ಪುಸ್ತಕದ ಶೀರ್ಷಿಕೆ : ಇದು ಕತೆಯಲ್ಲ ಜೀವನ
ಲೇಖಕರು : ವಸುಮತಿ ಉಡುಪ
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಥಮ ಮುದ್ರಣ : 2025
ಪುಟಗಳು : 112
ಬೆಲೆ : 130 ರೂ.
ವಸುಮತಿ ಉಡುಪ ಅವರ 'ಇದು ಕಥೆಯಲ್ಲ ಜೀವನ' ಕಥಾಸಂಕಲನದಲ್ಲಿ ಒಟ್ಟು 9 ಕಥೆಗಳಿವೆ. ಇಲ್ಲಿನ ಕಥೆಗಳು ಕಲ್ಪನೆಗಳಿಗಿಂತ ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿವೆ. ವಸುಮತಿ ಉಡುಪರವರ ಕಥೆಗಳು ಹಾಗೂ ಕಾದಂಬರಿಗಳು ಇಷ್ಟವಾಗುವುದು ಇದೇ ಕಾರಣಕ್ಕೆ. ಇಲ್ಲಿನ ಹಲವು ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇಲ್ಲಿನ ಹೆಚ್ಚಿನ ಕಥೆಗಳು ಇಳಿ ವಯಸ್ಸಿನ ಚಿತ್ರಣವನ್ನು ಕಟ್ಟಿಕೊಡುತ್ತವೆ. ಮಾಗಿದ ಮನಸ್ಸುಗಳೇ ಹೆಚ್ಚು ಜೀವನಾನುಭವವನ್ನು ಹೊಂದಿರುವುದು. ಅಲ್ಲವೇ..? ಹಾಗೆ ಇಲ್ಲಿ ಪಕ್ವವಾದ ಹಲವು ನೋಟಗಳು, ಜೀವನಗಳು ಕಥೆಗಳ ರೂಪದಲ್ಲಿ ನಮ್ಮ ಮುಂದಿವೆ.
ನಂಜು : ಚಂಪಕ ಹಾಗೂ ಕುಮುದಾ ಇಬ್ಬರು ಬಾಲ್ಯದ ಗೆಳತಿಯರು. ಈಗ ಕುಮುದಾ ಸೊಸೆಯ ಬಾಣಂತನಕ್ಕಾಗಿ ಹೋಗಿದ್ದಾಳಾದರೂ.. ಕುಮದನ ಹತ್ತಿರ ಎಲ್ಲವನ್ನು ಹೇಳಿಕೊಳ್ಳುವುದು ಚಂಪಕಳಿಗೆ ರೂಢಿ ಹಾಗೂ ಸಲೀಸು. ಹಾಗೆ ಹೇಳಿಕೊಂಡರೇ ಒಂದು ಬಗೆಯ ಸಮಾಧಾನ. ಬಾಲ್ಯದಿಂದ ಬೆಳೆದು ಬಂದ ಗೆಳೆತನದ ಸಲುಗೆಯಲ್ಲಿ ಇದನ್ನೇ ಮಾತನಾಡಬೇಕು, ಇಷ್ಟೇ ಮಾತನಾಡಬೇಕು, ಹೀಗೆ ಇರಬೇಕು ಎನ್ನುವ ಮಿತಿಗಳಿರಲಿಲ್ಲ. ಕುಮುದಳ ಗಂಡನೇ ಚಂಪಕಳಿಗೂ ಹುಡುಗನನ್ನು ನೋಡಿದ್ದು. ಒಂದೇ ಊರಿಗೆ ಮದುವೆಯಾದ ಮೇಲೆ ಗೆಳೆತನ ಮತ್ತಷ್ಟು ಹೆಚ್ಚಿ ಸಂಬಂಧದಲ್ಲಿಯೂ ಬೆಸೆದಿತ್ತು. ಆದರೆ, ಅಂದು ನಡೆದ ಘಟನೆಯನ್ನು ಕುಮದಳಲ್ಲಿಯೂ ಹಂಚಿಕೊಳ್ಳಲು ಹಿಂಜರಿಯುತ್ತಿದ್ದಳು ಚಂಪಕ. ಅದಕ್ಕೆ ಕಾರಣ ಅದನ್ನು ಹೇಳಿಕೊಳ್ಳಲಾಗದು ಎಂದಲ್ಲ.. ಬದಲಾಗಿ ಹೇಳಿಕೊಂಡ ನಂತರದ ಪರಿಣಾಮ. ಅಷ್ಟಕ್ಕೂ ಆ ಘಟನೆ ಏನು..? ಚಂಪಕಳ ಮನಸ್ಸಿನಲ್ಲಿ ಅದನ್ನು ಯಾವ ರೀತಿಯಲ್ಲಿ ಬಗೆಹರಿಸಿಕೊಳ್ಳಬೇಕೆಂದಿತ್ತು..? ಅವಳ ಆಶಾವಾದ ಎಲ್ಲಿಯವರೆಗೂ ಇತ್ತು..? ನಡುವಯಸ್ಸಿನ ನಂತರವೂ ಕಾಡುವ ಇಂತಹ ಘಟನೆಗಳು ಹೆಣ್ಣಿನ ಮನಸ್ಸಿನಲ್ಲಿ ಎಷ್ಟೆಲ್ಲಾ ತುಮುಲಗಳನ್ನು ಮೂಡಿಸುತ್ತದೆ..? ಓದಿ ನೋಡಿ.
ಹೇಳಲಿಲ್ಲ ಕಾರಣ : ವೆಂಕಟರಾಮಯ್ಯ ಹಾಗೂ ಅಂಬುಜಮ್ಮನಿಗೆ ಮುಖ ಸಣ್ಣವಾಗಿದ್ದಕ್ಕೆ ಕಾರಣ ಮಗ-ಸೊಸೆ ಏಕಾಏಕಿ ಬಂದು ತಾವು ಕೊಂಡ ಅಪಾರ್ಟ್ಮೆಂಟ್ ಗೃಹಪ್ರವೇಶಕ್ಕೆ ಆಹ್ವಾನಿಸಿದ್ದು. ಹಾಗೆಂದು, ಅವರ ನಡುವಲ್ಲಿ ಯಾವುದೇ ವೈಮನಸ್ಸುಗಳಿರಲಿಲ್ಲ. ಮಗನ ಮನೆಯ ಗೃಹಪ್ರವೇಶದ ಸಿಹಿ ಸುದ್ದಿಯು ಅಂಬುಜಮ್ಮನಲ್ಲಿ ಕಹಿತಂದರೆ ವೆಂಕಟರಾಮಯ್ಯನವರ ಮನಸ್ಸಿನಲ್ಲಿ ಬೇರೆಯದ್ದೇ ಆಲೋಚನೆ.
"ಭವಿಷ್ಯ ಎಂದರೇನು..? ನಿಗೂಢ ಅದರ ಬಗ್ಗೆ ಯೋಚಿಸ್ತೀನಿ ಅನ್ನೋದು ನಮ್ಮ ಭ್ರಮೆ, ಹುಚ್ಚುತನ ಅಷ್ಟೇ.." ಎನ್ನುವ ವೆಂಕಟರಾಮಯ್ಯನವರ ಆಲೋಚನಾ ದಾಟಿ ಹಾಗೂ ಮಗನ ಮೇಲಿನ ವ್ಯಾಮೋಹದ ಅಂಬುಜಮ್ಮನ ಜೊತೆಗೆ ವಾಸ್ತವದ ಕಟು ಸತ್ಯದ ಕಥೆ ಇಲ್ಲಿದೆ.
ಐನೂರು ರೂಪಾಯಿ ನೋಟು : ನಂದಿನಿ ತನ್ನ ತಂದೆ ಸತ್ತ ನಂತರ ತಾಯಿಯನ್ನು ಜೊತೆಯಲ್ಲಿಯೇ ಇಟ್ಟುಕೊಂಡಿದ್ದಳು. ಹಳ್ಳಿಯಲ್ಲಿದ್ದವರಿಗೆ ಸಿಟಿಯ ರೀತಿ-ರಿವಾಜುಗಳು ಹೊಂದಿಕೆಯಾಗದೆ, ಎಷ್ಟೋ ಬಾರಿ ಅದರಿಂದಾಗಿ ಇರುಸು-ಮುರುಸಾಗುತ್ತಿತ್ತು ನಂದಿನಿಗೆ. ಒಂದು 500 ರೂಪಾಯಿಯ ನೋಟು ಕಾಣೆಯಾಗಿದ್ದಕ್ಕೆ ಅಮ್ಮ ಪ್ರತಿಕ್ರಿಯಿಸಿದ್ದು ಹೇಗೆ..? ಎಷ್ಟೇ ಹಣವಿದ್ದರೂ ಹಿರಿಯರಿಗೆ ತಾವು ಕೊಡಿಸಿಟ್ಟ ಒಂದೊಂದು ರೂಪಾಯಿಯು ಎಷ್ಟು ಮುಖ್ಯ ಎನ್ನುವುದು ಹಾಗೂ ಅದು ದೊಡ್ಡ ವಿಷಯವೇ ಅಲ್ಲವೆಂದು ತಲೆಕೆಡಿಸಿಕೊಳ್ಳುವ ಕಿರಿಯ ಪೀಳಿಗೆಯ ಮುಖಾಮುಖಿ ಇಲ್ಲಿದೆ.
ಹೊಟ್ಟೆಯೊಳಗಿನ ಗುಟ್ಟು : ಇಳಿವಯಸ್ಸಿನಲ್ಲಿ ಒಬ್ಬರಿಗೊಬ್ಬರು ಆಸರೆಯಾಗುತ್ತಾ.. ಹಾಗೆಯೇ ಬೈದಾಡಿಕೊಳ್ಳುತ್ತಾ.. ಕೋಪ ಮಾಡಿಕೊಳ್ಳುತ್ತಾ ದಾಂಪತ್ಯದಲ್ಲಿ ಮುಂದೆ ಸಾಗುತ್ತಿದ್ದ ದಂಪತಿಗಳ ಏಕೈಕ ಪುತ್ರಿಗೆ ಮದುವೆಯಾಗಿ ಆಕೆಗೂ ಮಕ್ಕಳಾಗಿತ್ತು. ಮಗಳ ಬದುಕಲ್ಲಿ ಯಾವುದೇ ಕೊರತೆ ಇಲ್ಲ ಎಂದು ಅಜ್ಜ-ಅಜ್ಜಿ ನೆಮ್ಮದಿಯಾಗಿರುವಷ್ಟರಲ್ಲಿ ಮೊಮ್ಮಗಳು ಅನ್ಯ ಜಾತಿಯ ಹುಡುಗನೊಂದಿಗೆ ಬದುಕು ಕಟ್ಟಿಕೊಂಡಿದ್ದಳು. ಮಗಳಿಗೂ ಹೇಳದಂತಹ ಗುಟ್ಟೊಂದನ್ನು ಹೊಟ್ಟೆಯಲ್ಲಿಟ್ಟುಕೊಂಡ ಅಜ್ಜ-ಅಜ್ಜಿಯ ಪರಿಸ್ಥಿತಿ ಹೇಗಿತ್ತು..?
ಇದು ಕಥೆಯಲ್ಲ, ಜೀವನ : ಇಳಿಸಂಜೆಯ ವಯಸ್ಸಿನಲ್ಲಿ ಸುಖವೆಂದರೆ.. ಮೊಮ್ಮಕ್ಕಳನ್ನು ಆಡಿಸುತ್ತಾ ಅವರ ಆಟ ಪಾಠ ನೋಡಿ ಸಂಭ್ರಮಿಸುತ್ತಾ ಜೊತೆಗಿರುವುದು ಎಂದುಕೊಳ್ಳುವ ಲೋಕಾರೂಢಿ ಹಾಗೂ ವಾಸ್ತವದ ಸುತ್ತ ಸಾಗುವ ಕಥೆ ಇಲ್ಲಿದೆ. ಗಂಡ-ಹೆಂಡತಿ ಇಬ್ಬರೇ ಇದ್ದ ಮನೆಯಲ್ಲಿ ಎಳೆಯ ಮಗುವನ್ನು ನೋಡಿಕೊಳ್ಳುವವರು ಬೇಕೇ ಬೇಕು. ಅದರಲ್ಲೂ ಅತ್ತೆಯ ಮನೆಯ ಸಹಕಾರವಿಲ್ಲದಿದ್ದವರಿಗೆ.. ತವರಿನ ಬಲ ಇಲ್ಲವಾದರೆ ಗತಿ ಏನು..?! ಹಾಗೆಂದು ಇದ್ದೊಬ್ಬಳು ಮಗಳ ಮನೆಗೆ ಹೋಗಿ ಕೂರುವಷ್ಟಿರಲಿಲ್ಲ ಸಂಧ್ಯಾ. ಹಾಗಾಗಿ ಮೊಮ್ಮಗುವನ್ನು ಇಲ್ಲಿಯೇ ಸಾಕಿಕೊಂಡಿದ್ದರು. ವಾರಕ್ಕೊಮ್ಮೆ ಬರುತ್ತಿದ್ದ ಮಗಳಿಂದ ಮೊಮ್ಮಗುವನ್ನು ಆರೈಕೆ ಮಾಡುವಲ್ಲಿ ಸಾಕಷ್ಟು ಉಪದೇಶ ಸಿಗುತ್ತಿತ್ತು. ಮೂರು ವರ್ಷ ಸಾಕಿದ ಮೊಮ್ಮಗುವನ್ನು ಮಗಳು ಕರೆದುಕೊಂಡು ಹೋಗುವ ಸಂದರ್ಭ. ಪ್ರೀತಿ ಮತ್ತು ಅಸಹಾಯಕತೆ ಒಟ್ಟೊಟ್ಟಿಗೆ ಬೆಸೆದುಕೊಂಡ ಬಂಧದ ಕಥೆ ಇಲ್ಲಿದೆ.
ನೀಲದ ಉಂಗುರ : ಮಗನ ಮನೆಗೆ ಸ್ವಲ್ಪ ದಿನದ ಮಟ್ಟಿಗೆ ಹೋಗಿ ಬಂದ ಪಂಕಜಾಕ್ಷಿಗೆ ತಾವು ಕಳೆದುಕೊಂಡು ಬಂದಿದ್ದರ ಕುರಿತು ಒಳಗೊಳಗೆ ತಳಮಳ. ನೀಲದ ಹರಳಿನ ಉಂಗುರವನ್ನು ಅಲ್ಲಿ ಕಳೆದುಕೊಂಡು ಬಂದಿದ್ದರು. ಕೆಲವರ ರಾಶಿಗೆ ಆಗುವ ನೀಲ.. ಕೆಲವರಿಗೆ ಕೆಟ್ಟದಂತೆ..! ಹಾಗೆಯೇ ಇವರ ಪಾಲಿಗೆ ಅದೃಷ್ಟದ ಸಂಕೇತದಂತಿದ್ದ ನೀಲದ ಉಂಗುರ ಕಳೆದು ಹೋಗಿತ್ತು. ಕೆಲಸದವರಿಗೆ ಹೆಚ್ಚು ಮನ್ನಣೆ ನೀಡುತ್ತಿದ್ದಾಳೆ ಸೊಸೆ ಎಂದುಕೊಂಡವರಿಗೆ ಅಲ್ಲಿಯೂ ಹೇಳಲಾಗಿರಲಿಲ್ಲ. ಆದರೆ, ಮಗನ ಮನೆಯಲ್ಲಿ ಆದ ಕಳ್ಳತನ ಇವರ ಮನಸ್ಸಲ್ಲಿ ಯಾವ ಭಾವನೆ ತಂದಿತು ಹಾಗೂ ನಿಜಕ್ಕೂ ಆಗಿದ್ದೇನು..?
ಸ್ವೀಕೃತ : ವೇದಮ್ಮ ಹಾಗೂ ಮೂರ್ತಿಯವರಿಗೆ ಮಕ್ಕಳಾಗದಿದ್ದರೂ ಯಾರನ್ನು ದತ್ತು ತೆಗೆದುಕೊಳ್ಳಲು ಒಪ್ಪಿರಲಿಲ್ಲ. ಹಾಗೆಂದು, ಬಂಧು-ಬಾಂಧವರನ್ನು ತೀರಾ ಹತ್ತಿರಕ್ಕೆ ಬಿಟ್ಟುಕೊಳ್ಳದ ಮೂರ್ತಿಯವರ ನಿರ್ಧಾರ ತಪ್ಪಾಗೇನೂ ಇರಲಿಲ್ಲ. ಸಹಾಯ ಮಾಡುವಾಗ ತಮ್ಮವರು, ಪರರು ಎಂದು ಭೇದವಿಲ್ಲದೆ ಸಹಾಯ ಮಾಡಿದ್ದವರು ಅವರು. ಮುತ್ತೈದೆ ಸಾವಿಗೆ ಹಂಬಲಿಸುತ್ತಿದ್ದ ವೇದಮ್ಮನವರಿಗಿಂತ ಮೂರ್ತಿಯವರೇ ಮೊದಲು ಹೊರಟಿದ್ದರು. ಆದರೆ, ಅವರ ಸಾವಿನ ನಂತರದ ವಿಲ್ ಮಾತ್ರ ಮನಸ್ಸಿನಲ್ಲಿ ಕಹಿ ಮೂಡಿಸಿತ್ತು. ಮನೆ ಕೆಲಸಕ್ಕೆಂದು ಆಗಿನಿಂದಲೂ ಈತ ಭಾಗಿಯ ಮಗಳು ಕಲಾವತಿಯನ್ನೇ ವಾರಸುದಾರಳೆಂದು ನಮೂದಿಸಿದವರ ಹಿಂದಿನ ಮರ್ಮವೇನಿತ್ತು..? ಅನುಮಾನ ಹಾಗೂ ಮಮತೆಗಳಲ್ಲಿ ಗೆದ್ದದ್ದು ಯಾವುದು..?
ಕಾದಿರುವಳು ಶಬರಿ.. : ದಾನಿಗಳ ಕೊಡುಗೆಯಿಂದ ನಡೆಸಲ್ಪಡುತ್ತಿದ್ದ ವೃದ್ಧಾಶ್ರಮಕ್ಕೆ ಹೊಸದಾಗಿ ದಾಖಲಾದದ್ದು ಜಾನಕಮ್ಮ. ಆಕೆ ಅಲ್ಲಿಗೆ ಬಂದದ್ದೇಕೆ..? ಹೇಗೆ..? ಎನ್ನುವುದಕ್ಕಿಂತಲೂ ಇಲ್ಲಿ ಹೆಚ್ಚು ಕಾಡುವುದು ಶಬರಿಯಂತೆ ಮಗನಿಗಾಗಿ ಕಾದ ಜಾನಕಮ್ಮನ ನಂಬಿಕೆ. ಮಂಜಮ್ಮನೊಡನೆ ತಮ್ಮ ಮನಸ್ಸಿನ ಭಾವವನ್ನೆಲ್ಲ ಹೊರಹಾಕುತ್ತಿದ್ದವರಿಗೆ ತಾವಿದ್ದ ಮನೆಯ ವಿಳಾಸವೂ ನೆನಪಿರಲಿಲ್ಲ. ಹಾಗೆಂದು ಮರೆವಿನ ಕಾಯಿಲೆಯಲ್ಲ. ಬದಲಾಗಿ ಕಾರಣ ಬೇರೆಯೇ ಇತ್ತು. ಶಬರಿಯಂತೆ ಕಾದವಳಿಗೆ ಫಲ ಸಿಕ್ಕಿತೇ..?
ಕಲ್ಲರಳಿ ಹೂವಾಗಿ.. : ಎಷ್ಟೋ ಬಾರಿ ನಾವು ಅಂದುಕೊಂಡದ್ದಕ್ಕಿಂತ ವಿಭಿನ್ನವಾಗಿ ಜೀವನ ನಮ್ಮನ್ನು ರೂಪುಗೊಳಿಸುತ್ತದೆ. ಹಾಗೆಯೆ ನಮ್ಮ ಅಭಿಪ್ರಾಯವನ್ನು ಸಹಾ. ಮೊದ್ದುಮೊದ್ದಾಗಿ ಕೆಲಸಕ್ಕೆಂದೇ ಸೀಮಿತವಾದಂತಿದ್ದ ಚಂದ್ರಿ ಮಲತಾಯಿಯ ಮಮತೆಯ ದೆಸೆಯಿಂದ.. ಮದುವೆಯಾಗುವವರೆಗೂ ದುಡಿಯುತ್ತಲೇ ಇದ್ದಳು. ಶೋಷಣೆಯ ಮತ್ತೊಂದು ಪರಿ ಹೀಗೂ ಇರಬಹುದಾ ಎನ್ನಿಸುತ್ತಿದ್ದಾಗಲೇ ಚಂದ್ರಿಗೆ ಮದುವೆಯಾಗಿತ್ತು. ಮೊದಲ ಮದುವೆಯಲ್ಲಿ ಇಬ್ಬರು ಮಕ್ಕಳಿದ್ದ, ಹೆಂಡತಿ ಇಲ್ಲದಿದ್ದ ವಿದುರನನ್ನು ಮದುವೆಯಾಗಿದ್ದ ಚಂದ್ರಿ ವರ್ಷ ಕಳೆದ ನಂತರ ಅಚಾನಕ್ಕಾಗಿ ಬಂದಿದ್ದಳು. ಹಾಗೆಯೇ ಬದಲಾವಣೆಯೂ ಆಗಿದ್ದಳು.
"ಕೆಟ್ಟದ್ದೆಂದುಕೊಂಡಿದ್ದರ ಮುಸುಕಿನಲ್ಲಿ ಒಳಿತು. ಒಳಿತು ಎಂದುಕೊಂಡಿದ್ದರ ಮುಸುಕಿನಲ್ಲಿ ಕೆಡುಕು ಅಡಗಿರಬಹುದು." ಎಂಬ ಮಾತಿನಲ್ಲಡಗಿದ್ದ ಸತ್ಯದ ಸಾಕ್ಷಾತ್ಕಾರವನ್ನು ತೋರಿದ ಕಥೆ ಇದು.
ಇಲ್ಲಿನ ಕಥೆಗಳಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ನೋವಿನಿಂದ, ಕಷ್ಟದಿಂದ ನೊಂದು-ಬೆಂದರೂ ಸೋತವರಲ್ಲ. ಬದಲಾಗಿ ತಮ್ಮದೇ ರೀತಿಯಲ್ಲಿ ಪ್ರತಿರೋಧಿಸುತ್ತಾ.. ಕಟು ಸತ್ಯವನ್ನು ಅರಗಿಸಿಕೊಳ್ಳುತ್ತಾ.. ವಾಸ್ತವವನ್ನು ಒಪ್ಪಿಕೊಂಡು ಆಲೋಚನೆಯಿಂದಲೂ ದೊಡ್ಡವರಾಗಿ ನಿಲ್ಲುವ ಹಲವು ಚಿತ್ರಣಗಳು ಅಭಿವ್ಯಕ್ತವಾಗಿರುವ ಒಂದೊಳ್ಳೆ ಕಥಾ ಸಂಕಲನ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ