ಶನಿವಾರ, ಏಪ್ರಿಲ್ 25, 2026

ದುಶ್ಶಾಸನ ಬೇಕಾಗಿದ್ದಾನೆ ಮತ್ತು ಇತರ ಕತೆಗಳು (ಪುಸ್ತಕ ಯಾನ - 327)


ಪುಸ್ತಕದ ಶೀರ್ಷಿಕೆ : ದುಶ್ಶಾಸನ ಬೇಕಾಗಿದ್ದಾನೆ ಮತ್ತು ಇತರ ಕತೆಗಳು

ಲೇಖಕರು : ಪ್ರಶಾಂತ್ ಶ್ರೀಕಂಠಯ್ಯ

ಪ್ರಕಾಶಕರು : ಸಮನ್ವಿತ

ಪ್ರಥಮ ಮುದ್ರಣ : 2024

ಪುಟಗಳು : 100

ಬೆಲೆ : 120 ರೂ. 


ಕನ್ನಡ ಸಾಹಿತ್ಯದಲ್ಲಿ ಹಳೆ ಬೇರುಗಳಂತೆ ಹೊಸ ಚಿಗುರುಗಳು ಸಹಾ ಸತ್ವಯುತವಾಗಿ ಮೂಡುತಲಿವೆ. ತಮ್ಮ ಚೊಚ್ಚಲ ಕಥಾಸಂಕಲನದಿಂದ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿರುವವರು ಪ್ರಶಾಂತ್ ಶ್ರೀಕಂಠಯ್ಯ. ಈ ಕಥಾಗುಚ್ಛವನ್ನು ಬರವಣಿಗೆಯ ಕಡೆಗೆ ತುಡಿತ ಮೂಡಿಸಿದ ಅವರ ತಂದೆಯವರ ಮಧುರ ಸ್ಮೃತಿಗೆ ಅರ್ಪಿಸಿದ್ದಾರೆ.


ಈ ಕಥಾ ಸಂಕಲನದಲ್ಲಿ ಒಟ್ಟು 11 ಕಥೆಗಳಿವೆ.11 ಕಥೆಗಳು ಸಹಾ ಬದುಕಿನ ಒಂದಲ್ಲಾ ಒಂದು ಸತ್ಯವನ್ನು ತೆರೆದಿಟ್ಟು.. ಬದುಕನ್ನು ಸಕಾರಾತ್ಮಕವಾಗಿ ನೋಡುವ ನೋಟದತ್ತ ತೆರೆದಿಡುತ್ತವೆ. 


ಕೆ ವೈ ಸಿ.. : ಕೆ ವೈ ಸಿ ಎಂಬ ಪದವನ್ನು ನೋಡಿದಾಗಲೇ ಇದು ಬ್ಯಾಂಕಿಗೆ ಸಂಬಂಧಪಟ್ಟ ಎಂದು ಗುರುತಿಸಿ ಬಿಡುತ್ತೇವೆ. ನೋ ಯುವರ್ ಕಸ್ಟಮರ್ಸ್ ಎನ್ನುವ ವ್ಯಾವಹಾರಿಕ ಅರ್ಥದಾಚೆಗೆ, ಮನುಷ್ಯನನ್ನು ಅಳೆದು ತೂಗುವ ಯಾಂತ್ರಿಕ ಹಾಗೂ ವ್ಯಾವಹಾರಿಕ ದೃಷ್ಟಿ ಸರಿ ಬರುವುದಿಲ್ಲ. ಕೇವಲ ವ್ಯಾವಹಾರಿಕ ದೃಷ್ಟಿಯಿಂದಲೇ ಎಲ್ಲವನ್ನು ನೋಡುವುದು ಎಷ್ಟು ಸರಿ..? ಮನುಷ್ಯನನ್ನು ಮೊದಲ ನೋಟಕ್ಕೆ ಅಳೆಯುವುದು ಸಾಧ್ಯವಿಲ್ಲ. ಹಾಗೆಂದು ನಾವು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಇವರನ್ನು ಹೀಗೆಯೇ.. ಎಂದು ತೀರ್ಮಾನಿಸಿ ಬಿಟ್ಟರೆ ಮುಂದೆ ಅವರ ಒಳ್ಳೆಯ ಗುಣಗಳಿಗೂ ಕುರುಡರಾಗಿಬಿಡುತ್ತೇವೆ. ಸುಬ್ಬರಾವ್ ಕೂಡಾ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವ್ಯಾವಹಾರಿಕ ದೃಷ್ಟಿಯಿಂದ ಎಲ್ಲವನ್ನು ಅಳೆಯುತ್ತಿದ್ದವರು. ಆದರೆ, ಕೆಲ ಸಂಧರ್ಭಗಳು ಹಣಕ್ಕಿಂತಲೂ ವ್ಯಕ್ತಿತ್ವದ ತೂಕ ಹೆಚ್ಚು ಎಂದು ಮನಗಣಿಸಿದ ಪ್ರಸಂಗಗಳಿವೆ. ಆ ವ್ಯಕ್ತಿಗಳು, ಸಂದರ್ಭ ಅವರ ಹಿನ್ನೆಲೆ ಜೊತೆಗೆ ಇಲ್ಲಿ ಕೆ ವೈ ಸಿ ಯ ವಿಭಿನ್ನ ಅರ್ಥವನ್ನು ನೀವೇ ಓದಿ ಅರಿಯಿರಿ.


ನಾನು ತ್ರಿಮೂರ್ತಿ : ಯಶಸ್ವಿ ಕೃಷಿಕ ಎಂದು ಎಲ್ಲೆಡೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ತ್ರಿಮೂರ್ತಿಗೆ ನೋಂದಣಾಧಿಕಾರಿಯ ಕಚೇರಿಯಲ್ಲಿ ಬಿದ್ದ ಕನಸು 2075ನೇ ಇಸವಿಯ ವಾಸ್ತವ. 2075 ನೇ ಇಸವಿಯಲ್ಲಿ ಆಗಬಹುದಾದ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ಷ್ಮ ಸಮಸ್ಯೆಗಳ ಚಿತ್ರಣಗಳನ್ನು ತೆರೆದಿಟ್ಟಿದ್ದಾರೆ ಲೇಖಕರು. ತ್ರಿಮೂರ್ತಿ ಕಂಡದ್ದು ಕನಸೆಂದು ಅರಿವಾಗುವಾಗ ವಾಸ್ತವದ ಸಮಸ್ಯೆಗಳು ಮುಂದೆ ಹೇಗೆಲ್ಲ ಬೃಹದಾಕಾರ ತಳೆಯಬಹುದು ಎಂದು ಅರಿವಾಗಿತ್ತು. ಅದಕ್ಕೆ ಆತ ತಳೆಯುವ ತೀರ್ಮಾನವೇನು? ಅಷ್ಟಕ್ಕೂ ಆತ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಇದ್ದದ್ದೇಕೆ..? 

ಕತೆಯಲ್ಲಿನ ಭವಿಷ್ಯದ ಒಂದು ಸೂಕ್ಷ್ಮ ಚಿತ್ರಣದ ಉದಾಹರಣೆ ಹೇಳುವುದಾದರೆ.. ಎಲೆಕ್ಟ್ರಾನಿಕ್ ವಸ್ತುಗಳ ಅವಲಂಬನೆ ಮಾನವನ ಅನುವಂಶಿಯತೆಯಲ್ಲಿ ಬದಲಾವಣೆ ತಂದದ್ದನ್ನು ಚಿತ್ರಿಸುತ್ತಾರೆ. ತ್ರಿಮೂರ್ತಿಯ ಮರಿ ಮೊಮ್ಮಕ್ಕಳೆಲ್ಲರ ಕತ್ತು ಹುಟ್ಟುವಾಗಲೇ ಕೊಂಚ ಬಾಗಿತ್ತು. ಕಣ್ಣುಗಳು ಹಣೆಯ ಭಾಗಕ್ಕೆ ಬರುತ್ತಿದ್ದವು. ಹೀಗೆ ಗ್ಯಾಜೆಟ್ ಗಳ ಬಳಕೆಯಿಂದಾದ ಪರಿಣಾಮದ ಸೂಕ್ಷ್ಮ ಚಿತ್ರಣವಿದೆ.


ಪಾರ್ವತಿ :

"ಸಂತೋಷವಾಗಿದ್ದಾಗ ಕಥೆ ಹುಟ್ಟುವುದಕ್ಕಿಂತ ದುಃಖದಲ್ಲೇ ಹೆಚ್ಚು ಕಥೆ ಹುಟ್ಟುವುದಂತೆ" ಎಂಬ ಸಾಲುಗಳು ಕಥೆಯ ಆರಂಭದಲ್ಲಿಯೇ ಸೆಳೆಯುತ್ತವೆ. 

ತೆರೆಯ ಸೂತ್ರಧಾರಿ ಅಂದರೆ ನಿರ್ದೇಶಕನಾದ ವಿಕ್ರಮನ ಬದುಕಿನಲ್ಲಿ ದೈವದ ಪವಾಡವಿರುವ ಪ್ರಸಂಗವೂ ಇಲ್ಲಿದೆ. ನಂಬಿ ಕೆಟ್ಟವರಿಲ್ಲ ಎನ್ನುವಂತೆ ದೇವರೇ ಕಷ್ಟಕಾಲದಲ್ಲಿ ಬಂದು ಕೈ ಹಿಡಿಯುವ ಹಾಗೂ ವಿಕ್ರಮನ ಬದುಕು ಗೊಂದಲದಲಿದ್ದಾಗ ಅದಕ್ಕೆ ಪರಿಹಾರ ಸೂಚಿಸುವ ಕಥೆ ಇಲ್ಲಿದೆ. ಶಿವ-ಸತಿ-ಪಾರ್ವತಿಯರ ಪುರಾಣದ ಉಲ್ಲೇಖ ಹಾಗೂ ಸಮೀಕರಣ ಇಷ್ಟವಾಯಿತು. 


ದುಶ್ಶಾಸನ ಬೇಕಾಗಿದ್ದಾನೆ : ಕಥಾಸಂಕಲನದ ಶೀರ್ಷಿಕೆಯೂ ಆಗಿರುವ ಕಥೆ ನಿಜಕ್ಕೂ ವಿಭಿನ್ನವಾಗಿದೆ. ಶಬ್ದಕ್ಕಿಂತ ನಿಶ್ಶಬ್ದಕ್ಕಿರುವ ಶಕ್ತಿಯನ್ನು ಅರ್ಥೈಸಿಕೊಂಡ 25 ರಿಂದ 30 ಜನ ವೆಂಟ್ರಿಲೋಕ್ವಿಸ್ಟ್ ಗಳು ಮತ್ತವರ ಗೊಂಬೆಗಳು ತೋರುವ ಕಥೆಯಲ್ಲಿ ಮಹಾಭಾರತದ ಪಾತ್ರಗಳಿಗೆ ವಿಶಿಷ್ಟವಾದ ರೂಪ ಹಾಗೂ ಅರ್ಥ ನೀಡಿರುವ ಕಥೆ ಇದು. ಇದರ ಕುರಿತು ಹೆಚ್ಚು ಗುಟ್ಟು ಬಿಟ್ಟುಕೊಡಲಾರೆ. 


AI ಬಾರ್ಬರಿಕ : ಶೀರ್ಷಿಕೆಯ ಪೂರ್ವಾರ್ಧ ಹೇಳುವಂತೆ ಇಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಗೆ ಸಂಬಂಧಿಸಿದ ಕಥಾವಸ್ತುವಿದೆ. ರೋಬೋಟಿಕ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಮಿತ್ತು ತಯಾರಿಸಿದ್ದ ಕೃತಕ ಬುದ್ಧಿಮತ್ತೆಯ ರೋಬೋ ಯಾವೆಲ್ಲಾ ಪರಿಣಾಮವನ್ನು ಬೀರಿತು..? ಸಮಿತ್ತು ಆ ರೋಬೋವನ್ನು ತಯಾರಿಸಲು ಆತನಿಗೆ ಸ್ಪೂರ್ತಿಯಾಗಿದ್ದೇನು..? ಆತನಿಗೆ ಅವನ ತಂದೆ ವಿಶ್ವನಾಥ ಅವರು ಹೇಳಿದ ಮಾತು ನಿಜಕ್ಕೂ ಅರ್ಥಪೂರ್ಣ ಹಾಗೂ ಸ್ಫೂರ್ತಿದಾಯಕ. AI ನ ಭವಿಷ್ಯದ ನೋಟ ಇಲ್ಲಿದೆ. 


BE A PLUTO : "ಮೊದಲು ಪ್ಲುಟೋಗೆ ಗ್ರಹ ಅಂದರು. ನಂತರ ಉಪಗ್ರಹ ಎಂದರು. ಈಗ ಅದು ಗ್ರಹ, ಉಪಗ್ರಹ ಎರಡೂ ಅಲ್ಲವೆನ್ನುತ್ತಾರೆ." ಹೀಗೆ ಯೋಚಿಸುವಂತಾಗುವುದು ವಿಜ್ಞಾನ ಕಲಿಯುವ ದೃಷ್ಟಿಯಲ್ಲಿ ಮಾತ್ರವೇ..? ಅಷ್ಟಕ್ಕೂ ಇಲ್ಲಿ ವಿಜ್ಞಾನಿ ಸಾರಂಗಪಾಣಿಯವರಿಗೆ "ಬಿ ಅ ಪ್ಲುಟೋ" ಎಂದು ಹೇಳಿದ ಉನ್ಮೀಲ ಯಾರು ಹಾಗೂ ಏಕೆ..? ಇದು ಸಂಪೂರ್ಣ ವೈಜ್ಞಾನಿಕ ಕಥೆಯಲ್ಲವಾದರೂ.. ಬದುಕಿನ ಸ್ಪೂರ್ತಿಯನ್ನು ಎಲ್ಲಿಂದೆಲ್ಲಾ ತೆಗೆದುಕೊಳ್ಳಬಹುದು ಎಂದು ಹೇಳುವ ಕಥೆ. 


ಜೀವನ : ಸ್ಮಶಾನಕ್ಕೆ ಸಾಯಲೆಂದು ಬಂದ ಪ್ರಮೋದನಿಗೆ ಅಷ್ಟು ಚಿಕ್ಕ ವಯಸ್ಸಿನಲ್ಲಿ ಕಾಡುತ್ತಿದ್ದಾದರೂ ಏನು..? ಸ್ಮಶಾನದ ಕಾವಲುಗಾರ ಹಾಗೂ ವೀರಬಾಹು ಸಣ್ಣಪ್ಪಜ್ಜನ ದೃಷ್ಟಿಗೆ ಬಿದ್ದ ಪ್ರಮೋದನಿಗೆ ಅರಿವಾದ ಜೀವನ ಸತ್ಯವೇನು.. ಅಷ್ಟಕ್ಕೂ ಸಣ್ಣಪ್ಪಜ್ಜ ಓದಿದ್ದು ಏನು ಗೊತ್ತೇ.. ನೀವೇ ಕಥೆ ಓದಿ ತಿಳಿಯಿರಿ. 

ಕಥೆಯಲ್ಲಿ ಧೂಮಪಾನದ ವಿಚಾರ ಬಂದರೂ.. ಚಲನಚಿತ್ರ ಹಾಗೂ ಕಿರುಚಿತ್ರಗಳಲ್ಲಿ ಕೊಡುವ ಡಿಸ್ ಕ್ಲೈಮರ್ ಗಳಂತೆ ಲೇಖಕರು ನೀಡಿರುವ ಎಚ್ಚರಿಕೆ ಸೂಕ್ತವೆನಿಸಿತು. 

ಸ್ಮಶಾನದ ಚಿತ್ರಣದಲ್ಲಿ.. ಪ್ರಮೋದ ತನ್ನದೇ ಆಲೋಚನೆಯಲ್ಲಿ ಮುಳುಗಿ ಹೋದಾಗ ಪಟ್ ಅಂತ ಯಾವುದೋ ಹೆಣದ ತಲೆ ಒಡೆದ ಶಬ್ದಕ್ಕೆ ಆಚೆ ಬಂದದ್ದು.. ಕಥಾಪರಿಸರವನ್ನು ಚಿತ್ರಿಸಿರುವ ಸೂಕ್ಷ್ಮತೆಯನ್ನು ತೋರುತ್ತದೆ. 


ಬರೆಯಲಾಗದ ಕಥೆ : "ಬದುಕೆನ್ನುವುದು ಭಗವಂತನ ಹೊರತು ಯಾವ ಲೇಖಕನೂ ಕೂಡ ಬರೆಯಲಾಗದ ಕಥೆ" ಎನ್ನುವುದು 100 ಕ್ಕೆ 100 ಸತ್ಯವಾದರೂ.. ಹಲವಾರು ಹಿರಿಯ ಲೇಖಕ-ಲೇಖಕಿಯರು ತಮ್ಮ ಕಾಲಘಟ್ಟವನ್ನು ಹಾಗೂ ಸೂಕ್ಷ್ಮತೆಯನ್ನು ಕಟ್ಟಿಕೊಡುವ ಹಲವಾರು ಕಥೆಗಳನ್ನು ಬರೆದಿದ್ದಾರೆ. ಅಂತಹಾ ಲೇಖಕಿಯೊಬ್ಬರನ್ನು ಹುಡುಕಿ ಹೊರಟ ಲಹರಿಯ ಉದ್ದೇಶವೇನಿತ್ತು ಓದಿ ನೋಡಿ. 

ಬಾನುಲಿ ರೇಡಿಯೋ ಕಣ್ಮಣಿ ಎಂಬ ಹೆಸರು ನೋಡಿಯೇ ಕಥೆ ಮುದ ನೀಡಿತ್ತು. ನಾನು ಕೂಡ ಕೆಲ ಕಾರ್ಯಕ್ರಮ ನಡೆಸಿಕೊಟ್ಟ ರೇಡಿಯೋ ಕಣ್ಮಣಿಯ ನೆನಪಾಯಿತು. ಈ ಕಥೆಯಲ್ಲಂತೂ ಲೇಖಕರು ಹೇಳುವ ಲಹರಿ ಹಾಗೂ ಅವರ ಕೆಲಸಗಳು ಕಣ್ಮುಂದೆಯೇ ಕಂಡಂತೆ ಭಾಸವಾಯಿತು.


ಸೌಂದರ್ಯ ಸಮರ : ಎಷ್ಟೋ ಜನ ತಮ್ಮ ಸಂಗಾತಿಗಳ ಕುರಿತು ಕನಸು ಕಾಣುವಾಗ ರೂಪವನ್ನು ಪ್ರಮುಖವಾಗಿ ನಿರೀಕ್ಷಿಸುತ್ತಾರೆ. ಸೌಂದರ್ಯ ಮನುಷ್ಯನನ್ನು ಅಳೆಯುವ ಸಾಧನವಲ್ಲವಾದರೂ.. ಸೌಂದರ್ಯದ ವ್ಯಾಖ್ಯಾನಗಳು ಒಬ್ಬೊಬ್ಬರ ದೃಷ್ಟಿಯಲ್ಲಿ ಒಂದೊಂದು ಪರಿ. ಗುಣವಂತ ಮಾಂಧಾತ ಕೂಡ ತನ್ನ ಸಂಗಾತಿ ಸೌಂದರ್ಯವತಿಯಾಗಿರಬೇಕು ಎಂದು ಆಶಿಸುತ್ತಿದ್ದ. ಸೌಂದರ್ಯ ಸಮರದಲ್ಲಿ ಗೆದ್ದು ಆತನ ಸಂಗಾತಿಯಾದವರು ಯಾರು ಓದಿ ತಿಳಿಯಿರಿ.


ಹೈಂದವಿ : ನೃಪನ ಮನಸ್ಸಿನಲ್ಲಿ ನೆಲೆ ನಿಂತ ಮಹಾಭಾರತದ ಪ್ರಸಂಗ ದ್ರೋಣರ ಸಾವು. ಇದರ ಹಿಂದಿನ ಕಾರಣವನ್ನು ಹುಡುಕುತ್ತಾ ಇದ್ದ ಮನಃಶಾಸ್ತ್ರಜ್ಞರಿಗೆ ಬಿಚ್ಚಿಕೊಳ್ಳುವುದು ಹೋಗುವುದು ಆತನ ಹಿನ್ನೆಲೆ. ಮನಃಶಾಸ್ತ್ರಜ್ಞರ ಸಹಾಯದಿಂದ ನೃಪ ಮತ್ತೆ ಮೊದಲಿನಂತಾದನೇ..? ಮನೋವೈಜ್ಞಾನಿಕ ವಿಭಾಗದ ವಿಭಿನ್ನ ಕಥೆ ಎನ್ನಿಸಿತು. 


ಕೇಸ್ ನಂಬರ್ 151/ಎ : ಹಿಂದಿನ ಕಾಲದಲ್ಲಿ ಇದ್ದಂತಹಾ ಪಂಚಾಯಿತಿಯ ವ್ಯವಸ್ಥೆ ಸಣ್ಣ-ಪುಟ್ಟ ವ್ಯಾಜ್ಯಗಳನ್ನು ತೀರ್ಮಾನಿಸುತ್ತಿತ್ತು. ಆದರೆ, ಈಗ ಸಣ್ಣಪುಟ್ಟದಕ್ಕೂ ಕೋರ್ಟು ಕಲಾಪಗಳೆನ್ನುತ್ತಾ.. ಕೋರ್ಟಿನ ಮೆಟ್ಟಿಲೇರುತ್ತಾರೆ. ಇಲ್ಲಿ ನಾನು ಈ ಕೇಸ್ ನ ವಾದಿ,ಪ್ರತಿವಾದಿ ಹಾಗೂ ಕೇಸಿನ ವಿಚಾರದ ಗುಟ್ಟು ಬಿಟ್ಟು ಕೊಡುವುದಿಲ್ಲ. ಈ ವ್ಯಾಜ್ಯ ಉಗುರಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಳ್ಳುವ ವಿಚಾರ ಹೌದಾದರೂ.. ಮುಂದಿನ ದಿನಗಳಲ್ಲಿ ಇಂತಹಾ ವ್ಯಾಜ್ಯಗಳು ಹಾಗೂ ಸಮಸ್ಯೆಗಳೇ ಹೆಚ್ಚಾದರೂ ಅಚ್ಚರಿಪಡಬೇಕಿಲ್ಲ. ಮೆಲುಹಾಸ್ಯದಿಂದ ಸಮಸ್ಯೆಯ ಗಂಭೀರತೆಯತ್ತ ಸಾಗುವ ಕಥೆ. 


ಈ ಕಥಾಸಂಕಲನದಲ್ಲಿ ಭಾವನೆಗಳಿವೆ, ವಿಜ್ಞಾನದ ವಿಚಾರಗಳಿವೆ, ಜೀವನದ ಮೌಲ್ಯಗಳಿವೆ. ತಂತ್ರಜ್ಞಾನ ಹಾಗೂ ಅದರಿಂದ ಉಂಟಾಗುವ ಪರಿಣಾಮಗಳು, ಮನೋವೈಜ್ಞಾನಿಕ ಸಮಸ್ಯೆ, ಸಾಮಾಜಿಕ ಸಮಸ್ಯೆಗಳು ಹೀಗೆ ವಿಭಿನ್ನ ಕಥಾವಸ್ತುಗಳಿವೆ. ಅಲ್ಲದೇ ಹಲವಾರು ಪಾತ್ರಗಳ ಹೆಸರು ವಿಭಿನ್ನವಾಗಿ ಮನಸೆಳೆದವು. ಸುಗ್ಗಿಗೆ ಓದಿನ ಹಿಗ್ಗನ್ನು ತಂದ ಕಥಾ ಸಂಕಲನ ಇಷ್ಟವಾಯಿತು.


ಚೊಚ್ಚಲ ಕಥಾಸಂಕಲನದಲ್ಲಿಯೇ ಭರವಸೆ ಮೂಡಿಸಿರುವ ಲೇಖಕರು ಸಾಹಿತ್ಯ ಕ್ಷೇತ್ರದಲ್ಲಿ ವೈವಿಧ್ಯಮಯವಾದ ಬರಹಗಳಿಂದ ಮತ್ತಷ್ಟು ಗಟ್ಟಿ ಹೆಜ್ಜೆ ಮೂಡಿಸಲಿ ಎಂಬ ಶುಭ ಹಾರೈಕೆ ನನ್ನದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ