ಪುಸ್ತಕದ ಶೀರ್ಷಿಕೆ : ಒಲಿದ ಜೀವ
ಲೇಖಕರು : ಎ. ಪಂಕಜ
ಪ್ರಕಾಶಕರು : ಓಂಶಕ್ತಿ ಪ್ರಕಾಶನ
ಪ್ರಥಮ ಮುದ್ರಣ : 1990
ದ್ವಿತೀಯ ಮುದ್ರಣ : 2012 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 103
ಬೆಲೆ : 60 ರೂ.
ಒಲಿದ ಜೀವ ನಾನು ಓದಿದ ಎ. ಪಂಕಜ ಅವರ ಮೊದಲ ಕಾದಂಬರಿ. ಈ ಕಾದಂಬರಿಯಲ್ಲಿ ಕಥಾವಸ್ತುವಿಗಿಂತ ನನಗೆ ಕಥೆಯನ್ನು ಹೆಣೆದ ರೀತಿ ಹಾಗೂ ಭಾವನೆಗಳಿಗೆ ಒತ್ತುಕೊಟ್ಟ ಬಗೆ ವಿಭಿನ್ನ ಓದಿನ ಅನುಭವವನ್ನು ನೀಡಿತು.
ಮೊದಲಿಗೆ ಕಥೆ ಶುರುವಾಗುವುದು ಅನುಪಮಳ ದೃಷ್ಟಿಯಿಂದ.
ಅನುಪಮ ಹುಟ್ಟಿದ್ದು ಮೂರು ಗಂಡು ಮಕ್ಕಳ ನಂತರ. ಬಯಸಿ ಬಯಸಿ ಪಡೆದ ಮಗಳು ಅವಳು. ರಾಮ, ಕೃಷ್ಣ ಹಾಗೂ ನಾರಾಯಣರ ನಂತರ ಹುಟ್ಟಿದವಳು ಮನೆಯ ಕಣ್ಗೊಂಬೆಯಂತೆ ಎಲ್ಲರೂ ಪ್ರೀತಿಯಿಂದ ನೋಡಿಕೊಂಡು ಬೆಳೆಸುತ್ತಿದ್ದವಳ ಬದುಕು ಬದಲಾದದ್ದು ಆಕೆಯ ತಂದೆ ಕಾಯಿಲೆ ಮಲಗಿದಾಗ ಅಷ್ಟರಲ್ಲಾಗಲೇ ರಾಮ ಹಾಗೂ ಕೃಷ್ಣರಿಗೆ ಮದುವೆಯಾಗಿತ್ತು. ರಾಮನ ಹೆಂಡತಿ ಅನುಕೂಲಸ್ಥರ ಮನೆಯಿಂದ ಬಂದ ಸುಮನ. ಆಕೆ ಮನೆಗೆ ಹೊಂದಿಕೊಳ್ಳುವುದರ ಬದಲಾಗಿ ಅವರನ್ನು ನಿಕೃಷ್ಟವಾಗಿ ಕಂಡದ್ದೇ ಹೆಚ್ಚು. ಕೂತ ಕಡೆಯೇ ಊಟ-ಉಪಚಾರಗಳಾಗುತ್ತಿದ್ದವು. ಇನ್ನು ಎರಡನೇ ಸೊಸೆಯಾಗಿ ಬಂದ ರಾಣಿ ಸುಮನಳೇ ಮೆಚ್ಚಿ ತಂದ ಹೆಣ್ಣು.
ಅನುಪಮಳ ಹೈಸ್ಕೂಲು ಮುಗಿಯುವಷ್ಟರಲ್ಲಿಯೇ ತಂದೆ ತೀರಿಹೋಗಿದ್ದರು. ಅಮ್ಮನ ಮಾತಿಗೆ ಮನೆಯಲ್ಲಿ ಬೆಲೆಯಿರಲಿಲ್ಲ. ಹಣಕಾಸಿನ ವಿಚಾರದಲ್ಲಿ ಸ್ವತಂತ್ರರಾಗಿದ್ದವರು ಈಗ ಮಕ್ಕಳ ಹಂಗಿನಲ್ಲಿ ಇರುವಂತಹಾ ಪರಿಸ್ಥಿತಿ. ಅನುಪಮ ಈಗ ಮನೆಕೆಲಸ ಮಾಡಿಕೊಂಡು, ಟ್ಯೂಷನ್ ಹೇಳುತ್ತಾ ಓದುತ್ತಿದ್ದಳು. ಜೊತೆಗೆ ಅವಳ ಓದಿನ ಖರ್ಚು ಇಲ್ಲದೆ ಇದ್ದುದರಿಂದ ಓದಿಗೆ ಅಂತಹಾ ಕುತ್ತು ಬರಲಿಲ್ಲ. ನಾರಾಯಣ ಇನ್ನೂ ಓದುತ್ತಿದ್ದ. ಅಮ್ಮನಿಗೆ ಇದ್ದುದರಲ್ಲಿ ಅವನ ಮೇಲೆಯೇ ಹೆಚ್ಚಿನ ಪ್ರೀತಿ. ಆತನ ವಿಷಯ ಉಳಿದ ಇಬ್ಬರು ಗಂಡು ಮಕ್ಕಳಂತಾಗುವುದಿಲ್ಲ ಎಂದುಕೊಳ್ಳುವಷ್ಟರಲ್ಲಿಯೇ ಆತ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾಗಿ ಕೆಲಸವೂ ಸಿಕ್ಕಿ ಮನೆಯಿಂದ ಹೊರ ನಡೆದಿದ್ದ. ಅದಾದ ನಂತರ ಆತ ಮನೆಯತ್ತ ತಲೆ ಹಾಕಲಿಲ್ಲ.
ಅನುಪಮಳ ಪಾಲಿಗೆ ಒಬ್ಬೊಬ್ಬರೇ ಕೈಬಿಟ್ಟು ಹೋಗುತ್ತಿದ್ದರು. ಅಮ್ಮನೂ ಒಂದು ದಿನ ಮಲಗಿದ್ದವರು ಏಳಲೇ ಇಲ್ಲ. ಅಮ್ಮನಿಲ್ಲದ ಮನೆಗೆ ಹೊಂದಿಕೊಳ್ಳಲು ಆರಂಭಿಸಿದ್ದಳು. ಮೊದಮೊದಲಲ್ಲಿ ಅಮ್ಮನ ನೆನಪು ಕಾಡುತ್ತಿದ್ದರೂ ನಂತರ ವಾಸ್ತವಕ್ಕೆ ಹೊಂದಿಕೊಂಡಾಗಿತ್ತು.
ಅದೇ ಸಮಯಕ್ಕೆ ಪರೀಕ್ಷೆಯ ಫಲಿತಾಂಶ ಬಂದು ಇನ್ನೇನು ಎಲ್ಲವೂ ಸುಗಮವಾಗುತ್ತಿತ್ತು ಎನ್ನುವಷ್ಟರಲ್ಲಿ ಅತ್ತಿಗೆ ಸುಮನ ಆಕೆಯನ್ನು ನಯವಾಗಿ ವಧುಪರೀಕ್ಷೆಗೆ ಸಿದ್ಧಪಡಿಸಿದ್ದಳು. ವರ ಮತ್ತಾರು ಅಲ್ಲ.. ಅತ್ತಿಗೆಯ ಚಿಕ್ಕಪ್ಪನಾಗಿದ್ದ ವೆಂಕಟೇಶ್. 35 ವರ್ಷಕ್ಕೆ ಹೆಂಡತಿಯನ್ನು ಕಳೆದುಕೊಂಡು ಮೂರು ವರ್ಷದ ಮಗನನ್ನು ಸಾಕಲು ಕಷ್ಟಪಡುತ್ತಿದ್ದವರಿಗೆ ಈಗ 40ರ ಹತ್ತಿರದ ವಯಸ್ಸು. ಅನುಪಮಳ ಎರಡು ಪಟ್ಟು ವಯಸ್ಸು. ಹಣ ಏನು ಬೇಕಾದರೂ ಮಾಡಿಸುತ್ತಿತ್ತೇನೋ.. ಅನುಪಮ ಎಷ್ಟೇ ಹೇಳಿದರೂ ಆ ವಿವಾಹಕ್ಕೆ ಒಪ್ಪಲಿಲ್ಲ. ಆಗ ಸಹಾಯಕ್ಕೆ ಬಂದದ್ದು ಎರಡನೆಯ ಅಣ್ಣ ಕೃಷ್ಣ. ತನಗಾಗಿ ಈ ಮನೆಯಲ್ಲಿ ಯಾರಾದರೂ ಇದ್ದಾರೆ ಎಂದರೆ ಅದು ನನ್ನ ಅಣ್ಣ ಎಂದುಕೊಂಡ ಅವಳಿಗೆ ಅಣ್ಣನ ನಿಜರೂಪ ತಿಳಿಯಲು ಹೆಚ್ಚಿನ ಸಮಯವೇನೂ ಆಗಲಿಲ್ಲ.
ತನ್ನ ಹೆಂಡತಿ ರಾಣಿಗೆ ಹೆಚ್ಚಿನ ಕೆಲಸದ ಹೊರೆ ಬೀಳಬಾರದೆಂದು ಅನುಪಮಳನ್ನು ಮದುವೆಯಾಗಲು ಬಿಡದಂತೆ, ಯಾವುದಾದರೂ ಕೆಲಸಕ್ಕೆ ಸೇರಿಸಿ.. ಬಂದ ಹಣದಿಂದ ಬದುಕುವ ಉಪಾಯ ಅವನದ್ದು. ಅಲ್ಲದೇ ಮುದುಕನನ್ನು ಮದುವೆಯಾಗಿ ಮತ್ತೆ ವಿಧವೆಯಾಗಿ ಬಂದರೆ ತಾವೇ ಅವಳನ್ನು ಸಲಹಬೇಕೆಂಬ ದೂರಾಲೋಚನೆ ತಿಳಿದು ಅಣ್ಣನ ಮೇಲಿದ್ದ ಗೌರವ ಹೆಮ್ಮೆ, ಕ್ಷಣದಲ್ಲಿ ಮಣ್ಣಾಗಿತ್ತು.
ಗೆಳತಿಯ ತಂದೆಯ ಸಹಾಯದಿಂದ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿದ ಅನುಪಮಾಳಿಗೆ ಆ ಬ್ಯಾಂಕಿನಲ್ಲಿ ಮತ್ತೊಬ್ಬ ಮಹಿಳಾ ಸಹೋದ್ಯೋಗಿಯಾಗಿದ್ದ ವಿಮಲ ಹತ್ತಿರವಾದರು. ಅಕ್ಕನಂತೆ ಅನುಪಮಳ ಬದುಕಿನ ವಿಚಾರದಲ್ಲಿ ಆಕೆ ಸಲಹೆ ನೀಡುತ್ತಿದ್ದರು. ತನ್ನ ಮನೆಯಲ್ಲಿಯೇ ಬಂದಿರಲು ಹೇಳಿದರು. ಆದರೆ, ಅನುಪಮಳಿಗೆ ಅದು ಒಪ್ಪಿಗೆಯಾಗಲಿಲ್ಲ. ಅದಕ್ಕೆ ಬದಲಾಗಿ ಯಾವುದಾದರೂ ಮನೆ ನೋಡಲು ಹೇಳಿದಳು. ಅದೇ ಸಮಯಕ್ಕೆ ಅದೇ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀಧರ ಕಣ್ಣಿಗೆ ಬಿದ್ದಿದ್ದ. ಅದೇ ಬ್ಯಾಂಕಿನಲ್ಲಿ ಅಟೆಂಡರ್ ಆಗಿದ್ದ. ಚುರುಕಾದ ಸ್ಫುರದ್ರೂಪಿ ಯುವಕ ಎಲ್ಲರಿಗೂ ಸಹಾಯ ಮಾಡುತ್ತಿದ್ದ. ಅನುಪಮಳಿಗೆ ಮನೆ ಹುಡುಕಲು ಆತನ ಸಹಾಯ ಪಡೆಯಲು ಹೇಳಿದರು.
ಶ್ರೀಧರನದ್ದು ವಿಭಿನ್ನ ವ್ಯಕ್ತಿತ್ವ. ಆತ ಅಟೆಂಡರ್ ಕೆಲಸದಲ್ಲಿದ್ದರೂ ಪ್ರತಿಯೊಬ್ಬರೂ ಆತನಿಗೆ ಗೌರವ ನೀಡಿ ಮಾತನಾಡಿಸುತ್ತಿದ್ದರು. ಆತನೂ ಅದನ್ನು ಕಾಪಾಡಿಕೊಂಡಿದ್ದ. ಚಿಕ್ಕ ವಯಸ್ಸಿನಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದವನು ಸೋದರತ್ತೆಯ ಮನೆಯಲ್ಲಿದ್ದು ಇಷ್ಟು ಮುಂದಕ್ಕೆ ಬಂದಿದ್ದ. ಮತ್ತೆ ಅನುಕೂಲವಾದರೆ.. ಓದಿ ಹೆಚ್ಚಿನ ಹಂತದ ಹುದ್ದೆಯನ್ನು ಪಡೆಯುವಾಸೆ.
ಶ್ರೀಧರನ ಕುರಿತು ವಿಮಲಾ ಹೇಳಿದ ನಂತರ ಆತನನ್ನೇ ಗಮನಿಸುತ್ತಿದ್ದ ಅನುಪಮಳಿಗೆ ಹೇಳಿದ ಪ್ರತಿ ಮಾತೂ ನಿಜವೆನಿಸಿತು. ಗಂಭೀರವಾಗಿದ್ದ ತಾನಾಯಿತು ತನ್ನ ಕೆಲಸವಾಯಿತು ಎಂಬಂತಿದ್ದ ಯುವಕ ಮೆಚ್ಚುಗೆಯಾದ. ಆತನ ಸಹಾಯದಿಂದ ಮುಂದೆ ಮನೆ ನೋಡಿದರು. ಮನೆಯಲ್ಲಿ ಆಕೆಯನ್ನು ಒಬ್ಬಳನ್ನೇ ಕಳುಹಿಸಲು ವಿರೋಧವೇ ವ್ಯಕ್ತವಾಯಿತು. ವಿರೋಧದ ನಡುವೆಯೇ ಹೊರಬಂದು ತನ್ನ ಪಾಡಿಗೆ ತಾನಿರುವಾಗಲೂ.. ಅಣ್ಣ ನಕಲಿ ಪೋಲೀಸನ್ನು ಕರೆತಂದು ಬೆದರಿಸಲು ನೋಡಿದ ಸಂಧರ್ಭದಲ್ಲಿ ನಿಜವಾದ ಪೊಲೀಸ್ ಸಹಾಯವೇ ಸಿಕ್ಕಿತ್ತು. ಅಲ್ಲದೇ ಮುಂದೆ ಆಕೆ ಹಾಗೂ ಶ್ರೀಧರನ ವಿವಾಹವೂ ಆಯಿತು.
ವಿವಾಹದ ನಂತರ ಶ್ರೀಧರ ಅನುಪಮಳ ಸಹಾಯದಿಂದ ಕೆಲಸ ಬಿಟ್ಟು ಓದಲು ಶುರು ಮಾಡಿದ್ದ. ನಂತರ ಒಳ್ಳೆಯ ಹುದ್ದೆಯನ್ನು ಪಡೆದ. ಬ್ಯಾಂಕಿಂಗ್ ಪರೀಕ್ಷೆಯನ್ನು ಮುಗಿಸಿಕೊಂಡ ಅನುಪಮಳಿಗೆ ಪ್ರಮೋಷನ್ ಮೇಲೆ ಪ್ರಮೋಷನ್ ಸಿಕ್ಕಿ ಸಂಬಳವೂ ಹೆಚ್ಚಾಯಿತು. ಜೊತೆಗೆ, ಒಂದು ಹೆಣ್ಣು ಒಂದು ಗಂಡು ಎಂಬಂತೆ ಮುದ್ದು ಮಕ್ಕಳಾಗಿ ಅವರಿಗೆ ಪ್ರೀತಿ ಹಾಗೂ ವೈಭವ್ ಎಂಬ ಹೆಸರಿಟ್ಟರು. ಅವಳಷ್ಟು ಸುಖಿ ಸಂಸಾರ ಮತ್ತೆಲ್ಲೂ ಇಲ್ಲವೇನೋ ಎಂಬಷ್ಟು ಸುಖವಾಗಿದ್ದ ಅನುಪಮಳಿಗೆ ಆ ಸುಖ ಶಾಶ್ವತವಾಗಿರಲಿಲ್ಲ.
ಅದಾದ ನಂತರ ಅನುಪಮ ಹಾಗೂ ಶ್ರೀಧರನ ಸಂಸಾರದಲ್ಲಿ ಒಡಕು ಬಂದು ಅವರಿಬ್ಬರು ಬೇರೆಯಾಗುವ ಸಂದರ್ಭ ಎದುರಾಯಿತು. ಅದಕ್ಕೆ ಕಾರಣವೇನು ಓದಿನೋಡಿ.
ತಾಯಿಯಾಗಿ ಹಾಗೂ ತಂದೆಯಾಗಿ ಪೋಷಿಸಿದ ಆನುಪಮಳಿಂದ ಪ್ರೀತಿ ಹಾಗೂ ವೈಭವ್ ಕೂಡಾ ದೂರವಾಗುವ ಸಂದರ್ಭ ಎದುರಾಯಿತು.
ಮುಪ್ಪಿನ ಕಾಲದಲ್ಲಿ ಶ್ರೀಧರ ಮತ್ತೆ ಅನುಪಮಳ ಬಳಿಗೆ ಬರುವ ಸಂದರ್ಭವೂ ಬಂತು. ಈ ತಿರುಗಿದ ಕಾಲಚಕ್ರದಲ್ಲಿ ನಡೆದ ಘಟನೆಗಳೇನು..?
ಇಲ್ಲಿ ಘಟನೆಗಳು ಕೇವಲ ಅನುಪಮಳ ಭಾವನೆಗಳ ಮೂಲಕ ಮಾತ್ರ ವ್ಯಕ್ತವಾಗದೆ.. ಪ್ರೀತಿ ಹಾಗೂ ಶ್ರೀಧರನ ಮೂಲಕವೂ ವ್ಯಕ್ತವಾಗಿದೆ. ಅವರವರ ಭಾವನೆಗಳನ್ನು ಹೇಳಿಕೊಳ್ಳುವಾಗ ಕಥೆಯ ಓಘ, ಒಬ್ಬರಿಗೆ ಒಬ್ಬರ ಘಟನಾವಳಿಗಳು ಹೊಂದಿಕೆಯಾಗುವ ಪರಿ ಇದ್ದರೂ ಅದು ಚರ್ವಿತ ಚರ್ವಣ ಎಂದೆನಿಸಲಿಲ್ಲ. ಈ ಕಾದಂಬರಿ ಚಲನಚಿತ್ರಕ್ಕೆಂದೇ ನಿರ್ಮಾಪಕ ಹಾಗೂ ನಿರ್ದೇಶಕರಾದ ಕೆ.ವಿ ಜಯರಾಮ್ ದಂಪತಿಗಳು ಅಪೇಕ್ಷಿಸಿದಂತಹಾ ಕಥೆ. ಇದು ಚಲನಚಿತ್ರವಾಗಲು ಸೂಕ್ತ ಕಥೆ ಎಂಬುದು ಹೌದಾದರೂ.. ಇಲ್ಲಿ ಹೆಣ್ಣಿನ ಭಾವನೆಗಳು, ಕಥೆ ಸಹಾ ಅಷ್ಟೇ ಸಮರ್ಥವಾಗಿ ಚಿತ್ರಿತವಾಗಿದೆ. ಇದು ಸುಖಾಂತ್ಯದ ಕಥೆಯೋ ಅಥವಾ ದುಃಖಾಂತ್ಯವೋ ಓದಿ ನೋಡಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ