ಪುಸ್ತಕದ ಶೀರ್ಷಿಕೆ : ಆಕಾಶಕ್ಕಿಟ್ಟ ಏಣಿ
ಲೇಖಕರು : ಹೆಚ್. ಜಿ. ರಾಧಾದೇವಿ
ಪ್ರಕಾಶಕರು : ಹೇಮಂತ ಸಾಹಿತ್ಯ
ಪ್ರಥಮ ಮುದ್ರಣ : 1998
ಪುಟಗಳು : 214
'ಲೇಖನಿ ಖಡ್ಗಕ್ಕಿಂತ ಹರಿತ' ಎಂಬ ಜನಜನಿತ ಮಾತು ಸತ್ಯವೇ. ಅದರಲ್ಲೂ ಹೆಣ್ಣೊಬ್ಬಳು ತನ್ನ ಭಾವನೆಗಳನ್ನು ಹಂಚಿಕೊಳ್ಳಲು, ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲು, ತಾನು ಬದುಕದ ತನ್ನ ಕನಸಿನ ಬದುಕನ್ನು, ಆದರ್ಶಗಳನ್ನು ಹೀಗೆ ಏನೆಲ್ಲವನ್ನೂ ತನ್ನ ಅಕ್ಷರಗಳ ಮೂಲಕ ಬಿಚ್ಚಿಡಬಲ್ಲಳು. ಲೇಖಕಿಯರ ಸಾಹಿತ್ಯದ ಕುರಿತು ಕೇವಲ ಅವರು 'ಅಡುಗೆ ಮನೆ ಸಾಹಿತ್ಯ'ಕ್ಕೆ ಸೀಮಿತ ಎನ್ನುವ ಕುಹಕದ ಮಾತುಗಳನ್ನಾಡುವವರೂ ಕಡಿಮೆಯೇನಿಲ್ಲ. ಇದೆಲ್ಲದರ ಮೇಲೆ ಬೆಳಕು ಚೆಲ್ಲುವ ಹಾಗೂ ಲೇಖಕಿಯರ ಆರ್ಥಿಕ ಪರಿಸ್ಥಿತಿ ಕುರಿತು ಬೆಳಕು ಚೆಲ್ಲುವ ಪಾತ್ರವನ್ನು ಹೆಚ್.ಜಿ. ರಾಧಾದೇವಿಯವರ 'ಆಕಾಶಕ್ಕಿಟ್ಟ ಏಣಿ' ಕಾದಂಬರಿಯಲ್ಲಿ ಕಾಣಬಹುದಾಗಿದೆ.
ಹವ್ಯಾಸ ಮಾತ್ರವಲ್ಲದ.. ಬದಲಾಗಿ ಬರಹವನ್ನೇ ವೃತ್ತಿಯಾಗಿಸಿಕೊಂಡ ಲೇಖಕಿಯರ ಬದುಕು ಸುಲಭದ್ದಲ್ಲ. ಮನೆವಾಳ್ತೆ ಸುಧಾರಿಸಿಕೊಂಡು, ತಾಯಿ, ಪತ್ನಿ, ಅತ್ತೆ, ಸೊಸೆ ಹೀಗೆ ಎಲ್ಲಾ ಪಾತ್ರಗಳನ್ನೂ ನಿರ್ವಹಿಸುತ್ತಾ ಅದರೊಟ್ಟಿಗೆ ಬರಹವನ್ನು ಕೂಡಾ ಮುಂದುವರಿಸಿಕೊಂಡು ಹೋಗಬೇಕು. ಇಲ್ಲವೇ.. ಅದಕ್ಕೊಂದು ಪರಿಹಾರ ಹುಡುಕಬೇಕು. ಇಂತಹಾ ಪರಿಸ್ಥಿತಿಯಲ್ಲಿ ಲೇಖಕಿ ರಾಜೇಶ್ವರಿಯವರ ಮನೆಗೆ ಕಾಲಿಟ್ಟು ಹೊಂದಿಕೊಂಡು ಅದೇ ಪರಿಸರದಲ್ಲಿ ತನ್ನ ಹೊಸ ಘನತೆಯನ್ನು ಸೃಷ್ಟಿಸಿಕೊಂಡು ಲೇಖಕಿಯಾಗಿದ್ದು ಅವರ ಗಂಡನ ಅಣ್ಣನ ಮಗಳು ರಾಧಾ.
ರಾಧಾ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಹೆಣ್ಣುಮಗಳು. ಈಕೆಯೇ ಹಿರಿಯವಳು. ಅವಳ ತಂಗಿ ಗೋದಾ ಹಾಗೂ ಇಬ್ಬರು ತಮ್ಮಂದಿರು. ರಾಧಾ ಹೊಲಿಗೆ ಕೆಲಸ ನಿರ್ವಹಿಸುತ್ತಾ.. ತಾಯ್ತಂದೆಯರಿಗೆ ನೆರವಾಗುತ್ತಾ.. ಇರುವ ಸಂದರ್ಭದಲ್ಲಿ ಚಿಕ್ಕಮ್ಮನ ಮನೆಗೆ ಸಹಾಯಕಿಯಾಗಿ ಹೋಗುವ ಸಂದರ್ಭ ಬರುತ್ತದೆ. ಅದನ್ನೂ ಆಕೆ ಸಕಾರಾತ್ಮಕವಾಗಿಯೇ ತೆಗೆದುಕೊಳ್ಳುತ್ತಾಳೆ.
ರಾಧಾ ತಂಗಿ ಗೋದಾ ಕೂಡಾ ಲೇಖಕಿಯೇ.. ಆದರೆ, ಇಬ್ಬರ ಕನಸು, ನಡೆ- ನುಡಿಗಳಲ್ಲಿ ವ್ಯತ್ಯಾಸ. ಒಂದೇ ತಾಯಿಯ ಮಕ್ಕಳಲ್ಲಿಯೂ ಬಹಳಷ್ಟು ವ್ಯತ್ಯಾಸ. ಗೋದಾ ಕಾಲೇಜು ಮ್ಯಾಗಜೀನ್ ಒಂದಕ್ಕೆ ಕಥೆ ಬರೆದು ಯುವ ಲೇಖಕಿ ಎಂದು ಗುರುತಿಸಿಕೊಂಡು ಅಲ್ಲಿಂದ ವಿಮರ್ಶಕ ಸುಬ್ರಮಣ್ಯನ ಗರಡಿಯಲ್ಲಿ ಪಳಗಲು ಹೊರಟವಳು. ಸ್ನೇಹಿತೆಯ ಮಾವ ಸುಬ್ರಹ್ಮಣ್ಯನ ಮಾರ್ಗದರ್ಶನದಲ್ಲಿ ಅವಳ ತಲೆಯಲ್ಲಿ ಕೂತದ್ದೆಂದರೆ.. ಕಥೆ ಅಥವಾ ಕಾದಂಬರಿಯಲ್ಲಿ ಸೀರೆ, ಒಡವೆಗಳ ಕುರಿತು ಹೆಚ್ಚಿನ ಮಾಹಿತಿ ಇರಬಾರದು. ಮನಸ್ಸುಗಳ ಒಳತೋಟಿ ಕತೆಯಾಗಿ ದಾಖಲಾಗಬೇಕು. ಒಂದು ಪುಟ ಬರೆಯಲು ಸಾಕಷ್ಟು ಗ್ರಂಥಗಳ ಅಧ್ಯಯನ ಮಾಡಿರಬೇಕು. ಹೀಗೆ.. ಆದರೆ, ವಿಪರ್ಯಾಸವೆಂದರೆ.. ಹೀಗೆ ಗೋದಾ ಬರೆದ ಕತೆಗಳು ತೆಗೆದುಕೊಂಡ ಸಮಯವೂ ಹೆಚ್ಚು. ಎರಡು ವರ್ಷಕ್ಕೊಮ್ಮೆ ಕಾದಂಬರಿ.. ಜೊತೆಗೆ, ಅವರ ಬರಹ ಜನಸಾಮಾನ್ಯರಿಗೆ ನಿಲುಕದ್ದು. ಸಾಹಿತ್ಯದಿಂದ ಬರುವ ಆದಾಯಕ್ಕಿಂತ ಮಾಡುವ ಖರ್ಚು ಹೆಚ್ಚೇ ಎನ್ನಿಸಿತು.
ಅದೇ ಇದಕ್ಕೆ ವೈರುಧ್ಯ ರಾಜೇಶ್ವರಿ ಹಾಗೂ ರಾಧಾರ ಬರವಣಿಗೆ ಕುರಿತ ನಿಲುವು ಜನಸಾಮಾನ್ಯರಿಗೆ ಅರ್ಥವಾಗುವಂತಹಾ, ಜನಸಾಮಾನ್ಯರಿಗೆ ಲಿಂಕ್ ಆಗುವ ರೀತಿಯಲ್ಲಿಯೇ ಅವರು ಓದುವಂತಹಾ ಸಾಹಿತ್ಯ. ಜೊತೆಗೆ, ಅದರ ಜೊತೆಗೆ ನೀಡುವ ಸಾಮಾಜಿಕ ಸಂದೇಶ. ಮನರಂಜನೆ ಜೊತೆಗೆ ಮನಮುಟ್ಟುವ ಸಂದೇಶ. ಅಷ್ಟೇ ಅಲ್ಲ.. ಬರವಣಿಗೆಯ ಹರಿವು ಕೂಡಾ ಸರಾಗ. ಜನರು ಮೆಚ್ಚುವಂತಹಾ ಸಾಹಿತ್ಯ. ಅಲ್ಲದೇ, ರಾಧಾ ಬರೆದದ್ದು ವರ್ಷಕ್ಕೆ ಹನ್ನೆರಡು ಕಾದಂಬರಿಗಳು. ರಾಜೇಶ್ವರಿಯ ಕೆಲ ಕಾದಂಬರಿಗಳು ಸಿನಿಮಾ ಆಗಿದ್ದವು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೀಗೆ.. ಅಲ್ಲದೆ, ಸಂಭಾವನೆ ಹೆಚ್ಚಲ್ಲದಿದ್ದರೂ.. ತಮ್ಮ ಅಗತ್ಯತೆಗಳನ್ನು ಪೂರೈಸಿಕೊಂಡು ಮತ್ತೊಬ್ಬರಿಗೂ ನೆರವಾಗುವಷ್ಟು.
ಗೋಧಾ ರಾಜೇಶ್ವರಿಯಂತಹವರ ಸಾಹಿತ್ಯವನ್ನು 'ಅಡುಗೆ ಮನೆ ಸಾಹಿತ್ಯ'ಕ್ಕೆ ಹೋಲಿಸಿದರೆ ರಾಜೇಶ್ವರಿ ಸುಬ್ರಹ್ಮಣ್ಯ ವಿಮರ್ಶಿಸಿದ ಸಾಹಿತ್ಯವನ್ನು 'ಗಟಾರದ ಸಾಹಿತ್ಯ' ಎನ್ನುತ್ತಾರೆ. ಇಂದಿನ ದಿನಗಳಲ್ಲಿ ಈ ಎರಡೂ ರೀತಿಯ ಸಾಹಿತ್ಯಗಳೂ ಇಲ್ಲದಿಲ್ಲ..
ಗೋದಾ ಲೇಖಕಿಯಾದರೂ ಅವಳ ಸಂಭಾವನೆ ಅವಳಿಗೆ ತಲುಪಿರುವುದಿಲ್ಲ. ಅಷ್ಟೇ ಅಲ್ಲ.. ಅವಳ ರೀತಿ ಬರೆದ ಎಷ್ಟೋ ಜನರ ಅಭಿಪ್ರಾಯ ಕೂಡಾ ಅಂತಹದ್ದೇ.. 'ನದಿ' ಪತ್ರಿಕೆಗೆ ಬರೆದಿದ್ದ ಇತರ ಲೇಖಕಿಯರು ಸಂಭಾವನೆಯ ಕನಸು ಕಾಣುತ್ತಿರಲಿಲ್ಲ. ಕಾರಣ, ಬರವಣಿಗೆ ಅವರ ಹವ್ಯಾಸವಾಗಿತ್ತು. ಆದರೆ, ಗೋದಾಳ ಪರಿಸ್ಥಿತಿಯೇ ವಿಭಿನ್ನ. ಅವಳು ಲೇಖಕಿಯಾಗಬೇಕೆಂದು ತನ್ನ ಓದನ್ನೇ ಮೊಟಕುಗೊಳಿಸಿದವಳು. ಎಲ್ಲರಿಗೂ ರಾಜೇಶ್ವರಿಯವರ ಹಾಗೆ ನಸೀಬು ಇರುವುದಿಲ್ಲ ಎಂಬುದನ್ನು ಅರಿಯದವಳು.
ಇಲ್ಲಿ ಯುವ ಲೇಖಕಿ ಹಾಗೂ ಪ್ರಬುದ್ಧ ಲೇಖಕಿಯ ಮನಸ್ಥಿತಿ ಹಾಗೂ ಅನುಭವದ ನುಡಿಗಳನ್ನು ಸಹಾ ಗಮನಿಸಬಹುದು. ರಾಧಾಳ ಬರವಣಿಗೆಗೆ ಪರಿಸರ, ಪರಿಕರಗಳನ್ನು ಒದಗಿಸಿಕೊಟ್ಟು ಅವಳನ್ನು ಮುಂಚೂಣಿಗೆ ತರುವುದರಲ್ಲಿ ರಾಜೇಶ್ವರಿ ಪಾತ್ರ ಹಿರಿದಾದ್ದು. ರಾಧಾ ಮದುವೆ ನಿಶ್ಚಯವಾಗುವವರೆಗೂ ಚಿಕ್ಕಮ್ಮನ ಮನೆಯಲ್ಲಿ ಆಕೆಗೆ ಸಹಾಯಕಿಯಾಗಿರಲು ಬಂದವಳು.
ಆದರೆ, ರಾಧಾಳ ಮದುವೆ ನಿಶ್ಚಯವಾದಾಗ ವರ ಹಾಕುವ ಒಂದು ಷರತ್ತು ಆಕೆ ಬರಹದ ಕಾಯಕವನ್ನು ಕೈಬಿಡಬೇಕೆಂದು. ಬಹುಶಃ, ರಾಧಾಳಿಗೆ ಮಾತ್ರ ಈ ಆಯ್ಕೆ ನೀಡಿದ್ದರೆ ಅಥವಾ ಈಗಿನ ಸ್ವಾಭಿಮಾನಿ ಹೆಣ್ಣು ಮಕ್ಕಳಿಗೆ ಅಥವಾ ಗೋದಾಳಿಗೆ ಆಯ್ಕೆ ನೀಡಿದ್ದರೆ ಅದನ್ನು ಖಂಡಿತಾ ಒಪ್ಪುತ್ತಿರಲಿಲ್ಲ. ಒಂದು ವರ್ಷದಲ್ಲಿ ಹನ್ನೆರಡು ಕಾದಂಬರಿ ಬರೆದು ಕೊಂಚ ಹಣ, ಜನಪ್ರಿಯತೆ ಗಳಿಸಿದ್ದವರು ಅದನ್ನು ಬಿಟ್ಟು ಹಿಂದೆ ಸರಿಯುವುದು ಸುಲಭದ ವಿಚಾರವಲ್ಲ. ಆದರೆ, ರಾಜೇಶ್ವರಿ ನೀಡಿದ ಸಲಹೆ ಹವ್ಯಾಸಕ್ಕಿಂತ ಸಂತಸದ, ನೆಮ್ಮದಿಯ ಬದುಕು, ಸಾಂಸಾರಿಕ ಬದುಕು. ಅದರಿಂದ ಹಣ ಬಂದರೂ.. ತಾನು ಹಾಗೂ ತನ್ನ ಗಂಡ ಒಳ್ಳೆಯ ಸಂಬಳ ತೆಗೆದುಕೊಳ್ಳುತ್ತಿದ್ದರೂ ಅದಕ್ಕೆ ಎಷ್ಟು ಸಮಯ ಬೇಕಾಯಿತು ಎಂಬುದನ್ನು ಹೇಳುತ್ತಾರೆ. ಒಮ್ಮೆ ಇದು ರಾಜೇಶ್ವರಿಯವರು ರಾಧಾ ತನ್ನ ಪ್ರತಿಸ್ಪರ್ಧಿಯಾಗಬಾರದೆಂದು ಹೀಗೆ ಮಾಡಿದರಾ ಎಂದೆನಿಸಿದರೂ.. ಹಿರಿಯರಾಗಿ, ಮನೆಯ ಪರಿಸ್ಥಿತಿಯನ್ನು ಪರಿಗಣಿಸಿ ನೀಡಿದ ಸಲಹೆ ತಪ್ಪಲ್ಲ ಎನ್ನಿಸುತ್ತದೆ. ಎಲ್ಲರಿಗೂ ರಾಜೇಶ್ವರಿಯವರ ಮನೆಯ, ಸಂಸಾರದ ವಾತಾವರಣವೇ ಸಿಗಲಾರದಲ್ಲ..ವಾಸ್ತವದ ಚಿತ್ರಣವೂ ಇದೆ ಎನ್ನಿಸಿತು. ಹೀಗೆ, ಕೆಲವು ಕಾದಂಬರಿ, ಕಥೆಗಳನ್ನು ಬರೆದು ನೇಪಥ್ಯಕ್ಕೆ ಸರಿದ ಕೆಲವು ಲೇಖಕಿಯರ ನೆನಪಾಗುತ್ತದೆ.
ಆದರೆ, ರಾಧಾ ರಾಜೇಶ್ವರಿಯವರ ಸಲಹೆಗೆ ಒಪ್ಪುತ್ತಾಳಾ..? ವಿವಾಹದ ಕನಸು ಕಂಡ ಹುಡುಗಿ ಒಳ್ಳೆಯ ಸಂಬಂಧ ಬಂದಾಗ ಅದನ್ನು ತೊರೆದು ಇತ್ತೀಚಿನ ತನ್ನ ಹವ್ಯಾಸವನ್ನು ಮುಖ್ಯವೆಂದು ಪರಿಗಣಿಸಿ.. ಜನಪ್ರಿಯತೆಗೆ ಮಾರು ಹೋದಳಾ..?
ಇತ್ತ ಗೋದಾ ಪರಿಸ್ಥಿತಿ ಏನಾಯಿತು..? ಅವಳಿಗೆ ಬರಬೇಕಾಗಿದ್ದ ಸಂಭಾವನೆ ಎಲ್ಲಿ ಹೋಯಿತು ಎಂಬುದನ್ನು ಹುಡುಕಿ ಹೊರಟವಳಿಗೆ ತಿಳಿದದ್ದೇನು..? ಗೋದಾ ವಿವಾಹದ ಪ್ರಯತ್ನದಲ್ಲಿ ಅವಳಿಗೆ ಮುಳುವಾದದ್ದೇನು..?
ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಹೆಚ್. ಜಿ. ರಾದಾದೇವಿಯವರ ' ಆಕಾಶಕ್ಕಿಟ್ಟ ಏಣಿ ' ಕಾದಂಬರಿಯನ್ನು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ