸ್ಸಿನಲ್ಲಿ ಇಬ್ಬರಿಗೂ ಆಲೋಚನೆ ಇದ್ದೇ ಇತ್ತು, ಅದೇ ಸಮಯಕ್ಕೆ ಜಾನಕಮ್ಮನವರ ಗೆಳತಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಬಂದು ಮದುವೆಯಾದ 15 ವರ್ಷಗಳ ಮೇಲೆ ಗಂಡುಮಗುವನ್ನು ಹಡೆದದ್ದು ಕಂಡು ಜಾನಕಮ್ಮನವರಿಗೂ ಧೈರ್ಯ ಬಂದಿತ್ತು. ರಘುರಾಮಯ್ಯನವರು ಹೆಂಡತಿಗಾಗಿ ಹಾಗೂ ಮಗುವಿನ ಹಂಬಲಕ್ಕಾಗಿ ಚಿಕಿತ್ಸೆ ಕೊಡಿಸಿದ್ದರು. ಅದಾದ ನಂತರ ಅವರ ಬಹುದಿನದ ಬಯಕೆ ಕೈಗೂಡಿತ್ತು. ತಮ್ಮನ ಮಾತಿನಂತೆ ಅಲ್ಲಿಗೆ ಬಾಣಂತನಕ್ಕೆ ಹೋಗಲು ಒಪ್ಪಲಿಲ್ಲ. ಆತನ ಪತ್ನಿ ರಾಧಾ ಇನ್ನೂ ಚಿಕ್ಕವಳು ಎಂಬ ಭಾವ.


 ಈ ಸಮಯದಲ್ಲಿ ಎಸ್ಟೇಟ್ ಗೆ ರೈಟರ್ ಅಗತ್ಯವಿತ್ತು. ಯಾರಾದರೂ ಸಂಸಾರಸ್ಥರು ಬಂದರೆ ತಮಗೂ ಅನುಕೂಲವಾಗುತ್ತದೆ ಎನ್ನುವ ಮಾತನ್ನು ಅನುಮೋದಿಸಿ ಗೋಪಿನಾಥಯ್ಯನನ್ನು ನೇಮಿಸಿಕೊಂಡರು. ಆತನಿಗೆ ಆಗಷ್ಟೇ ವಿವಾಹವಾಗಿತ್ತು. ಸುಶೀಲೆ ಆತನ ಪತ್ನಿ.. ಹೆಸರಿಗೆ ತಕ್ಕಂತೆ ಶಾಂತ, ಗಂಭೀರ ಹುಡುಗಿ ಸುಶೀಲೆ ಜಾನಕಮ್ಮನವರಿಗೆ ಇಷ್ಟವಾದಳು. 


 ಜಾನಕಮ್ಮನವರ ಆಸೆಯಂತೆ ಚಿತ್ರಕೂಟಕ್ಕೆ ಒಬ್ಬ ವಾರಸುದಾರ ಬಂದ. ಅವನೇ ಮಧುಕರ. ಆಸೆಯಿಂದ ಬಂದ ಜಾನಕಮ್ಮನವರ ತಮ್ಮ, ತಮ್ಮನ ಹೆಂಡತಿ ಮಗನನ್ನು ಮುದ್ದು ಮಾಡುತ್ತಿದ್ದುದ್ದನ್ನು ಕಂಡು ಇವನೇ ನಿನ್ನ ಅಳಿಯ ಎಂದು ಜಾನಕಮ್ಮನವರು ಹೇಳಿದರು. ಮುಂದೆ ಅವರಿಗೆ ವಿಮಲೆ ಎಂಬ ಮಗಳು ಹುಟ್ಟಿದಳು. ಜಾನಕಮ್ಮನವರ ಆಸೆಗೆ ಕೋಡು ಬಂದಂತಾಗಿತ್ತು.


 ಅದೇ ಸಮಯಕ್ಕೆ ಸುಶೀಲಮ್ಮನವರಿಗೆ ಒಬ್ಬಳು ಮಗಳು ಹುಟ್ಟಿದಳು. ಮಧುಕರನಿಗೆ ಅವಳೆಂದರೆ ಬಹಳ ಇಷ್ಟ. ಪುಟ್ಟ ರಾಗಿಣಿ ಹಾಗೂ ಮಧುಕರ ಇಬ್ಬರ ಸ್ನೇಹವೂ ಬೆಳೆಯತೊಡಗಿತ್ತು. ಎರಡು ಮನೆಗಳಲ್ಲಿ ಭೇದವಿಲ್ಲದೆ ಮಕ್ಕಳು ಆಡಿ ಬೆಳೆಯುತ್ತಿದ್ದರು. ಮಧುಕರನ ಮನೆಯ ಮುಂದೆ ಇದ್ದ ಕಬ್ಬಿಣ ಹಂದರದಲ್ಲಿ ಹಬ್ಬಿಸಿದ ಬಿಳಿಯ ಗುಲಾಬಿಯ ಬಳ್ಳಿಯನ್ನು ಕಂಡರೆ ರಾಗಿಣಿಗೆ ಬಹಳ ಇಷ್ಟ. ಅವಳಿಗೆ ಬಿಳಿ ಗುಲಾಬಿ ಕಂಡರೆ ಪ್ರೀತಿ. ನನ್ನ ಜೀವ ಇದರಲ್ಲಿಯೇ ಇದೆ ಎನ್ನುತ್ತಿದ್ದಳು. "ನೀನು ಗುಲಾಬಿ ಬಳ್ಳಿಯಾದರೆ ನಾನು..?" ಎಂಬ ಮಧುಕರನ ಪ್ರಶ್ನೆಗೆ ನೀನು ಈ ಬಳ್ಳಿಗಾಸರೆಯಾದ ಕಬ್ಬಿಣದ ಹಂದರ ಎನ್ನುತ್ತಿದ್ದಳು.


 ಚಿಕ್ಕ ವಯಸ್ಸಿನಲ್ಲಿ ವಿಮಲೆ ಬಂದಾಗ ಮಧುಕರ ಅವಳೊಟ್ಟಿಗೆ ಹೋದರೆ ರಾಗಿಣಿಗೆ ಕೋಪ. ಮಧುಕರ ಇಬ್ಬರನ್ನೂ ಸಂಭಾಳಿಸುತ್ತಿದ್ದರೂ ಆತನಿಗೆ ರಾಗಿಣಿಯ ಮೇಲೆ ಹೆಚ್ಚು ಪ್ರೀತಿ. ಇತ್ತ ಮಧುಕರ ವೈದ್ಯನಾಗಲು ಹೆಚ್ಚಿನ ಓದಿಗಾಗಿ ಮನೆಯಿಂದ ದೂರ ಉಳಿಯಬೇಕಾಗಿತ್ತು. ಆವನ ಪತ್ರಗಳು ಬರುತ್ತಿದ್ದಾಗ ರಾಗಿಣಿಯ ಪ್ರಸ್ತಾಪವಿಲ್ಲದೆ ಆತನ ಪತ್ರ ಅಪೂರ್ಣ. ಆಗೆಲ್ಲಾ ರಾಗಿಣಿ ಹರ್ಷಿಸುತ್ತಿದ್ದ ಸಂದರ್ಭದಲ್ಲಿ ಸುಶೀಲಮ್ಮ ಆಗಾಗ ರಾಗಿಣಿಗೆ ತಮ್ಮ ಅಂತಸ್ತನ್ನು ನೆನಪಿಸುತ್ತಿದ್ದರು. 


ರಾಗಿಣಿ ಹುಟ್ಟಿದ ಬಹಳ ವರ್ಷಗಳ ನಂತರ ಸುಶೀಲಮ್ಮ ಗರ್ಭ ಧರಿಸಿದರು. ಅಂತೂ ಅವರ ಹೆದರಿಕೆಯೇ ನಿಜವಾಗಿ ಆ ಪ್ರಸವದಲ್ಲಿಯೇ ಅವರು ಸಾವನ್ನಪ್ಪಿದ್ದರು. ರಾಗಿಣಿ ಈಗ ತಬ್ಬಲಿಯಾಗಿದ್ದಳು. ನಾನು ಅಪ್ಪನನ್ನು ಬಿಟ್ಟು ಎಲ್ಲೂ ಹೋಗಲಾರೆ ಎನ್ನುತ್ತಾ ಚಿತ್ರಕೂಟದಲ್ಲಿಯೇ ಉಳಿದು ಅಪ್ಪನಿಗೆ ನೆರವಾಗುತ್ತಿದ್ದಳು.


 ಕ್ರಮೇಣ ರಾಗಿಣಿ ಅಜ್ಜಿಯ ಮನೆಯಲ್ಲಿ ಉಳಿಯುವುದು ಹೆಚ್ಚಾಯಿತು. ಪತ್ನಿ ಸತ್ತಿದ್ದ ಸೋದರಮಾವ ರಂಗಣ್ಣನ ಜೊತೆ ಅವಳ ಮದುವೆ ಎಂದು ಮಧುಕರನ ಮುಂದೆ ಜಾನಕಮ್ಮನವರು ಹೇಳಿದಾಗ ಮಧುಕರ ಆಗ ಹೃದಯ ಬಾಡಿಹೋಗಿತ್ತು. ತಮ್ಮ ಮಾತಿನಲ್ಲಿ ಪ್ರೀತಿ, ಪ್ರೇಮ ಎಂಬ ಪದಗಳೇ ಇರಲಿಲ್ಲ ಎಂಬ ಯೋಚನೆ ಬಂದಾಗ ಆತನಿಗೆ ನೈಜತೆಯ ಅರಿವಾಗಿತ್ತು.


 ಜಾನಕಮ್ಮನವರ ಆಸೆಯಂತೆ ಅವರ ತಮ್ಮನ ಮಗಳು ವಿಮಲೆಯನ್ನು ಮದುವೆಯಾಗಲು ಮಧುಕರ ಒಪ್ಪಲಿಲ್ಲ. ಅವಳು ಕಪ್ಪಿರುವ ಕಾರಣಕ್ಕೆ ಹಾಗೆನ್ನುತ್ತಿರಬಹುದು ಎಂದುಕೊಂಡರು. ವಿಮಲೆಯನ್ನು ಹೊರತುಪಡಿಸಿ ಆಕೆಯ ತಂದೆ-ತಾಯಿ ಮಧುಕರ ಸುಖವಾಗಿರಲೆಂದು ಹಾರೈಸಿದರು. ಆತ ಯಾರನ್ನಾದರೂ ವಿವಾಹವಾಗಿ ಸುಖವಾಗಿರಲಿ ಎಂದು ಬಯಸಿದರು. ರೂಪವಂತೆಯಾಗಿರುವ ಶಾನುಭೋಗ ಶಾಮಣ್ಣನವರ ಮಗಳು ಸರಸ್ವತಿಯನ್ನು ಸಹಾ ಮಧುಕರ ಒಪ್ಪಲಿಲ್ಲ ಆಕೆ ಈತನಿಗೆ ಗರ್ವವೆಂದುಕೊಂಡು ತಪ್ಪು ತಿಳಿದಳು. ಆಕೆ ರಾಗಿಣಿಯ ಸ್ನೇಹಿತೆ.


 ರಾಗಿಣಿಯ ಮುಂದೆ ತನ್ನ ಮನದಾಸೆಯನ್ನು ಬಿಚ್ಚಿಟ್ಟ ಮಧುಕರ. ರಾಗಿಣಿ ತನ್ನ ಮಾವನಿಗೆ ಈ ವಿಚಾರವನ್ನು ತಿಳಿಸುತ್ತೇನೆ ಎಂದು ಹೇಳಿ ಹರ್ಷಗೊಂಡಳಾದರೂ.. ಜಾನಕಮ್ಮನವರು ಈ ಮದುವೆಗೆ ಒಪ್ಪದ ಕಾರಣ ಮಧುಕರ ಅವಳ ಹೃದಯವನ್ನು ಮುರಿಯಬೇಕಾಗಿ ಬಂತು. 


 ಜಾನಕಮ್ಮನವರು ರಾಗಿಣಿಯನ್ನು ಮಗಳಂತೆ ಪ್ರೀತಿಸಿದ್ದರೂ.. ಆಕೆಯನ್ನು ಸೊಸೆಯನ್ನಾಗಿಸಿಕೊಳ್ಳಲು ಏಕೆ ಒಪ್ಪಲಿಲ್ಲ..? ಅದು ರಾಗಿಣಿಯ ಕೊರತೆಯೋ ಅಥವಾ ಬೇರೆ ಏನಾದರೂ ಕಾರಣವಿತ್ತೇ..?


 ಮಧುಕರ ಅಮೆರಿಕಗೆ ಹೋಗಿ ಬರುವಷ್ಟರಲ್ಲಿ ಎಲ್ಲವೂ ಬದಲಾಗಿತ್ತು. ರಾಗಿಣಿ ಅವಿವಾಹಿತೆಯಾಗಿಯೇ ಉಳಿದಿದ್ದಳು. ತನ್ನನ್ನು ತಿರಸ್ಕರಿಸಿದ ಜಾನಕಮ್ಮನವರ ಕೊನೆಯ ದಿನಗಳಲ್ಲಿ ರಾಗಿಣಿಯೇ ನಿಷ್ಕಲ್ಮಶ ಮನಸ್ಸಿನಿಂದ ಅವರ ಸೇವೆ ಮಾಡಿದ್ದಳು. ಮಧುಕರನಿಗೆ ತಾಯಿ ತೀರಿಕೊಂಡ ವಿಷಯವೇ ತಿಳಿದಿರಲಿಲ್ಲ. ಜಾನಕಮ್ಮನವರ ಸಾವಿಗೆ ಕಾರಣವೇನು..?


 ರಂಗಣ್ಣ ರಾಗಿಣಿಯನ್ನು ವಿವಾಹವಾಗಲು ಒಪ್ಪಿದ್ದೇಕೆ..? ಮಧುಕರ ಆಕೆಯನ್ನು ವಿವಾಹವಾಗುತ್ತೇನೆಂದಾಗ ಆತ ವಿವಾಹವಾಗದಿದ್ದರೂ.. ನಿಜವಾಗಿಯೂ ಆತನ ಮನಸ್ಸಿನ ಭಾವಗಳೇನಿದ್ದವು..?


 ತನ್ನ ತಾಯಿಯು ತನ್ನ ನಿರ್ಧಾರದ ಕುರಿತು ಪಶ್ಚಾತ್ತಾಪ ಪಟ್ಟುಕೊಂಡಿದ್ದರು ಎಂದು ತಿಳಿದ ಮಧುಕರ ಮತ್ತೆ ರಾಗಿಣಿಯನ್ನು ವಿವಾಹವಾಗಲು ಕೇಳಿಕೊಂಡ. ರಘುರಾಮಯ್ಯನವರೂ ಇದಕ್ಕೆ ಒಪ್ಪಿದ್ದರು. ರಂಗಣ್ಣ ರಾಗಿಣಿಯನ್ನು ಒಪ್ಪಿಸಲು ಮನಃಪೂರ್ವಕವಾಗಿ ಪ್ರಯತ್ನಪಟ್ಟ. ಆದರೂ.. ರಾಗಿಣಿ ಈ ಮದುವೆಯಾಗಲು ಒಪ್ಪದೇ ಇದ್ದದ್ದೇಕೆ..?


'ಬಳ್ಳಿ ಚಿಗುರಿತು' ಎಂಬ ಶೀರ್ಷಿಕೆಯನ್ನು ಕಂಡಾಗ ಇದು ಸುಖಾಂತ್ಯದ ಕಥೆ ಊಹಿಸಬಹುದು. ಒಂದು ದೊಡ್ಡ ಬದಲಾವಣೆಯ ಮೂಲಕ ಹೊಸ ಆರಂಭವೊಂದಕ್ಕೆ ಒತ್ತು ನೀಡಿ, ತಮ್ಮ ಉದಾತ್ತ ಆಲೋಚನೆಯನ್ನು ಬಿಡಿಸಿಟ್ಟಿದ್ದಾರೆ ಲೇಖಕಿ.


 ಇಲ್ಲಿ ಮಧುಕರನ ಪಾತ್ರದಷ್ಟೇ ರಂಗಣ್ಣನ ಪಾತ್ರಕ್ಕೂ ತೂಕವಿದೆ. ತನ್ನ ಉದಾತ್ತ ಆಲೋಚನೆಗಳಿಂದ, ಗಟ್ಟಿ ನಿಲುವುಗಳಿಂದ ರಂಗಣ್ಣನೇ ಹೆಚ್ಚು ಆಪ್ತವಾದ ಪಾತ್ರವೆನ್ನಿಸಿತು. 


 ಈ ಕಾದಂಬರಿಯಲ್ಲಿ ಒಂದು ಸಂದೇಶವಿದೆ. ಅದು ಯಾವ ಪಾತ್ರ ಯಾವ ಪ್ರಸಂಗ ಎಂಬುದನ್ನು ನೀವೇ ಓದಬೇಕು. ಆ ಸಂದೇಶವನ್ನು ಕುರಿತು ಹೇಳದಿದ್ದರೆ ಈ ಕಾದಂಬರಿಯ ಕುರಿತು ಹೇಳುವುದು ಅಪೂರ್ಣವಾಗುತ್ತದೆ ಎನ್ನಿಸಿತು. ಹೆಣ್ಣಿನ ಶೀಲಕ್ಕೆ ಬಹಳ ಮಹತ್ವವಿದೆ ಎನ್ನುವುದು ಹೌದಾದರೂ.. ಅತ್ಯಾಚಾರವಾದ ಹೆಣ್ಣಿನ ಬದುಕು ಅಷ್ಟಕ್ಕೇ ನಿಲ್ಲುವುದಿಲ್ಲ ಬದಲಾಗಿ ಆಕೆಗೊಂದು ಒಳ್ಳೆಯ ಬದುಕು ಸಿಗುತ್ತದೆ. ಹಾಗೆ ಸಿಗುವುದು ಗಂಡಿನ ಧೀಮಂತ ನಡೆಯಿಂದ. ಅಂದಿನ ದಿನಗಳಲ್ಲಿಯೇ ಇಂತಹ ಒಂದು ಧೀಮಂತ ನಿಲುವಿನ ಮೂಲಕ ಕಾದಂಬರಿಯ ಮೂಲಕ ಒಳ್ಳೆಯ ಸಂದೇಶ ನೀಡಿದ್ದಾರೆ ಲೇಖಕಿ. ಒಂದೊಳ್ಳೆ ಕಾದಂಬರಿಯ ರಮ್ಯವಾದ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ