ಪುಸ್ತಕದ ಶೀರ್ಷಿಕೆ : ಕ್ಷಮೆ
ಲೇಖಕರು : ಸಹನಾ ವಿಜಯಕುಮಾರ್
ಪ್ರಕಾಶಕರು : ಸಾಹಿತ್ಯ ಭಂಡಾರ
ಪ್ರಥಮ ಮುದ್ರಣ : 2016
ಪುಟಗಳು : 211
ಬೆಲೆ : 195 ರೂ.
ಸಹನಾ ವಿಜಯಕುಮಾರ್ ಅವರ ಕ್ಷಮೆ ಕಾದಂಬರಿ ಹೆಣ್ಣುಗಳ ಸ್ವಾತಂತ್ರ್ಯ, ಸ್ವೇಚ್ಛೆ ಹಾಗೂ ಸಮರ್ಥನೆ ಈ ಮೂರನ್ನೂ ಸಮರ್ಥವಾಗಿ ತೆರೆದಿಡುವ ಕಾದಂಬರಿ. ಈ ಕಾದಂಬರಿಯಲ್ಲಿ ಭಾವಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಅದರಲ್ಲಿಯೂ ಹೆಣ್ಮನದ ಭಾವಗಳು ಹಾಗೂ ತುಡಿತಗಳನ್ನು ಬಿಡಿಸಿಡುವ ಜೊತೆಗೆ ಗಂಡಿನ ಒಳಗಿರುವ ತಾಯ ರೂಪ, ಹೆಣ್ಮನದ ಭಾವಗಳಿಗೆ ಒಂದೊಳ್ಳೆಯ ರೂಪ ಕೊಟ್ಟಿದ್ದಾರೆ. ಈ ಕಾದಂಬರಿಯಲ್ಲಿ ಸ್ವಾರ್ಥ ಹಾಗೂ ವಾಸ್ತವತೆಯ ನಡುವಿನ ತೆಳುಗೆರೆಯನ್ನು ಕಾಣಬಹುದು.
ಸ್ವಾತಂತ್ರ್ಯ ಹಾಗೂ ಸ್ವೇಚ್ಛೆಯ ನಡುವಿನ ತೆಳುಗೆರೆ ಅಳಿಸಿ ಹೋದಾಗ.. ಹೆಣ್ಣಾಗಲಿ, ಗಂಡಾಗಲಿ ನೈತಿಕತೆಯನ್ನು ದಾಟಿದಂತಾಗುತ್ತದೆ. ಆಗ ಅದರ ಪರಿಣಾಮವನ್ನು ಅನುಭವಿಸುವುದು ಕೇವಲ ಅವರು ಮಾತ್ರವಲ್ಲ. ಅವರ ಕುಟುಂಬವೂ... ಇಲ್ಲಿಯೂ ಅಂತಹ ನಿದರ್ಶನಗಳನ್ನು ಕಾಣಬಹುದಾಗಿದೆ.
ಆರಂಕಿ ಸಂಬಳದ ಜವಾಬ್ದಾರಿಯುತ ಹುದ್ದೆ, ಸಾಫ್ಟ್ವೇರ್ ನ ಪ್ರತಿಷ್ಠಿತ ಕೆಲಸ ಜೊತೆಗೆ ಆಗಾಗ ವಿದೇಶಿ ಓಡಾಟಗಳು. ನೋಡುವವರಿಗೆ ಪಲ್ಲವಿ ಸ್ಥಿತಿವಂತಳು ಹಾಗೂ ನೆಮ್ಮದಿಯಾಗಿ ಇರುವವಳು ಎಂಬ ಭಾವ ಹುಟ್ಟಿಸುತ್ತಿತ್ತು. ಆದರೆ, ಅದಷ್ಟೇ ಸಾಕೇ..?! ಇಲ್ಲಿ ಪಲ್ಲವಿಯ ಮನಸ್ಥಿತಿಯಿಂದ ಕಾದಂಬರಿಯನ್ನು ಕಾಣಬಹುದಾದರೂ.. ಎಲ್ಲಾ ಸಮರ್ಥನೆಗಳನ್ನು ಸಂಪೂರ್ಣವಾಗಿ ಒಪ್ಪಲಾಗುವುದಿಲ್ಲ. ಪಲ್ಲವಿಗೆ ರಘುವಿನ ಜೊತೆಗೆ ಮದುವೆಯಾಗಿ ಪೂರ್ವಿಯ ತಾಯಿಯಾಗಿದ್ದಳು. ಆತನಂತೂ ಸಹನೆಯ ಸಹಕಾರ ಮೂರ್ತಿಯೇ.. ಪೂರ್ವಿಯೂ ತೀರಾ ಹಠ ಹಿಡಿಯದೆ ಅಮ್ಮನ ವಿದೇಶಿ ಪ್ರಯಾಣಗಳನ್ನು ಅರ್ಥ ಮಾಡಿಕೊಂಡವಳಂತೆ.. ಎಲ್ಲದಕ್ಕೂ ಹೊಂದಿಕೊಂಡು ಬಿಡುತ್ತಿತ್ತು. ಉತ್ಸಾಹದ ಚಿಲುಮೆಯಂತಹ ಮಗಳು ಜೊತೆಗೆ ತಂದೆಯೂ ಜೊತೆಯಲ್ಲಿಯೇ ಇದ್ದರು.
ಪಲ್ಲವಿಯ ಬಾಲ್ಯ ಕಳೆದದ್ದು ಮೈಸೂರಿನಲ್ಲಿ. ಅಣ್ಣ ಚರಣ ಹಾಗೂ ಇವಳು. ಇಬ್ಬರೂ ಹೊಂದಿಕೊಂಡಂತೆ ಬದುಕುತ್ತಿದ್ದ ಮಕ್ಕಳು. ಆದರೆ, 5ನೇ ತರಗತಿಯ ಪರೀಕ್ಷೆ ಮುಗಿಸಿ ರಿಸಲ್ಟ್ ನೋಡಿ ಬಂದವಳಿಗೆ ಅಂದು ಸಿಕ್ಕಿದ ಆಘಾತ ಮರೆಯಲಾಗದಂತಹದ್ದು. ಅಮ್ಮ ಸಾವಿತ್ರಿ ತನ್ನ ಬದುಕನ್ನು ತಾನೇ ಕೊನೆಗಾಣಿಸಿಕೊಂಡಿದ್ದಳು. ಅದಕ್ಕೆ ಕಾರಣ ತನ್ನ ಅಪ್ಪ ಎಂದು ತಿಳಿದ ಮೇಲೆ ಚರಣನಂತೂ ದೂರವೇ ಉಳಿದಿದ್ದ. ಪಲ್ಲವಿ ತೀರಾ ಅತ್ತಲೂ ಅಲ್ಲದೆ ಇತ್ತಲೂ ಅಲ್ಲದೆ ನಿಭಾಯಿಸುತ್ತಿದ್ದಳು. ಅಜ್ಜಿ ಇದುದರಿಂದ ಬದುಕು ಅವಳನ್ನು ಗಟ್ಟಿಗಿತ್ತಿಯನ್ನಾಗಿಸಿತ್ತು. ಎಲ್ಲಿಯೂ ಸೋಲದೆ ತನ್ನ ಬದುಕನ್ನು ಕಟ್ಟಿಕೊಳ್ಳುವತ್ತ ಮಾತ್ರ ಗಮನಹರಿಸಿದ್ದಳು. ಆದರೆ, ಅಮ್ಮನ ಬದುಕು ಹೇಗಿತ್ತು ಎಂಬುದು ಪಲ್ಲವಿಯ ಮಾತುಗಳಲ್ಲಿ ಬಿಡಿಬಿಡಿಯಾಗಿ ಬಿಡಿಸಿಟ್ಟ ಚಿತ್ರಣವಾಗಿ ಕಂಡಾಗ ಅಮ್ಮ ಇದ್ದಿದ್ದರೆ ಪಲ್ಲವಿಯ ಬದುಕಿನ ಚಿತ್ರಣವೇ ಬದಲಾಗುತ್ತಿತ್ತೇನೋ ಎಂದೆನಿಸುವುದಂತೂ ಸತ್ಯ.
ಚರಣ ತಂದೆಯಿಂದ ದೂರ ಉಳಿದು ವಿದೇಶದಲ್ಲಿ ಸೆಟಲ್ ಆಗಿದ್ದ. ಅಜ್ಜಿಯೂ ಪಲ್ಲವಿಯ ಪಾಲಿಗೆ ಇಲ್ಲದೆ ಹೋದಾಗ ಅಪ್ಪನನ್ನು ಬಿಟ್ಟುಕೊಡಲು ಸಾಧ್ಯವಿಲ್ಲದ ಪಲ್ಲವಿ ರಘುವಿನ ಜೊತೆಗಿನ ವಿವಾಹದ ನಂತರವೂ ತಂದೆಯನ್ನು ಜೊತೆಗೆ ಇರಿಸಿಕೊಂಡಿದ್ದಳು. ಲೆಕ್ಚರರ್ ಆಗಿದ್ದ ರಘು ತೀರಾ ಶಾಂತ ಸ್ವಭಾವದ, ಸಹನೆಯ, ಹೊಂದಾಣಿಕೆಯ ವ್ಯಕ್ತಿ. ಆದರೆ, ಪಲ್ಲವಿಗೆ ಆತ ತಕ್ಕವನಾ ಎಂದು ಆಕೆಯ ಆಲೋಚನೆಯ ರೀತಿಯಲ್ಲಿ ಯೋಚಿಸಿದರೆ ಅದರ ತುಲನೆ ಕಷ್ಟ.
ಅಜ್ಜಿಯ ಮೌನ, ಚರಣನ ನರಳಾಟದ ನಡುವೆ ಬೆಳೆದಿದ್ದವಳಿಗೆ ಅಪ್ಪನೇ ಅಮ್ಮನ ಸಾವಿಗೆ ಕಾರಣ ಎಂದು ಅರ್ಥವಾದ ನಂತರವೂ ಅವರನ್ನು ಕ್ಷಮಿಸಿ ಒಪ್ಪುವುದು ಆದಷ್ಟು ಸುಲಭವಾದ ಮಾತಾಗಿತ್ತೇ..?!
ಆದರೆ, ಶಾಲಾ ದಿನಗಳು ಅವಳ ಪಾಲಿನ ಚೇತೋಮಯ ದಿನಗಳು ಎಂದರೂ ತಪ್ಪಾಗಲಾರದು. ಕೃಪಾ, ಪಲ್ಲವಿ ಹಾಗೂ ಚೇತನ್ ಸಮಾನ ಅಭಿರುಚಿ, ಸೆಳೆತಗಳಿಂದ ಮತ್ತು ಸಂಸ್ಕಾರದಿಂದ ಆತ್ಮೀಯ ಸ್ನೇಹಿತರಾಗಿ ಹೋಗಿದ್ದರು. ಆಕೆಯ ಬದುಕಲ್ಲಿ ಹೊಸ ಜೀವನೋತ್ಸಾಹ ತುಂಬಿದ್ದು ಚೇತನ್ ಎಂದರೂ ತಪ್ಪಾಗಲಾರದು. ಆತನ ಕಾಳಜಿಯ ಮಾತುಗಳು, ಹಾಸ್ಯಮಯ ಶೈಲಿಯ ಮಾತುಕತೆಗಳು ಹೀಗೆ ಪ್ರತಿಯೊಂದು ಪಲ್ಲವಿಗೆ ಇಷ್ಟವಾಗುತ್ತಿತ್ತು. 9ನೇ ತರಗತಿಯಲ್ಲಿದ್ದ ಇತಿಹಾಸದ ಝಾನ್ಸಿ ರಾಣಿಯ ಪಾಠದಲ್ಲಿ ಅಪ್ರತಿಮ ಶೌರ್ಯದಿಂದ ಸೆಣೆಸಿದವಳ ಹೆಸರನ್ನೇ ಇವಳಿಗೆ ನಾಮಕರಣ ಮಾಡಿಬಿಟ್ಟಿದ್ದ ಚೇತನ್. ಪಲ್ಲವಿಯೇ ಆತನ ಪಾಲಿನ ಝಾನ್ಸಿ ರಾಣಿ. ಮುಂದೆ ಈ ಸ್ನೇಹ ಪ್ರೇಮಕ್ಕೆ ತಿರುಗಿ ಚೇತನ್ ಪ್ರೇಮ ನಿವೇದನೆಯನ್ನು ಮಾಡಿದ್ದ. ಆದರೆ, ಪಲ್ಲವಿಗೆ ಅದು ಒಪ್ಪಿತವಾಗಿರಲಿಲ್ಲ.
ಆಗ ಅವಳ ತಲೆಯಲ್ಲಿ ಇದ್ದದ್ದು ಎರಡೇ ವಿಷಯ. ಚೆನ್ನಾಗಿ ಓದಿ ಆಡಿಕೊಳ್ಳುವವರ ಬಾಯಿಗೆ ಹೆಮ್ಮೆಯ ಬದುಕನ್ನೇ ಉತ್ತರವಾಗಿಸಬೇಕೆನ್ನುವುದು. ಮತ್ತೊಂದು ಅಪ್ಪನ ತಪ್ಪಿನಿಂದ ಹಾಳಾಗಿದ್ದ ಹೆಸರನ್ನು ಮತ್ತಷ್ಟು ಹಾಳಾಗಲು ಅವಕಾಶ ಮಾಡಿಕೊಡಬಾರದೆಂದು.
ಚೇತನ್ ಈಕೆಯನ್ನು ಪ್ರೇಮಿಸುವುದನ್ನಂತೂ ಬಿಡಲಿಲ್ಲ. ಆದರೆ, ಪಲ್ಲವಿಯ ಮನಸ್ಸು ಪಕ್ವವಾಗುತ್ತಾ ಅವನ ಪ್ರೀತಿ ಅರ್ಥವಾಗಿತ್ತಾದರೂ.. ಎದುರಾದ ಸಂದರ್ಭಗಳು ಆಕೆ, ಇನ್ನೇನು ಆತನ ಪ್ರೇಮ ನಿವೇದನೆಯನ್ನು ಒಪ್ಪಿಕೊಳ್ಳಬೇಕೆನ್ನುವಷ್ಟರಲ್ಲಿ ಅದನ್ನು ಅಸಾಧ್ಯವಾಗಿತ್ತು.
ಚರಣ ಬಿಟ್ಟು ಹೋದ ಕರ್ತವ್ಯವನ್ನು ಕೈಗೆತ್ತಿಕೊಂಡವಳು ತನ್ನದಲ್ಲದ ಜವಾಬ್ದಾರಿಯನ್ನು ತನ್ನ ಹೆಗಲಿಗೆ ಏರಿಸಿಕೊಂಡಿದ್ದಳು. ಅದೇ ಅಪ್ಪ. ಅಪ್ಪ ಜವಾಬ್ದಾರಿ ಮಾತ್ರವಾ.. ಮಗಳ ಯಾವ ತೀರ್ಮಾನಕ್ಕೂ ಎದುರಾಡದ ಅಪ್ಪ. ಮುಂದೆ ತಂದೆ, ಮಲತಾಯಿಯರ ಜೊತೆ ಹೆಚ್ಚಿನ ಒಡನಾಟವಿಲ್ಲದ ಲೆಕ್ಚರರ್ ರಘುವಿನ ಜೊತೆ ವಿವಾಹವಾಗಿತ್ತು. ಚರಣನಿಗೆ ಇದೆರಡೂ ಇಷ್ಟವಾಗಲಿಲ್ಲ. ಸಾಧ್ಯವಾದಷ್ಟು ಅಂತರವನ್ನೇ ಕಾಯ್ದುಕೊಂಡ.
ಬದುಕಿನಲ್ಲಿ ತನ್ನದಲ್ಲದನ್ನು ತನ್ನದಾಗಿಸಿಕೊಂಡ ಪಲ್ಲವಿಗೆ ಈಗ ಚೇತನ್ ನ ಭೇಟಿಯಾಗಿತ್ತು. ಅದಕ್ಕೂ ಮೊದಲು ಕೃಪಾಳ ವಿವಾಹದಲ್ಲಿ ಇಬ್ಬರ ಭೇಟಿಯಾಗಿದ್ದರೂ.. ತನ್ನ ತಂಡದಲ್ಲಿಯೇ ಕೆಲಸ ಮಾಡುವಷ್ಟು ಹತ್ತಿರದಲ್ಲಿ ಮತ್ತೆ ಆತನ ಜೊತೆಯಾಗುವೆನೆಂದು ಭಾವಿಸಿಲ್ಲದ ಆಕೆ ಮತ್ತೆ ಆತನನ್ನು ಎದುರಿಸುವಂತಾಗಿತ್ತು. ಆತ ತನ್ನ ಬದುಕು ಕಟ್ಟಿಕೊಂಡು ಸುಖವಾಗಿದ್ದಾನೆ ಎಂದುಕೊಂಡಿದ್ದವಳಿಗೆ ಅವಳ ಕಲ್ಪನೆ ತಪ್ಪಾದದ್ದು ತಿಳಿದಿತ್ತು.
ಅಮೆರಿಕಾದ ಟೀಮಿನಲ್ಲಿ ಒಂದೇ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದವರು ಮತ್ತೆ ಹತ್ತಿರವಾಗಲು ತೀರಾ ಹೆಚ್ಚಿನ ಅವಧಿಯೇನೂ ಹಿಡಿಯಲಿಲ್ಲ. ಪ್ರಬುದ್ಧ ಮನಸ್ಥಿತಿಗಳ ಭೇಟಿ ಮಾತ್ರವಾ ಎಂದುಕೊಂಡರೆ ಅದನ್ನು ಮೀರಿ ಹಿಂದಿನ ಸಲುಗೆ ಹಾಗೂ ಪ್ರೇಮ ಜೊತೆಯಾಗಿತ್ತು. ಮತ್ತೆ ಸೆಳೆತ.. ಜೊತೆಗೆ ಪಲ್ಲವಿ ತನಗೆ ಗೊತ್ತಿಲ್ಲದಂತೆ ಆತನನ್ನು ಹಾಗೂ ತನ್ನ ಈಗಿನ ಸಂಗಾತಿಯನ್ನು ಹೋಲಿಸಲು ಶುರು ಮಾಡಿದ್ದಳು.
ಆಕೆ ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ತನ್ನ ಮಗಳನ್ನು ಜೊತೆಗೆ ಕರೆತಂದರೂ.. ಅವಳನ್ನು ತನ್ನ ಮಗಳೆಂದೇ ಭಾವಿಸಿಕೊಂಡು ಸಾಕಲು ಸಿದ್ಧವಿದ್ದ ಚೇತನ್. ಅದು ಅಮೆರಿಕಾವಾದ್ದರಿಂದ ಬದುಕನ್ನು ಹೀಗೆ ಮಾಡು, ಇಂತಹ ನೈತಿಕತೆಯ ಚೌಕಟ್ಟಿನಲ್ಲಿಯೇ ಬದುಕು ಎಂದು ಹೇಳುವವರು ಹಾಗೂ ಸದಾ ಅವರ ಕುರಿತೇ ಮಾತನಾಡುವವರು ಇರಲಿಲ್ಲವಾದರೂ. ಮನಸಾಕ್ಷಿಗೆ ಅದು ಒಪ್ಪಿತವಾಗುತ್ತದಾ..?!
ಪಲ್ಲವಿಯ ಮನಸ್ಸಿನಲ್ಲಿ ಮೂಡಿದ್ದ ಸೆಳೆತ ಹೇಗಿತ್ತು ಎಂದರೆ ಆ ಪ್ರಾಜೆಕ್ಟ್ ಮುಗಿದು ಭಾರತಕ್ಕೆ ಮರಳಿದ ನಂತರವೂ ಸದಾ ಆತನ ಧ್ಯಾನ. ಎಷ್ಟೆಂದರೆ ಪುಟ್ಟ ಚೈತನ್ಯದ ಚಿಲುಮೆಯಂತಹ ಮಗಳನ್ನು ನಿರ್ಲಕ್ಷಿಸುವಷ್ಟು. ಮತ್ತೆ ಆಕೆ ತುರ್ತಾಗಿ ಅಮೆರಿಕಾಗೆ ಹೋಗುವ ಪರಿಸ್ಥಿತಿ ಬಂದೊದಗಿತ್ತು. ಅಂತರಗಳು ಮನುಷ್ಯನನ್ನು ಹಾಗೂ ಪ್ರೀತಿಯನ್ನು ಮತ್ತಷ್ಟು ಹತ್ತಿರವಾಗಿಸುತ್ತವೆ ಎನ್ನುವ ವರ್ತನೆಯನ್ನು ನಾವು ಇಲ್ಲಿ ಗಮನಿಸಬಹುದು. ಮುಂದೆ ಆಕೆಯ ಬದುಕಿನ ಆಯ್ಕೆ ಹೇಗಿತ್ತು..?! ನೈತಿಕತೆಯ ಚೌಕಟ್ಟಿನಲ್ಲಿಯೇ ಇರಲಿ ಎಂದು ಅವಳ ಪ್ರತಿ ಹೆಜ್ಜೆಯನ್ನು ಕಂಡು ಆಶಿಸುವಂತಹ ಓದುಗರ ಮನಸ್ಥಿತಿ ಅಂತ್ಯವನ್ನು ಕಂಡಾಗ ಯಾವ ಭಾವವನ್ನು ತಂದುಕೊಡುತ್ತದೆ..? ನೀವೇ ಓದಿ ನೋಡಿ.
ಈ ಕಥಾವಸ್ತು ಕೇವಲ ಭಾರತದಲ್ಲಿ ಮಾತ್ರ ನಡೆದಿದ್ದರೆ ವಿವಾಹದ ನಂತರ ಗಂಡ ಹಾಗೂ ಪುಟ್ಟ ಮಕ್ಕಳನ್ನು ಬಿಟ್ಟು ಹೊರಟು ಹೋಗುವ ಅಮೃತಮತಿಯಂತಹ ಎಷ್ಟೋ ಹೆಣ್ಣುಗಳನ್ನು ತೋರಬಹುದು. ಇದು ಭಾರತ ಹಾಗೂ ಅಮೆರಿಕಾದ ನಡುವೆ ನಡೆಯುವ ಕತೆಯಾದರೂ ನಮ್ಮ ಭಾರತೀಯ ಮನಸ್ಥಿತಿ ಆ ರೀತಿಯ ಆಲೋಚನೆಯನ್ನು ಅರಗಿಸಿಕೊಳ್ಳುವುದು ಸಹ ಕಷ್ಟವೇ.. ವಿವಾಹವೆಂದರೆ ಕೇವಲ ಬೌದ್ಧಿಕ ಸಾಂಗತ್ಯ ಮಾತ್ರವೇ.. ಅಥವಾ ಇಬ್ಬರೂ ಒಂದೇ ರೀತಿಯ ಆಲೋಚನೆಯುಳ್ಳವರಾಗಿರಬೇಕೇ.. ಒಲವು ಕೇವಲ ಅಂತಹವರ ನಡುವಲ್ಲಿ ಮಾತ್ರ ಸಾಧ್ಯವೇ.. ಈ ರೀತಿಯ ಸಾಧ್ಯಾಸಾಧ್ಯತೆಗಳೆಲ್ಲವನ್ನು ನಮ್ಮ ಮನಸ್ಸಿಗೆ ಮೂಡಿಸುವಂತಹ ಚಿತ್ರಣವಿದೆ.
ಪಲ್ಲವಿ ಚೇತನ್ ನ ಕರೆಗೆ ಓಗೊಟ್ಟು ಹೊರಟಿದ್ದರೆ ಅಥವಾ ಆಕೆ ಎರಡನೇ ಬಾರಿ ಅಮೆರಿಕಾಗೆ ಹೋಗುವಾಗ ತೆಗೆದುಕೊಂಡ ನಿರ್ಧಾರ ವಾಸ್ತವಕ್ಕಿಳಿದಿದ್ದರೆ..! ಆಕೆಯ ತಂದೆಯ ನಡೆಗೂ ವ್ಯತ್ಯಾಸವಿರುತ್ತಿರಲಿಲ್ಲವೇನೋ.. ತಾನೇ ಕಟ್ಟಿಕೊಂಡ/ ಆರಿಸಿಕೊಂಡ ಸಂಸಾರಕ್ಕಾಗಿ ಹಾಗೂ ಬದುಕಿಗಾಗಿ ಸಂಯಮ ಹಾಗೂ ನಿಸ್ವಾರ್ಥತೆಯ ಜೊತೆಗೆ ಮರೆವು ಕೂಡ ಕೆಲವೊಮ್ಮೆ ಅನಿವಾರ್ಯವಾಗಬೇಕು. ಆಗಷ್ಟೇ ಬದುಕಿನ ನೈತಿಕತೆಯ ಪರಿಧಿ ಸ್ವಾತಂತ್ರ್ಯ ಹಾಗೂ ಸ್ವೇಚ್ಛೆಯ ಗೆರೆಯನ್ನು ತೋರುತ್ತದೆ. ಇಲ್ಲವಾದಲ್ಲಿ ಏನೇ ಸಮರ್ಥನೆ ನೀಡಿದರೂ ಅದು ಕ್ಷಮೆಗೆ ಅರ್ಹವಲ್ಲ ಎಂಬುದು ನನ್ನ ಅಭಿಪ್ರಾಯ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ