ಶನಿವಾರ, ಏಪ್ರಿಲ್ 25, 2026

ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ

'ಕಾಡು ನಾಡಿನ ಉಸಿರು' ಎಂಬ ಮಾತನ್ನು ಚಿಕ್ಕಂದಿನಲ್ಲಿ ಪಠ್ಯ ಪುಸ್ತಕಗಳಲ್ಲಿ ಹೆಚ್ಚು ಕಾಣುತ್ತಿದ್ದೆವು. ಆಗ ಕಾಡನ್ನು ಕಂಡ ಬಗೆಗೂ.. ಈಗ ಕಾಡನ್ನು ಕಾಣುವ ಬಗೆಗೂ ಬಹಳಷ್ಟು ವ್ಯತ್ಯಾಸವಿದೆ. ಅದರಲ್ಲೂ ಓದಿನ ಮೂಲಕ ಕಾಡನ್ನು ಸುತ್ತುವ ಅನುಭವವೇ ಬೇರೆ. ಕಾಡು ಎಂದಾಕ್ಷಣ ಮಲೆನಾಡಿನ ಕಾಡನ್ನೇ ಕಣ್ಮುಂದೆ ತಂದುಕೊಳ್ಳುವಾಗ ಬೇರೆ ಬೇರೆ ಕಾಡುಗಳ ಚಿತ್ರಣವೂ ಸಿಕ್ಕಿದೆ. 


ಕಾಡಿನ ಚಿತ್ರಣ ಎಂದರೆ ನನಗೆ ಮೊದಲಿಗೆ ನೆನಪಾಗುವುದು ವಾಸ್ತವವನ್ನು ಕಾಡಿನ ಜೊತೆಗೆ ಮಿಳಿತಗೊಳಿಸುವ ಗಿರಿಮನೆ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಸರಣಿಗಳು. ನನಗಂತೂ ಅಚ್ಚುಮೆಚ್ಚಿನ ಪುಸ್ತಕಗಳಿವು. ಅದರಲ್ಲಿ ಕಾಡಿನ ದಟ್ಟ ಅನುಭವಕ್ಕೆ ಒಳಗಾಗಲು ಚಾರಣಕ್ಕೆ ಹೊರಟವರು ಕಾಣುವ ಕಾಡಿನ ನೋಟವನ್ನೂ ಹಾಗೂ ಕಾಡಿನ ಕರಾಳತೆ, ನಿಗೂಢತೆಯನ್ನು ಗಾಢವಾಗಿ ಮನಸಲ್ಲಿ ಉಳಿಸಿದ ಕಾದಂಬರಿ 'ಅರಮನೆ ಗುಡ್ಡದ ಕರಾಳ ರಾತ್ರಿಗಳು'.


ಹೊರಗಿನಿಂದ ನಿಂತು ನೋಡುವಾಗ ಕಾಣುವ ಕಾಡಿನ ನೋಟಕ್ಕೂ.. ಅನನುಭವಿ ಸಾಹಸಿಗರಿಗೆ ಕಾಡು ಕಾಣಿಸಿದ್ದಕ್ಕೂ ಇರುವ ನೋಟ ಇಲ್ಲಿದೆ. ಪರಿಚಯವೂ ಇಲ್ಲದೆ, ಅಲ್ಲಿ ಸ್ಥಳೀಯರ ಸಹಾಯವೂ ಇಲ್ಲದೆ, ತಾವೇ ಒಂದು ಕೈ ನೋಡಿಯೇ ಬರುತ್ತೇವೆ ಎಂದು ಹೊರಟವರಿಗೆ ಪ್ರಕೃತಿಯೇ ಪಾಠ ಹೇಳಿದ ಕಥೆ ಇಲ್ಲಿದೆ.


ಹೊಸದಾಗಿ ಮದುವೆಯಾದ ನವದಂಪತಿಗಳ ಎರಡು ಜೋಡಿ ಟ್ರಕಿಂಗ್ ನೆಪದಲ್ಲಿ ಇಲ್ಲಿಗೆ ಬಂದಿದ್ದರು. ಅಷ್ಟಕ್ಕೂ ಅರಮನೆಗುಡ್ಡಕ್ಕೆ ಭೇಟಿ ನೀಡುವ ಪ್ಲಾನ್ ಇರದಿದ್ದವರು ಯಾವಾಗಲೂ ಹತ್ತುವ ಬಯಲುಸೀಮೆಯ ಬೋಳು ಬೆಟ್ಟಗಳಿಗಿಂತ, ಮಲೆನಾಡಿನ ಬೆಟ್ಟ ಹತ್ತಿ ಅಲ್ಲಿನ ಮಳೆಯ ಅನುಭವ ಪಡೆಯೋಣವೆಂಬ ಆಲೋಚನೆಯಲ್ಲಿ ಎಲ್ಲರೂ ಜೊತೆಯಾಗಿದ್ದವರು ಶ್ರೀಕರನ ತೀರ್ಮಾನಕ್ಕೆ ಒಪ್ಪಿಗೆ ಇತ್ತು ಕಾಡಿನೊಳಗೆ ಅಡಿ ಇಟ್ಟರು. 


ಅವರಿಗೆ ತಿಳಿದಿರದ ವಿಷಯವೆಂದರೆ ಮಲೆನಾಡಿನಲ್ಲಿ ಕಾಣುವ ಬೆಟ್ಟಗಳು ಅಷ್ಟು ನೇರವೂ ಇರುವುದಿಲ್ಲ, ಹತ್ತಿರವೂ ಇರುವುದಿಲ್ಲ. ಅನುಭವಸ್ಥರಾದ ಚಾರಣಿಗರನ್ನೇ ಅರಣ್ಯ ದಾರಿ ತಪ್ಪಿಸುವಾಗ.. ಸಿದ್ಧತೆಯೇ ಇಲ್ಲದೆ ಇವರು ಹೊರಟಿದ್ದು ಅರಮನೆ ಗುಡ್ಡ ಎಂಬ ಮೃತ್ಯುದೇವತೆಯ ಮಡಿಲೊಳಗೆ. ಹಿಂದಿರುಗಿ ಬರಲು ಯಾರೂ ನೆರವಿಗಿಲ್ಲದೆ ಮತ್ತಷ್ಟು ಸಾಹಸ ಮಾಡುತ್ತಾ ದಾರಿ ತಪ್ಪಿದ್ದರು. ಕಾಡುಪ್ರಾಣಿಗಳ ಹಾಗೂ ನಿಸರ್ಗದ ಸವಾಲುಗಳನ್ನು ನೀವೇ ಓದಿ ಅರಿಯಿರಿ. 


****************************************


ಮಲೆನಾಡಿನ ಕಾಡಿಗಿಂತ ವಿಭಿನ್ನವಾಗಿ ಕಂಡ ಕಾಡಿನ ನೈಜ ಕತೆ ಸಿಕ್ಕಿದ್ದು 'ಆಹುತಿ' ಕಾದಂಬರಿಯಲ್ಲಿ. ಆಹುತಿ ಅನುಷ್ ಶೆಟ್ಟಿಯವರ ಮೊದಲ ಪುಸ್ತಕ. ಇದು ಸತ್ಯ ಘಟನೆಗಳ ಸುತ್ತ ಹೆಣೆಯಲಾದ ಕಾಲ್ಪನಿಕ ಕಥೆ. ಕಾದಂಬರಿಯಲ್ಲಿ ಬರುವ ಸನ್ನಿವೇಶಗಳು ನಾಗರಹೊಳೆ, ಹುಣಸೂರು ಮತ್ತು ಮೈಸೂರಿನಲ್ಲಿ ಜರುಗಿರುವ ಯಾವುದೋ ಕಾಲಘಟ್ಟದ ನೈಜ ಘಟನೆಗಳೇ ಎಂದು ಲೇಖಕರೇ ಹೇಳುತ್ತಾರೆ.


ಪತ್ರಿಕೋದ್ಯಮದಲ್ಲಿ "ಟುಡೇಸ್ ನ್ಯೂಸ್ ಪೇಪರ್ ಈಸ್ ಟುಮಾರೋಸ್ ವೇಸ್ಟ್ ಪೇಪರ್" ಎಂಬ ವ್ಯಾಖ್ಯಾನವಿದೆ. ಆದರೆ, ಒಂದು ದಶಕಕ್ಕೂ ಹಳೆಯ ಪತ್ರಿಕೆಗಳ ಸಾಕ್ಷಾಧಾರಗಳಿಂದ.. ಅರಣ್ಯ ಇಲಾಖೆ ಸುಮಾರು 30 ವರ್ಷಗಳ ಹಿಂದೆ ಇದ್ದ ಸ್ಥಿತಿ ಹಾಗೂ ಕಾಡುಗಳ್ಳರು ಅದರಿಂದ.. ಅರಣ್ಯವನ್ನೇ ದುರ್ಬಲಗೊಳಿಸುತ್ತಾ ಹೋದ ನಂತರ ಸರ್ಕಾರ ಎಚ್ಚರವಾಗಿ ಅದನ್ನು ಪ್ರಬಲಗೊಳಿಸುತ್ತಾ ಹೋದ ಕಥೆ ಇಲ್ಲಿದೆ. 


ಮೈಸೂರಿನ ದಿನಪತ್ರಿಕೆಯಾದ 'ಪ್ರಜಾನುಡಿ' ನಾಗರಹೊಳೆಯಲ್ಲಿ ನಡೆಯುತ್ತಿದ್ದ ಕಾಡುಗಳ್ಳತನದ ಪ್ರಕರಣವೊಂದನ್ನು ಬಯಲು ಮಾಡಿತು. ಅದರ ನೇತೃತ್ವ ವಹಿಸಿದ್ದು ಅದೇ ಪತ್ರಿಕೆಯ ವರದಿಗಾರ ಹನಗೋಡು ನಟರಾಜ್. ಅವರೇ ಹಿಂದಿನ ದಿನಪತ್ರಿಕೆಗಳನ್ನು ಕೊಟ್ಟು.. ಕಾಡುಗಳ್ಳರೊಂದಿಗಿನ ಜಟಾಪಟಿಯ ಅನುಭವಗಳನ್ನು ಲೇಖಕರೊಡನೆ ಹಂಚಿಕೊಂಡಿದ್ದಾರೆ. ಅದೇ ಮಾಹಿತಿಗಳನ್ನು ಕಥೆಯಲ್ಲಿಯೂ ಬಳಸಿರುತ್ತಾರೆ. ಆಹುತಿ ಕಾದಂಬರಿಯ ಒಂದು ಎಳೆಯನ್ನಷ್ಟೇ ಇಲ್ಲಿ ಹೇಳಿದ್ದೇನೆ.


ಹುಣಸೂರಿನಿಂದ ಕೇವಲ ಒಂದು ಗಂಟೆ ಅವಧಿಯ ದೂರದಲ್ಲಿರುವ ನಾಗರಹೊಳೆ ಅರಣ್ಯ ಮೊದಲಿನಿಂದಲೂ ಪ್ರಸಿದ್ಧ ಪ್ರವಾಸಿ ಸ್ಥಳ. ಈ ಕಾಡು ಪ್ರಸಿದ್ಧವಾಗಿರುವುದು ಮುಖ್ಯ ಆಕರ್ಷಣೆಯಾಗಿದ್ದ ಹುಲಿಗಳಿಂದ. ಅಂತೆಯೇ ತೇಗದ ಮರಗಳಿಂದಲೂ.. ಹಾಗಾಗಿ ಟೈಗರ್ ರಿಸರ್ವ್ ಹಾಗೂ ಟಿಂಬರ್ ರಿಸರ್ವ್ ಎಂದು ಇದನ್ನು ಘೋಷಿಸಲಾಗಿತ್ತು. 


ಅಂತಹಾ ಪ್ರಸಿದ್ಧ ನಾಗರಹೊಳೆಗೆ ಗವರ್ನರ್ ಭೇಟಿ ನೀಡಿ, ಒಂದು ರಾತ್ರಿ ಅಲ್ಲಿನ ಕಾವೇರಿ ಲಾಡ್ಜ್ ನಲ್ಲಿ ತಂಗಿದ್ದರು. ಆಗ ಮೈಸೂರು ಪ್ರಾಂತ್ಯದ ಪತ್ರಕರ್ತರೆಲ್ಲಾ ವರದಿ ಮಾಡಲು ನಾಗರಹೊಳೆಗೆ ತೆರಳಿದ್ದರು. ಹೀಗೆ ಹೋಗಿದ್ದವರಲ್ಲಿ ಪತ್ರಕರ್ತ ಹನಗೋಡು ನಟರಾಜ್ ಕೂಡ ಒಬ್ಬರು. ಅವರು ಕ್ರಾಂತಿಕಾರಿ ಬುದ್ಧಿಯಿಂದ ಏನಾದರೂ ಸಾಧಿಸಲೆಂದೇ ಪತ್ರಿಕೋದ್ಯಮಕ್ಕೆ ಬಂದಿದ್ದರು. ನಾಗರಹೊಳೆಗೆ ಹೊರಟಿದ್ದವರು ಕಿಟಕಿಯ ಮೂಲಕ ಕಾಡನ್ನೇ ನೋಡುತ್ತಾ ಕುಳಿತಿದ್ದರೆ.. ಮೂರ್ಕಲ್ಲು ಚೆಕ್ ಪೋಸ್ಟ್ ದಾಟಿ ಸಾಗುತ್ತಿರುವಾಗ ಅವರಿಗೆ ಕಾಡಿನ ನಡುವೆ ಮರ ನೆಲಕ್ಕುರುಳಿದ್ದು ಕಂಡಿತ್ತು. ನಂತರ, ಫೋಟೋಗ್ರಾಫರ್ ಅನ್ನು ಜೊತೆಗೆ ಕರೆದುಕೊಂಡು ಹೋಗಿ ಅಲ್ಲಿ ಫೋಟೋ ತೆಗೆಯುವಾಗ ಅವರ ಕಣ್ಣನ್ನು ಅವರೇ ನಂಬಲಾಗಲಿಲ್ಲ. ಅಲ್ಲಿ ಮರಗಳ ಮಾರಣಹೋಮವೇ ನಡೆದಿತ್ತು. ಆದರೆ, ಕಳ್ಳರ ಯಾವ ಸುಳಿವೂ ಅಲ್ಲಿರಲಿಲ್ಲ. ಅಪ್ಪಯ್ಯನವರಿಗೆ ಇದನ್ನೇ ಹೋಗಿ ಹೇಳಿದರೆ ಅವರು ನಟರಾಜ್ ಅವರ ಮೇಲೆ ಕೂಗಾಡಿ ಬಾಯಿಗೆ ಬಂದಂತೆ ಬೈದು, ಕ್ಯಾಮೆರಾ ಕೂಡ ಜಪ್ತಿ ಮಾಡಿಸಿದರು. ಫೋಟೋಗ್ರಾಫರ್ ಬಾಬುವಿನ ಬುದ್ಧಿವಂತಿಕೆಯಿಂದ ಉಳಿದ ಫೋಟೋಗಳಿಂದ ಒಂದು ಸಂಕ್ಷಿಪ್ತ ವರದಿ ತಯಾರಿಸಿದರು ನಟರಾಜ್. 


ಗವರ್ನರ್ ನ ಸುದ್ದಿಯ ಬದಲಿಗೆ ಇವರ ಪತ್ರಿಕೆಯಲ್ಲಿ ಮಾತ್ರ ಕಾಡಿನ ಸುದ್ದಿ. ಇದನ್ನು ಪರಿಶೀಲಿಸಲು ಅರಣ್ಯ ಇಲಾಖೆ ಡಿ.ಸಿ.ಎಫ್ ವೇದಾಂತ್ ಅವರನ್ನು ನೇಮಕ ಮಾಡಿತು. ಆದರೆ, ನಟರಾಜ್ ವರದಿ ಮಾಡಿದ ಸುದ್ದಿಗೂ.. ಸ್ಥಳಪರಿಶೀಲನೆಗೆ ಹೋದಾಗ ಸಿಕ್ಕ ನೋಟಕ್ಕೂ ಒಂದಕ್ಕೊಂದು ಸಂಬಂಧವೇ ಇರಲಿಲ್ಲ. ಇದರ ಹಿಂದಿನ ಮರ್ಮವೇನು ಎಂದು ತಿಳಿಯಲು ನಟರಾಜರವರು ಅಲ್ಲಿನ ಬುಡಕಟ್ಟು ಜನಾಂಗದವರನ್ನು ವಿಚಾರಿಸಿದಾಗ ಅಪ್ಪಯ್ಯನ ಮೇಲೆ ಕೋಪವಿದ್ದ ಕಾಳಿಂಗ ಸಮಯಕ್ಕಾಗಿ ಕಾಯುತ್ತಿದ್ದವನು ಇವರಿಗೆ ನೆರವಾಗಿದ್ದ.


ಅರಣ್ಯದಂಧೆಯ ವಿರಾಟ್ ದರ್ಶನವಾಗಿದ್ದು  ಆಗಲೇ.. ಕಳ್ಳರನ್ನು ಸಾಕ್ಷಿ ಸಮೇತ ಹಿಡಿಯಬೇಕೆಂದು ಹೊಂಚು ಹಾಕುತ್ತಿದ್ದ ನಟರಾಜ್.. ವೇದಾಂತ್ ರವರಿಗೆ ಮಾಹಿತಿ ನೀಡಿ ಕಾಳಿಂಗ ನೀಡಿದ್ದ ಮಾಹಿತಿಯ ಪ್ರಕಾರ ಅಲ್ಲಿಗೆ ಹೊರಟ ದಿನ ಆ ರಾತ್ರಿ ನಡೆದ ಘಟನೆ ಇಡೀ ಕಾಡಿನ ಸ್ವರೂಪವನ್ನೇ ಬದಲಾಯಿಸಿತು. 


ಮನುಷ್ಯನ ದುರಾಸೆ ಕಾಡಿನ ಸ್ವರೂಪವನ್ನೇ ಬದಲಾಯಿಸಲು ಹೊರಟರೆ.. ಅಂತಹದ್ದೇ ಮನುಷ್ಯರು ಕಾಡನ್ನು ಉಳಿಸಿಕೊಳ್ಳಲೂ ಸಿದ್ಧರಿರುತ್ತಾರೆ. ಎಷ್ಟಾದರೂ ಕಾಡು ಎಂದರೆ ಸೋಜಿಗವೇ.. ಅದರಲ್ಲಿ ಒಂದು ನೈಜ ಘಟನೆಯನ್ನು ಇಟ್ಟುಕೊಂಡು ಇಡೀ ಅರಣ್ಯ ಇಲಾಖೆಯ ಚಿತ್ರಣದ ಬದಲಾದ ಕಥೆಯನ್ನು ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ ಲೇಖಕರು. 


****************************************


ಇದು ನಮ್ಮ ನಾಡಿನ ಕಾಡಿನ ಚಿತ್ರಣಗಳಾದರೆ.. ವಿಭಿನ್ನ ಕಾಡಿನ ಚಿತ್ರಣಗಳನ್ನು ಓದಿದ್ದು ಡಾ. ಬಿ.ಜಿ.ಎಲ್ ಸ್ವಾಮಿಯವರ 'ದೌರ್ಗಂಧಿಕಾಪಹರಣ'ದಲ್ಲಿ.


ಇಲ್ಲಿನ ಪ್ರಸಂಗದಲ್ಲಿ ಮಲಯ ದೇಶದ ಕಾಡುಗಳಲ್ಲಿ ಕಂಡು ಬರುವ 'ಡೂರಿಯೋ ಸಿಬೆತಿನುಸ್' ಎಂದು ಕರೆಯಲಾಗುವ ಡೂರಿಯನ್ ಎಂಬ ಮರದ ವಿಚಾರವಿದೆ. ಈ ಹಣ್ಣಿನ ರುಚಿಯೇನೋ ಸಿಹಿ  ಆದರೆ, ತಿಂದ ನಂತರದ ರುಚಿ - ವಾಸನೆ ರಾಳದ್ದು ಎನ್ನುತ್ತಾರೆ. ಸಮಸ್ಯೆ ಅಲ್ಲಿಯದ್ದೂ ಅಲ್ಲ. ಹಣ್ಣು ಕೊಳೆತಾಗ ಹೊಮ್ಮುವ ದುರ್ನಾತದ್ದು.. ಉಪಾಧ್ಯಾಯರು ವಿದ್ಯಾರ್ಥಿಗಳನ್ನು ಅಂತಹಾ ಸ್ಥಳಕ್ಕೆ ಕರೆದೊಯ್ಯುವುದು, ಅಲ್ಲಿ ಅವರಿಂದಾಗುವ ಅವಘಡಗಳು, ಶಿಕ್ಷೆ ಇವೆಲ್ಲವೂ ಡೂರಿಯನ್ ಹಿಂದೆ ಅಲ್ಲಲ್ಲ ದುರ್ಗಂಧದ ಸುತ್ತಲೂ ಸುತ್ತುವಂತಹದ್ದು.. 


ಮತ್ತೊಂದು ಘಟನೆ ಲೇಖಕರೇ ಉಪಾಧ್ಯಾಯರಾದಾಗ ಅವರ ವಿದ್ಯಾರ್ಥಿಗಳನ್ನು ಕೇರಳದ ಪೊನ್ಮುಡಿ ಕಾಡಿಗೆ ಕರೆದೊಯ್ಯುತ್ತಾರೆ. ಹಿಂದಿಗಿಂತಲೂ ಗಾಢವಾದ ದುರ್ಗಂಧ ಕಂಡ ಪ್ರಸಂಗವೊಂದು ಇಲ್ಲಿದೆ. 


****************************************


ಸಚಿನ್ ತೀರ್ಥಹಳ್ಳಿಯವರ 'ನವಿಲು ಕೊಂದ ಹುಡುಗ' ಕಥಾಸಂಕಲನದಲ್ಲಿ ಎರಡು ಕತೆಗಳಲ್ಲಿ ಕಾಡನ್ನು ಕಂಡ ನೆನಪಾಗುತ್ತಿದೆ.


ಬಿಡುಗಡೆ : ಮನೆಯಲ್ಲಿ ಅಜ್ಜಿಯನ್ನು ಎದುರು ಹಾಕಿಕೊಂಡು ನಾಯಿಮರಿಯನ್ನು ಸಾಕಲಾಗದೆ, ಅದನ್ನು ದಟ್ಟ ಕಾಡಿನಲ್ಲಿ ಬಿಟ್ಟು, ಅದೇ ದಾರಿಯಲ್ಲಿ ಹೋಗುವ ಮಕ್ಕಳ ತಾಕಲಾಟ ಕಂಡಿತು. ದಟ್ಟ ಕಾಡಿನ ನಡುವೆ ಬಿಟ್ಟ ನಾಯಿಮರಿಯ ಪಾಡು ಮುಂದೇನಾಯಿತು ನೀವೇ ಓದಿ. 


ಕಾಡು ಮಲ್ಲಿಗೆ : ಪಟ್ಟಣದಿಂದ ಬಂದ ಮೊಮ್ಮಗನಿಗೆ ಅಜ್ಜ ಕಿಚಾಯಿಸಿದ್ದೇ ನೆಪವಾಗಿ, ಆತನ ಶಿಕಾರಿ ಕಥೆಗಳನ್ನು ಕೇಳುತ್ತಾ ಕೇಳುತ್ತಾ.. ತಾನೂ ಸಾಹಸ ಮಾಡಲು ಕಾಡಿಗೆ ಹೊರಟ. ಆದರೆ, ಕಾಡಿನಲ್ಲೊಂದು 'ಮಂದಾರ' ಮಲ್ಲಿಗೆ ಸಿಕ್ಕಿತ್ತು. ಆ ಮಂದಾರ ಮಲ್ಲಿಗೆಯ ಕತೆ ಓದಿ ನೋಡಿ. ಆದರೆ, ಶಿಕಾರಿ ಕತೆಗಳು ಹಾಗೂ ಕಾಡು ಕೈಬೀಸಿ ಕರೆಯುವ ಪರಿಯನ್ನು ಕಾಣಬಹುದು.


****************************************


ಕಾಡು ಎಂದೂ ಮುಗಿಯದ ಮಾಯೆ. ತೇಗ, ಗಂಧ ತರುಗಳ ವಿಸ್ಮಯದ ಜೊತೆಗೆ ಮತ್ತೊಂದು ಮುಖವೂ ಇದೆ. ಈ ಸಂಕಥನಕ್ಕೆ ಆಯ್ಕೆ ಮಾಡಿಕೊಳ್ಳಲು ಹೊರಟರೆ ಹಲವಾರು ಪುಸ್ತಕಗಳ ರಾಶಿ ಕೈಬೀಸಿ ಕರೆಯುತ್ತದೆ. ಆದರೆ, ಸದ್ಯಕ್ಕೆ ಬರೆಯಲು ಸಮಯವಾದದ್ದು ಇದಿಷ್ಟನ್ನು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ