ಪುಸ್ತಕದ ಶೀರ್ಷಿಕೆ : ಬಕುಲದ ಬಾಗಿಲಿನಿಂದ
ಲೇಖಕರು : ಸುಧಾ ಆಡುಕಳ
ಪ್ರಕಾಶಕರು : ಬಹುರೂಪಿ
ಪ್ರಥಮ ಮುದ್ರಣ : 2019
ಪುಟಗಳು : 200
ಬೆಲೆ : 200 ರೂ.
ಬಕುಲದ ಬಾಗಿಲಿನಿಂದ ಸುಧಾ ಆಡುಕಳ ಅವರ ನಾನು ಓದಿದ ಮೊದಲ ಪುಸ್ತಕ ಹಾಗೂ ಮತ್ತೆ ಮತ್ತೆ ಓದುವ ಪುಸ್ತಕದಲ್ಲೊಂದು. ಇವರ ಒಂದು ಇಡಿಯ ಬಳಪ ಪುಸ್ತಕವನ್ನು ಈಗಾಗಲೇ ಪರಿಚಯಿಸಿದ್ದೇನೆ. ಬಕುಲದ ಬಾಗಿಲಿನಿಂದ ಪುಸ್ತಕದ ಶೀರ್ಷಿಕೆಯ ಕೆಳಗೆ ಒಂದು ಅಡಿ ಬರಹವಿದೆ. ಇಲ್ಲಿ ಪಿಸುಮಾತುಗಳಿವೆ ಎಂಬುದಾಗಿ. ನನಗಂತೂ ಓದಿದ ನಂತರವೂ ಕಾಡುವ ಪಿಸುಮಾತುಗಳಿವು. ಇವು ಬರಿಯ ಪಿಸುಮಾತುಗಳಲ್ಲ ಬದಲಿಗೆ ಮನದಾಳದ ಮಾತುಗಳು ಇವು. ಇವು ಹೆಣ್ಣುಮಕ್ಕಳು ಕೂಗಿ ಜಗತ್ತಿಗೆ ಹೇಳಬೇಕೆನಿಸುವ ಮಾತುಗಳು. ಬಕುಲದ ನಾಡಿನಿಂದ ಬಂದ ಲೇಖಕಿ ಎಲ್ಲಾ ಕಾಲದ ಹೆಣ್ಣು ಮಕ್ಕಳ ಅಂತರಂಗ ಹೊಕ್ಕಿ ಒಂದು ಬಾಗಿಲು ನಿರ್ಮಿಸಿ ಕೊಟ್ಟಿದ್ದಾರೆ.
ಹೆಣ್ಣು ಮಕ್ಕಳ ಅಂತರಂಗವನ್ನು ಮತ್ತೊಂದು ಆಯಾಮದಲ್ಲಿ ತೆಗೆದಿಡುವ ಪರಿ ಅನನ್ಯವಾದುದು. ಇವು ಬರೀ ನೆನ್ನೆಯ ರೂಪಕಗಳಲ್ಲ. ಬದಲಿಗೆ, ಇಂದಿಗೂ ಪ್ರಸ್ತುತವೆನಿಸುವ ದನಿಗಳು.
ಹೂವೇ ತೊರೆದು ಹೋದ ಎಸಳೆಂದು ಎಲ್ಲೆಡೆ ಚಿತ್ರಿತಳಾದ ರಾಧೆಯೆಡೆಗೆ ಶ್ಯಾಮ ಬರುತ್ತಾನೆ. ಕೃತಕ ಸೌಂದರ್ಯದಿಂದ ಅಲಂಕೃತಳಾಗಿ ಪಾರ್ಥನನ್ನು ಸೆಳೆದಿದ್ದು ನಂತರ ತಾನು ತಾನಾಗಿಯೇ ಇರಲು ಕೃತಕ ಸೌಂದರ್ಯದ ತೆರೆ ಸರಿಸುವ ಮಣಿಪುರದ ರಾಣಿ ಚಿತ್ರಾ ಇದ್ದಾಳೆ.
ಸೀತೆಯಂತಹಾ ತಾಯಂದಿರಿದ್ದಾರೆ. ತನ್ನನ್ನು ಸುತ್ತಿದ್ದ ಭವದ ಬಂಧನವನ್ನು ತೊಡೆದ ಪುರಾಣದ ಮೊದಲ ಹೆಣ್ಣಾದ ಮಾಧವಿಯಂತೆ ಕೊನೆಗಾಲ ಬಯಸುವ ಎಷ್ಟೋ ಮಾನಿನಿಯರು ಕಾಣ ಸಿಗುತ್ತಾರೆ.
ಇನ್ನೂ ಕಾಯುತ್ತಲೇ ಇರುವ, ಹತ್ತಿರವಿದ್ದೂ ದೂರ ನಿಲ್ಲುವ ಅನಿವಾರ್ಯತೆಯಿಂದ ಕಾಯುತ್ತಲೇ ಇರುವ ಊರ್ಮಿಳೆಯರಿದ್ದಾರೆ. ಮಹಾರಾಣಿಯ ತೆರೆಯೊಳಗೆ ಮರೆಯಾದ ಶಾಂತಲೆಯಂತಹಾ ಅದ್ಭುತ ನರ್ತಕಿಯರು ಕಾಣೆಯಾಗುತ್ತಲೇ ಇದ್ದಾರೆ.
ತನುವಿನ, ಮನದ, ವಿಷಯದ, ಭವವನ್ನು ಗೆದ್ದ ಗೊರವನನ್ನೇ ಹುಡುಕುತ್ತಿರುವ ಅಕ್ಕನಿದ್ದಾಳೆ. ಎಲ್ಲ ಯುದ್ಧಗಳನ್ನು ಜಯಿಸಿದರೂ ಹೆಣ್ಣು ಜಯಿಸದೇ ಹೋಗುವ ಸಮರಕ್ಕೆ ಸಾಕ್ಷಿಯಾದ ನರ್ಮದಾ ಪುರುಕುತ್ಸಾನಿ ಸಿಗುತ್ತಾಳೆ. ಬಿಚ್ಚಿಡಲು ಆಗದ, ಮುಚ್ಚಿಡಲೂ ಆಗದ ಇಕ್ಕಟ್ಟಾದ ಕಿರುದಾರಿಯಲ್ಲಿ ಸತ್ಯದ ಗೆರೆಗಳಿವೆ.
ಅಹಲ್ಯೆಯಂತೆಯೇ ಕಲ್ಲಾದ ಸಾಲು ಸಾಲು ಅಹಲ್ಯೆಯರು ಕಾಣ ಸಿಗುತ್ತಾರೆ. ಬುದ್ಧನ ಜ್ಞಾನೋದಯದ ಹಿಂದೆ ಬೆಂದ ಯಶೋಧರೆ ಒಡಲ ಕುದಿತ ಮರುಕಳಿಸುತ್ತಲೇ ಇರುವುದು ಕಾಣುತ್ತದೆ.
ನಿಮ್ಮೊಳಗಿನ ಲೋಕದಲ್ಲಿ ಉರಿದು ಹೋದ ಎಷ್ಟೋ ಚಂದ್ರರಿರಬಹುದು ಹುಡುಕಿ ಎನ್ನುವ ಗುರುದೇವರ ರವೀಂದ್ರರ ಚಂದ್ರ ಕಾಡುತ್ತಾಳೆ. ಹೊಸ ಬದಲಾವಣೆಗಾಗಿ ತನ್ನ ರಕ್ತ ಹರಿಸಿ ಮೊಲೆ ಕೊಯ್ದಿಟ್ಟ ನಂಗೇಲಿಯ ಬಲಿದಾನ ಕಣ್ಣ ಮುಂದೆ ಕಟ್ಟುತ್ತದೆ.
ಬರೀ ಅಕ್ಷರಗಳಿಂದಲೇ ಪರಿಚಿತೆಯಾಗಿದ್ದ ಅಮೃತಾ ಪ್ರೀತಮ್ ಒಬ್ಬ ಮಹಿಳೆಯಾಗಿ, ಬದುಕಿನ ಲೇವಾದೇವಿಗೆ ಸತ್ಯದ ರಸೀದಿಯನ್ನು ಅಂಟಿಸಿಕೊಂಡವರಾಗಿ ಕಾಣುತ್ತಾರೆ. ಕೃಷ್ಣನ ಪ್ರೀತಿಯ ಆಳವನ್ನು ಕಂಡ ಕುಬ್ಜೆ ಮಾಲಿನಿ ಕಾಣುತ್ತಾಳೆ.
ಶಚಿ ತೀರ್ಥದಲ್ಲಿ ಮುದ್ರೆ ಉಂಗುರ ಮಾತ್ರವಲ್ಲ ಪ್ರೀತಿಯನ್ನು ಸಹಾ ಕಳೆದುಕೊಂಡ ಶಕುಂತಲೆಯ ಮುಂದಿನ ಬದುಕಿದೆ. ದ್ರೌಪದಿಯ ವಿಷಾದವಿದೆ. ಗೆಲ್ಲಿಸಲೇಬೇಕು ಎಂದೆನಿಸುವಂತೆ ಕಾಡುವ ಅಂಬೆಯ ಬದುಕಿದೆ. ಜೀವನಪೂರ್ತಿ ಕಣ್ಣನ್ನು ಕಟ್ಟಿಕೊಂಡು ಕಣ್ಣರಿಯದಿದ್ದರೂ ಕರುಳರಿಯುವಂತೆ ಬಾಳಿದ ಗಾಂಧಾರಿಗೆ ಅರಿವಾದ ಸತ್ಯವಿದೆ.
ಗುರು ರವೀಂದ್ರರ ಬಂಗಾಳದ ಹೆಣ್ಣೊಬ್ಬಳ ಕಥೆ ಇಂದಿಗೂ ಪ್ರಸ್ತುತವೆನಿಸುತ್ತದೆ. ಬಿಂದುಗಳನ್ನು ಸೇರಿಸ ಹೊರಟು ಬಿಂದುಗಳ ಕಣ್ಮರೆಗೆ ಮೂಕ ಸಾಕ್ಷಿಯಾದ ಮೃಣಾಲ್ ನ ಕರುಣೆಯ ತೊರೆ ಬತ್ತದಿರಲಿ ಎಂದು ಆಶಿಸುತ್ತಾ ಕರುಣೆಯ ತೊರೆಯೊಳಗೆ ಮುಳುಗಿ ಹೋಗುವಾಗ ಜಗದ ಅನೇಕ ಹೆಣ್ಣುಗಳ ನೋವಿಗೆ ದನಿಯಾಗಿ ನಿಂತ ತನ್ನ ಬದುಕಿನ ದೌರ್ಜನ್ಯವನ್ನು ಬಯಲಿಗೆಳೆದ "ಮರುಭೂಮಿಯ ಹೂ" ವಾರಿಸ್ ಡೇರಿ ಸಿಗುತ್ತಾಳೆ. ಬಿಡುಗಡೆಯ ಕನಸು ಕಾಣುವ ಹೆಣ್ಣಿನ ಎಲ್ಲಾ ಗುಣಗಳಿಗೆ ರೂಪಕವಾಗಿ ನಿಲ್ಲುವ ನಂದಿನಿ ಕಾಡುತ್ತಾಳೆ.
ಮತ್ತೆ ಮತ್ತೆ ಕಾಡುವ ಪಾತ್ರಗಳಾದ ಎಲ್ಲವೂ ತಣ್ಣಗೆ ಮಾತನಾಡುತ್ತಲೇ ಎದೆಯ ಬೇಗುದಿಯನ್ನು ತೆರೆದಿಡುತ್ತಾರೆ. ಬಹುಶಃ ಆ ಭಾವವನ್ನು ಓದಿಯೇ ಅರಿಯಬೇಕು, ಅನಿಸಬೇಕು. ಪದಗಳಿಗೆ ನಿಲುಕುವುದು ಕಡಿಮೆಯೇ..
ಪುಸ್ತಕದ ಭಾವವನ್ನು ಅರಿಯಲು ನೀವು ಈ ಪುಸ್ತಕವನ್ನು ಒದಲೇಬೇಕು. ಮಹಿಳೆಯ ಅಂತರಂಗವನ್ನು ತೆರೆದಿಡುವ ಅಪರೂಪದ ಪುಸ್ತಕ ಇದು.
~ ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ