ಶನಿವಾರ, ಏಪ್ರಿಲ್ 25, 2026

ಆಹುತಿ (ಪುಸ್ತಕ ಯಾನ - 313)


ಪುಸ್ತಕದ ಶೀರ್ಷಿಕೆ : ಆಹುತಿ

ಲೇಖಕರು : ಅನುಷ್ ಎ ಶೆಟ್ಟಿ

ಪ್ರಕಾಶಕರು : ಅನುಗ್ರಹ ಪ್ರಕಾಶನ

ಪ್ರಥಮ ಮುದ್ರಣ : 2013

ಮೂರನೇ ಮುದ್ರಣ : 2020 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 151

ಬೆಲೆ : 100 ರೂ.


ಆಹುತಿ ಅನುಷ್ ಶೆಟ್ಟಿಯವರ ಮೊದಲ ಪುಸ್ತಕ. ಇದು ಸತ್ಯ ಘಟನೆಗಳ ಸುತ್ತ ಹೆಣೆಯಲಾದ ಕಾಲ್ಪನಿಕ ಕಥೆ. ಕಾದಂಬರಿಯಲ್ಲಿ ಬರುವ ಸನ್ನಿವೇಶಗಳು ನಾಗರಹೊಳೆ, ಹುಣಸೂರು ಮತ್ತು ಮೈಸೂರಿನಲ್ಲಿ ಜರುಗಿರುವ ಯಾವುದೋ ಕಾಲಘಟ್ಟದ ನೈಜ ಘಟನೆಗಳೇ ಎಂದು ಲೇಖಕರೇ ಹೇಳುತ್ತಾರೆ.


ಪತ್ರಿಕೋದ್ಯಮದಲ್ಲಿ "ಟುಡೇಸ್ ನ್ಯೂಸ್ ಪೇಪರ್ ಈಸ್ ಟುಮಾರೋಸ್ ವೇಸ್ಟ್ ಪೇಪರ್" ಎಂಬ ವ್ಯಾಖ್ಯಾನವಿದೆ. ಆದರೆ, ಒಂದು ದಶಕಕ್ಕೂ ಹಳೆಯ ಪತ್ರಿಕೆಗಳ ಸಾಕ್ಷಾಧಾರಗಳಿಂದ.. ಅರಣ್ಯ ಇಲಾಖೆ ಸುಮಾರು 30 ವರ್ಷಗಳ ಹಿಂದೆ ಇದ್ದ ಸ್ಥಿತಿ ಹಾಗೂ ಕಾಡುಗಳ್ಳರು ಅದರಿಂದ.. ಅರಣ್ಯವನ್ನೇ ದುರ್ಬಲಗೊಳಿಸುತ್ತಾ ಹೋದ ನಂತರ ಸರ್ಕಾರ ಎಚ್ಚರವಾಗಿ ಅದನ್ನು ಪ್ರಬಲಗೊಳಿಸುತ್ತಾ ಹೋದ ಕಥೆ ಇಲ್ಲಿದೆ. ಮೈಸೂರಿನ ದಿನಪತ್ರಿಕೆಯಾದ 'ಪ್ರಜಾನುಡಿ' ನಾಗರಹೊಳೆಯಲ್ಲಿ ನಡೆಯುತ್ತಿದ್ದ ಕಾಡುಗಳ್ಳತನದ ಪ್ರಕರಣವೊಂದನ್ನು ಬಯಲು ಮಾಡಿತು. ಅದರ ನೇತೃತ್ವ ವಹಿಸಿದ್ದು ಅದೇ ಪತ್ರಿಕೆಯ ವರದಿಗಾರ ಹನಗೋಡು ನಟರಾಜ್. ಅವರೇ ಹಿಂದಿನ ದಿನಪತ್ರಿಕೆಗಳನ್ನು ಕೊಟ್ಟು.. ಕಾಡುಗಳ್ಳರೊಂದಿಗಿನ ಜಟಾಪಟಿಯ ಅನುಭವಗಳನ್ನು ಲೇಖಕರೊಡನೆ ಹಂಚಿಕೊಂಡಿದ್ದಾರೆ. ಅದೇ ಮಾಹಿತಿಗಳನ್ನು ಕಥೆಯಲ್ಲಿಯೂ ಬಳಸಿರುತ್ತಾರೆ. 


ಇದರ ಜೊತೆಜೊತೆಗೆ ಹಳೇ ಹುಣಸೂರಿನ ಜನರ ಜೀವನಶೈಲಿ, ಯುವಕರಲ್ಲಿದ್ದ ಉತ್ಸಾಹವನ್ನು ತೋರಿಸುವ ಪ್ರಯತ್ನದ ಜೊತೆಗೆ ನಾಗರಹೊಳೆಯ ಕಾಡುವಾಸಿಗಳು ಕೌಶಲ್ಯಯುಕ್ತರಾಗಿದ್ದ ಅವರನ್ನು ಬೇರೆಯ ತರಹದಲ್ಲಿ ಬಳಸಿಕೊಂಡಂತಹ ಚಿತ್ರಣವೂ ಇದೆ.


ಲೇಖಕರ ತಂದೆ ಹಾಗೂ ಪತ್ರಕರ್ತ ನಟರಾಜ್ ರವರ ಜೊತೆ ನಾಗರಹೊಳೆಗೆ ಹೋಗಿದ್ದಾಗ ಇವರು ಡ್ರೈವ್ ಮಾಡುತ್ತಿದ್ದರಂತೆ. ಆದರೆ, ಗಮನ ಮಾತ್ರ ಇವರಾಡುತ್ತಿದ್ದ ಮಾತುಗಳ ಮೇಲೆಯೇ ಇತ್ತು. ಹೀಗೆ ಅವರು ಮಾತನಾಡಿಕೊಂಡ ಕೆಲವು ಸಂಗತಿಗಳು ಆಶ್ಚರ್ಯವನ್ನುಂಟು ಮಾಡಿ.. ಆ ಸಂಗತಿಗಳ ಬೆನ್ನು ಬಿದ್ದು ಮಾಹಿತಿ ಕಲೆಹಾಕಿ ಬರೆಯತೊಡಗಿದ ನಂತರ ಅದು ಈ ಕಾದಂಬರಿ ರೂಪಕ್ಕೆ ಬಂದಿದೆ. ಆದರೆ, ಶೈಲಿಯಲ್ಲಿಯೂ ನನಗೆ ಇದು ಮೊದಲ ಕಾದಂಬರಿ ಎನ್ನುವಂತಹ ಅನುಭವ ನೀಡಲಿಲ್ಲ. ಕಥೆಯನ್ನು ರೋಚಕವಾಗಿ ಯಾವ ಹಂತದಲ್ಲಿಯೂ ಬಿಟ್ಟುಕೊಡದಂತೆ ಹಾಗೂ ಊಹಿಸಲು ಕಷ್ಟವಾಗುವಂತೆಯೇ ಹೆಣೆದಿದ್ದಾರೆ.


ಹಳೇ ಹುಣಸೂರಿನಲ್ಲಿ 25 ವರ್ಷ ಸುಮಾರಿನ ಸುಮಾರು 20 ಯುವಕರ ಗುಂಪಿತ್ತು. ಅವರುಗಳು ಹೇಳಿಕೊಂಡಿರುವಂತಹಾ ಮಹಾನ್ ಕಾರ್ಯವನ್ನೇನೂ ಮಾಡುತ್ತಿರಲಿಲ್ಲವಾದರೂ.. ಸ್ಟೋರ್ ಬೀದಿ ಬಾಯ್ಸ್ ಎಂದು ತಮ್ಮನ್ನೇ ತಾವು ಕರೆದುಕೊಂಡು ಹೆಮ್ಮೆಪಡುತ್ತಿದ್ದರು. ಇದರೊಟ್ಟಿಗೆ ಈ ಕ್ರಾಂತಿಕಾರಿ ಬುದ್ಧಿಯ ಹುಡುಗರ ಬದುಕನ್ನು ಇಂಟರೆಸ್ಟಿಂಗ್ ಮಾಡಿದ್ದು ಇವರಿಗಿದ್ದ ಹವ್ಯಾಸ. ಅದೆಂದರೆ ಪ್ರತಿ ಶನಿವಾರ ಮತ್ತು ಭಾನುವಾರವನ್ನು ನಾಗರಹೊಳೆ ಅರಣ್ಯದಲ್ಲಿ ಕಳೆಯುವುದು. ಹೀಗೆ.. ಅವರ ಈ ಅನುಭವವೇ ಒಂದು ರೋಚಕ ಅನುಭವಕ್ಕೆ ಹಾಗೂ ಭೀಕರ ರಾತ್ರಿಗೆ ಸಾಕ್ಷಿಯಾಗುವಂತೆ ಮಾಡುತ್ತದೆ. 


ಹುಣಸೂರಿನಿಂದ ಕೇವಲ ಒಂದು ಗಂಟೆ ಅವಧಿಯ ದೂರದಲ್ಲಿರುವ ನಾಗರಹೊಳೆ ಅರಣ್ಯ ಮೊದಲಿನಿಂದಲೂ ಪ್ರಸಿದ್ಧ ಪ್ರವಾಸಿ ಸ್ಥಳ. ಈ ಕಾಡು ಪ್ರಸಿದ್ಧವಾಗಿರುವುದು ಮುಖ್ಯ ಆಕರ್ಷಣೆಯಾಗಿದ್ದ ಹುಲಿಗಳಿಂದ. ಅಂತೆಯೇ ತೇಗದ ಮರಗಳಿಂದಲೂ.. ಹಾಗಾಗಿ ಟೈಗರ್ ರಿಸರ್ವ್ ಹಾಗೂ ಟಿಂಬರ್ ರಿಸರ್ವ್ ಎಂದು ಇದನ್ನು ಘೋಷಿಸಲಾಗಿದೆ. ಈ ನಾಗರಹೊಳೆಯಿಂದಾಗಿಯೇ ಹುಣಸೂರಿನ ಉದ್ಯಮಗಳು ಬೆಳೆದಿದ್ದಂತೂ ನಿಜವೆನ್ನುತ್ತಾ ಅಲ್ಲಿನ ಊರಿನ ಚಿತ್ರಣವನ್ನು ಕಟ್ಟಿಕೊಡುತ್ತಾರೆ.


ಆದರೆ, ಹೀಗಿರುವಾಗ ಹೆಚ್ಚಾದ ಬೋರ್ವೆಲ್ಗಳು ಮತ್ತು ಮಳೆಯಿಲ್ಲದೆ ಅಂತರ್ಜಲ ಮಟ್ಟ ಕುಸಿದಿದ್ದರಿಂದ ಮನೆಮನೆಗೂ ನೀರು ತಲುಪಿಸುವ ಅಗತ್ಯವಿತ್ತು. ಹೀಗಾಗಿ ಎಲ್ಲಾ ಬೀದಿಗಳಲ್ಲಿಯೂ ಕೆಂಪಣ್ಣನ ನೀರು ತುಂಬಿಕೊಂಡು ಬರುವ ಟ್ರ್ಯಾಕ್ಟರಿಕ್ಕಾಗಿಯೇ ಕಾಯಲಾಗುತ್ತಿತ್ತು. ಬೇರೆ ಬೀದಿಗಳಿಗೆ ನೀರು ಕೊಡಲು ಅವನಿಗೆ ಸಮಸ್ಯೆ ಇಲ್ಲದಿದ್ದರೂ.. ಸ್ಟೋರ್ ಬೀದಿಗೆ ನೀರು ಕೊಡುವುದು ಕಷ್ಟವಾಗಿತ್ತು. ಆದರೆ, ಈ ನೀರಿಗೂ ಮತ್ತು ವಾರಾಂತ್ಯಕ್ಕೂ ಒಂದು ಸಂಬಂಧವೆಂಬಂತೆ ನೀರು ಕಳ್ಳತನ ಶುರುವಾಗಿದ್ದು.. ಯುವಕರು ನಾಗರಹೊಳೆಗೆ ಹೋಗಲು ಸಹಾ ಸಾಧ್ಯವಾಗಿರಲಿಲ್ಲ. ಹಣವೋ.. ಮತ್ತೊಂದೋ ಕಳ್ಳತನವಾಗಿದ್ದರೂ ಗೊತ್ತಾಗುತ್ತಿತ್ತೇನೋ.. ಆದರೆ, ಯಾರಿಗೂ ತಿಳಿಯದಂತೆ ಯಾರು ನೀರು ಕದಿಯುತ್ತಿದ್ದಾರೆಂಬುದನ್ನು ಎಲ್ಲರೂ ತಿಳಿದುಕೊಳ್ಳಲು ಕಾತುರರಾಗಿದ್ದರು. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದರೂ ಆ ನೀರಿನ ಕಳ್ಳನ ಜಾಡು ಸುಲಭವಾಗಿ ಸಿಗಲೇ ಇಲ್ಲ.ಮುಂದೆ ನೀರಿನ ಕಳ್ಳರು ಯಾರು ಎಂದು ತಿಳಿದಾಗಲಂತೂ ನಮಗೆ ಅಚ್ಚರಿ ಮೂಡುತ್ತದೆ.


ನಾಗರಹೊಳೆಯ ಫಾರೆಸ್ಟ್ ರೇಂಜರ್ ಆಗಿದ್ದಿದ್ದು ಅಪ್ಪಯ್ಯ. ಇವನ ಮೇಲೆ ನಾನಾ ರೀತಿಯ ದೂರುಗಳಿದ್ದರೂ.. ಕೆಲವರು ಮಾತ್ರ ಇಂತಹಾ ನಿಷ್ಠಾವಂತ ಅಧಿಕಾರಿಯನ್ನು ತಾವು ಕಂಡೇ ಇಲ್ಲ ಎನ್ನುತ್ತಿದ್ದರು. ಸರ್ಕಾರದ ಹಲವು ಸವಲತ್ತುಗಳನ್ನು ತೋರಿಸಿ ಅವೆಲ್ಲವದರ ಹಣವನ್ನು ತಾನೇ ತಿನ್ನುತ್ತಿದ್ದ. ಇಲ್ಲಿನ ಗಾರ್ಡ್ ಗಳು, ಗನ್ ಮ್ಯಾನ್, ವಾಚರ್, ಗೇಟ್ ಕೀಪರ್ ಗಳಿಗೆ ಸರ್ಕಾರ ಕಳುಹಿಸುತ್ತಿದ್ದ ಹೆಚ್ಚುವರಿ ಸಂಬಳವನ್ನೂ ಇವನೇ ತಿಂದು ತೇಗುತ್ತಿದ್ದ. 


ಸ್ಟೋರ್ ಬೀದಿ ಬಾಯ್ಸ್ ನಾಗರಹೊಳೆ ಕಾಡಿಗೆ ಬರುತ್ತಿದ್ದದ್ದು ನಾಗರಾಜನ ಮೂಲಕವೇ.. ಆದರೆ, ಅಪ್ಪಯ್ಯ ಆತನಿಗೆ "ಕಾಡಿನೊಳಗಡೆ ಯಾರೂ ಹೋಗಬಾರದು, ನೀನೂ ಸಹಾ.." ಎಂದು ಎಚ್ಚರಿಸಿದ್ದ. ಹಾಗಾಗಿ ಹುಡುಗರು ಬಂದಾಗೆಲ್ಲಾ ಒಳಗೆ ಹೋಗಲು ಬಿಡದೆ, ರೇಂಜರ್ನ ಕಣ್ಣಿಗೆ ಬೀಳದಂತೆ ಮೂರ್ಕಲ್ಲು ಚೆಕ್ ಪೋಸ್ಟ್ ನ ಬಳಿಯ ತನ್ನ ವಾಸಗೃಹದಲ್ಲೇ ರಾತ್ರಿ ಕಳೆಯಲು ವ್ಯವಸ್ಥೆ ಮಾಡುತ್ತಿದ್ದ. ಅಷ್ಟಕ್ಕೂ ಅವನು ಹುಡುಗರಿಗೆ ಈ ಸಹಾಯ ಮಾಡುತ್ತಿದ್ದದ್ದೇಕೆ..? ಉಳಿದ ಗಾರ್ಡ್ ಗಳು ಇದಕ್ಕೆ ಹೇಗೆ ಪ್ರತಿಕ್ರಿಯಿಸುತ್ತಿದ್ದರು..? 


ನಾಗರಹೊಳೆಗೆ ಗವರ್ನರ್ ಭೇಟಿ ನೀಡಿ, ಒಂದು ರಾತ್ರಿ ಅಲ್ಲಿನ ಕಾವೇರಿ ಲಾಡ್ಜ್ ನಲ್ಲಿ ತಂಗಿದ್ದರು. ಆಗ ಮೈಸೂರು ಪ್ರಾಂತ್ಯದ ಪತ್ರಕರ್ತರೆಲ್ಲಾ ವರದಿ ಮಾಡಲು ನಾಗರಹೊಳೆಗೆ ತೆರಳಿದ್ದರು. ಹೀಗೆ ಹೋಗಿದ್ದವರಲ್ಲಿ ಪತ್ರಕರ್ತ ಹನಗೋಡು ನಟರಾಜ್ ಕೂಡ ಒಬ್ಬರು. ಅವರು ಕ್ರಾಂತಿಕಾರಿ ಬುದ್ಧಿಯಿಂದ ಏನಾದರೂ ಸಾಧಿಸಲೆಂದೇ ಪತ್ರಿಕೋದ್ಯಮಕ್ಕೆ ಬಂದಿದ್ದರು. ನಾಗರಹೊಳೆಗೆ ಹೊರಟಿದ್ದವರು ಕಿಟಕಿಯ ಮೂಲಕ ಕಾಡನ್ನೇ ನೋಡುತ್ತಾ ಕುಳಿತಿದ್ದರೆ.. ಮೂರ್ಕಲ್ಲು ಚೆಕ್ ಪೋಸ್ಟ್ ದಾಟಿ ಸಾಗುತ್ತಿರುವಾಗ ಅವರಿಗೆ ಕಾಡಿನ ನಡುವೆ ಮರ ನೆಲಕ್ಕುರುಳಿದ್ದು ಕಂಡಿತ್ತು. ನಂತರ, ಫೋಟೋಗ್ರಾಫರ್ ಅನ್ನು ಜೊತೆಗೆ ಕರೆದುಕೊಂಡು ಹೋಗಿ ಅಲ್ಲಿ ಫೋಟೋ ತೆಗೆಯುವಾಗ ಅವರ ಕಣ್ಣನ್ನು ಅವರೇ ನಂಬಲಾಗಲಿಲ್ಲ. ಅಲ್ಲಿ ಮರಗಳ ಮಾರಣಹೋಮವೇ ನಡೆದಿತ್ತು. ಆದರೆ, ಕಳ್ಳರ ಯಾವ ಸುಳಿವೂ ಅಲ್ಲಿರಲಿಲ್ಲ. ಅಪ್ಪಯ್ಯನವರಿಗೆ ಇದನ್ನೇ ಹೋಗಿ ಹೇಳಿದರೆ ಅವರು ನಟರಾಜ್ ಅವರ ಮೇಲೆ ಕೂಗಾಡಿ ಬಾಯಿಗೆ ಬಂದಂತೆ ಬೈದು, ಕ್ಯಾಮೆರಾ ಕೂಡ ಜಪ್ತಿ ಮಾಡಿಸಿದರು. ಫೋಟೋಗ್ರಾಫರ್ ಬಾಬುವಿನ ಬುದ್ಧಿವಂತಿಕೆಯಿಂದ ಉಳಿದ ಫೋಟೋಗಳಿಂದ ಒಂದು ಸಂಕ್ಷಿಪ್ತ ವರದಿ ತಯಾರಿಸಿದರು ನಟರಾಜ್. 


ಗವರ್ನರ್ ನ ಸುದ್ದಿಯ ಬದಲಿಗೆ ಇವರ ಪತ್ರಿಕೆಯಲ್ಲಿ ಮಾತ್ರ ಕಾಡಿನ ಸುದ್ದಿ. ಇದನ್ನು ಪರಿಶೀಲಿಸಲು ಅರಣ್ಯ ಇಲಾಖೆ ಡಿ.ಸಿ.ಎಫ್ ವೇದಾಂತ್ ಅವರನ್ನು ನೇಮಕ ಮಾಡಿತು. ಆದರೆ, ನಟರಾಜ್ ವರದಿ ಮಾಡಿದ ಸುದ್ದಿಗೂ.. ಸ್ಥಳಪರಿಶೀಲನೆಗೆ ಹೋದಾಗ ಸಿಕ್ಕ ನೋಟಕ್ಕೂ ಒಂದಕ್ಕೊಂದು ಸಂಬಂಧವೇ ಇರಲಿಲ್ಲ. ಇದರ ಹಿಂದಿನ ಮರ್ಮವೇನು..? 


ನಟರಾಜರವರು ಸುಮ್ಮನೆ ಕೂರದೆ ಅಲ್ಲಿನ ಬುಡಕಟ್ಟು ಜನಾಂಗದವರನ್ನು ವಿಚಾರಿಸಿದಾಗ ಅಪ್ಪಯ್ಯನ ಮೇಲೆ ಕೋಪವಿದ್ದ ಕಾಳಿಂಗ ಸಮಯಕ್ಕಾಗಿ ಕಾಯುತ್ತಿದ್ದವನು ಇವರಿಗೆ ನೆರವಾಗಿದ್ದ. ಅರಣ್ಯದಂಧೆಯ ವಿರಾಟ್ ದರ್ಶನವಾಗಿದ್ದು  ಆಗಲೇ.. ಕಳ್ಳರನ್ನು ಸಾಕ್ಷಿ ಸಮೇತ ಹಿಡಿಯಬೇಕೆಂದು ಹೊಂಚು ಹಾಕುತ್ತಿದ್ದ ನಟರಾಜ್.. ವೇದಾಂತ್ ರವರಿಗೆ ಮಾಹಿತಿ ನೀಡಿ ಕಾಳಿಂಗ ನೀಡಿದ್ದ ಮಾಹಿತಿಯ ಪ್ರಕಾರ ಅಲ್ಲಿಗೆ ಹೊರಟ ದಿನವೇ ಸ್ಟೋರ್ ಬೀದಿ ಬಾಯ್ಸ್ ಸಹಾ ನಾಗರಹೊಳೆಯ ವಾರಾಂತ್ಯಕ್ಕೆ ಬಂದಿದ್ದರು. ಆದರೆ, ಈ ಬಾರಿ ಅವರು ಚೆಕ್ ಪೋಸ್ಟ್ ನಲ್ಲಿ ಉಳಿಯದೆ ಅನುಮತಿಗಾಗಿ ಅಪ್ಪಯ್ಯನ ಗೆಸ್ಟ್ ಹೌಸ್ ವರೆಗೂ ಹೋಗಿದ್ದರು. 


ಆ ರಾತ್ರಿ ನಡೆದ ಘಟನೆ ಇಡೀ ಕಾಡಿನ ಸ್ವರೂಪವನ್ನೇ ಬದಲಾಯಿಸಿತು. ಕಾಳಿಂಗ ಮತ್ತು ಪುಂಗರಂತಹಾ ಗಿರಿಜನರು ತಮ್ಮ ಕಾಡನ್ನು ಉಳಿಸಿಕೊಳ್ಳಲು ತಮ್ಮ ಕೈಲಾದ ಸಹಾಯ ಮಾಡಿದ್ದರು. ದುರಾಸೆಯ ಅಧಿಕಾರಿ ಅಪ್ಪಯ್ಯನ ಗತಿ ಏನಾಯಿತು..? ಅವನ ದುರಾಸೆಗೆ ಸಿಕ್ಕ ಕಾಡು ಎಷ್ಟೆಲ್ಲಾ ನಾಶವಾಗಿತ್ತು..? ಅಲ್ಲದೆ, ಕಾಡಿನಲ್ಲಿ ನಡೆಯುತ್ತಿದ್ದ ಅವ್ಯವಹಾರಗಳು ಏನು..? ಅವುಗಳನ್ನು ನಡೆಸುತ್ತಿದ್ದವರು ಯಾರು ಅದರ ಹಿಂದಿನ ಮರ್ಮವೇನು..? ತಮಗೆ ಬಂದ ಜೀವಬೆದರಿಕೆಗಳಿಗೆ ಅಂಜದೆ, ಹಣದ ಆಮಿಷಕ್ಕೂ ಲೆಕ್ಕಿಸದೆ.. ಕಾಡಿನಲ್ಲಿ ಪ್ರಾಣ ಒತ್ತೆ ಇಟ್ಟು ವರದಿ ಮಾಡಿದ್ದ ನಟರಾಜರವರಿಗೆ ಸಿಕ್ಕದ್ದಾದರೂ ಏನು..? ಸ್ಟೋರ್ ಬೀದಿ ಬಾಯ್ಸ್ ಇದರಲ್ಲಿ ಯಾವ ಪಾತ್ರ ವಹಿಸಿದ್ದರು..? ಎಲ್ಲವನ್ನೂ ತಿಳಿಯಲು ಓದಿ 'ಆಹುತಿ' ಕಾದಂಬರಿಯನ್ನು.


ಮಲೆನಾಡಿನ ಕಾಡಿಗಿಂತಲೂ ವಿಭಿನ್ನವಾದ ಕಾಡಿನ ನೋಟವನ್ನು ಕಟ್ಟಿಕೊಟ್ಟ ಕಾದಂಬರಿ ಇದು. ಎಷ್ಟಾದರೂ ಕಾಡು ಎಂದರೆ ಸೋಜಿಗವೇ.. ಅದರಲ್ಲಿ ಒಂದು ನೈಜ ಘಟನೆಯನ್ನು ಇಟ್ಟುಕೊಂಡು ಇಡೀ ಅರಣ್ಯ ಇಲಾಖೆಯ ಚಿತ್ರಣದ ಬದಲಾದ ಕಥೆಯನ್ನು ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕರು. ಅನುಷ್ ಅವರ ಬರವಣಿಗೆಯ ಕುರಿತು ಕೇಳಿದ್ದರೂ ಹಾಗೂ ಇವರ ಬೇರೆಯ ಪುಸ್ತಕಗಳನ್ನು ಓದಬೇಕೆನಿಸಿಕೊಂಡಿದ್ದರೂ.. ಕೈಗೆತ್ತಿಕೊಂಡ ಮೊದಲ ಪುಸ್ತಕ ಇದು. ಇವರ ಉಳಿದ ಪುಸ್ತಕಗಳನ್ನು ಓದಬೇಕಿದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ