ಶನಿವಾರ, ಏಪ್ರಿಲ್ 25, 2026

ಪ್ರೇಮ ಪಲ್ಲವಿ (ಪುಸ್ತಕ ಯಾನ - 342)


ಪುಸ್ತಕದ ಶೀರ್ಷಿಕೆ : ಪ್ರೇಮ ಪಲ್ಲವಿ

ಲೇಖಕರು : ಸಿ. ಎನ್. ಮುಕ್ತಾ

ಪ್ರಕಾಶಕರು : ಪಾಂಚಜನ್ಯ ಪಬ್ಲಿಕೇಶನ್ಸ್

ಮರು ಮುದ್ರಣ : 2022


ಸಿ. ಎನ್. ಮುಕ್ತಾ ಅವರ ಎರಡು ಕಾದಂಬರಿಗಳ ಸಂಯುಕ್ತ ಸಂಪುಟ ಪರಕೀಯರು ಮತ್ತು ಪ್ರೇಮ ಪಲ್ಲವಿ. ಮೊದಲಿಗೆ ನಾನೀಗ ಪ್ರೇಮ ಪಲ್ಲವಿ ಕಿರುಕಾದಂಬರಿಯ ಪರಿಚಯ ಮಾಡುತ್ತಿದ್ದೇನೆ. ಇದು ಸುಮಾರು 25 ವರ್ಷಗಳ ಹಿಂದೆ ಮಲ್ಲಿಗೆ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು.


'ಪ್ರೇಮ ಪಲ್ಲವಿ' ಶೀರ್ಷಿಕೆಯ ಕಿರು ಕಾದಂಬರಿ ಎರಡು ಮುಗ್ಧ ಹೃದಯಗಳ ಪ್ರೇಮಕಥೆ. ಇದು ಹರೆಯದ ಕಥೆಯೇ ಆದರೂ.. ಮರ ಸುತ್ತುವ ಪ್ರೀತಿ-ಪ್ರೇಮದ ಕಾದಂಬರಿಯಲ್ಲ. ಬದಲಾಗಿ ನಿಷ್ಕಲ್ಮಶವಾದ ಪ್ರೀತಿಯೊಂದು ಅರಳಲು ಹಾಗೂ ಮತ್ತೊಬ್ಬರ ಬದುಕಲ್ಲಿ ಸಾಧನೆ ಮಾಡಲು ಸ್ಪೂರ್ತಿಯಾಗುವ ಚಂದದ ಹಾಗೂ ಸ್ಪೂರ್ತಿದಾಯಕ ಪ್ರೇಮ ಕಥೆ.


ಮೀನಾಕ್ಷಮ್ಮನವರ ಮನೆಯಲ್ಲಿ ಮೂರು ಜನ ಗಂಡುಮಕ್ಕಳ ಕೂಡು ಕುಟುಂಬ. ಮನೆಯಲ್ಲಿ ಸೊಸೆಯಂದಿರು ಇದ್ದರೂ ಅಡುಗೆ ಕೆಲಸಕ್ಕೆ ವೇದಮ್ಮ ಬೇಕೇಬೇಕು. ಹಿರಿಯ ಸೊಸೆ ಸಂಧ್ಯಾ ಮಾತ್ರ ಎಲ್ಲಾ ಕೆಲಸಗಳಲ್ಲಿ ಕೈಜೋಡಿಸುತ್ತಿದ್ದಳಾದರೂ.. ಪೂರ್ತಿ ಮನೆಯ ಅಡುಗೆ ವಿಚಾರವನ್ನು ವೇದಮ್ಮನವರೇ ನೋಡಿಕೊಳ್ಳಬೇಕಿತ್ತು. ಉಳಿದಿಬ್ಬರು ಸೊಸೆಯಂದಿರು ತಮಗೆ ಬೇಕಾದ್ದನ್ನು ಮಾತ್ರ ಹೇಳುತ್ತಿದ್ದರು. ಕೆಲಸದ ವಿಚಾರದಲ್ಲಿ ಬಣ್ಣದ ಬೀಸಣಿಗೆಗಳೇ.. ವಯೋಸಹಜ ಕಾಯಿಲೆ, ಸುಸ್ತಿನಿಂದ ವೇದಮ್ಮನವರಿಗೂ ಸಂಪೂರ್ಣವಾಗಿ ಅಡುಗೆ ಕೆಲಸ ಮಾಡಲು ಸಾಧ್ಯವಾಗದಿದ್ದಾಗ, ವೇದಮ್ಮನವರು ಆ ಮನೆಯಲ್ಲಿ ನಿಷ್ಠೆಯಿಂದ ಎಲ್ಲರ ಬೇಕು - ಬೇಡಗಳನ್ನು ಅರಿತು ಕೆಲಸ ಮಾಡುತ್ತಿದ್ದುದರಿಂದ.. ಅವರನ್ನು ಕೆಲಸದಿಂದ ತೆಗೆಯದೆ, ಅವರ ನೆರವಿಗೆ ಮತ್ತೊಂದು ಹುಡುಗಿಯನ್ನು ನೇಮಿಸಲಾಗಿತ್ತು ಅವಳೇ ಮಾಲಿನಿ. 


ಮಾಲಿನಿ ಕೆಲಸಕ್ಕೆ ಬಂದಾಗ ಸುಮಾರು 18-19 ವರ್ಷದ ಹುಡುಗಿ. ಆಕೆಗೆ ಓದುವುದರಲ್ಲಿ ಆಸಕ್ತಿ ಇತ್ತು. ಕಾಲೇಜಿಗೆ ಹೋಗಲು ಸಾಧ್ಯವಾಗದೆ, ಪ್ರೈವೇಟ್ ನಲ್ಲಿ ಪರೀಕ್ಷೆ ಕಟ್ಟಿ ಓದುತ್ತಿದ್ದಳು. ಮೊದಮೊದಲಿಗೆ ಇವಳು ಏನು ಕೆಲಸ ಮಾಡಬಲ್ಲಳು ಎಂಬ ಅಸಡ್ಡೆ ತೋರುತ್ತಿದ್ದ ವೇದಮ್ಮನವರಿಗೂ ಅಚ್ಚರಿಯಾಗುವಂತೆ ಚುರುಕಾಗಿದ್ದಳು ಮಾಲಿನಿ. ಅಲ್ಲದೆ, ಎಲ್ಲಾ ಕೆಲಸದಲ್ಲಿಯೂ ಅಚ್ಚುಕಟ್ಟು. ಹಾಗೆಂದು, ವೇದಮ್ಮನವರೇನೂ ಆಕೆಯನ್ನು ಹೊಗಳುತ್ತಿರಲಿಲ್ಲ, ಬದಲಾಗಿ ಅಸಡ್ಡೆ ತೋರುತ್ತಿದ್ದದ್ದೇ ಹೆಚ್ಚು. ಕೆಲಸದಲ್ಲಿ ಬಿಡುವು ಸಿಕ್ಕಾಗ ವೇದಮ್ಮ ಮಲಗಿ ಕಾಲ ಹಾಕುತ್ತಿದ್ದರೆ.. ಮಾಲಿನಿ ಏನಾದರೂ ಓದುತ್ತಲೋ ಬರೆಯುತ್ತಲೋ ಇರುತ್ತಿದ್ದಳು. 


ವೇದಮ್ಮನವರಿಗೆ ಗಂಡ ಇರಲಿಲ್ಲ. ಇದ್ದದ್ದು ಒಬ್ಬನೇ ಮಗ ಮಯೂರ. ಆದರೆ, ಆತ ಅಮ್ಮನ ಪ್ರೀತಿಯಿಂದ ಅಡ್ಡಾದಿಡ್ಡಿ ಬೆಳೆದು ಓದಿನಲ್ಲಿ ದಂಡಯಾತ್ರೆ ಹೊಡೆಯುತ್ತಾಮ್ಮ್ ಪಿ. ಯು. ಸಿಯಲ್ಲಿಯೇ ನಿಂತಿದ್ದ. ಅವನನ್ನು ನೋಡಿದಾಗ ಮಾಲಿನಿಗೆ ತಮ್ಮಂತಹಾ ಬಡವರ ಮನೆಯ ಗಂಡುಮಕ್ಕಳ ಹಣೆಬರಹವೇ ಹೀಗಿರಬಹುದು ಅನ್ನಿಸಿತು. ಆಕೆಯ ಮನೆಯಲ್ಲಿ ಆಕೆಯ ತಮ್ಮನ ಮನಸ್ಥಿತಿಯೂ ಹಾಗೆಯೇ ಇದ್ದಿತು.


ಮುಂದೆ ಯಾವುದೋ ಸಂದರ್ಭದಲ್ಲಿ ಮಾತು ಬಂದಾಗ.. ಸರಸವೆಂಬಂತೆ ಬಂದ "ತಾನು ಮದುವೆಯಾಗುವ ಹುಡುಗ ತನಗಿಂತ ಹೆಚ್ಚು ಓದಿರಬೇಕು. ರೂಪ ಕಟ್ಟಿಕೊಂಡು ಏನು ಮಾಡುವುದಕ್ಕಾಗುತ್ತೆ..?" ಎಂಬ ಮಾಲಿನಿಯ ಮಾತು ಅಲ್ಲೇ ಇದ್ದ ಮಯೂರನ ಮನಸ್ಸು ಚುಚ್ಚಿತು.  ಆತನ ಅಂತರಂಗದಲ್ಲಿ ಆ ಮಾತು ನಾಟಿ ತಾನು ಓದುವ ಹಠಕ್ಕೆ ಹತ್ತಿತ್ತು.  ಕೆಲವು ಹುಡುಗರೇ  ಹೀಗಿರಬಹುದೇನೋ..! ಅವರಿಗೆ ಸಾಧಿಸುವ ಹುಮ್ಮಸ್ಸು ಹಾಗೂ ಶಕ್ತಿ ಇದ್ದರೂ.. ಸೋಮಾರಿತನ ಹಾಗೂ ಅಸಡ್ಡೆ ಅವರನ್ನು ಮೂಲೆಗುಂಪಾಗಿಸಿರುತ್ತದೆ.


ಮಯೂರ ಹಠದಿಂದ, ಕಷ್ಟಪಟ್ಟು ಓದಿ ಪಿ. ಯು. ಸಿ ಪಾಸ್ ಮಾಡಿಕೊಂಡ ನಂತರ ಓದಿನ ಹಾಗೂ ಗೆಲುವಿನ ರುಚಿ ಹತ್ತಿತು. ಆತ ಮುಂದೆ ಓದಲು ಮನಸ್ಸು ಮಾಡಿದ. ಅದೇ ಸಮಯದಲ್ಲಿ ಮಾಲಿನಿ ಮನೆ ಕೆಲಸಕ್ಕೆ ಬಾರದಿದ್ದಾಗ ಆತ ತಾಯಿಯ ಮಾತಿನಂತೆ ಆಕೆಯನ್ನು ಹುಡುಕಿ ಅವಳ ಮನೆಗೆ ಹೊರಟಾಗ, ಆಕೆ ಟೈಲರಿಂಗ್ ನಿಂದ ಸಂಪಾದಿಸುವುದನ್ನು ಕಂಡು ಹುಡುಗಿಯೇ ಸಂಪಾದಿಸುತ್ತಾಳೆ, ತಾನು ಸುಮ್ಮನೆ ತಿರುಗುತ್ತಿದ್ದೇನೆ ಎಂಬ ಭಾವ ಹುಟ್ಟಿತು. ಗೆಳೆಯನ ಬಳಿ ಇದನ್ನು ಹಂಚಿಕೊಂಡಾಗ ಇನ್ನೇನು ಶುರುವಾಗಲಿರುವ ತನ್ನದೇ ಬಟ್ಟೆ ಅಂಗಡಿಯಲ್ಲಿ  ಕೆಲಸಕ್ಕೆ ಸೇರಿ, ಓದುವ ಉಪಾಯ ಹೇಳಿದ. ಆದರೆ, ಅದಕ್ಕಿನ್ನೂ ಸಮಯವಿತ್ತು.


ಆ ಸಮಯದಲ್ಲಿಯೇ ಅವನ ಪ್ರತಿಭೆಗೆ ತಕ್ಕ ಅವಕಾಶವೊಂದು ಆತನನ್ನು ಅರಸಿ ಬಂದಿತ್ತು. ಆರ್ಕೆಸ್ಟ್ರಾದಲ್ಲಿ ಹಾಡು ಹಾಡುವ ಅವಕಾಶ ಸಿಕ್ಕಿತ್ತು. ಆಗ ಪರಿಚಯವಾದವಳು ಲಹರಿ. ಲಹರಿ ಶ್ರೀಮಂತರ ಮನೆಯ ಮಗಳಾದರೂ.. ಅದು ಅವಳ ಹವ್ಯಾಸವಾಗಿತ್ತು. ಅವಳ ದೆಸೆಯಿಂದ  ಮಯೂರ ತನ್ನ ಪ್ರತಿಭೆಯನ್ನು ಮತ್ತಷ್ಟು ಸಾಣೆ ಹಿಡಿಸಿಕೊಂಡು ತನಗೆ ಸಿಕ್ಕ ಅವಕಾಶದಿಂದ ಎತ್ತರಕ್ಕೆ ಬೆಳೆದ. ಜನರಿಂದ ಪ್ರಶಂಸೆ ಪಡೆದ. ಆದರೆ, ಆರ್ಕೆಸ್ಟ್ರಾ ಇದ್ದದ್ದು ಕೆಲವೇ ಸೀಸನ್ ಗಳಲ್ಲಿ. ಆದುದರಿಂದ, ಆಯಾ ಸೀಸನ್ ಮುಗಿದ ನಂತರ ಅವನು ಬಟ್ಟೆ ಅಂಗಡಿಯಲ್ಲಿ ದುಡಿಯುತ್ತಾ ಓದಲು ಶುರು ಮಾಡಿದ.


ಇದೇ ಸಂದರ್ಭದಲ್ಲಿ ಮಾಲ ಕೊಟ್ಟಳು ಎನ್ನುವ ಪೇಪರ್ ಕಟಿಂಗ್ ಒಂದನ್ನು ಕೊಟ್ಟ ವೇದಮ್ಮನವರಿಂದ ಅವನ ಪ್ರತಿಭೆಗೆ ತಕ್ಕ ಅವಕಾಶವೊಂದು ಕೈಹಿಡಿದಿತ್ತು. ಮುಂದೆ ಆತ ಸಿನಿಮಾ ರಂಗದಲ್ಲಿ ದೊಡ್ಡ ಗಾಯಕನಾಗಿ ಬೆಳೆದ. ಆದರೆ, ಅದಕ್ಕೆ ಹಣ ಹೊಂದಿಸಲು ಪಟ್ಟ ಕಷ್ಟ.. ಜೊತೆಗೆ ಎತ್ತರಕ್ಕೆ ಏರಲು ಪಟ್ಟ ಕಷ್ಟವನ್ನು ಲೇಖಕಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ.


ನಾಲ್ಕು ವರ್ಷಗಳಲ್ಲಿ ಎಲ್ಲರ ಬದುಕಿನ ಚಿತ್ರಣವೂ ಬದಲಾಗಿತ್ತು. ವೇದಮ್ಮ ಈಗ ಮಗನ ಜೊತೆಯಲ್ಲಿ ಚೆನ್ನೈನಲ್ಲಿಯೇ ವಾಸವಾಗಿದ್ದರು. ಲಹರಿ ಹಾಗೂ ಮಯೂರರ ಮದುವೆಯ ಸುದ್ದಿಗಳು ವರ್ಣರಂಜಿತವಾಗಿ ಪೇಪರುಗಳಲ್ಲಿ ಬರುತ್ತಿದ್ದವು. ಮಯೂರನಿಗೆ ಮಾಲತಿಯನ್ನು ಮರೆಯುವ ಮನಸ್ಸಿರಲಿಲ್ಲ. ವೇದಮ್ಮನವರ ಪ್ರತಿಕ್ರಿಯೆ ಹೇಗಿತ್ತು..? ಲಹರಿಯ ಮನಸ್ಸಲ್ಲಿ ಏನಿತ್ತು..? ಮಯೂರನ ವಿದ್ಯಾಭ್ಯಾಸ ಏನಾಯಿತು..? ಮಯೂರ ಪ್ರೇಮ ಪಲ್ಲವಿ ಹಾಡಿದ್ದು ಯಾರೊಂದಿಗೆ..? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ 'ಪ್ರೇಮ ಪಲ್ಲವಿ' ಕಾದಂಬರಿಯನ್ನು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ