ಬುಧವಾರ, ಏಪ್ರಿಲ್ 22, 2026

ಎಲೆಕ್ಟ್ರಾನಿಕ್ ಕಂಪೆನಿ ಅಲ್ಲಲ್ಲ ಲೈಫ್ ಸ್ಟೈಲ್ ಬ್ರ್ಯಾಂಡ್ ಬೋಟ್ ( ಬ್ಯುಸಿನೆಸ್ ಡೈರಿ ಪುಟ - 09)


ಮೊದಮೊದಲು ಅಪರೂಪವಾಗಿದ್ದ ಹಿಯರಿಂಗ್ ಸಾಧನಗಳು ಈಗ ಅಪರೂಪವೇನಲ್ಲ.. ಈಗ ಯಾರ ಕಿವಿಯಲ್ಲಿ ನೋಡಿದರೂ ಹಿಯರ್ ಫೋನ್ ಗಳಂತೂ ಕಣ್ಣಿಗೆ ಬೀಳುತ್ತಲೇ ಇರುತ್ತವೆ.. ವಾಹನ ಚಾಲನೆ ಮಾಡುವಾಗ (ಬಳಸಬೇಡಿ ಎಂದು ಹೇಳಿದರೂ. , ರೋಡ್ ನಲ್ಲಿ ನಡೆಯುವಾಗ, ಬಸ್ ನಲ್ಲಿ ಹೀಗೆ ಎಲ್ಲರ ಕಿವಿಯಲ್ಲೂ ಇವು ಕಣ್ಣಿಗೆ ಬೀಳುವುದಂತು ತಪ್ಪುವುದಿಲ್ಲ. ಹಿಯರಿಂಗ್ ಸಾಧನಗಳು ಸೌಂಡ್ ಎಕ್ಯೂಪ್ಟ್ಮೆಂಟ್ ಗಳು ವಿಶಾಲವಾಗಿ ನಮ್ಮನ್ನು ಆವರಿಸಿವೆ. ಈಗ ವೈರ್ ಲೆಸ್ ಹಿಯರಿಂಗ್ ಸಾಧನಗಳ ಕಾಲ.


 ಈಗ ಎಲ್ಲರೂ ಅದರಲ್ಲೂ ಹೆಚ್ಚಾಗಿ ಯುವಜನರು ಪ್ರೈವಸಿಯನ್ನು ಬಯಸುತ್ತಾರೆ. ತಮ್ಮ ಮ್ಯೂಸಿಕ್ ಅಥವಾ ಮತ್ತಾವುದೇ ಮಾತುಕತೆಗಳಿಂದ ಮತ್ತೊಬ್ಬರನ್ನು ಡಿಸ್ಟರ್ಬ್ ಮಾಡದಂತೆ.. ತಮಗೂ ಡಿಸ್ಟರ್ಬ್ ಆಗದಂತೆ.. ತಮ್ಮ ತಮ್ಮ ಲೋಕದಲ್ಲಿ ಮುಳುಗಿ ಹೋಗುತ್ತಾರೆ. ಇದು ಜನರೇಶನ್ ಬದಲಾವಣೆಯೋ ಅಥವಾ ಕೈಗೆಟುಕುವ ದರದಲ್ಲಿ ಸಿಗುವ ಹಿಯರ್ರಿಂಗ್ ಸಾಧನಗಳ ಪ್ರಭಾವವೋ.. ಎಂದರೆ ಎರಡು ಹೌದು. 


ಪ್ಯಾಂಟ್, ಶರ್ಟ್,ಶೂ, ವಾಚ್ ಹೀಗೆ ಎಲ್ಲವುದರಲ್ಲೂ ಬ್ರಾಂಡೆಡ್ ಅನ್ನು ಬಯಸುವ ಜನರು... ಮೊಬೈಲ್ ಜೊತೆಗೆ ಬಳಸುವ ಇಯರ್ ಫೋನ್ ಗಳೂ ಬ್ರಾಂಡೆಡ್ ಆಗಿರಲಿ ಎಂದೇ ಬಯಸುತ್ತಾರೆ. ಅದರಲ್ಲೂ ಇತ್ತೀಚೆಗೆ ಹೆಚ್ಚು ಕಣ್ಣಿಗೆ ಕಾಣುವ ಬ್ರಾಂಡ್ ಎಂದರೆ ಬೋಟ್.


16 ಲಕ್ಷದಿಂದ ಶುರುವಾದ ಕಂಪನಿಯೊಂದು ಅದರಲ್ಲೂ ಭಾರತೀಯ ಮೂಲದ ಕಂಪನಿಯೊಂದು ಕೇವಲ ಐದು ವರ್ಷಗಳಲ್ಲೇ 2,100 ಕೋಟಿ ರೂ ಆದಾಯವನ್ನು ಹೊಂದುತ್ತಾ ಇಂದು ಜಗತ್ತಿನ ಟಾಪ್ ಫೈವ್ ಬ್ರಾಂಡ್ ಗಳಲ್ಲಿ ಒಂದಾಗಿದೆ. ಅತಿ ಹೆಚ್ಚು ಎಂದರೆ 28% ಮಾರ್ಕೆಟ್ ಅನ್ನು ಆಳುವುದು ಸುಲಭದ ಮಾತಂತೂ ಅಲ್ಲವೇ ಅಲ್ಲ. ಇದನ್ನು ಸಾಧ್ಯವಾಗಿಸಿರುವ ಭಾರತೀಯ ಸೌಂಡ್ ಎಕ್ಯೂಪ್ಟ್ಮೆಂಟ್ ಕಂಪನಿ ಬೋಟ್. 


ಬೋಟ್ ಕಂಪನಿ ಕೆಲಸ ಮಾಡಲು ಶುರು ಮಾಡಿದ್ದು 2016 ರಿಂದ. ಆದರೆ, ಶುರುವಾದದ್ದು 2014 ನವೆಂಬರ್ ನಲ್ಲಿ. ದೆಹಲಿಯ ಸಮೀರ್ ಮೆಹ್ತಾ ಹಾಗೂ ಅಮನ್ ಗುಪ್ತ ಇಬ್ಬರು ಸೇರಿ 16 ಲಕ್ಷ ಬಂಡವಾಳದಿಂದ ಶುರು ಮಾಡಿದ ಕಂಪನಿಯೇ ಬೋಟ್. ಇವರು ಶಾರ್ಕ್ ಟ್ಯಾಂಕ್ ಎನ್ನುವ ಕಾರ್ಯಕ್ರಮದ ತೀರ್ಪುಗಾರರೂ ಹೌದು. 


ಅಮನ್ ಗುಪ್ತ ಹುಟ್ಟಿದ್ದು 1982 ರಲ್ಲಿ. ದೆಹಲಿ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಮುಗಿಸಿ ದೆಹಲಿ ವಿಶ್ವವಿದ್ಯಾಲಯದಲ್ಲಿ ತಮ್ಮ ಡಿಗ್ರಿ ಮುಗಿಸಿದರು. ತಂದೆಯೇ ಅವರ ರೋಲ್ ಮಾಡೆಲ್. ತಂದೆಯ ಆಸೆಯಂತೆ ಸಿ.ಎ ಪರೀಕ್ಷೆಯನ್ನು ಬರೆದು ಅದರಲ್ಲಿ ಉತ್ತೀರ್ಣರಾದರು. ಭಾರತದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಿ.ಎ ಪರೀಕ್ಷೆ ಬರೆದು ಉತ್ತೀರ್ಣರಾದ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಾದ ನಂತರ ಕೆಲ್ಲಾಕ್ಸ್ ವಿಶ್ವವಿದ್ಯಾಲಯದಲ್ಲಿ ಎಂ.ಬಿ.ಎ ಪದವಿ ಪಡೆಯುತ್ತಾರೆ.


ನಂತರ ಸಿಟಿ ಬ್ಯಾಂಕ್ ನಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ, ನಂತರ... ಅಡ್ವಾನ್ಸ್ಡ್ ಟೆಲಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಕೋ ಫೌಂಡರ್ ಹಾಗೂ ಸಿ.ಈ.ಓ ಆಗಿ, ನಂತರ.. ಕೆ.ಪಿ.ಎಂ.ಜಿಯಲ್ಲಿ ಸೀನಿಯರ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಆಗಿ, ಹರ್ಮನ್ ಇಂಟರ್ನ್ಯಾಷನಲ್ ನಲ್ಲಿ ಸೇಲ್ಸ್ ಡೈರೆಕ್ಟರ್ ಆಗಿ ಹಾಗೂ ಜೆ.ಪಿ.ಎಲ್ ನಲ್ಲಿ ಸೇಲ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಾರೆ. ಇಷ್ಟೆಲ್ಲಾ ವಿವಿಧ ಕಂಪನಿಗಳಲ್ಲಿ ಅತ್ಯುನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ, ಒಳ್ಳೆಯ ಸಂಬಳವಿದ್ದ ಇವರು ಪದೇ ಪದೇ ಕೆಲಸವನ್ನು ಬದಲಾಯಿಸಿದರು. ಕಾರಣ, ಅವರಿಗೆ ಜಾಬ್ ಸ್ಯಾಟಿಸ್ಫ್ಯಾಕ್ಷನ್ ಸಿಕ್ಕಿಲ್ಲವೆಂದು.. 2014ರ ನವೆಂಬರ್ ನಲ್ಲಿ ಸಮೀರ್ ಮೆಹ್ತಾ ಜೊತೆ ಸೇರಿ ಮಾರ್ಕೆಟಿಂಗ್ ಇಂಡಿಯಾ ಎನ್ನುವ ಸ್ಟಾರ್ಟಪ್ ಶುರು ಮಾಡುತ್ತಾರೆ ಇದು ಒಂದು ಬೂಟ್ ಸ್ಟ್ರಾಪ್ ಕಂಪನಿ. ಇದೇ ಬೋಟ್ ನ ಪೇರೆಂಟಿಂಗ್ ಕಂಪೆನಿ.


ಸಮೀರ್ ಮೆಹ್ತಾ ಓದಿದ್ದು ಸೇಂಟ್ಸೇವಿಯರ್ ಸ್ಕೂಲ್, ಮುಂಬೈನಲ್ಲಿ. ನಂತರ ನರ್ಸೆ ಮೊನ್ಜಿ ಕಾಲೇಜ್ ಆಫ್ ಕಾಮರ್ಸ್ ಅಂಡ್ ಎಕನಾಮಿಕ್ಸ್ ನಲ್ಲಿ ತಮ್ಮ ಡಿಗ್ರಿಯನ್ನು ಪಡೆಯುತ್ತಾರೆ. ಇದಾದ ನಂತರ ತಮ್ಮದೇ ಆದ ರೆಡ್ ವುಡ್ ಇಂಟರ್ಯಾಕ್ಟಿವ್ ಎನ್ನುವ ಗೇಮಿಂಗ್ ಸಾಧನಗಳ ಕಂಪೆನಿ ಶುರು ಮಾಡುತ್ತಾರೆ. ಮಾರ್ಕೆಟಿಂಗ್ ವಿಭಾಗದಲ್ಲಿ  ಕೆಲಸ ಮಾಡುತ್ತಿದ್ದ ಅಮನ್ ಗುಪ್ತಾ ಪರಿಚಯವಾಗಿ 2014 ರಿಂದ ಇಬ್ಬರೂ ಜೊತೆಯಾಗಿ ಬೋಟ್ ಅನ್ನು ಶುರು ಮಾಡುತ್ತಾರೆ.


ಬೋಟ್ ಕಂಪನಿಯಲ್ಲಿ ಇಂದು ಹಿಯರ್ ಫೋನ್, ಹಿಯರ್ ಬಡ್ಸ್,  ಹೆಡ್ಫೋನ್ಸ್, ವಯರ್ಲೆಸ್ ಸ್ಪೀಕರ್ಸ್, ಹೋಂ ಆಡಿಯೋ ಎಕ್ವಿಪ್ಮೆಂಟ್, ಪ್ರೀಮಿಯಂ ರಗ್ಡ್ ಕೇಬಲ್, ಟ್ರಿಮ್ಮರ್, ಸ್ಮಾರ್ಟ್ ವಾಚ್ ಹೀಗೆ ಹಲವಾರು ರೀತಿಯ ಪ್ರಾಡಕ್ಟ್ ಗಳಿವೆಮ್


ಬೂಟ್ ಕಂಪನಿಯ ಮೊದಲ ಪ್ರಾಡಕ್ಟ್ ಐಫೋನ್ ನ ಚಾರ್ಜಿಂಗ್ ಕೇಬಲ್. ಅದುವರೆಗೂ ಇದ್ದ ಐಫೋನ್ ಚಾರ್ಜಿಂಗ್ ಕೇಬಲ್ಗಳು ಬಹಳ ದಿನ ಬಾಳಿಕೆ ಬರುತ್ತಿರಲಿಲ್ ಅವು ಸುಲಭವಾಗಿ ಮುರಿದುಹೋಗುವಂತಹ ಕಡಿಮೆ ಕ್ವಾಲಿಟಿಯವಾಗಿದ್ದವು. ಕಡಿಮೆ ಗುಣಮಟ್ಟದ ಇವುಗಳನ್ನು ಅತ್ಯುತ್ತಮಗೊಳಿಸಬೇಕೆಂದು ನಿರ್ಧರಿಸಿ ಅಷ್ಟು ಸುಲಭಕ್ಕೆ ಮುರಿದು ಹೋಗದಂತಹಾ ಐಫೋನ್ ಚಾರ್ಜಿಂಗ್ ಕೇಬಲ್ ಗಳನ್ನು ಕಡಿಮೆ ದರದಲ್ಲಿ ಮಾರಾಟಕ್ಕಿಟ್ಟರು. 


ಬೋಟ್ ಕಂಪನಿಯ ಮೂಲ ಮಂತ್ರವೇ ಇದಾಗಿತ್ತು ಅತ್ಯುತ್ತಮ ಗುಣಮಟ್ಟದ ಪ್ರಾಡಕ್ಟ್ ಗಳನ್ನು ಕಡಿಮೆ ಬೆಲೆಯಲ್ಲಿ ಗ್ರಾಹಕರಿಗೆ ತಲುಪಿಸುವುದು. ಹಾಗೆ ನೋಡಿದರೆ.. ಮಾರ್ಕೆಟ್ ನಲ್ಲಿ ಅದುವರೆಗೂ ಆ ಬೆಲೆಗೆ ಇದ್ದದ್ದು ಕಡಿಮೆ ಕ್ವಾಲಿಟಿಯ ಇಯರ್ ಫೋನ್ ಗಳು ಹಾಗೂ ಚಾರ್ಜರ್ ಗಳು. ಬ್ರ್ಯಾಂಡೆಡ್ ಎಂದು ಹೆಸರು ಮಾಡಿದ್ದ ಎಲ್ಲಾ ಪ್ರಾಡಕ್ಟ್ಗಳ ಗ್ರಾಹಕರ ಕೈಕೆಟ್ಟುಕುವ ದರದಲ್ಲಿರಲಿಲ್ಲ. 


ಈಗ ಫೋನ್ ಜೊತೆಗೆ ಹಿಯರ್ ಫೋನ್ ಗಳು ಲಭ್ಯವಾಗುವುದಿಲ್ಲ. ಹಾಗಾಗಿ ಹಿಯರ್ ಫೋನ್ ತೆಗೆದುಕೊಳ್ಳಬೇಕು ಎಂದಾಗ ಜನಸಾಮಾನ್ಯರ ಆಯ್ಕೆ ಯಾವುದಾಗಿರುತ್ತದೆ ಎಂದರೆ ತಮಗೆ ಕೈಗೆಟುಕುವ ದರದಲ್ಲಿರುವಂತಹವೂ. ಈಗ ಸದ್ಯಕ್ಕೆ ಮಾರ್ಕೆಟ್ ನಲ್ಲಿ ಬೆಲೆಯ ಆಧಾರದ ಮೇಲೆ ಐದು ರೀತಿಯಾಗಿ ಪ್ರಾಡಕ್ಟ್ ಗಳನ್ನು ವಿಂಗಡಿಸಬಹುದು. ಚೀಪ್ ಅಂದರೆ 50ರಿಂದ 500 ವರೆಗೆ. ನಂತರ ಆಫರ್ಡಬಲ್ ಎಂದರೆ 1000 ದಿಂದ 5000ವರೆಗೆ... ಸಬ್ ಪ್ರೀಮಿಯಂ 5000 ದಿಂದ 10000 ವರೆಗೆ ..ಪ್ರೀಮಿಯಂ 10000 ದಿಂದ 15000 ವರೆಗೆ ಅಲ್ಟ್ರಾ ಪ್ರೀಮಿಯಂ 15 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವಂತವು


ಹಿಯರ್ ಫೋನ್ ಬೇಕಾದಾಗ ಹೆಚ್ಚಿನವರು ಮೊರೆ ಹೋಗುತ್ತಿದ್ದದ್ದು ಚೈನೀಸ್ ಪ್ರಾಡಕ್ಟ್ ಗೆ. ಏಕೆಂದರೆ, ಇವುಗಳು ಚೀಪ್ ದರದಲ್ಲಿ ಅಂದರೆ 50 ರೂಪಾಯಿ ನಿಂದ 500 ಒಳಗೆ ಸಿಗುತ್ತಿದ್ದವು. ಇದನ್ನು ಕಂಡ ಬೋಟ್ ಕಂಪನಿ ತನ್ನ ಇಯರ್ ಫೋನ್ ಗಳನ್ನು 350 ರಿಂದ 550ರ ಒಳಗೆ ಮಾರಾಟ ಮಾಡಲು ಶುರು ಮಾಡಿತು. ಅಷ್ಟೇ ಅಲ್ಲದೆ.. ಇವುಗಳಿಗೆ ಇಷ್ಟು ದಿನಗಳ ಗ್ಯಾರಂಟಿ ಎನ್ನುವ ವಾರಂಟಿಯನ್ನು ಸಹಾ ಕೊಡುತ್ತಿತ್ತು. 


ಅಷ್ಟಕ್ಕೂ ಹಿಯರಿಂಗ್ ಪ್ರಾಡಕ್ಟ್ ಗಳ ಮೇಲೆ ಅಮನ್ ಗುಪ್ತ ಗಮನ ಹರಿಸಿದ್ದು ಏಕೆಂದರೆ.. ಆತ ಕೂಡಾ ಹಾಡುತಿದ್ದು.. ಆತನಿಗೆ ಗಾಯಕರು ಹಾಗೂ ಲೇಖಕರೂ ಆಗಿದ್ದ ಬಾಬ್ ಮರ್ಲೆಯ ಮ್ಯೂಸಿಕ್ ಹಾಗೂ ಐಡಿಯಾಗಳು ಪ್ರಭಾವ ಬೀರಿದ್ದವು. 


 ಬಾಬ್ ಮರ್ಲೆ ಹೇಳಿದ "ನೀವು ಪ್ರೀತಿಸುವ ಜೀವನವನ್ನು ಬದುಕಿ ಮತ್ತು ನೀವು ಬದುಕುವ ಜೀವನವನ್ನು ಪ್ರೀತಿಸಿ" ಎಂಬ ಮಾತು ಅಮನ್ ಪಾಲಿಗೆ ಮಂತ್ರದಂತಿತ್ತು..



ಬೋಟ್ ತನ್ನ ಪ್ರತಿಸ್ಪರ್ಧಿಗಳಿಗಿಂತ ಬಹಳ ಕಡಿಮೆ ದರದಲ್ಲಿ ತಮ್ಮ ಪ್ರಾಡಕ್ಟ್ ಗಳನ್ನು ಮಾರಾಟ ಮಾಡಲು ಶುರು ಮಾಡಿತು. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ.. ಇಂದು ಬೋಟ್‌ನ ಟಾಪ್ ಸೆಲ್ಲಿಂಗ್ ಪ್ರಾಡಕ್ಟ್ಗಳಲ್ಲಿ ಒಂದಾಗಿರುವ ಬ್ಲೂಟೂತ್ ಸ್ಪೀಕರ್ ಬೋಟ್ ಸ್ಟೋನ್. ಇನ್ನು ಕೇವಲ 2000 ರೂಪಾಯಿಗಳಿಗೆ ಮಾರಾಟ ಮಾಡಿತು. ಆದರೆ, ಪ್ರತಿಸ್ಪರ್ಧಿ ಕಂಪನಿಗಳು ನಿಗದಿಪಡಿಸಿದ್ದ ಬೆಲೆ 5000. 


ಬೋಟ್ ಕಂಪನಿ ತನ್ನ ಪ್ರಾಡಕ್ಟ್ ಗಳನ್ನು ಹೆಚ್ಚಾಗಿ ತಯಾರಿಸುತ್ತಿರುವುದು ಯುವ ಜನರಿಗೆ. ಈ ಜನರೇಷನ್ ಇವರ ಟಾರ್ಗೆಟ್. ಏಕೆಂದರೆ.. ಉದಾಹರಣೆಗೆ ಹೇಳುವುದಾದರೆ ಪ್ರತಿ ವರ್ಷ ಡಿಗ್ರಿ ಗೆ ಎಂಟ್ರಿ ಆಗುವ ವಿದ್ಯಾರ್ಥಿಗಳು ಅಥವಾ ಡಿಗ್ರಿ ಮುಗಿಸಿ ಹೊರಬರುವ ವಿದ್ಯಾರ್ಥಿಗಳು 60 ಲಕ್ಷಕ್ಕಿಂತಲೂ ಹೆಚ್ಚು. ಒಬ್ಬೊಬ್ಬರ ಕೈಯಲ್ಲೂ ಒಂದೊಂದು ಸ್ಮಾರ್ಟ್ ಫೋನ್ ಗಳು ಎಂದರೆ ಕಡಿಮೆ ಎಂದರೂ 60 ಲಕ್ಷ ಸ್ಮಾರ್ಟ್ ಫೋನ್ ಗಳು. ಅದಕ್ಕೆ ಚಾರ್ಜಿಂಗ್ ಕೇಬಲ್ ಅಥವಾ ಇಯರ್ ಫೋನ್ ಗಳು ಎಂದರೆ..??

ಪ್ರತಿ ವರ್ಷ ಹೊಸ ಗ್ರಾಹಕರು.  


ಬ್ಯುಸಿನೆಸ್ ನಲ್ಲಿ ಕೆಲವು ಸಂದರ್ಭದಲ್ಲಿ ಲಾಭ ಪಡೆಯುವುದು ಸಹಾ ಅವರ ಬುದ್ಧಿವಂತಿಕೆ ಹಾಗೂ ಚಾಕಚಕ್ಯತೆಯ ಮೇಲೆ ಅವಲಂಬಿತ. ಜನರೆಲ್ಲರೂ ಕೋವಿಡ್ ಲಾಕ್ ಡೌನ್ ನಿಂದ ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ಸಂದರ್ಭ ಬಂದಾಗ ವರ್ಕ್ ಫ್ರಮ್ ಹೋಂ ಗಾಗಿ ಹಾಗೂ ಅವರ ಮೀಟಿಂಗ್ಗಳಿಗಾಗಿ ಇಯರ್ ಫೋನ್ ಗಳು ಅವಶ್ಯಕತೆ ಹೆಚ್ಚಾಯಿತು. ಅಲ್ಲದೆ, ಈ ಸಮಯದಲ್ಲಿ ಹೊರದೇಶಗಳಿಂದ ಆಮದಾಗುವ ಹಿಯರಿಂಗ್ ಡಿವೈಸ್ ಗಳು ಕೂಡ ಕಡಿಮೆ ಇದ್ದವು. ಆಗ ಜನರ ಮೊದಲ ಆಯ್ಕೆ ಬೋಟ್ ಆಯಿತು.


ಬ್ಯುಸಿನೆಸ್ ನಲ್ಲಿ ಜಾಹೀರಾತು ಬಹಳ ಮುಖ್ಯ. ಆದರೆ, ಬೋಟ್ ಯಾವುದೇ ನ್ಯೂಸ್ ಪೇಪರ್ರ್/ ಪ್ರಿಂಟ್ ಮೀಡಿಯಾ ಅಥವಾ ಟಿ.ವಿಗಳಲ್ಲಿ ತನ್ನ ಜಾಹೀರಾತನ್ನು ನೀಡಲಿಲ್ಲ. ಬದಲಿಗೆ, ಅದು ಅವಲಂಬಿಸಿದ್ದು ಸೋಶಿಯಲ್ ಮೀಡಿಯಾಗಳನ್ನು. ಅದರಲ್ಲೂ ಹೆಚ್ಚಾಗಿ ಫೇಸ್ಬುಕ್ ಅನ್ನು.. ಅಲ್ಲದೆ, ಬೋಟ್ ಶುರುವಾದ ಮೊದಲ ದಿನಗಳಲ್ಲಿ ತನ್ನ ಪ್ರಾಡಕ್ಟ್ ಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಆಯ್ಕೆ ಮಾಡಿದ್ದು ಡಿಜಿಟಲ್ ಮಾರ್ಕೆಟಿಂಗ್ ಅನ್ನು. ಈ-ಕಾಮರ್ಸ್ ವೆಬ್ಸೈಟ್ಗಳಾದ ಅಮೆಜಾನ್, ಫ್ಲಿಪ್ ಕಾರ್ಟ್, ಮಿಂತ್ರಾ, ಜಬಾಂಗ್ ಮುಂತಾದವುಗಳು. ಈಗ ಇದು ತನ್ನ ಆಫೀಶಿಯಲ್ ವೆಬ್ಸೈಟ್ ಹಾಗೂ ಕ್ರೋಮಾದ ಔಟ್ಲೆಟ್ ಗಳಲ್ಲಿಯೂ ತನ್ನ ಪ್ರಾಡಕ್ಟ್ ಗಳನ್ನು ಮಾರಾಟ ಮಾಡುತ್ತಿದೆ. 


ಎಷ್ಟೋ ಕಂಪನಿಗಳು ತಾವು ಶುರುವಾದ ಹಲವಾರು ವರ್ಷಗಳ ನಂತರ ಬ್ರ್ಯಾಂಡ್ ಅಂಬಾಸಿಡರ್ ಅನ್ನು ನೇಮಕ ಮಾಡಿಕೊಳ್ಳುತ್ತಾರೆ. ಆದರೆ ಬೋಟ್ ಮೊದಲಿನಿಂದಲೇ ಬ್ರ್ಯಾಂಡ್ ಅಂಬಾಸಿಡರ್ ಗಳನ್ನು ನೇಮಕ ಮಾಡಿಕೊಳ್ಳಲು ಶುರು ಮಾಡಿತು. ಅದರಲ್ಲೂ ಹೆಚ್ಚಾಗಿ ಭಾರತೀಯರು ಇಷ್ಟಪಡುವ ಕ್ರಿಕೆಟ್ ರಂಗದ ಹಾಗೂ ಸಿನಿಮಾ ರಂಗದ ಐಕಾನ್ಗಳನ್ನು ಇವರು ಬ್ರ್ಯಾಂಡ್ ಅಂಬಾಸಿಡರ್ ಆಗಿ ಮಾಡಿಕೊಂಡರು. ಶಿಖರ್ ಧವನ್, ಹಾರ್ದಿಕ್ ಪಾಂಡೆ, ಕೆ.ಎಲ್ ರಾಹುಲ್, ಜಾಕ್ವೆಲಿನ್ ಫರ್ನಾಂಡಿಸ್, ಕೈರಾ ಅಡ್ವಾನಿ.. ಮ್ಯೂಸಿಕ್ ರಂಗದಿಂದ ನೇಹಾ ಕಕ್ಕರ್, ದಿಲ್ಜಿತ್ ಸಿಂಗ್ ಹೀಗೆ.. 2021 ರಲ್ಲಿ ಆರು ಐಪಿಎಲ್ ಟೀಮ್ ಗಳಿಗೆ ಆಫೀಸಿಯಲ್ ಆಡಿಯೋ ಪಾರ್ಟ್ನರ್ ಆಗಿತ್ತು ಬೋಟ್.


ಇವರ ಕೆಟಲಾಗ್ ಗಳು ಕೂಡ ದಿನೇ ದಿನೇ ವಿಭಿನ್ನವಾಗಿ ಅಪ್ಡೇಟ್ ಆಗಿರುವ ಹೊಸ ಹೊಸ ಮಾದರಿಯ ಪ್ರಾಡಕ್ಟ್ ಗಳನ್ನು ಪರಿಚಯಿಸುತ್ತವೆ. ಬೆವರು ಪ್ರೂಫ್ ಹಾಗೂ ವಾಟರ್ ಪ್ರೂಫ್ ಸಾಧನಗಳು, ಸ್ಪೋರ್ಟ್ಸ್ ಗೆಂದೇ ಬೇಕಾಗುವ ವಿವಿಧ ಮಾದರಿಯ ಹಿಯರಿಂಗ್ ಉಪಕರಣಗಳು, ಬಿದ್ದರೂ ಹಾಳಾಗದಂತಹ ಹಿಯರಿಂಗ್ ಉಪಕರಣಗಳು ಹೀಗೆ.. 


ತನ್ನ ಟ್ಯಾಗ್ ಲೈನ್ ನಿಂದಲೂ ಬೋಟ್ ಗ್ರಾಹಕರನ್ನು ಸೆಳೆಯುತ್ತದೆ. ಪ್ಲಗ್ ಇಂಟು ನಿರ್ವಾಣ. ನಿರ್ವಾಣ ಎಂದರೆ ಸಂಪೂರ್ಣವಾಗಿ ಸ್ವಾತಂತ್ರ್ಯ ಹಾಗೂ ಶಾಂತಿ ಇರುವಂತಹ ಸ್ಥಿತಿ. ತನ್ನ ಗ್ರಾಹಕರನ್ನು ಇದು ಗ್ರಾಹಕರು ಎಂದು ಗುರುತಿಸದೆ, ಅವರಿಗೊಂದು ವಿಶೇಷ ಹೆಸರು ನೀಡಿದೆ ಅದೇ ಬೋಟ್ ಹೆಡ್. ಇಲ್ಲಿಯವರೆಗೂ 8 ಲಕ್ಷಕ್ಕೂ ಅಧಿಕ ಸಂತೃಪ್ತ ಗ್ರಾಹಕರಿದ್ದಾರೆ ಬೋಟ್ ಗೆ. ದಿನವೊಂದಕ್ಕೆ ಆರು ಸಾವಿರ ಯೂನಿಟ್ ಗಳನ್ನು ಮಾರಾಟ ಮಾಡುತ್ತದೆ ಎಂದರೆ ಒಂದು ನಿಮಿಷಕ್ಕೆ ನಾಲ್ಕು ಪ್ರಾಡಕ್ಟ್ಗಳು ಮಾರಾಟವಾಗುತ್ತವೆ. 


ಹಾಗೆಂದು ಬೋಟ್ ನ ಹಾದಿ ಸುಗಮವಾಗೇನೂ ಇಲ್ಲ. ಬೋಟ್ ಕಂಪನಿ ಗೆ ಮೊದಲು ಇನ್ವೆಸ್ಟ್ ಮಾಡುವಾಗ ಹೆಚ್ಚಿನ ಇನ್ವೆಸ್ಟರ್ ಗಳು ಹಿಂದೆಮುಂದೆ ನೋಡಿದ್ದರು. ಕಾರಣವೆಂದರೆ, ಅಮೆರಿಕನ್, ಜಪಾನೀಸ್, ಚೈನೀಸ್, ಜರ್ಮನ್ ಕಂಪನಿಗಳ ಎದುರು ಈ ಪುಟ್ಟ ಸ್ಟಾರ್ಟ್ಅಪ್ ತಲೆ ಎತ್ತಿ ನಿಲ್ಲುತ್ತದೆಯೇ ಎಂಬ ಸಂದೇಹವಿತ್ತು. ಕೇವಲ ಅವರಿಗಲ್ಲ.. ಆ ಸ್ಟಾರ್ಟ್ಅಪ್ ನಲ್ಲಿ ಕೆಲಸಕ್ಕೆ ಸೇರಿದ ಕೆಲ ಕೆಲಸಗಾರರು ಸಹ ಈ ಸ್ಟಾರ್ಟಪ್ ಮುಂದೆ ಬೆಳೆದು ದೊಡ್ಡ ಕಂಪನಿಯಾಗುತ್ತದೆ ಎಂದು ಸಂದೇಹ ವ್ಯಕ್ತಪಡಿಸಿದ್ದರು.


 ಕಾಂಪಿಟೇಟರ್ ಗಳಿಗೇನೂ ಕಡಿಮೆ ಇರಲಿಲ್ಲ. ನಾಯ್ಸ್, ಮಿವಿ, ಸ್ಕಲ್ ಕ್ಯಾಂಡಿ, ಪಿ ಟ್ರಾನ್, ಬೌಲ್ಟ್ ಆಡಿಯೋ, ಅಂಬ್ರಾನ್, ಸ್ಯಾಮ್ಸಂಗ್ .. ಹೀಗೆ ಹಲವು ಬ್ರ್ಯಾಂಡೆಡ್ ಕಂಪನಿಗಳು ಹಾಗೂ ಕೆಲವು ಭಾರತದ ಮೂಲದ ಕಂಪನಿಗಳೇ ಇದಕ್ಕೆ ಪ್ರತಿಸ್ಪರ್ಧಿಯಾಗಿದ್ದವು.


ಇವೆಲ್ಲವೂ ತಮ್ಮನ್ನು ತಾವು ಎಲೆಕ್ಟ್ರಾನಿಕ್ಸ್ ಕಂಪನಿಗಳೆಂದು ಕರೆದುಕೊಳ್ಳುವಾಗ ವಿಶೇಷವಾಗಿ ಬೋಟ್ ತನ್ನನ್ನು ತಾನು ಲೈಫ್ ಸ್ಟೈಲ್ ಬ್ರ್ಯಾಂಡ್ ಕಂಪೆನಿ ಎಂದು ಕರೆದುಕೊಂಡಿತು. ಇಲ್ಲಾ ಅನುಮಾನ, ಸಂದೇಹಗಳನ್ನು, ಅಡೆ-ತಡೆಗಳನ್ನು ಮೀರಿ ಬೋಟ್ ಭಾರತದ ನಂಬರ್ ಒನ್ ವಯರ್ಲೆಸ್ ಹಾಗೂ ಹಿಯರ್ ವೇರ್ ಇಂಡಸ್ಟ್ರಿಯಲ್ಲಿ ಮೊದಲ ಸ್ಥಾನದಲ್ಲಿದೆ. ವಿಶ್ವದಲ್ಲಿ ಐದನೇ ಸ್ಥಾನದಲ್ಲಿದೆ. ಟಾಗ್ಗ್ ಹಾಗೂ ಸಿಂಗಾಪೂರ ಮೂಲದ ಕಹಾ ಎನ್ನುವ ಕಂಪನಿಗಳನ್ನು ಕೂಡ ಈಗ ಇದು ಅಕ್ವೈನ್ ಮಾಡಿಕೊಂಡಿದೆ.  ಇಂಟರ್ನೆಟ್ ಆಫ್ ತಿಂಗ್ಸ್  ಉಪಯೋಗಿಸಿ ಸ್ಮಾರ್ಟ್ ವಿಯರೆಬಲ್ ಆಡಿಯೋ ಉಪಕರಣದಲ್ಲಿಯೂ ಹೆಸರು ಸಾಧಿಸುವತ್ತ ಹೆಜ್ಜೆ ಇಡುತ್ತಿದೆ.


ಯುವ ಜನರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಿದ ಈ ಕಂಪನಿಯ ಬ್ಯುಸಿನೆಸ್ ಐಡಿಯಾ ಕೂಡ ಅಷ್ಟೇ ಹೊಚ್ಚ ಹೊಸದಾಗಿ, ವಿಭಿನ್ನವಾಗಿ ಹಾಗೂ ಯುವ ಜನರಿಗೆ ಇಷ್ಟವಾಗುವಂತಿದೆ. ಅವರು ಹೆಚ್ಚಾಗಿ ಬಳಸುವ ಸೋಶಿಯಲ್ ಮೀಡಿಯಾ ಗಳನ್ನು ಬಳಸಿಕೊಂಡು ಜಾಹೀರಾತು ಮಾಡಿ, ಉತ್ತಮ ಗುಣಮಟ್ಟದಲ್ಲಿ ಹಾಗೂ ಕಡಿಮೆ ದರದಲ್ಲಿ ತನ್ನ ಪ್ರಾಡಕ್ಟ್ ಗಳನ್ನು ನೀಡುತ್ತಾ.. ಡಿಜಿಟಲ್ ಮಾರ್ಕೆಟಿಂಗ್ನಿಂದಲೇ ಹೆಸರು ಮಾಡುತ್ತಾ.. ಲೈಫ್ ಸ್ಟೈಲ್ ಬ್ರ್ಯಾಂಡ್ ಆಗಿ ಬ್ರ್ಯಾಂಡ್ ನೇಮ್ ಸೃಷ್ಟಿಸಿಕೊಳ್ಳಬಹುದು ಎಂದು ವಿಭಿನ್ನವಾದ ಬಿಜಿನೆಸ್ ಐಡಿಯಾಗಳನ್ನು ನೀಡುತ್ತದೆ. ಬಾಯಿಂದ ಬಾಯಿಗೆ ಹಬ್ಬಿ ಬ್ಯುಸಿನೆಸ್ ನಲ್ಲಿ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿ ಮುಂಚೂಣಿಯಲ್ಲಿರಲು ಗ್ರಾಹಕರ ಗ್ರೂಪ್ ಹಾಗೂ ಗ್ರಾಹರನ್ನು ಅರ್ಥಮಾಡಿಕೊಳ್ಳಬೇಕೆಂದು ಹೇಳುತ್ತದೆ ಬೋಟ್. 


( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ