ಪುಸ್ತಕದ ಶೀರ್ಷಿಕೆ : ಅಂತರ್ಗೀತೆ
ಲೇಖಕರು : ಸಿ. ಎನ್. ಮುಕ್ತಾ
ಪ್ರಕಾಶಕರು : ಪಾಂಚಜನ್ಯ ಪಬ್ಲಿಕೇಶನ್ಸ್
ಪ್ರಥಮ ಮುದ್ರಣ : 2002
ಪುಟಗಳು : 180
ಬೆಲೆ : 95 ರೂ.
ಸಿ. ಎನ್ ಮುಕ್ತಾ ಅವರ ಅಂತರ್ಗೀತೆ ಕಾದಂಬರಿ ಮನೋವೈಜ್ಞಾನಿಕ ಕಥಾವಸ್ತುವುಳ್ಳ ಕಾದಂಬರಿ. ಇದು ' ಗೆಳತಿ ' ಪತ್ರಿಕೆಯಲ್ಲಿ ' ಸಂಕೋಲೆ ' ಎಂಬ ಹೆಸರಿನಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು. ಆಗ ಆ ಪತ್ರಿಕೆಯ ಸಂಪಾದಕಿಯಾಗಿದ್ದವರು ಶ್ರೀಮತಿ ಉಷಾ ನವರತ್ನರಾಮ್ ಅವರು.
ಅವಿನಾಶ್ ಹಾಗೂ ಮಧುರ ಲಾಯರ್ ವೆಂಕಟೇಶಯ್ಯ ಹಾಗೂ ವಿಮಲಮ್ಮನವರ ಮಕ್ಕಳು. ಅವಿನಾಶನಿಗೆ 15 ವರ್ಷವಾಗಿದ್ದಾಗಲೇ ತಂದೆ ಹೃದಯಾಘಾತದಿಂದ ಕಣ್ಮುಚ್ಚಿದ್ದರು. ವಿಮಲಮ್ಮ ತಾವೇ ತಂದೆ ಹಾಗೂ ತಾಯಿಯಾಗಿ ನಿಂತು ಎದೆಗುಂದದೇ ಮಕ್ಕಳನ್ನು ಬೆಳೆಸಿದ್ದರು. ಅವಿನಾಶ್ ಡಾಕ್ಟರಾಗಿ ಪ್ರೈವೇಟ್ ಆಗಿ ಪ್ರಾಕ್ಟೀಸ್ ಶುರು ಮಾಡಿ ಹೆಸರುಗಳಿಸುತ್ತಿದ್ದ. ಮಧುರ ಎರಡನೇ ವರ್ಷದ ಬಿ. ಎಯಲ್ಲಿದ್ದಾಗ ಆಕೆಯ ಸಹಪಾಠಿ ಅನಿತಾಳನ್ನು ಕಂಡು ಮನಸೋತಿದ್ದ ಅವಿನಾಶ್.
ವಿಮಲಮ್ಮನಿಗೆ ಮಗನ ಮದುವೆ ಮಾಡುವ ಆಸೆ. ಆದರೆ, ಅವಿನಾಶ್ ಮಾತ್ರ ತಂಗಿಯ ಮದುವೆಯೇ ಮೊದಲು ಎನ್ನುತ್ತಿದ್ದ. ಜೊತೆಗೆ ಸ್ವಂತ ನರ್ಸಿಂಗ್ ಹೋಮ್ ತೆರೆಯುವ ಆಸೆಯೂ ಇತ್ತು. ತಂಗಿಯ ಸಹಪಾಠಿಯಾಗಿದ್ದ ಅನಿತಾಳ ಬಗ್ಗೆ ತಾಯಿಯ ಬಳಿ ಹೇಳಲು ಆತನಿಗೆ ಧೈರ್ಯವಿರಲಿಲ್ಲ. ಕಾರಣ ತಾಯಿ ಸಂಪ್ರದಾಯಸ್ಥಳು. ಅಲ್ಲದೆ, ವಿಮಲಮ್ಮನವರಿಗೆ ಹಾರ್ಟ್ ಅಟ್ಯಾಕ್ ಆಗಿ ನರ್ಸಿಂಗ್ ಹೋಮ್‌ನಲ್ಲಿದ್ದುದರಿಂದ ಅವರಿಗೆ ಈ ವಿಚಾರವನ್ನು ತಿಳಿಸುವುದು ಆಘಾತಕಾರಿಯಾಗಿದ್ದರಿಂದ ಸುಮ್ಮನಿದ್ದ. ಮಧುರಾಳೇನೂ ತನ್ನ ಗೆಳತಿಯನ್ನು ಅಣ್ಣ ಪ್ರೀತಿಸುವುದಕ್ಕೆ ಸಹಕಾರಿಯಾಗಿ ನಿಂತಿರಲಿಲ್ಲ. ಬದಲಾಗಿ, ಆಕೆಯ ಕುರಿತು ಎಚ್ಚರಿಸಿದ್ದಳು.
ಅದಕ್ಕೆ ಕಾರಣವಿತ್ತು. ಅನಿತಾ ಸ್ವತಂತ್ರಳಲ್ಲ. ಬದಲಾಗಿ, ಆಕೆ ಅವರ ಕಾಲೇಜಿನಲ್ಲಿ ಚರಿತ್ರೆಯ ಲೆಕ್ಚರರ್ ಆಗಿದ್ದ ಸಿಸ್ಟರ್ ಮೇರಿ ಅವರ ಸಾಕು ಮಗಳು. ಇದು ಕೇವಲ ಧರ್ಮದ ವಿಚಾರ ಮಾತ್ರವಷ್ಟೇ ಆಗಿರಲಿಲ್ಲ. ಸಿಸ್ಟರ್ ಮೇರಿಯವರಿಗೆ ಆಕೆಯನ್ನು ನನ್ ಮಾಡುವ ಆಸೆ ಇತ್ತು. ಇದೆಲ್ಲಾ ತಿಳಿದ ನಂತರವೂ ಅವಿನಾಶ್ ಮಧುರಾಳ ಸಹಾಯವಿಲ್ಲದೆ, ಅನಿತಾಳನ್ನು ನೇರವಾಗಿ ಭೇಟಿಯಾಗಿ ಪ್ರೇಮ ನಿವೇದಿಸಿಕೊಂಡಿದ್ದ.
ಅಚಾನಕ್ಕಾಗಿ ಅವಿನಾಶನ ಜೊತೆಯಾಗಲು ಅನಿತಾ ತಾನಿದ್ದ ಹಾಸ್ಟೆಲ್ ಅನ್ನು ತೊರೆದು ಬಂದಿದ್ದಳು. ನಾಲ್ಕು ಜನರೆದುರಲ್ಲಿ ಗಟ್ಟಿಯಾಗಿ ಮಾತನಾಡಲು ಹಿಂಜರಿಯುತ್ತಿದ್ದವಳು ಧೈರ್ಯವಹಿಸಿ ಓಡಿ ಬಂದಿದ್ದಾಗಿತ್ತು. ಅವಿನಾಶ್ ಈಗ ಹಿಂದೆಗೆಯುವಂತಿರಲಿಲ್ಲ. ಹಾಗೆಯೇ.. ಮನೆಯಲ್ಲಿಯೂ ಹೇಳುವಂತಿರಲಿಲ್ಲ. ಆ ಸಂದರ್ಭದಲ್ಲಿ ಅವನು ತೆಗೆದುಕೊಂಡ ನಿರ್ಧಾರವೆಂದರೆ.. ಅನಿತಾಳನ್ನು ಮೈಲಾಪುರಕ್ಕೆ ಕರೆದುಕೊಂಡು ಹೋಗುವುದು.
ಮೈಲಾಪುರದಲ್ಲಿ ಅವಿನಾಶ್ ಕಸಿನ್ ಸ್ವಾಮಿ ಎಂಬಾತನಿದ್ದ. ಆತ ಶಿಶುವಿಹಾರ, ಅನಾಥಾಶ್ರಮ ನಡೆಸುತ್ತಿದ್ದ. ಊರವರಿಗೆಲ್ಲಾ ಆತನೆಂದರೆ ದೇವರು ಎನ್ನುವ ಭಾವನೆ. ಸ್ವಾಮೀಜಿ ಎಂದೇ ಕರೆಯುತ್ತಿದ್ದರು ಆತನನ್ನು. ಒಬ್ಬರಿಂದ ಒಂದು ರೂಪಾಯಿ ಹಣವನ್ನೂ ತೆಗೆದುಕೊಳ್ಳುತ್ತಿರಲಿಲ್ಲ. ಹೀಗೆ, ತನಗಿದ್ದ ಆಸ್ತಿಯನ್ನೆಲ್ಲಾ ಜನಸೇವೆಗೆ ಖರ್ಚು ಮಾಡುತ್ತಿದ್ದ. ಇಂತಹ ಸ್ಥಳದಲ್ಲಿ ಅನಿತಾ ಸುರಕ್ಷಿತವಾಗಿರುತ್ತಾಳೆ ಎಂಬ ಭಾವನೆಯಿಂದ ಮನೆಯಲ್ಲಿ ಸತ್ಯವನ್ನು ಹೇಳುವವರಿಗೆ ಆಕೆ ಅಲ್ಲಿರಲೆಂದು ಕರೆತಂದಿದ್ದ.
ನನ್ ಆಗಲು ಇಷ್ಟವಿಲ್ಲದೆ ಹಾಗೂ ವಾತ್ಸಲ್ಯದ ಮಹಾಪೂರವನ್ನೇ ಹರಿಸಿದ್ದ ಸಿಸ್ಟರ್ ಮೇರಿಯವರಿಗೆ ಎದುರಾಡಲು ಮನಸ್ಸಾಗದೆ, ಆಕೆ ಹಾಸ್ಟೆಲ್ ತೊರೆದು ಬಂದಿದ್ದಾಗಿತ್ತು. ಇದರ ಮುಂದಿನ ಪ್ರಭಾವವೇನಾಯಿತು..?
ಅನಿತಾಳ ವಿಚಾರವನ್ನು ಸ್ವಾಮಿಯ ಬಳಿ ತಿಳಿಸಿದ ಅವಿನಾಶ್ ಆಕೆಯನ್ನು ಅಲ್ಲಿಯೇ ಬಿಟ್ಟು ಮರುದಿನ ಹೊರಟ. ಸಹಾಯಕಿಯಾಗಿದ್ದ ಲಕ್ಷ್ಮಿ ಅಲ್ಲಿನ ಪರಿಸರದ ಪರಿಚಯವನ್ನು ಮಾಡಿಕೊಟ್ಟಿದ್ದಳು. ಆದರೆ, ಇವರು ಉಳಿದುಕೊಂಡಿದ್ದ ಆ ಜಾಗ ಹಾಗೂ ಊಟ ಆಶ್ರಮದಂತಿರಲಿಲ್ಲ. ಬದಲಾಗಿ, ಭವ್ಯತೆ ಹಾಗೂ ಆಡಂಬರವಿದ್ದದ್ದು ಅನಿತಾಳ ಮನಸ್ಸಿನಲ್ಲಿ ಪ್ರಶ್ನೆಯುಂಟು ಮಾಡಿತ್ತು. ಅದಕ್ಕೆ ಅವಿನಾಶ್ ಸಮಜಾಯಿಷಿ ನೀಡಿದ್ದ. ಅವನು ಸನ್ಯಾಸಿಯಲ್ಲ, ಬದಲಾಗಿ ಸಂಸಾರದಿಂದ ದೂರವಿದ್ದು ಕೈಲಾಗದವರಿಗೆ ಸೇವೆ ಸಲ್ಲಿಸಿರುತ್ತಿರುವ ದೇವತಾ ಪುರುಷನೆಂದು ಹೇಳಿದ್ದ. ಅಲ್ಲದೇ, ತನ್ನ ಹಣವನ್ನು ಖರ್ಚು ಮಾಡಿ, ತಾನು ತೃಪ್ತಿಯಾಗುವಂತಿದ್ದರೆ ತಪ್ಪಿಲ್ಲವೆಂದು ಹೇಳಿದ್ದ.
ಅನಿತಾಳಿಗೆ ಅಲ್ಲಿ ಜೊತೆಯಾದವರು ಆಶ್ರಮದಲ್ಲಿ ಅಡಿಗೆ ಕೆಲಸ ಮಾಡುತ್ತಿದ್ದ ಗೌರಮ್ಮ ಎಂಬ ಅಜ್ಜಿ. ಅಜ್ಜಿಯ ಮೊಮ್ಮಗಳು ನೆಂಟರ ಮನೆಯಲ್ಲಿದ್ದುಕೊಂಡು ಕಾಲೇಜು ಓದುತ್ತಿದ್ದಳು. ಪ್ರತಿ ತಿಂಗಳ ಹಣವನ್ನು ಗೌರಮ್ಮನೇ ಕಳುಹಿಸುತ್ತಿದ್ದರು. ಗೌರಮ್ಮ ತನ್ನ ಮೊಮ್ಮಗಳಂತೆಯೇ ಇದ್ದ ಅನಿತಾಳಿಗೆ ಆಪ್ತರಾದರು. ಹಾಗೆಯೇ ಅಲ್ಲಿ ಕೆಲಸ ಮಾಡುತ್ತಿದ್ದ ಅಪರ್ಣ ಸಹ ಆಕೆಯ ಮನಸ್ಸು ಗೆದ್ದಳು.
ಅವಿನಾಶ್ ಮನೆಯಲ್ಲಿ ಇನ್ನೂ ಈಕೆ ವಿಚಾರವನ್ನು ಹೇಳಲಿಲ್ಲವಾದರೂ.. ಒಂದು ಶುಭ ಮುಹೂರ್ತದಲ್ಲಿ ಆಶ್ರಮದಲ್ಲಿಯೇ ವಿವಾಹವಾದರು. ಮಧುಚಂದ್ರಕ್ಕೆಂದು ಹೋಗಿ ಬಂದರು. ನಂತರ ಆತ ಮನೆಯಲ್ಲಿ ಹೇಳಿರಲಿಲ್ಲವೆಂದು, ಅಮ್ಮನಿಗೆ ಹುಷಾರಿಲ್ಲವೆಂದು, ಮೆಡಿಕಲ್ ಕಾನ್ಫರೆನ್ಸ್, ತಂಗಿಯ ಮದುವೆ ಹೀಗೆ ಕಾರಣ ಕೊಡುತ್ತಾ ಇದ್ದಾಗಲೇ ದಿನಗಳು ಕಳೆಯುತ್ತಲೇ ಹೋಗುತ್ತಿದ್ದವು.
ಸದ್ಯಕ್ಕೆ ಅನಿತಾ ತಾನು ಹೊರಡುವವರೆಗೂ ಅಲ್ಲಿಯ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಲು ಒಪ್ಪಿಕೊಂಡಳು.
ಅನಿತಾ ಮಧುಚಂದ್ರಕ್ಕೆ ಹೋಗಿಬರುವಷ್ಟರಲ್ಲಿ ಅಪರ್ಣ ತನಗೆ ವಿವಾಹ ನಿಶ್ಚಯವಾಯಿತೆಂದು ಹೇಳಿದಳು. ಅಲ್ಲದೆ, ಅವಳ ಮುಖದಲ್ಲಿ ಹೊಸ ಕಳೆಯೂ ಬಂದಿತ್ತು.
ಇತ್ತ ಕೆಲ ದಿನ ಕಳೆದು ಬಂದ ಅವಿನಾಶ್, ತಂಗಿಗೆ ಕಾಲೇಜಿನ ಲೆಕ್ಚರರ್ ಆಗಿದ್ದ ಗಿರಿಧರ್ ಎಂಬ ವರ ನಿಶ್ಚಯವಾಗಿದ್ದಾನೆಂದು ಸಿಹಿ ಸುದ್ದಿ ತಂದಿದ್ದ. ಗಿರಿಧರ್ ಹೈಸ್ಕೂಲಿನಲ್ಲಿ ಅವಿನಾಶನ ಕ್ಲಾಸ್ಮೇಟ್ ಕೂಡ ಆಗಿದ್ದ.
ದಿನಗಳು ಉರುಳುತ್ತಿದ್ದವು. ಆದರೆ, ಅನಿತಾಳ ಬಾಳು ಏರುಗತಿಯಿಲ್ಲದೆ, ಇಳಿಮುಖವೂ ಆಗದೆ ಸಾಗುತ್ತಿದ್ದ ಸಂದರ್ಭದಲ್ಲಿಯೇ ಆಕೆ ಅಪರ್ಣಳ ಸಾವಿಗೆ ಮೂಕಸಾಕ್ಷಿಯಾಗುವ ಸಂದರ್ಭ ಒದಗಿ ಬಂದಿತ್ತು.ಅದು ಅವಳನ್ನು ಘಾಸಿಗೊಳಿಸಿದ್ದೂ ಹೌದು. ಅಲ್ಲಿಂದ ಅವಳ ಬದುಕಿನ ಅಧ್ಯಾಯವೇ ಬದಲಾಗುತ್ತಾ ಹೋಯಿತು. ಸಾವಿನ ಸುದ್ದಿಯನ್ನು ಆಕೆ ಅವಿನಾಶನ ಬಳಿ ಹೇಳದಂತೆ ತಡೆಯೊಡ್ಡಲಾಗಿತ್ತು.
ಇದಾದ ನಂತರ ಆಕೆಗೆ ಅವಿನಾಶನ ನೇರ ಭೇಟಿಯೇ ಆಗಲಿಲ್ಲ. ಅದಕ್ಕೆ ಕಾರಣವೇನು..? ಅವಿನಾಶ ಮೋಸಗಾರನೇ ಎಂದು ಆಲೋಚಿಸುವಂತೆ ಮಾಡುತ್ತಿರುವಾಗಲೇ.. ಅವಿನಾಶನ ದೃಷ್ಟಿಯಿಂದಲೂ ಈ ಕಥೆಗೆ ಮತ್ತೊಂದು ರೂಪ ಬರುತ್ತದೆ.
ಅಷ್ಟಕ್ಕೂ ಅಪರ್ಣಾಳ ಸಾವು ಹೇಗಾಯಿತು..? ಅಪರ್ಣಾ ಸಾವಿನ ಸುದ್ದಿಯನ್ನು ಅವಿನಾಶನಿಗೆ ಹೇಳದಂತೆ ತಡೆಯೊಡ್ಡಿದ್ದು ಯಾರು..?
ಆಶ್ರಮದಲ್ಲಿ ಅಪರ್ಣಾಳ ಸುದ್ದಿ ಹರಡಿದ್ದಂತೆ ಆಕೆ ಗರ್ಭಿಣಿಯಾಗಿದ್ದು ನಿಜವೇ..? ಆಶ್ರಮಕ್ಕೆ ಬಂದಿದ್ದ ವಿಲಿಯಂ ಹಾಗೂ ಬೆಟ್ಸ ಇಬ್ಬರೂ ಅನಿತಾಳಿಗೆ ಹೇಳಿದ್ದೇನು..?
ಅನಿತಾ ನಿದ್ರೆಯಲ್ಲಿ ವರ್ತಿಸುತ್ತಿದ್ದ ರೀತಿಗೆ ಕಾರಣ ಅಪರ್ಣಾಳ ದೆವ್ವವೇ ಅಥವಾ ಈಕೆಯ ಮನಸ್ಸಿನ ಪ್ರಭಾವವೇ..? ಗೌರಮ್ಮ ಈಕೆಯನ್ನು ನೋಡಿಕೊಂಡ ಬಗೆ ಹೇಗೆ..?
ಗೌರಮ್ಮನ ಸಹಾಯ ಪಡೆದು ಅವಿನಾಶನನ್ನು ಮತ್ತೆ ಭೇಟಿಯಾಗುವಲ್ಲಿ ಯಶಸ್ವಿಯಾದರೂ.. ಅವಿನಾಶನಿಂದ ಸಿಕ್ಕ ಸ್ವಾಗತ ಹೇಗಿತ್ತು..? ಅಷ್ಟರಲ್ಲಿ ವಿಮಲಮ್ಮನವರ ಸಾವಾಗಿತ್ತು. ಮಧುರ ಈಕೆಯ ಬರುವಿಕೆಗೆ ಪ್ರತಿಕ್ರಿಯಿಸಿದ್ದು ಹೇಗೆ..? ಗಿರಿಧರನ ಪ್ರತಿಕ್ರಿಯೆ ಹೇಗಿತ್ತು..?
ಇಲ್ಲಿ ಗಿರಿಧರನ ಪಾತ್ರ ಅಷ್ಟು ಪ್ರಬುದ್ಧವಾಗಿರದಿದ್ದರೆ ಅನಿತಾಳ ಗತಿ ಏನಾಗುತ್ತಿತ್ತು..? ಆತನ ಸಹಾಯದಿಂದ ಡಾಕ್ಟರ್ ಚಂದ್ರಮೌಳಿ ಹಾಗೂ ಕುಟುಂಬದ ಪರಿಚಯವಾಗುತ್ತದೆ. ಸುರಭಿ ಹಾಗೂ ಡೈಸಿ ಅನಿತಾಳನ್ನು ಮನೆಯವಳಂತೆ ನೋಡಿಕೊಳ್ಳುತ್ತಾರೆ. ಸುರಭಿ ಆಕೆಗೆ ಆಪ್ತ ಸ್ನೇಹಿತೆಯೂ ಆಗುತ್ತಾಳೆ. ಸುರಭಿ ಸಹ ಅನಿತಾ ಚೇತರಿಸಿಕೊಳ್ಳುವಲ್ಲಿ ಸಹಕಾರಿಯಾಗುತ್ತಾಳೆ.
ಸಿಸ್ಟರ್ ಮೇರಿ ಅನಿತಾಳ ನಡೆಗೆ ಪ್ರತಿಕ್ರಿಯಿಸಿದ್ದು ಹೇಗೆ..? ಅನಿತಾಳ ಹಿನ್ನೆಲೆ ಏನಿತ್ತು..? ಅವಿನಾಶ್ ಇದೆಲ್ಲವನ್ನೂ ಯಾವ ರೀತಿ ಅರ್ಥೈಸಿಕೊಂಡ..? ಇದೆಲ್ಲದಕ್ಕೂ ಸ್ವಾಮಿ ಪ್ರತಿಕ್ರಿಯಿಸಿದ್ದು ಹೇಗೆ..? ಎಲ್ಲವನ್ನೂ ತಿಳಿಯಲು ಓದಿ ಅಂತರ್ಗೀತೆ.
ಮನೋವೈಜ್ಞಾನಿಕ ಕಾದಂಬರಿಯಾಗಿ.. ಕೆಲವು ಸಂದರ್ಭಗಳು ಮನದ ಮೇಲೆ ಬೀರುವ ಪರಿಣಾಮಗಳು ಹಾಗೂ ಅಂತಹ ವ್ಯಕ್ತಿ ಅದರಿಂದ ಹೊರಬರಬೇಕಾದರೆ ಸುತ್ತಮುತ್ತಲಿನವರು ನೀಡಬೇಕಾದ ಸಹಕಾರದ ಚಿತ್ರಣ ಇಲ್ಲಿದೆ. ರೋಚಕತೆ, ಎಲ್ಲಿಯೂ ಗುಟ್ಟು ಬಿಟ್ಟುಕೊಡದ ಶೈಲಿ ಕಾತುರದಿಂದ ಓದಿಸಿಕೊಂಡು ಹೋಗುವಂತೆ ಮಾಡಿದರೆ.. ಸಾಮಾಜಿಕವಾಗಿ ನೀಡಿರುವ ಸಂದೇಶ ಪ್ರಸ್ತುತ ದಿನಗಳಿಗೂ ಎಚ್ಚರಿಕೆಯ ಪಾಠದಂತಿದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ