ಮಂಗಳವಾರ, ಏಪ್ರಿಲ್ 21, 2026

ಮಹದೇವ ದೇಸಾಯಿ (ಪುಸ್ತಕ ಯಾನ - 297)


ಪುಸ್ತಕದ ಶೀರ್ಷಿಕೆ : ಮಹದೇವ ದೇಸಾಯಿ

ಲೇಖಕರು : ವೇಮಗಲ್ ಸೋಮಶೇಖರ್

ಪ್ರಕಾಶಕರು : ಕರ್ನಾಟಕ ಗಾಂಧೀ ಸ್ಮಾರಕ ನಿಧಿ

ಪ್ರಥಮ ಮುದ್ರಣ : 2019

ಪುಟಗಳು : 88

ಬೆಲೆ : 63 ರೂ. 


ಸ್ವಾತಂತ್ರ್ಯ ಹೋರಾಟದಲ್ಲಿ ನಾವು ಗಾಂಧೀಜಿಯವರನ್ನು ಗಮನಿಸಿದಾಗ.. ಅವರ ಹಿಂದೆ ಕಾಣದ ಕೈಯಂತೆ ಕೆಲಸ ಮಾಡಿರುವವರು ಹಲವರಿದ್ದಾರೆ. ಅದರಲ್ಲಿ ಅವರ ಪತ್ನಿ ಕಸ್ತೂರ್ ಬಾ ರಷ್ಟೇ ಅಥವಾ ಅವರಿಗಿಂತಲೂ ಪ್ರಮುಖರು ಎಂದು ಭಾವಿಸಬಹುದಾದದ್ದು ಮಹದೇವ ದೇಸಾಯಿಯವರನ್ನು. ರಾಮನ ಭಕ್ತ ಹನುಮಂತನಂತೆ, ರಾಮಕೃಷ್ಣ ಪರಮಹಂಸರಿಗೆ ವಿವೇಕಾನಂದರಿದ್ದಂತೆ ತಮ್ಮ ಜೀವನವನ್ನು ಗಾಂಧೀಜಿಯವರಿಗೆ ಸಮರ್ಪಿಸಿಕೊಂಡ ಮಹದೇವ ದೇಸಾಯಿಯವರನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ. ಗಾಂಧೀಜಿಯವರ ಸಮಯಪಾಲನೆ, ಕ್ರಮಬದ್ಧ ಸಾರ್ವಜನಿಕ ಪ್ರತಿಸ್ಪಂದನೆ ಮತ್ತು ಸಕಾಲಿಕ ಪತ್ರಿಕಾ ವರದಿ, ಹೇಳಿಕೆಗಳು, ಸತ್ಯಾಗ್ರಹದ ಕರೆಗಳು ಪ್ರಕಟಣೆಗೊಳ್ಳುತ್ತಿದ್ದವು ಅಂದರೆ ಅದರ ಹಿನ್ನೆಲೆಯಲ್ಲಿ ಮಹದೇವರ ಶ್ರಮ, ವಿದ್ವತ್ತು ಮತ್ತು ಕಾರ್ಯದರ್ಶಿತ್ವ ಕಾರಣವಾಗಿದ್ದವೆಂಬುದನ್ನು ಅತ್ಯವಶ್ಯವಾಗಿ ಗಮನಿಸಲೇಬೇಕು. ಜೊತೆಗೆ, ಇಲ್ಲಿ ಮಹದೇವ ದೇಸಾಯಿಯವರ ನೆರಳಿನಂತೆ ಅವರ ಪ್ರತೀ ಕಾರ್ಯದಲ್ಲಿಯೂ ಜೊತೆಯಾದ ಅವರ ಪತ್ನಿ ದುರ್ಗಾ ಬೆಹನ್ ರನ್ನು ಕೂಡಾ ನೆನಪಿಸಿಕೊಳ್ಳಬೇಕು. 


ಸ್ವಾತಂತ್ರ್ಯಕ್ಕಾಗಿನ ನೂರಾರು ಬಲಿದಾನಗಳನ್ನು ನಾವು ಗಮನಿಸುವಾಗ.. ಸ್ವಾತಂತ್ರ್ಯ ಬರುವುದಕ್ಕಿಂತಲೂ ಮುನ್ನವೇ ಮಡಿದ ಹಲವರನ್ನು ಗಮನಿಸಬಹುದು. ಅದರಲ್ಲಿ ಗಾಂಧೀಜಿಯ ಕೊನೆಯ ಮಹಾಸಂಗ್ರಾಮವಾದ 'ಭಾರತ ಬಿಟ್ಟು ತೊಲಗಿ' ಚಳುವಳಿಯಲ್ಲಿ ಗಾಂಧೀಜಿಯ ಜೊತೆಯಲ್ಲಿಯೇ ಆಗಾಖಾನ್ (ಅರಮನೆ) ಸೆರೆಮನೆಯಲ್ಲಿ ಗಾಂಧಿಯವರ ಸೇವೆಯಲ್ಲಿಯೇ ಇದ್ದಾಗಲೇ 1942 ಆಗಸ್ಟ್ 15ರಂದು ಮಹದೇವರು ಮರಣ ಹೊಂದಿದರು. ಅದಾದ ಸರಿಯಾದ 5 ವರ್ಷಕ್ಕೆ ಅಂದರೆ 1947 ಆಗಸ್ಟ್ 15ರಂದು ನಮ್ಮೆಲ್ಲರಿಗೂ ಸ್ವಾತಂತ್ರ ದೊರೆತದ್ದನ್ನು ನೆನಪಿಸಿಕೊಳ್ಳಬಹುದು.


ತಮ್ಮ 25ನೇ ವರ್ಷದಲ್ಲಿಯೇ ಬಾಪೂಜಿಯವರಿಗೆ ತಮ್ಮ ಬದುಕನ್ನೇ ಸಮರ್ಪಿಸಿಕೊಂಡವರು. ನಂತರ, 25 ವರ್ಷಗಳ ಕಾಲ ಅಂದರೆ 50 ವರ್ಷದ ವರೆಗೂ ಅವರಿಗೆ ಬಲಗೈ ಬಂಟರಂತೆ, ಪುತ್ರನಂತೆ, ಮಿತ್ರನಂತೆ, ನೆರಳಂತೆ.. ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದವರು. ಮಹಾದೇವರ ತಂದೆ ಹರಿಭಾಯಿ ದೇಸಾಯಿಮ್ ತಾಯಿ ಜಮುನಾಬಾಯಿ. ಗುಜರಾತಿನ ಸೂರತ್ ಜಿಲ್ಲೆಯ ಉಲಪಾಡ್ ತಾಲೂಕಿನ ಸರಸ್ ಎಂಬ ಗ್ರಾಮದಲ್ಲಿ 1892 ಜನವರಿ ಒಂದರಂದು ಕುಟುಂಬದ ನಾಲ್ಕನೇ ಮಗನಾಗಿ ಜನಿಸಿದರು. ಏಳು ವರ್ಷದವರಿದ್ದಾಗಲೇ ತಾಯಿಯನ್ನು ಕಳೆದುಕೊಂಡವರು ಬೆಳೆದದ್ದು ಅಜ್ಜಿ ಮತ್ತು ತಂದೆಯ ಪಾಲನೆಯಲ್ಲಿ. ಹರಿಭಾಯಿಯವರು ಎರಡನೆಯ ವಿವಾಹವಾದರು. 


1901 ರಲ್ಲಿ ಪ್ರಾಥಮಿಕ ಶಾಲೆಯಿಂದ ಇಂಗ್ಲಿಷ್ ತರಗತಿಗಳಿಗೆ ಸೇರಲು ಪಕ್ಕದ ದಿಹೇನ್ ಗ್ರಾಮಕ್ಕೆ ಹೋಗಬೇಕಾಯಿತುಮ್ ಅಲ್ಲಿ ಕ್ರಮಬದ್ಧ ಶಿಕ್ಷಣ.. ಇಂಗ್ಲಿಷ್ ಭಾಷಾ ಪ್ರಭುತ್ವಕ್ಕೆ ಒಳ್ಳೆಯ ಬುನಾದಿ ಹಾಕಿತು. ಚಿಕ್ಕಂದಿನಿಂದಲೂ ಇವರು ವ್ಯಾಸಂಗಪ್ರಿಯರು. ವ್ಯಾಯಾಮದಲ್ಲಿ ಗಂಟೆಗಟ್ಟಲೆ ಆಸಕ್ತಿ. ಧರ್ಮ ಹಾಗೂ ಸಾಹಿತ್ಯ ಗ್ರಂಥಗಳನ್ನು ಓದುವ ಹವ್ಯಾಸ ಹೊಂದಿದ್ದರು. 13ನೇ ವಯಸ್ಸಿನಲ್ಲಿ ಮಹದೇವರಿಗೆ ತನ್ನ ಗಿಂತ ಒಂದು ವರ್ಷ ಚಿಕ್ಕವಳಾದ ದುರ್ಗಾ ಬೆಹನ್ ಜೊತೆಗೆ ವಿವಾಹವಾಯಿತು. ಆಟ, ಕುಣಿತಗಳಲ್ಲಿ ಹೆಚ್ಚು ಆಸಕ್ತಿ ಇಲ್ಲದಿದ್ದರೂ.. ತಿಳಿಹಾಸ್ಯ, ವಿನೋದದತ್ತ ಒಲವಿತ್ತು. ಬಿಡುವಿದ್ದಾಗಲೆಲ್ಲಾ ಸಾರ್ವಜನಿಕ ಪುಸ್ತಕ ಭಂಡಾರದಲ್ಲಿ ಓದುತ್ತಾ ಗಂಟೆಗಟ್ಟಲೆ ಕಾಲ ಕಳೆಯುತ್ತಿದ್ದರು. 


ಓದಿನ ವಿಚಾರದಲ್ಲಿ ಒಂದು ವ್ಯತ್ಯಾಸವನ್ನು ಗಮನಿಸಿದೆ. ಗಾಂಧೀಜಿಯವರಿಗೆ ಮುಖ್ಯವಾದದ್ದು ಮಾತ್ರ ಓದಿ ಎಷ್ಟು ಸಾಧ್ಯವೋ ಅಷ್ಟು ಸರಳ, ಕಡಿಮೆ ಪದಗಳಲ್ಲಿ ಬರೆಯುವ ರೂಢಿ ಇದ್ದರೆ.. ಮಹಾದೇವರು ಸಿಕ್ಕಿದೆಲ್ಲವನ್ನೂ ಓದುತ್ತಿದ್ದರಂತೆ. ಹಾಗೆ ಓದಿದ್ದೆಲ್ಲವನ್ನೂ ತಮ್ಮ ಬರಹದಲ್ಲಿ ಸಮರ್ಥವಾಗಿ ರೂಢಿಸಿಕೊಂಡು ರಸವತ್ತಾಗಿ ಬರೆಯುವ ಕಲೆ ಸಿದ್ಧಿಸಿತ್ತಂತೆ. ಇವರ ಭಾಷಾಂತರಗಳು ಸಹಾ ಸಮರ್ಥವಾಗಿ ಮೂಡಿ ಬರುತ್ತಿದ್ದವು. ಮಾಂಡಲೆ ಸೆರೆಮನೆಯಲ್ಲಿದ್ದ ಲೋಕಮಾನ್ಯರು ಬರೆದ ಗೀತಾ ರಹಸ್ಯದ ಕರಡು ಪ್ರತಿಯನ್ನು ಅಧಿಕೃತ ವಿಮರ್ಶೆಗಾಗಿ ಪ್ರಾಚ್ಯ ಸಂಶೋಧನ ಭಾಷಾಂತರ ಕಾರ್ಯಾಲಯಕ್ಕೆ ಕಳುಹಿಸಿಕೊಟ್ಟಾಗ, ಅಲ್ಲಿ ಕೆಲಸ ಮಾಡುತ್ತಿದ್ದ ಮಹದೇವರು ಅದನ್ನು ಪ್ರಭಾವಿತರಾಗಿ ಗೀತೆಯ ಬಗ್ಗೆ ಆಳವಾದ ಅಧ್ಯಯನಕ್ಕೆ ಮುಂದಾದರು. 


ಮಹಾದೇವರ ಎಲ್. ಎಲ್. ಬಿ ಪರೀಕ್ಷೆಗಳು ಮುಗಿದ ನಂತರ ಅಹಮದಾಬಾದಿನ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಪ್ರಾರಂಭಿಸಲು ನಿಶ್ಚಯಿಸಿದ್ದರು. ನಂತರ, ಸಹಕಾರಿ ಲೇವಾದೇವಿ ಸಂಘಗಳ ಮೇಲ್ವಿಚಾರಣೆಯಲ್ಲಿ ಮಹಾದೇವರಲ್ಲಿದ್ದ ನಿಯಮಬದ್ಧ ದಕ್ಷತೆ ಪ್ರಸಿದ್ಧವಾಯಿತು. ಹಲವಾರು ಸಣ್ಣ-ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಸಂದರ್ಭದಲ್ಲಿಯೇ.. 1915ರ ಜನವರಿ 9ರಂದು ಭಾರತಕ್ಕೆ ಆಗಮಿಸಿದಾಗ ಗಾಂಧೀಜಿ ಸತ್ಯಾಗ್ರಹ ಆಶ್ರಮವನ್ನು ಪ್ರಾರಂಭಿಸಿ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯುವ ಸಿದ್ಧತೆಯಲ್ಲಿದ್ದರು. ಆಗಲೇ.. ವಿರುದ್ಧ ಧೋರಣೆಯ ಮೂಲಕ ಮಹದೇವರು ಗಾಂಧೀಜಿಯವರ ಬಳಿ ಹೋದದ್ದು. ಅವರಿಂದ ಪ್ರಭಾವಿತರಾದದ್ದು. ಅಂತಹಾ ಮಹತ್ವದ ಘಟನೆ ಏನು..? ಆ ವಿರುದ್ಧ ಧೋರಣೆಗೆ ಕಾರಣವಾದರೂ ಏನು ಓದಿ ನೋಡಿ. 


1917ರ ಏಪ್ರಿಲ್ ನಲ್ಲಿ ಬಿಹಾರದ ಚಂಪಾರಣ್ಯದ ತೋಟಗಳ ಕೂಲಿಕಾರರಿಗೆ ಅನ್ಯಾಯವಾಗುತ್ತಿದ್ದಾಗ ಬ್ರಿಟಿಷ್ ಅಧಿಕಾರಿಶಾಹಿಯ ವಿರುದ್ಧ ಕೂಲಿಕಾರರಿಗೆ ನ್ಯಾಯ ದೊರಕಿಸಿಕೊಡಲು ಗಾಂಧೀಜಿಯ ತಂಡ ಹೋರಾಡುತ್ತಿತ್ತು. ಆಗ ಶಿಕ್ಷಕವರ್ಗ ಸಂಬಳ ಬಯಸದೆ ಸೇವೆ ಸಲ್ಲಿಸಬೇಕಿತ್ತು. ಮೊದಲ ತಂಡದಲ್ಲಿ ಮಹಾದೇವರು ಹಾಗೂ ದುರ್ಗಾ ಬೆಹನ್ ಸೇರಿದರು. ಯಾವ ಅನುಭವವೂ ಇಲ್ಲದೆ ಹಿಂದಿಯಲ್ಲಿಯೇ ಪಾಠ ಹೇಳುವ ತರಬೇತಿಯನ್ನು, ಗಾಂಧೀಜಿಯ ಕೊಟ್ಟದ್ದನ್ನು ಕಲಿತು ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಒಂದು ವರ್ಷ ನಡೆದ ಈ ಸೇವಾದೀಕ್ಷೆ ಮಹದೇವ ದೇಸಾಯಿ ದಂಪತಿಗಳ ಜೀವನದಲ್ಲಿ ಶಾಶ್ವತವಾಯಿತು. ಸತ್ಯಾಗ್ರಹ ಆಶ್ರಮದ ಕಡೆಗೆ ಹೊರಟ ಮಹದೇವ ದೇಸಾಯಿ ನಾನು ನಿಮ್ಮ ಕಾರ್ಯದರ್ಶಿಯಾಗಿ ಕೆಲಸ ಮಾಡಬಲ್ಲೆ ಎಂಬ ಮಾತನ್ನು ಹೇಳಿದಾಗ ಅದಕ್ಕೆ ಗಾಂಧಿ "ನನಗೆ ಬೇಕಾಗಿದ್ದ ವ್ಯಕ್ತಿಯನ್ನು ನಿನ್ನಲ್ಲಿ ಈಗಾಗಲೇ ಕಂಡುಕೊಂಡಿದ್ದೇನೆ" ಎಂದರು.


1918ರಲ್ಲಿ ಅಹಮದಾಬಾದ್ ನಗರದಲ್ಲಿ ನಡೆದ ಜವಳಿ ಮಿಲ್ಲುಗಳ ಕಾರ್ಮಿಕರ ಚಳುವಳಿಯಲ್ಲಿ ಪಾಲ್ಗೊಂಡರು. 1918ರಲ್ಲಿ ಬರಗಾಲ ಬಂದು ಗುಜರಾತಿನ ಖೇಡ ಜಿಲ್ಲೆಯಲ್ಲಿ ಕಂದಾಯ ರದ್ದು ಮಾಡದಿರಲು ಬ್ರಿಟಿಷ್ ಸರ್ಕಾರ ನಿರ್ಧರಿಸಿದ್ದರಿಂದ ಗಾಂಧೀಜಿಯ ನೇತೃತ್ವದಲ್ಲಿ ರೈತರು ಸತ್ಯಾಗ್ರಹ ಮಾಡಿದರು. ಅದೇ ಸಂದರ್ಭದಲ್ಲಿ ವಲ್ಲಭಭಾಯಿ ಪಟೇಲರು ರಾಷ್ಟ್ರೀಯ ರಂಗಕ್ಕೆ ಕಾಲಿಟ್ಟದ್ದು.. ಉಕ್ಕಿನ ನಾಯಕನೊಡನೆ ಸರಿಸಮವಾಗಿ, ಕೋಮಲ ಸ್ವಭಾವದ ಮಹಾದೇವ ದೇಸಾಯಿ ದೃಢವಾಗಿ ನಿಂತು ನೆರವಾದರು. 


1919ರ ಪ್ರಾರಂಭದ ವೇಳೆಗೆ ಗಾಂಧೀಜಿ ಮಹದೇವ ದೇಸಾಯಿಯವರನ್ನು ತಮ್ಮ ಮಾನಸ ಪುತ್ರ ಮತ್ತು ಉತ್ತರಾಧಿಕಾರಿಯಂದು ಘೋಷಿಸಿದರು. ಮಹದೇವರು ಪ್ರತಿದಿನ 18 ರಿಂದ 20 ಗಂಟೆಯವರೆಗೆ ಕೆಲಸ ಮಾಡುತ್ತಿದ್ದರು. ಇವರ ಕಾರ್ಯ ಕೌಶಲ್ಯ, ಮಾಧುರ್ಯ ಮತ್ತು ಅರ್ಹತೆಯಿಂದ ಮಿತ್ರರಷ್ಟೇ ಅಲ್ಲದೆ ಶತ್ರುಗಳೂ ಮೆಚ್ಚುತ್ತಿದ್ದರಂತೆ. ಮಹಾದೇವರೊಡನೆ ಇರುವಾಗ ಶತ್ರುತ್ವ ಸಾಧ್ಯವಿರಲಿಲ್ಲ. ಅವರ ಸುಸಂಸ್ಕೃತ ಧ್ವನಿ, ಸಭ್ಯ ಭಾಷೆ ಮತ್ತು ಶಿಷ್ಟಾಚಾರ, ಸಂಯಮಿತ ನಡೆ-ನುಡಿ ಮತ್ತು ಹಾಸ್ಯ-ವಿನೋದಗಳು ಆಕರ್ಷಕವಾಗಿದ್ದವು. ಅಜಾತಶತ್ರುವೆಂದರೂ ಅದರಲ್ಲಿ ತಪ್ಪಿಲ್ಲ. 


1919ರ ಮಾರ್ಚ್ 30ರಂದು ಮದರಾಸಿನಲ್ಲಿ ಕರಾಳವಾದ ರೌಲಟ್ ಮಸೂದೆ ವಿರುದ್ಧ ಮಹಾದೇವ ದೇಸಾಯಿ ಮತ್ತು ರಾಜಾಜಿಯೊಡನೆ ಸಮಾಲೋಚಿಸಿ ಗಾಂಧೀಜಿ ಸಾರ್ವತ್ರಿಕ ಹರತಾಳಕ್ಕೆ ಕರೆ ಕೊಟ್ಟರು. 1919ರ ಅಕ್ಟೋಬರ್ ನಲ್ಲಿ ಅಹಮದಾಬಾದ್ ನ ಸಬರಮತಿ ಆಶ್ರಮದಿಂದ ಗುಜರಾತಿ ಭಾಷೆಯಲ್ಲಿ 'ನವ ಜೀವನ', ಆಂಗ್ಲ ಭಾಷೆಯಲ್ಲಿ 'ಇಂಡಿಯಾ' ಪತ್ರಿಕೆಗಳು ಪ್ರಕಟವಾಗುವ ಏರ್ಪಾಡಾಯಿತು. ಇದಕ್ಕೆ ಪ್ರಕಾಶಕರಾಗಿದ್ದವರು ಮಹದೇವ ದೇಸಾಯಿ. ಅದರ ಇಡೀ ಕರಡನ್ನು ತಿದ್ದಿ, ಸಂಪೂರ್ಣ ಸಿದ್ದ ಮಾಡುತ್ತಿದ್ದಡ್ಡಿ ಮಹದೇವ ದೇಸಾಯಿಯವರು. ಮುಂದೆ ಹರಿಜನ ಪತ್ರಿಕೆಯ ಹೊಣೆಯನ್ನೂ ಹೊತ್ತರು. ಗಾಂಧೀಜಿಯವರ ಭಾಷಣವನ್ನು ಅರ್ಥವಾಗುವಂತೆ ಮತ್ತಷ್ಟು ಪರಿಣಾಮಕಾರಿಯಾಗಿ ದೇಸಾಯಿಯವರು ವರದಿ ನೀಡುತ್ತಿದ್ದರು. ಕೆಲವೊಮ್ಮೆ ಅವರ ಅನುಯಾಯಿಗಳು ಮಹದೇವ ದೇಸಾಯಿಯವರ ಭಾಷಣದ ವರದಿಯನ್ನೇ ಓದಿದರಾಯಿತು ಎಂದು ಅದರಲ್ಲಿ ಸಂತೃಪ್ತರಾಗುತ್ತಿದ್ದರಂತೆ.


1921ರ ಡಿಸೆಂಬರ್ 24ರ ರಾತ್ರಿ ಸರ್ಕಾರ ದೇಸಾಯಿಯವರನ್ನು ಬಂಧಿಸುತ್ತದೆ. ಆಗ್ರಾ ಸೆರೆಮನೆಯಲ್ಲಿ ಒಂದು ವರ್ಷ ಅವರನ್ನು ಬಂಧನದಲ್ಲಿಟ್ಟಿತ್ತು. ಅದಂತೂ ಅಸಹನೀಯ ದಿನಗಳು. ಆಗ ಪತ್ರಿಕೆಯ ಹೊಣೆ ಹೊತ್ತದ್ದು ದೇವದಾಸ್ ಗಾಂಧಿ. ದುರ್ಗಾ ಪೆಹನ್ ಗಂಡನ ದಸ್ತಗಿರಿಯಿಂದ ಭಯಗೊಳ್ಳದೆ, ಪತ್ರಿಕೆಯ ಕೆಲಸಕ್ಕೆ ತಾವೇ ನಿಂತರು. ಉತ್ತರ ಪ್ರದೇಶದ ಸೆರೆಮನೆಗಳಲ್ಲಿ ಕೈದಿಗಳನ್ನು ಅತ್ಯಂತ ಹೀನಾಯವಾಗಿ ಕಾಣುತ್ತಿದ್ದ ಕುರಿತು ಲೇಖನಗಳು ಬಂದವು. ಅದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದೇ ಮಹದೇವ ದೇಸಾಯಿ. 


1934ರ ಆಗಸ್ಟ್ ನಲ್ಲಿ ಸಬರಮತಿ ಆಶ್ರಮವನ್ನು ತ್ಯಜಿಸಿದಾಗ ಗಾಂಧೀಜಿಯವರು ಸ್ವರಾಜ್ಯ ಸಿಗುವವರೆಗೂ ಅಲ್ಲಿ ಕಾಲಿಡನೆಂದು ಶಪಥ ತೊಟ್ಟು, ಶುದ್ಧ ಗ್ರಾಮೀಣ ಜೀವನವನ್ನು ಅಳವಡಿಸಿಕೊಳ್ಳಲು ನಿಶ್ಚಯಿಸಿ ಮಹಾರಾಷ್ಟ್ರದಲ್ಲಿ ನಾಗಪುರದ ಬಳಿಯ ವಾರ್ಧಾ ಗ್ರಾಮಕ್ಕೆ ಬಂದರು. ನಂತರ ಅಲ್ಲಿಯ ನಾಲ್ಕು ಮೈಲಿ ದೂರದಲ್ಲಿದ್ದ ಸೇಗಾಂವ್ ನಲ್ಲಿ, ಇಂದು ಸೇವಾ ಗ್ರಾಮ ಎಂದು ಹೆಸರುವಾಸಿಯಾಗಿರುವ ಗ್ರಾಮದಲ್ಲಿ ನೆಲೆಸಿದರು. ದಿನವೂ ಮಗನವಾಡಿಯಿಂದ ಅಂಚೆ ಬಂದ ಮೇಲೆ ಮಳೆ, ಚಳಿ, ಬಿಸಿಲೆನ್ನದೆ, ಕೆಸರು ತುಂಬಿದ್ದರೂ ಪತ್ರಗಳನ್ನು ತೆಗೆದುಕೊಂಡು ಮಹಾದೇವರು ಸೇವಾಗ್ರಾಮಕ್ಕೆ ಕಾಲ್ನಡಿಗೆಯಲ್ಲಿಯೇ ಪ್ರಯಾಣಿಸುತ್ತಿದ್ದರು. ಅವಶ್ಯಕತೆಯಿದ್ದಲ್ಲಿ ದಿನಕ್ಕೆರಡು ಬಾರಿಗೆ ಹೋಗಿ ಬಂದದ್ದೂ ಇದೆ.


ಮಹದೇವ ದೇಸಾಯಿ ದಂಪತಿಗಳಿಗೆ ಒಬ್ಬನೇ ಮಗ ಆತ ನಾರಾಯಣ ದೇಸಾಯಿ. 1965 ರಲ್ಲಿ ನಾರಾಯಣ ದೇಸಾಯಿ ಬರೆದಿರುವ 'ಬಾಪುವಿನ ಮಡಿಲಲ್ಲಿ' ಪುಸ್ತಕದಲ್ಲಿ ತಂದೆಯ ಬಗ್ಗೆಯೂ ಹಲವಾರು ವಿಚಾರಗಳನ್ನು ನೆನಪಿಸಿಕೊಂಡಿದ್ದಾರೆ. ಸಿದ್ದವನಹಳ್ಳಿ ಕೃಷ್ಣಶರ್ಮರು ೧೯೩೮ರ ಡಿಸೆಂಬರ್ ನಲ್ಲಿ ವಾರ್ಧಾಗೆ ಹೋಗಿ ಒಂದು ವರ್ಷದ ಕಾಲ ಅಲ್ಲಿಯೇ ಇದ್ದು 'ವಾರ್ಧಾಯಾತ್ರೆ' ಎಂಬ ಪ್ರವಾಸ ಕೃತಿಯನ್ನು ಬರೆದರು. ಅದರಲ್ಲಿ 'ಪಟ್ಟ ಶಿಷ್ಯ' ಎಂಬ ಶೀರ್ಷಿಕೆಯಲ್ಲಿ ಮಹದೇವರ ಕುರಿತ ಅಧ್ಯಾಯವಿದೆ.


ಇಂಗ್ಲೆಂಡಿನಲ್ಲಿ ಜಾನ್ಸನ್ ಎಂಬ ಸಾಹಿತಿಗೆ ಬಾಸ್ ವೆಲ್ ಎಂಬ ಗೆಳೆಯನಿದ್ದ. ಆತ ಜಾನ್ಸನ್ ಜೀವನದ ಪ್ರಕರಣವನ್ನು ಆಯಾ ದಿನವೇ ಬರೆದಿಡುತ್ತಿದ್ದ. ಮಹದೇವ ದೇಸಾಯಿ ಕೂಡಾ ಪ್ರತಿದಿನವೂ ಗಾಂಧೀಜಿಯವರ ಜೀವನವನ್ನು ಚಿತ್ರಿಸುತ್ತಿದ್ದರು. ಬಾಸ್ ವೆಲ್ ನನ್ನೇ ಮೀರಿಸಿದ್ದಾನೆ ಮಹದೇವ ಎನ್ನುತ್ತಿದ್ದರಂತೆ ಗಾಂಧಿ. 


ದುರ್ಗಾ ಬೆಹನ್ ಗೆ ಗಾಂಧೀಜಿಯ ಅನೇಕ ಸುಧಾರಣೆಗಳು ಒಗ್ಗುತ್ತಿರಲಿಲ್ಲ. ಹರಿಜನರ ವಿಷಯವಾಗಿ ತೆಗೆದುಕೊಂಡ ನಿರ್ಧಾರಗಳು ಸರಿ ಕಾಣುತ್ತಿರಲಿಲ್ಲವಾದರೂ ಮಹದೇವ ದೇಸಾಯಿ ಹಾಗೂ ದುರ್ಗಾ ರವರ ದಾಂಪತ್ಯದಲ್ಲಿ ಎಲ್ಲಷ್ಟು ವಿರಸವಿರಲಿಲ್ಲ. ಒರಿಸ್ಸಾದ ಪುರಿ ಪ್ರಕರಣ ಕೂಡ ಇಂತಹದ್ದೇ ಒಂದು ಪ್ರಸಂಗಕ್ಕೆ ಸಾಕ್ಷಿಯಾಗುತ್ತದೆ. ಆ ಕುರಿತು ಮತ್ತೊಂದು ಲೇಖನದಲ್ಲಿ ಬರೆಯುವೆ. 


ಮಹದೇವ ದೇಸಾಯಿಯವರ ಕೊನೆಯ ದಿನಗಳು ಹೇಗಿದ್ದವು.. ಅವರ ಅನಾರೋಗ್ಯಕ್ಕೆ ಅವರ ಶ್ರಮಬದ್ಧವಾದ,ವಿಶ್ರಾಂತಿ ಇಲ್ಲದ ಜೀವನವೂ ಕಾರಣವೆಂದರು ತಪ್ಪಾಗಲಾರದು. ನಾಡಿನ ಸ್ವಾತಂತ್ರ್ಯಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಜೀವಕ್ಕೆ ಗಾಂಧೀಜಿ ನೀಡಿದ ಅಂತಿಮ ಗೌರವ ಯಾವ ರೀತಿಯದ್ದು ಎಂದು ಅರಿವಾಗಬೇಕಿದ್ದರೆ ಆ ಪ್ರಸಂಗ ಓದಿ ನೋಡಿ.


ನಿಜಕ್ಕೂ ಮಹಾದೇವ ದೇಸಾಯಿ ಅವರ ಕುರಿತು ತಿಳಿದ ನಂತರ ಅವರ ಸರಳತೆ, ಕಠಿಣ ಪರಿಶ್ರಮ, ಓದು, ಸಾಹಿತ್ಯದ ಒಲವು, ನಿಷ್ಠೆ, ಕರ್ತವ್ಯ ಪಾಲನೆ, ಸ್ನೇಹಪರತೆ ಹೀಗೆ ಅವರ ಜೀವನದ ಪ್ರತಿಯೊಂದು ವಿಚಾರವೂ ಬಹಳಷ್ಟು ಸೆಳೆಯಿತು ಹಾಗೂ ಅಳವಡಿಸಿಕೊಳ್ಳಲು ಯೋಗ್ಯವಾಗುವಂತಹಾ ಎಲ್ಲಿಯೂ ಕಪ್ಪು ಚುಕ್ಕಿ ಕಾಣದಂತಹಾ ಬದುಕು ಎನ್ನಿಸಿತು. ಗಾಂಧಿಯಂತಹಾ ಬೃಹತ್ ವ್ಯಕ್ತಿತ್ವದೆದುರು ಮಹದೇವ ದೇಸಾಯಿ ಮುನ್ನೆಲೆಗೆ ಬಾರದೆ ಹೋದರೇನೋ ಎಂದೆನಿಸಿತು. ಸಿದ್ದವನಹಳ್ಳಿ ಕೃಷ್ಣಶರ್ಮರ ಹಾಗೂ ನಾರಾಯಣ ದೇಸಾಯಿಯವರ ಪುಸ್ತಕ ಓದುವ ಆಸೆ ಹುಟ್ಟಿದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ