ಶನಿವಾರ, ಏಪ್ರಿಲ್ 25, 2026

ಮಮತ (ಪುಸ್ತಕ ಯಾನ - 340)


ಪುಸ್ತಕದ ಶೀರ್ಷಿಕೆ : ಮಮತ 

ಲೇಖಕರು : ಕುಮುದ 

ಪ್ರಕಾಶಕರು : ನಂದಾ ಪಬ್ಲಿಕೇಶನ್ಸ್

ಪ್ರಥಮ ಮುದ್ರಣ : 1982

ಪುಟಗಳು : 114


ಕುಮುದ ಅವರ ಮಮತ ಕಾದಂಬರಿ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿಬಂದಿತ್ತು. ಕಥಾನಾಯಕಿಯ ದಿಟ್ಟ ಪಾತ್ರವಾಗಿ ಮಮತ ಓದುಗರ ಮೆಚ್ಚುಗೆ ಗಳಿಸುವುದರ ಜೊತೆಗೆ, ಚಲನಚಿತ್ರ ನಿರ್ಮಾಪಕರ ಗಮನವನ್ನೂ ಸೆಳೆದಿದ್ದು ನವನಿಧಿ ಚಿತ್ರಸಂಸ್ಥೆಯವರು ಈ ಕಾದಂಬರಿ ಚಿತ್ರೀಕರಣದ ಹಕ್ಕನ್ನು ಪಡೆದು ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆಂದು ಲೇಖಕಿ ತಿಳಿಸುತ್ತಾರೆ.


ಕುಮುದ ಅವರ ಈ ಕಾದಂಬರಿಯಲ್ಲಿ ಸಮಾಜದಲ್ಲಿ ಇಂದಿಗೂ ವ್ಯಾಪಕವಾಗಿರುವ ಒಂದು ಸಾಮಾಜಿಕ ಪಿಡುಗಿನ ಕುರಿತಾಗಿ ಹೆಣ್ಣೊಬ್ಬಳು ದನಿ ಎತ್ತಿರುವ ದಿಟ್ಟ ಚಿತ್ರಣವಿದೆ.  ದಿಟ್ಟ ಹೆಣ್ಣಿನ ಹೆಸರೇ ಮಮತ.. ಅದೇ ಕಾದಂಬರಿಯ ಶೀರ್ಷಿಕೆ. ಜೊತೆಗೆ ಆ ಸಾಮಾಜಿಕ ಪಿಡುಗು ಮತ್ತಾವುದೂ ಅಲ್ಲ ವರದಕ್ಷಿಣೆ. ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆಯ ರೀತಿಯಲ್ಲಿಯೇ ವಧುದಕ್ಷಿಣೆಯೂ ವ್ಯಾಪಕವಾಗುತ್ತಿದೆ. ಯಾವುದೇ ಆದರೂ.. ಅವೆರಡನ್ನೂ ದಿಟ್ಟವಾಗಿ ಖಂಡಿಸಿದಾಗಲಷ್ಟೇ ಅದು ಸಮಾಜದಿಂದ ಮಾಯವಾಗಲು ಸಾಧ್ಯ. ಆದರೆ, ಅಂತಹ ದಿಟ್ಟ ಹೆಜ್ಜೆ ಇಡಲು ಹೊರಟಾಗ ಮೊದಮೊದಲ ಹೆಜ್ಜೆಗಳಲ್ಲಿ ಅವರು ಅನುಭವಿಸುವ ಕಷ್ಟ ಮತ್ತು ನೋವು ಅಪಾರವೇ. 


ಮಮತ ವರದಕ್ಷಿಣೆ ಕೇಳಿ ಹಿಂಸೆ ಕೊಟ್ಟದ್ದಕ್ಕೆ ತಾಳಿಕಟ್ಟುವ ಸಮಯದಲ್ಲಿ ಅದನ್ನು ತಿಳಿದು.. ಆ ವರನನ್ನು ನಿರಾಕರಿಸಿಬಿಟ್ಟಳು. ಸರ್ಕಾರವೇ ವರದಕ್ಷಿಣೆ ತೆಗೆದುಕೊಳ್ಳುವುದು ಶಿಕ್ಷಾರ್ಹ.. ಅದು ತಪ್ಪು ಎಂದು ಕಾನೂನು ಮಾಡಿರುವ ಕಾಲದಲ್ಲಿಯೂ ವರದಕ್ಷಿಣೆ ಕೇಳುವವರು ಹಾಗೂ ಕೊಡುವವರು ತಪ್ಪಿರಲಿಲ್ಲ. ಅದರ ಕುರಿತಾಗಿ ಮೊದಲಿನಿಂದಲೂ ದನಿ ಎತ್ತುತ್ತಿದ್ದವಳು ಮಮತ. ಅಂತಹದ್ದರಲ್ಲಿ ಅವಳ ವಿವಾಹದಲ್ಲಿಯೇ ಆ ಸಂದರ್ಭ ಎದುರಾದರೆ..?!


ಮಮತಳ ತಂದೆ ಕೃಷ್ಣಮೂರ್ತಿಯವರ ನಾಲ್ಕು ಮಂದಿ ಮಕ್ಕಳಲ್ಲಿ.. ಮೂವರು ಹೆಣ್ಣು ಹಾಗೂ ಒಬ್ಬ ಗಂಡು ಮಗ. ಈಗಾಗಲೇ ಮೊದಲಿಬ್ಬರು ಹೆಣ್ಣುಮಕ್ಕಳಿಗೆ ಮದುವೆಯಾಗಿತ್ತು. ಮೂರನೆಯವಳೇ ಮಮತ. ನಾಲ್ಕನೆಯವನು ಮುರುಳಿ. ಇನ್ನೂ ಕಾಲೇಜು ವಿದ್ಯಾಭ್ಯಾಸದಲ್ಲಿದ್ದ. ತಾಯಿ ಸುಶೀಲಮ್ಮನವರು. ಸುಶೀಲಮ್ಮನವರಿಗೆ ಮಮತಳ ಮದುವೆಯ ವಿಚಾರದಲ್ಲಿ ಚಿಂತೆ ಕಾಡುತ್ತಿತ್ತು. ಆದರೆ, ಕೃಷ್ಣಮೂರ್ತಿಎವರಿಗೆ ಮಾತ್ರ ಮಮತಳ ಮದುವೆಯ ಕುರಿತಾಗಿ ಚಿಂತೆಯಿರಲಿಲ್ಲ. ಅವರ ಮನಸ್ಸಿನಲ್ಲಿ ಇದ್ದದ್ದೇ ಬೇರೆ.. 

ಸುಂದರ ಹೆಣ್ಣು, ಆಕರ್ಷಕ ಮೈಮಾಟ, ರೂಪ-ಬಣ್ಣ, ವಿದ್ಯೆ, ಉದ್ಯೋಗ ಎಲ್ಲವೂ ಇದ್ದವಳನ್ನು ಯಾರು ಬೇಕಾದರೂ ಮದುವೆಯಾಗುತ್ತಾರೆ ಎನ್ನುವ ಹೆಮ್ಮೆ ಇತ್ತು. ಅದರಲ್ಲಿಯೂ ಆಕೆ ಆಸೆ ಪಡುತ್ತಿದ್ದಂತೆ ವರದಕ್ಷಿಣೆ ಇಲ್ಲದೆಯೇ ಮದುವೆಯಾಗುತ್ತಾರೆ ಎನ್ನುವ ಹೆಮ್ಮೆ ಅವರಿಗೆ. ಮಗ ಸಂಸಾರಕ್ಕೆ ಸಹಾಯವಾಗುವವರೆಗೂ ಈಕೆಯೂ ದುಡಿಯಲಿ ಎನ್ನುವ ಮನೋಭಾವವೂ ಇಲ್ಲದಿಲ್ಲ. 


ಆದರೆ, ಸುಶೀಲಮ್ಮನವರು ಯಾವ ಕಾರ್ಯಕ್ರಮಕ್ಕೆ ಹೋದರೂ.. ಅಲ್ಲಿ ಮಮತಳ ಮದುವೆಯ ವಿಚಾರವನ್ನು ನೆಂಟರ ಕಿವಿಗೆ ಹಾಕುತ್ತಿದ್ದರು. ಹೀಗೆ ದೂರದ ಸಂಬಂಧಿಯೊಬ್ಬರ ವಿವಾಹದಲ್ಲಿ ಮಮತ ಇಂಜಿನಿಯರ್ ಆಗಿದ್ದ ಪ್ರಸಾದನ ತಾಯಿಯ ಕಣ್ಣಿಗೆ ಬಿದ್ದು.. ಅವರೇ ಸುಶೀಲಮ್ಮನವರ ಜೊತೆಗೆ ವಿವಾಹದ ಪ್ರಸ್ತಾಪ ಮಾಡಿದ್ದರು. ಆ ಮಾತುಕತೆಯ ಸಂದರ್ಭದಲ್ಲಿ ತಮ್ಮ ಮನೆತನ ಹಾಗೂ ಹಿರಿಯ ಹೆಣ್ಣು ಮಕ್ಕಳ ಮದುವೆ ಮಾಡಿಕೊಟ್ಟ ವಿಚಾರದ ಕುರಿತು ಕೊಂಚ ಹೆಚ್ಚಾಗಿಯೇ ಹೇಳಿಕೊಂಡಿದ್ದರು ಸುಶೀಲಮ್ಮ. 


ಮುಂದೆ ಅವರೇ ಮಮತ ಕುರಿತು ಆಸಕ್ತಿ ವಹಿಸಿ ಮುಂದುವರಿದರು. ಸುಶೀಲಮ್ಮನವರ ಉತ್ಸಾಹವೂ ಸೇರಿ ಇವರೂ ಗಂಡಿನ ಮನೆಗೆ ಹೋಗಿ ಬಂದು ವಿವಾಹ ನಿಶ್ಚಯವಾಗುವವರೆಗೂ ಹೋಗಿತ್ತು. ಕೊಡುಬಿಡುವ ವಿಚಾರದ ಕುರಿತಾಗಿ.. ಮಾತುಕತೆಯಾದುದನ್ನು ಹೆಂಡತಿಗಾಗಲೀ.. ಮಗಳಿಗಾಗಲಿ ತಿಳಿಸಲಿಲ್ಲ. ಮೂರ್ತಿಗಳು ಒಳ್ಳೆಯ ಸಂಬಂಧ ಕೂಡಿ ಬಂದಿರುವಾಗ ಅದನ್ನು ಹಾಳು ಮಾಡಿಕೊಳ್ಳಲು ಇಷ್ಟವಿಲ್ಲದೆ.. ತಮ್ಮ ಕೈಮೀರಿ ಎಲ್ಲವನ್ನೂ ಮಾಡಿ, ಸಾಲಕ್ಕಾಗಿಯೂ ಪ್ರಯತ್ನಿಸುತ್ತಿದ್ದರಿಂದ ಹಸೆಮಣೆಯವರೆಗೂ ವಿಚಾರ ಹೋಗಿತ್ತು. ಆದರೆ, ಸಾಲ ಸಿಗದೆ ಮೂರ್ತಿಗಳು ಪರದಾಡುತ್ತಿದ್ದರು. ವರಪೂಜೆ ಸಾಂಗವಾಗಿ ನೆರವೇರಿದರೂ.. ಕಾಶಿಯಾತ್ರೆಯ ಹೊತ್ತಿಗೆ ವಿಚಾರ ಸ್ಪೋಟಗೊಂಡು ಮಮತಳವರೆಗೂ ಹೋಗಿತ್ತು.


ವರದಕ್ಷಿಣೆಯ ವಿಚಾರವಾಗಿ ಹಗರಣ ನಡೆದು ಪೊಲೀಸರು ಬಂದು ಹುಡುಗನನ್ನು, ಹುಡುಗನ ತಂದೆಯನ್ನು ಹಾಗೂ ಮೂರ್ತಿಯವರನ್ನು ಕರೆದುಕೊಂಡು ಹೋದರು. ಮದುವೆಯ ಮನೆಯ ಸಂಭ್ರಮ ಹೋಗಿ ದುಃಖ ತುಂಬಿತ್ತು. ಅಂದು ಮಮತಳ ದಿಟ್ಟತನವನ್ನು ಎಲ್ಲರೂ ಹೊಗಳಿದ್ದರಾದರೂ.. ಮುಂದೆ ಅವಳ ಬಾಳಿಗೆ ಅದೇ ಸವಾಲಾಗಿತ್ತು.  ಅಕ್ಕ- ಪಕ್ಕದ ಮನೆಯವರು ಮಾತ್ರವಲ್ಲ.. ಕೆಲಸದ ಜಾಗದಲ್ಲಿ ಸಹೋದ್ಯೋಗಿಗಳು ಬಂಧುಗಳು ಎಲ್ಲರೂ ಇವಳಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದರು. ತಾಯಿ-ತಂದೆಯವರಿಗೆ ಅದೇ ವಿಚಾರ ಕೇಳಿ ಕೇಳಿ ರೋಸಿ ಹೋಗಿತ್ತು. ಮನೆಯ ಮನಃಶಾಂತಿಯೂ ಹಾಳಾಗಿತ್ತು.


ಇಂತಹ ಕಾಲದಲ್ಲಿಯೇ ದೊಡ್ಡ ಅಕ್ಕನ ಕಡೆಯ ಸಂಬಂಧದಿಂದ ಒಂದು ವರ ಬಂದಿತ್ತು. ಆದರೆ, ಆತನ ಮೊದಲನೆಯ ಹೆಂಡತಿ ತೀರಿಹೋಗಿದ್ದಳು. ಇದು ಆತನಿಗೆ ಎರಡನೇ ಸಂಬಂಧ. ದೂರದ ಊರಿನಲ್ಲಿ ಇದ್ದುದರಿಂದ ಈ ಹಗರಣ ಅವರಿಗೆ ತಿಳಿದಿರಲಿಲ್ಲ. ಅದನ್ನು ಮುಚ್ಚಿಟ್ಟು ವಿವಾಹವಾಗುವ ಇರಾದೆ ಮಮತಳಿಗಿರಲಿಲ್ಲವಾದರೂ.. ತಾಯಿಯ ಅಳು-ನೋವಿಗೆ ಕರಗಿ ಸುಮ್ಮನಾದಳು.


ಮಮತಳಿಗೆ ಕೂಡಿ ಬಂದಿದ್ದ ವರನ ಹೆಸರು ಶೇಖರ. ಗೋವಿಂದರಾವ್ ಹಾಗೂ ಯಮುನಾಬಾಯಿಯ ಮೂರು ಮಕ್ಕಳಲ್ಲಿ ಎರಡನೆಯ ಹಾಗೂ ಒಬ್ಬನೇ ಮಗ ಶೇಖರ. ಹಿರಿಯ ಮಗಳಿಗೆ ಅದಾಗಲೇ ಮದುವೆಯಾಗಿದ್ದರೆ.. ಕಿರಿಯ ಮಗಳು ಪ್ರೀತಿ ಇನ್ನೂ ಕಾಲೇಜಿನಲ್ಲಿ ಓದುತ್ತಿದ್ದಳು. ಶೇಖರನಿಗೆ ಮದುವೆಯಾಗಿ ಹೆಂಡತಿ ಕುಸುಮ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದ್ದಳು. ಅದು ಆಕಸ್ಮಿಕವಾಗಿದ್ದರೂ.. ಯಮುನಾಬಾಯಿಯವರ ಕಾಟಕ್ಕೆ ಹಾಗೂ ಅವರೇ ಮಾಡಿರಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ ಕಾರಣವೆಂದರೆ ಯಮುನಾಬಾಯಿಯವರ ಬಾಯಿ ಜೋರು. ಅಲ್ಲದೆ, ಹೆಣ್ಣುಮಕ್ಕಳಿಗೆ ಮಾಡಿದ ಮದುವೆ ಖರ್ಚನ್ನು ಮಗನ ಮದುವೆಯಲ್ಲಿ ವಾಪಸ್ ಪಡೆಯುವ ಹಂಬಲ. ಹಾಗೆಲ್ಲಾ ತಾಯಿಯನ್ನು ವಿರೋಧಿಸದ ಶೇಖರನಿಗೆ ಕುಸುಮಳ ಸಾವಿಗೆ ತಾನೂ ಒಂದು ಬಗೆಯಲ್ಲಿ ಕಾರಣ ಎಂಬ ಭಾವನೆ ಬೇರೂರಿತ್ತು.


ಶೇಖರನಿಗೆ ಈಗಲಾದರೂ ತಾನು ತಾಯಿಯ ವರದಕ್ಷಿಣೆಯ ನಿಲುವನ್ನು ವಿರೋಧಿಸಬೇಕೆಂದು ಹಾಗೂ ಮದುವೆಯಾಗುವ ಹುಡುಗಿಯ ಬಳಿ ಎಲ್ಲವನ್ನು ಹೇಳಬೇಕೆಂದು ಆಸೆ ಇತ್ತು. 


ಶೇಖರ ಹಾಗೂ ಮಮತ ಇಬ್ಬರ ಬದುಕಲ್ಲಿ ಅವರಿಬ್ಬರ ನಿಲುವು ತಂದ ತೀರ್ಮಾನವೇನು..?  ಮಮತಾಳ ದಿಟ್ಟ ನಿಲುವು ಆಕೆಯ ವೈವಾಹಿಕ ಜೀವನವನ್ನು ಯಾರೊಂದಿಗೆ ಹಾಗೂ ಯಾವ ರೀತಿಯಲ್ಲಿ ಬೆಸೆಯಿತು..? ಶೇಖರ ಮುಂದಿನ ವಿವಾಹದಲ್ಲಿಯಾದರೂ ಬದಲಾದನೇ..? ಮಮತಳ ತಮ್ಮನ ವಿವಾಹ ಹೇಗಾಯಿತು..?


ಮಮತಳ ಮುಂದಿನ ಬದುಕು ಸಹ ಕಾದಂಬರಿಯಲ್ಲಿ ಚಿತ್ರಿತವಾಗಿದೆ. ಆದರೆ, ಮಮತ ತನ್ನ ಹಿರಿಯ ಮಗನ ವಿವಾಹ ಮಾಡುವಾಗ.. ತಾನೇ ನೋಡಿದರೂ.. ಅವನಿಷ್ಟ ಪಟ್ಟ ಹುಡುಗಿಯನ್ನೇ ನಿಶ್ಚಯಿಸಿದರೂ.. ಅವರ ಬಳಿಯಲ್ಲಿ ವರದಕ್ಷಿಣೆ ಕೇಳುವುದಕ್ಕೆ ಕಾರಣವೇನು..?  ಆಕೆಯ ವರದಕ್ಷಿಣೆ ವಿರೋಧಿ ನಿಲುವು ಬದಲಾಗಿತ್ತೇ ಅಥವಾ ಹಾಗೆ ಮಾಡಲು ಬೇರೆ ಯಾವುದಾದರೂ ಬಲವಾದ ಕಾರಣವಿತ್ತೇ..?


ಎಲ್ಲವನ್ನೂ ತಿಳಿಯಲು ಓದಿ ಕುಮುದ ಅವರ ಮಮತ ಕಾದಂಬರಿಯನ್ನು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ