ಪುಸ್ತಕದ ಶೀರ್ಷಿಕೆ : ಅತಿಮಾನುಷ
ಶ್..!! ಸದ್ದು ಕಪಾಟಿನಿಂದ ಬರುತ್ತಿದೆ..!!
ಲೇಖಕರು : ಗುರುರಾಜ ಕೊಡ್ಕಣಿ, ಯಲ್ಲಾಪುರ
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಥಮ ಮುದ್ರಣ : 2025
ಪುಟಗಳು : 216
ಬೆಲೆ : 250 ರೂ.
ಇದಕ್ಕೂ ಮುಂಚೆ ಅತಿಮಾನುಷ ಕಾದಂಬರಿಯ ಲೇಖಕರಾದ ಗುರುರಾಜ ಕೊಡ್ಕಣಿಯವರ ಐದು ಕೃತಿಗಳು ಪ್ರಕಟವಾಗಿವೆ. 'ಶತಕಂಪಿನೀ' ಎನ್ನುವ ಹಾರರ್ ಕಥೆಗಳ.. ಪುಟ್ಟ ಪುಟ್ಟ ಕಥೆಗಳ ಕಥಾಸಂಕಲನ, 'ಪ್ರತಿಜ್ಞೆ' ಹಾಗೂ 'ವಿಕ್ಷಿಪ್ತ' ಎನ್ನುವ ಹಾರರ್ ಥ್ರಿಲ್ಲರ್ ಕಾದಂಬರಿಗಳು, 'ಅಂಕಣಕ್ಕೆ ಅನುವಾದಿತ ಕಥೆಗಳು' ಎನ್ನುವ ಇಂಗ್ಲಿಷ್ ಸಣ್ಣ ಕಥೆಗಳ ಅನುವಾದಿತ ಕಥಾಸಂಕಲನ ಇವಿಷ್ಟೂ ಮುದ್ರಿತ ಪುಸ್ತಕಗಳಾದರೆ.. ಲಘು ಹರಟೆಯ ಶೈಲಿಯ ಬರಹಗಳ ಸಂಕಲನ 'ಸವಿಸವಿ ನೆನಪು, ಸಾವಿರ ನೆನಪು' ಎನ್ನುವ ಈ-ಬುಕ್ ಪ್ರಕಟವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಹುಟ್ಟೂರು. ಭಾರತೀಯ ಜೀವವಿಮಾ ನಿಗಮದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿರುವ ಇವರು ಸಾಹಿತ್ಯ ಲೋಕಕ್ಕೆ ಕಾಲಿಟ್ಟಿದ್ದು 'ಹಾಯ್ ಬೆಂಗಳೂರು' ಮತ್ತು 'ಹಿಮಾಾಗ್ನಿ' ವಾರಪತ್ರಿಕೆಗಳ ಅಂಕಣಕಾರರಾಗಿ. ಈಗ ಕಾದಂಬರಿಕಾರ, ಅಂಕಣಕಾರ ಹಾಗೂ ಅನುವಾದಕರಾಗಿ ಚಿರಪರಿಚಿತರಾಗಿದ್ದಾರೆ. ಇವರ ಪುಟ್ಟ ಪುಟ್ಟ ಹಾರರ್ ಕಥೆಗಳಂತೂ ಬೆಚ್ಚಿ ಬೀಳಿಸುವಂತಿರುತ್ತದೆ. ಜೊತೆಗೆ ಇವರು ಬರೆಯುವ #ಯಾದೃಚ್ಛಿಕ ಹಾಗೂ #ವೃಶ್ಚಿಕ_ರಾಶಿ ಬರಹಗಳನ್ನಂತೂ ನಾನು ತಪ್ಪದೇ ಓದುವೆ.
ಹಾರರ್ ಕಥೆಗಳ ಮೂಲಕ ಭರವಸೆ ಮೂಡಿಸಿರುವ ಇವರ ಅತಿಮಾನುಷ ಕಾದಂಬರಿ ಕೈಗೆತ್ತಿಕೊಂಡಾಗಲೇ ಕಾದಂಬರಿಯ ಮುಖಪುಟ ಬೆಚ್ಚಿ ಬೀಳಿಸುತ್ತದೆ. ಓದುವಾಗ ಹೊದಿಕೆಯ ಪ್ರಸಂಗ ಹಾಗೂ ಇನ್ನಿತರ ಹಲವು ಚಿತ್ರಣಗಳು ಭಯ ಮುಡಿಸಿದರೂ.. ಕಾದಂಬರಿಯನ್ನು ಮುಚ್ಚುವ ಹಾಗೂ ಇಲ್ಲ. ಮುಖಪುಟವೂ ಸಹಾ ಹೆದರಿಸುವಂತಿದೆಯಲ್ಲಾ..!
ಹಾರರ್ ಥ್ರಿಲ್ಲರ್ ಎಂಬ ಪ್ರಭೇದ ಬಂದಾಗ ನನಗೆ ಮೊದಲಿಗೆ ನೆನಪಾಗುವುದು ರವಿ ಬೆಳಗೆರೆಯವರ ಮಾಟಗಾತಿ ಹಾಗೂ ಸರ್ಪ ಸಂಬಂಧ ಕಾದಂಬರಿಗಳು. ಆದರೆ, ಅತಿಮಾನುಷವನ್ನು ಓದಿದ ನಂತರ ಹಾರರ್ ಥ್ರಿಲ್ಲರ್ ವಿಭಾಗ ಎಂದಾಗ ತಟ್ಟನೆ ನೆನಪಾಗುವ ಕಾದಂಬರಿಯಾಗುತ್ತದೆ.
ಮೊದಲಿಗೆ ಕಥೆ ಶುರುವಾಗುವುದೇ ಪರ್ವ ನೆನಪು ಮಾಡಿಕೊಳ್ಳುವ ನೆನಪುಗಳಿಂದ. ಅವು ಸವಿ ನೆನಪುಗಳಲ್ಲ..! ಬದಲಾಗಿ ನೆನಪಿಸಿಕೊಂಡಷ್ಟು ದುಃಖ ತರುವ ನೆನಪು. ಅದೂ ಮೂರು ತಿಂಗಳ ಹಿಂದಷ್ಟೇ ತೀರಿಕೊಂಡಿದ್ದ ತನ್ನ ಪುಟ್ಟ ಹೆಣ್ಣುಮಗುವಿನ ನೆನಪು. ಅರೆ..! ಪುಟ್ಟ ಮಗುವಿನ ಸಾವಿನ ನೆನಪಿಗೆ ವಿಷಾದವಲ್ಲವಾ..? ಮತ್ತೆ ಇದು ಹೇಗೆ ಭಯಾನಕವಾಗಿ ರೂಪುಗೊಳ್ಳುತ್ತದೆ..? ಮಗುವಿನ ಆತ್ಮವಾ ಅಥವಾ ಮಗುವಿನ ಸಾವಿನ ಹಿಂದಿನ ನಿಗೂಢ ಸತ್ಯವಾ ಅಥವಾ ಮಗುವೇ ಬೇರೆ ರೂಪದಲ್ಲಿ ಬಂದು ಕಾಡುತ್ತಿರಬಹುದಾ ಎಂಬೆಲ್ಲಾ ಆಲೋಚನೆಗಳು ಸುಳಿಯುತ್ತಿರುವಾಗಲೇ ಆತನ ಆತಂಕದ ಕಾರಣ ತಿಳಿದು ಬರುತ್ತದೆ. ಮಗುವಿನ ಸಾವು ದುಃಖದ ಹೊದಿಕೆಯನ್ನು ಹೊದಿಸಿದ್ದರೆ.. ಮಗು ತೀರಿಕೊಂಡಾಗ ಮಗುವಿನ ಶವದೊಂದಿಗೆ ಮಗುವಿನ ಹೊದಿಕೆಯನ್ನು ಸಹಾ ಹೂತಿದ್ದು ನೆನಪಾಗಿತ್ತು ಅವನಿಗೆ. ಆದರೆ, ಮತ್ತದೇ ಹೊದಿಕೆ ತೊಟ್ಟಿಲಿನಲ್ಲಿ ಪ್ರತ್ಯಕ್ಷವಾಗಿತ್ತು.
ಹಾಗಿದ್ದರೆ, ಪರ್ವನಿಗೆ ಸಾವಿನ ದುಃಖದಲ್ಲಿಯೂ ಹೊದಿಕೆಯ ನೆನಪು ಅಷ್ಟು ಸ್ಥಿರವಾಗಿತ್ತಾ..? ಸಾವಿನ ಸಂದರ್ಭದಲ್ಲಿಯೂ ಮಗುವಿನ ಹೊದಿಕೆ ಅವನ ಕಣ್ಣಲ್ಲಿ ನಿಂತುಬಿಟ್ಟಿದ್ದ ಕಾರಣವೇನು..? ಎಂದು ಯೋಚಿಸುತ್ತಿರುವಾಗಲೇ ಮಣ್ಣು ಪಾಲಾಗಿದ್ದು ಅದೇ ಹೊದಿಕೆಯೇ ಅಥವಾ ಅದನ್ನೇ ಹೋಲುವ ಬೇರೆಯದ್ದೇ ಹೊದಿಕೆಯೇ..? ಅಥವಾ ಕುಡಿತದ ನಶೆಯಲ್ಲಿ ಆತ ಗೊಂದಲಕ್ಕೊಳಗಾಗಿದ್ದನೇ..? ಇಷ್ಟೆಲ್ಲಾ ಗೊಂದಲಗಳ ನಡುವೆ ಆತ ಮತ್ತೆ ಬೆಚ್ಚಿಬಿದ್ದಿದ್ದ. ಅದಕ್ಕೆ ಕಾರಣವೂ ಬೇರೆಯೇ ಇತ್ತು.
ಅಪ್ಪ-ಅಮ್ಮನ ಸಾಂತ್ವನ ಆತನ ಮನಸ್ಸಿಗೆ ನಾಟಲಿಲ್ಲ. ಸದ್ಯಕ್ಕೆ ಅಮ್ಮನ ಮನೆಯಲ್ಲಿದ್ದ ಪತ್ನಿ ಸಂಧ್ಯಾಳ ಜೊತೆಗೆ ಮಾತನಾಡಬೇಕು ಎಂದುಕೊಂಡಿದ್ದ. ಬದುಕಿನಲ್ಲಿ ಕೊಂಚ ದಿನಗಳ ಹಿಂದಷ್ಟೇ ಬಂದ ಮಗುವೊಂದು ಬದುಕನ್ನು ಎಷ್ಟೆಲ್ಲಾ ಆವರಿಸಿಕೊಂಡು ಬಿಡಬಲ್ಲದು..! ಅಲ್ಲದೇ, ಅದರ ಹಠಾತ್ ನಿರ್ಗಮನ ಮತ್ತೆ ಮನಸ್ಸನ್ನು ಅದೆಷ್ಟೆಲ್ಲಾ ದುಃಖಕ್ಕೆ ದೂಡಬಲ್ಲದು..?! ಈ ಎಲ್ಲಾ ಆಲೋಚನೆಗಳನ್ನು ಮೂಡಿಸುತ್ತಲೇ ಭಾವುಕವಾಗಿ ಶುರುವಾದ ಕಥೆ ಮುಂದೆ ಬೆಳೆಯುತ್ತಾ ಹೋಗುತ್ತದೆ.
ಪರ್ವನ ಬದುಕಲ್ಲಿ ಅಲ್ಲೋಲಕಲ್ಲೋಲ ಆಗಷ್ಟೇ ಶುರುವಾಗಿತ್ತು. ಮುಂದೆ ಆತನ ಕುಟುಂಬದಲ್ಲಿ ಸಂಭವಿಸಿದ ಸಾವು-ನೋವುಗಳಿಗೆ ಪರ್ವ ಮೂಕ ಸಾಕ್ಷಿಯಾಗುತ್ತಾನೆ. ಆದರೆ, ಪರ್ವನಿಗೆ ಈ ಸಾವುಗಳಲ್ಲೆಲ್ಲಾ ಅಸಹಜತೆ ಕಂಡರೂ.. ಉಳಿದವರಿಗೆ ಅದನ್ನು ಹೇಳುವಾಗ ಅಲ್ಲಿ ಅಸಹಜತೆಯನ್ನು ನಿರೂಪಿಸಲು ಹೇಗೆಲ್ಲಾ ಹೆಣಗಾಡುತ್ತಾನೆ..?
ಇಲ್ಲಿ "ಪರ್ವ ದೇವರಲ್ಲಿ ಅತಿಯಾಗಿ ವಿಶ್ವಾಸವಿರದ, ನಾಸ್ತಿಕತೆಯನ್ನೂ ಒಪ್ಪದ ಮನಸ್ಥಿತಿಯ ವ್ಯಕ್ತಿ. ದೇವರು ಇರಲಿ, ಇರದಿರಲಿ ತನ್ನ ಬದುಕಿಗೆ ವ್ಯತ್ಯಾಸವಾಗದು" ಎಂದುಕೊಂಡಿದ್ದವನು. ತನ್ನ ಬದುಕಲ್ಲಿ ನಡೆಯುವುದೆಲ್ಲವನ್ನೂ ಯಾವ ರೀತಿಯಲ್ಲಿ ನೋಡುತ್ತಾನೆ..? ಅಕಸ್ಮಾತ್ ಪರ್ವನ ಜಾಗದಲ್ಲಿ ಬೇರೆಯವರಿದ್ದು, ಪರ್ವನಿಗೆ ಸಾವಿನ ಅಸಹಜತೆಯನ್ನು ವಿವರಿಸಿದ್ದರೆ ಆತನ ಪ್ರತಿಕ್ರಿಯೆ ಹೇಗಿರುತ್ತಿತ್ತು..?
ಪರ್ವನ ಈ ಪರಿಸ್ಥಿತಿಯಲ್ಲಿ ಆತನಿಗೆ ಜೊತೆಯಾಗಿ ನಿಂತವರು ಯಾರು.. ಮನೆಯಲ್ಲಿನ ಸಂದರ್ಭ ಹಾಗೂ ಸ್ಥಿತಿ-ಗತಿಗಳು ಹೇಗಿದ್ದವು..? ಇದೆಲ್ಲದರ ಬೆನ್ನು ಬಿದ್ದ ಪರ್ವನಿಗೆ ಯಾರ ಸಹಾಯ ಒದಗಿತು ಹಾಗೂ ಅದು ಎಷ್ಟರ ಮಟ್ಟಿಗೆ ಸಫಲವಾಯಿತು ಎಂದು ತಿಳಿಯಲು ಒಂದೊಂದಾಗಿ ಪುಟಗಳನ್ನು ಮಗುಚುತ್ತಿದ್ದರೆ.. ಮುಂದೇನಾಗುತ್ತದೆ ಎನ್ನುವ ಕುತೂಹಲ ಕಥೆಯನ್ನು ಓದಿಸಿಕೊಂಡು ಹೋಗುತ್ತದೆ.
ರವಿ ಬೆಳಗೆರೆಯವರ ಮಾಟಗಾತಿಯಲ್ಲಿನ ತೇಜಮ್ಮನನ್ನು ನೆನಪಿಸುವಂತಹಾ ಕ್ಷುದ್ರವೇಣಿ ಹಾಗೂ ಬಿಸ್ತಗೋಡು ಕಣ್ಮುಂದೆ ಬರುವಂತಿದೆ.
ಇಲ್ಲಿ ಮಾಂತ್ರಿಕತೆ ಇದೆ. ದೈವಿಕತೆ ಇದೆ. ನಂಬಿಕೆ ಇದೆ. ಮನುಷ್ಯನ ಮಾನಸಿಕ ತುಮುಲಗಳಿವೆ. ಮನೋವಿಜ್ಞಾನವಿದೆ. ಶುರುವಿನಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ನಿರೂಪಣೆಯಲ್ಲಿನ ಭಾವುಕತೆ ಆವರಿಸಿತು.
ಹಾರರ್ ಥ್ರಿಲ್ಲರ್ ಪ್ರಭೇದವನ್ನು ಇಷ್ಟಪಡುವ ಓದುಗರು ನೀವಾಗಿದ್ದರೆ ಖಂಡಿತವಾಗಿಯೂ ಈ ಕಾದಂಬರಿಯನ್ನು ತಪ್ಪದೇ ಓದಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ