ಪುಸ್ತಕದ ಶೀರ್ಷಿಕೆ : ಲವ್ ಟುಡೆ
ಲೇಖಕರು : ಎನ್. ಸಂಧ್ಯಾರಾಣಿ, ಭಾರತಿ ಬಿ. ವಿ, ಪೂರ್ಣಿಮಾ ಮಾಳಗಿಮನಿ
ಪ್ರಕಾಶಕರು : ಸಾವಣ್ಣ ಎಂಟರ್ಪ್ರೈಸಸ್
ಪ್ರಥಮ ಮುದ್ರಣ : 2023
ಪುಟಗಳು : 172
ಬೆಲೆ : 200 ರೂ.
ಸಾಮಾನ್ಯವಾಗಿ ನಾನು ಪ್ರೇಮ ಕಥೆಗಳನ್ನು ಓದುವುದು ತೀರಾ ಕಡಿಮೆ. ಆದರೆ, ಇಲ್ಲಿನ ಲೇಖಕಿಯರಾದ ಸಂಧ್ಯಾರಾಣಿ, ಭಾರತಿ ಬಿ. ವಿ ಹಾಗೂ ಪೂರ್ಣಿಮಾ ಮಾಳಗಿಮನಿ ಮೂವರೂ ಭರವಸೆಯ ಲೇಖಕಿಯರು ಹಾಗೂ ಅವರ ಕೆಲ ಪುಸ್ತಕಗಳನ್ನು ಓದಿ.. ಓದಿನಿಂದ ಪರಿಚಿತರಾಗಿದ್ದವರನ್ನು ಮತ್ತೆ ಹೊಸ ರೀತಿಯ ಪ್ರೀತಿಯ ಕಥೆಗಳಲ್ಲಿ ಮುಖಾಮುಖಿಯಾಗಬಹುದೆಂದು ಇದನ್ನು ಆಯ್ಕೆ ಮಾಡಿಕೊಂಡೆ. "ಪ್ರೀತಿಯೆಂದೇ ಮುಗಿಯದ ಕಥೆ..." ಎನ್ನುತ್ತಾರೆ ಲೇಖಕಿಯರು.
ಪ್ರೀತಿ ಒಂದು ಚೌಕಟ್ಟಿನಲ್ಲಿ ಬಂಧಿತವಾದ ಭಾವವಲ್ಲ. ಇಲ್ಲಿ ಮೂವರು ಲೇಖಕಿಯರ ತಲಾ ನಾಲ್ಕು ಕಥೆಗಳಿವೆ. ಪ್ರೀತಿಯ ಪರಿಭಾಷೆ, ವ್ಯಾಖ್ಯಾನ ಆಗಾಗ ಬದಲಾದರೂ.. ಎಲ್ಲವನ್ನು, ಎಲ್ಲರನ್ನೂ ಒಗ್ಗೂಡಿಸುವ ಭಾವವೇ ಅಲ್ಲವಾ..?! ಇಲ್ಲಿ ವಿಭಿನ್ನ ರೀತಿಯ, ವಿಭಿನ್ನ ಹಿನ್ನೆಲೆಯ, ವಿಭಿನ್ನ ವಯೋಮಾನದ, ವಿಭಿನ್ನ ಮನೋಭಾವದ ಕಥೆಗಳನ್ನು ಕಟ್ಟಿಕೊಟ್ಟಿದ್ದಾರೆ. ಮಿಶ್ರ ಭಾವ ಮೂಡಿಸಿದ ಕಥೆಗಳಿವು.
ಸೂಜಿಮಲ್ಲಿಗೆ, ದುಂಡುಮಲ್ಲಿಗೆ, ಜಾಜಿಮಲ್ಲಿಗೆ ಮುತ್ತುಮಲ್ಲಿಗೆ ಎಂಬ ಪ್ರೀತಿಯ ಪುಷ್ಪಹಾರದಲ್ಲಿ ಮೂವರು ಲೇಖಕಿಯರ ಒಂದೊಂದು ಕಥೆಗಳು ಪೋಣಿಸಲ್ಪಟ್ಟಿವೆ. ಇಲ್ಲಿ ಒಟ್ಟು 12 ಕಥೆಗಳಿವೆ.
ಸೂಜಿಮಲ್ಲಿಗೆ
ಫ್ಯಾನ್ ಫಿಕ್ಷನ್ - ಪೂರ್ಣಿಮಾ ಮಾಳಗಿಮನಿ
ಚಿದಂಬರನ ಮೊದಲ ಸಿನಿಮಾದ ನಂತರ ನಿರ್ದೇಶಿಸಿದ ಆರು ಸಿನಿಮಾಗಳು ಸಾಲಾಗಿ ಸೋತಿದ್ದವು. ಸಂಹಿತಾ ಮತ್ತೆ ಕಾಲೇಜಿಗೆ ಸೇರಿಕೊಂಡು ಇಂಗ್ಲಿಷ್ ಲಿಟರೇಚರ್ ಬೋಧಿಸತೊಡಗಿದಳು. 'ಫ್ಯಾನ್ ಫಿಕ್ಷನ್' ಎಂದರೆ ಒಂದು ಸಿನಿಮಾ ಅಥವಾ ಕಥೆಯಲ್ಲಿನ ಒಂದು ಪಾತ್ರವನ್ನು ಆಯ್ಕೆ ಮಾಡಿಕೊಂಡು ಆ ಪಾತ್ರವನ್ನು ತಮ್ಮಿಷ್ಟದಂತೆ ಬೆಳೆಸುತ್ತಾ ಹೋಗುವುದು. ಕಾಲೇಜಿನಲ್ಲಿ ಫ್ಯಾನ್ ಫಿಕ್ಷನ್ ಕತೆಗಳನ್ನು ಕಂಡಾಗ.. ಕನ್ನಡದಲ್ಲಿ ಚಿದಂಬರನ ಚಿತ್ರದ ಆಧಾರಿತ ಫ್ಯಾನ್ ಫಿಕ್ಷನ್ ಇರಬಹುದೆಂದು ಹುಡುಕಿದವಳು ಆತನಿಗೂ ಅದನ್ನು ಹೇಳಿದಳು. ಚಿದಂಬರನ ಮನಸ್ಥಿತಿ ನಂತರ ಹೇಗೆ ಬದಲಾಯಿತು..? "ಚಿದಂಬರನನ್ನು ಬದಲಾಯಿಸಿದ್ದು ನನ್ನ ಪ್ರೀತಿಯಲ್ಲ. ಇವನು ಹುಟ್ಟಿಸಿದ ಪಾತ್ರ ಪುರು." ಎಂದು ಸಂಹಿತಾಳಿಗೆ ಅನ್ನಿಸಿದ್ದೇಕೆ..?
ಮಳೆ ನಿಂತು ಹೋದ ಮೇಲೆ... - ಭಾರತಿ ಬಿ. ವಿ
ಎದುರಿಗೆ ರಾಶಿ ಹಾಳೆಗಳನ್ನು ಹರಡಿಕೊಂಡ ಅಪರ್ಣಾಳಿಗೆ ಅವನ್ನೆಲ್ಲಾ ವಿಲೇವಾರಿ ಮಾಡಬೇಕೆನಿಸಿದರೂ ಆ ಕೆಲಸ ಸುಲಭದ್ದೇನೂ ಆಗಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಅವಳಿಗೆ ಮರೆವು ಬೇರೆ ಶುರುವಾಗಿತ್ತು. ತನ್ನ ಆಪ್ತಳಾದ ಮಾಯಾಳಿಗೆ ಕರೆ ಮಾಡಿ ಕರೆದಿದ್ದ ಅಪರ್ಣಾ ಆಗಾಗ ಎತ್ತಿಕೊಂಡ ಕಥೆಗೂ.. ಅವಳ ಬದುಕಿಗೂ ಇದ್ದ ಕೊಂಡಿ ಏನು..? ಮಾಯಾಳಿಗೆ ಅದು ಗೊತ್ತಿದ್ದರೂ.. ಗೊತ್ತಿಲ್ಲದಂತೆ ನಟಿಸಿದಳೇ..? ಚೆಂದದ ಕವಿತೆಗಳು ಮನಸ್ಸಲ್ಲುಳಿಯುವಂತಿದೆ.
ಮರೀನ್ ಡ್ರೈವ್ ನಲ್ಲಿ ಒಂದು ಇರುಳು - ಎನ್. ಸಂಧ್ಯಾರಾಣಿ
'ಕ್ಲಸ್ಟ್ರೋಫೋಬಿಯಾ' - ಇಕ್ಕಟ್ಟಾದ, ಒತ್ತಾಗಿರುವ ಜಾಗಗಳು ಮನಸ್ಸಿನಲ್ಲಿ ಹೆಸರಿಲ್ಲದ ಆತಂಕ ಸೃಷ್ಟಿಸುತ್ತವೆ. ಅದನ್ನು ಹೊಂದಿದ್ದ ಆರಭಿ ಹಾಗೂ ಬೆಂಗಳೂರಿನ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ನಲ್ಲಿ ನಡೆದ ಒಂದು ಚಲನಚಿತ್ರ ಶಿಬಿರದಲ್ಲಿ ಅವಳಿಗೆ ಸಿಕ್ಕ ಕೇದಾರ ಇಬ್ಬರ ಬದುಕಿನ ಕಥೆ ತೆರೆದುಕೊಳ್ಳುತ್ತಾ ಸಾಗುತ್ತದೆ.
"ಹಾರಲು ಸಜ್ಜಾಗುವುದು ಏಕಕಾಲದಲ್ಲಿ ಅದೆಂತಹ ಬಿಡುಗಡೆ ಮತ್ತು ಅದೆಂತಹ ಅತಂತ್ರ ಸ್ಥಿತಿ..." ಸಾಲು ಅದೆಷ್ಟು ಅರ್ಥಪೂರ್ಣ.
ದುಂಡು ಮಲ್ಲಿಗೆ
ಆರಿ ಹೋದ ಕಾಫಿ - ಭಾರತಿ ಬಿ. ವಿ
ಕೊಳಚೆ ಬಾರಿನಲ್ಲಿ ಕುಳಿತು ಹಾಡುಹಗಲೇ ಕಂಠಮಟ್ಟ ಕುಡಿಯುವ ಅವನನ್ನು ಉತ್ಕಟವಾಗಿ ಪ್ರೀತಿಸುವ ಅವಳಿಗೆ ಸಿಗುತ್ತಿದ್ದದ್ದು ಹೊಲಸು ಬೈಗುಳವೇ.. ಅಂತಹಾ ಆ ಇಬ್ಬರೂ ಎರಡುವರೆ ವರ್ಷಗಳ ನಂತರ ಒಬ್ಬಳು ಕಾಮನ್ ಫ್ರೆಂಡ್ ನಿಂದ ಮತ್ತೆ ಮುಖಾಮುಖಿಯಾದ ದಿನ. ಕಾಫಿಯಂತೆ ಪ್ರೀತಿಯೂ ಆರಿ ಹೋಗಿತ್ತಾ ಅಥವಾ ಆರಿ ಹೋದ ಕಾಫಿಯ, ಪ್ರೀತಿಯ ರೂಪ ಬದಲಾಯಿತಾ ಓದಿ ನೋಡಿ.
ಟ್ರೂಥ್ ಆರ್ ಡೇರ್ - ಎನ್. ಸಂಧ್ಯಾರಾಣಿ
ನಲ್ವತ್ತರ ಯಶಸ್ವಿ ಉದ್ಯಮಿ ಕಲ್ಯಾಣಿ, ಖಾಸಗಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಮಧುವಂತಿ, ಒಡಿಸ್ಸಾ ನರ್ತಕಿ ಸಾವನಿ, ಜರ್ನಲಿಸ್ಟ್ ವಿಭಾವರಿ ನಾಲ್ವರೂ ಡ್ಯಾನ್ಸ್ ಟು ಫಿಟ್ನೆಸ್ ಜಿಮ್ ನಿಂದ ಪರಿಚಯವಾದವರು. ಹೀಗೆ ಪರಿಚಯವಾದವರ ಸಲುಗೆ ಬೆಳೆದು ಒಟ್ಟಾದಾಗ ಟ್ರೂಥ್ ಆರ್ ಡೇರ್ ಅವರವರು ಕಂಡುಕೊಂಡ ಅವರವರ ಬದುಕುಗಳು ಹೇಗಿದ್ದವು..?
"ಮೋಹವಲ್ಲ, ಕಾಮವಲ್ಲ.. ಸುಮ್ಮನೆ ಯಾರಾದರೂ ಮಾತೇ ಇಲ್ಲದೆ ನನ್ನ ಕೈ ಹಿಡಿದುಕೊಂಡು ಕೂರಬೇಕು. ಆದರೆ, ನಾನು ಅದನ್ನು ಬೇಡಿ ಪಡೆಯಬಾರದು" ಎನ್ನುವ ಮಾತಿನ ಹಿಂದೆ ಅದೆಷ್ಟೆಲ್ಲಾ ಭಾವಗಳು ಅಡಗಿವೆ.
ಈ ಟಚ್ ಅಲ್ಲಿ ಏನೋ ಇದೆ... - ಪೂರ್ಣಿಮಾ ಮಾಳಗಿಮನಿ
ಶ್ರೀಲತಾಳನ್ನು ಪ್ರೀತಿಸದ ಶ್ರೀಹರಿಯನ್ನು ಎಲ್ಲರೂ ತಪ್ಪು ತಿಳಿದುಕೊಳ್ಳುವುದಕ್ಕೆ ಆತ ಹಾಗೂ ಪವನ್ ಸ್ನೇಹ ಕಾರಣವಾಗಿತ್ತು. ಮತ್ತೆ ಶ್ರೀಲತಾ ರೆಡ್ಡಿ ಶ್ರೀಹರಿಗೆ ಸಿಕ್ಕ ಸಂದರ್ಭದಲ್ಲಿ ನಡೆದ ಪ್ರಸಂಗ ಇಲ್ಲಿದೆ.
ಜಾಜಿ ಮಲ್ಲಿಗೆ
ಕ್ಷಣಭಂಗುರದ ಜಗತ್ತಿನಲ್ಲಿ ನಿರಂತರತೆಯ ಬಾಜಾರು ಹುಡುಕುತ್ತಾ... - ಎನ್. ಸಂಧ್ಯಾರಾಣಿ
ಋತು, ರಾಗ, ಅವನ, ಅವಳ ಭಾವಗಳು ಮೇಳೈಸಿರುವ ಕಥೆ ವಿಭಿನ್ನವಾಗಿ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ನನ್ನಿಷ್ಟದ ಅವರ ಕವಿತೆಯ ಸಾಲುಗಳು ಕೂಡ ಇಲ್ಲಿ ಉಲ್ಲೇಖವಾಗಿದ್ದು ಕಂಡು ಖುಷಿಯಾಯ್ತು.
ಲವ್ವು ಗಿವ್ವು ಅಂತೆಲ್ಲಾ ಏನಿಲ್ಲ - ಪೂರ್ಣಿಮಾ ಮಾಳಗಿಮನಿ
ಆಫೀಸ್ ನಲ್ಲಿ ಪರಿಚಯವಾದ ಅವನ ಮುಂದೆ ಇವಳು ಎಲ್ಲದರಲ್ಲೂ ಜೂನಿಯರ್. ಅನುಭವದಲ್ಲಿಯೂ.. ಹೀಗೆ ಒಂದು ದಿನ ಹೇಳಿದ ಒಬ್ಬರು ಮೇಷ್ಟ್ರ ಕಥೆ ಅವರ ಬದುಕಿನಲ್ಲಿ ನಡೆಯುವಂತಹಾ ಘಟನೆಗೆ ಪೀಠಿಕೆಯಾಗಿತ್ತೇ.. ಎಂಬ ಭಾವವೂ ಕಾಡುತ್ತದೆ. ಪ್ರೀತಿ ಎಂದರೆ ಅದು ಇಷ್ಟೇ ಅಲ್ಲ ಗಂಡು, ಹೆಣ್ಣಿನ ಭಾವನೆಗಳಾಚೆಗಿನ ಬದುಕು ತೆರೆದುಕೊಳ್ಳುವ ಪರಿ ಅಚ್ಚರಿ ಹುಟ್ಟಿಸುತ್ತದೆ.
ರೀಸೈಕಲ್ ಬಿನ್ - ಭಾರತಿ ಬಿ. ವಿ
ಪರಿಚಿತಳಾಗಿ, ಆತ್ಮೀಯಳಾಗಿ, ಜೀವದ ಗೆಳತಿಯಾದ ನಾಲ್ಕು ವರ್ಷದಲ್ಲಿಯೇ ಆಪ್ತರಾಗಿದ್ದ ತನು ಹಾಗೂ ಮಿತ್ರಾರ ನಡುವೆ ಬಂದಿದ್ದು ಮಾಧವನೋ ಅಥವಾ ತನು ಹಾಗೂ ಮಾಧವರ ನಡುವೆ ಮಿತ್ರಾ ಬಂದಳೋ..? ಸಂಘಮಿತ್ರಾ ಸತ್ತ ನಂತರ ಪಶ್ಚಾತಾಪದ ಎರಡು ಮಾತುಗಳಾದರೂ ಇರಬಹುದು ಎಂದು ಅವಳು ಎಂದೂ ಕಳಿಸಿದ್ದ ಮೇಲ್ ಓದಿದ ತನುವಿಗೆ ಅಲ್ಲಿ ಸಿಕ್ಕಿದ್ದೇನು..? ರೀಸೈಕಲ್ ಬಿನ್ ನಲ್ಲಿ ಹಾಕಿದ ತಕ್ಷಣ ಎಲ್ಲವೂ ಅಷ್ಟು ಸುಲಭವಾಗಿ ಡಿಲೀಟ್ ಆಗುತ್ತದಾ..?
ಮುತ್ತುಮಲ್ಲಿಗೆ
ನನ್ನ ಒಲವಿನ ಬಣ್ಣ - ಪೂರ್ಣಿಮಾ ಮಾಳಗಿಮನಿ
ಎಂಟು ವರ್ಷಗಳ ದಂಪತಿಗಳಾಗಿದ್ದ ಅವಿನವ್ ಹಾಗೂ ಋತು ಇತ್ತೀಚೆಗೆ ತಲೆದೋರಿದ್ದ ಸಮಸ್ಯೆಗಳನ್ನು ಮಾತನಾಡಿ ಬಗೆಹರಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿತ್ತದು.ಅದರಲ್ಲಿ ಸಫಲವಾದರೇ..? "ಪ್ರೀತಿಯ ಹೆಸರಲ್ಲಿ ದ್ವೇಷ ಸಾಧಿಸಿದೆ." ಎಂಬ ಭಾವ ಬಂದದ್ದು ಯಾರಿಗೆ ಹಾಗೂ ಹಾಗೆ ಮಾಡಿದ್ದು ಯಾರು? ನೀವೇ ಓದಿ ನೋಡಿ.
ನೋಡಿ ನೋಡಿ ಪ್ರೇಮವನು ಮಾಡೋದಲ್ಲ - ಭಾರತಿ ಬಿ. ವಿ
ಸಾಧಾರಣವಾಗಿ ತನ್ನದೇ ಹಾಡುಗಳ ಲೋಕದಲ್ಲಿ ಮುಳುಗಿರುತ್ತಿದ್ದ ದಿವಾಕರನನ್ನು ಸೆಳೆದದ್ದು ಅವಳು. ಶ್ರೀವಲ್ಲಿಗೂ ತಿಳಿಯದಂತೆ ಆಕೆಯ ಹಿಂದೆ ಹೋದ ದಿವಾಕರನ ಹಾಗೂ ಅವಳ ಸಂಬಂಧವಾದರೂ ಎಂತಹದು..?
ಎಂದೂ ಮುರುಟಿಹೋಗದ
ಎಂದು ಮುದಿಯಾಗದ
ಎಂದು ಮುಗಿದುಹೋಗದ ಪ್ರೇಮ !
ಇಲ್ಲಿ ಕಾಣಸಿಗುತ್ತದೆ.
ಮಾತಾಡ್ ಮಾತಾಡು ಮಲ್ಲಿಗೆ... - ಎನ್. ಸಂಧ್ಯಾರಾಣಿ
ಶಂಕರಪ್ಪ ಹಾಗೂ ಭವಾನಿಯಮ್ಮ ಇಬ್ಬರೂ ಮಾತನಾಡುತ್ತಿದ್ದದ್ದು ನಂದಗೋಪಾಲನ ಮೂಲಕವೇ.. ಒಟ್ಟು ಕುಟುಂಬದಲ್ಲಿದ್ದ ಅವರು ಈ ಪರಿಸ್ಥಿತಿಗೆ ಬಂದದ್ದಾದರೂ ಏಕೆ..? ಪರಸ್ಪರ ಮಾತನಾಡದಿದ್ದರೂ ಅವರಿಬ್ಬರ ನಡುವಿದ್ದದ್ದು ಪ್ರೀತಿ-ಕಾಳಜಿ, ಒಬ್ಬರಿಗೊಬ್ಬರ ಆಸರೆ. ಭವಾನಿಯಮ್ಮನ ಸಾವು ಶಂಕರಪ್ಪನವರ ಮೇಲೆ ಬೀರಿದ ಪರಿಣಾಮವೇನು..?
ಇಲ್ಲಿನ ಪ್ರೇಮಿಗಳಲ್ಲಿ ಕೇವಲ ಹರೆಯದ ಗಂಡು-ಹೆಣ್ಣುಗಳು ಮಾತ್ರವಿಲ್ಲ. ವಿವಿಧ ರೀತಿಯ ಪ್ರೇಮ ಕಥೆಗಳು ಕಾಣುತ್ತವೆ. ಎಷ್ಟೋ ಪ್ರೇಮಗಳು ನೇರವಾಗಿ ಐ ಲವ್ ಯು ಎಂದು ಹೇಳುವಂತಹವಲ್ಲ. ಕೆಲವು ಅನುಭೂತಿಗೆ ಸಿಗುವಂತಹವು. ಮತ್ತೆ ಕೆಲವು ಅನುಭವಕ್ಕೆ ಕಾಣುವಂತಹಾ ಬರಿಗಣ್ಣಿಗೆ ಕಾಣದ ಕೆಲ ಪ್ರೇಮ ಕಥೆಗಳು ಇಲ್ಲಿವೆ. ಎಲ್ಲಾ ಮಲ್ಲಿಗೆಯೂ ಒಂದೇ ಸುವಾಸನೆಯನ್ನು ಬೀರಲಾರವು. ಕೆಲವು ಗಾಢ, ಮತ್ತೆ ಕೆಲವು ಮಂದ, ಮತ್ತೆ ಕೆಲವು ಆ ಕ್ಷಣಕ್ಕೆ ಮತ್ತೇರಿಸಿದರೆ, ಮತ್ತೆ ಕೆಲವು ನೆನಪಿನಲ್ಲಿ ಉಳಿಸಿ ಹೋಗುವಂತಹಾ ಘಮಲು. ಇಲ್ಲಿನ ಸೂಜಿಮಲ್ಲಿಗೆ, ದುಂಡುಮಲ್ಲಿಗೆ, ಜಾಜಿಮಲ್ಲಿಗೆ ಮುತ್ತುಮಲ್ಲಿಗೆ ಓದಿ ಸವಿಯಿರಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ