ಪುಸ್ತಕದ ಶೀರ್ಷಿಕೆ : ಮಾಘದ ಮೋಡ
ಲೇಖಕರು : ಈಚನೂರು ಜಯಲಕ್ಷ್ಮಿ
ಪ್ರಕಾಶಕರು : ಸಾಹಿತ್ಯ ಸಂಗಮ
ಪುಟಗಳು : 226
ಇದು ನಾನು ಓದಿದ ಈಚನೂರು ಜಯಲಕ್ಷ್ಮಿಯವರ ಮೊದಲನೇ ಪುಸ್ತಕ. ಮಾಘದ ಮೋಡ ಎನ್ನುವ ಕಾದಂಬರಿಯ ಶೀರ್ಷಿಕೆ ಕಂಡು ಕಥಾವಸ್ತು ಏನಿರಬಹುದು ಎಂದುಕೊಂಡು ಓದುತ್ತಾ ಹೋಗುತ್ತಿದ್ದಂತೆ ಈ ಶೀರ್ಷಿಕೆಗೆ ಎರಡು ಅರ್ಥವಿದೆ ಎನ್ನಿಸಿತು. ಇದು ಇಚ್ಛೆಯನ್ನು ಮೀರಿ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ನಟಿಯಾದವಳೊಬ್ಬಳ ಬದುಕಿನ ಕಥೆ. ಆಕೆ ನಟಿಸಿದ್ದ ಕೊನೆಯ ಚಿತ್ರ 'ಮಾಘದ ಮೋಡ' ಎಂಬುದಾಗಿ. ಅದಷ್ಟೇ ಶೀರ್ಷಿಕೆಗೆ ಕಾರಣವಾಗಿರಲಾರದು ಎನ್ನಿಸಿತು. ಮಾಘ ನಕ್ಷತ್ರ ಸಾರ್ವಭೌಮತ್ವವನ್ನು ಸೂಚಿಸುತ್ತದೆ ಎನ್ನುತ್ತಾರೆ. ಮನೆಯಲ್ಲಿ ಮೋಡ ಕವಿದ ವಾತಾವರಣ ಹಾಗೂ ಸಾರ್ವಭೌಮತ್ವದ ಅಡಿಯಲ್ಲಿ ನಲುಗಿದ ಹೆಣ್ಣೊಬ್ಬಳ ಜೀವನಗಾಥೆ ಎಂದರೂ ತಪ್ಪಾಗಲಾರದೇನೋ..
ಶಿಸ್ತಿನ ತಾರೆ ಎಂದೇ ಹೆಸರಾಗಿದ್ದ ಪದ್ಮಿನಿ ಈಗ 'ಪಂಚವಟಿ'ಯಲ್ಲಿ ಅಶೋಕವನದ ಸೀತೆಯಂತೆ ಬದುಕುತಿದ್ದಳು. ತನ್ನ 29ನೆಯ ವಯಸ್ಸಿನಲ್ಲಿ ನಟನೆಗೆ ನಿವೃತ್ತಿ ಹೇಳಿ ತನ್ನದೇ ಆದ ಫಾರಂ ಒಂದರಲ್ಲಿ ಕೃಷಿ ಮಾಡುತ್ತಾ.. ಸನ್ಯಾಸಿನಿಯಂತೆ ಜೀವನ ನಡೆಸುತ್ತಿದ್ದಳು. ಆಕೆಯನ್ನು ಸಂದರ್ಶನ ಮಾಡಲು ಬಂದಿದ್ದ ಮಾನಸ ಪತ್ರಿಕೆಯ ಶ್ಯಾಮ್ ಜೊತೆಗೆ ಮಾತನಾಡುತ್ತಾ.. ಆಕೆಯ ಮನಸ್ಸಿನ ಮಾತುಗಳು ಪ್ರಶ್ನೆಗೆ ಉತ್ತರವಾಗಿ ಬರುತ್ತಿರುವಾಗ, ಆಕೆ ಎಷ್ಟು ನೇರಾನೇರ ಎಂಬುದನ್ನು ತೋರುತ್ತಾರೆ. ಹತ್ತು ವರ್ಷ ಚಿತ್ರರಂಗದಲ್ಲಿ ಬಲವಾಗಿ ಕಾಲೂರಿ ನಿಂತಿದ್ದವಳು ಹೀಗೆ ಎಲ್ಲರಿಂದ ದೂರವಾಗಿ, ಒಂಟಿಯಾಗಿ ನಿಂತಿದ್ದವಳ ಬದುಕಿನ ಕುರಿತು ಹಲವರಿಗೆ ಇದ್ದ ಪ್ರಶ್ನೆಯೇ ಶ್ಯಾಮ್ ನಿಗೂ ಇತ್ತು. ಆತ ಕೇಳಿದ್ದೇನು ? ತಾನು ಉತ್ತರಿಸಿದ್ದೇನು ? ಎಂಬುದೇ ಅರಿವಿರಲಿಲ್ಲ ಪದ್ಮಿನಿಗೆ. ಶ್ವೇತವರ್ಣದ ತನ್ನ ಸರಳ ಭಾವಚಿತ್ರವನ್ನು ತೆಗೆದುಕೊಳ್ಳಲು ಅನುಮತಿ ಇಟ್ಟವಳು ಅಷ್ಟು ಪ್ರಸಿದ್ಧದ ಉತ್ತುಂಗದಲ್ಲಿದ್ದ ನಟಿಯೆಂದು ಆತನಿಗೆ ನಂಬಲಾಗಲಿಲ್ಲ. ಆದರೆ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವ ಮಾತು ಶ್ಯಾಮ್ ನಿಗೆ ಅರಿವಾಗಿತ್ತು. ತನ್ನ ಪತ್ನಿ ಶೋಭಾ ಕೂಡ ಪದ್ಮಿನಿಯ ಫ್ಯಾನ್ ಆಗಿದ್ದವಳು. ಆಕೆಯ ಕುರಿತು ಹೇಳುತ್ತಾ.. ಆಕೆಯನ್ನು ನಿಮ್ಮ ಭೇಟಿಗೆ ಕರೆತರಬಹುದಾ ಎಂದು ಕೇಳಿದಾಗ, ಪದ್ಮಿನಿ ಆತನ ಕುರಿತು ವಿಚಾರಿಸಿದ್ದಳು. ಆತನಿಗೆ ಇದ್ದದ್ದು ಒಬ್ಬನೇ ಮಗ ಆತನ ಹೆಸರು ಪ್ರದ್ಯುಮ್ನನೆಂದು ತಿಳಿದಾಗ ಮನಸ್ಸು ಮುದುಡಿತ್ತು.
ಆಕೆಗೆ ತನ್ನ ತೀರಿ ಹೋದ ಎರಡು ವರ್ಷದ ಮಗು ಪ್ರದ್ಯುಮ್ನನ ನೆನಪಾಗಿತ್ತು. ಶ್ಯಾಮ್ ಹೋದ ತಕ್ಷಣ ಮನಸ್ಸು ಭಾರವಾದಂತಾಗಿ ಗುಂಡಪ್ಪ ಮಾಡಿದ್ದ ಅಡುಗೆಯನ್ನು ಬೇಡವೆಂದು ನೆನಪುಗಳಲ್ಲಿ ಕಳೆದು ಹೋಗಿದ್ದಳು.
ರಾಮಾವಧಾನಿಗಳು ಹಾಗೂ ಸುಬ್ಬಮ್ಮನವರ ಕೊನೆಯ ಮಗಳು ಪದ್ಮಿನಿ. ನಾಲ್ಕು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡುಮಕ್ಕಳ ನಂತರ ಹುಟ್ಟಿದವಳು. ಮಗುವಿನ ಚೆಂದ ಕಂಡು ರಾಮಾವಧಾನಿಗಳು ಪದ್ಮಿನಿ ಜಾತಿಯ ಹೆಣ್ಣಾಗುತ್ತಾಳೆ ಎಂದು ಹೆಸರಿಟ್ಟಿದ್ದರು. ಆಕೆ ನಟನಾರಂಗಕ್ಕೆ ಕಾಲಿಟ್ಟು ಪ್ರಖ್ಯಾತ ನಟಿಯಾಗುತ್ತಾಳೆ ಎಂಬುದರ ಅರಿವು ಅಂದು ಯಾರಿಗೂ ಇರಲಿಲ್ಲ.
ಪುಟ್ಟ ಪದ್ಮಿನಿ ಮನೆಯವರ ಮಾತಿಗೆ ಪದ್ದಿ-ಪೆದ್ದಿಯಾಗಿದ್ದಳು. ಆಕೆಗೆ ಅದರ ಅರಿವು ಮೂಡಿಸಿ, ಆಕೆಯನ್ನು ಪದ್ಮಿನಿಯನ್ನಾಗಿಸಿದ್ದು ಪಕ್ಕದ ಮನೆಯ ಪುಟ್ಟ ಗೆಳೆಯ ಕೇಶವ. ಕೇಶವನ ಮನಸ್ಸು ಪದ್ಮಿನಿಯತ್ತ ಸೆಳೆದಂತೆ, ತನ್ನೆಲ್ಲಾ ವಿಚಾರಗಳನ್ನು ಹಂಚಿಕೊಳ್ಳಲು ಕಾಯುತ್ತಿದ್ದಳು ಪದ್ಮಿನಿ. ಬೆಳೆಯುತ್ತಿದ್ದಂತೆ ಇಬ್ಬರ ನಡುವಿನ ಗೆಳೆತನ ಅವರಿಗೇ ಅರಿವಿಲ್ಲದಂತೆ ಪ್ರೀತಿಯಾಗುತ್ತಿತ್ತು. ಇತ್ತ ಕೇಶವನ ಅಮ್ಮ ಸೋನಾಬಾಯಿ ಆಗಾಗ ಎಚ್ಚರಿಸುತ್ತಿದ್ದರೆ.. ಅತ್ತ ಸುಬ್ಬಮ್ಮನವರಿಗೆ ಅದರ ಅರಿವಿರಲಿಲ್ಲ.
ವಯಸ್ಸು ಹೆಚ್ಚಿದಂತೆ ಇಬ್ಬರಲ್ಲೂ ಸಂಕೋಚ ಹೆಚ್ಚಾಗುತ್ತಿತ್ತು. ಕೇಶವನ ಪ್ರೀತಿ ಪದ್ಮಿನಿಗೆ ತಿಳಿದರೂ.. ಆಕೆ ಮುಂದುವರಿಯುವಷ್ಟು ಧೈರ್ಯವಂತೆಯಲ್ಲ. ಅಕ್ಕ ಮೀನಾಕ್ಷಿ ಹೊತ್ತು ತಂದ ಸಂಬಂಧವನ್ನು ನೋಡಲು ಹೊರಟರು. ಆತ ಮೀನಾಕ್ಷಿಯ ಗಂಡನ ಶಾಲೆಯಲ್ಲಿಯೇ ಶಿಕ್ಷಕನಾಗಿದ್ದ ನಟರಾಜ.
ಶಕುಂತಲಮ್ಮ ಹಾಗೂ ಸುಬ್ಬರಾಯರ ಮಗ. ಅವರ ಇಬ್ಬರು ಗಂಡುಮಕ್ಕಳು ಹಾಗೂ ಒಬ್ಬಳು ಮಗಳ ಮದುವೆಯಾಗಿತ್ತು. ನಟರಾಜನ ನಂತರ ತಂಗಿ ಶಶಿಯ ಮದುವೆಯಾಗಬೇಕಿತ್ತು. ಮೊದಲ ನೋಟಕ್ಕೆ ನಟರಾಜ ಪದ್ಮಿನಿಯ ಚೆಲುವಿಗೆ ಮರುಳಾದರೆ.. ಅವನ ತಂದೆ-ತಾಯಿ ಅವರ ಮನೆಯವರ ಸೌಜನ್ಯ, ಸೌಶೀಲ್ಯಕ್ಕೆ ಬೆರಗಾದರು. ಹಳ್ಳಿಯ ಬೀಗತನ ಕಲ್ಪವೃಕ್ಷವೆಂದು ಅವರ ಭಾವನೆ. ಶಶಿ ಮಾತ್ರ ಮತ್ಸರದಿಂದ ಮೂಗು ಮುರಿದಳು. ನಟರಾಜ ಶಶಿಯನ್ನು ಪದ್ಮಿನಿಯ ಓದಿದ ಅಣ್ಣನಿಗೆ ಕೊಡಬೇಕೆಂಬ ಮಾತು ಹೇಳಿದರೂ ಸಿಟಿಯ, ಸಮುದ್ರದ ತುಡಿತಕ್ಕೆ ಶಶಿ ನಿರಾಕರಿಸಿದರೆ.. ಆಕೆಯ ತಾಯಿ ಕೊಟ್ಟು-ತೆಗೆದುಕೊಳ್ಳುವ ಸಂಬಂಧ ಬೇಡವೆಂದರು.
ಸುಭದ್ರಮ್ಮನವರ ಸೂಕ್ಷ್ಮಕ್ಕೆ ಈ ಸಂಬಂಧ ಒಪ್ಪಿಗೆಯಿರಲಿಲ್ಲ. ತಾಯಿಯ ತಾಳಕ್ಕೆ ತಕ್ಕಂತೆ ಕುಣಿಯುವ ಮಗ, ಮನೆಯಲ್ಲಿ ಯಜಮಾನಿಯ ಆಳ್ವಿಕೆ ಆಕೆಗೆ ಸರಿ ಹೋಗಿರಲಿಲ್ಲ. ಆದರೆ, ಅವಧಾನಿಗಳು ಹಾಗೂ ಪದ್ಮಿನಿಯ ಒಪ್ಪಿಗೆ ಇದ್ದುದರಿಂದ ವಿವಾಹ ನಡೆಯಿತು. ಈ ವಿವಾಹಕ್ಕೆ ಮನಸ್ಫೂರ್ತಿ ಒಪ್ಪದಿದ್ದವರ ಪಟ್ಟಿಯಲ್ಲಿ ಕೇಶವನೂ ಇದ್ದ.
ವಿವಾಹದ ನಂತರವೂ ಅತ್ತೆ-ಸೊಸೆಯರ ನಡುವೆ ವಿರಸವಿರಲಿಲ್ಲ. ಇಬ್ಬರ ಹಿರಿಯ ಸೊಸೆಯಂದಿರಂತೆ ದೂರ ಹೋದರೆ ಎಂಬ ಭಯವಿತ್ತು ಶಕುಂತಲಮ್ಮನವರಿಗೆ. ಸಮಸ್ಯೆ ಎದುರಾದದ್ದು ಆಕೆ ನಟರಾಜನ ಜೊತೆಗೆ ಪಾರ್ಟಿಗೆ ಹೋಗಿ ಬಂದ ಮೇಲೆ. ಶಶಿಯೇ ಅಣ್ಣನ ಅಭಿರುಚಿಗೆ ತಕ್ಕಂತೆ ಪದ್ಮಿನಿಯನ್ನು ಅಲಂಕರಿಸಿದ್ದರಿಂದ.. ಮೊದಲೇ ಸುಂದರಿಯಾಗಿದ್ದ ಅವಳು ಮತ್ತಷ್ಟು ಸುಂದರಿಯಾಗಿ ಕಂಗೊಳಿಸಿದಳು.
ಅಂದು ಆ ಸಮಾರಂಭದಲ್ಲಿ ದೂರದರ್ಶನದ ನಾಟಕ ವಿಭಾಗದಲ್ಲಿದ್ದವರು ನಟರಾಜ ದಂಪತಿಗಳನ್ನು ಪರಿಚಯ ಮಾಡಿಕೊಂಡು ಒಂದು ಆಫರ್ ಮಾಡುತ್ತಾರೆ. ದೂರದರ್ಶನ ಪ್ರಸಾರ ಮಾಡುವ ಕಾರ್ಯಕ್ರಮಗಳಲ್ಲಿ ನೀವೇಕೆ ಭಾಗವಹಿಸಬಾರದು ಎಂದಾಗ ನಟರಾಜನ ಬಹುಕಾಲದ ಆಸೆ ಈಡೇರಿದಂತಾಗುತ್ತದೆ. ಆದರೆ, ಅದು ಪದ್ಮಿನಿಯ ಆಸೆಯಾಗಿರುವುದಿಲ್ಲ. ಆಕೆ ಸಂಪ್ರದಾಯಬದ್ಧ ಕುಟುಂಬದಲ್ಲಿ ಬೆಳೆದವಳು. ಶಾಲಾ ನಾಟಕಕ್ಕೇ ಆಕೆಯ ತಂದೆ ಒಪ್ಪಿಗೆ ನೀಡಿರುವುದಿಲ್ಲ. ಇದು ಆಕೆಯ ಮನಸ್ಸಿನ ವಿರುದ್ಧವಾಗಿದ್ದು.. ಇದು ನಟರಾಜ ಇದಕ್ಕೆ ಒಪ್ಪಿಗೆ ನೀಡಿದಾಗ ಮನಸ್ಸು ಮುದುಡುತ್ತದೆ. ಅತ್ತೆ-ಮಾವನಾದರೂ ಇದಕ್ಕೆ ವಿರೋಧಿಸುತ್ತಾರೆ ಎಂದುಕೊಂಡರೆ, ನಟರಾಜನ ತಂದೆಯ ಮಾತು ನಡೆಯುವುದಿಲ್ಲ. ತಾಯಿ ಹಣದಾಸೆ ಹಾಗೂ ಪ್ರಸಿದ್ಧಿಯ ಆಸೆಗೆ ಒಪ್ಪುತ್ತಾರೆ. ಪದ್ಮಿನಿಯ ತವರಿನವರನ್ನು ನಟರಾಜ ಕಡೆಗಣಿಸಿ, ಅವರೆಲ್ಲರಿಂದ ಈ ವಿಚಾರವನ್ನು ಮುಚ್ಚಿಡುತ್ತಾನೆ. ಪದ್ಮಿನಿ ಅದೇ ನಗರದಲ್ಲಿದ್ದ ತನ್ನ ಅಕ್ಕ ಮೀನಾಕ್ಷಿಗೆ ವಿಚಾರ ಹೇಳಿದ್ದು ಸಹಾ ಆತನಿಗೆ ಹಿಡಿಸುವುದಿಲ್ಲ.
ಸೌಂದರ್ಯದ ಜೊತೆ ಪದ್ಮಿನಿಯ ನಟನೆಯೂ ಗೆದ್ದಿರುತ್ತದೆ. ಮೊದಲ ಪ್ರದರ್ಶನ ದೂರದರ್ಶನದಲ್ಲಿ ಬಂದಾಗ ನಟರಾಜನ ಮನಸ್ಸು ಕದಡುತ್ತದೆ. ತನಗಿಂತ ಪದ್ಮಿನಿಯನ್ನೇ ಎಲ್ಲರೂ ಹೊಗಳಿದಾಗ ಮನಸ್ಸು ಕೆಡಿಸಿಕೊಂಡರೂ.. ಹೆಂಡತಿಯಿಂದ ಬರುವ ಸಂಭಾವನೆಯ ಕಡೆಗಿದ್ದ ಕಣ್ಣು ಅದೆಲ್ಲವನ್ನೂ ಕಡೆಗಣಿಸುತ್ತದೆ. ನಟರಾಜ ಹೆಚ್ಚು-ಹೆಚ್ಚು ಹಣದತ್ತ ವಾಲುತ್ತಿದ್ದಂತೆ ಆತನ ತಾಯಿಯು ಕುಮ್ಮಕ್ಕು ಕೊಡುತ್ತಾಳೆ. ಈ ಮಧ್ಯೆ ಪದ್ಮಿನಿ ಗರ್ಭಿಣಿಯಾದಾಗಲೂ ನಟರಾಜ ತೆಗೆಸುವಂತೆ ಹೇಳುತ್ತಾನೆ. ಆದರೆ, ಪಟ್ಟು ಹಿಡಿದ ಪದ್ಮಿನಿ ಅದರಿಂದ ಹಿಂದೆ ಸರಿಯುವುದಿಲ್ಲ. ತವರಿಗೆ ಹೋದವಳಿಗೆ ಅಲ್ಲಿ ಅಷ್ಟರಲ್ಲಿ ವಿಚಾರ ತಿಳಿದಿರುವುದರಿಂದ ನೀನು ಗಂಡನನ್ನು ಧಿಕ್ಕರಿಸಿ ನಡೆಯಬೇಕಿತ್ತು ಎಂಬ ಮಾತು ಬಂದಾಗ ಕುಸಿದು ಹೋಗುತ್ತಾಳೆ. ಆದರೆ, ಅದು ಸಾಧ್ಯವಿರುವುದಿಲ್ಲ ಎಂದು ಅರ್ಥ ಮಾಡಿಸಲು ಸೋಲುತ್ತಾಳೆ. ಮಗ ಪ್ರದ್ಯುಮ್ನ ಹುಟ್ಟಿದ ನಂತರವೂ ಆಕೆಯ ಪ್ರತಿ ನಡೆಯನ್ನು ನಟರಾಜ ನಿರ್ದೇಶಿಸುತ್ತಾನೆ.
ತವರಿನ ನಂಟು ಸರಿಯಾಗದೆ, ಇತ್ತ ಮಗನಿಗೆ ತಾಯಿಯ ಪ್ರೀತಿಯನ್ನೂ ಕೊಡಲಾಗದೆ ಒತ್ತಾಯಕ್ಕೆ ಸಿನಿಮಾರಂಗಕ್ಕೆ ಇಳಿಯುತ್ತಾಳೆ ಪದ್ಮಿನಿ. ದಿನೇದಿನೇ ಪ್ರಸಿದ್ಧಿಯ ಉತ್ತುಂಗಕ್ಕೆ ಏರುತ್ತಿದ್ದರೂ ಮನಸ್ಸಿನಲ್ಲಿ ನೆಮ್ಮದಿಯಿರುವುದಿಲ್ಲ. ಶಶಿಯ ವಿವಾಹವಾಗಿರುತ್ತದೆ. ಅಂತಸ್ತು ಏರಿರುತ್ತದೆ. ಗಂಡನ ಮನೆಯ ಕಡೆಯವರೆಲ್ಲರೂ ತನ್ನ ಹಣದಿಂದಲೇ ಮೆರೆಯುತ್ತಿರುವಾಗ, ತವರಿಗೆ ಹೋಗಲೂ ಸ್ವಾತಂತ್ರ್ಯವಿಲ್ಲದೆ, ತನ್ನವರಿಗೆ ಏನನ್ನೂ ಕೊಂಡೊಯ್ಯಲಾಗದ ಅಸಹಾಯಕತೆಯಲ್ಲಿ ತೊಳಲುತ್ತಾಳೆ.
ಪದ್ಮಿನಿ ಇಲ್ಲದ ವೇಳೆಯಲ್ಲಿ ಮಗ ಪ್ರದ್ಯುಮ್ನ ಸಾವನ್ನಪ್ಪಿದಾಗಲೂ ನಟರಾಜನ ಕಟು ಹೃದಯ, ಅತ್ತೆಯ ನಡೆಯಿಂದ ಮನಸ್ಸಿಗೆ ಹೇಳಲಾಗದ ಘಾಸಿಯಾಗುತ್ತದೆ. ಅಲ್ಲದೆ, ತವರಿನಿಂದಲೂ ಸಿಕ್ಕಿದ್ದು ತಿರಸ್ಕಾರ.
ಕಾಲ ಸಾಗುತ್ತಾ ಹೋಗುತ್ತದೆ. ಹತ್ತು ವರ್ಷ ಚಲನಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದ ಪದ್ಮಿನಿ ತನ್ನ ಕೊನೆಯ ಚಲನಚಿತ್ರ 'ಮಾಘದ ಮೋಡ'ವನ್ನು ಮುಗಿಸಿ 'ಪಂಚವಟಿ'ಯತ್ತ ತೆರಳುತ್ತಾಳೆ. ಅದಕ್ಕೆ ಕಾರಣವಾದ ಘಟನೆ ಏನು..? ಸಾರ್ವಭೌಮತ್ವದ ತನ್ನ ಗಂಡನಿಂದ ಆಕೆ ತಪ್ಪಿಸಿಕೊಂಡದ್ದೇಕೆ..? ಆತನ ಬಿಗಿ ಮುಷ್ಟಿಯಿಂದ ಪಾರಾದ ಬಗೆ ಹೇಗೆ..?? ಇಲ್ಲಿ ಆಕೆಯ ಮಾವನ ಅಸಹಾಯಕತೆ ಹಾಗೂ ಪದ್ಮಿನಿಯ ಪರಿಸ್ಥಿತಿ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ.
ಇದಿಷ್ಟು ಕಾದಂಬರಿಯ ಒಂದು ತೂಕವಾದರೆ.. ಇದರ ನಂತರದ್ದೇ ಮತ್ತೊಂದು ತೂಕ ಎನ್ನಿಸಿತು. ಏಕೆಂದರೆ, ಈ ಕಾದಂಬರಿಯ ಅಂತ್ಯ ಅಷ್ಟು ಮನೋಜ್ಞವಾಗಿದೆ. ಕೇವಲ ಚಿತ್ರನಟಿಯೊಬ್ಬಳ ಬದುಕಿನಲ್ಲಿ ಪ್ರೀತಿ ಸಿಗದ, ಕೇವಲ ಕೀರ್ತಿಯ ಉತ್ತುಂಗವಷ್ಟೇ ಚಿತ್ರಿತವಾಗಿದ್ದರೆ ಈ ಕಾದಂಬರಿ ಅಷ್ಟು ಪರಿಣಾಮಕಾರಿಯಾಗುತ್ತಿರಲಿಲ್ಲವೇನೋ.. ಆದರೆ, ಅದರ ನಂತರ ಆ ಒಂಟಿತನದಲ್ಲಿ, ಏಕಾಂಗಿತನದಲ್ಲಿ ಅರಸಿದ ಪ್ರೀತಿ ಸಿಗದಾದಾಗ.. ನಂತರ, ತನ್ನ ಹಣದಿಂದ ಹತ್ತಿರವಾದವರು ಆಕೆಯನ್ನು ನಡೆಸಿಕೊಳ್ಳುವ ರೀತಿ ಎಲ್ಲವನ್ನೂ ಕಂಡು ಆಕೆ ತೆಗೆದುಕೊಳ್ಳುವ ತೀರ್ಮಾನ ಮಾದರಿಯಾಗಿದೆ ಎನ್ನಿಸಿತು. ಅದೇನು ಎಂದು ತಿಳಿಯಲು ಈ ಕಾದಂಬರಿಯನ್ನು ನೀವೇ ಓದಿ. ಇಷ್ಟವಿಲ್ಲದ ಬದುಕನ್ನು ಬದುಕಿ, ನಂತರ ಅದನ್ನು ಮತ್ತೆ ನೋಡುವ ಪರಿ ವಿಭಿನ್ನವಾದದ್ದು.
ಇಲ್ಲಿ ಪದ್ಮಿನಿಯಷ್ಟೇ ಕೇಶವನ ಪಾತ್ರಕ್ಕೂ ಪ್ರಾಮುಖ್ಯತೆ ಇದೆ. ಪದ್ಮಿನಿ ವಿವಾಹವಾದ ನಂತರ ಆತನ ತೊಳಲಾಟ, ಅನ್ಯಮನಸ್ಕತೆ ಹಾಗೂ ಆತನ ಮನಸ್ಥಿತಿ, ಮನೆಯ ಪರಿಸ್ಥಿತಿ ಜೊತೆಗೆ ಹಂತ-ಹಂತವಾಗಿ ಆತ ಬದಲಾಗುತ್ತಿರುವ ಪರಿ ಎಲ್ಲವನ್ನೂ ಸೊಗಸಾಗಿ ಚಿತ್ರಿಸಿದ್ದಾರೆ ಲೇಖಕಿ. ಕೇಶವ ಹಾಗೂ ಪದ್ಮಿನಿಯರ ಮಾಗಿದ ಬದುಕು ಹೇಗಿತ್ತು ನೀವೇ ಓದಿ ತಿಳಿಯಿರಿ.
ಸಾರ್ವಭೌಮತ್ವ ಹಾಗೂ ಸ್ವಾರ್ಥದ ಪರಮಾವಧಿಗಳನ್ನು ಮೀರಿ ಕೆಲವು ಅಂತಃಕರಣದ ಪಾತ್ರಗಳು ಸಹಾ ಇಲ್ಲಿ ಕಾಣುತ್ತವೆ. ಅದರಲ್ಲಿ ಅಡುಗೆಯವರಾಗಿರುವ ಗುಂಡಪ್ಪನ ಪಾತ್ರವೂ ಒಂದು. ಆ ಪಾತ್ರ ಕಾಣಿಸಿಕೊಳ್ಳುವುದು ಕೆಲವೇ ಕಡೆಗಳಲ್ಲಾದರೂ.. ಪರಿಣಾಮಕಾರಿಯಾಗಿದೆ.
ನಟಿಯೊಬ್ಬಳ ಕಥೆ ಇದು ಎಂದುಕೊಂಡಾಗ ಮನಸ್ಸಿಗೆ ಹಲವಾರು ಚಿತ್ರಣಗಳು ಬರಬಹುದು ಅಥವಾ ಹಲವು ನಟಿಯರ ಆತ್ಮಚರಿತ್ರೆಗಳು ನೆನಪಾಗಬಹುದು. ಆದರೆ, ಈ ಕಾದಂಬರಿಯನ್ನು ಕಟ್ಟಿಕೊಟ್ಟಿರುವ ರೀತಿ, ನಿರೂಪಣೆಯಲ್ಲಿನ ಕಲಾತ್ಮಕತೆ ಹಾಗೂ ವಾಸ್ತವತೆಯ ಚಿತ್ರಣ ಭಾವನೆಗಳು ಹಾಗೂ ಕಥಾವಸ್ತು ಎಲ್ಲವೂ ಬಹಳವೇ ಇಷ್ಟವಾಯಿತು. ಈಚನೂರು ಜಯಲಕ್ಷ್ಮಿಯವರ ಮತ್ತಷ್ಟು ಬೇರೆ ಪುಸ್ತಕಗಳನ್ನು ಓದಬೇಕಿದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ