ಸಾಮಾನ್ಯವಾಗಿ ಮಕ್ಕಳು ಗರ್ಭದಲ್ಲಿರುವಾಗ ಗರ್ಭಿಣಿಯರಿಗೆ ಒಳ್ಳೆಯದನ್ನೇ ಕೇಳಲು, ಓದಲು ಹೇಳಲಾಗುತ್ತದೆ. ಇದು ಮಕ್ಕಳ ಮೇಲೆ ಪಾಸಿಟಿವ್ ಆದ ಪರಿಣಾಮವನ್ನೇ ಬೀರುತ್ತದೆ ಹಾಗೂ ಮಕ್ಕಳು ಇದರಿಂದ ಕಲಿಯುತ್ತಾರೆ ಎಂಬ ನಂಬಿಕೆಗೆ ಪುಷ್ಟಿ ಕೊಡುವುದು ಮಹಾಭಾರತದ ಸುಭದ್ರೆಯ ಗರ್ಭದಲ್ಲಿದ್ದ ಅಭಿಮನ್ಯು ಚಕ್ರವ್ಯೂಹದ ರಹಸ್ಯವನ್ನು ಅರಿತ ಪ್ರಸಂಗ.
ನಂತರ ಮಕ್ಕಳಿಗೆ ಹಾಲು ಕುಡಿಸುವಾಗ ತಾಯಿಯ ಮಾತು ಅವರ ಮೇಲೆ ಪರಿಣಾಮ ಬೀರುತ್ತದೆ. ಲಕ್ಷ್ಮೀಧರಮಾತ್ಯನ ತಾಯಿ ಹಾಲನ್ನು ಕುಡಿಸುತ್ತ ಅವನಿಗೆ ಕಿವಿಯಲ್ಲಿ ಹೇಳಿದ ಮಾತುಗಳು ಇಂತಿವೆ.
(ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸ
ಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು, ಮಿತ್ರರ್ಗಿಂಬುಕೆಯ್ ನಂಬಿದ
ರ್ಗೆರೆವಟ್ಟಾಗಿರು, ಶಿಷ್ಟರಂ ಪೊರೆ ಎನುತ್ತಿಂತೆಲ್ಲಮಂ ಪಿಂತೆ ತಾ
ನೆರೆದಳ್ ಪಾಲೆರೆವೆಂದು ತೊಟ್ಟು ಕಿವಿಯೊಳ್ ಲಕ್ಷ್ಮೀಧರಾಮಾತ್ಯನಾ )
‘ಕೆರೆಯನ್ನು ಕಟ್ಟಿಸು, ಬಾವಿಯನ್ನು ತೋಡಿಸು, ದೇವಾಲಯಗಳನ್ನು ನಿರ್ಮಿಸು, ಬಂಧನಕ್ಕೆ ಸಿಕ್ಕ ಅನಾಥರನ್ನು ಬಿಡಿಸು, ಸ್ನೇಹಿತರಿಗೆ ಸಹಾಯಕನಾಗು, ನಂಬಿದವರಿಗೆ ಆಶ್ರಯದಾತನಾಗು, ಸತ್ಪುಷರನ್ನು ರಕ್ಷಿಸು.’
ಮಕ್ಕಳು ನಿದ್ರೆಯಲ್ಲಿರುವಾಗ ಹೇಳುವ ಮಾತುಗಳು ಸಹಾ ಅವರ ವ್ಯಕ್ತಿತ್ವವನ್ನು ತಿದ್ದುವಲ್ಲಿ ಪಾತ್ರ ವಹಿಸುತ್ತವೆ. ಇವೆಲ್ಲವನ್ನೂ ನಾವು ಆಡು ಮಾತಿನಲ್ಲಿ ಹೇಳುತ್ತೇವೆ.
ಆದರೆ, ಅವರಿಗೆ ನಿದ್ರೆ ಮಾಡಿಸುವ ಮುನ್ನ ಹಾಗೂ ತಿಳಿ ಹೇಳಲು ಕತೆಗಳನ್ನು ಬಳಸುತ್ತೇವೆ. ಅವುಗಳು ಎಷ್ಟು ಸಾಧ್ಯವೋ ಅಷ್ಟು ನೀತಿ ತುಂಬಿಕೊಂಡು ಸರಳವಾಗಿದ್ದಷ್ಟು ಮಕ್ಕಳ ಮನ ತಟ್ಟುತ್ತವೆ ಹಾಗೂ ಪ್ರಭಾವ ಬೀರುತ್ತವೆ. ಮಕ್ಕಳು ಓದುವ ಸಾಹಿತ್ಯವೂ ಅಂತೆಯೇ ಸರಳವಾಗಿದ್ದಷ್ಟು ಪರಿಣಾಮಕಾರಿ. ಆದರೆ, ಶಿಶು ಸಾಹಿತ್ಯದ ರಚನೆ ಅಷ್ಟು ಸುಲಭವಲ್ಲ.
ಈಗ ಆರೇಳು ವರ್ಷದ ಹಿಂದೆ ನಾನು ಕತೆ ಬರೆಯುತ್ತಿದ್ದಾಗ ನನ್ನ ಅಕ್ಕನ ಮಗಳು ಇನ್ನೂ ಪುಟ್ಟ ಮಗು. "ಚಿಕ್ಕಿ ನೀವು ಬರೆದಿರುವ ಕತೆ ಓದಿ ಹೇಳಿ" ಎಂದಾಗ ಮಕ್ಕಳಿಗಾಗಿ ಕತೆ ಬರೆಯುವ ಪ್ರಯತ್ನ ಮಾಡಿದ್ದೆ. ಆದರೆ, ಒಂದು ಪುಟ್ಟ ಮಕ್ಕಳ ಕತೆ ಬರೆಯುವಷ್ಟರಲ್ಲಿ ಅದರ ಕಷ್ಟ ನನಗೆ ಅರಿವಾಗಿತ್ತು.
ಅಲ್ಲದೇ, ಇತ್ತೀಚೆಗೆ ನನ್ನ ಅರಿವಿಗೆ ಬಂದ ಮತ್ತೊಂದು ಸಂಗತಿ ಮಕ್ಕಳ ಮನಸ್ಸಲ್ಲಿ ನಾವು ಯಾವ ರೀತಿಯ ಪಾತ್ರಗಳ ಕಲ್ಪನೆ ಮೂಡಿಸುತ್ತೇವೋ ಅವು ಅಂತೆಯೇ ಬೆಳೆಯುತ್ತಾ ಸಾಗುತ್ತವೆ. ನನ್ನ ಅಕ್ಕನ ಮಗಳಿಗೆ ರಾಮಾಯಣದ ಕುರಿತು ಪ್ರಶ್ನೆಗಳನ್ನು ಹಾಕುತ್ತಾ.. ಆಯಾ ಸಂಧರ್ಭದಲ್ಲಿ ಪ್ರಸಂಗಗಳನ್ನು ವಿವರಿಸುವಂತೆ ಹೇಳುತ್ತಿದ್ದಾಗ ತಿಳಿದದ್ದು ಮೂಲ ರಾಮಾಯಣದ ಕತೆಯನ್ನು ಅವಳು ಓದಿದ್ದಕ್ಕಿಂತಲೂ.. ಅನಿಮೇಷನ್ ನಲ್ಲಿ ಬರುವ fantasy ಕತೆಯನ್ನೇ ಹೆಚ್ಚು ಮನಸ್ಸಿನಲ್ಲಿ ಅಚ್ಚಿಳಿಸಿಕೊಂಡಿದ್ದಳೆಂದು. ಬಹುಶಃ ದೃಶ್ಯ ಮುಖೇನ ಬರುವ ಪಾತ್ರಗಳೇ ಮಕ್ಕಳ ಮನಸ್ಸಲ್ಲಿ ಹೆಚ್ಚು ಮನಸ್ಸಿನಲ್ಲಿ ಉಳಿಯುತ್ತದೇನೋ..
ಆದರೆ, ನಮ್ಮ ಕಾಲದಲ್ಲಿ ಇದಕ್ಕೆ ಆಸ್ಪದವಿದ್ದದ್ದು ಕಡಿಮೆ. ಹಾಗಾಗಿ ಕೇಳಿದ ಕತೆ, ಓದಿದ ಕತೆಯಲ್ಲಿ ಬಾಲ್ಯದ ಕಲ್ಪನೆಗಳು ಮೂಡಿದ್ದೇ ಹೆಚ್ಚು. ಬಾಲಮಂಗಳ ಚಿತ್ರಕಥಾ ನನಗೆ ಚಿತ್ರಗಳ ಮೂಲಕ ಕಲ್ಪನೆಯನ್ನು ಮೂಡಿಸಿದ್ದೇ ಹೆಚ್ಚು. ಗಿಳಿವಿಂಡುವಿನಿಂದ ಶುರುವಾದ ಸಾಹಿತ್ಯಲೋಕ ತುಂತುರು, ಬಾಲಮಂಗಳ, ಚಂಪಕ, ಚಂದಮಾಮಗಳಿಂದ ದಾಟಿ ಅಗಾಧ ಸಾಹಿತ್ಯಲೋಕಕ್ಕೆ ದಾರಿದೀಪವಾದದ್ದದ್ದನ್ನು ನೆನೆಯಲೇಬೇಕು.
ಮಕ್ಕಳ ಬುದ್ಧಿಶಕ್ತಿಯನ್ನು ಹೆಚ್ಚಿಸಲು ಮಕ್ಕಳಿಗಾಗಿ ಕಥೆ ಹೇಳುವುದು, ಅವರ ಬೌದ್ಧಿಕ ಮಟ್ಟದ ಕಥೆಗಳನ್ನು ಹೆಣೆಯುವುದೆಂದರೆ ಅಷ್ಟು ಸುಲಭವಲ್ಲ. ಆ ಕಥೆಗಳಲ್ಲಿ ನೀತಿಯೂ ತುಂಬಿದ್ದು, ಮಕ್ಕಳಿಗೆ ಕಥೆಗಳ ಮೂಲಕ ನೀತಿ ಪಾಠವನ್ನು ಹೇಳುವುದೆಂದರೆ ಸುಲಭವಂತೂ ಅಲ್ಲವೇ ಅಲ್ಲ. ಮಕ್ಕಳಿಗೆ ಭಾಷಾಭಿಮಾನ ಮೂಡಿಸುತ್ತಾ.. ತಮ್ಮ ಪರಿಸರ, ಹಳ್ಳಿಯ ಪರಿಸರ, ಪಟ್ಟಣದ ಪರಿಸರ, ಪ್ರಾಣಿ-ಪಕ್ಷಿಗಳು ವಾಸಿಸುವ ಅರಣ್ಯದ ಪರಿಸರ, ಈ ಕಾಲದ ಹೊಸ ರೀತಿಯ ಕಥೆಗಳನ್ನು ಹೇಳುವ ಮೂಲಕ ಮಕ್ಕಳನ್ನು ಕಥಾ ಲೋಕಕ್ಕೆ ಕೊಂಡೊಯ್ದಿದ್ದಾರೆ ಲೇಖಕಿ ಉಮಾ ಸುನಿಲ್ ಅವರು.
ಮಾಮ್ಸ್ ಪ್ರೆಸೊ ಕನ್ನಡ ವೇದಿಕೆಯಲ್ಲಿ ಬ್ಲಾಗರ್ ಆಗಿದ್ದ ಗೆಳತಿ ಉಮಾ ಸುನಿಲ್ ಅವರ ಮೊದಲ ಪ್ರಕಟಿತ ಪುಸ್ತಕ 'ಕಥೆ ಕೇಳು ಮಗುವೇ....' ಮಕ್ಕಳಿಗೆಂದೇ ಇಲ್ಲಿ 10 ಚೆಂದದ ಕಥೆಗಳಿವೆ.
'ಸೋಮಾರಿ ಅಣ್ಣ ಸ್ವಾಭಿಮಾನಿ ತಮ್ಮ' ಕಥೆಯಲ್ಲಿ ವಿದ್ಯೆ ಎಂದೂ ಅಳಿದು ಹೋಗದ ಅಮೂಲ್ಯ ಸಂಪತ್ತು ಎಂದು ಹೇಳುತ್ತಾ.. ವಿದ್ಯೆ ಕಲಿಯದ ಸೋಮಾರಿ ಅಣ್ಣನ ಬದುಕು ಹಾಗೂ ವಿದ್ಯೆ ಕಲಿತ ಸ್ವಾಭಿಮಾನಿ ತಮ್ಮನ ಸ್ವಂತ ದುಡಿಮೆಯ ರಾಜನಂತಹಾ ಬದುಕನ್ನು ಚಿತ್ರಿಸಿದ್ದಾರೆ.
ರಾಜ ಹಾಗೂ ಮಂತ್ರಿಯ ಮಗನ ಮೂಲಕ.. ರಾಜಕುಮಾರ ತಾನು ಕೊಟ್ಟ ಸಂದೇಶ ಸರಿ ಎನ್ನುತ್ತಾ.. ತಪ್ಪು ಸಂದೇಶವನ್ನು ನೀಡುತ್ತಾ ಹೋಗುತ್ತಾನೆ. ಅವನು ನೀಡಿದ 'ತಪ್ಪು ಸಂದೇಶ ತಂದ ದುರ್ಗತಿ'ಯನ್ನು ಹೇಳುತ್ತಾರೆ.
'ಯುವರಾಜ ರಾಹುಲ್' ನನ್ನು ಆತನ ತಾಯಿ ಪಂಜರದಲ್ಲಿನ ಪಕ್ಷಿಯಂತೆ ಮುಚ್ಚಟ್ಟೆಯಾಗಿ ಬೆಳೆಸುತ್ತಾಳೆ. ಅದಕ್ಕೊಂದು ಕಾರಣವೂ ಇದೆ. ಆದರೆ, ಯುವರಾಜನಿಗೆ ಬೇಕಾದ ಅರ್ಹತೆಗಳೇನು ಹಾಗೂ ಆತ ತನ್ನ ಸ್ವಾತಂತ್ರವನ್ನು ಪಡೆದುಕೊಂಡ ಬಗ್ಗೆ, ಹೊರ ಜಗತ್ತಿನ ಮಾಹಿತಿಯನ್ನು ಕಂಡುಕೊಂಡ ರೀತಿಯನ್ನು ಹೇಳುತ್ತಾರೆ. ಅವನಲ್ಲಿ ಉಂಟಾದ ಸಕಾರಾತ್ಮಕ ಬದಲಾವಣೆಗಳನ್ನು ಚಿತ್ರಿಸಿರುವ ಕತೆ ಇದು.
ಹಳ್ಳಿಯ ಮಕ್ಕಳಿಗೆ ಪಟ್ಟಣವೆಂದರೆ ಒಂದು ರೀತಿಯ ಬೆರಗು. ಆದರೆ, ಹಳ್ಳಿಯ ಮುಗ್ಧತೆಯ ಪರಿಸರ ಹಾಗೂ ಪಟ್ಟಣದ ಬದುಕಿನ ವಿಭಿನ್ನತೆಯನ್ನು ಕಂಡುಕೊಳ್ಳಲು ಹೊರಟ 'ಮಣ್ಣಿನ ಮಕ್ಕಳ ಪಟ್ಟಣ ಪಯಣ'ವಿದೆ. ಆ ಪಯಣದಲ್ಲಿ ಅವರು ಕಂಡುಕೊಂಡದ್ದೇನು..??
ಸಾಲುಮರಗಳ ಸ್ನೇಹಿತ ಎಂದೇ ಹೆಸರುವಾಸಿಯಾಗುವ ಪುಟ್ಟ 'ಬಾಲಕನ ಪ್ರಕೃತಿ ಪ್ರೇಮ' ಎಲ್ಲರಲ್ಲೂ ಪ್ರಕೃತಿ ಉಳಿಸುವ ಅರಿವು ಮೂಡಿಸುತ್ತದೆ. ಪ್ರಕೃತಿ ಹಾಗೂ ಮನುಷ್ಯನ ಜೀವ-ಜೀವನದ ಬೆಸುಗೆ ಇಲ್ಲಿದೆ.
"ಕಲ್ಲು ದೇವರ ಪೂಜೆಗಿಂತ ಕಷ್ಟದಲ್ಲಿ ಕೈ ಹಿಡಿದ ಜೀವಂತ ದೇವರ ಪೂಜೆಯೇ ದೊಡ್ಡದಲ್ಲವೇ.??" ಎಂದು ಕಣ್ತೆರೆಸುವ ಬಾಲಕಿ 'ನೈನಾ ಮತ್ತು ಅವಳ ದೇವರು' ಕಾಣುತ್ತಾರೆ.
ಅರಣ್ಯದ ಪರಿಸರ ಹಾಗೂ ಪ್ರಾಣಿ ಪಕ್ಷಿಗಳ ಮೂಲಕ ಜೀವ ಹಾಗೂ ಸೌಂದರ್ಯದ ನಡುವಿನ ಸಂಪರ್ಕ ಕಲ್ಪಿಸುತ್ತಾ 'ಮುಳುವಾದ ಸೌಂದರ್ಯ'ವನ್ನು ತೋರುತ್ತಾರೆ.
"ನಿಸ್ವಾರ್ಥ ಪ್ರೀತಿಯನ್ನು ತಾಯಿಯೊಬ್ಬಳೇ ನೀಡಬಲ್ಲಳು" ಎಂದು ಹೇಳುತ್ತಾ ಪ್ರಾಣಿಗಳಲ್ಲೂ ಕಂಡು ಬರುವ ಮಾತೃ ಪ್ರೇಮವನ್ನು 'ದಟ್ಟಡವಿಯ ನಡುವೆ' ಚಿತ್ರಿಸಿದ್ದಾರೆ.
"ಒಗ್ಗಟ್ಟಿನಲ್ಲಿ ಬಲವಿದೆ" ಎಂದು ಹೇಳುವ ಪುಟ್ಟ ಕರುವೊಂದು ತನ್ನವರನ್ನೆಲ್ಲಾ ಒಗ್ಗೂಡಿಸಿ ಹುಲಿಯನ್ನೇ ಹೆದರಿಸಿದ ಹಸುಗಳ ಕಥೆ ಇಲ್ಲಿದೆ. ಪುಟ್ಟವರು ತೋರುವ ಜಾಣ್ಮೆ ಮಕ್ಕಳಲ್ಲಿಯೂ ತಮ್ಮ ನಿರ್ಧಾರವನ್ನು ಹೆದರಿಕೆಯಿಲ್ಲದೆ ಹೇಳುವ ಗುಣ ಬೆಳೆಸಿಕೊಳ್ಳಲು ಪ್ರೇರೇಪಿಸುವಂತಿದೆ.
ಅತಿಯಾದ ಸಂಕೋಚಕ್ಕೆ ಒಳಗಾದರೆ ಏನೆಲ್ಲಾ ಪೇಚಾಟಗಳಾಗಬಹುದು ಎಂದು ಗುಂಡೂರಾವ್ ಅವರ ಮೂಲಕ 'ಸಂಕೋಚ ತಂದ ಪಚೀತಿ'ಯಲ್ಲಿ ಹೇಳಿದ್ದಾರೆ.
10 ಕಥೆಗಳಲ್ಲಿ ವಿಭಿನ್ನ ಕಥಾವಸ್ತುಗಳು ಕಂಡುಬರುತ್ತವೆ. ಕೆಲ ನೀತಿ ಪಾಠಗಳು ಸಾರ್ವಕಾಲಿಕ. ಅಂತಹಾ ನೀತಿ ಪಾಠಗಳನ್ನು ಹೇಳುವ ವಿಭಿನ್ನವಾದ ಕಥಾವಸ್ತುವಿನ, ವಿಭಿನ್ನ ಕಥೆಗಳನ್ನು ಹೊಸ ರೀತಿಯಲ್ಲಿ ಮಕ್ಕಳಿಗೆ ತಲುಪಿಸುವ ಪ್ರಯತ್ನ ಶ್ಲಾಘನೀಯ.
ಸಾಹಿತ್ಯದ ಸಾರ್ಥಕತೆ ಕೇವಲ ಓದಿನ ಅನಾವರಣದಿಂದ ಮಾತ್ರವಲ್ಲ.. ಬದಲಾಗಿ, ಮಕ್ಕಳು ತಮ್ಮ ಅಭಿನಯದ ಮೂಲಕವೂ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಬಲ್ಲರು ಎಂಬುದನ್ನು ನಾನು ಓದಿದ ಮೈತ್ರಿ ಶಾಲೆಯಲ್ಲಿ ನೋಡಿದ ಮಕ್ಕಳ ನಾಟಕ 'ನನ್ನ ಗೋಪಾಲ'ದಿಂದ ಅರಿವಾಗಿಸಿಕೊಂಡೆ.
'ಮಲೆಗಳಲ್ಲಿ ಮದುಮಗಳು' ಹಾಗೂ 'ಕಾನೂರು ಹೆಗ್ಗಡತಿ'ಯಂತಹಾ ಮಹಾನ್ ಕಾದಂಬರಿಗಳನ್ನು ಬರೆದ , 'ಶ್ರೀ ರಾಮಾಯಣ ದರ್ಶನಂ' ಎಂಬ ಜ್ಞಾನಪೀಠ ಪುರಸ್ಕೃತ ಗ್ರಂಥ ಬರೆದ ಕುವೆಂಪುರವರ ಕೃತಿಗಳನ್ನು ಓದಿದ ಮೇಲೆ ಮಕ್ಕಳ ನಾಟಕವನ್ನು ಓದಿದರೆ ಆಯಾ ವಯೋಮಾನದವರಿಗೆ ಅರ್ಥವಾಗುವಂತಿರುವ ಈ ಪುಸ್ತಕದ ಜೊತೆಗೆ ಕುವೆಂಪುರವರ ಬರಹದ ಶೈಲಿಯೂ ಒಂದು ಬೆರಗಿನಂತೆ ಉಳಿದು ಬಿಡುತ್ತದೆ.
ಮಕ್ಕಳೇ ರಂಗ ಪ್ರಯೋಗ ಮಾಡಲು ಅನುವಾಗುವಂತೆ.. ದೊಡ್ಡವರಿಗೂ ಓದಿನ ಹಾಗೂ ನಾಟಕದ ಹಾಗೂ ಶಿಶು ಸಾಹಿತ್ಯದ ಕುರಿತ ಆಸಕ್ತಿ ಮೂಡಿಸುವಂತಿದೆ. ಚಿಕ್ಕ ಪುಸ್ತಕವಾದರೂ ಸೊಗಸಾದ ಛಾಪು ಮೂಡಿಸುವಂತಿದೆ. ಮಕ್ಕಳು ಮುಗ್ಧತೆಯ ಪ್ರತಿರೂಪ. ನಂಬಿಕೆಗೆ ಒಲಿಯದ ದೇವರಿರುವನೇ ಎಂಬಂತೆ ಗೋಪಾಲ ಹಾಗೂ ಬನದ ಗೋಪಾಲನ ಚಿತ್ರಣವಿದೆ.
ಮುಗ್ಧ ಭಕ್ತಿಯ ಜೊತೆಗೆ, ಭಗವದ್ಗೀತೆಯ ಶ್ಲೋಕಗಳೂ ಸೇರಿ ಭಕ್ತಿ- ಭಾವವನ್ನೂ ತುಂಬಿವೆ. ಅತಿರೇಖದ ಚಿತ್ರಣಗಳಿಲ್ಲದೇ ಸಹಜ ಸುಂದರವೆಂಬಂತೆ ಮೂಡಿ ಬಂದಿರುವ 'ನನ್ನ ಗೋಪಾಲ' ನಾಟಕವನ್ನು ನೋಡಿದ್ದಕ್ಕೂ ಮೀರಿದ ಭಾವ ಈ ಅಕ್ಷರಗಳ ಚಿತ್ರಣದಲ್ಲಿ ದೊರೆಯಿತು.
ಗಾತ್ರದಲ್ಲಿ ಚಿಕ್ಕದಾದರೂ.. ಕಥಾ ಪಾತ್ರದಲ್ಲಿ ತೂಕವಿರುವ ಮಕ್ಕಳ ಸಾಹಿತ್ಯದ ಈ ಪುಸ್ತಕ ಎ.ಪಿ ಮಾಲತಿಯವರು ಬರೆದಿರುವ ಹಳ್ಳಿಗೆ ಬಂದ ಎಳೆಯರು. ಕತೆ, ಕಾದಂಬರಿಗಳಿಂದ ಚಿರಪರಿಚಿತರಾಗಿರುವ ಇವರ ಈ ಶಿಶು ಸಾಹಿತ್ಯ ವಿಭಿನ್ನ ಓದಿನ ಅನುಭವ ನೀಡಿತು.
ಮಕ್ಕಳೆಲ್ಲಾ ಅಜ್ಜ - ಅಜ್ಜಿಯ ಮನೆಗೆ ಬೇಸಿಗೆ ರಜೆಗಾಗಿ ಬಂದಿದ್ದಾರೆ. ಅವರ ಮಗನ ಮಕ್ಕಳಾದ 14 ವರ್ಷದ ಉಲ್ಲಾಸ ಹಾಗೂ ಅವನ ತಂಗಿ 12 ವರ್ಷದ ಸುಷ್ಮ, ಅವರ ಜೊತೆಗೆ ಉಲ್ಲಾಸನ ಗೆಳೆಯರಾದ ನರೇಂದ್ರ ಹಾಗೂ ಸತೀಶನೂ ಇದ್ದಾರೆ. ಸುಷ್ಮಳ ಗೆಳತಿಯಾದ ಜಾನಕಿಯೂ ಬಂದಿದ್ದಾಳೆ. ಇವರೆಲ್ಲರೂ ವಾಸಿಸುತ್ತಿರುವುದು ಬೆಂಗಳೂರಿನಲ್ಲಿ. ಅಜ್ಜ-ಅಜ್ಜಿಯ ಮನೆ ಇರುವುದು ಮಲೆನಾಡಿನಲ್ಲಿ. ಹಾಗಾಗಿ ಪಟ್ಟಣದಿಂದ ಹಳ್ಳಿಗೆ ಬಂದಿರುವವರಿಗೆ ಇಲ್ಲಿನ ವಾತಾವರಣ ವಿಭಿನ್ನ.
ಉಲ್ಲಾಸ ಹಾಗೂ ಸುಷ್ಮಾ ರ ತಂದೆಯ ತಮ್ಮ ಹಾಗೂ ತಮ್ಮನ ಹೆಂಡತಿಯು ಇದೇ ಸಮಯದಲ್ಲಿ ಉತ್ತರ ಭಾರತ ಪ್ರವಾಸಕ್ಕೆ ಹೋಗಿರುವುದರಿಂದ ಮನೆಯಲ್ಲಿ ಅಜ್ಜ-ಅಜ್ಜಿಯರ ಜೊತೆಗೆ ಮಕ್ಕಳದ್ದೇ ರಾಜ್ಯಭಾರ. ಅಲ್ಲದೇ, ಮಕ್ಕಳ ಸೈನ್ಯವೇ ಇಲ್ಲಿ ಬಂದಿರುವುದರಿಂದ ಅವರಿಗೆ ಬೇಕಾದ ಸ್ವಾತಂತ್ರ್ಯ ನೀಡಿ ಮಕ್ಕಳ ಮನಸ್ಸಿಗೆ ಉಲ್ಲಾಸ ಮೂಡಿಸುತ್ತಿದ್ದಾರೆ. ಪಟ್ಟಣದಂತಿಲ್ಲದ ಊರಿನಲ್ಲಿ ಮಕ್ಕಳು ಎಲ್ಲವನ್ನೂ ಗಮಣಿಸುತ್ತಿದ್ದಾರೆ. ಅಲ್ಲಿನ ವಾತಾವರಣ, ಊಟ- ತಿಂಡಿ, ಬೆಳಗಿನ ಸೊಬಗು, ವಿವಿಧ ಹೂಗಳು, ಪಕ್ಷಿಗಳ ಕಲರವ ಅಲ್ಲಿ ಸಾಕಿಕೊಂಡಿರುವ ಪ್ರಾಣಿಗಳು ,ನದಿಗಳು ಎಲ್ಲವನ್ನೂ ಗಮನಿಸುವಾಗ ಮಕ್ಕಳ ಮನಸ್ಸಿನಲ್ಲಿ ಪ್ರಶ್ನೆಗಳು ಹಾಗೂ ಕುತೂಹಲಗಳು ಗರಿಗೆದರಿವೆ. ಮಕ್ಕಳ ಸಂದೇಹಗಳಿಗೆ ಉತ್ತರ ನೀಡಿ, ಅವರ ಕುತೂಹಲ ತಣಿಸುತ್ತಾ, ಅನುಮಾನಗಳನ್ನು ಪರಿಹರಿಸುವ ಅಜ್ಜ, ಜೊತೆಗೆ ಅಲ್ಲಿನ ಸಾಂಸ್ಕೃತಿಕ ವೈಭವಗಳ ಪರಿಚಯವನ್ನೂ ಮಾಡಿಸುತ್ತಾರೆ. ಅಷ್ಟೇ ಅಲ್ಲ, ಮಕ್ಕಳ ತುಂಟಾಟವಿಲ್ಲದಿದ್ದರೆ ರಜೆ ಹೇಗೆ ಸಂಪನ್ನವಾಗುತ್ತದೆ..?? ಇವೆಲ್ಲದರ ಸಂಪೂರ್ಣ ಪರಿಚಯಕ್ಕಾಗಿ ಈ ಪುಸ್ತಕ ಓದಿ ನೋಡಿ.
ಮಕ್ಕಳ ಕೈಯಲ್ಲಿ ಇಡಬಹುದಾದ ಈ ಪುಟ್ಟ ಪುಸ್ತಕ ಮಕ್ಕಳಿಗೆ ಹೊಸದೊಂದು ಲೋಕವನ್ನೇ ತೆರೆದಿಡುವುದರಲ್ಲಿ ಯಾವ ಸಂಶಯವೂ ಇಲ್ಲ. ಒಂದು ತಿಂಗಳ ಮಕ್ಕಳ ಬೇಸಿಗೆಯ ರಜೆಯ ಮಜಾ ಹಾಗೂ ಅವರಿಗೆ ಸಿಕ್ಕ ಅನುಭವಗಳು ನಮ್ಮ ಮಕ್ಕಳಿಗೆ ಈ ಕಥೆಯ ರೂಪದಲ್ಲಿ ದೊರೆಯುತ್ತದೆ. ಮಕ್ಕಳಿಗೆ ಕಥೆಯ ಜೊತೆಗೆ ಇಲ್ಲಿನ ಚಿತ್ರಗಳು ಸಹಾ ಮನಸೆಳೆದು.. ಅವರಿಗೆ ರಸದೌತಣ ಬಡಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
'ಚಿನ್ನದ ಹುಡುಗಿ ಚಿನ್ನಮ್ಮ' ಇದು ಮಕ್ಕಳಿಗಾಗಿ ಆರ್. ವಿ. ಭಂಡಾರಿಯವರು ಬರೆದ ನೀಳ್ಗತೆ. ಶೀರ್ಷಿಕೆಯಲ್ಲಿ ಚಿನ್ನದ ಹುಡುಗಿ ಎಂದು ಕಂಡಾಗ ಮೊದಲಿಗೆ ತಲೆಗೆ ಬಂದದ್ದು 'ಚಿನ್ನದ ಹುಡುಗಿ' ಎಂದೇ ಖ್ಯಾತಿಯಾಗಿರುವ ಪಿ.ಟಿ ಉಷಾ. ಈ ಕಥೆ ಮಕ್ಕಳಿಗೆ ಕ್ರೀಡಾಸ್ಫೂರ್ತಿ ನೀಡುವ ಹುಡುಗಿಯದ್ದಿರಬಹುದಾ.. ಎಂದು. ಒಂದರ್ಥದಲ್ಲಿ ಇದು ಹೌದಾದರೂ.. ಇನ್ನೂ ಹೆಚ್ಚಿನ ಸ್ಫೂರ್ತಿಯನ್ನೂ ನೀಡುತ್ತದೆ.
ಚಿನ್ನಮ್ಮ 6-7 ವರ್ಷದ ಹುಡುಗಿಯಾಗಿದ್ದಾಗಲೇ ತನ್ನ ತಾಯಿಯಿಂದ ದೂರ ಇರಬೇಕಾದ ಪ್ರಸಂಗ ಬರುತ್ತದೆ. ಅದಕ್ಕೆ ಕಾರಣವೆಂದರೆ ಬಡತನ. ಕನ್ನೆ ಮುಕ್ರಿಯೂ ವಿಧಿ ಇಲ್ಲದೇ ಮಗಳನ್ನು ಗಾಯತ್ರಮ್ಮನ ಜೊತೆಗೆ ಅವರ ಮನೆಕೆಲಸಕ್ಕೆಂದು ಕಳುಹಿಸಿಕೊಡುತ್ತಾಳೆ. ಹೊನ್ನಾವರವನ್ನೂ ನೋಡಿರದ ಹಳ್ಳಿ ಹುಡುಗಿ ಚಿನ್ನಮ್ಮ ಹುಬ್ಬಳ್ಳಿಯ ಗಾಯತ್ರಿಯ ಮನೆ ಸೇರಿ ಅವರ ಮನೆಯಲ್ಲಿದ್ದ ಗಾಯತ್ರಮ್ಮನ ಮಗ ರಾಜೀವನಿಗೂ.. ಗಂಡ ಶೇಷಪ್ಪನಿಗೂ ಅಚ್ಚುಮೆಚ್ಚಾಗುತ್ತಾಳೆ.
ತನ್ನ ಪುಟ್ಟ ಮಗುವನ್ನು ನೋಡಿಕೊಳ್ಳಲು ಕರೆದುಕೊಂಡ ಚಿನ್ನಮ್ಮ ನಿಧಾನವಾಗಿ ಆ ಮನೆಯ ಎಲ್ಲಾ ಕೆಲಸಗಳನ್ನೂ ಆವರಿಸಿಕೊಂಡಳು. ಗಾಯತ್ರಿ ಎಲ್ಲವನ್ನೂ ಆಕೆಯ ಮೇಲೆ ಹೊರಿಸಿದಳು ಎಂದರೂ ತಪ್ಪಾಗಲಾರದು. ರಾಜೀವನಿಗಿಂತ ಒಂದೆರಡು ವರ್ಷ ದೊಡ್ಡವಳಾಗಿದ್ದು.. ರಾಜೀವನಿಗೆ ಎಲ್ಲಾ ಪಾಠಗಳನ್ನು ಕಲಿಸುತ್ತಾ.. ಹಿರಿಯಕ್ಕನಂತೆ ಕಾದವಳು.
ಮಗು ಕೈಗೂಸಾಗಿದ್ದಾಗ ಬಂದ ಚಿನ್ನಮ್ಮ ಮತ್ತೆ ವಾಪಾಸ್ಸು ಹೊರಟದ್ದು ಆರೇಳು ವರ್ಷಗಳ ನಂತರ. ಓದನ್ನು ಬಿಟ್ಟಿರದ ಚಿನ್ನಮ್ಮ ಮರಳಿ ಶಾಲೆಗೆ ಹೋದಳು. ಚಿನ್ನಮ್ಮನ ಓದಿಗೆ ಪ್ರೋತ್ಸಾಹ ನೀಡುತ್ತಿದ್ದದ್ದು ಯಾರು..?? ಈ ನಡುವೆ ಆಕೆ ಕಲಿತ ವಿದ್ಯೆಗಳೇನು..?? ಆಕೆ ರಾಜೀವನಿಗೆ ಪ್ರೋತ್ಸಾಹಿಸಿ ಬದಲಾಯಿಸಿದ ವಿಚಾರಗಳು ಯಾವುವು..?? ಅವಳ ಓದು ತಡೆ ಇಲ್ಲದೇ ಸಾಗಿತೇ..?? ಕ್ರೀಡೆಯಲ್ಲಿ ಆಕೆ ಆಯ್ದುಕೊಂಡು ಸಾಧಿಸಿದ ಕ್ರೀಡೆ ಯಾವುದು..?? ಎಲ್ಲಾ ಕುತೂಹಲಗಳಿಗೂ ಉತ್ತರ ತಿಳಿಯಲು ಓದಿ 'ಚಿನ್ನದ ಹುಡುಗಿ ಚಿನ್ನಮ್ಮ'.
ಇಲ್ಲಿ ಬಾಲಕಾರ್ಮಿಕ ಪದ್ದತಿಯ ಕುರಿತು ಸಮಜಾಯಿಷಿ ನೀಡಿದ್ದರೂ.. ಅನಿವಾರ್ಯತೆಗೆ ಸಿಲುಕಿ ಅಂತಹಾ ಬದುಕು ದೊರೆತರೂ ಮೇಲೆರಬಹುದಾದ ಪರಿ ಕಾಣುತ್ತದೆ. ಎಷ್ಟೇ ಬೆಂಕಿಯಲ್ಲಿ ಬಿದ್ದರೂ ಹೊಳೆವ ಚಿನ್ನದಂತೆ ಇರುವ ಚಿನ್ನಮ್ಮನ ವ್ಯಕ್ತಿತ್ವವನ್ನು ರೂಪಿಸಿದ್ದಾರೆ.
ಮಕ್ಕಳಿಗೆ ಬೇಕಾದ ಜೀವನ ಮೌಲ್ಯ, ಪಾಠಗಳನ್ನು ಇಲ್ಲಿ ಚಿನ್ನಮ್ಮನ ಮೂಲಕ ಹೇಳುತ್ತಾ.. ಕೆಳವರ್ಗದ ಹಳ್ಳಿ ಹುಡುಗಿಯೊಬ್ಬಳು ಅಷ್ಟು ಸಾಧನೆ ಮಾಡಲು ಸಾಧ್ಯವಾದ ಕೆಚ್ಚಿನ ಕತೆಯೊಂದನ್ನು ಮಕ್ಕಳಿಗೆ ಮನಮುಟ್ಟುವಂತೆ ಹೇಳಿದ್ದಾರೆ ಲೇಖಕರು. 4- 5 ನೇ ತರಗತಿ ಮೇಲ್ಪಟ್ಟ ಮಕ್ಕಳು ಓದಬಹುದಾದ ಸ್ಫೂರ್ತಿದಾಯಕ ಪುಸ್ತಕ.
ಹೀಗೆ ಹೆಸರಿಸುತ್ತಾ ಹೋದರೆ ಹಲವಾರು ಪುಸ್ತಕಗಳು ಸಿಗುತ್ತವೆ. ನಾನು ಬೆರಳೆಣಿಕೆಯಷ್ಟು ಮಾತ್ರ ಪರಿಚಯಿಸಿದ್ದೇನೆ.
ನಾನಂತೂ ಹಿರಿಯರ ಅನುಭವದ ಮಾತಿನಂತೆ 'ನಾನು ಓದದ ಪುಸ್ತಕವನ್ನು ನನ್ನ ಮಗುವಿಗೆ ಕೊಡಲಾರೆ' ಎನ್ನುವ ತೀರ್ಮಾನ ಮಾಡಿಕೊಂಡಿದ್ದೇನೆ. ನನ್ನ ಮಗುವಿಗೆ ಸಿಗುವ ಜೀವನದ ಅನುಭವ ವಿಭಿನ್ನವಾಗಿರಲಿ ಎಂದು ಆಶಿಸುವೆನಾದರೂ.. ಓದಿನಲ್ಲಿ ಮಾತ್ರ ಸೋಸಿ, ಯೋಗ್ಯ ಕೃತಿಗಳನ್ನಷ್ಟೇ ಓದಲು ಕೈಗಿಡುವೆ. ನಾವು ಮೊಬೈಲ್ ಹಿಡಿದರೆ, ಮಕ್ಕಳೂ ಮೊಬೈಲ್ ಹಿಡಿಯುತ್ತಾರೆ. ಹಾಗೆಯೇ.. ನಾವು ಪುಸ್ತಕ ಹಿಡಿದರೆ ಮಕ್ಕಳೂ ಪುಸ್ತಕ ಹಿಡಿಯುತ್ತಾರೆ. ಮಕ್ಕಳ ಕೈಗೆ ಪುಸ್ತಕ ಕೊಡೋಣ ಹಾಗೆಯೇ ಅಂತಹಾ ಶಿಶು ಸಾಹಿತ್ಯದ ಪುಸ್ತಕಗಳನ್ನು ನಾವು ಓದಿ ನಂತರ ಅವರ ಕೈಗಿಡೋಣ. ಅಂತಹಾ ಕೃತಿಗಳು ಅಪ್ಡೇಟ್ ಆಗುತ್ತಲಿರಲಿ ಹಾಗೂ ನವಿರು, ತಾಜಾ, ಹೊಸತನದಿಂದ ಹೆಚ್ಚೆಚ್ಚು ಮೂಡಿಬರಲಿ ಎನ್ನುವ ಆಶಯ ನನ್ನದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ