ಪುಸ್ತಕದ ಶೀರ್ಷಿಕೆ : ಗದ್ಯಗಂಧಿ - ಕವಿತೆಗಳು
ಲೇಖಕರು : ಎಂ. ಆರ್. ಕಮಲ
ಪ್ರಕಾಶಕರು : ಕಥನ ಪ್ರಕಾಶನ
ಪ್ರಥಮ ಮುದ್ರಣ : 2020
ಪುಟಗಳು : 72
ಬೆಲೆ : 70 ರೂ.
ಕವಿತೆಗಳಲ್ಲಿ ರೂಪಕಗಳು ವಿಶೇಷ ಸ್ಥಾನ ಹೊಂದಿವೆ. ಹಾಗೆ ಪದ್ಯ ಹಾಗೂ ಗದ್ಯ ಎರಡಕ್ಕೂ ರೂಪಕ ಹಾಗೂ ಭಾವಗಳನ್ನು ತುಂಬಿ.. ನೆನಪು, ವರ್ತಮಾನ ಹಾಗೂ ಭವಿಷ್ಯ ಎಲ್ಲವನ್ನೂ ಕಾವ್ಯಾತ್ಮಕವಾಗಿ ದಾಟಿಸುವ ಶೈಲಿ ಕಮಲ ಮೇಡಂ ಅವರದ್ದು. 'ನೆಲದಾಸೆಯ ನಕ್ಷತ್ರಗಳು' ಪುಸ್ತಕವನ್ನು ಓದಿ ಪರಿಚಯಿಸಿದ್ದನಾದರೂ.ಎಂ ಗದ್ಯಗಂದಿಯ ಓದು ಮತ್ತಷ್ಟು ವಿಶಿಷ್ಟ ಅನುಭವಗಳನ್ನು ತೆರೆದಿಟ್ಟಿತು.
ಕಮಲ ಮೇಡಂ ಅವರ ಪುಸ್ತಕಗಳ ಓದಿನ ಮತ್ತೊಂದು ಪ್ಲಸ್ ಪಾಯಿಂಟ್ ಎಂದರೆ ಪಾಸಿಟಿವಿಟಿಯನ್ನು ತುಂಬಿಕೊಳ್ಳುವುದು. ಪದಗಳ ಲಾಲಿತ್ಯದ ಜೊತೆಗೆ ನೆನಪುಗಳ ಘಮಲೂ ಸೇರಿ ನಮ್ಮೊಳಗೆ ತುಂಬಿರುವ ಬೇಸರವನ್ನೇ ಹೊರಗಟ್ಟುತ್ತವೆ. ಇವುಗಳ ಕುರಿತ ವಿಶ್ಲೇಷಣೆ ಬಹಳವೇ ಕಷ್ಟ. ಹಾಗಾಗಿ, ಇವುಗಳಲ್ಲಿ ನನಗಿಷ್ಟವಾದ ಕೆಲವು ಸಾಲುಗಳನ್ನು, ಹಂಚಿಕೊಂಡು ಗದ್ಯಗಂಧಿಯನ್ನು ಸವಿಯಲು ಬಯಸುತ್ತೇನೆ ಅಷ್ಟೇ..
ಕೆಲವೊಮ್ಮೆ ನೆನಪುಗಳೇ ನಮಗೆ ಸವಿಯಾದ ಅನುಭವ ನೀಡುತ್ತವೆ. ಕಳೆದುಕೊಂಡದ್ದನ್ನು ನೆನಪಿಸಿಕೊಂಡು ಮತ್ತಷ್ಟು ಕೊರಗುವ ಬದಲು ಚೆಂದದ ನೆನಪುಗಳನ್ನು ಎದೆಯೊಳಗೆ ತುಂಬಿಕೊಂಡು ಸಾರ್ಥಕಗೊಳಿಸಿಕೊಳ್ಳುವ ಹಾದಿಯನ್ನು ತೆರೆದಿಡುತ್ತಾರೆ. ಅಷ್ಟಕ್ಕೂ.. ಹಳ್ಳಿಯಲ್ಲಿ ಬೆಳೆದವರಿಗೆ ಅಲ್ಲಿನ ವಾತಾವರಣದ ಒಂದು ನೆನಪು ಸಾಕು ತಮ್ಮ ಬದುಕನ್ನೇ ಮತ್ತೆ ಹಸಿರಾಗಿಸಿಕೊಳ್ಳಲು.
ಅರ್ಪಣೆಯಲ್ಲಿಯೂ ಸಹ ಕಮಲ ಮೇಡಂ ಅರ್ಪಿಸಿರುವುದು
"ನನ್ನೊಳಗೆ ದೊಡ್ಡದಾಗಿ ಬೆಳೆಯುತ್ತಲೇ ಇರುವ ತವರೂರು
ಮೇಟಿಕುರ್ಕೆಗೆ"
"ಅವಳ ನೆನಪುಗಳಿಗೆ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳಿವೆ. ಕಾಲದಲ್ಲಿ ಮಾಸದ ಚೆಲುವಿದೆ. ವರ್ತಮಾನದ ಸಂಕಷ್ಟಗಳಿಗೆ ಸವಾಲೊಡುವ ಸತ್ವವಿದೆ. ಸೊಗಡಿನ ಒಂದು ಅವರೆ ಹೊಲ, ತೆಂಗಿನ ಗಿಡದ ಧ್ಯಾನ ಕಾಲಕ್ಕೆ ಉಸಿರು ತುಂಬಬಲ್ಲದು !"
ಹಳ್ಳಿಗಳಲ್ಲಿ ಕೆಲವು ಮನೆಗಳಲ್ಲಿ ಒಡೆದ ಬಳೆಗಳ ಚೂರು ಕಾಣಿಸಬಹುದು. ಆ ಬಳೆಗಳ ಚೂರಿನ ಹಿಂದೆ ನೋವಿನ ಕಥೆಗಳು ಇದ್ದರೂ.. ನೋವನ್ನು ಆಕರ್ಷಕವಾಗಿ ತೋರಿಸುವ ಜಾಣ್ಮೆ ಹಾಗೂ ಆ ಕಲಾತ್ಮಕತೆಯಲ್ಲಿಯೇ ತಮ್ಮ ನೋವನ್ನು ಮರೆಯುವ ಜೀವಗಳನ್ನು ತೋರುತ್ತಾರೆ. ಆ ಬಳೆಗಳ ಚೂರು ಹೇಗೆಲ್ಲಾ ಹೊಡೆದಿರಬಹುದು ಎಂದೂ ಹೇಳುತ್ತಾರೆ
"ಅಸಹಾಯಕತೆ, ಸಿಟ್ಟಿನಿಂದ ಅವಳೇ ಚೂರು ಮಾಡಿರಬಹುದು. ಅದ್ಯಾರೋ ಗಂಡನನ್ನು ಕಳೆದುಕೊಂಡಿರಬಹುದು. ಬಳೆಚೂರುಗಳ ಹಿಂದೆ ಬರೀ ನೋವಿನ ಕಥೆಗಳೇ. ಅದನ್ನು ಮರೆಸಲೆಂದೇ ಚೂರುಗಳ ಅಂಟಿಸಿ, ತೋರಣ ಮಾಡಿ ಬಾಗಿಲಲ್ಲಿ ತೂಗಿದಳು.
ಹಸಿರು ಬಳೆಯ ಚೂರೊಂದು ಈಗ ಅವಳ ಕಣ್ಣಲ್ಲಿ ಕೂತು ನಾಚಿಕೆಯಿಂದ ನುಡಿಯುತ್ತಿದೆ. 'ನೋಯಬೇಡ ಪ್ರೀತಿಯ ಅಪ್ಪುಗೆಗೂ ಒಡೆದ ಬಳೆಯ ಚೂರುಗಳಿವೆ. ಹುಡುಕಿ ಮಾಲೆ ಮಾಡಿ, ಅವನ್ನಷ್ಟೇ ಎಲ್ಲರ ಮನೆಯ ಬಾಗಿಲುಗಳಿಗೆ ತೋರಣ ಮಾಡಿ ತೂಗಿಬಿಡು., ಉಳಿದವನ್ನು ಮತ್ತೆಂದೂ ಮರಳದಂತೆ ದೂರ ಎಸೆದು ಬಿಡು!"
ಇದು ನೋವನ್ನು ದೂರವಿಟ್ಟು ಖುಷಿನಷ್ಟೇ ನೆನಪಿಸಿಕೊಳ್ಳುವ ಬಗೆಯೂ ಹೌದು. ಎಷ್ಟೋ ಬಾರಿ ನೋವುಗಳನ್ನೇ ನೆನಪಿಸಿಕೊಂಡು.. ಖುಷಿಗಳನ್ನು ಮರೆಯುವ ನಮಗೆ ಇದು ಚೆಂದದ ಪಾಠವಾಗವಲ್ಲದು.
ದೂರದ ಮರೀಚಿಕೆಯನ್ನು ಅರಸಿ, ಮನೆಯಲ್ಲಿನ ನೈಸರ್ಗಿಕವಾದ ಸೌಲಭ್ಯಗಳನ್ನು ಬಿಟ್ಟು ಬೇರೆಡೆಗೆ ಹೋಗಿ ಮತ್ತೆ ನಿರಾಸೆಯಿಂದ ವಾಪಾಸು ಬರುವ ಎಷ್ಟೋ ಜೀವಗಳನ್ನು ನೆನಪಿಸುತ್ತವೆ ಈ ಸಾಲುಗಳು.
"ಆ ಊರಿನ ಮಕ್ಕಳೆಲ್ಲ ಕರೆಂಟು ಹೋಗುತ್ತಲೇ ಇರುವ, ಇದ್ದರೂ ವೋಲ್ಟೇಜ್ ಇಲ್ಲದ ಮಂಕು ದೀಪಗಳ ಊರನ್ನು ಬಿಟ್ಟು ಬೆಳಕನ್ನು ಅರಸುತ್ತ ನಗರ ಸೇರಿದರು. ಮೊದಮೊದಲು ಟ್ಯೂಬ್ ಲೈಟ್ ಗೆ ಮರುಳಾದರು. ನಂತರ ನಿಯಾನ್ ದೀಪಗಳು, ಎಲ್.ಇ.ಡಿ ದೀಪಗಳು ಎದೆಯನ್ನು ಬೆಳಗಿಸುತ್ತ ಹೋದವು. ಝಗ ಝಗ ಬೆಳಕಿನ ತೀರದ ದಾಹದಲ್ಲಿ ಆ ಊರಿನಿಂದ ಎಷ್ಟೆಷ್ಟು ಸಾವಿರ ಮೈಲಿ ಹೋದರೋ ಅವರಿಗೂ ಗೊತ್ತಾಗಲಿಲ್ಲ. ಅಮ್ಮ ಹಚ್ಚಿದ ಸಣ್ಣ ಹಣತೆ ಬೆಳಕಿನ ಕಡಲಲ್ಲಿ ಒಮ್ಮೊಮ್ಮೆ ತೇಲುತ್ತಾ ಬಂದಿದ್ದೂ ಉಂಟು.
ಕೊನೆಗೆ ಕಣ್ಣು ತಡೆಯಲಾರದಷ್ಟು ಬೆಳಕು ಕಣ್ಣನ್ನೇ ಕುಕ್ಕಿತೇನೋ ! ಇಡೀ ವಾತಾವರಣಕ್ಕೆ ಉಸಿರುಗಟ್ಟಿ ಎಲ್ಲರೂ ಮನೆಗೆ ಮರಳುತ್ತಿದ್ದಾರೆ!"
ಮನುಷ್ಯರಿಗೆ ಮಾತು ಎಷ್ಟು ಅವಶ್ಯಕವಾಗಿದೆ ಎಂದರೆ.. ಮಾತನಾಡದೆ ಈಗೀಗ ಜನರಿಗೆ ಯಾವುದೂ ಅರ್ಥವಾಗುವುದಿಲ್ಲ. ಸೂಕ್ಷ್ಮತೆಗಳನ್ನು ಕಳೆದುಕೊಂಡಿರುವವರು ಮೌನಕ್ಕೆ ಪ್ರತಿಕ್ರಿಯಿಸುವುದು ಕಡಿಮೆ. ಸೂಕ್ಷ್ಮತೆ ಇರುವವರಿಗೆ ಕೇವಲ ಮನುಷ್ಯರ ಭಾಷೆ ಮಾತ್ರವಲ್ಲ.. ಪ್ರಾಣಿಗಳ ಭಾಷೆ ಸಹಾ ಅರಿವಾಗುತ್ತದೆ. ಆದರೆ, ಅರ್ಥ ಮಾಡಿಸಲೇಬೇಕೆಂದು ಹೊರಟಾಗ.. ಅರ್ಥವಾಗುತ್ತಲೇ ಇಲ್ಲ ಅಥವಾ ಅರ್ಥವಾದರೂ ಅರ್ಥವಾಗದಂತೆ ನಟಿಸುವವರು ಹೆಚ್ಚಾಗುತ್ತಿದ್ದಾರೆ ಎನ್ನುವಾಗ ಅದನ್ನು ಲೇಖಕಿ ಹೀಗೆ ಹೇಳುತ್ತಾರೆ.
"ಮಾತಿರದೆ ಏನನ್ನೂ ಹೇಳಲಾಗುತ್ತಿಲ್ಲ ಅಥವಾ ಹೇಳಿದರೂ ಯಾರಿಗೂ ಅರ್ಥವಾಗುತ್ತಲೇ ಇಲ್ಲ ಅಥವಾ ಅರ್ಥವಾದರೂ ಅರ್ಥವಾಗದಂತೆ ನಟಿಸುತ್ತಿದ್ದಾರೆ. ನುಡಿಯದ ಭಾಷೆ ತನ್ನೆಲ್ಲ ಸೂಕ್ಷ್ಮತೆಗಳನ್ನು ಕಳೆದುಕೊಂಡು, ಅದರ 'ಧ್ವನಿ' ಸತ್ತು ಹೋಗಿದೆ. ದೂರದ ಹಕ್ಕಿಯ ಕೂಗು, ಚರಂಡಿಯಲ್ಲಿ ಸಿಕ್ಕಿಕೊಂಡ ನಾಯಿ, ಅಮ್ಮನನ್ನು ಅರಸುತಿರುವ ಕರು, ಬೀದಿಯ ಚೀತ್ಕಾರಗಳು ಒತ್ತಟ್ಟಿಗಿರಲಿ, ಎದೆಯೊಳಗೆ ಹುಟ್ಟುವ ವಿನಾಕಾರಣದ ಒಂದು ಪ್ರೀತಿಯ ಮಾತು ಯಾರಿಗೂ ಕೇಳಿಸುತ್ತಿಲ್ಲ.
ಕವಿಯನ್ನು ಕೊಲ್ಲಲು ಸೆರೆಮನೆಯಲ್ಲಿಯೇ ಇಡಬೇಕಿಲ್ಲ."
ಎಷ್ಟೋ ಬಾರಿ ಭಾವಚಿತ್ರಗಳನ್ನು ನೋಡಿ ನೆನಪಿಸಿಕೊಳ್ಳುವುದಕ್ಕಿಂತಲೂ.. ಅಂತಹಾ ಫೋಟೋದಲ್ಲಿ ಇಲ್ಲದ ನೆನಪುಗಳೇ ಹೆಚ್ಚಾಗಿ ಕಾಡುತ್ತವೆ. ಮನಸ್ಸಿನ ಕ್ಯಾನ್ವಾಸ್ ನಲ್ಲಿ ಅಂತಹಾ ಭಾವಚಿತ್ರಗಳೇ ಹೆಚ್ಚು ನೆನಪಾಗಿ ಉಳಿದು ಹೋಗಿರುವುದು ಸತ್ಯ. ಎಷ್ಟು ಬಾರಿ ಚಿಕ್ಕ ಭೇಟಿಯಿಂದಲೇ ಮನಸ್ಸಿನಲ್ಲಿ.. ಆಪ್ತ ಭಾವವನ್ನು ಮೂಡಿಸಿ ಶಾಶ್ವತವಾಗಿ ಉಳಿದು ಹೋಗಿರುವ ಜನರನ್ನು ಸಹಾ ನೆನಪಿಸಿಕೊಳ್ಳಬಹುದು. ಹಾಗೆಯೇ ಅಮೂಲ್ಯ ವಸ್ತುಗಳನ್ನೂ..
"ದಿನಕ್ಕೊಂದು ಬೀಜ ಬಿತ್ತಿ ಮೊಳಕೆಯೊಡೆಯುವ ಪವಾಡವನ್ನು ನಿರುಕಿಸುತ್ತಿದ್ದ ಹಿತ್ತಲು! ಬಹುಶಃ ಈ ಕಾರಣಕ್ಕೆ ಇರಬೇಕು. ಚಿತ್ರಗಳಲ್ಲಿಲ್ಲದ ಚಿತ್ರಗಳು ಅವಳ ನೆನಪಿನಲ್ಲಿ ಮೊಳಕೆಯೊಡೆಯುತ್ತಿರುತ್ತವೆ !"
ಮಳೆಗಾಲ ಬಂದಾಗ ಈಗಲೂ ಮಳೆಯಲ್ಲಿ ಕುಣಿಯುವ ಖುಷಿಯನ್ನು ತಪ್ಪಿಸಿಕೊಳ್ಳುವವರು ಯಾರು..? ಕೆಲವರು ಆಸೆ ಇದ್ದರೂ ಯಾರೇನೆಂದುಕೊಳ್ಳುತ್ತಾರೋ ಎಂದು ಸುಮ್ಮನಾಗುತ್ತಾರೆ. ಇನ್ನು ಕೆಲವರು ಮುಕ್ತವಾಗಿ ಸಂಭ್ರಮಿಸುತ್ತಾರೆ. ಆದರೆ, ಕಾಲ ಹಾಗಿರುತ್ತದೆ.. ಎನ್ನುವವರಿಗೆ ಲೇಖಕಿಯ ಈ ಮಾತುಗಳು ಇಷ್ಟವಾಗಬಹುದು
"ಈಗಲೂ ಅವಳು ಮಳೆಗೆ ಖುಷಿಯಿಂದ ಕುಣಿವ ಹುಡುಗಿಯೇ! ಆದರೆ ಕೊಚ್ಚಿ ಹಾಕುವ ಮಳೆಗಾಲದಲ್ಲಿ ಮಾತ್ರ ಅವಳ ಬಾಲ್ಯದ ಪಾತ್ರ ಅಮ್ಮನ ಪಾತ್ರವಾಗಿ ಬದಲಾಗುತ್ತಿರುತ್ತದೆ !"
ಬದುಕಲ್ಲಿ ಒಂದು ನಮ್ಮನ್ನು ಕುಗ್ಗಿಸಲೆಂದು ಅಥವಾ ಹೆದರಿಸಲೆಂದೇ ಬಂದರೆ.. ಅದಕ್ಕೆ ಪ್ರತ್ಯುತ್ತರವಾಗಿ ಬರುವ ಸನ್ನಿವೇಶ ಸಂದರ್ಭಗಳು ನಮ್ಮನ್ನು ಸಕಾರಾತ್ಮಕತೆಯಿಂದ ಕೈಹಿಡಿದು ನಡೆಸುತ್ತವೆ. ಕೆಲವೊಂದು ಮನೆಗಳಲ್ಲಿ ಸಾವಿನ ಸಂದರ್ಭದಲ್ಲಿ ಮತ್ತೊಂದು ಹೊಸ ಹುಟ್ಟು ಇಡೀ ಮನೆಯಲ್ಲಿ ಜೀವಕಳೆ ತುಂಬಬಹುದು. ಯಾಕೋ ಈ ಕೆಳಗಿನ ಸಾಲುಗಳು ಹೆಚ್ಚೇ ಇಷ್ಟವಾದವು.
"ಸಾವೊಂದು ಗುಡ್ಡದಂತೆ ಮೇಲೆ ಇಳಿಯಿತು, ಬದುಕು ರೆಂಬೆ ಕೊಂಬೆ ಚಾಚಿ ಸೆಳೆದುಕೊಂಡಿತು. ಕೆಮ್ಮಣ್ಣು ಹೊಳೆ ಎದೆ ಮಟ್ಟ ಹರಿಯಯಿತು, ಕೂದಲು ಮೆಹಂದಿ ಹಚ್ಚಿದಂತೆ ಹೊಳೆಯಿತು. ಸಿಡಿಲಿನ ಆಗಸ ಬೆಂಕಿ ಮಳೆ ಕಾರಿತು. ಒಳಗಿನ ಬೆಳಕು ಪ್ರಖರವಾಯಿತು.
ಮರ-ಗಿಡಗಳು ತೇಲಿ ಬಂದು ಬಾಗಿಲನ್ನು ಬಡಿಯುತ್ತ ನಾಳಿನ ಬೀಜಗಳನ್ನು ಎಲ್ಲ ಕಡೆ ಹರಡಿದವು. ಬಾಗಿದ್ದ ಎಲೆಗಳು ಯಾರಿಲ್ಲದ ಮನೆಗೂ ತೋರಣ ಕಟ್ಟಿ ಕರೆಯತೊಡಗಿದವು. ಬಣ್ಣ ಕಳೆದುಕೊಳ್ಳುವಂತೆ ನೆನೆದ ಹೂಗಳು ಕೈ ಕೈ ಹಿಡಿದು ಮಾತಿಗೆ ತೊಡಗಿದವು!"
ಇಂತಹಾ ಎಷ್ಟೋ ಸಾಲುಗಳು ಜೀವನ್ಮುಖಿಯಂತೆ ನೆನಪುಗಳನ್ನು ಬಡಿದೆಚ್ಚರಿಸುವ ನೆನಪಿನಕೋಲುಗಳಂತೆ, ಮಿಂಚಂತೆ ಹೊಳೆಯುವ ಎಷ್ಟೋ ಪದದ ಲಾಲಿತ್ಯಗಳು ಹೊಸ ಅರ್ಥವನ್ನೇ ಹೇಳುವಂತೆ.. ಇಡೀ ಗದ್ಯಗಂಧಿ ಕವಿತೆಗಳು ನಮ್ಮೊಳಗೆ ಆವರಿಸಿಬಿಡುತ್ತವೆ.
ಇಲ್ಲಿ ನಾನು ಉಲ್ಲೇಖಿಸಿರುವುದು ನನಗಿಷ್ಟವಾದ ಕೆಲವು ಸಾಲುಗಳನ್ನು. ಅಷ್ಟೇ.. ಇಂತಹಾ ಹಲವಾರು ಗದ್ಯಗಂಧಿ ಕವಿತೆಗಳು ನಿಮ್ಮ ಓದಿಗೆ ನಿಲುಕುತ್ತವೆ. ಓದಿ ಸವಿಯಿರಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ