ಶನಿವಾರ, ಏಪ್ರಿಲ್ 25, 2026

ಸಿರಿಯ ಸಂಕೋಲೆ (ಪುಸ್ತಕ ಯಾನ - 341)


ಪುಸ್ತಕದ ಶೀರ್ಷಿಕೆ : ಸಿರಿಯ ಸಂಕೋಲೆ

ಲೇಖಕರು : ತನುಜ

ಪ್ರಕಾಶಕರು : ವಾಸವಾಂಬ ಪ್ರಕಾಶನ

ಪ್ರಥಮ ಮುದ್ರಣ : 1985

ಪುಟಗಳು : 215


ಹೆಚ್ಚಿನವರು ತಮ್ಮ ಬಳಿ ಇದ್ದುದನ್ನು ಅನುಭವಿಸುವ ಬದಲಾಗಿ ಇಲ್ಲದದನ್ನು ಕಂಡು.. ಅದು ಮತ್ತೊಬ್ಬರ ಬಳಿ ಇರುವಾಗ ಅದನ್ನು ಆಶಿಸುವುದೇ ಹೆಚ್ಚು. ಬಡವ ಶ್ರೀಮಂತನನ್ನು ನೋಡಿ ಸುಖಿ ಎಂದುಕೊಂಡರೆ, ಶ್ರೀಮಂತ ಬಡವನನ್ನು ನೋಡಿ ಸುಖಿ ಎಂದುಕೊಳ್ಳುತ್ತಾರೆ. ಆದರೆ, ಐಶ್ವರ್ಯ ಹಾಗೂ ಹಣ ಸುಖವನ್ನು ಅಳೆಯುವ ಮಾಪನವೇ..? ಸುಖ ಎನ್ನುವುದು ನಾವು ಜೀವನವನ್ನು ನೋಡುವ ದೃಷ್ಟಿಯಲ್ಲಿದೆಯೇ ಹೊರತು ಹಣದಲ್ಲಿಲ್ಲ. ಸಿರಿ ಹೇಗೆ ಸಂಕೋಲೆಯಾಗಬಹುದು ಎನ್ನುವ ಅಂಶವನ್ನು ತನುಜ ಅವರು ಈ ಕಾದಂಬರಿಯಲ್ಲಿ ಬಿಡಿಸಿಟ್ಟಿದ್ದಾರೆ. 


ಈ ಕಾದಂಬರಿಯಲ್ಲಿ ಸ್ವಾತಿಯ ದೃಷ್ಟಿಕೋನವನ್ನು ಮುಖ್ಯವಾಗಿಸಿಕೊಂಡು.. ಆಕೆ ಪುಟ್ಟ ಹುಡುಗಿಯಾಗಿದ್ದಾಗಿನಿಂದ ಆಕೆಯ ಪ್ರಬುದ್ಧ ಬದುಕಿನವರೆಗೂ ಆಕೆ ಆಲೋಚಿಸುವ ರೀತಿಯನ್ನು ತೋರಿದ್ದಾರೆ. ಸಿರಿವಂತಳಾಗಿದ್ದುಕೊಂಡು, ಆಕೆ ಬಯಸುವ ಬದುಕು, ಪ್ರೀತಿ-ಮಮತೆ ಹಾಗೂ ಆಸರೆಯನ್ನು ಹೇಳುವಾಗ ಆಯಾ ಹಂತಗಳು ಓದುವವರಲ್ಲಿಯೂ ಭಾವಪೂರ್ಣವಾಗಿ ಮೂಡುತ್ತಾ ಹೋಗುತ್ತವೆ.


ಹುಟ್ಟುವಾಗಲೇ ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿದ ಹುಡುಗಿಯೇ ಸ್ವಾತಿ. ಆಕೆ ತಂದೆ-ತಾಯಿಯರಿಗೆ ಒಬ್ಬಳೇ ಮಗಳು. ಓದಿಗೆ ಒಳ್ಳೆಯ ಶಾಲೆ. ಆದರೆ, ಓದಿನಲ್ಲಿ ಆಕೆ ಅಷ್ಟು ಮುಂದೇನಿರಲಿಲ್ಲ. ಬದಲಾಗಿ, ಆಕೆಯ ತಂದೆ-ತಾಯಿಯರ ಪ್ರಭಾವಕ್ಕೆ ಒಳಗಾದ ಶಾಲೆಯವರು ಅಂತೂ ಇಂತೂ.. ಆಕೆಗೆ ತೊಂದರೆ ಕೊಡದೆ ಮುಂದಿನ ತರಗತಿಗೆ ದಾಟಿಸುತ್ತಿದ್ದರು. ಆಕೆ ಶಾಲೆ ಹಾಗೂ ಮನೆಗೆ ಹೋಗಿ ಬರಲು ಆಕೆಗೆಂದೇ ಮೀಸಲಾದ ಕಾರು ಹಾಗೂ ಚಾಲಕ. ಆದರೆ, ಅವಳಿಗೆ ಬೇಕಿದ್ದದ್ದು ಮಮತೆಯಿಂದ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗುವ ತಾಯಿ-ತಂದೆಯರ ಸಂಭ್ರಮ. ಅದರ ಬದಲಾಗಿ ಆಕೆಗೆ ಸಿಗುತ್ತಿದ್ದದ್ದು ಹಣಕ್ಕೋಸ್ಕರ ಸೇವೆ ಮಾಡುವ ಸೇವಕರು.


ಮನೆಗೆ ಹೋದರೂ.. ಅಲ್ಲಿ ಸೇವಕರು ಅವಳ ಸೇವೆಗೆ ಸಿದ್ಧವಿರುತ್ತಿದ್ದರು. ಆಕೆಗೆ ಬೇಕೋ ಬೇಡವೋ.. ಅಂತೂ ಬಿಸಿಬಿಸಿಯಾದ ರುಚಿರುಚಿಯಾದ ತಿಂಡಿ ತಯಾರಾಗಿರುತ್ತಿತ್ತು. ಶ್ರೀಮಂತಿಕೆಗೆ ತಕ್ಕ ಉಡುಪುಗಳನ್ನು ತೊಡಿಸಿ ಸಿದ್ಧಮಾಡುವ ಸೇವಕಿ. ನಂತರ, ಪ್ರೈವೇಟ್ ಟ್ಯೂಷನ್ ಗೆ ಎಂದೇ ಮೀಸಲಾಗಿದ್ದ ಶಿಕ್ಷಕಿ. ಆದರೆ, ಅಲ್ಲಿ ವಿದ್ಯಾರ್ಥಿ ಹಾಗೂ ಉಪಾಧ್ಯಾಯಿನಿಯ ನಡುವಿನ ಬಾಂಧವ್ಯಕ್ಕಿಂತ ಕೇವಲ ಕರ್ತವ್ಯಪ್ರಜ್ಞೆ ಮಾತ್ರ ಇರುತ್ತಿತ್ತು.


ಸ್ವಾತಿಯ ಮನಸ್ಸು ಯಾವಾಗಲೂ ತನ್ನನ್ನು ತನ್ನ ಸಹಪಾಠಿ ಶರಣ್ ಜೊತೆಗೆ ಹೋಲಿಸಿಕೊಳ್ಳುತ್ತಿತ್ತು. ಆತನ ತಂದೆ ಪ್ರತಿದಿನ ಮೊಪೆಡ್ ನಲ್ಲಿ ಕರೆದುಕೊಂಡು ಬಂದು ಅವನನ್ನು ಶಾಲೆಗೆ ಬಿಡುತ್ತಿದ್ದರು. ಮಧ್ಯಾಹ್ನ ಅವನ ತಾಯಿ ಊಟ ತರುತ್ತಿದ್ದರು. ಊಟ ಮುಗಿಸುವವರೆಗೂ ಪ್ರೀತಿಯಿಂದ ಅಲ್ಲೇ ಕುಳಿತು ನೋಡುತ್ತಿದ್ದರು. ತಿನ್ನುವುದು ತಡವಾದರೆ ಆಕೆಯೇ ತಿನಿಸುತ್ತಿದ್ದರು. ಊಟದ ನಂತರ ಬೆಲ್ಲು ಹೊಡೆಯುವವರೆಗೂ ಅವನ ಜೊತೆ ಏನಾದರೂ ಮಾತನಾಡುತ್ತಿದ್ದು.. ನಂತರ ಹೊರಡುತ್ತಿದ್ದರು. ಕಚೇರಿಗೆ ರಜೆ ಇರುವ ದಿನಗಳಲ್ಲಿ ಅವರಪ್ಪ ಬರುತ್ತಿದ್ದರು. ಇವಿಷ್ಟೂ ಅವಳಿಗೆ ದಿನವೂ ನೋಡಲು ಸಿಗುತ್ತಿದ್ದ ನೋಟ. ಕೇವಲ ಶರಣ್ ಪೋಷಕರು ಮಾತ್ರವಲ್ಲದೆ.. ಆಕೆಯ ಸಹಪಾಠಿಗಳಲ್ಲಿ ಬಹಳಷ್ಟು ಜನರ ಮನೆಯಲ್ಲಿ ಕಾಣುತ್ತಿದ್ದ ದೃಶ್ಯವಿದು.


ಮನೆಯಲ್ಲಿ ತಾನು ತಾಯಿಯ ಪ್ರೀತಿ ಬಯಸಿ ಹೊರಟಾಗಲೆಲ್ಲಾ ಆಕೆಗೆ ತಾಯಿಯಿಂದ ದೊರೆಯುತ್ತಿದ್ದದ್ದು ನೀತಿ ಪಾಠಗಳಷ್ಟೇ.. ನೀನೇನು ಚಿಕ್ಕ ಹುಡುಗಿಯಲ್ಲವೆನ್ನುತ್ತಾ ಆಕೆಯನ್ನು ದೊಡ್ಡವಳೆಂದು ಭಾವಿಸಿ, ಶಿಸ್ತಿನ ಪಾಠ ಕಲಿಸಲು ಮತ್ತೊಬ್ಬರಿಗೆ ಹೇಳುತ್ತಿದ್ದರಷ್ಟೇ.. ತಾಯಿ ತನ್ನ ಮಗುವನ್ನು ಪ್ರೀತಿಯಿಂದ ನೋಡಿಕೊಳ್ಳುವುದಕ್ಕೂ, ಸೇವೆ ಮಾಡುವವರು ಹಣ ಪಡೆದುದ್ದಕ್ಕಾಗಿ ಯಾಂತ್ರಿಕವಾಗಿ ಮಾಡುವುದಕ್ಕೂ ಇರುವ ಅಂತರವನ್ನು ಆ ಪುಟ್ಟ ಸ್ವಾತಿ ಚೆನ್ನಾಗಿಯೇ ಗುರುತಿಸಿದ್ದಳು. ಇದಾದ ನಂತರ ಅವಳ ಮನಸ್ಸಿನಲ್ಲಿ ಈ ಕುರಿತು ನಿರ್ಲಿಪ್ತತೆಯೇ..


ಒಂದು ದಿನ ಕಾರು ಬರುವುದು ತಡವಾದಾಗ ತಾನೇ ಶರಣ್ ಮನೆಗೆ ಆತನ ತಂದೆಯ ಜೊತೆಯಲ್ಲಿ ಹೋಗಿ ಅಲ್ಲಿ ಸಂಜೆ ಇಡೀ ಅವರ ಜೊತೆ ಕಳೆದದ್ದು ಅವಳಿಗೆ ಮರೆಯಲು ಸಾಧ್ಯವೇ ಇರಲಿಲ್ಲ. ಆದರೆ, ರಾತ್ರಿ ಮನೆಗೆ ಬಂದಾಗ ಕೇವಲ ಅವಳಿಗೆ ಮಾತ್ರವಲ್ಲದೆ ಶರಣ್ ತಂದೆಗೂ ಬೈಗುಳ ಸಿಕ್ಕಿತ್ತು. ಅವರಿಗೆ ಚೆನ್ನಾಗಿಯೇ ಅವಮಾನ ಮಾಡಿ ಕಳುಹಿಸಿದ್ದಳು. ಅಂದಿನಿಂದ ಅವರು ಈಕೆಯ ಕುರಿತು ಹೆಚ್ಚಿನ ಆಸ್ಥೆ ತೋರುತ್ತಿರಲಿಲ್ಲವಾದರೂ.. ಈಕೆ ಬಯಸುವ ಪ್ರೀತಿ ಹಾಗೂ ಆಕೆಯ ನಿಷ್ಕಲ್ಮಶ ನಡೆಯ ಹೃದಯವನ್ನು ತಿರಸ್ಕರಿಸುವಂತೆಯೂ ಇರಲಿಲ್ಲ.


ಶಾಲೆಯಲ್ಲಿ ಸ್ವಾತಿಯ ತಾಯಿಯ ಭಾಷಣ ಕೇಳಿದವರಂತೂ.. "ಶ್ರೀಮಂತಿಕೆ ಇದ್ದರೂ ಸ್ವಲ್ಪವೂ ಜಂಭವಿಲ್ಲ. ಬಡವರು-ಬಲ್ಲಿದರು ಎನ್ನುವ ಭೇದವಿಲ್ಲ. ಎಲ್ಲರನ್ನೂ ಬಾಯಿ ತುಂಬಾ ಮಾತನಾಡಿಸುತ್ತಾರೆ. ಮಕ್ಕಳ ವಿಷಯದಲ್ಲಂತೂ ತುಂಬಾ ಆಸಕ್ತಿ." ಎನ್ನುತ್ತಾ ಹೊಗಳುತ್ತಿದ್ದರು. ಆದರೆ, ನಿಜ ವಿಚಾರ ಗೊತ್ತಿದ್ದರೂ ತನ್ನ ತಾಯಿಯ ಕುರಿತು ಎಲ್ಲಿಯೂ ಏನನ್ನೂ ಹೇಳುವಂತಿರಲಿಲ್ಲ ಸ್ವಾತಿ. ತಾನು ಶರಣ್ ಮನೆಗೆ ಹೋಗಿದ್ದಕ್ಕೆ ತಂದೆ-ತಾಯಿ ನೀಡಿದ ಪ್ರತಿಕ್ರಿಯೆಯೇ ಆಕೆಯನ್ನು ಇನ್ನಷ್ಟು ಜರ್ಜರಿತಗೊಳಿಸಿತ್ತು.


ಆಕೆ ಬೆಳೆಯುತ್ತಾ ಹೋದಂತೆ ಮಾನಸಿಕವಾಗಿ ತಂದೆ-ತಾಯಿಯಿಂದ ಪ್ರೀತಿ ಅಪೇಕ್ಷಿಸುವುದನ್ನು ಸಹ ಕಡಿಮೆ ಮಾಡಿದ್ದಳು. ಬದಲಾಗಿ ಶರಣ್ ಮನೆಗೆ ಹೋಗುವುದನ್ನು ನಿಲ್ಲಿಸಿರಲಿಲ್ಲ. ಆದರೆ, ಹೋಗುವುದನ್ನು ತಂದೆ-ತಾಯಿಯರಿಗೆ ಹೇಳುತ್ತಿರಲಿಲ್ಲವಷ್ಟೇ.. ಪ್ರೌಢಾವಸ್ಥೆಗೆ ಬಂದ ನಂತರವೂ ಅವರಿಬ್ಬರ ನಡುವಿನ ಸ್ನೇಹಕ್ಕೆ ಕೊರತೆಯಾಗಿರಲಿಲ್ಲ. ಬದಲಾಗಿ ಸ್ನೇಹ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಿತ್ತು..ಶರಣ್ ತಂದೆ-ತಾಯಿಗಳಿಗೆ ಮತ್ತೊಬ್ಬ ಮಗಳಂತೆ ಭಾಸವಾಗಿದ್ದಳು ಸ್ವಾತಿ.


ಆದರೆ ಸ್ವಾತಿಯ ಮನಸ್ಸಿನಲ್ಲಿ ದಿನದಿನವೂ ಶರಣ್ ಕುರಿತಾಗಿ ಹೊಸ ಭಾವಗಳು ಹುಟ್ಟಿಕೊಳ್ಳುತ್ತಿದ್ದವು. ಆತನನ್ನು ಪ್ರೀತಿಸಲು ಶುರು ಮಾಡಿದ್ದಳು ಸ್ವಾತಿ. ಆತನ ತುಂಟಾಟ, ಕಾಲೆಳೆಯುವಿಕೆ, ಛೇಡಿಸುವಿಕೆ ಎಲ್ಲದರಲ್ಲಿಯೂ ತನ್ನ ಕುರಿತ ಕಾಳಜಿ ಹಾಗೂ ಪ್ರೀತಿಯನ್ನು ನೋಡುತ್ತಿದ್ದಳು. ಆದರೆ ಶರಣ್ ಗೆ ಸ್ವಾತಿಯ ಕುರಿತಾಗಿ ಆ ಭಾವನೆ ಇರಲಿಲ್ಲ. ಬದಲಾಗಿ ಆಕೆ ಒಬ್ಬಳು ಒಳ್ಳೆಯ ಸ್ನೇಹಿತೆಯಷ್ಟೇ... ಸ್ವಾತಿ ತನ್ನ ಪ್ರೀತಿಯನ್ನು ಶರಣ್ ಬಳಿ ಹೇಳಿಕೊಂಡಾಗ ಆತ ಅದನ್ನು ನೇರವಾಗಿ ತಿರಸ್ಕರಿಸಿದ್ದ. ಅದರಿಂದ ನೊಂದ ಆಕೆ ಆತ್ಮಹತ್ಯೆಯ ಪ್ರಯತ್ನವನ್ನು ಸಹ ಮಾಡಿದ್ದಳು.


ಸ್ವಾತಿಯ ಆತ್ಮಹತ್ಯೆಯ ಪ್ರಯತ್ನದ ಪ್ರಕರಣದ ನಂತರ ಶರಣ್ ಮನಸ್ಸು ಬದಲಾಯಿತೇ ಅಥವಾ ಸ್ವಾತಿಯ ನೋಟವೇ ಬದಲಾಯಿತೇ..? ಸ್ವಾತಿಯ ತಂದೆ-ತಾಯಿಯರು ಇದಕ್ಕೆ ಪ್ರತಿಕ್ರಿಯೆ ನೀಡಿತು ಹೇಗೆ? ಶರಣ್ ಮನೆಯಲ್ಲಿ ಇದಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ಏನು..?


"ಹಣಕ್ಕಿಂತ ಮಾನಸಿಕ ತೃಪ್ತಿ ಮುಖ್ಯ ಎನ್ನುವ ಸತ್ಯವನ್ನು ಸಮಾಜ ಯಾವಾಗ ಒಪ್ಪಿಕೊಳ್ಳುವುದು ಎಂದು ಆಲೋಚಿಸುತ್ತಿದ್ದವಳ ಎದುರಲ್ಲಿ ಲಕ್ಷ್ಮಿ ಫೋಟೋ ಇತ್ತು.


ಚಿತ್ರದಲ್ಲಿದ್ದ ಲಕ್ಷ್ಮಿಗೆ ಜರಿ ಸೀರೆ ಉಡಿಸಿ ಮೈತುಂಬ ಆಭರಣಗಳನ್ನು ತೊಡಿಸಿ ಕೈ ತುಂಬಾ ಹಣ ಕೊಟ್ಟು (ಅದು ಕೆಳಕ್ಕೆ ಚೆಲ್ಲುವಷ್ಟು) ಕೂರಿಸಿದ್ದರು. ಆ ಚಿತ್ರದಲ್ಲಿರುವ ಲಕ್ಷ್ಮಿಗೂ ನನಗೂ ಏನು ವ್ಯತ್ಯಾಸ ಎಂದು ಅವಳಿಗೆ ಅನ್ನಿಸದೆ ಇರಲಿಲ್ಲ. 


ಅದಕ್ಕೆ ದೇವರೆಂದು ಪೂಜಿಸಿದರೆ ತನಗೆ ಶ್ರೀಮಂತಳೆಂದು ಗೌರವಿಸುತ್ತಾರೆ. ಆದರೆ, ಇಬ್ಬರ ಸ್ಥಿತಿಯೂ ಒಂದೇ. ಅವಳಿಗೆ ಗಾಜು, ಚೌಕಟ್ಟು ಹಾಕಿ ಬಂಧಿಸಿದ್ದಾರೆ. ತನಗೆ ನಾಲ್ಕು ಗೋಡೆಗಳ ನಡುವೆ ಬಂಧಿಸಿದಂತಾಗಿದೆ" ಎನ್ನುವ ಸ್ವಾತಿ ಕಾಡುತ್ತಾಳೆ.


ಮುಗ್ಧ ಮನಸ್ಸು, ನಿಷ್ಕಲ್ಮಶ ಪ್ರೀತಿಯನ್ನು ಅರಸಿ ಬಯಸುವ ಸ್ವಾತಿಯ ಯತ್ನಕ್ಕೆ ಸಿರಿ ಸಂಕೋಲೆಯಾಯಿತೇ ಅಥವಾ ಸಿರಿಯ ಸಂಕೋಲೆಯನ್ನು ದಾಟಿ ಆಕೆ ಹೊರಬಂದಳೇ..?


ಎನ್ನುವುದನ್ನು ತಿಳಿಯಲು ತನುಜ ಅವರ ಸಿರಿಯ ಸಂಕೋಲೆ ಕಾದಂಬರಿ ಓದಿ ನೋಡಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ