ಪುಸ್ತಕದ ಶೀರ್ಷಿಕೆ : ಶಿರಾಡಿ ಘಾಟ್
ಲೇಖಕರು : ರಮೇಶ್ ಶೆಟ್ಟಿಗಾರ್ ಮಂಜೇಶ್ವರ
ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್
ಪ್ರಥಮ ಮುದ್ರಣ : 2025
ಪುಟಗಳು : 128
ಬೆಲೆ : 160 ರೂ.
ನಾನು ಹಾರರ್ ಕಥೆಗಳನ್ನು ಅಷ್ಟೇನೂ ಓದುವುದಿಲ್ಲವಾದರೂ.. ವೈವಿಧ್ಯಮಯ ಓದಿಗೆ ಇವು ಸಹಾ ಜೊತೆಗಾರರಾಗುತ್ತವೆ. ಹಾರರ್ ಕಥೆಗಳನ್ನು ಓದುವಾಗ ರಾತ್ರಿಯ ಸಮಯದಲ್ಲಿಯೇ.. ಇವು ಓದಿಗೆ ತಕ್ಕ ಸಮಯದ ಎಫೆಕ್ಟ್ ಅನ್ನು ನೀಡುತ್ತವೆ ಎನ್ನುವುದು ನನ್ನ ಅನಿಸಿಕೆ. ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ ಹಾಂಟೆಡ್ ಹೊಸಮನೆ ನಾನಿನ್ನು ಓದಿಲ್ಲ.. ಓದಬೇಕಿದೆ. ಇವರ 'ಮದನಿಕೆ' ಪುಸ್ತಕ ವಿಭಿನ್ನವಾದ ಕಥಾವಸ್ತುವಿನಿಂದ ಸೆಳೆದಿತ್ತು. ನಂತರ ಈಗ ಹಿಡಿದಿರುವುದು 'ಶಿರಾಡಿ ಘಾಟ್'. ಇಲ್ಲಿನ ಕಥೆಗಳನ್ನು ಓದಿದ ನಂತರ ನನಗನ್ನಿಸಿದ್ದು.. ಲೇಖಕರು ಹೆಚ್ಚಿನಂಶ ವೈವಿಧ್ಯಮಯವಾಗಿ ಕಥೆಗಳನ್ನು ಹೆಣೆದಿದ್ದಾರೆ. ಅದರಲ್ಲಿಯೂ ಒಳ್ಳೆಯವರಿಗೆ ಕಾಡಿಸದ ಹಲವಾರು ಸ್ನೇಹಮಯಿ ದೆವ್ವಗಳನ್ನು ನಮಗೆ ಕಟ್ಟಿ ಕೊಟ್ಟಿದ್ದಾರೆ. ಕಥೆಗಳಲ್ಲಿನ ತಿಳಿಹಾಸ್ಯ ಓದನ್ನು ಮತ್ತಷ್ಟು ರಂಜಿನೀಯವಾಗಿಸಿದೆ. ಕೆಲವು ಹಾಂಟೆಡ್ ಸ್ಥಳಗಳ ಮಾಹಿತಿಯನ್ನು ನೀಡಿ ಮಾಹಿತಿಪೂರ್ಣವಾಗಿಯೂ ಕಥೆಗಳನ್ನು ಹೆಣೆದಿರುವುದು ಇಷ್ಟವಾಯಿತು. ಈ ಕಥಾಸಂಕಲನದಲ್ಲಿ ಒಟ್ಟು 12 ಕಥೆಗಳಿವೆ. ಹಳ್ಳಿಗಳಲ್ಲಿ ಅಥವಾ ಜನ ಕಮ್ಮಿ ಇರುವ ರಸ್ತೆಗಳಲ್ಲಿ ಜನಜನಿತವಾಗಿದ್ದ ದೆವ್ವದ ಕಥೆಗಳನ್ನು ಕೇಳಿದ್ದರೂ.. ಇಲ್ಲಿ ಜನನಿಬಿಡವಾದ ಬೆಂಗಳೂರಿನಂತಹಾ ಊರಿನಲ್ಲಿನ ಕಥೆಗಳನ್ನೂ ಓದಬಹುದಾಗಿದೆ.
ಆ ಕರಾಳ ರಾತ್ರಿ : ಎಂ.ಜಿ ರಸ್ತೆಯಲ್ಲಿ ಹೋಗುತ್ತಿದ್ದವರಿಗೆ ಹೆಣ್ಣೊಬ್ಬಳ ಆರ್ತನಾದ ಕೇಳಿಸಿತು. ಅದನ್ನು ಹುಡುಕಲೆಂದು ಹೊರಟವರಿಗೆ ಆ ಸ್ಥಳದ ಹಿನ್ನೆಲೆಯ ಅರಿವಿರಲಿಲ್ಲ. ಆದರೆ, ಅದೇ ಸಮಯಕ್ಕೆ ಬಂದ ಹೊಯ್ಸಳ ವಾಹನದಲ್ಲಿದ್ದ ಪೊಲೀಸಿವವರಿಗೆ.. ಆತ ಕುಡಿದು ಇದನ್ನು ಹೇಳುತ್ತಿದ್ದಾರೆ ಎಂದೆನಿಸಿತ್ತು. ಅದಕ್ಕೆ ಕಾರಣ ಅಲ್ಲಿ ಯಾವ ಹೆಣ್ಣೂ ಇರಲಿಲ್ಲ. ನಿಜಕ್ಕೂ ಆ ರಾತ್ರಿಯಲ್ಲಿ ನಡೆದಿದ್ದೇನು..? ಅದೂ ಬೆಂಗಳೂರಿನ ಎಂ.ಜಿ ರೋಡ್ ನಲ್ಲಿ ಮೋಹಿನಿಯ ಕಥೆ ಎಂದರೆ ಕುತೂಹಲಕಾರಿಯಲ್ಲವೇ..?!
ಅಂಧಕಾರದಲ್ಲೊಂದು ಪಯಣ : ಬೆಂಗಳೂರಿನಿಂದ ಕಾರಿನಲ್ಲಿ ಹೊರಟ ವಿನಯ್ ರಾತ್ರಿಯಾಗುವುದರೊಳಗಾಗಿ ಮಾವನ ಮನೆ ತಲುಪಬಹುದು ಎಂದುಕೊಂಡೇ ಹೊರಟದ್ದು. ಆದರೆ, ದೀಪಾವಳಿಯ ರಜೆಯ ಕಾರಣ ಕರಾವಳಿಯ ಕಡೆಗೆ ಹೊರಟಿದ್ದ ವಾಹನಗಳೇ ಹೆಚ್ಚಾಗಿ ಇದ್ದುದರಿಂದ ಪಯಣ ನಿಧಾನವಾಗಿಯೇ ಸಾಗಿತ್ತು. ಮಾವನ ಮನೆಗೆ ಅಲ್ಲೊಂದು ಅಡ್ಡರಸ್ತೆ ಇದೆ ಎಂದುಕೊಂಡಿದ್ದವನಿಗೆ ದಾರಿ ತೋರಿದವರು ಯಾರು ? ಅಂಧಕಾರದಲ್ಲಿ ಆತ ಹೋಗಬೇಕಾಗಿದ್ದ ಊರು ಯಾವುದು..? ಅಷ್ಟಕ್ಕೂ ಆತ ತರುತ್ತಿದ್ದ ಪಟಾಕಿಯ ಪಾಕೆಟ್ ಮನೆ ಸೇರಿತೇ..?
ಶಿರಾಡಿ ಘಾಟ್ : ಪುಸ್ತಕದ ಶೀರ್ಷಿಕೆಯೇ ಆಗಿರುವ ಈ ಕಥೆ ಕುತೂಹಲಕಾರಿಯಾಗಿದೆ. ರಾತ್ರಿ ಪಯಣದಲ್ಲಿ ಗುಂಡ್ಯಕ್ಕೆ ಇನ್ನೂ ಹತ್ತು ಕಿಲೋಮೀಟರ್ ಇರುವಾಗ ಶಿರಾಡಿ ಘಾಟಿನಲ್ಲಿ ನಡೆದ ಘಟನೆಯೊಂದು ಮೋಹಿನಿಯ ದರ್ಶನ ಮಾಡಿಸುತ್ತದೆ. ಹೆಚ್ಚಿನ ಕತೆ ತೆರೆದಿಡಲಾರೆ. ನೀವೇ ಓದಿ ನೋಡಿ.
ಅಣ್ಣಚಾಮಿ ದೆವ್ವ : ಅಣ್ಣಚಾಮಿ ಎಂಬ ಹೆಸರು ಕೇಳಿದಾಗ ಇದು ತಮಿಳುನಾಡಿನ ಮೂಲದ ಹೆಸರಿರಬಹುದು ಎನ್ನಿಸಿತು. ಹೌದು. ಆದರೆ, ಬೆಂಗಳೂರಿನ ಹಲಸೂರಿನ ಹತ್ತಿರ ಅಣ್ಣಚಾಮಿ ಎಂಬ ದೆವ್ವ ಓಡಾಡುವ ಬೀದಿಯ ಕಥೆ ಇದು. ಈ ಕಥೆ ಓದುವಾಗ ನಗು ಉಕ್ಕಿ ಬರುವುದಂತೂ ನಿಜ. ಹಾಗಾದರೆ, ಅಣ್ಣಚಾಮಿ ದೆವ್ವದ ಕಥೆ ಏನೆಂದು ನೀವೇ ಓದಿ ನೋಡಿ.
ಅಕ್ಕತಂಗಿ ಬಂಗಲೆ : ಬೆಂಗಳೂರಿನ ಹೃದಯ ಭಾಗದ ಸೈಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಬಂಗಲೆ, ಭೂತ ಬಂಗಲೆಯಾಗಿ ಕುಖ್ಯಾತಿ ಪಡೆಯುವುದರ ಹಿಂದಿನ ಕಥೆ ಏನು..? ಇದನ್ನು ಪರೀಕ್ಷಿಸಲು ಹೊರಟ ಅಭಯಾನಂದ್ ಅವರಿಗಾದ ಅನುಭವವೇನು..? ಈಗಲೂ ಈ ಬಂಗಲೆ ಇದೆಯಾ..? ಎಲ್ಲ ಮಾಹಿತಿಗಳಿಗಾಗಿ ಓದಿ ಅಕ್ಕತಂಗಿ ಬಂಗಲೆ.
ಹಾಂಟೆಡ್ ಝನಾನ್ತುನಿಚ್ : ಕೇವಲ ನಮ್ಮ ಬೆಂಗಳೂರಿನ ಅಥವಾ ದೇಶಿಯ ಕಥೆಗಳು ಮಾತ್ರವಲ್ಲ.. ಇಲ್ಲಿ ವಿದೇಶಿ ಭಯಾನಕವಾದ ಕಥೆಯನ್ನು ಬರೆದಿದ್ದಾರೆ ಲೇಖಕರು. ಬೆಲಿಜ್ ರಾಜಧಾನಿಯಾದ ಬೆಲ್ಮೊಪಾನ್ ನಿಂದ ಝನಾನ್ತುನಿಚ್ ಸೈಟಿಗೆ ಹೊರಟವರಿಗೆ ಅಲ್ಲಿಯ ಲೋಕಲ್ ಮಾಯನ್ ಹುಡುಗಿ ಸೈಟ್ ಬಗ್ಗೆ ಹೇಳಿದ್ದೇನು..? ಅಂತಹಾ ಹಾಂಟೆಡ್ ಜಾಗದಲ್ಲಿ ಆ ಕಥೆ ಕೇಳಿದವರಿಗೆ ಆದ ಅನುಭವಗಳೇನು..? ಅಷ್ಟಕ್ಕೂ ಈ ಕಥೆ ಹೇಳಿದವರು ಯಾರು..? ಕೊನೆಯಲ್ಲಿನ ಟ್ವಿಸ್ಟ್ ಊಹಿಸುವುದು ಕೊಂಚ ಕಷ್ಟವೇ.
ಮತ್ತೆ ಮೋಹಿನಿ : ಚಿಕ್ಕಂದಿನಲ್ಲಿ ಹಳ್ಳಿಗಳಲ್ಲಿ 'ನಾಳೆ ಬಾ' ಎನ್ನುವ ಬರಹವನ್ನು ಬಾಗಿಲ ಮೇಲೆ ನೋಡಿದಾಗ ಕುತೂಹಲವಂತೂ ಮೂಡಿತ್ತು. ಆದರೆ, ಇದು 1990ರ ದಶಕದಲ್ಲಿ ಬೆಂಗಳೂರಿನಲ್ಲಿ ನಾಳೆ ಬಾ ಎಂದು ಬರೆಯುತ್ತಿದ್ದ ಕಾಲದ ಕತೆ. ಅದು ವದಂತಿಯೇ ಅಥವಾ ರೋಚಕ ಘಟನೆಯಾ..? ಕುತೂಹಲದಿಂದ ಓದುವಂತಹಾ ಕಥೆಯೊಂದನ್ನು ಕಟ್ಟಿಕೊಟ್ಟಿದ್ದಾರೆ.
ಈ ಸ್ಮಶಾನ ಮೌನವಲ್ಲ : ಸ್ಮಶಾನ ಎಂದಾಗ ಸಾಮಾನ್ಯವಾಗಿ ನೆಗೆಟಿವ್ ಎನರ್ಜಿ ಹಾಗೂ ಪ್ಯಾರಾನಾರ್ಮಲ್ ಘಟನೆಗಳು ತಲ್ಲಣ ಹುಟ್ಟಿಸುತ್ತವೆ. ರಾತ್ರಿಯಿಡೀ ಸದ್ದು ಮಾಡುತ್ತಾ ಮೌನವನ್ನು ಭೇದಿಸುತ್ತಿದ್ದ ಒಂದು ಅತ್ಯಂತ ಭಯಾನಕ ಸ್ಮಶಾನದ ಕಥೆ ಹಾಗೂ ಚಿತ್ರತಂಡವೊಂದು ಅಲ್ಲಿ ಅನುಭವಿಸಿದ ಅನುಭವವನ್ನು ಸ್ಮಶಾನ ಕಾಯುವ ಕಿಟ್ಟಲ್ ಮೂಲಕ ನಮಗೆ ದರ್ಶನ ಮಾಡಿಸಿದ್ದಾರೆ. ಇದನ್ನು ಓದಿದ ನಂತರ ಅಲ್ಲಿ ವಾಸಿಸುವ ಜನರ ಜೀವನದ ಕುರಿತಾಗಿ ಅಚ್ಚರಿ ಜೊತೆಗೆ ತಲ್ಲಣ ಉಂಟಾಗಿದ್ದಂತೂ ಹೌದು.
ಕಿರುದಾರಿಯ ಕೊಳ್ಳಿ ದೆವ್ವ! : ಇಲ್ಲಿ ಕೊಳ್ಳಿ ದೆವ್ವದ ಜೊತೆಗೆ ಬ್ರಹ್ಮರಾಕ್ಷಸನ ಮರವನ್ನು ಕೂಡಾ ತೋರಿದ್ದಾರೆ. ಈ ಕಥೆಯಲ್ಲಿ ಒಂದು ಮಾತು ಬರುತ್ತದೆ.
"ನಾನು ದೆವ್ವಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ಆದರೆ, ಒಮ್ಮೊಮ್ಮೆ ಮನುಷ್ಯರಿಗೆ ಹೆದರುತ್ತೇನೆ."
ಈ ಕಥಾಸಂಕಲನ ನಿಜಕ್ಕೂ ದೆವ್ವಗಳ ಕುರಿತಾಗಿ ಹೆದರಿಕೆ ಹುಟ್ಟಿಸುವ ಬದಲಾಗಿ ಅಲ್ಲಿನ ಭಯಾನಕ ಪರಿಸರವನ್ನು ದರ್ಶನ ಮಾಡಿಸಿ, ತೊಂದರೆ ಕೊಡದ ದೆವ್ವಗಳೂ ಇವೆ ಎಂದು ತೋರುತ್ತಾರೆ. ಈ ಕಾಲದಲ್ಲಿ ಮನುಷ್ಯ ದೇವವಕ್ಕಿಂತ ಮನುಷ್ಯರಿಗೇ ಹೆದರುವ ಮಾತಂತೂ ನಿಜವೆನಿಸಿತು.
ಪ್ರೇತ ಕಾಗೆ : ಸೋಂಪನ ವಿಚಿತ್ರ ಅನುಭವ ಹಾಗೂ ಭಯಕ್ಕೆ ಕಾರಣ ಒಂದು ಸಾಮಾನ್ಯ ಕಾಗೆ. ಕಾಗೆಗಳನ್ನು ಸಾಮಾನ್ಯವಾಗಿ ಪೂರ್ವಜರ ರೂಪದಲ್ಲಿ ನೋಡುವ ನಮಗೆ ಇಲ್ಲಿನ ಕಾಗೆ ಹೇಗೆ ಕಾಣುತ್ತದೆ..? ಅಷ್ಟಕ್ಕೂ ಸೋಂಪನಿಗೆ ಕಾಗೆ ಕೊಡುತ್ತಿದ್ದ ತ್ರಾಸಾದರೂ ಎಂತಹದ್ದು..? ನೀವೇ ಓದಿ ನೋಡಿ.
ಹಾಂಟೆಡ್ ಜಾಕೆಟ್ : ಸಿಂಗಾಪುರದಲ್ಲಿ ಸಹೋದ್ಯೋಗಿಯೊಬ್ಬರು
ತಮಗಾದ ಒಂದು ಹಾಂಟೆಡ್ ಅನುಭವವನ್ನು ವಿವರಿಸಿರುವ ಕತಾರೂಪ ಇಲ್ಲಿದೆ.
ಏರ್ಪೋರ್ಟಿನಲ್ಲಿ ಘೋಸ್ಟ್...? : ದಿನದ 24 ಗಂಟೆಯೂ ಜನರಿಂದ ತುಂಬಿ ತುಳುಕುವ ಸ್ಥಳವಾದ ಬೆಂಗಳೂರಿನ ಇಂಟರ್ನ್ಯಾಷನಲ್ ಏರ್ಪೋರ್ಟ್ ನಲ್ಲಿ ಘೋಸ್ಟ್..? ನಿಜಕ್ಕೂ ಇದು ನಂಬಲಸಾಧ್ಯವಾದದ್ದು. ಆದರೆ, ಇಲ್ಲಿನ ಅನುಭವಗಳನ್ನು ಹೇಳುತ್ತಾ ಹೋಗುವ ಅಭಯಾನಂದ ಅವರ ವಿಚಿತ್ರ ಘಟನೆಗಳನ್ನು ಕೇಳಿ ನಂಬದಿರಲು ಸಾಧ್ಯವೇ ಎನಿಸುತ್ತದೆ.
ಭಯಪಡಿಸಲೆಂದೇ ಬರೆದ ಕಥೆಗಳು ಕೇವಲ ಭಯ ಮಾತ್ರವಲ್ಲ ಎಚ್ಚರಿಕೆಯನ್ನು ಮೂಡಿಸುತ್ತವೆ. ಅತಿಯಾದ ಕುತೂಹಲಕ್ಕೆ ಬ್ರೇಕ್ ಹಾಕುವಂತೆಯೂ.. ಹಾಗೂ ರಾತ್ರಿ ಪ್ರಯಾಣದಲ್ಲಿ, ನಿರ್ಜನ ತಾಣಗಳಲ್ಲಿ ತೆಗೆದುಕೊಳ್ಳಬಹುದಾದಂತಹ ಎಚ್ಚರಿಕೆಗಳನ್ನು ನೀಡುತ್ತವೆ. ಓದಿದವರಿಗೆ ದೇವರು ಹಾಗೂ ದೆವ್ವಗಳ ನಂಬಿಕೆಯ ಕುರಿತಾದ ಪ್ರಶ್ನೆ ಇದ್ದರೆ ಲೇಖಕರಂತೆ ನಾನೂ ಲೇಖಕರ ಮಾತಿಗೆ ಸಮ್ಮತಿಸುತ್ತೇನೆ. "ಯದ್ಭಾವಂ ತದ್ಭವತಿ" ಎಂದು. ಸಾಹಿತ್ಯದ ವಿಭಿನ್ನ ಪ್ರಕಾರಗಳಲ್ಲಿ ತಮ್ಮ ಛಾಪು ಮೂಡಿಸಲಿ ಎಂದು ಲೇಖಕರಿಗೆ ಶುಭ ಹಾರೈಸುತ್ತೇನೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ