ಬುಧವಾರ, ಏಪ್ರಿಲ್ 22, 2026

ಬಾಟಾದ ಹೆಜ್ಜೆ ಗುರುತಿನಿಂದ.. ( ಬ್ಯುಸಿನೆಸ್ ಡೈರಿ ಪುಟ - 14)


ಚಪ್ಪಲಿ ಅಥವಾ ಶೂ ಎಂದರೆ ನಿಕೃಷ್ಟವಲ್ಲ. ನಾವು ಹಾಕುವ ಚಪ್ಪಲಿ ಅಥವಾ ಶೂ ನಮಗೆ ಎಷ್ಟು ಆರಾಮದಾಯಕವಾಗಿದೆ ಎನ್ನುವುದರ ಮೇಲೆ ನಮ್ಮ ನಡಿಗೆ ಅಥವಾ ಪಯಣದ ಕಂಫರ್ಟ್ ಅರಿವಾಗುತ್ತದೆ. ಹೀಗೆ ನಡಿಗೆಗೆ ಅಥವಾ ಓಟಕ್ಕೆ ಅಥವಾ ಕ್ರೀಡೆಗೆ ಅಗತ್ಯವಾದ ವಸ್ತುವಿನ ಪಟ್ಟಿಯಲ್ಲಿ ಪಾದರಕ್ಷೆಗಳಿಗೆ ಮೊದಲ ಸ್ಥಾನ. ಇಂದು ಹಲವಾರು ಬ್ರಾಂಡ್ಗಳು ಬಂದಿದ್ದರೂ.. ಬಾಟಾ ಎಂದ ತಕ್ಷಣ ನಮಗೆ ನೆನಪಾಗುವುದು ಶೂ ಎಂದು.ಅದರಲ್ಲೂ 90ರ ದಶಕದ ಮಕ್ಕಳಿಗೆ, ಪೋಷಕರಿಗಂತೂ.. ಸ್ಕೂಲ್ ಬ್ಯಾಗ್, ಲೇಬಲ್, ಶೂ ಎಲ್ಲವೂ ಬಾಟಾ ಆಗಿರುತ್ತಿತ್ತು ಎಂದು ನೆನಪಾಗಿಬಿಡುತ್ತದೆ. ಬಾಟಾ ಕಂಪನಿ ಹೆಸರು ಕೇಳಿದ ತಕ್ಷಣ, ಇದು ನಮ್ಮ ದೇಶದ ಕಂಪನಿಯೇ ಎಂದೆನಿಸಿಬಿಡುತ್ತದೆ. ಆದರೆ, ಇದು ಖಂಡಿತ ನಮ್ಮ ದೇಶದ ಕಂಪನಿಯಲ್ಲ. ಆದರೆ, ಭಾರತಕ್ಕೆ ಬಂದು 90 ವರ್ಷಗಳೇ ಕಳೆದವು. ಬಾಟಾ ಕಂಪನಿಗೆ 128 ವರ್ಷದ ದೀರ್ಘ ಇತಿಹಾಸವಿದೆ. ಬಾಟಾ ನಡೆದು ಬಂದ ಹಾದಿಯಲೊಮ್ಮೆ ಹೆಜ್ಜೆ ಹಾಕೋಣ ಬನ್ನಿ. 


ಬಾಟಾ ಕಂಪನಿ ಶುರುವಾಗಿದ್ದು 1894 ಸೆಪ್ಟೆಂಬರ್ 21ರಂದು. ಇದರ ಸ್ಥಾಪಕರು ಟೋಮಸ್ ಬಾವಾ (ಥಾಮಸ್ ಬಾಟಾ) . ಅವರು ಹುಟ್ಟಿದ್ದು ಜೆಕ್ ರಿಪಬ್ಲಿಕ್ ನ ಪ್ರಾಗ್ ನಲ್ಲಿ. 1876 ಏಪ್ರಿಲ್ 3 ರಂದು. ಥಾಮಸ್ ಕುಟುಂಬ ವೃತ್ತಿ ಚಪ್ಪಲಿ ತಯಾರಿಕೆ. ಈ ಕುಟುಂಬದ ವೃತ್ತಿಗೆ ಸುಮಾರು 300 ವರ್ಷಗಳ ಇತಿಹಾಸವಿತ್ತು.  ಥಾಮಸ್ ಎಂಟನೇ ತಲೆಮಾರಿನವರು. ಥಾಮಸ್ ಗೆ 15 ವರ್ಷಗಳಿರುವಾಗ ಅವರ ತಂದೆ ತೀರಿ ಹೋದಾಗ ಮನೆ ಖರ್ಚಿಗಾಗಿ. ಯಾವುದಾದರೂ ವೃತ್ತಿ  ದುಡಿಯುವ ಪರಿಸ್ಥಿತಿ ಇರುತ್ತದೆ. ಆಗ, ಮನೆಯ ಮೂವರು ಮಕ್ಕಳು ಅಂದರೆ ಥಾಮಸ್ ಅವರ ತಂಗಿ ಅನ್ನಾ ಬಾಟಾ ಅವರ ತಮ್ಮ ಆಂಟೋನಿನ್ ಬಾಟಾ, ಮೂವರೂ ಸೇರಿ ಚಪ್ಪಲಿ ತಯಾರಿಕೆಯ ಕೆಲಸ ಮಾಡಲು ಶುರು ಮಾಡುತ್ತಾರೆ. ಅಷ್ಟರಲ್ಲಾಗಲೇ ಚಪ್ಪಲಿ ತಯಾರಿಕೆಯಲ್ಲಿ ಬೇರೆ-ಬೇರೆ ರೀತಿಯ ಪ್ರಯೋಗಗಳನ್ನು ನಡೆಸಿರುತ್ತಾರೆ ಥಾಮಸ್.


ಆರಂಭದಲ್ಲಿ ಅವರ ಬಳಿ ಇದ್ದದ್ದು ಕೇವಲ 350 ಡಾಲರ್ ಗಳಷ್ಟೇ. ಅಷ್ಟು ಕಡಿಮೆ ಹಣದಿಂದ ಆಸ್ಟ್ರಿಯಾ ಹಾಗೂ ಹಂಗೇರಿ ದೇಶಗಳ ನಡುವಿನಲ್ಲಿದ್ದ ಜೆಕೋಸ್ಲೋವಿಯಾ ಅಂದರೆ ಈಗಿನ ಜೆಕ್ ರಿಪಬ್ಲಿಕ್ ನ ಚಿಕ್ಕ ಪಟ್ಟಣ ಜ್ಲಿನ್ ನಲ್ಲಿ ಒಂದು ಪುಟ್ಟ ಕೋಣೆಯನ್ನು ಬಾಡಿಗೆಗೆ ಪಡೆದು, ಇನ್ಸ್ಟಾಲ್ಮೆಂಟ್ ಮೂಲಕ ಹಣ ತೀರಿಸುವ ಒಪ್ಪಂದದಂತೆ ಹೊಲಿಗೆ ಮಿಷನ್ ಅನ್ನು ಕೊಂಡುಕೊಳ್ಳುತ್ತಾರೆ. ಈ ಕಂಪನಿಗೆ ತಮ್ಮ ಹೆಸರಿನ ಮೊದಲ ಅಕ್ಷರ 'ಟಿ' ಹಾಗೂ ತಮ್ಮ ಸಹೋದರ-ಸಹೋದರಿಯರ ಹೆಸರಿನ ಮೊದಲ ಅಕ್ಷರ 'ಎ' ಜೊತೆಗೆ ಕುಟುಂಬದ ಹೆಸರು ಸೇರಿಸಿ ಟಿ & ಎ ಬಾಟಾ ಎಂದು ಹೆಸರಿಡುತ್ತಾರೆ. ಬಾಟಾವನ್ನು ಜೆಕ್ ನಲ್ಲಿ ಬಾವಾ ಎಂದು ಉಚ್ಚರಿಸುತ್ತಾರೆ. 1973 ರಲ್ಲಿ ಇದು ಬಾಟಾ ಲಿಮಿಟೆಡ್ ಎಂದಾಗುತ್ತದೆ. ಅಷ್ಟೇ ಅಲ್ಲದೆ, ಮೊದಲು ಒಬ್ಬರೇ ಮಾಡುತ್ತಿದ್ದ ಉದ್ಯೋಗ ಈಗ 10 ಜನರಿಗೆ ಏರುತ್ತದೆ. 40 ಜನರನ್ನು ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಮಾಡುತ್ತಾರೆ. ಹೀಗೆ, ಮೊದಲಿಗೆ 50 ಜನರಿಂದ ಈ ಕಂಪನಿ ಅಧಿಕೃತವಾಗಿ ಶುರುವಾಗುತ್ತದೆ. ಆದರೆ, ಕಂಪೆನಿ ಶುರುವಾದ ಕೆಲ ತಿಂಗಳುಗಳಲ್ಲಿಯೇ ಅವರ ತಮ್ಮನಿಗೆ ಸೈನ್ಯದಲ್ಲಿ ಕೆಲಸ ಸಿಕ್ಕು ಆತ ಹೊರಟು ನಿಲ್ಲುತ್ತಾನೆ. ತಂಗಿಗೆ ಮದುವೆಯಾಗುತ್ತದೆ. ನಂತರ, ಥಾಮಸ್ ಅವರದ್ದು ಏಕಾಂಗಿ ಹೋರಾಟ. 


ಕುಟುಂಬದವರ ಸಹಾಯವಿಲ್ಲದೆ, ಕೇವಲ ತಾನೊಬ್ಬನೇ ನಿಭಾಯಿಸಲು ಸಾಧ್ಯವೇ ಎನ್ನುವ ಅನುಮಾನ ಕಾಡಿದರೂ.. ಅವರು  ಬ್ಯುಸಿನೆಸ್ ಅನ್ನು ಮುಂದುವರಿಸಲು ನಿರ್ಧರಿಸುತ್ತಾರೆ. ಹಾಗೆ ನಿರ್ಧರಿಸಲೇಬೇಕಿತ್ತು. ಏಕೆಂದರೆ, ಈಗಾಗಲೇ ತಾವು ಮಾಡಿಕೊಂಡ ಕಚೇರಿಯ ಜಾಗಕ್ಕೆ ಬಾಡಿಗೆ ಹಾಗೂ ಹೋಲಿಗೆ ಯಂತ್ರದ ಇನ್ಸ್ಟಾಲ್ಮೆಂಟ್ ಕಟ್ಟಬೇಕಿತ್ತು. 


ಇದರ ಜೊತೆಗೆ ಕಂಪನಿ ಶುರು ಮಾಡಿದ ವರ್ಷವೊಂದರಲ್ಲಿ ಮೊದಲ ಸವಾಲು ಎದುರಾಗಿತ್ತು. ಅದು ಆರ್ಥಿಕ ಸಂಕಷ್ಟದ ಸಮಯ. ಚಪ್ಪಲಿ ತಯಾರಿಕೆಗಾಗಿ ಲೆದರ್ ಕೊಂಡುಕೊಳ್ಳಲು ಹಣವಿಲ್ಲದೆ, ಅದು ದುಬಾರಿಯಾಗಿ ಕೈಗೆಟುಕದಿದ್ದಾಗ, ಥಾಮಸ್ ಅವರ ಕ್ರಿಯಾತ್ಮಕ ಐಡಿಯಾದಿಂದ ಹೊಸ ರೀತಿಯ ಶೂ ಒಂದನ್ನು ತಯಾರಿಸುತ್ತಾರೆ. ಅದೇ..  ಇಂದು ಪ್ರಸಿದ್ಧವಾಗಿರುವ ಕ್ಯಾನ್ವಾಸ್ ಶೂ. ಅದರ ಹೆಸರು ಬಾಟೊವ್ಕಾ. ನೋಡಲು ಅಂದವಾಗಿ, ಜೊತೆಗೆ ಧರಿಸಿದಾಗ ತೂಕವೂ ಇಲ್ಲದ ಶೂಗೆ ಜನ ಮಾರುಹೋದರು. ನಂತರ ಅವರ ಬ್ಯುಸಿನೆಸ್ ಹಂತ-ಹಂತವಾಗಿ ಮೇಲೇರುತ್ತಾ ಬಂದಿತು. 1897ರಲ್ಲಿ ಮೊದಲ ಬಾರಿಗೆ ಸ್ಟೀಮ್ ಅನ್ನು ಶೂ ತಯಾರಿಕೆಯಲ್ಲಿ ಬಳಸುತ್ತಾರೆ. 1899ರಲ್ಲಿ ಜ್ಲಿನ್ ನಲ್ಲಿ ಬಾಟಾ ಶೋ ರೂಮ್ ತೆರೆಯುತ್ತಾರೆ. 


ಆದರೆ, ಬಾಟಾದ ಬ್ಯುಸಿನೆಸ್ ಗ್ರಾಫ್ ತಕ್ಷಣಕ್ಕೆ ಮೇಲೇರಲಿಲ್ಲ. ಏಕೆಂದರೆ, ಆ ಸಮಯದಲ್ಲಿ ಮೆಶೀನ್ ಬಳಸದೇ ಮನುಷ್ಯರೇ ಶೂಗಳನ್ನು ತಯಾರಿಸುತ್ತಿದ್ದರು. ಮನುಷ್ಯ ಎಷ್ಟೇ ಕೆಲಸ ಮಾಡಿದರೂ ಒಂದು ದಿನಕ್ಕೆ 3ಕ್ಕಿಂತ ಹೆಚ್ಚಿನ ಶೂ ತಯಾರಿಸಲು ಸಾಧ್ಯವಿರಲಿಲ್ಲ. ಅದಕ್ಕಾಗಿ, ಅವರು ತಂತ್ರಜ್ಞಾನದಲ್ಲಿ ಮುಂದಿದ್ದ ಅಮೆರಿಕಾಗೆ ತೆರಳಿ ಅಲ್ಲಿನ ಸ್ಥಿತಿ-ಗತಿಯನ್ನು ನೋಡಿ.. ಉಪಯೋಗಕ್ಕೆ ಬರಬಹುದಾದುದನ್ನು ಅಳವಡಿಸಿಕೊಳ್ಳಲು ನಿರ್ಧರಿಸಿ, 1904ರಲ್ಲಿ ತಮ್ಮ ಮೂರು ಜನ ನಂಬಿಕಸ್ಥ ಸಹೋದ್ಯೋಗಿಗಳೊಂದಿಗೆ, ಅಮೆರಿಕಾಗೆ ಹೋಗುತ್ತಾರೆ. ಆರು ತಿಂಗಳ ನಂತರ ಆ ಮೆಷಿನ್ ಗಳನ್ನು ಹೇಗೆ ಬಳಸುವುದು ಎಂದು ಸರಿಯಾದ ತರಬೇತಿ ಪಡೆದುಕೊಂಡು, ಮೆಷಿನ್ ಅನ್ನು ಕೊಂಡು ತಂದು ಅವುಗಳ ಮೂಲಕ ಪಾದರಕ್ಷೆಗಳ ತಯಾರಿಕೆಗೆ ಮೊದಲಾಗುತ್ತಾರೆ. ಯುರೋಪ್ ಖಂಡದಲ್ಲಿ ಮಾಸ್ ಪ್ರೊಡಕ್ಷನ್ ಆರಂಭ ಮಾಡಿದ ಮೊದಲ ವ್ಯಕ್ತಿಯೇ ಥಾಮಸ್ ಬಾಟಾ. 


ಇದರ ಫಲವಾಗಿ 1905ರ ಹೊತ್ತಿಗೆ ದಿನವೊಂದಕ್ಕೆ 2,200 ಜೊತೆ ಪಾದರಕ್ಷೆಗಳನ್ನು ತಯಾರಿಸುತ್ತಿರುತ್ತಾರೆ. 1935 ರಲ್ಲಿ ಇದು ದಿನವೊಂದಕ್ಕೆ 1,68,000 ಪಾದರಕ್ಷೆಗಳನ್ನು ತಯಾರಿಸುವಷ್ಟಾಗಿ ಯುರೋಪ್ ನಲ್ಲಿಯೇ ಅತಿ ದೊಡ್ಡ ಫೂಟ್ ವೇರ್ ಕಂಪನಿ ಎಂದು ಗುರುತಿಸಿಕೊಂಡಿತು ಬಾಟಾ. 


ಏಳು-ಬೀಳುಗಳಿಲ್ಲದ ಬ್ಯುಸಿನೆಸ್ ಸಾಧ್ಯವೇ..?? ಮತ್ತೆ ಬಾಟಾಗೆ ಅಂತಹ ಸಂಕಷ್ಟ ಬಂದದ್ದು ಮೊದಲನೇ ವಿಶ್ವಯುದ್ಧದ ಸಂದರ್ಭದಲ್ಲಿ. ಅಂದರೆ 1914ರಲ್ಲಿ. ಆದರೆ, ಬೇರೆ ಕಂಪನಿಗಳು ನಷ್ಟದಲ್ಲಿರುವಾಗ ಬಾಟಾಗೆ ಲಾಭವಾಗಿತ್ತು. ಇದಕ್ಕೆ ಕಾರಣವೆಂದರೆ ಸೈನ್ಯದಿಂದ, ಸೈನಿಕರಿಗೆ ಬೇಕಾದ ಪಾದರಕ್ಷೆಗಳಿಗಾಗಿ ಬಾಟಾಗೆ ಆರ್ಡರ್ ನೀಡಲಾಯಿತು. ಇನ್ನು ಮುಂದೆ ತಮ್ಮ ಅದೃಷ್ಟ ಖುಲಾಯಿಸಿತು ಎನ್ನುವ ಸಂತಸದಿಂದ ಥಾಮಸ್ 10% ಹೆಚ್ಚು ಕೆಲಸಗಾರರನ್ನು ನೇಮಿಸಿಕೊಂಡರು. ಆದರೆ, ವಿಶ್ವ ಯುದ್ಧದ ನಂತರ ಸಂಕಷ್ಟ ಎದುರಾಯಿತು. ಆರ್ಥಿಕ ಸಂಕಷ್ಟದ ಕಾಲದಲ್ಲಿ ಬಾಟಾ ಬಳಿ ಹೆಚ್ಚಿನ ಪಾದರಕ್ಷೆಗಳ ತಯಾರಿಕೆಯಾಗುತ್ತಿತ್ತಾದರೂ.. ಜನರು ಕೊಂಡುಕೊಳ್ಳುವುದು ಕಡಿಮೆಯಾಗಿತ್ತು. ಆಗ ಬಾಟಾದವರು ಒಂದು ಉಪಾಯವನ್ನು ಮಾಡುತ್ತಾರೆ. ಅದೇನೆಂದರೆ, ಆಗ ತಮ್ಮ ಕಂಪನಿಯ ಪ್ರಾಡಕ್ಟ್ ಗಳಿಗೆ 50% ರಿಯಾಯಿತಿಯನ್ನು ಘೋಷಿಸುತ್ತಾರೆ. ಈ ಸಂದರ್ಭದಲ್ಲಿ ಪಾದರಕ್ಷೆಗಳೇನೋ ಮಾರಾಟವಾಗುತ್ತವೆ. ಆದರೆ, ಕಂಪನಿಗೆ ಲಾಭವಾಗುತ್ತದೆಯೋ.. ನಷ್ಟವಾಗುತ್ತದೆಯೋ.. ಎನ್ನುವ ಆಲೋಚನೆಯನ್ನು ಬಂದಿರಲೇಬೇಕು. ಆ ಸಮಯದಲ್ಲಿ ಅವರ ಜೊತೆ ನಿಂತದ್ದು ಕೆಲಸಗಾರರು. ಕಂಪೆನಿಗೆ ನಷ್ಟವಾಗದಂತೆ, ಕೆಲಸಗಾರರು 40% ಕಡಿಮೆ ಸಂಬಳಕ್ಕೆ ದುಡಿಯಲು ಒಪ್ಪುತ್ತಾರೆ. 


ಒಂದು ಕಂಪನಿ ಲಾಭದ ಮುಖ ನೋಡಬೇಕೆಂದರೆ ಕಂಪನಿಯ ಕೆಲಸಗಾರರೂ ಅಷ್ಟೇ ಮುಖ್ಯ. ಅಂತಹಾ ಸಂದರ್ಭದಲ್ಲಿ ಜೊತೆ ನಿಂತ ಕೆಲಸಗಾರರಿಗೆ ಬಾಟಾ ಮೆನ್ ಎಂದರು. ಅಷ್ಟೇ ಅಲ್ಲದೆ.. ನೀವು ನಮ್ಮ ಕಂಪನಿಯ ಅಸೋಸಿಯೇಟ್ ಗಳು ಎನ್ನುತ್ತಾ.. ತಮ್ಮ ಕೆಲಸಗಾರರಿಗೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಡುತ್ತಾರೆ. ಅಂದಿನಿಂದ ಇಂದಿನವರೆಗೂ ಈ ವ್ಯವಸ್ಥೆಗಳು ಜಾರಿಯಲ್ಲಿವೆ. 

ತಮ್ಮ ಕಂಪನಿಯ ಸುತ್ತ ಮನೆ, ಆಸ್ಪತ್ರೆ, ಸ್ಕೂಲು, ಲೈಬ್ರರಿಗಳನ್ನು ನಿರ್ಮಿಸುತ್ತಾರೆ. ನಂತರ ಹೌಸಿಂಗ್ ಎಸ್ಟೇಟ್, ಅಮ್ಯೂಸ್ಮೆಂಟ್ ಪಾರ್ಕ್, ಸಿನಿಮಾ, ಸ್ವಿಮ್ಮಿಂಗ್ ಪೂಲ್ ಹೀಗೆ ಎಲ್ಲದಕ್ಕೂ ವಿಸ್ತರಿಸುತ್ತವೆ. ಕಂಪನಿಯ ಸುತ್ತ ಅವರದ್ದೇ ಪಟ್ಟಣವೇ ಆಗಿ ಹೋಗುತ್ತದೆ. ಹೀಗೆ, ಭಾರತದ ಕಲ್ಕತ್ತಾದಲ್ಲಿ ಕೊನ್ನಾರ್ ಎನ್ನುವ ಸ್ಥಳದಲ್ಲಿ ಸ್ಥಾಪಿಸಿದ ಕಂಪನಿಯ ಸುತ್ತ ಪಟ್ಟಣ ಬೆಳೆದು ಬಾಟಾನಗರ ಎಂದು ಹೆಸರಾಗಿದೆ. ಬಿಹಾರ್ ನಲ್ಲಿ ಬಾಟಾ ಗಂಜ್ ಇದೆ. ಫ್ರಾನ್ಸ್ ನಲ್ಲಿ ಬಾಟ ವಿಲ್ಲೆ ಎನ್ನುವ ಪಟ್ಟಣವಿದೆ. ಇನ್ನು ಬ್ರೆಜಿಲ್ ನಲ್ಲಿ ಬಾಟಾ ಟ್ಯುಬಾ, ಜಾವಾದಲ್ಲಿ ಕಲಿ-ಬಾಟಾ, ಕೆನಡಾದಲ್ಲಿ ಬಾಟಾವಾ ಎನ್ನುವ ಹೆಸರಿನ ಪಟ್ಟಣಗಳು ನಿರ್ಮಿತವಾಗಿವೆ. 


ಇದಿಷ್ಟು.. ಬಾಟಾದ ದೊಡ್ಡ ಏಳುಬೀಳಿನ ವಿಚಾರಗಳಾದರೆ, ಭಾರತಕ್ಕೆ ಬಾಟಾ ಪ್ರವೇಶಿಸಿದ್ದು ಹೇಗೆ ಗೊತ್ತೇ..?? ಬಾಟಾದವರು ಭಾರತಕ್ಕೆ ಬರುತ್ತಿದ್ದದ್ದು ಕಲ್ಕತ್ತಾದಲ್ಲಿ ಕಚ್ಚಾ ವಸ್ತುಗಳನ್ನು ಕೊಂಡುಕೊಳ್ಳಲು. 1930ರಲ್ಲಿ ಕಲ್ಕತ್ತಾ ಗೆ ಬಂದವರಿಗೆ ಬರಿಕಾಲಿನಲ್ಲಿ ನಡೆಯುತ್ತಿರುವ ಭಾರತೀಯರು ಕಾಣುತ್ತಾರೆ. ಆಗ ತಮ್ಮ ವ್ಯಾಪಾರವನ್ನು ವೃದ್ಧಿಗೊಳಿಸಲು, ಸ್ಥಾಪಿಸಲು ಇದೇ ಸರಿಯಾದ ಜಾಗವೆಂದು ನಿರ್ಧರಿಸಿ, ಕಲ್ಕತ್ತಾದ ಕೊನ್ನಾರ್ ನಲ್ಲಿ ತಮ್ಮ ಫ್ಯಾಕ್ಟರಿಯನ್ನು ಸ್ಥಾಪಿಸುತ್ತಾರೆ. ಈಗ ಅದು ಬಾಟಾನಗರ ಎಂದಾಗಿದೆ. 75000 ಕೆಲಸಗಾರರು ಕೆಲಸ ಮಾಡುತ್ತಿದ್ದಾರೆ. ಭಾರತವೊಂದರಲ್ಲಿಯೇ ಬಾಟಾದ 7 ಫ್ಯಾಕ್ಟರಿಗಳಿವೆ. ಬಾಟಾದ ಉತ್ಪಾದನೆಯಲ್ಲಿ ಹಾಗೂ ಮಾರಾಟದ ದಾಖಲೆಯ ಸ್ಥಾನದಲ್ಲಿ ಭಾರತದ್ದು ಎರಡನೇ ಸ್ಥಾನ. 


ಜೆಕ್ ನ ಜ್ಲಿನ್ ಎನ್ನುವಲ್ಲಿ ಬಾಟಾದ ಮೊದಲ ಮುಖ್ಯ ಕಛೇರಿ ಇದೆ. ಇದು 77.5 ಮೀಟರ್ ಗಳಷ್ಟು ಎತ್ತರವಾಗಿದ್ದು.. ಅದು ನಿರ್ಮಾಣವಾಗುವ ಕಾಲದಲ್ಲಿ ಯುರೋಪಿನಲ್ಲಿಯೇ ಅತಿ ಎತ್ತರದ ಕಟ್ಟಡವಾಗಿತ್ತು. ಅಲ್ಲದೇ, ವಿಶ್ವದಲ್ಲಿಯೇ ಮೊದಲು ಎಲಿವೇಟರ್ ಅನ್ನು ಬಳಸಿದ ಆಫೀಸ್ ಆಗಿದೆ. ಇಂದು 70ಕ್ಕೂ ಅಧಿಕ ದೇಶಗಳಲ್ಲಿ, 53000 ಕ್ಕೂ ಹೆಚ್ಚಿನ ಬಾಟಾದ ಸ್ಟೋರ್ ಗಳಿದ್ದು, 18ಕ್ಕೂ ಹೆಚ್ಚು ದೇಶಗಳಲ್ಲಿ ಉತ್ಪಾದನಾ ಘಟಕಗಳಿವೆ.


ಬಾಟಾ ಕಂಪನಿಯು ಹೋಂ ಡೆಲಿವರಿಯನ್ನು ಮೊದಲು ಶುರು ಮಾಡಿದ್ದು ಜೆಕ್ ನಲ್ಲಿಯೇ.. ಒಂದೇ ವಾರದಲ್ಲಿ 7000 ಜೊತೆ ಪಾದರಕ್ಷೆಗಳನ್ನು ಹೋಂ ಡೆಲಿವರಿ ಮಾಡಿತ್ತು. ಅದಾದ ನಂತರ ಗ್ರಾಹಕರು ಕಸ್ಟಮೈಸ್ಡ್ ಆದ ಪಾದರಕ್ಷೆಗಳು ಬೇಕೆಂಬ ಬೇಡಿಕೆ ಇಟ್ಟಾಗ ಅದನ್ನು ಸಹಾ ಪೂರೈಸಿದರು. "ನಮ್ಮ ಕಸ್ಟಮರ್ ಗಳೇ ನಮ್ಮ ಮಾಸ್ಟರ್ ಗಳು" ಎನ್ನುತ್ತಾ.. ಗ್ರಾಹಕರ ಸೇವೆಯನ್ನು ಅಂದುಕೊಂಡ ಮಟ್ಟದಲ್ಲಿಯೇ ನೀಡುವುದು ಅವರ ಗುರಿಯಾಗಿತ್ತು.


ಜಾಹೀರಾತಿನ ಜೊತೆ-ಜೊತೆಗೆ ಅವರು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೂ ಸ್ಪಾನ್ಸರಿಂಗ್ ಮಾಡಲು ಶುರು ಮಾಡುತ್ತಾರೆ. ರೇಸಿಂಗ್, ಫುಟ್ಬಾಲ್, ಕ್ರಿಕೆಟ್, ಸೈಕ್ಲಿಂಗ್, ಟೆನ್ನಿಸ್, ಗಾಲ್ಫ್, ರನ್ನಿಂಗ್ ರೇಸ್, ಕುಸ್ತಿ ಹೀಗೆ ಹಲವು ಕ್ರೀಡೆಗಳಿಗೆ ಸ್ಪಾನ್ಸರ್  ಮಾಡುತ್ತಾರೆ.


ಬಾಸ್ಕೆಟ್ ಬಾಲ್ ಆಟಗಾರರಾದ ಹಾಲ್ ಆಫ್ ಫೇಮ್ ಖ್ಯಾತಿಯ ಮ್ಯಾಜಿಕ್ ಜಾನ್ಸನ್ ಅವರು ತಮ್ಮ ಕೆರಿಯರ್ ಅನ್ನು ಶುರು ಮಾಡಿದ್ದು ಬಾಟಾ ಶೂಗಳನ್ನು ಹಾಕಿಕೊಂಡೇ.. ಭಾರತೀಯರಿಗೆಂದೇ.. ಟೆನ್ನಿಸ್ ಗೆ ಬೇಕಾದಂತಹಾ ಶೂಗಳನ್ನು ತಯಾರಿಸುತ್ತಾರೆ. ಇವುಗಳು ಬಹಳವೇ ಖ್ಯಾತಿ ಪಡೆಯುತ್ತದೆ. ಮುಂದೆ ಸ್ಕೂಲ್ ಶೂಗಳೂ ಸಹ ಅಷ್ಟೇ ಖ್ಯಾತಿ ಪಡೆದವು. 


2006ರಲ್ಲಿ ಭಾರತೀಯ ರಿಟೇಲ್ ಸಮಿಟ್ ನಲ್ಲಿ ರಿಟೇಲರ್ ಆಫ್ ದಿ ಇಯರ್, 2006-07 ರಲ್ಲಿ ಮೋಸ್ಟ್ ಅಡ್ಮೈರ್ಡ್ ಬ್ರ್ಯಾಂಡ್, 2010ರಲ್ಲಿ ಗ್ರಾಹಕರ ಅವಾರ್ಡ್.. ಹೀಗೆ ಮುಂತಾದ ಪ್ರಶಸ್ತಿಗಳನ್ನು ಬಾಟಾ ತನ್ನ ಮುಡಿಗೇರಿಸಿಕೊಂಡಿದೆ. ಹಾಗೆಂದು, ಬಾಟಾಗೆ ಪ್ರತಿಸ್ಪರ್ಧಿಗಳೇ ಇರಲಿಲ್ಲವೆಂದಲ್ಲ. ಖಾದಿಮ್, ಪ್ಯಾರಗಾನ್, ಅಡಿದಾಸ್, ಪೂಮಾ, ನೈಕ್, ರಿಬಾಕ್ ಹೀಗೆ.. ಇವುಗಳನ್ನು ಹೊರತುಪಡಿಸಿ ತಮ್ಮ ಗುಣಮಟ್ಟ, ಬೆಲೆ ಎಲ್ಲದರಿಂದ ತಮ್ಮದೇ ಚಾಪು ಮೂಡಿಸಿದೆ ಬಾಟಾ. 


ಬೆಲೆ ಎಂದಾಗ ಬಾಟಾದವರ ಬೆಲೆಯ ಕುರಿತು ಒಂದು ಉಲ್ಲೇಖವನ್ನು ಇಲ್ಲಿ ಹೇಳಲೇಬೇಕು. ಇಂದು ಎಷ್ಟೋ ಬ್ಯುಸಿನೆಸ್ ಗಳು ಬಾಟಾದವರ ಬೆಲೆಯ ಖ್ಯಾತ ಥಿಯರಿಯನ್ನು ಬಳಸುತ್ತಾರೆ. ಅದೆಂದರೆ, 1000 ರೂಪಾಯಿಗೆ ಇರುವ ವಸ್ತುವನ್ನು 999 ಎಂದು ನಮೂದಿಸುವುದು.. 800ಕ್ಕೆ ಬದಲಾಗಿ 799 , 100ಕ್ಕೆ ಬದಲಾಗಿ 99 ಹೀಗೆ ಒಂದು ರೂಪಾಯಿ ಕಡಿಮೆ ನಮೂದಿಸುತ್ತಾರೆ. ಇದಕ್ಕೆ ಎರಡು ಕಾರಣಗಳನ್ನು ನೀಡಬಹುದಾಗಿದೆ. ಅದೇನೆಂದರೆ, ಆ ಒಂದು ರೂಪಾಯಿ ಸೈಕಾಲಜಿಕಲಿ ಗ್ರಾಹಕರ ಮೈಂಡ್ ಸೆಟ್ ಮೇಲೆ ಪ್ರಭಾವ ಬೀರುತ್ತದೆ. ಯಾವತ್ತಿಗೂ ಮೊದಲ ಸಂಖ್ಯೆಯನ್ನು ಗಮನಿಸಿದಾಗ 10 ಬದಲಿಗೆ 9 ಇದ್ದಾಗ ಅದು ಕಡಿಮೆ ಎಂದೇ ಭಾವಿಸುತ್ತೇವೆ. ಅಲ್ಲವಾ..?? ಅಲ್ಲದೇ ನಮೂದಿಸದಿದ್ದರೂ ಒಂದು ರೂಪಾಯಿ ಚಿಲ್ಲರೆಯನ್ನು ಯಾರೂ ಹೆಚ್ಚಾಗಿ ವಾಪಸ್ ಕೇಳಲು ಹೋಗುವುದಿಲ್ಲ. ಮತ್ತೊಂದು ಕಾರಣವೆಂದರೆ, ಇದು "ಎಂಟ್ರಿ ಡ್ಯೂಟಿ" ಅಂದರೆ ರಫ್ತು, ಆಮದಿನ ಕೆಲವು ಶುಲ್ಕಗಳ ಕಾರಣಕ್ಕಾಗಿಯೂ ಎಂದು ಹೇಳುತ್ತಾರೆ. 


ಜುಲೈ 12, 1932 ರಲ್ಲಿ ವಿಮಾನ ಅಪಘಾತದಲ್ಲಿ ಥಾಮಸ್ ತೀರಿಕೊಳ್ಳುತ್ತಾರೆ. ಈಗ ಥಾಮಸ್ ಬಾಟಾರ ಮೂರನೇ ತಲೆಮಾರು ಕಂಪನಿಯನ್ನು ನಡೆಸುತ್ತಿರುವುದು. ಬಾಟಾ ಬ್ಯುಸಿನೆಸ್ ಕುರಿತು ಏನೆನ್ನುತ್ತದೆ ಎಂದರೆ: "ರೆವೆಲ್ಯೂಷನ್ ಅಲ್ಲ, ಬದಲಿಗೆ ಎವಲ್ಯೂಷನ್" ಎಂದರೆ ಬ್ಯುಸಿನೆಸ್ ನಲ್ಲಿನ ಬದಲಾವಣೆ ಕ್ರಾಂತಿಯಲ್ಲ, ಬೆಳವಣಿಗೆ ಎಂದು.


ಬಾಟಾ ಕಂಪನಿಯ ಡೆಕೋರೇಷನ್, ಲುಕ್, ಪ್ರಾಡಕ್ಟ್ ಬೆಲೆ ಎಲ್ಲವುಗಳನ್ನೂ ಪ್ರತಿ ಮೂರು ವರ್ಷಕ್ಕೊಮ್ಮೆ ಬದಲಾಯಿಸುತ್ತಾರೆ. ಇದಕ್ಕೆ ಕಾರಣ ಕೇಳಿದಾಗ ಅವರು ಹೇಳುವುದೆಂದರೆ : "ನಾನು ವಿಡಿಯೋ ಗೇಮ್ ಆಡುತ್ತಿದ್ದಾಗ ನನಗೆ ಅರಿವಾದ ಸತ್ಯವೆಂದರೆ.. ನಾವು ಯಾವಾಗಲೂ ಆಟ ಆಡುತ್ತಲೇ ಇರಬೇಕು. ಯಾವಾಗ ಅದನ್ನು ನಿಲ್ಲಿಸುತ್ತೇವೆಯೋ ಆಗ ನಾವು ಸಾಯುತ್ತೇವೆ. ಹಾಗೆಯೇ ಬ್ಯುಸಿನೆಸ್ ನಲ್ಲಿಯೂ.. ಎಂದು ಬೆಳವಣಿಗೆಯನ್ನು ನಿಲ್ಲಿಸುತ್ತೇವೆಯೋ ಅಂದಿಗೆ ನಮ್ಮ ಬ್ಯುಸಿನೆಸ್ ಕೊನೆಯದಂತೆ" ಎಂದು. 


ಥಾಮಸ್ ಬಾಟಾರವರು ಇದನ್ನೇ ಬೇರೆಯ ಪದಗಳಲ್ಲಿ ಹೇಳಿದ್ದರು. "ಹಲವಾರು ಜನರು ತಮ್ಮ ಹಾಸಿಗೆಯಲ್ಲಿಯೇ ಸಾಯುವುದು. ಏಕೆಂದರೆ, ಅವರು ಅಷ್ಟೊತ್ತಿಗಾಗಲೇ ತಮ್ಮ ಓಡಾಟವನ್ನು ನಿಲ್ಲಿಸಿ ಆಗಿರುತ್ತದೆ. ನೀವು ಎಲ್ಲಿ ನಿಲ್ಲುತ್ತೀರೋ.. ಅಲ್ಲಿಯೇ ನಿಮ್ಮ ಸಾವು. ನೀವು ಎಂದಿಗೆ ನಿಧಾನವಾದ ಬೆಳವಣಿಗೆಯತ್ತ ಮುಖ ಮಾಡಿದ್ದೀರೋ.. ಅಂದೇ, ನೀವು ಅರ್ಧ ಸತ್ತಂತೆ. ಜೀವನವೆಂದರೆ ಎಂದಿಗೂ ಮುಂದುವರಿಯುವುದು. ಅಷ್ಟೇ.." ಎಂದಿದ್ದರು. 


ಇಂಗ್ಲೀಷ್ ನಲ್ಲಿ ಒಂದು ಪ್ರಸಿದ್ಧ ಮಾತಿದೆ. "ವಿಯರರ್ ನೋ.. ವೇರ್ ಹಿಸ್ ಶೂ ಪಿಂಚಸ್" ಎಂದರೆ ನಾವು ಮತ್ತೊಬ್ಬರ ಚಪ್ಪಲಿಯನ್ನು ಹಾಕಿಕೊಂಡಾಗ ನಮಗೆ ಅದು ಕಚ್ಚುವುದರ ಅರಿವಾಗುತ್ತದೆ. ಎಂದರೆ, ನಾವು ಮತ್ತೊಬ್ಬರ ಜಾಗದಲ್ಲಿ ನಿಂತು ನೋಡಿದಾಗಲಷ್ಟೇ ಅವರ ಕಷ್ಟ ಅರಿವಾಗುವುದು. ಅದು ವಾಕ್ಯಾರ್ಥವಾಗಿ ಅಲ್ಲದಿದ್ದರೂ ಬಾಟಾದ ಬ್ಯುಸಿನೆಸ್ ಗೆ ಅನ್ವಯಿಸುವುದಾದರೆ.. ಅವರ ಕಷ್ಟ-ನಷ್ಟಗಳು ಅವರಿಗೆ ಗೊತ್ತಿದ್ದವು. ಎಂದಿಗೂ ಗ್ರಾಹಕರಿಗೆ ಅದರ ಬಿಸಿ ಮುಟ್ಟಲು ಬಿಡಲಿಲ್ಲ. 


ಬ್ಯುಸಿನೆಸ್ ಎಂದರೆ ಸದಾಕಾಲದ ಬೆಳವಣಿಗೆ. ಹೊಸತನದ ಅಳವಡಿಕೆ. ಅಷ್ಟೇ ಅಲ್ಲದೆ, ರಿಯಾಯಿತಿ ನೀಡಿದಾಗ ಅದನ್ನು ಸರಿದೂಗಿಸುವ ಪರಿ, ಕೆಲಸಗಾರರನ್ನು ವಿಶ್ವಾಸಕ್ಕೆ ಕಂಡುಕೊಳ್ಳುವ ಕ್ರಮ, ಸೋಲಿನಿಂದ ಕುಗ್ಗದೆ.. ಗೆಲುವಿನತ್ತ ಮುನ್ನಡೆಯುವಿಕೆ, ಸೂಕ್ಷ್ಮವಾದ ಗಮನಿಸುವಿಕೆ, ತಮ್ಮ ಬ್ಯುಸಿನೆಸ್ ಗೆ ಸರಿಯಾದ ಸ್ಥಳದ ಆಯ್ಕೆ. ಇವೆಲ್ಲವೂ ಬ್ಯುಸಿನೆಸ್ ನಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ ಎನ್ನುವುದನ್ನು ತನ್ನ ಬೆಳವಣಿಗೆಯ ಮೂಲಕ ತೋರಿಸಿಕೊಟ್ಟು ಬ್ಯುಸಿನೆಸ್ ನ ಪಾಠ ಹೇಳುತ್ತಿದೆ ಬಾಟಾ. 


( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ