ಶನಿವಾರ, ಏಪ್ರಿಲ್ 25, 2026

ವಜ್ರದ ಸೌಧ (ಪುಸ್ತಕ ಯಾನ - 339)


ಪುಸ್ತಕದ ಶೀರ್ಷಿಕೆ : ವಜ್ರದ ಸೌಧ

ಲೇಖಕರು : ವಿಜಯಶ್ರೀ

ಪ್ರಕಾಶಕರು : ರಾಜಲಕ್ಷ್ಮೀ ಪ್ರಕಾಶನ

ಪ್ರಥಮ ಮುದ್ರಣ : 1999

ಪುಟಗಳು : 200

ಬೆಲೆ : 60 ರೂ.


ವಿಜಯಶ್ರೀ ಅವರ ವಜ್ರದ ಸೌಧ ನಾನು ಓದಿದ ಅವರ ಮೊದಲ ಕಾದಂಬರಿ. ಸಾಮಾಜಿಕ ಕಾದಂಬರಿಯಾಗಿ.. ಕೌಟುಂಬಿಕ ಕಥಾಹಂದರ ಹಾಗೂ ಹಣಕ್ಕಿಂತ ಮೌಲ್ಯಯುತವಾದ ತ್ಯಾಗ, ಉದಾರತೆಯನ್ನು ಎತ್ತಿ ಹಿಡಿದಿರುವ ಕಾದಂಬರಿಯಿದು. ಸಂಬಂಧಗಳ ಮೌಲ್ಯ ಹೇಗಿರಬೇಕು ಎನ್ನುವುದನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟಿರುವ ಲೇಖಕಿ ಸಂಬಂಧಗಳು ಹೇಗಿರಬಾರದು ಎನ್ನುವುದನ್ನೂ ಸೂಕ್ಷ್ಮವಾಗಿಯೇ ಬಿಡಿಸಿಡುತ್ತಾರೆ.


ಮನೆಯಲ್ಲಿ ಯಾವುದೋ ದೊಡ್ಡ ಸಮಾರಂಭ ನಡೆಯಲಿದೆ ಎಂಬುದರ  ಮುನ್ಸೂಚನೆಯಾಗಿ ಕಾರ್ಯಕ್ರಮದ ತಯಾರಿಯೊಂದಿಗೆ ಕಾದಂಬರಿ ಶುರುವಾಗುತ್ತದೆ. ಅಂತಹ ಸಮಾರಂಭ ಯಾವುದಿರಬಹುದು ಎಂದು ಯೋಚಿಸುವಾಗಲೇ ಆ ಪರಿವಾರದ ಪರಿಚಯವಾಗುತ್ತಾ ಹೋಗುತ್ತದೆ. ಹಾಗೆ ನೋಡಿದರೆ ಅದು ದೊಡ್ಡ ಪರಿವಾರ.  ಹಾಗೆಂದು ಅದನ್ನು ಕೂಡುಕುಟುಂಬ ಎನ್ನುವ ಹಾಗಿಲ್ಲ.  ತಾರಾದೇವಿಯವರಿಗೆ ಎಲ್ಲವನ್ನೂ ನೋಡುತ್ತಲೇ ಗತದ ನೆನಪಾಗುತ್ತದೆ. 


ತಾರಾದೇವಿ ಹಾಗೂ ಸುರೇಂದ್ರರಿಗೆ ಇಬ್ಬರು ಮಕ್ಕಳು, ಮಹೇಂದ್ರ ಹಾಗೂ ಸುನಂದ. ಮಹೇಂದ್ರನಿಗೆ ವಿವಾಹದ ವಯಸ್ಸಿನಲ್ಲಿ ಅವರ ಅಂತಸ್ತಿಗೆ ತಕ್ಕಂತಹಾ ಸಂಬಂಧಗಳೇ ಬಂದಿದ್ದರೂ.. ಆತ ತಾನು ಪ್ರೀತಿಸಿದ ಹುಡುಗಿ ಫಲ್ಗುಣಿಯನ್ನು ಮನೆಯಲ್ಲಿ ಪರಿಚಯಿಸಿದಾಗ ತಂದೆ-ತಾಯಿ ಮಗನ ಆಸೆಗೆ ಅಡ್ಡಿಪಡಿಸದೆ ಖುಷಿಯಿಂದಲೇ ಆಕೆಯನ್ನು ಸ್ವಾಗತಿಸಿದ್ದರು.


ಫಲ್ಗುಣಿ ಮಹೇಂದ್ರನ ಜೊತೆಗೆ ಡಿಗ್ರಿ ಓದಿದ್ದವಳು. ಮಲತಾಯಿಯ ದೆಸೆಯಿಂದ ಜೀವನದಲ್ಲಿ ನೊಂದು- ಬೆಂದಿದ್ದವಳು. ತಂದೆಗೆ ಮಗಳು ಕೆಲಸಕ್ಕೆ ಸೇರಿ ದುಡಿದು ಹಾಕಬೇಕು ಎನ್ನುವ ಆಸೆ. ಎರಡನೇ ಹೆಂಡತಿಗೆ ಐದು ಜನ ಮಕ್ಕಳು. ಫಲ್ಗುಣಿಗೆ ಸಿಕ್ಕ ಟೀಚರ್ ಕೆಲಸಕ್ಕೆ ಬಲವಂತವಾಗಿ ಕಳುಹಿಸುವ ಸಂದರ್ಭದಲ್ಲಿ ಅದಕ್ಕೆ ಒಪ್ಪದ ಅವಳು ತನ್ನ ಕಸಿನ್ ಅನಂತನೊಂದಿಗೆ ಮಹೇಂದ್ರನ ಮನೆಗೆ ಬಂದು ಬಿಟ್ಟಿದ್ದಳು. ಆಕೆಯ ತಂದೆ-ತಾಯಿಯನ್ನು ಕರೆಸಿ ಮಾತನಾಡಿದಾಗ ಸುಲಭಕ್ಕೆ ಬಗ್ಗದಿದ್ದರೂ.. ನಂತರದಲ್ಲಿ ಒಪ್ಪಿದ್ದರು. ಎರಡೂ ಕಡೆಯ ಮದುವೆ ಖರ್ಚನ್ನು ತಾವೇ ಬರಿಸಿ ಸೊಸೆಯನ್ನು ಮನೆ ತುಂಬಿಸಿಕೊಂಡಿದ್ದರು.


ಸುಂದರವಾದ ಅಚ್ಚುಕಟ್ಟಾದ ಸಂಸಾರ. ಮನೆಗೆ ಸೊಸೆಯಾಗದೆ ಮಗಳಾದಳು, ಅತ್ತೆ-ಮಾವನ ಬದಲಿಗೆ ಅಪ್ಪ-ಅಮ್ಮನೇ ಆಗಿ ಸಲಹುತ್ತಿದ್ದವರು. ನಾದಿನಿಯಂತೂ ಸ್ನೇಹಿತೆಯೇ.. ಮದುವೆಯಾಗಿ ಎರಡು ವರ್ಷದಲ್ಲಿ ಅನನ್ಯ ಮಡಿಲು-ಮನೆ-ಮನಸ್ಸು ತುಂಬಿದಳು. ಸುನಂದಾಳಿಗೆ ಗಂಡು ನೋಡುತ್ತಿದ್ದರು. ಅನನ್ಯಳಿಗೆ ಎರಡು ವರ್ಷಗಳಾದ ನಂತರ ಗರ್ಭಿಣಿಯಾದ ಮೂರು ತಿಂಗಳಿಗೇ ಗರ್ಭಪಾತವಾದ ನಂತರ.. ಫಲ್ಗುಣಿ ಯಾಕೋ ಮೊದಲಿನಂತಿರಲಿಲ್ಲ.  ಯಾರು ಎಷ್ಟೇ ಸಾಂತ್ವನ ಹೇಳಿದರೂ.. ಆಕೆ ಮೇಲೆ ಮಾತ್ರ ನಗುನಗುತ್ತಾ.. ಮನಸ್ಸಿನಲ್ಲಿ ತುಂಬಿದ್ದ ತನ್ನ ವ್ಯಥೆಯನ್ನು ಯಾರ ಬಳಿಯೂ ಬಿಚ್ಚಿಟ್ಟಿರಲಿಲ್ಲ.


ಸ್ನೇಹಿತನಂತಿದ್ದ ಅನಂತನಿಗೆ ಮದುವೆಯಾಗಿತ್ತು.  ಇವರ ಸ್ನೇಹಕ್ಕೆ ತಡೆಯಾಯಿತೇನೋ ಎಂಬಂತೆ ಫಲ್ಗುಣಿಗೆ ಭಾಸವಾಗುತ್ತಿದ್ದರೂ ಅದನ್ನು ತೋರ್ಪಡಿಸಿಕೊಳ್ಳುತ್ತಿರಲಿಲ್ಲ. ಅನಂತನಂತೂ ಮೊದಲಿನಂತೆಯೇ ಆತ್ಮೀಯತೆಯಿಂದ ನಡೆದುಕೊಳ್ಳುತ್ತಿದ್ದ ಫಲ್ಗುಣಿಯ ಜೊತೆಗೆ.


ಮಹೇಂದ್ರನ ಗೆಳೆಯರ ಸಂಸಾರವೊಂದು ಮನೆಗೆ ಬಂದು ಹೋದ ನಂತರ, ಫಲ್ಗುಣಿಯ ಬದುಕಿನ ಮಹತ್ತರ ಆಸೆ ತಾಜ್ ಮಹಲ್ ನೋಡುವುದು. ಮಹೇಂದ್ರನೂ ಅವಳ ಆಸೆಯನ್ನು ತಡ ಮಾಡದೇ ಈಡೇರಿಸಿದ್ದ.


ತಾಜ್ ಮಹಲ್ ನೋಡಿ ಭಾವುಕಳಾದವಳಿಗೆ.. ಮಹೇಂದ್ರನ ಮಾತು ಮನಸ್ಸಿಗೆ ತಾಗಿತ್ತು. ಪ್ರತಿಯೊಬ್ಬ ಪ್ರೇಮಿಯ ಹೃದಯದಲ್ಲಿಯೂ.. ಪ್ರೇಯಸಿಗೆ ತಾಜ್ ಮಹಲ್ ಇದ್ದರೆ ಆತನ ಹೃದಯದಲ್ಲಿ ವಜ್ರದ ಸೌಧವಿತ್ತು. ವಜ್ರದ ಸಣ್ಣ ತುಂಡನ್ನೇ ಕತ್ತರಿಸಲು ಕಷ್ಟ. ಅಂತಹದ್ದರಲ್ಲಿ ವಜ್ರದ ಮಹಲ್ ಎಂದರೆ..! ಅದನ್ನು ಕೇಳಿಯೇ ಪುಳಕಿತಳಾಗಿದ್ದಳು ಫಲ್ಗುಣಿ.


ಇತ್ತ ಸುನಂದಾಳ ವಿವಾಹ ವಿಜೃಂಭಣೆಯಿಂದ ನಡೆದರೆ..  ಸುನಂದಾ ಎಲ್ಲವೂ ತನಗೆ ಬೇಕೆಂಬ ಅತಿಯಾಸೆಯಿಂದ ದುರಾಸೆಯತ್ತ ಸಾಗುತ್ತಿದ್ದಳು. ಅನಂತನ ಮನೆಯಲ್ಲಿ ಅನಂತ ಹಾಗೂ ಫಲ್ಗುಣಿಯರ ಆತ್ಮೀಯ ಸ್ನೇಹದ ಲೇಪನಕ್ಕೆ ಬೇರೆ ಬಣ್ಣ ಹಚ್ಚಿದ ಆತನ ಹೆಂಡತಿಯಂತೂ ದಿನವೂ ಆತನಿಗೆ ತಲೆನೋವಾಗಿದ್ದಳು.  ಫಲ್ಗುಣಿಗೆ ಇದು ಅರ್ಥವಾಗಿ ಅವರ ಮನೆಗೆ ಹೋಗುವುದನ್ನೇ ನಿಲ್ಲಿಸಿದಳು. ತಮ್ಮ ಮನೆಗೆ ಬಂದ ಅನಂತನಿಗೆ ಅದರ ಸುಳಿವೂ ಸಿಗದಂತೆ ನೋಡಿಕೊಳ್ಳುತ್ತಿದ್ದಳು.


ಮನೆಯಲ್ಲಿ ಕೆಲಸಕ್ಕಿದ್ದ ಚಿನ್ನಮ್ಮನಂತೂ ಅಪ್ಪಟ ಚಿನ್ನದಂತೆಯೇ ಎಲ್ಲರ ಮನಸ್ಸನ್ನು ತನ್ನ ಸೇವೆಯಿಂದ ಗೆ.. ಕಾರ್ ಡ್ರೈವರ್ ಆಗಿದ್ದ ದೇವ್ ಮನೆಯವನಂತೆಯೇ ಆಗಿಹೋಗಿದ್ದ. ಅಷ್ಟು ಆತ್ಮೀಯತೆ. ಚಿನ್ನಮ್ಮನ ಬಳಿ ಒಗಟೊಗಟಾಗಿ ಮಾತಾಡಿದ ಫಲ್ಗುಣಿ ಮನೆಯಿಂದ ಹೊರಟವಳು ಯಾರ ಕಣ್ಣಿಗೂ ಬೀಳಲಿಲ್ಲ. ಆಕೆ ಕೊಟ್ಟ ಪತ್ರ ಹಾಗೂ ನಿಲ್ಲಿಸಿ ಹೋಗಿದ್ದ ಕಾರು ಮಾತ್ರ ಮಹೇಂದ್ರನಿಗೆ ಸಿಕ್ಕಿತು. ಎಲ್ಲರಿಗೂ ಫಲ್ಗುಣಿಯ ಈ ನಡೆ ಒಗಟಾಗಿಯೇ ಉಳಿದು ಹೋಗಿತ್ತು. ಎಷ್ಟು ಹುಡುಕಿದರೂ ಯಾರಿಗೂ ಫಲ್ಗುಣಿಯ ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಆಕೆಯ ಚಾರಿತ್ರ್ಯದ ಕುರಿತು ಯಾರು ಏನೇ ಹೇಳಿದರೂ.. ಎಲ್ಲದಕ್ಕೂ ಒಪ್ಪದೇ ಧೃಢನಂಬಿಕೆಯಿಂದ ಫಲ್ಗುಣಿಯನ್ನು ಕಾಯುತ್ತಲಿದ್ದ ಮಹೇಂದ್ರ.


ಇದೇ ಕೊರಗಿನಲ್ಲಿ ಸುರೇಂದ್ರನಾಥರು ತೀರಿಕೊಂಡರು. ಮಹೇಂದ್ರ ಕೂಗ್ಗಿಹೋದ. ಅನನ್ಯಳನ್ನು ಹಾಸ್ಟೆಲ್ ಗೆ ಸೇರಿಸಲಾಯಿತು. ಸುರೇಂದ್ರನಾಥರ ತಿಥಿಯನ್ನು ಅವರ ತಮ್ಮ ರವೀಂದ್ರನಾಥರೇ ಮುಂದೆ ನಿಂತು ಮಾಡಿದರು.


ಹಾಸ್ಟೆಲ್ ಸೇರಿದ ಮೊದಲ ವರ್ಷದಲ್ಲಿ ಅನನ್ಯಳಿಗೆ ದೂರದಿಂದಲೇ ಹುಟ್ಟುಹಬ್ಬದ ಉಡುಗೊರೆ ತಲುಪಿಸಿದ್ದವಳು ಫಲ್ಗುಣಿ ಎಂಬುದರಲ್ಲಿ ಯಾರಿಗೂ ಯಾವುದೇ ಸಂಶಯ ಉಳಿಯಲಿಲ್ಲವಾದರೂ.. ಆಕೆ ಯಾರ ಕಣ್ಣಿಗೂ ಕಾಣಲಿಲ್ಲ. ವಾರಕ್ಕೊಮ್ಮೆ ಹಾಸ್ಟೆಲ್ ಗೆ ಬಂದು ಹೋಗಿ ಮಾಡುತ್ತಿದ್ದ ಮಹೇಂದ್ರ ನಾಲ್ಕು ವರ್ಷದ ನಂತರ ಅಪಘಾತವೊಂದಕ್ಕೆ  ಬಲಿಯಾದ.


ಅಣ್ಣನಿದ್ದಾಗಲೇ ಆಸ್ತಿ ಪಡೆದು ಮನೆಯಿಂದ ಬೇರೆಯಾಗಿದ್ದರೂ.. ದಿವಾಳಿಯಾಗಿ ಮನೆಗೆ ಬಂದಾಗ ತಾರಾದೇವಿ ಹಾಗೂ ಮಹೇಂದ್ರ ಇಬ್ಬರೂ ರವೀಂದ್ರರ ಕುಟುಂಬವನ್ನು ಸ್ವಾಗತಿಸಿದ್ದರು. ಆತನ ಹೆಂಡತಿ ಉಮಾ ಹಾಗೂ ಮಗಳು ಕಾಂತಿ ಆ ಕುಟುಂಬದ ಒಳಿತಿಗಾಗಿ ಸಹಾಯಕರಾಗಿ ನಿಂತರು. ಐವರು ಮಕ್ಕಳಲ್ಲಿ ನಾಲ್ವರ ಓದು ಸಾಗುತ್ತಿತ್ತು. ಮಹೇಂದ್ರ  ಸಾಯುವುದಕ್ಕೂ ಮುನ್ನವೇ ರವೀಂದ್ರ ಮನೆಯಲ್ಲಿ ಸಿಕ್ಕ ಒಡವೆ ಹಾಗೂ ಹಣದೊಂದಿಗೆ ಮನೆ ಬಿಟ್ಟು ಪರಾರಿಯಾಗಿದ್ದ. ಆದರೂ.. ಆತನ ಕುಟುಂಬವನ್ನು ತಮ್ಮ ಕುಟುಂಬವೆಂದೇ ತಿಳಿದು ಸಲಹುತ್ತಿದ್ದರು ಉಮಾದೇವಿ ಹಾಗೂ ಮಹೇಂದ್ರ.


ಚಿನ್ನಮ್ಮನೇ ಈಗ ಅನನ್ಯಳ ತಾಯಿಯಂತಾಗಿದ್ದಳು. ಈಗ ಸಮಾರಂಭ ನಡೆಯುತ್ತಿದ್ದದ್ದು ಮಹೇಂದ್ರನ ವರ್ಷದ ಕಾರ್ಯ. ನಂಬಿಕೆಯ ಹುಡುಗನಾಗಿದ್ದ ಶಶಾಂಕ ಈಗ ಮನೆಯ ಸಮಸ್ತ ಜವಾಬ್ದಾರಿಯನ್ನು ಹೊತ್ತಿದ್ದ.  ಅನನ್ಯ ಪ್ರಾಪ್ತ ವಯಸ್ಕಳಾಗಿದ್ದಳು. ಆಕೆಗೆ ಅಜ್ಜಿಯ ಜೊತೆ ಇರಬೇಕೆಂಬ ಆಸೆ ಇದ್ದರೂ.. ಆಕೆ ಓದಿ ಮುಂದೆ ಬರಲೆಂಬ ಆಸೆ ಮನೆಯವರಿಗೆ.


ಮಹೇಂದ್ರನ ಕಾರ್ಯದ ದಿನ ಒಬ್ಬ ಹೆಂಗಸು ಗಂಡುಮಗುವಿನೊಂದಿಗೆ ಮನೆಗೆ ಬಂದಾಗ ಅವರ ಪರಿಚಯ ಕೇಳಿ ಎಲ್ಲರಿಗೂ ಕಸಿವಿಸಿಯಾಗಿತ್ತು. ಆಕೆ ಶ್ರಾವಣಿ ಹಾಗೂ ಮಗ ಸುರೇಂದ್ರನಾಥ. ಆಕೆ ತಾನು ಮಹೇಂದ್ರನ ಪತ್ನಿ ಎಂದೂ ಹಾಗೂ ತನ್ನ ಮಗ ಅವನೆಂದು ಹೇಳಿಕೊಂಡಳು.  ಅವಳ ಬಳಿ ಇದ್ದ ಸಾಕ್ಷಿಯಿಂದ ಅದನ್ನು ಅಲ್ಲಗಳೆಯಲು ಸಾಧ್ಯವಿರಲಿಲ್ಲವಾದರೂ.. ಮಹೇಂದ್ರನ ಮೇಲೆ ಯಾರಿಗೂ ಅನುಮಾನವೂ ಬರಲಿಲ್ಲ. ಎಲ್ಲರಂತೆ ಅವಳು ಈ ಮನೆಯಲ್ಲಿಯೇ ಇರಲೆಂದು ತಾರಾದೇವಿ ಹೇಳಿದರೂ ಚಿನ್ನಮ್ಮನಿಗೆ ಅದು ಸರಿ ಕಾಣಲಿಲ್ಲ.


ನಿಜಕ್ಕೂ ಶ್ರಾವಣಿ ಹಾಗೂ ಸುರೇಂದ್ರ, ಮಹೇಂದ್ರನ ಎರಡನೆ ಸಂಸಾರವೇ ಅಥವಾ ಆಸ್ತಿಯ ಕಾರಣಕ್ಕಾಗಿ ಮನೆಗೆ ಬಂದವರೇ..? ಅನನ್ಯ ಈ ವಿಚಾರವನ್ನು ಹೇಗೆ ಸ್ವೀಕರಿಸಿದಳು..? ಫಲ್ಗುಣಿಯ ವಿಚಾರ ಮುಂದೆ ಯಾರಿಂದ ಹೇಗೆ ತಿಳಿಯಿತು..? ಅಷ್ಟಕ್ಕೂ ಫಲ್ಗುಣಿಯ ಆ ನಡೆಗೆ ಕಾರಣವೇನು..?


ಮಹೇಂದ್ರನ ಸಾವು ಆಕಸ್ಮಿಕವೇ ಅಥವಾ ಯಾರಾದರೂ ಆತನ ಸಾವಿಗೆ ಕಾರಣರೇ..? ಮುಂದೆ ರವೀಂದ್ರ ಮನೆಗೆ ಬಂದದ್ದು ಯಾವ ಕಾರಣದಿಂದ ಹಾಗೂ ಆ ಸಮಯದಲ್ಲಿ ಆತನ ನಡೆ ಹೇಗಿತ್ತು..? ತಾರಾದೇವಿಯನ್ನು ಸಾಯಿಸುವ ಪ್ರಯತ್ನ ನಡೆದದ್ದು ಯಾರಿಂದ, ಶಶಾಂಕ ಹಾಗೂ ಕಾಂತಿಯ ವಿವಾಹದ ನಂತರ ಅವರಿಬ್ಬರ ನಡೆ ಹೇಗಿತ್ತು..? ಎಲ್ಲವನ್ನೂ ತಿಳಿಯಲು ಓದಿ ವಿಜಯಶ್ರೀಯವರ ವಜ್ರದ ಸೌಧ ಕಾದಂಬರಿಯನ್ನು.


ತಾರಾದೇವಿ ಹಾಗೂ ಮಹೇಂದ್ರರ ಉದಾರತೆ, ಫಲ್ಗುಣಿಯ ನಿಷ್ಕಲ್ಮಶ ಮನಸ್ಸು.. ಅನಂತ, ದೇವ್ ಹಾಗೂ ಚಿನ್ನಮ್ಮರ  ಸ್ವಾರ್ಥವಿಲ್ಲದ, ನಿಷ್ಕಲ್ಮಶ ನಡೆ.. ಉಮಾ, ಕಾಂತಿ ಹಾಗೂ ಶಶಾಂಕರ ಉಪಕಾರ ಪಡೆದ ನಂತರದ ನಡತೆ ಇವೆಲ್ಲವನ್ನೂ ಮೆಚ್ಚುವಂತಾದರೆ.. ಸುನಂದಳ ಅತಿಯಾಸೆ ಹಾಗೂ ದುರಾಸೆ ಕಂಡು ಹೆಣ್ಣುಮಕ್ಕಳು ಹೀಗೂ ಇರುತ್ತಾರಾ ಎನ್ನಿಸುವಂತೆ ಮಾಡುತ್ತದೆ.


ಇಲ್ಲಿ ವಜ್ರದ ಸೌಧ ಕೇವಲ ತಾಜ್ ಮಹಲ್ ನಂತಹ ಮನಸ್ಸಿನ ಸೌಧವಲ್ಲ. ನಮ್ಮ ಊಹೆಗೂ ನಿಲುಕದ ಹಲವಾರು ತಿರುವುಗಳನ್ನು ನೀಡುತ್ತಾ.. ಈ ಕಾದಂಬರಿಯಲ್ಲಿ ಮುಂದೇನಾಗಬಹುದು ಎಂಬ ರೋಚಕತೆಯಿಂದ ಕಥೆಯನ್ನು ಹೆಣೆದಿದ್ದಾರೆ. ವಜ್ರದ ಸೌಧ ಎಂಬ ಶೀರ್ಷಿಕೆಯ ಒಂದು ಅರ್ಥವನ್ನು ನಾನಿಲ್ಲಿ ಬಿಡಿಸಿಟ್ಟಿದ್ದರೆ.. ಕಥೆಗೆ ಪೂರಕವಾದ ಮತ್ತೊಂದು ಅಂಶವನ್ನು ತಿಳಿಯಲು ನೀವೇ ಕಾದಂಬರಿ ಓದಿ ನೋಡಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ