ಶನಿವಾರ, ಏಪ್ರಿಲ್ 25, 2026

ಕನ್ನಡದಲ್ಲಿ ಬರೆದ / ಬರೆಯುತ್ತಿರುವ ನನ್ನ ಇಷ್ಟದ ಲೇಖಕರು : ' ಸಾಯಿಸುತೆ '


ಕನ್ನಡದಲ್ಲಿ ಬರೆದ / ಬರೆಯುತ್ತಿರುವ ನನ್ನ ಇಷ್ಟದ ಲೇಖಕರು : ' ಸಾಯಿಸುತೆ '


ಸಾಯಿಸುತೆ ಅಮ್ಮನವರವರ ಕೃತಿಗಳನ್ನು ಓದಿದ ನಂತರವೂ ಹಲವಾರು ಲೇಖಕ ಹಾಗೂ ಲೇಖಕಿಯರು ಇಷ್ಟವಾಗಿದ್ದಾರಾದರೂ.. ಅಂದಿನಿಂದ ಇಂದಿನವರೆಗೆ ಬದಲಾಗದೆ ಉಳಿದ ನನ್ನಿಷ್ಟದ ಲೇಖಕಿ ಅವರು.  ಕೆಲವು ಇಷ್ಟವಾದ ಲೇಖಕ/ ಲೇಖಕಿಯರ ಕೃತಿಗಳನ್ನು ಒಂದರ ಮೇಲೊಂದರಂತೆ ಓದುತ್ತಾ ಇದ್ದಾಗ ಏಕತಾನತೆಯ ಅನುಭವವಾಗಿದ್ದಿದೆ. ನಿರಂತರವಾಗಿ ಅವರದ್ದೇ ಕೃತಿಗಳನ್ನು ಓದುತ್ತಿರುವಾಗಲೋ ಅಥವಾ ಸಾಕಷ್ಟು ಪುಸ್ತಕಗಳು ಬಂದಾಗ ಅದರಲ್ಲಿ ವಿಷಯ ಅಥವಾ ಕಥಾವಸ್ತುವಿನಿಂದ ಕೆಲವೊಮ್ಮೆ ಒಂದೇ ರೀತಿ ಎಂದೆನಿಸಬಹುದೇನೋ.. ಆದರೆ, ನನಗೆ ಸಾಯಿಸುತೆಯವರ ಕೃತಿಗಳ ವಿಚಾರದಲ್ಲಿ ಎಂದಿಗೂ ಈ ಅನುಭವವಾಗಲಿಲ್ಲ. 


ನಾನು ಮೊದಲಿಗೆ ಓದಿದ ಅವರ ಕಾದಂಬರಿ ಅಗ್ನಿದಿವ್ಯ. ಆ ಕಾದಂಬರಿಯ ಮೂಲಕ ಅವರ ಉಳಿದ ಕಾದಂಬರಿಗಳ ಲೋಕಕ್ಕೆ ಕಾಲಿಟ್ಟ ನನಗೆ ಪ್ರತಿಯೊಂದು ಕಾದಂಬರಿಯಲ್ಲೂ ವಿಭಿನ್ನವಾದ ಓದಿನ ಅನುಭವ ದಕ್ಕಿದೆ. ಗ್ರಂಥಾಲಯದಿಂದ ತಂದು ಓದಿದ್ದ ಕೃತಿಗಳೇ ಹೆಚ್ಚಿದ್ದು.. ಇತ್ತೀಚಿಗೆ ನನ್ನ ಸಂಗ್ರಹ ಸೇರುತ್ತಿರುವ ಅವರ ಪುಸ್ತಕಗಳು ಅವರ ಓದಿನ ವಿಸ್ತಾರತೆ ಹಾಗೂ ಆಲೋಚನೆಯ ಅಗಾಧವ್ಯಾಪ್ತಿಯನ್ನು ನಮಗೂ ದಾಟಿಸುತ್ತಿದೆ.


ಲೈಟ್ ರೀಡಿಂಗ್ ಗೆ ಅಥವಾ ಓದಿನ ಮೊದಲ ದಿನಗಳಿಗಾಗಿ ಅವರ ಕೃತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಹಾಗೆಯೇ.. ಕೆಲವೊಮ್ಮೆ ಆತ್ಮಸ್ಥೈರ್ಯ ಕುಗ್ಗಿದಾಗ ಅಥವಾ ಆತ್ಮವಿಶ್ವಾಸ ಕಡಿಮೆಯಾದಾಗಲೂ ಅವರ ಓದು ಗಟ್ಟಿತನದ ಅನುಭವವನ್ನು ನೀಡಿದೆ. 


ಹಲವಾರು ದಿಗ್ಗಜರು ಹಾಗೂ ಹೆಸರಾಂತ ಲೇಖಕ/ಲೇಖಕಿಯರು, ನವಬರಹಗಾರರು ಹೀಗೆ ವಿಭಿನ್ನ ಹೊಸತನದ ಓದಿಗೆ ತೆರೆದುಕೊಳ್ಳುವೆನಾದರೂ.. ನನ್ನ ಇಷ್ಟದ ಓದಿನ ಪ್ರಕಾರ ಇಂದಿಗೂ ಸಾಮಾಜಿಕ ಕಾದಂಬರಿಗಳು ಅದರಲ್ಲೂ ಕೌಟುಂಬಿಕ ಪ್ರಭೇದಕ್ಕೆ ಆದ್ಯತೆ ಕೊಡುವ ಕಾದಂಬರಿಗಳು. ಕುಟುಂಬದ ಒಗ್ಗಟ್ಟು ಹಾಗೂ ಕುಟುಂಬಕ್ಕಾಗಿ ಬದುಕುವ ಅವರ ಕಾದಂಬರಿಯ ಹಲವು ಪಾತ್ರಗಳು ವಾಸ್ತವಕ್ಕೆ ಬಹಳ ಹತ್ತಿರವಾಗಿ ಹಾಗೂ ನನ್ನ ಕನಸಿನ ಕಲ್ಪನೆಯ ಪಾತ್ರಗಳೇ ಕಣ್ಮುಂದೆ ಬಂದಂತಾಗಿ ಮನಸ್ಸಿಗೆ ಬಹಳ ಹತ್ತಿರವಾಗಿವೆ. ಅವರ ಕೆಲವು ಕಾದಂಬರಿಗಳ ವಿಶೇಷತೆ ಕುರಿತು ಹೇಳಿ ನನ್ನಿಷ್ಟದ ಅವರ ಕಾದಂಬರಿ ಕುರಿತು ಪ್ರಸ್ತಾಪಿಸುತ್ತೇನೆ.


ವಿವಾಹ ಬಂಧನ : ವಿವಾಹ ಎಂಬುದು ಒಲ್ಲದ ವಿಷಯವಾಗಿ, ಅದು ಗಂಡು, ಹೆಣ್ಣು ಇಬ್ಬರ ಪಾಲಿಗೂ ಬಂಧನವಾಗಬಾರದು. ಹಾಗೂ ಪವಿತ್ರವಾದ ವಿವಾಹ ಬಂಧನದಲ್ಲಿ.. ಸಂಗಾತಿಗಳ ಆಯ್ಕೆ ಎಷ್ಟು ಮುಖ್ಯವೆಂಬುದನ್ನು ಹಾಗೂ ಅದು ಹಿರಿಯರಿಂದ ನೋಡಿ, ಮಾಡಿ ನಿಶ್ಚಯವಾದಾಗ ಅವರ ನಿರ್ಣಾಯಕ ಶಕ್ತಿ ಚಿಕ್ಕವರಿಗಿಂತಲೂ ಎಷ್ಟು ಮಹತ್ವವಾದದ್ದು ಎಂಬುದನ್ನು ಎತ್ತಿ ಹಿಡಿದಿರುವ ಕಾದಂಬರಿ. ಇಲ್ಲಿ ಅನುರಾಧಳ ತಾಳ್ಮೆ ಹಾಗೂ ಹಿರಿಯರಿಗೆ ತೋರುವ ಗೌರವ ಇವೆರಡರ ಜೊತೆಗೆ "ಸಂಸಾರ ಗುಟ್ಟು ವ್ಯಾದಿ ರಟ್ಟು" ಎಂಬಂತೆ ನಡೆಯುತ್ತಾ ತನ್ನ ಬದುಕನ್ನು ತಾನೇ ಸರಿಪಡಿಸಿಕೊಳ್ಳಲು ಕಾಯುವ ತಾಳ್ಮೆಯ ಪರಿ ವಿವಾಹದ ಮೊದಲು ಅಥವಾ ನವವಿವಾಹಿತ ಹೆಣ್ಣುಮಕ್ಕಳು ಓದಲೇಬೇಕು  ಎನಿಸುವಂತೆ ಮಾಡಿದ ಕಾದಂಬರಿ.


ಶಿಲ್ಪ ತರಂಗಿಣಿ : ಗಂಡು ಮಾತ್ರ ಮತ್ತೊಂದು ಪ್ರೇಮದಲ್ಲಿದ್ದು.. ವಿವಾಹವಾದಾಗ ವಿಭಿನ್ನವಾಗಿ ನಡೆದುಕೊಳ್ಳುವ ಮನಸ್ಥಿತಿಯನ್ನು ಬದಲಾಯಿಸಿರುವ ಕಾದಂಬರಿ.  ವಿವಾಹ ಬಂಧನದಲ್ಲಿ ಆ ಚಿತ್ರಣವಿದ್ದರೆ ಇಲ್ಲಿ ಕಾದಂಬರಿಯ ನಾಯಕಿ ತಾನು ಪ್ರೀತಿಸದ ಹಾಗೂ ಹಿರಿಯರಿಂದ ನಿಶ್ಚಯವಾದ ವರನೊಟ್ಟಿಗೆ ವಿವಾಹವಾಗಿ ಬದುಕುವ ಸಂದರ್ಭವಿದೆ. ತಾಳ್ಮೆ ಹೆಣ್ಣಿಗೆ ಮಾತ್ರವಲ್ಲ ಗಂಡಿಗೆ ಸಹಾ ಎಂಬುದನ್ನು ಎತ್ತಿ ತೋರುವ  ಚಿತ್ರಣವಿದೆ. ಅಲ್ಲದೆ, ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯದಲ್ಲಿ ವಿವಾಹಕ್ಕಿರುವ ಮಹತ್ವ ಹಾಗೂ ಹೆಣ್ಣಿನ ಆಲೋಚನೆ ಎರಡನ್ನೂ ಪ್ರಭಾವಿಸುವ ರೀತಿ, ಸಮಾಜದಲ್ಲಿ ಇರಬೇಕಾದ ಸಂಸ್ಕೃತಿ-ಸಂಪ್ರದಾಯಗಳ ಅಗತ್ಯತೆಯನ್ನು ಹೇಳುತ್ತದೆ.


ನನ್ನೆದೆಯ ಹಾಡು : ಪೋಷಕರಿಗೆ ಮಕ್ಕಳ ಮೇಲಿನ ಪ್ರೀತಿ ಅತಿ ವ್ಯಾಮೋಹವಾದಾಗ ಹಾಗೂ ಮಕ್ಕಳ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳದಾದಾಗ ಅವರೊ ಳಗಿನ ಹಾಡಿನ ಪಾಡು ಏನಾಗಬಹುದು ಎಂಬುದನ್ನು ಸಂಪತ್ ಗಿರಿಯವರು ಹಾಗೂ ವಿಷ್ಣುವಿನ ಪ್ರಸಂಗದಲ್ಲಿ ಕಾಣಬಹುದು. ಕೆಲವೊಮ್ಮೆ ತಂದೆ-ಮಕ್ಕಳ ಪ್ರೀತಿ, ಕಾಳಜಿಯನ್ನು ನೋಡುತ್ತಿರುವಾಗ ಅಸೂಯೆಯಾದರೂ.. ಮಗನ ಮನಸ್ಸನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮತೆಯೊಂದಿದ್ದಿದ್ದರೆ..! ಎಂದೂ ಅನ್ನಿಸುತ್ತದೆ. ಪೇರೆಂಟಿಂಗ್ ನಲ್ಲಿ ಇರಬೇಕಾದ ಸೂಕ್ಷ್ಮತೆಯನ್ನು ಅರಿವಾಗಿಸುವ ಕಾದಂಬರಿ. ಜೀವನದಲ್ಲಿ ಪೋಷಕರಲ್ಲಿ ಇರಬೇಕಾದ ಸೂಕ್ಷ್ಮತೆಯನ್ನು ಲೇಖಕಿ ಹೇಳಿರುವ ಶೈಲಿ ಮನಮುಟ್ಟುತ್ತದೆ.


ಶುಭಮಿಲನ : ಹೆಣ್ಣಿಗೆ ದೈಹಿಕ ಹಿಂಸೆಗಳು ಮಾತ್ರವೇ ಕೌಟುಂಬಿಕ ಹಿಂಸೆಗಳಲ್ಲ. ಬದಲಾಗಿ, ಮಾನಸಿಕ ಹಿಂಸೆ ಆಕೆಯನ್ನು ಯಾವ ಹೀನಾಯ ಪರಿಸ್ಥಿತಿಗೆ ತರಬಲ್ಲದು ಎಂಬುದನ್ನು ಹಾಗೂ ಹೆಣ್ಣೊಬ್ಬಳ ಮಾನಸಿಕ ತುಮಲವನ್ನು ಸಶಕ್ತವಾಗಿ ಹಿಡಿದಿಟ್ಟಿರುವ ಕಾದಂಬರಿ. ಕೆಲವೊಮ್ಮೆ ತಂದೆ-ತಾಯಿಯರ ಪೂರ್ವಗ್ರಹಪೀಡಿತ ಮನಸ್ಸು ಮಕ್ಕಳ ವಿವಾಹದ ನಿಶ್ಚಯದ ವಿಷಯದಲ್ಲಿ ತಲೆದೋರಿದಾಗ ಮಕ್ಕಳು ಅನುಭವಿಸಬಹುದಾದ ಕಷ್ಟಗಳು ಹಾಗೂ ಅವರ ಮನಸ್ಸು ಮುರಿದು ಮುಂದೆ ಉಂಟಾಗಬಹುದಾದ ಪರಿಣಾಮಗಳ ಚಿತ್ರಣ ಇಲ್ಲಿದೆ. ಕೆಲವೊಮ್ಮೆ ಸ್ವಾಭಿಮಾನವನ್ನು ಬದಿಗೊತ್ತಿ ಹಾಗೂ ಅತಿ ತಾಳ್ಮೆಯನ್ನು ತಂದುಕೊಂಡರೂ ವೈವಾಹಿಕ ಬದುಕು ಸರಿಯಾಗದಿದ್ದಾಗ ತೆಗೆದುಕೊಳ್ಳಲೇ ಬೇಕಾದ ಗಟ್ಟಿ ನಿರ್ಧಾರ ಎಷ್ಟು ಮುಖ್ಯ ಎಂಬುದರ ಸಂದೇಶವಿದೆ. 


ಮುಗಿಲ ತಾರೆ ಹಾಗೂ ಶರದೃತುವಿನ ಚಂದ್ರ : ಇದರಲ್ಲಿ ಚೈತ್ರ ಹಾಗೂ ಭಾಷ್ಯಂರವರ ಪಾತ್ರಗಳು ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದಂತೆ ಉಳಿದಿವ ಭಾಷ್ಯಂ ತನ್ನ ಅಕ್ಕನ ಮಗನಾದ ದಿವಾಕರನಿಗೆ ಹಿರಿಯ ಮಗಳು ಚೈತ್ರಳನ್ನು ಕೊಟ್ಟು ವಿವಾಹ ಮಾಡಿದ್ದರು. ಆದರೆ, ತನ್ನ ಜೀವನದ ಪರಮ ಸತ್ಯವೊಂದನ್ನು ಬಿಚ್ಚಿಟ್ಟ ಮಗಳಿಗೆ ತಂದೆಯಾಗಿ ಜೊತೆಯಾಗಿ ನಿಲ್ಲುವ.. ಅವಳು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಜೊತೆಯಾಗುವ ತಂದೆಯಾಗಿ ಮುಗಿಲ ದಾರಿಯಲ್ಲಿ ಕಂಡರೆ..  ತಂದೆಗಾಗಿ ಎಲ್ಲವನ್ನು ತ್ಯಾಗ ಮಾಡಲು ಹೊರಡುವ ಮಗಳಾಗಿ ಚೈತ್ರ  ಶರದೃತುವಿನ ಚಂದ್ರದಲ್ಲಿ ಕಾಣುತ್ತಾಳೆ.  ಪತ್ನಿ ವಿನಿಮಯದಂತಹಾ ಗಂಭೀರ ಸಮಸ್ಯೆಯನ್ನು ಕಾದಂಬರಿಯಲ್ಲಿ ಕಾಣುತ್ತೇವಾದರೂ ಅತಿಯಾದ ವರ್ಣನೆಯಿಂದ ಮುಜುಗರ ತರಿಸದಂತಹಾ ಓದು ಇಲ್ಲಿದೆ.  ಮಕ್ಕಳ ಮನಸ್ಥಿತಿ ಎಷ್ಟೇ ಕುಸಿದಾಗಲೂ ಮತ್ತೆ ಸಮಾಜದ ವಿರುದ್ಧ ಸ್ಪರ್ಧೆಗೆ ಇಳಿಸುವಲ್ಲಿ ಅವರನ್ನು ಸಿದ್ಧಗೊಳಿಸುವ ಹಾಗೂ ಆತ್ಮವಿಶ್ವಾಸದಿಂದ ಬದುಕು ಕಟ್ಟಿಕೊಳ್ಳಲು ನೆರವಾಗುವ ಇಂತಹಾ ತಂದೆಯ ಉದಾತ್ತ ಪಾತ್ರ  ಸದಾ ನನ್ನಿಷ್ಟದ ತಂದೆಯ ಪಾತ್ರ. ವಿವಾಹವನ್ನು ಮುರಿದುಕೊಳ್ಳುವ ಪ್ರಸಂಗ ಇಲ್ಲಿ ಬಂದಾಗ ಪರಿಸ್ಥಿತಿಯ ಗಂಭೀರತೆಯನ್ನು ಅರಿವಾಗಿಸುವ ಹಾಗೂ ಅದು ಎಷ್ಟು ಅನಿವಾರ್ಯವಾದಾಗ ಸಂಬಂಧವನ್ನು ಕೊನೆಗೊಳಿಸಬೇಕು ಎನ್ನುವ ಸೂಕ್ಷ್ಮತೆಯನ್ನು ತಿಳಿಸಿರುವ ಚಿತ್ರಣವಿದು. ಅತಿಯಾದ ವರ್ಣನೆ ಹಾಗೂ ಅನಗತ್ಯ ವರ್ಣನೆಯಿಲ್ಲದ ನಿರೂಪಣೆ ನನಗೆ ಸಾಯಿಸುತೆಯವರ ಬರಹದ ಶೈಲಿಯಲ್ಲಿ ಸದಾ ಇಷ್ಟವಾಗುವ ಅಂಶ.


ನೂರು ನೆನಪು : ಇದು ನನ್ನಿಷ್ಟದ ಕಾದಂಬರಿಯಾಗಿ ಉಳಿಯಲು ಕಾರಣ ನನ್ನ ಆಲೋಚನೆಯನ್ನು ಬದಲಿಸಿದ ಕಾದಂಬರಿಯೂ ಹೌದು. ಒಂದು ಅನಾಥ ಮಗುವಿಗೆ ಕೌಟುಂಬಿಕ ಜೀವನವೊಂದನ್ನು ಕಟ್ಟಿಕೊಡುವುದು ಸುಲಭದ ಮಾತಲ್ಲ. ಅದರಲ್ಲಿಯೂ ಒಂದು ಮಗುವಿರುವ ಮನೆಯಲ್ಲಿ ಮತ್ತೊಂದು ಮಗು ಅನಾಥ ಮಗುವಿನಂತೆ ಬೆಳೆಯದಿದ್ದರೂ.. ಸತ್ಯ ಗೊತ್ತಿರುವಾಗ ಅದರ ಚಿತ್ರಣ ಹೇಗಿರಬಹುದು ಎಂಬುದನ್ನು ಕಾಣಬಹುದು. ಅದರಲ್ಲಿಯೂ ಆ ಮಗು ಹೆಣ್ಣು ಮಗುವಾಗಿದ್ದರೆ ವಿವಾಹದ ನಂತರದ ಬದುಕು ಅದೆಷ್ಟೋ ವಿಭಿನ್ನ ಎಂಬುದನ್ನು ಕಾಣಬಹುದು. ಇಲ್ಲಿ ಚಂದ್ರಹಾಸನ ಪಾತ್ರ ನನ್ನ ಆಲೋಚನೆಯನ್ನೇ ತಿರುವು ಮುರುವಾಗಿಸಿತು. ಯಾರನ್ನೂ ಕೇವಲ ಒಂದು ಆ್ಯಂಗಲ್ ನಿಂದ ನೋಡಿ ಅಳೆಯಬಾರದು ಎಂಬುದನ್ನು ಅರಿವಾಗಿಸಿದ ಚಿತ್ರಣ.  ಮಾನಸಿಕ ತುಮುಲಗಳನ್ನು ಹಾಗೂ ಜೀವನ ಮೌಲ್ಯಗಳು ನೆನಪುಗಳ ಜೊತೆಗೆ ಬಿಂಬಿತವಾಗಿರುವ ಕಾದಂಬರಿ.


ಪ್ರಿಯ ಸಖೀ, ತೊರೆದು ಜೀವಿಸಬಹುದೇ, ಪರ್ಣಕುಟೀರ, ನಾಟ್ಯಸುಧಾ, ಬಾಡದ ಹೂ , ನಿನಾದ, ಸಪ್ತಪದಿ, ಬಣ್ಣದ ಚುಂಬಕ.. ಹೀಗೆ ಹೇಳಬೇಕಾದ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. 


ಕಥಾ ಶೈಲಿ, ನಿರೂಪಣೆ, ಕಥಾವಸ್ತು, ಮೌಲ್ಯಗಳು, ಅತಿ ಎನ್ನಿಸದ ಪಾತ್ರ ಪೋಷಣೆ, ಅನಗತ್ಯ ವರ್ಣನೆಯಿಲ್ಲದ ವಾಸ್ತವಕ್ಕೆ ಒತ್ತು ನೀಡುವ ಬರಹ, ವಿಶೇಷ ಹಾಗೂ ಅತ್ಯಮೂಲ್ಯ ನುಡಿಮುತ್ತುಗಳ ಬೆನ್ನುಡಿ, ಕೌಟುಂಬಿಕ ಮೌಲ್ಯಗಳ ಸಂದೇಶ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅನೇಕ ವಿಚಾರಗಳಿಂದ ನನಗೆ ಸಾಯಿಸುತೆಯವರು ಎಂದೆಂದಿಗೂ ಅಚ್ಚುಮೆಚ್ಚಿನ ಲೇಖಕಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ