ಮಂಗಳವಾರ, ಏಪ್ರಿಲ್ 21, 2026

ಹೊಸ ಬೆಳಕು (ಪುಸ್ತಕ ಯಾನ - 289)


ಪುಸ್ತಕದ ಶೀರ್ಷಿಕೆ : ಹೊಸ ಬೆಳಕು

ಲೇಖಕರು : ಇಂದಿರಾ ಹಾಲಂಬಿ

ಪ್ರಕಾಶಕರು : ಕನ್ನಡ ಸಾಹಿತ್ಯ ಪರಿಷತ್ತು

ಪ್ರಥಮ ಮುದ್ರಣ : 2004

ಪುಟಗಳು : 28

ಬೆಲೆ : 15 ರೂ.


ಇಂದಿರಾ ಹಾಲಂಬಿಯವರ ಕುರಿತು ಕೇಳಿದ್ದನಾದರೂ.. ನನ್ನ ಓದಿಗೆ ಸಿಕ್ಕ ಅವರ ಮೊದಲ ಪುಸ್ತಕ ಇದು. ಎರಡು ನೀಳ್ಗತೆಗಳನ್ನು ಹೊಂದಿದೆ.  ಹೊಸ ಬೆಳಕು ಹಾಗೂ ಕತ್ತಲು ಕಳೆದಾಗ ಎಂಬ ಎರಡು ಕಥೆಗಳಿವೆ. ಕಥೆಗಳೊಳಗಿನ ಚೆಂದದ ಕವಿತೆಗಳು ಅರ್ಥಪೂರ್ಣವಾಗಿವೆ.


ಹೊಸ ಬೆಳಕು : ಶಿವಪುರದ ಅನಂತಯ್ಯನವರಿಗೆ ಇಬ್ಬರು ಗಂಡುಮಕ್ಕಳು. ಹಿರಿಯವನು ಕೇಶವ, ಎರಡನೆಯವನು ಮಾಧವ. ಮಾಧವನೇ ಚಿಕ್ಕವನಾಗಿದ್ದು ತಾಯಿಯ ಅತಿ ಮುದ್ದಿನಿಂದ ಓದಿನಲ್ಲಿ ಹಿಂದೆ ಬಿದ್ದು.. ತಾಯಿ ತೀರಿಕೊಂಡ ನಂತರ ಕೈಲಾಗದವನೆಂಬ ಹೀಯಾಳಿಸುವಿಕೆಯನ್ನು ಕೇಳಿಕೊಂಡೇ ಬಂದಿದ್ದರಿಂದ ಕಷ್ಟದಲ್ಲಿಯೇ ದಿನದೂಡುತ್ತಿದ್ದನು. ಜೊತೆಗೆ, ತಂದೆ ತೀರಿಕೊಂಡ ನಂತರ ವ್ಯವಹಾರ ಚತುರನಾಗಿದ್ದ ಅಣ್ಣ ಆಸ್ತಿಯನ್ನು ಕೊಡದೆ ಮೋಸ ಮಾಡಿದ್ದು ಎಲ್ಲರಿಗೂ ಗೊತ್ತಿದ್ದರೂ.. ಯಾರೂ ಇದರ ವಿಚಾರಕ್ಕೆ ತಲೆ ಹಾಕಿರಲಿಲ್ಲ. ಕೇಶವನಿಗೆ ಒಂದು ಹೆಣ್ಣು, ಒಂದು ಗಂಡುಮಗು.


ಮಾಧವ ಹಾಗೂ ಜಾನಕಿ ದಂಪತಿಗಳಿಗೆ ಮೂವರು ಹೆಣ್ಣುಮಕ್ಕಳು. ಜ್ಯೋತಿ, ಸ್ವಾತಿ ಹಾಗೂ ಸೌಮ್ಯ. ಕೇಶವ ಹಾಗೂ ಗಂಗಮ್ಮರು ಮಾಧವನ ಸಂಸಾರವನ್ನು ಮನೆಯಿಂದ ಹೊರಗಟ್ಟಿದ ನಂತರ ಮಾಧವ ಊರಲ್ಲೇ ಇದ್ದ ಹೆಂಚಿನ ಕಾರ್ಖಾನೆಯಲ್ಲಿ ನೌಕರನಾಗಿ ಸೇರಿ ವಾರದ ಸಂಬಳದಿಂದ ಜೀವನ ನಡೆಸುತ್ತಿದ್ದ. ಕೇಶವ ಹೊಸ ರೀತಿಯ ಕಾಯಿಲೆಯಿಂದ ಕಣ್ಣುಮುಚ್ಚಿದರೆ, ಗಂಗಮ್ಮ ಚಿಂತೆ ಹಚ್ಚಿಕೊಳ್ಳದೆ ಮಕ್ಕಳ ಭವಿಷ್ಯವನ್ನು ರೂಪಿಸಲು ಹಣ ವ್ಯಯಿಸುತ್ತಿದ್ದಳು. ಕೇಶವನ ಮಕ್ಕಳು ತಾಯಿಯಂತೆ ಉತ್ತಮ ಗುಣ-ನಡತೆಯನ್ನು ರೂಪಿಸಿಕೊಂಡರು. 


ಮಾಧವನ ಮನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದಕ್ಕೆ ಕಾರಣ ಸವಿತಾ. ಊರಿಗೆ ಹೊಸ ಬೆಳಕನ್ನು ತೋರುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದವರು. ಗಂಡ ಕೃಷಿ ಇಲಾಖೆಯಲ್ಲಿ ದೊಡ್ಡ ಅಧಿಕಾರಿಯಾಗಿದ್ದವರು. ಗಂಡನ ವರ್ಗಾವಣೆಯ ಕಾರಣದಿಂದ, ಮಗನ ವಿದ್ಯಾಭ್ಯಾಸಕ್ಕಾಗಿ ಶಿವಪುರದಲ್ಲಿಯೇ ನೆಲೆಸಿದರು. ಊರ ಶಾಲೆಯಲ್ಲಿ, ಮಹಿಳಾ ಮಂಡಳಿಯಲ್ಲಿ, ಶಿಶುವಿಹಾರದಲ್ಲಿ ಬದಲಾವಣೆ ತಂದರು. ಸಾಕ್ಷರತೆಯ ಪ್ರಸಾರವಾಗುತ್ತಿತ್ತು. ಹೊಲಿಗೆ ಯಂತ್ರದಲ್ಲಿ ಕೆಲಸ ಮಾಡಲು, ಕಸೂತಿ ಬಿಡಿಸಲು, ಹೈಸ್ಕೂಲಿನಲ್ಲಿ ಶಾಲೆ ಬಿಟ್ಟವರಿಗೆ ಪುಸ್ತಕದ ಓದಲು ದಾರಿದೀಪವಾದರು. ಮೂಢನಂಬಿಕೆಗಳ ಬದಲಾಗಿ ಸಾಕ್ಷರತೆಯನ್ನು ತುಂಬುತ್ತಿದ್ದರು. 


ಮಾಧವ ಕುಡಿದು ಮನೆಗೆ ಬಂದ ಸಂದರ್ಭದಲ್ಲಿ ಹೆಂಡತಿ ಮಕ್ಕಳು ಮನೆಯಲ್ಲಿರಲಿಲ್ಲ. ಸಿಟ್ಟು ನೆತ್ತಿಗೇರಿದವನಿಗೆ ಮತ್ತು ಇಳಿದ ಮೇಲೆ ಅರಿವಾಗಿದ್ದೇನು..?


ಗಂಗಮ್ಮ ಮೂಢನಂಬಿಕೆಯಿಂದ ಸವಿತಾಳ ಪ್ರತಿ ನಡೆಯನ್ನು ವಿರೋಧಿಸಿ, ದ್ವೇಷಿಸುತ್ತಿದ್ದರು. ಅವರ ಬದುಕಲ್ಲಿ ಹೊಸ ಬೆಳಕು ಕಂಡಿತೇ..?


ಕತ್ತಲು ಕಳೆದಾಗ : ಮುದ್ದೂರಿನ ಜಮೀನ್ದಾರರಾದ ಸಂಕಪ್ಪನವರ ಮನೆಯಲ್ಲಿ ಅಂದು ಭೂತಕ್ಕೆ ಬಲಿ ಕೊಡುವ ಹಬ್ಬ. ಅದೇ ದಿನ ಅಂದಿನ ಕಾರ್ಯಕ್ರಮಗಳು ಸಾಂಗವಾಗಿ ನಡೆಯುತ್ತಿದೆ ಎನ್ನುವಾಗಲೇ ಮನೆಯಾಳು ಸುಬ್ಬ ಬಂದು ತನ್ನ ತಮ್ಮ ಸೂರಿಗೆ ಹಾವು ಕಚ್ಚಿದ ವಿಚಾರವನ್ನು ತಿಳಿಸುತ್ತಾನೆ. 


ಅದೇ ದಿನ ಮನೆಯಲ್ಲಿ ನಡೆದ ಬೇರೆ ಘಟನೆಗಳೂ ಸಂಕಪ್ಪಯ್ಯನವರಿಗೆ ಗತದ ನೆನಪು ತಂದವು. ಅವರ ಪತ್ನಿ ತೀರಿ ಹೋಗಿದ್ದರು. ಗಂಡನ ಮನೆಯಲ್ಲಿ ಕಷ್ಟ ಅನುಭವಿಸಿ ನೊಂದ ಮಗಳ ನೆನಪು, ಬಾರದೇ ಇದ್ದ ಮಗ ಅರುಣನ ನೆನಪು ಹಾಗೂ ಪೋಲಿಯೋದಿಂದ ಹೊರಗೆಲ್ಲೂ ಹೋಗಲಾಗದೆ ಮನೆಯಲ್ಲೇ ಇರುವ ಕಿರಿಮಗ ಕಿರಣನ ಯೋಚನೆ ಹೀಗೆ..


ಬೆಳಗಾಗುವಷ್ಟರಲ್ಲಿ ಅರುಣ ಬಂದವನೇ ಸೂರಿಯನ್ನು ಆಸ್ಪತ್ರೆಗೆ ಕರೆದೊಯ್ಯದಿರುವುದಕ್ಕೆ ಆಕ್ಷೇಪಿಸಿದ. ಅರುಣನದ್ದು ತಂದೆಗೆ ವ್ಯತಿರಿಕ್ತವಾದ ಯೋಚನೆಗಳು. ಅವರು ಹಿಂದಿನ ನಂಬಿಕೆ ಹಾಗೂ ಕೃಷಿಯಿಂದ ಹಣ ಮಾಡುವ ಆಲೋಚನೆಯಲ್ಲಿದ್ದರೆ.. ಈತ ಓದಿನಂದ ಪ್ರಪಂಚಜ್ಞಾನ ಪಡೆದುಕೊಂಡು ಎಲ್ಲರೊಡನೆಯೂ ಬೆರೆಯುತ್ತಿದ್ದ, ಪರಿಸರದ ಕಾಳಜಿ ತೋರುತ್ತಿದ್ದ.  


ನೆರೆಹಾವಳಿಯಿಂದ ಉಂಟಾದ ಅನಾಹುತ ಸಂಕಪ್ಪಯ್ಯನವರನ್ನು ಮತ್ತಷ್ಟು ಗಾಬರಿಗೊಳಿಸಿತು. ಅದಕ್ಕೆ ಅವರ ಅಜ್ಞಾನ ಹಾಗೂ ಮೂಢನಂಬಿಕೆಗಳು ಸೇರಿ ವಿಪರೀತ ಜ್ವರ ವಿಪರೀತವಾಯಿತು. ನೆರೆಯಿಂದ ಮಾತ್ರವಲ್ಲದೆ.. ಮರಕಡಿದಿದ್ದ ಸಂಬಂಧ ಕೇಸು ದಾಖಲಾಗಿ ಮರಗಳನ್ನು ಮುಟ್ಟುಗೋಲು ಹಾಕಲಾಗಿತ್ತು . ತನ್ನ ಆಫೀಸಿಗೆ ರಜೆ ಪಡೆದ ಬಂದ ಅರುಣ ತಂದೆಯನ್ನು, ಮನೆಯನ್ನು, ಊರನ್ನು ಉಳಿಸುವ ಪ್ರಯತ್ನ ಮಾಡುತ್ತಾನೆ. ಅವನ ಪ್ರಯತ್ನದಲ್ಲಿ ಸಂಕಪ್ಪಯ್ಯ ಬದಲಾದರೇ..? ಆತನ ಅಕ್ಕನ ಹಾಗೂ ತಮ್ಮನ ಬದುಕಿನಲ್ಲಿ ಕತ್ತಲು ಕಳೆದು ಬೆಳಕು ಹೊಳೆಯಿತೇ..? ಓದಿ ನೋಡಿ. 


ಅಜ್ಞಾನ, ಅನಕ್ಷರತೆಯಿಂದ ಉಂಟಾದ ಮೂಢನಂಬಿಕೆಗಳನ್ನು ದೂರ ಮಾಡುವಂತಹಾ ಪ್ರಯತ್ನಗಳು ಹಾಗೂ ಅಂತಹಾ ಪ್ರಯತ್ನ ಮಾಡುವಾಗ ಎದುರಾಗುವ ಸಂಕಷ್ಟಗಳು, ಅಡೆ-ತಡೆಗಳು, ಅವೆಲ್ಲವನ್ನು ಮೀರಿ ನಿಲ್ಲುವ ಬಗೆ.. ಎಲ್ಲದರ ನಂತರ ಅವುಗಳ ಪರಿಣಾಮ ಹಾಗೂ ಬದಲಾವಣೆಗಳ ಚಿತ್ರಣ ಸಮಾಜಕ್ಕೆ ಸಂದೇಶ ನೀಡುವಂತಿದೆ.


~ವಿಭಾ ವಿಶ್ವನಾಥ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ