ಶನಿವಾರ, ಏಪ್ರಿಲ್ 25, 2026

ನವ್ಯಕಾವ್ಯ ಪ್ರಯೋಗ (ಪುಸ್ತಕ ಯಾನ - 320)


ಪುಸ್ತಕದ ಶೀರ್ಷಿಕೆ : ನವ್ಯಕಾವ್ಯ ಪ್ರಯೋಗ

ಲೇಖಕರು : ಕೀರ್ತಿನಾಥ ಕುರ್ತಕೋಟಿ

ಪ್ರಕಾಶಕರು : ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್

ಪ್ರಥಮ ಮುದ್ರಣ : 2015

ಪುಟಗಳು : 132

ಬೆಲೆ : 120 ರೂ

ಕೀರ್ತಿನಾಥ ಕುರ್ತಕೋಟಿ:

ಕವಿ, ನಾಟಕಕಾರ, ವಿಮರ್ಶಕ, ಅನುವಾದಕ, ಅಂಕಣಕಾರರಾದ ಕೀರ್ತಿನಾಥ ಕುರ್ತಕೋಟಿಯವರು 12-10-1928ರಂದು ಗದಗಿನಲ್ಲಿ ಜನಿಸಿದರು. ತಂದೆ ಡಿ.ಕೆ.ಕುರ್ತಕೋಟಿ, ತಾಯಿ-ಪದ್ಮಾವತಿಬಾಯಿ. ಕೆಲಕಾಲ ಗದಗಿನ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕುರ್ತಕೋಟಿಯವರು, ಸ್ನಾತಕೋತ್ತರ ಪದವಿ ಪಡೆದು, ಗುಜರಾತಿಗೆ ತೆರಳಿ ಅಲ್ಲಿ ಕಾಲೇಜು ಉಪನ್ಯಾಸಕ ವೃತ್ತಿಯನ್ನು ಕೈಗೊಂಡರು. ಅಲ್ಲಿ ನಿವೃತ್ತಿಯನ್ನು ಪಡೆದ ನಂತರ ಧಾರವಾಡಕ್ಕೆ ಮರಳಿದರು.


ಜಿ.ಬಿ.ಜೋಶಿಯವರು ಮನೋಹರ ಗ್ರಂಥಮಾಲೆಗೆ ಮೊದಲಿನಿಂದಲೂ ಸಾಹಿತ್ಯ ಸಲಹಾಕಾರರಾಗಿದ್ದರು. ಜೊತೆಗೆ ಪ್ರಜಾವಾಣಿಯಲ್ಲಿ ವಾರವಾರವೂ ಪ್ರಕಟವಾಗುತ್ತಿದ್ದ "ಉರಿಯ ನಾಲಗೆ" ಎಂಬ ಅಂಕಣ ಬಹಳ ಜನಪ್ರಿಯವಾಗಿತ್ತು. 1959ರಲ್ಲಿ ಮನೋಹರ ಗ್ರಂಥಮಾಲೆ ಹೊರತಂದ ತನ್ನ ರಜತ ವರ್ಷದ ಹೊತ್ತಿಗೆ “ನಡೆದು ಬಂದ ದಾರಿ” ಯಲ್ಲಿ ಇವರು ಬರೆದ ಸಾಹಿತ್ಯ ವಿಮರ್ಶೆ ಕನ್ನಡ ವಿಮರ್ಶಾಲೋಕದಲ್ಲಿ ಒಂದು ಹೊಸ ಆಯಾಮವನ್ನು ಸೃಷ್ಟಿಸಿತು. ಆ ಬಳಿಕ ಹೊರತಂದ ವಿಮರ್ಶಾ ನಿಯತಕಾಲಿಕ “ಮನ್ವಂತರ”ಕ್ಕೆ ಇವರು ಸಂಪಾದಕರಾಗಿದ್ದರು. 


'ಗಾನಕೇಳಿ', 'ನಾವು ಬರಿಗೈಯವರು' ಕವನ ಸಂಕಲನಗಳು. 'ಆ ಮನಿ', 'ಸ್ವಪ್ನದರ್ಶಿ ಮತ್ತು ಇತರ ಗೀತ ನಾಟಕಗಳು', 'ಸ್ವಪ್ನ ವಾಸವದತ್ತೆ' (ಭಾಸನ ಸಂಸ್ಕೃತ ನಾಟಕದ ಅನುವಾದ) ಹಾಗೂ

'ಚಂದ್ರಗುಪ್ತ' ನಾಟಕಗಳು. 'ನವ್ಯಕಾವ್ಯ ಪ್ರಯೋಗ', 'ಯುಗಧರ್ಮ ಹಾಗು ಸಾಹಿತ್ಯದರ್ಶನ', 'ಯಶೋಧರ ಚರಿತ್ರೆಯ ಕಾವ್ಯತಂತ್ರ', 'ಉರಿಯ ನಾಲಿಗೆ', 'ವಿಮರ್ಶೆಯ ವಿನಯ:ನಾಟಕ', 'ವಿಮರ್ಶೆಯ ವಿನಯ:ಕಾದಂಬರಿ', 'ಸಂಸ್ಕೃತಿ ಸ್ಪಂದನ', 'ರಾಜಸ್ಪರ್ಶ', 'ಬಾರೊ ಸಾಧನಕೇರಿಗೆ', 'ನೂರು ಮರ ನೂರು ಸ್ವರ', 'ಶ್ರಾವಣ ಪ್ರತಿಭೆ' ಇವರ ವಿಮರ್ಶಾ ಕೃತಿಗಳಾದರೆ.. 'ಜೀವಫಲ', 'ಮರಾಠಿ ಸಂಸ್ಕೃತಿ-ಕೆಲವು ಸಮಸ್ಯೆಗಳು' ಅನುವಾದಿತ ಕೃತಿಗಳು. 


ಕೀರ್ತಿನಾಥ ಕುರ್ತಕೋಟಿಯವರ 'ಆ ಮನಿ' ನಾಟಕವನ್ನು ಈಗಾಗಲೇ ಪರಿಚಯಿಸಿದ್ದೇನೆ. ಈಗ ನಾನು ಆಯ್ಕೆ ಮಾಡಿಕೊಂಡಿರುವ ಇವರ ವಿಮರ್ಶಾ ಕೃತಿ ಇಂತಿದೆ.

" ನವ್ಯ ಕಾವ್ಯದಲ್ಲಿ ಮೂಡಿ ಬಂದಿರುವ ನವ್ಯತೆಯಿಂದ ಕೆಲವರಿಗೆ ಉತ್ಸಾಹವೆನಿಸಿದ್ದರೆ, ಮತ್ತೆ ಕೆಲವರಿಗೆ ದಿಗ್ಭ್ರಮೆಯಾಗಿದೆ. ನವ್ಯ ಕಾವ್ಯದ ಬಗ್ಗೆ ಬಂದಿರುವ ಅಭಿಪ್ರಾಯವೆಲ್ಲಾ ಭಾವನಾವಿಷ್ಟವಾಗಿದೆ. ನವ್ಯ ಕಾವ್ಯದ ಕೂಲಂಕಷವಾದ, ಶಾಸ್ತ್ರೀಯವಾದ ಅಭ್ಯಾಸದಿಂದ ಈ ಸಮಸ್ಯೆಗಳು ಕೆಲಮಟ್ಟಿಗಾದರೂ ದೂರವಾಗಬಹುದು." ಎಂದು ಕೀರ್ತಿನಾಥ ಕುರ್ತಕೋಟಿಯವರ ಈ ನವ್ಯ ಕಾವ್ಯ ಪ್ರಯೋಗದ ಕುರಿತಾಗಿ ಹೇಳಿರುವವರು ಜಿ.ಬಿ ಜೋಶಿಯವರು. 


"ಕಾವ್ಯದಿಂದ ಇಂದಿನವರೆಗೆ ಲೋಕದ ಯಾವ ಸಮಸ್ಯೆಯನ್ನು ಬಿಡಿಸಲು ಶಕ್ಯವಾಗಿಲ್ಲವೆಂಬುದೇನೋ ನಿಜವೇ. ಆದರೆ, ಅದು ಸಮಸ್ಯೆಗೆ ಕವಿಯ ವೈಯಕ್ತಿಕ ಪ್ರತಿಕ್ರಿಯೆಯೂ ಅಲ್ಲ. ಜಗತ್ತಿನ ಶ್ರೇಷ್ಠ ಕಾವ್ಯವೆಲ್ಲ ಜೀವನದ ಅರ್ಥಪೂರ್ಣ ತತ್ವಗಳ ಪ್ರಶಂಸೆಯಾಗಿದೆ. ಈ ಪ್ರಶಂಸೆಗೆ ವಾತಾವರಣ ಅನುಕೂಲವಾಗದಿದ್ದರೆ ಮಾತ್ರ ಕಾವ್ಯ ಅನಿವಾರ್ಯವಾಗಿ ವಿಡಂಬನಕ್ಕೆ ಇಳಿಯಬೇಕಾಗುತ್ತದೆ. ಆದರೆ, ವಿಡಂಬನದ ಹಿಂದೆ ಜೀವನದ ಅರ್ಥಪೂರ್ಣತೆಯ ಅರಿವೂ ಕವಿಗೆ ಇರಬೇಕಾದದ್ದು ಅಗತ್ಯವಾಗಿದೆ." ಎನ್ನುತ್ತಾರೆ ಕೀರ್ತಿನಾಥ ಕುರ್ತಕೋಟಿಯವರು. 


ನವ್ಯ ಕಾವ್ಯ ಪ್ರಯೋಗದಲ್ಲಿ ಮೊದಲಿಗೆ ಇಂಗ್ಲಿಷ್ ನವ್ಯಕಾವ್ಯ ಪರಂಪರೆಯನ್ನು ಉದ್ಗಮವೆಂದು ತೋರುತ್ತಾ.. ನಂತರ ಕನ್ನಡದ ಪರಿಸ್ಥಿತಿ, ಜೊತೆಗೆ ಅದು ವಿಕಾಸಗೊಂಡ ಬಗೆಯಲ್ಲಿ ವಿನಾಯಕ, ಎಂ. ಗೋಪಾಲಕೃಷ್ಣ ಅಡಿಗ, ಕೆ. ಎಸ್. ನರಸಿಂಹಸ್ವಾಮಿ, ಬಿ. ಸಿ. ರಾಮಚಂದ್ರ ಶರ್ಮ, ಚನ್ನವೀರ ಕಣವಿ, ಗಂಗಾಧರ ಚಿತ್ತಾಲ, ಎ. ಕೆ ರಾಮಾನುಜನ್ ಅವರ ಕವಿತೆಗಳು ಹಾಗೂ ಅವುಗಳ ನೋಟಗಳನ್ನು ಕಟ್ಟಿಕೊಟ್ಟು ಕೊನೆಯಲ್ಲಿ ಹೊಸ ತಲೆಮಾರಿನ ಕವಿಗಳನ್ನು ಸಹಾ ತೋರುತ್ತಾರೆ.


ನವೋದಯದ ಕಾವ್ಯ, ಸತ್ವವನ್ನು ಇನ್ನೂ ಕಳೆದುಕೊಂಡಿಲ್ಲದ ಸಂದರ್ಭದಲ್ಲಿಯೇ ನವ್ಯತೆ ಕಾಲಿಟ್ಟಿತ್ತು. ಇದು ಪಾಶ್ಚಾತ್ಯ ಸಾಹಿತ್ಯದಿಂದ ಹೇಗೆ ಪ್ರೇರಿತವಾಗಿದೆ ಹಾಗೂ ಅದರ ಪರಿವರ್ತನೆ, ಜೊತೆಗೆ ನವ್ಯತೆ ಕಾವ್ಯದಲ್ಲಿ ಅಷ್ಟೇ ಅಲ್ಲದೆ.. ಸಣ್ಣ ಕಥೆ, ಕಾದಂಬರಿ ಹಾಗೂ ನಾಟಕ ಕ್ಷೇತ್ರಗಳಲ್ಲಿಯೂ ವ್ಯಾಪಿಸತೊಡಗಿರುವ ಸಂದರ್ಭದಲ್ಲಿ ಹೊಸ ಮಾರ್ಗವನ್ನು ಸ್ವೀಕರಿಸಬೇಕಾಗಿರುವುದು ಯಾವ ರೀತಿಯ ಪರಿಣಾಮ ಬೀರಿತು ಎಂದು ಹೇಳುತ್ತಲೇ ಪಾಶ್ಚಾತ್ಯ ಕವಿಗಳ ಸಾಲುಗಳು ಹಾಗೂ ಆ ಕವಿಗಳ ಭಾವಗಳನ್ನು ಉದಾಹರಣೆಯಾಗಿ ನೀಡುತ್ತಾರೆ. 


 ಪಾಶ್ಚಾತ್ಯ ಕವಿಗಳು ಹಾಗೂ ಅವರ ಸಾಲುಗಳನ್ನು ನಾನು ಹೆಚ್ಚು ಓದಿಲ್ಲದ ಕಾರಣ ಇದು ನನಗೆ ಹೊಸ ಓದಿನ ಅನುಭವ ನೀಡಿತು. ಲೇಖಕರು ಸಹಾ "ನಮಗೆ ಅಷ್ಟೊಂದು ಪರಿಚಯವಿಲ್ಲದ ಭಿನ್ನ ಸಂಸ್ಕೃತಿಯ ಪರಂಪರೆಯ ಕಾವ್ಯದ ಬೆಳವಣಿಗೆಯ ಬಗ್ಗೆ ಸ್ವಂತ ಅಭಿಪ್ರಾಯವನ್ನು ಕೊಡುವುದಕ್ಕಿಂತ.. ಅಲ್ಲಿಯ ವಿಮರ್ಶಕರ ಅಭಿಪ್ರಾಯವನ್ನು ಉದ್ದರಿಸಿ ಹೇಳುವುದು ಹೆಚ್ಚು ಯುಕ್ತವೆಂದು ತೋರುತ್ತದೆ" ಎನ್ನುತ್ತಾರೆ ಹಾಗೂ ಅದು ನನ್ನಂತಹಾ ಓದುಗರಿಗೆ ಸಂದರ್ಭೋಚಿತ ಗ್ರಹಿಕೆಗೆ ಉಪಯುಕ್ತವೆನಿಸಿತು. 


ಕನ್ನಡದ ಮೊದಲ ತಲೆಮಾರಿನ ಕವಿಗಳಿಗೆ ಅವರವರವೇ ಆದ ವೈಯಕ್ತಿಕ ಆದರ್ಶಗಳಿದ್ದವು. ಕುವೆಂಪುರವರ ಸೌಂದರ್ಯವಾದ, ವಿನಾಯಕರ ಮಾನವತಾವಾದ, ಮಧುರ ಚೆನ್ನರ ಅನುಭಾವ, ಮುಗಳಿಯವರ ಚಾತಕವ್ರತ.. ಇವು ಇಂಥ ಆದರ್ಶಗಳಾಗಿವೆ. ಈ ಕವಿಗಳ ವಸ್ತು, ಭಾವ, ಭಾಷೆ, ಅಭಿವ್ಯಕ್ತಿಯ ರೀತಿಗಳು ಇಂತಹಾ ವೈಯಕ್ತಿಕ ಆದರ್ಶಗಳಿಗಿಂತ ಸ್ಫೂರ್ತವಾದವುಗಳು. ಆದರೆ, ಕವಿಗೆ ಕಾರಣಾಂತರಗಳಿಂದ ತಮ್ಮ ಬದುಕಲ್ಲಿ ಆದರ್ಶ ಕಾಣದಿದ್ದಾಗ ಹಾಗೂ ಆದರ್ಶದ ಅಪೂರ್ಣತೆಯ ಅರಿವಾದಾಗ.. ಈ ಕವಿಗಳು ಕಾವ್ಯದಲ್ಲಿಯ ತಮ್ಮ ಆಸ್ಥೆಯನ್ನು ಕಳೆದುಕೊಳ್ಳಲಿಲ್ಲ. ಬದಲಾಗಿ ವಾಸ್ತವವನ್ನು ಸರಿಯಾಗಿ ಎದುರಿಸಿದರು. ಇಲ್ಲವೇ.. ಬೇರೆ ಆದರ್ಶವನ್ನಾದರೂ ತಮ್ಮ ಕಾವ್ಯಗಳಲ್ಲಿ ಮೇಳವಿಸಿಕೊಂಡರು. ಎನ್ನುತ್ತಾ ಕಾವ್ಯದ ಬಗ್ಗೆ ಬದಲಾದ ರೀತಿ ಹಾಗೂ ಅಳವಡಿಸಿಕೊಂಡ ಕವಿಗಳ ಕುರಿತು ಕೆಲ ಉದಾಹರಣೆಗಳೊಂದಿಗೆ ಹೇಳುತ್ತಾರೆ. 


ಕಾವ್ಯದಲ್ಲಿ ನವ್ಯತೆ ಬಂದ ನಂತರ ಕಾವ್ಯದ ಅಭ್ಯಾಸಕ್ಕೆ ಹೊಸ ಮಾನದಂಡಗಳೇ ಬೇಕಾಗುತ್ತವೆ. ನವ್ಯತೆ ಕೆಲವರಲ್ಲಿ ವೈಯಕ್ತಿಕ ಅಪೂರ್ಣತೆಯನ್ನು ಹೋಗಲಾಡಿಸಲು ಬಂದಿದ್ದರೆ, ಮತ್ತೆ ಕೆಲವರಲ್ಲಿ ತಾಂತ್ರಿಕ ಚಮತ್ಕಾರವಾಗಿ ಬಂದಿದೆ. ಹೊಸ ಬೆಳೆಗಳಲ್ಲಿ ಗಟ್ಟಿಗಾಳೂ ಇವೆ. ಜೊಳ್ಳೂ ಇವೆ. ಈ ಬೆಳೆಯ ಕ್ಷೇತ್ರ ಹೊಸದು,

 ಹವಾಮಾನ ಹೊಸದು. ಇದೆಲ್ಲದರ ಪರೀಕ್ಷೆಯಾಗಬೇಕಾದರೆ.. ಸಹಾನುಭೂತಿಯೊಡನೆ ಎಚ್ಚರವೂ ಇರಬೇಕಾದ್ದು ಅಗತ್ಯವಾಗಿದೆ ಎನ್ನುತ್ತಾರೆ.


ಹೂವೀನ ಮಕರಂದ | ಹೆಣ್ಣೀನ ಮಾಧುರ್ಯ

ಹಾಲ್ಹಿಂಗ ನಿನ್ನ ಮನ ಹ್ಯಾಂಗ | ಏಳಮ್ಮ

ಮಲಗಿರುವ ತಾಯಿ ಪೃಥಿವೀ


ಮೈ ತುಂಬ ಬಾಯಿ ನೀನು

ತುಟಿಮುದ್ದು ನನ್ನ ಪಾಲು

ಎದೆ ತುಂಬಾ ಮೊಲೆಯು ನಿನಗೆ

ಮೈ ತುಂಬ ನನಗೆ ಹಾಲು

~ಮಧುರ ಚೆನ್ನ


*****************


ಓ ತಾಯಿ ನೆಲವೆ ನಿಲವೇ

ತಂಬೆಳಕು ಹೊಮ್ಮಲಿನ್ನು


ನದಿಗಳೆಲ್ಲ ನಿನ್ನೆದೆ-ಹಾಲು

ಬೆಟ್ಟಸಾಲು ನಿನ್ನ ಹೆಗಲು

ಹಗಲು ನೀನು ನಗಲು

ಇರುಳು ನಿನ್ನ ನೆರಳು


~ಅಂಬಿಕಾತನಯದತ್ತ


*****************


ನಿನ್ನ ದುಡಿಮೆ ನಿಶ್ಶಬ್ದ ಪ್ರತಿಮೆ

ಚಲುವೆಲ್ಲ ನಿನಗೆ ನೋವು


~ಕೆ. ಎಸ್. ನರಸಿಂಹಸ್ವಾಮಿ


ಹೀಗೆ ಮೂರು ಉದಾಹರಣೆಗಳಿಂದ ಸಾಮ್ಯದ ಕುರಿತು ಹೇಳುತ್ತಲೇ.. ಕೆ. ಎಸ್. ನರಸಿಂಹಸ್ವಾಮಿಯವರ ಭಾವನಾವಶತೆ, ಬೇಂದ್ರೆ ಹಾಗೂ ಮಧುರಚನ್ನರಲ್ಲಿಯ ಶ್ರದ್ಧೆ ಹಾಗೂ ತಾತ್ವಿಕ ತಿಳುವಳಿಕೆಯ ಕುರಿತು ಹೇಳುತ್ತಾರೆ. 

 

ಕವಿಯಾಗಿರುವವನು ಅನುಭವಿಸುವಂತೆಯೇ ವಿವೇಚಿಸುವವನೂ ಆಗಿದ್ದರೆ ಅವನ ಅಭಿವ್ಯಕ್ತಿಗಳಲ್ಲಿ ಗೊಂದಲವಿರುವುದಿಲ್ಲ. ಮನುಷ್ಯನ ಅನುಭವ ಎಷ್ಟೇ ವಾಸ್ತವವಾಗಿದ್ದರೂ ಅದಕ್ಕೆ ವಿವೇಕದ ಬೆಂಬಲವಿಲ್ಲದಿದ್ದರೆ ಏನಾಗುತ್ತದೆ ಎಂಬುದನ್ನು ಹೇಳುತ್ತಾರೆ. 


ನವೋದಯದ ಕಾವ್ಯ ಸಂಪ್ರದಾಯದಲ್ಲಿಯೇ ಬರೆಯುತ್ತಿದ್ದವರು ಕಾರಣಾಂತರಗಳಿಂದ ನವ್ಯ ಮಾರ್ಗದ ಅವಲಂಬಿಗಳಾದವರು. ಹೀಗೆ ಆದ ಬದಲಾವಣೆಗಳಲ್ಲಿ ಕೇವಲ ವೈಯಕ್ತಿಕವಲ್ಲದ, ಸಾಂಪ್ರದಾಯಿಕ ಮಹತ್ವದ ಬಗ್ಗೆ ಹೇಳಿದ್ದಾರೆ. ಎಷ್ಟರಮಟ್ಟಿಗೆ ನಮ್ಮ ಕಾವ್ಯ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತಾ.. ಕಾವ್ಯದ ಶ್ರೇಷ್ಠತೆಯನ್ನು ತಿಳಿಸುತ್ತಾರೆ.


ಈ ನವ್ಯಕಾವ್ಯದ ವಿಮರ್ಶೆ ಓದಿದ ನಂತರ :


* ಕಾವ್ಯದ ಕುರಿತ ವಿಮರ್ಶೆ ಖಂಡಿತವಾಗಿಯೂ ಸುಲಭವಲ್ಲ. ಆದರೆ, ಕಾವ್ಯವನ್ನು ವಿಶ್ಲೇಷಿಸುವ ಮೊದಲು.. ಅದರ ಹಿನ್ನೆಲೆ, ನಡೆದು ಬಂದ ಹಾದಿ ಹಾಗೂ ಅದಕ್ಕೂ ಮುನ್ನ ಇದ್ದ ಪ್ರಕಾರದ ಇತಿಹಾಸ, ಬದಲಾವಣೆಗೆ ಕಾರಣ ಎಲ್ಲವನ್ನೂ ತಿಳಿದು ವಿಶ್ಲೇಷಿಸುವುದು ಎಷ್ಟು ಮುಖ್ಯ ಎಂದು ಅರಿವಾಗುತ್ತದೆ.


* ಕಾವ್ಯದ ಇತಿಹಾಸದಲ್ಲಿಯ ಒಂದು ಘಟ್ಟವನ್ನು ಇಲ್ಲಿ ನೀಡಿದ್ದರೂ.. ಅದರ ಭವಿಷ್ಯದ ನೋಟ, ಮಾಡಿಕೊಳ್ಳಬೇಕಾದ ಬದಲಾವಣೆ ಹಾಗೂ ಹಾಗೆ ಬದಲಾದರೆ ಯಾವ ರೀತಿಯ ಪರಿಣಾಮಗಳಾಗುತ್ತವೆ ಎಂಬುದನ್ನು ಸಹಾ ವಿಮರ್ಶೆಯ ನೋಟದಲ್ಲಿ ಕಾಣಬಹುದು. ಈ ಭವಿಷ್ಯದ ನೋಟದ ಪ್ರಾಮುಖ್ಯತೆ ಹಾಗೂ ನಿಖರತೆಯ ನೋಟ ವಿಮರ್ಶೆಯ ಮುಖ್ಯ ಮಜಲೆನ್ನಿಸಿತು. 


* ಕವಿಯ ಭಾವನೆ ಹಾಗೂ ವಾಸ್ತವತೆ ಎರಡರ ಜೊತೆಗೆ ಅದು ಹೊಂದಿಕೆಯಾಗುವ ರೀತಿಯ ನೋಟ ಕಾವ್ಯದ ವಿಮರ್ಶೆಯಲ್ಲಿ ಮುಖ್ಯವಾಗುತ್ತದೆ ಎನ್ನಿಸಿತು.


ಕವಿತೆಯಲ್ಲಿ ಹೇಗೆ ಭೌದ್ದಿಕತೆ ಹಾಗೂ ಭಾಷೆಯ ಹದವಿರಬೇಕೋ.. ವಿಮರ್ಶೆಯಲ್ಲಿಯೂ ಸಹಾ ಆ ಹದ ಇರಬೇಕು ಎನ್ನಿಸಿತು. 


ಇಲ್ಲಿನ ನವ್ಯಕಾವ್ಯ ಪ್ರಯೋಗದಲ್ಲಿ ಕವಿತೆಗಳ ಹೆಸರುಗಳನ್ನು ಹಾಗೂ ಕವಿಗಳ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಸಾಲುಗಳ ಬದಲಾಗಿ ಕವಿತೆಯ ಶೀರ್ಷಿಕೆಯ ಉಲ್ಲೇಖವಿರುವುದು ಕವಿತೆಯನ್ನು ಹೆಚ್ಚು ಓದಿಕೊಂಡಿರದ ನನ್ನಂತಹವರಿಗೆ ನಿಧಾನಗತಿಯ ಓದಿನ ಅನುಭವ ಮಾಡಿಸುತ್ತದೆ. ಏಕೆಂದರೆ, ಆ ಕವಿತೆಗಳನ್ನು ಓದದೆ ಆ ಭಾವಗ್ರಹಣ ಕಷ್ಟ. ಕವಿತೆಯನ್ನು ಓದಿಕೊಂಡ ನಂತರವಷ್ಟೇ.. ಅದು ಸ್ಪಷ್ಟವಾಗುತ್ತದೆ. ಕೆಲವು ಕಡೆ ಕವಿತೆಗಳ ಸಾಲುಗಳ ನೇರ ಉಲ್ಲೇಖವಿದೆ. ಅಂತಹಾ ಓದು ಸರಾಗವಾಯಿತು ಎನ್ನಿಸಿತು. ಗದ್ಯ ಹಾಗೂ ಕಾವ್ಯದ ವಿಮರ್ಶೆಗಳೆರಡೂ ಎಷ್ಟು ವಿಭಿನ್ನ ಓದಿನ ಅನುಭವ ನೀಡುತ್ತವಲ್ಲವಾ ಎನ್ನಿಸಿತು. ಸಾಕಷ್ಟು ಸಮಯಾವಕಾಶ ನೀಡಿ, ಇಂತಹಾ ವಿಭಿನ್ನ ಓದಿಗೆ ಕಾರಣರಾದ ವೀಣಾ ಮೇಡಂಗೆ ಧನ್ಯವಾದಗಳು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ