ಪುಸ್ತಕದ ಶೀರ್ಷಿಕೆ : 47 ದಿನಗಳು
ತಮಿಳಿನ ಮೂಲ ಲೇಖಕರು : ಶ್ರೀಮತಿ ಶಿವಶಂಕರಿಯವರು
ಕನ್ನಡಕ್ಕೆ ಅನುವಾದ : ಚಿತ್ರಲೇಖ
ಪ್ರಕಾಶಕರು : ಲಲಿತಾ ಪ್ರಕಾಶನ
ಮರು ಮುದ್ರಣ : 2023
ತಮಿಳಿನ ಖ್ಯಾತ ಲೇಖಕಿಯಾದ ಶ್ರೀಮತಿ ಶಿವಶಂಕರಿಯವರು ತಮಿಳಿನಲ್ಲಿ 47 ನಾಟ್ ಕಳ್ ಎಂಬ ಕಾದಂಬರಿಯನ್ನು ರಚಿಸಿದ್ದಾರೆ. ಶ್ರೀಮತಿ ಚಿತ್ರಲೇಖ ಅವರು ಕನ್ನಡಕ್ಕೆ ಅನುವಾದಿಸಿರುವ ತಮಿಳಿನ ಕಾದಂಬರಿಗಳಲ್ಲಿ ಇವರ ಮೂರು ಕೃತಿಗಳನ್ನು ಕನ್ನಡಕ್ಕೆ ತಂದಿದ್ದಾರೆ. ಈ ಕಾದಂಬರಿ ತಮಿಳಿನಲ್ಲಿ ಖ್ಯಾತ ನಿರ್ದೇಶಕರಾದ ಶ್ರೀ ಕೆ. ಬಾಲಚಂದರ್ ಅವರ ನಿರ್ದೇಶನದಲ್ಲಿ ಚಿರಂಜೀವಿ ಮತ್ತು ಜಯಪ್ರದಾ ಅವರ ನಟನೆಯಲ್ಲಿ ಅಪಾರ ಯಶಸ್ಸು ಗಳಿಸಿದೆ.
ಈಗ ಕಾಲ ಬದಲಾಗಿದೆ ಎಂದರೂ.. ಮೋಸಗಳು ಸಹಾ ಅಷ್ಟೇ ತೀವ್ರಗತಿಯಲ್ಲಿ ಬದಲಾಗಿವೆ. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ತಿಳಿಯದಂತಹಾ.. ಅಷ್ಟೇ ಎಚ್ಚರಿಕೆಯ ಮೋಸಗಳು ಸೇರಿಕೊಳ್ಳುತ್ತಿವೆ. ಅಂತಹಾ ಒಂದು ಕಥಾವಸ್ತುವೇ 47 ದಿನಗಳು. ಇಲ್ಲಿ ಮೂಲ ಲೇಖಕಿಯಾದ ಶ್ರೀಮತಿ ಶಿವಶಂಕರಿಯವರ ಶೈಲಿಯನ್ನೇ ಅನುಸರಿಸಿ, ಕೇವಲ ಅನುವಾದ ಮಾಡಿದ್ದಾರೆ ಚಿತ್ರಲೇಖ ಮೇಡಂ. ಇಲ್ಲಿ ತಮಿಳುನಾಡಿನ ಪರಿಸರವನ್ನು, ಆಚಾರ-ವಿಚಾರಗಳನ್ನೂ ತಿಳಿಯಬಹುದಾಗಿದೆ.
ವಿಶಾಲಿಯ ಮದುವೆ ಕುಮಾರ್ ನೊಡನೆ ನಿಶ್ಚಯವಾಗಿತ್ತು. ಅದೂ ಗಂಡಿನ ಕಡೆಯವರೇ ತಾವಾಗಿ ಬಂದು ಕಾಸು ಖರ್ಚಿಲ್ಲದೆ ಮದುವೆಯಾಗುತ್ತೇವೆ ಎನ್ನುತ್ತಾರೆ. ಅದರಲ್ಲಿಯೂ.. ಹುಡುಗ ಸೀಮೆಗೆ ಹೋಗಿ ಅಂದರೆ ವಿದೇಶದಲ್ಲಿ ಕೈ ತುಂಬಾ ಸಂಪಾದಿಸುತ್ತಿದ್ದ. ಅಲ್ಲದೇ ನೋಡಲು ಚೆನ್ನಾಗಿದ್ದ. ವರದಕ್ಷಿಣೆ ನೀಡಬೇಕಿರಲಿಲ್ಲ. ಮದುವೆ ಸರಳವಾಗಿರಬೇಕೆಂಬ ನಿರ್ಬಂಧ, ಜೊತೆಗೆ ವಿಶಾಲಿಗೆ ಎಂದೇ ಸೀರೆಗಳು ಹಾಗೂ ಒಡವೆಗಳ ಪ್ರೀತಿಯ ಉಡುಗೊರೆಗಳನ್ನು ತಂದಾಗಿತ್ತು. ವಿಶಾಲಿಯದ್ದು ಅದೃಷ್ಟ ಎಂದು ಊರಿನವರೆಲ್ಲರೂ ಕೊಂಡಾಡುತ್ತಿದ್ದರು. ಆದರೆ, ಚಂದ್ರು ಮಾತ್ರ ತಂಗಿ ಹಾಗು ಅವಳ ಗಂಡನನ್ನು ನೋಡುತ್ತಾ.. ವಯಸ್ಸಿನ ವ್ಯತ್ಯಾಸವನ್ನು ಗಮನಿಸುತ್ತಿದ್ದ. ಆಕೆಗೂ ಅವನಿಗೂ 12 ವರ್ಷಗಳ ವ್ಯತ್ಯಾಸ. ಹಾಗೆಂದು ಅದು ತಲೆಕೆಡಿಸಿಕೊಳ್ಳುವಷ್ಟೇನೂ ಇರಲಿಲ್ಲ.
ವಿಶಾಲಿಗೆ ತಂದೆ ಇರಲಿಲ್ಲ. ಅವಳಿನ್ನೂ ಚಿಕ್ಕ ಹುಡುಗಿಯಾಗಿದ್ದಾಗಲೇ ತಂದೆ ತೀರಿ ಹೋಗಿದ್ದರು. ಬಹುಶಃ ಆಗ ಅವಳಿಗೆ ಇನ್ನೂ ಎಂಟು ವರ್ಷ. ಅಣ್ಣನಾದ ಚಂದ್ರುವೇ ಅಪ್ಪನಿಲ್ಲದ ಕೊರತೆ ಇಲ್ಲದಂತೆ ಪ್ರೀತಿ, ಮಮತೆಯಿಂದ ತಂಗಿಯನ್ನು ನೋಡಿಕೊಳ್ಳುತ್ತಿದ್ದ. ಆದಿಚ್ಚಪುರದ ಹುಡುಗಿ ಈಗ ಅಮೆರಿಕಕ್ಕೆ ಹಾರಲಿದ್ದಳು.
ಚಂದ್ರು ಮೊದಲನೇ ಮಗನಾದರೆ, ಜ್ಞಾನ ಎರಡನೆಯವಳು. ಕೊನೆಯವಳೇ ವಿಶಾಲಿ.
ಹಾಗೆಂದು, ಕಾಣದ ಊರಿನ ಹುಡುಗನಿಗೆ ವಿಶಾಲಿಯನ್ನು ಕೊಡುವುದು ಎಲ್ಲರ ಸಂಶಯಕ್ಕೂ ಕಾರಣವಾಗಿತ್ತು. ಆದರೆ, ಅದನ್ನು ನಿವಾರಿಸಿದವಳು ಜ್ಞಾನಂ. ಅಕ್ಕನಾಗಿ ತಂಗಿಯ ಸುಖ ಬಯಸಿದವಳು. "ಜಾತಕ ನೋಡಿ ಹತ್ತಿರದ ಊರಿಗೆ ಕೊಟ್ಟರೂ ನಾನು ಸುಖವಾಗಿಲ್ಲ, ದಿನವಿಡೀ ದುಡಿತ" ಎನ್ನುತ್ತಾ ಅವಳ ನಾಯಿಪಾಡನ್ನು ಹೇಳಿಕೊಂಡಿದ್ದಳು. ಅವರ ಅಮ್ಮನೇ ಇದೆಲ್ಲವನ್ನೂ ಯೋಚಿಸಿ ಹುಡುಗನ ರೂಪ, ಗುಣ, ಹಣ ಎಲ್ಲವನ್ನೂ ಅಳೆದು ತೂಗಿ ಈ ಮದುವೆಯನ್ನು ನಿಶ್ಚಯಿಸಿದ್ದರು. ಜ್ಞಾನಂ ಪ್ರಕಾರ ಹೆಣ್ಣಿಗೆ ಅವಳ ಮನಸ್ಸನ್ನು ಅರಿತು ಪ್ರೀತಿಯಿಂದ ನಡೆವ ಗಂಡ ಸಿಕ್ಕರೆ ಮತ್ತೇನೂ ಬೇಡ. ಹೆಚ್ಚಿನ ಹೆಣ್ಣುಮಕ್ಕಳಿಗೆ ಅದೇ ನಿಜವಾದ ಅಪೇಕ್ಷೆಯಲ್ಲವಾ..
ರೈಸ್ ಮಿಲ್ ನ ಒಡೆಯರಾಗಿದ್ದ ಸುಬ್ಬಯ್ಯಾರಿನ ಮೊದಲನೇ ಮಗನೇ ಕುಮಾರ್. ಆತನಿಗೆ ಏಳು ಜನ ತಮ್ಮ- ತಂಗಿಯರು. ದೊಡ್ಡ ಕುಟುಂಬವಾದರೂ.. ಅದಕ್ಕೆ ತಕ್ಕಂತೆ ವರಮಾನವೂ ಇತ್ತು. ಶಾಲೆ, ಕಾಲೇಜಿನಲ್ಲಿ ಚೆನ್ನಾಗಿ ಓದಿ ಸಿವಿಲ್ ಇಂಜಿನಿಯರ್ ಆಗಿ ಅಮೆರಿಕಾದ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಹೋದ ಕುಮಾರ್ ಐದು ವರ್ಷದ ನಂತರ ಇದೀಗ ತಾಯಿಯ ಮಾತಿಗೆ ಬೆಲೆ ಕೊಟ್ಟು ವಿವಾಹವಾಗುತ್ತೇನೆಂದು ಒಪ್ಪಿದ್ದನು. ಆಸ್ತಿ ಇಲ್ಲದ, ಹೆಚ್ಚು ಓದಿಲ್ಲದ.. ಆದರೆ, ಲಾವಣ್ಯವತಿಯಾದ ವಿಶಾಲಿಯನ್ನೇ ಮಗ ಒಪ್ಪಿದಾಗ ತಾಯಿಗೆ ಅಸಮಾಧಾನವಾಗಿತ್ತು. ಮಗನ ರೂಪಿಗೆ, ಓದಿಗೆ ಹಾಗೂ ಘನತೆಗೆ ತಕ್ಕಂತೆ ಹೆಣ್ಣು ಸಿಗುತ್ತಿತ್ತು ಎಂಬ ಭಾವ ಅವರದ್ದು. ಆದರೆ, ಕುಮಾರ್ ತನಗೆ ಇಂತಹಾ ಹುಡುಗಿಯೇ ಬೇಕು ಎಂದು ಆಯ್ಕೆ ಮಾಡಿಕೊಂಡಾಗಿತ್ತು.
ವಿಶಾಲಿಯ ವಿವಾಹ ಯಾವುದೇ ಅಡೆ-ತಡೆ ಇಲ್ಲದೆ ಚೆನ್ನಾಗಿ ಆಗಿತ್ತು> ಅಲ್ಲದೇ, ನಾಜೂಕಾಗಿ ನಡೆದುಕೊಂಡು ಆಕೆಯನ್ನು ಸಂಭಾಳಿಸಿದ ಪರಿ ಜ್ಞಾನಳಿಗೆ ಇದೆಲ್ಲವೂ ಹೊಚ್ಚ ಹೊಸತು ಎನ್ನಿಸಿತ್ತು. ಅಲ್ಲದೆ, ತಂಗಿಗೆ ಬಂದಿದ್ದ ಈ ಸಂಬಂಧ ಅವಳ ಅತ್ತೆಯ ಮನೆಯಲ್ಲಿಯೂ ಅವಳ ಸ್ಥಾನವನ್ನು ಮೇಲೆರಿಸಿತ್ತು.
ಮದುವೆಯಾದ ಎಂಟನೇ ದಿನಕ್ಕೆ ಪತ್ನಿ ಸಮೇತ ಪಾಸ್ಪೋರ್ಟ್ ಹಾಗೂ ವೀಸಾ ವಿಚಾರಕ್ಕಾಗಿ ಮದ್ರಾಸಿಗೆ ಕರೆದೊಯ್ಯಲು ನಿರ್ಧರಿಸಿದ. ಇಷ್ಟು ಬೇಗನೆ ಎಂದು ಎಲ್ಲರೂ ಹೇಳಿದರೂ ಆತ ತನ್ನ ಪತ್ನಿಯನ್ನು ಕರೆದುಕೊಂಡು ಹೋಗುವುದು ಶತಃಸಿದ್ದ ಎಂಬಂತೆ ಎಲ್ಲಾ ಸಿದ್ಧತೆ ಮಾಡಿಕೊಂಡು ಮದ್ರಾಸಿಗೆ ಹೊರಟ. ಅವರ ಜೊತೆ ಚಂದ್ರು ಸಹಾ ಹೋಗಿದ್ದ.
19ನೇ ದಿನಕ್ಕೆ ವಿಶಾಲಿ ಅದಾಗಲೇ ತನ್ನ ಗಂಡನ ಜೊತೆಗೆ ವಿದೇಶಕ್ಕೆ ಹಾರಿಯಾಗಿತ್ತು. ಹಳ್ಳಿಯ ಹೆಣ್ಣೊಬ್ಬಳಿಗೆ ಬಯಸದೇ ಬಂದ ಭಾಗ್ಯವೆಂಬಂತೆ ಭಾಸವಾದರೂ.. ಆಕೆಗೆ ಪ್ರತಿಯೊಂದೂ ಹೊಸತು. ಆದರೆ, ಕುಮಾರ್ ತಾಳ್ಮೆಯಿಂದ ಎಲ್ಲವನ್ನೂ ಆಕೆಗೆ ಕಲಿಸುತ್ತಿದ್ದ. ಶಿಕಾಗೋದಲ್ಲಿ ತನ್ನ ಇರುವಿಕೆಯ, ತನ್ನ ಕನಸಿನ ಬದುಕನ್ನು ಆಕೆ ಕನಸು ಕಾಣುತ್ತಿದ್ದಾಗಲೇ.. ಮದುವೆಯಾದ 21ನೇ ದಿನಕ್ಕೆ ಆಕೆ ಗಂಡನ ಜೊತೆಗೆ ಮನೆ ಸೇರಿದ್ದಳು.
ವಿಶಾಲಿಯನ್ನು ಮನೆಗೆ ಕರೆದೊಯ್ಯುವ ಮುಂಚಿನಿಂದಲೂ ಕುಮಾರ್ ಮನಸ್ಸಿನಲ್ಲಿ ಒಂದು ವಿಷಯ ಹೊಯ್ದಾಡುತ್ತಿತ್ತು. ಅದನ್ನು ಅವಳಿಗೆ ಹೇಳುವುದೋ.. ಬೇಡವೋ.. ಎಂಬ ಸಂದೇಹ ಅವನದ್ದು.. ಸಮಯಕ್ಕಾಗಿ ಕಾಯುತ್ತಿದ್ದವನ ಹಾಗೆ ಅದನ್ನು ಮುಂದೂಡುತ್ತಲೇ ಬಂದ.
ಆದರೆ, ಹೀಗೆ ಸಂತಸದಿಂದಲೇ ಬಂದಿದ್ದವಳ ಕನಸು 47 ನೇ ದಿನಕ್ಕೆ ಅದಾಗಲೇ ಮುಗಿದಾಗಿತ್ತು. ವಿನಯಶೀಲ ಗಂಡ, ವಿದ್ಯಾವಂತ, ಗುಣವಂತ, ರೂಪವಂತ, ಹಣವಂತನ ಜೊತೆ ಆಕೆಗೆ ಬದುಕು ಸಾಗಿಸುವುದು ಕಷ್ಟವೆನಿಸಿದ್ದೇಕೆ..? ಕುಮಾರನ ಮತ್ತೊಂದು ಮುಖವಾಡ ಕಾದಂಬರಿಯಲ್ಲಿ ಇಲ್ಲಿಂದ ಮುಂದೆ ತೆರೆದುಕೊಳ್ಳುತ್ತಾ ಸಾಗುತ್ತದೆ. ಈ ನಿಟ್ಟಿನಲ್ಲಿ, ಭಾಷೆ ಬರದ ಊರಿನಲ್ಲಿ ಆಕೆ ಸಹಾಯ ಕೋರಿದ್ದು ಯಾರನ್ನು..? ಆಕೆಯ ಸಹಾಯಕ್ಕೆ ನಿಂತವರು ಯಾರು..? ಎಲ್ಲವನ್ನೂ ತಿಳಿಯಲು ಓದಿ 47 ದಿನಗಳು ಕಾದಂಬರಿಯನ್ನು.
ಬಯಸದೆ ಬಂದ ಭಾಗ್ಯವೆಂದುಕೊಂಡು ಬಂದದ್ದನ್ನು ಒಪ್ಪಿ ನಡೆದವಳ ಬದುಕಲ್ಲಿ ಆದ ಬದಲಾವಣೆಗಳು ಇಲ್ಲಿವೆ. ಹೆಣ್ಣೊಬ್ಬಳು ಹೇಗೆ ಮೋಸ ಹೋಗಬಲ್ಲಳು ಹಾಗೂ ಹೆಣ್ಣಿನವರನ್ನು ಹಾಗೂ ಅವರ ಮನೆಯವರನ್ನು ಮೋಸದ ಚಾಲಕ್ಕೆ ಎಳೆಯುವ ಮೋಸಗಾರರ ಪರಿ ಹೇಗಿರುತ್ತದೆ ಎಂಬುದನ್ನು ತೆರೆದಿಡುವ ಕಾದಂಬರಿ ಇದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ