ಸೋಮವಾರ, ಏಪ್ರಿಲ್ 20, 2026

ಅಸ್ವೀಕೃತರು (ಪುಸ್ತಕ ಯಾನ - 277)


ಪುಸ್ತಕದ ಶೀರ್ಷಿಕೆ : ಅಸ್ವೀಕೃತರು

ಲೇಖಕರು : ಸಿ. ಎನ್. ಮುಕ್ತಾ

ಪ್ರಕಾಶಕರು : ರಾಜಲಕ್ಷ್ಮೀ ಪ್ರಕಾಶನ

ಪ್ರಥಮ ಮುದ್ರಣ : 1993

ಪುಟಗಳು : 138


ಸಿ.ಎನ್ ಮುಕ್ತಾ ಅವರ 'ಅಸ್ವೀಕೃತರು' 1990 ವನಿತಾ ಯುಗಾದಿ ಕಾದಂಬರಿ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಕಾದಂಬರಿ. ವೇಶ್ಯಾ ಸಮಸ್ಯೆಯ ಚಿತ್ರಣದ ಜೊತೆಗೆ ಅದನ್ನು ತೊರೆದರೂ ಅವರು ಅನುಭವಿಸುವ ಸಮಸ್ಯೆಗಳಿವೆ. ಅಂತಹಾ ಬದುಕು ಬದುಕಿದ ಜನರು ಸಾಮಾನ್ಯ ಬದುಕಿಗೆ ಮರಳುವಾಗ ಹಾಗೂ ಮರಳಿದಾಗ ಉಳಿದವರು ಅವರನ್ನು ಯಾವ ರೀತಿಯಲ್ಲಿ ಕಾಣುತ್ತಾರೆ ಹಾಗೂ ಅಂತಹವರಿಗೆ ಸಮಾಜದ ಹಾದಿ ಅಷ್ಟು ಸುಲಭವಾಗಿ ಸಾಮಾನ್ಯ ಜೀವನಕ್ಕೆ ಎಡೆ ಮಾಡಿಕೊಡುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಚಿತ್ರಿಸಿದ್ದಾರೆ.


ಎಲ್ಲೋ ಕಾಣದ ಊರಿನಲ್ಲಿ ಅಥವಾ ಕಾಣದ ಸ್ಥಳಗಳಿಗೆ ಅವರ ಹಿನ್ನೆಲೆ ತಿಳಿಯದೆ ಬದುಕುವ ಸಂದರ್ಭಕ್ಕೂ.. ತಿಳಿದವರ ನಡುವೆ ತಾವು ಬದಲಾಗಿದ್ದೇವೆ ಎಂದು ಎಷ್ಟೇ ಹೇಳಿದರೂ ಹೆಜ್ಜೆಹೆಜ್ಜೆಗೂ ಅನುಮಾನಿಸುವ ಜನರ ಕಣ್ಣುಗಳನ್ನು ನಿವಾರಿಸಿಕೊಂಡು ತಾವು ತಾವಾಗಿಯೇ ಬದುಕುವ ಪರಿ ಸುಲಭವಂತೂ ಅಲ್ಲವೇ ಅಲ್ಲ. ಅದು ಇಲ್ಲಿ ಸಮರ್ಥವಾಗಿ ಚಿತ್ರಿತವಾಗಿದೆ. 


ವಠಾರದ ಓನರ್ ನಾರಾಯಣ ಹಾಗೂ ಆತನ ಪತ್ನಿ ಜಾನಕಿ ಎಲ್ಲರೊಡನೆ ಹೊಂದಿಕೊಳ್ಳುವ ಸ್ವಭಾವದಿಂದ ಅವರನ್ನು ಎಲ್ಲರೂ ಇಷ್ಟಪಡುತ್ತಿದ್ದರು. ಬಾಡಿಗೆದಾರರಿಗೂ ಅನುಕೂಲ ಮಾಡಿಕೊಟ್ಟಿದ್ದ ಅವರನ್ನು ಎಲ್ಲರೂ ನೆನೆಯುತ್ತಿದ್ದರು. ನಾರಾಯಣ ವಠಾರವನ್ನು ಮಾರಿ ತನ್ನ ಮಗನ ಬಳಿಗೆ ಹೋಗಬೇಕಾದ ಸಂದರ್ಭ ಬಂದಿತ್ತು. ವಠಾರದಲ್ಲಿರುವ ಒಬ್ಬೊಬ್ಬರದ್ದು ಒಂದೊಂದು ರೀತಿಯ ಸಮಸ್ಯೆ. ಹೊಸಬರು ಯಾರೋ.. ಏನೋ.. ಎನ್ನುವ ಆತಂಕವಿತ್ತಾದರೂ ಅವರೆಲ್ಲರಿಗೂ ಸಮಾಧಾನ ತಂದಿದ್ದು ಮನೆಯ ಬಾಡಿಗೆ ಇನ್ನೂ ಒಂದು ವರ್ಷ ಹೆಚ್ಚು ಮಾಡುವುದಿಲ್ಲ. ಅಲ್ಲದೇ ವಠಾರವನ್ನು ಅವರು ಬದಲಾವಣೆ ಮಾಡುವುದಿಲ್ಲವೆಂದು. ಆತಂಕ ತಂದದ್ದು ಅಲ್ಲಿಗೆ ಬರುತ್ತಿರುವುದು ಮೂಗೂರಸಾನಿ.


ನರಸಾಪುರದ ಸಹಕಾರರೊಬ್ಬರು ವಠಾರವನ್ನು ತೆಗೆದು ಕೊಟ್ಟಿರುವುದು ಮೂಗೂರಸಾನಿಯೊಬ್ಬಳಿಗೆ. ಆದರೆ, ಆಕೆ ಯಾವ ಸಂಸಾರಸ್ಥರಿಗೂ ಕಡಿಮೆಯಿರಲಿಲ್ಲ. ಅವಳನ್ನು ತನ್ನ ಎರಡನೇ ಹೆಂಡತಿ ಎಂದೇ ಹೇಳಿಕೊಳ್ಳುತ್ತಾರಂತೆ. ಶಾಸ್ತ್ರೋಕ್ತವಾಗಿ ಅವಳನ್ನೇ ಮದುವೆಯಾಗಿದ್ದಾರೆ ಮಹಂತಪ್ಪ. ಅವರಿಗೆ ಮೂರು ಜನ ಹೆಣ್ಣುಮಕ್ಕಳು ಎಂಬ ವಿಚಾರವೇ ಆತಂಕ ತಂದದ್ದು.


ಒಬ್ಬೊಬ್ಬರಿಗೆಕ್ಷೆ ಒಂದೊಂದು ರೀತಿಯ ಆತಂಕ. ತನ್ನ ಮಗಳು ಅವರ ಮಕ್ಕಳ ಸ್ನೇಹ ಮಾಡಿದರೆ ಎಂಬುದು ಒಬ್ಬರಿಗಾದರೆ.. ತನ್ನ ಗಂಡನ ಬುದ್ಧಿಯ ಕುರಿತಾದ ಆತಂಕ ಇನ್ನೊಬ್ಬರಿಗೆ. ತನ್ನ ಮಗನ ಕುರಿತಾದ ಆತಂಕ. ಆದರೆ, ಇದಾವುದಕ್ಕೂ ಎಡೆ ಮಾಡಿಕೊಡದಂತೆ ಬಂದ ಕುಟುಂಬ ಎಲ್ಲರಂತೆಯೇ ಇದ್ದರು. ಅವರೆಲ್ಲರಿಗಿಂತ ಹೆಚ್ಚು ಮುಚ್ಚಟ್ಟೆಯಾಗಿಯೇ ಇದ್ದರು. ಹೆಂಗಸಿನ ಹೆಸರು ಮಹಾಲಕ್ಷ್ಮಿ. ಮೂವರು ಹೆಣ್ಣುಮಕ್ಕಳು. ದೊಡ್ಡವಳು ತಾರಾ, ಎರಡನೆಯವಳು ಚಂದ್ರಿಕಾ ಹಾಗೂ ಕೊನೆಯವಳು ಭಾನುಮತಿ. 


ಮಹಾಂತಪ್ಪನವರಿಗೆ ಕೊಂಚವಾದರೂ ಓದಿರುವ ಸುಂದರ ಹೆಣ್ಣನ್ನು ಮದುವೆಯಾಗಬೇಕೆಂಬ ಆಸೆ. ಆದರೆ ತಂದೆ-ತಾಯಿಯ ಬಲವಂತಕ್ಕೆ ಅವರ ಅಣ್ಣನ ಮಗಳು ಗೌರಿಯನ್ನೇ ಮದುವೆಯಾಗಬೇಕಾಗಿ ಬಂದಿತು. ಆಕೆಯ ಒರಟು ಮಾತು, ಗ್ರಾಮೀಣ ಭಾಷೆ ಹಾಗೂ ಮೆರೆಯುವ ಬುದ್ಧಿಯನ್ನು ಕಂಡು ಅಸಮಾಧಾನ. ಅಂತಹಾ ಸಂದರ್ಭದಲ್ಲಿ ಅಚಾನಕ್ಕಾಗಿ ನೋಡಿದ್ದು ಚಂದ್ರಸಾನಿಯ ಮಗಳಾದ ಗಂಗಾಳನ್ನು. ಆಕೆ ಮಹಂತಪ್ಪನವರ ಆಪ್ತನಾದ ರಂಗಪ್ಪನ ಬಳಿ ತಾನು ಗಂಗಾಳಿಗೆ ಗೆಜ್ಜೆಪೂಜೆ ಮಾಡುವುದಾಗಿಯೂ.. ಅದಕ್ಕೆ ಮಹಾಂತಪ್ಪನವರ ಒಪ್ಪಿಗೆ ಇದೆಯಾ ಎಂಬುದನ್ನು ತಿಳಿಯಲು ಹೇಳಿದ್ದು ಇವರ ಕಿವಿಗೆ ಬಿದ್ದಿತ್ತು. ರಂಗಪ್ಪ ಇದನ್ನು ಹೇಳದಿದ್ದರೂ.. ಆ ಹುಡುಗಿಯ ಮೇಲೆ ಮನಸ್ಸಾದ ಇವರು ಮಾತುಕತೆಗೆಂದು ಹೋದಾಗ ಗಂಗಾಳ ದುಃಖಕ್ಕೆ ಕಾರಣ ತಿಳಿದರು.


ಆಕೆ ನಿಜವಾಗಿಯೂ ಚಂದ್ರಸಾನಿಯಾ ಮಗಳಾಗಿರಲಿಲ್ಲ. ಈಕೆಯ ತಾಯಿ ಚಂದ್ರಸಾನಿಯ ಬಳಿ ಇದ್ದವಳು. ಆಕೆಯ ಸಾವಿನ ನಂತರ ಚಂದ್ರಸಾನಿಯ ಇರಬೇಕಾಗಿ ಬಂದಿತು. ಗಂಗಾಳಿಗೆ ಆ ವೃತ್ತಿಗೆ ಇಳಿಯುವ ಬಯಕೆಯಿರಲಿಲ್ಲ. ಶಾಸ್ತ್ರೋಕ್ತವಾಗಿ ತಾಳಿ ಕಟ್ಟಿ ವಿವಾಹವಾಗಿ ತನ್ನ ಎರಡನೇ ಪತ್ನಿಯನ್ನಾಗಿ ಸ್ವೀಕರಿಸಿದ್ದರು. ಗಂಗಾ ಮಹಾಲಕ್ಷ್ಮಿಯಾದಳು. ಮಹಂತಪ್ಪನ ಮನೆಯವರಿಗೆ ತಿಳಿದು ಬೆದರಿಸಿದರೂ ಅದಕ್ಕೆ ಜಗಲಿಲ್ಲ. ಮೊದಲಿಗೆ ಕೊಳ್ಳೇಗಾಲದಲ್ಲಿ ವಾಸ್ತವ್ಯವಿದ್ದರೂ.. ನಂತರ ನಡೆದ ಪ್ರಸಂಗ ಮೈಸೂರಿಗೆ ಬರುವಂತೆ ಮಾಡಿತ್ತು.


ಮಕ್ಕಳಿಗೆ ತಮ್ಮ ಬದುಕು ಎಲ್ಲರಂತಲ್ಲಾ ಎಂಬ ಅರಿವಿತ್ತು. ಚಂದ್ರಸಾನಿಯ ಮನೆಗೆ ಯಾವ ಸಂದರ್ಭದಲ್ಲಿಯೂ ಕಾಲಿಟ್ಟಿರಲಿಲ್ಲ ಮಹಾಲಕ್ಷ್ಮಿ. ಆದರೆ, ಆಗಾಗ ಬಂದು ಹೋಗಿ ಮಾಡುತ್ತಿದ್ದ ಚಂದ್ರಸಾನಿಗೆ ತಾರಾಳ ಮೇಲೆ ಕಣ್ಣಿತ್ತು. ರಜಾದಿನಗಳಲ್ಲಿ ಬೇಸರಿಸಿಕೊಂಡಿರುತ್ತಿದ್ದ ಮಕ್ಕಳನ್ನು ಕರೆದುಕೊಂಡು ಪ್ರವಾಸಕ್ಕೆ ಹೋಗಿ ಬರುತ್ತಿದ್ದರು ದಂಪತಿಗಳು. ತಾರಾ ಆ ಬಾರಿ ಪ್ರವಾಸಕ್ಕೆ ಹೋಗಲಿಲ್ಲ. ಅದೇ ಸಂದರ್ಭದಲ್ಲಿ ತಾರಾಳನ್ನು ಚಂದ್ರಸಾನಿ ತನ್ನ ಮನೆಗೆ ಕರೆದೊಯ್ದಳು. ಅಲ್ಲಿಗೆ ಬಂದ ರಾಜಶೇಖರನ ಕಣ್ಣು ಆಕೆಯ ಮೇಲೆ ಬಿದ್ದಿತ್ತು. ಅಷ್ಟರಲ್ಲಾಗಲೇ ತಾರಾಳಿಗೆ ಆ ವೃತ್ತಿಯ ಸಂತಸ ಮಾತ್ರವೇ ಕಾಣುತ್ತಿದ್ದು, ಅದರ ಹಿಂದಿನ ನೋವು, ಕಷ್ಟಗಳ ಅರಿವಾಗಿತ್ತು. ಅಲ್ಲಿಂದ ಹೋದರೆ ಸಾಕೆನಿಸುವ ಸಂದರ್ಭದಲ್ಲಿ ಮಹಾಲಕ್ಷ್ಮಿ ಬಂದು ಗಲಾಟೆ ಮಾಡಿ ಆಕೆಯನ್ನು ಕರೆದೊಯ್ದಳು. ನಂತರ ಆ ಸ್ಥಳವನ್ನೇ ಬಿಟ್ಟು ಮೈಸೂರಿನ ಈ ವಠಾರಕ್ಕೆ ಬಂದರು ಎಲ್ಲರೂ.


ತಾರಾಳಿಗೆ ವಠಾರದಲ್ಲಿದ್ದ ಶ್ಯಾಮಲಳ ಪರಿಚಯವಾಗಿ ಗೆಳೆತನ ಬೆಳೆಯಿತು. ಆಕೆ ಸಂಸಾರಸ್ಥೆಯೂ ಆದಳು. ಆದರೆ, ಓದನ್ನು ನಿಲ್ಲಿಸಲಿಲ್ಲ. ಮದುವೆಯ ನಂತರ ಪ್ರೌಢಕಳೆ, ಗಾಂಭೀರ್ಯ ಜೊತೆಗೆ ಅದರಲ್ಲಿನ ಗೌರವ ಈಕೆಯನ್ನು ಸೆಳೆಯುತ್ತಿತ್ತು.


ಕುಟುಂಬದ ಹಿನ್ನಲೆಯನ್ನು ತಿಳಿಸಿಯೇ ಮಕ್ಕಳನ್ನು ಮದುವೆ ಮಾಡಬೇಕು. ಗೌರವಯುತ ಸಂಸಾರ ಕಟ್ಟಿ ಕೊಡಬೇಕು ಎನ್ನುವ ಪ್ರಯತ್ನದಲ್ಲಿದ್ದಾಗ ಮಹಾಂತಪ್ಪನವರ ಗೆಳೆಯ ರಾಜಪ್ಪನವರ ದೆಸೆಯಿಂದ ಒಂದು ಸಂಬಂಧ ಬಂದಿತು. ಲೆಕ್ಚರರ್ ಆಗಿದ್ದ ಆದರ್ಶವಾದಿ ಹುಡುಗ ಹಾಗೂ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದ ಚಂದ್ರು ಆಕೆಯ ಕೈ ಹಿಡಿಯುವಂತಾಯ್ತು. ಸರಳವಾಗಿಯೇ ವಿವಾಹ ಮಾಡಿ ಎಲ್ಲಾ ಅನುಕೂಲಗಳನ್ನು ಮಾಡಿಕೊಟ್ಟಿದ್ದರೂ ಚಂದ್ರುವಿಗೆ ದಿನೇದಿನೇ ದುರಾಸೆ ಹೆಚ್ಚಾಯಿತು. ತಾರಾಳ ತಪ್ಪಿಲ್ಲದಿದ್ದರೂ.. ರಾಜಶೇಖರನ ಕೆಟ್ಟ ನೋಟಕ್ಕೆ ಸಿಲುಕಿದ್ದ ಅವಳು ಮುಂದೆ ಅದರ ಪರಿಣಾಮ ಅನುಭವಿಸಬೇಕಾಗಿ ಬಂದಿತು. ಆತ ಚಂದ್ರುವಿನ ಗೆಳೆಯ. ಇಲ್ಲಸಲ್ಲದನ್ನು ಹೇಳಿ ಆತನ ಮನಸ್ಸಿನಲ್ಲಿ ವಿಷವಿಟ್ಟಿದ್ದ. ಆಕೆ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿಯೇ ಚಂದ್ರುವಿನ ನಡೆ ಆಕೆಯನ್ನು ಮನೆ ಬಿಟ್ಟು ಹೊರಡುವಂತಾಗಿ ಮಾಡಿತು. 


ಮಹಾಂತಪ್ಪನವರು ಪ್ಯಾರಾಲಿಸಿಸ್ ನಿಂದ ಹಾಸಿಗೆ ಹಿಡಿದು ಆಸ್ಪತ್ರೆ ಸೇರಿದವರು ಮತ್ತೆ ಏಳಲಿಲ್ಲ. ಒಮ್ಮೆ ಹೋಗಿದ್ದಕ್ಕೆ ಬಹಳ ಅವಮಾನಗೊಂಡಿದ್ದ ಲಕ್ಷ್ಮಿ ಹಾಗೂ ಚಂದ್ರಿಕಾ ಮತ್ತೆ ಅತ್ತ ಬರದಂತೆ ಭಾಷೆ ತೆಗೆದುಕೊಂಡರು ಮಹಾಂತಪ್ಪನವರು. ಅವರ ಸಾವಿನ ವಿಚಾರವೂ ತಿಳಿದದ್ದು ಪೇಪರಿನಿಂದ. ಮನೆ ಬಾಡಿಗೆ ಬದುಕಿಗೆ ಸಾಕಾಗಿದ್ದರೂ.. ಉಳಿದ ಮಕ್ಕಳ ಮದುವೆ ಆಕೆಗೆ ಚಿಂತೆ ಮೂಡಿಸಿತ್ತು. ಅದೇ ಸಮಯಕ್ಕೆ ತಾರಾಳ ಬದುಕು ಹಾಳಾಗಿದ್ದು ಮನೆಯವರ ಮೇಲೆ ಪರಿಣಾಮ ಬೀರಿತ್ತು.


ತಾರಾ ಎಷ್ಟು ಮೃದುವೋ ಚಂದ್ರಿಕಾ ಅಷ್ಟೇ ಒರಟು. ಬದುಕಿನ ಹಾಗೂ ಮದುವೆಯ ಕುರಿತು ಓದಿನ ಕುರಿತು ಆಕೆಗೆ ಆಸಕ್ತಿ ಉಳಿದಿರಲಿಲ್ಲ. ಅಕ್ಕನ ವಿವಾಹದ ಬದುಕು ಅವಳನ್ನು ಸಂಸಾರದಿಂದ ವಿಮುಖಳನ್ನಾಗಿಸಿತು. ಆಕೆ ನಾಟಕ ಹಾಗೂ ಸಿನಿಮಾ ನಟಿಯಾಗುವ ಕನಸು ಕಂಡು ಅದರತ್ತ ಸಾಗಿದಳು.


ಬದುಕಿನಲ್ಲಿನ ನಿರಾಸೆಯಿಂದ ಸೋತ ತಾರಾ ತಾಯಿಯ ಮಾತಿನಿಂದ ನೊಂದು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಳು. ಈಗ ಮಹಾಲಕ್ಷ್ಮಿಯ ಪಾಲಿಗೆ ಉಳಿದದ್ದು ಭಾನುಮತಿ ಮಾತ್ರವೇ.. ಆಕೆ ಇಬ್ಬರಂತೆಯೂ ಅಲ್ಲ. ನಿರ್ಲಿಪ್ತಳು ಹಾಗೂ ಮೌನಿ. ಅಕ್ಕಂದಿರ ಬದುಕು ಆಕೆಯಲ್ಲಿ ಬದುಕಿನ ಕುರಿತು ಭಯವನ್ನೇ ಹೆಚ್ಚಿಸಿತ್ತು. ಭಾಸ್ಕರ ಆಕೆಯ ಹಿನ್ನೆಲೆಯನ್ನು ತಿಳಿದೂ ವಿವಾಹವಾಗಲು ಬಂದಾಗಲೂ ನಿರಾಕರಿಸಿದ್ದಳು. ಓದಿ ಬ್ಯಾಂಕ್ ಉದ್ಯೋಗದಲ್ಲಿದ್ದ ಅವಳು ತನ್ನ ಬದುಕು ಅಷ್ಟಕ್ಕೇ ಸೀಮಿತವೆಂದುಕೊಂಡಿದ್ದಳು. ಆದರೆ, ಗೆಳತಿ ನಳಿನಿಯ ದಯೆಯಿಂದ ಹಾಗೂ ಭಾಸ್ಕರನ ಪ್ರೀತಿಯಿಂದ ಅವಳು ವಿವಾಹವಾದಳು.


ಭಾಸ್ಕರನ ತಂದೆ ಚಂದ್ರಶೇಖರ ಶಾಸ್ತ್ರಿಗಳು ನಿವೃತ್ತ ಪೋಸ್ಟ್ ಮಾಸ್ಟರ್. ತಾಯಿ ಸೀತಮ್ಮ ಸಂಪ್ರದಾಯಸ್ತರು. ಅವರ ಇಬ್ಬರು ಹೆಣ್ಣುಮಕ್ಕಳಿಗೆ ಇದ್ದ ಹೆಣ್ಣುಮಕ್ಕಳಲ್ಲಿ ಒಬ್ಬರನ್ನು ಭಾಸ್ಕರನಿಗೆ ವಿವಾಹ ಮಾಡಬೇಕೆಂದುಕೊಂಡಿದ್ದರು. ಆದರೆ ಭಾಸ್ಕರನ ಈ ನಡೆ ತಂದೆ-ತಾಯಿಯರನ್ನು ರೊಚ್ಚಿಗೆಬ್ಬಿಸಿತು. ಅವರು ಭಾನುವಿನ ಹಿನ್ನೆಲೆಯನ್ನು ತಿಳಿದು ಆಕೆಯನ್ನು ಮತ್ತಷ್ಟು ದ್ವೇಷಿಸಿದರು. ಸಂಬಂಧ ಸರಿಪಡಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ಭಾನು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಭಾಸ್ಕರ ಅಪಘಾತಕ್ಕೀಡಾಗಿ ತೀರಿಹೋದ. ಮುಂದೆ ಮಗುವಿನ ಪರಿಸ್ಥಿತಿ ಹೇಗಿತ್ತು..? 


ತಾರಾಳ ಮೇಲೆ ಸಂಶಯದಿಂದ ಕುರುಡನಾಗಿದ್ದ ಚಂದ್ರು ಮುಂದೆ ಅವಳನ್ನು ಹುಡುಕಿ ಬಂದನೇ..?


ಚಂದ್ರಿಕಾ ಸಿನಿಮಾರಂಗಕ್ಕೆ ಕಾಲಿಡುತ್ತೇನೆಂದು ಹೋದವಳು ಈಗ ಬೇರೆಯ ಬದುಕನ್ನು ಆಯ್ದುಕೊಂಡಿದ್ದಳು. ಆ ಸತ್ಯ ತಿಳಿದದ್ದು ಯಾರಿಂದ ಹಾಗೂ ಹೇಗೆ.. ಮಹಾಲಕ್ಷ್ಮಿ ಅದನ್ನು ಹೇಗೆ ಸ್ವೀಕರಿಸಿದಳು..?


ಭಾಸ್ಕರನ ತಂದೆ-ತಾಯಿ ಮಗುವನ್ನು ತಾವು ಸಾಕಿಕೊಳ್ಳುತ್ತೇನೆಂದು ಬಂದಾಗ ಭಾನುವಿನ ಪ್ರತಿಕ್ರಿಯೆ ಹೇಗಿತ್ತು..?


ಪ್ರತಿ ಹೆಜ್ಜೆಯಲ್ಲಿಯೂ ತಾವು ತೆಗೆದುಕೊಳ್ಳುವ ನಿರ್ಧಾರ ಎಷ್ಟು ಮುಖ್ಯವಾಗುತ್ತದೆ ಹಾಗೂ ಬದುಕಿನಲ್ಲಿ ಅದು ಎಲ್ಲೆಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಅರಿವಾಗಿಸುವ ಕಾದಂಬರಿ. ಕುಲ ನೋಡಿ ಹೆಣ್ಣು ತೆಗೆದುಕೊಂಡು ಬರುವ ಸಂಪ್ರದಾಯ ಪಾಲಿಸುತ್ತಿದ್ದ ಸಮಾಜದಲ್ಲಿ ವೇಶ್ಯೆಯೊಬ್ಬಳ ಮನೆಯಿಂದ ಬಂದ ಹೆಣ್ಣು ಸಂಸಾರಸ್ಥೆಯಾದರೂ.. ಕಾಮಾಲೆ ಕಣ್ಣುಗಳು ಅವಳನ್ನು ಕಂಡ ಬಗೆ ಹೇಗೆ ಎಂಬುದನ್ನು ತೋರಿಸುತ್ತಾರೆ ಲೇಖಕಿ. ಅಷ್ಟೇ ಅಲ್ಲದೆ ಶ್ಯಾಮಲಾಳ ಮೂಲಕ ವಿದ್ಯಾಭ್ಯಾಸ ಹೆಣ್ಣಿನ ಪಾಲಿಗೆ ಯಾಕೆ ಅಷ್ಟು ಮುಖ್ಯವಾಗುತ್ತದೆ ಹಾಗೂ ಅದು ಹೇಗೆ ಧೈರ್ಯ ಕೊಡುತ್ತದೆ ಎಂಬುದರ ಉದಾಹರಣೆ ತೋರಿದ್ದಾರೆ. ಅದು ಭಾನುಮತಿಯ ಗೆಳತಿ ನಳಿನಿಯ ಮಾತಿನಲ್ಲಿಯೂ ವ್ಯಕ್ತವಾಗುತ್ತದೆ. ಆದರ್ಶವೆಂಬುವುದು ಮನುಷ್ಯನ ಬದುಕಿನಲ್ಲಿ ಯಾವೆಲ್ಲಾ ರೀತಿಯ ಸವಾಲುಗಳನ್ನು ತಂದೊಡ್ಡುತ್ತದೆ ಹಾಗೂ ಅದು ಮಾತು-ಕೃತಿ ಎರಡರಲ್ಲೂ ಎಷ್ಟು ಮುಖ್ಯ ಎಂಬುದನ್ನು ಚಂದ್ರು ಹಾಗೂ ಭಾಸ್ಕರರ ಪಾತ್ರಗಳ ಮೂಲಕ ತೋರಿಸಿದ್ದಾರೆ. ಮಹಾಂತಪ್ಪನವರ ಸಾವಿನ ನಂತರವೂ ಬದಲಾಗದ ಗಟ್ಟಿಗಿತ್ತಿ ಮಹಾಲಕ್ಷ್ಮಿಯ ಗಟ್ಟಿತನವೂ ಬದಲಾಗುವವರ ಪ್ರೇರಣೆಯಾಗುತ್ತದೆ.


ಈ ಸಮಸ್ಯೆ ಕೇವಲ ಅಂದಿನದಲ್ಲ. ಇಂದಿನ ದಿನಮಾನಕ್ಕೂ ಇದು ತೀರಾ ಬದಲಾಗಿಲ್ಲ. ತೃತೀಯ ಲಿಂಗಿಗಳು, ಜೈಲಿಗೆ ಹೋಗಿ ಬಂದವರು ಹಾಗೂ ವೇಶ್ಯೆಯರು ತಮ್ಮನ್ನು ತಾವು ಬದಲಾವಣೆ ಮಾಡಿಕೊಂಡಿದ್ದೇವೆಂದು ಹೇಳಿದರೂ ಅದನ್ನು ಒಪ್ಪಿ ಅವರಿಗೆ ಸಾಮಾನ್ಯರಂತೆ ಬದುಕು ನಡೆಸುವ ಸಂದರ್ಭ ಸುಲಭವಾಗಿಲ್ಲ.

ಗಂಭೀರ ಸಮಸ್ಯೆಯೊಂದರ ಕಥಾವಸ್ತುವೊಂದನ್ನು ಆಲೋಚನೆಗೆ ಹಚ್ಚುವಂತೆ ಕಟ್ಟಿಕೊಟ್ಟಿದ್ದಾರೆ ಲೇಖಕಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ