ಶನಿವಾರ, ಏಪ್ರಿಲ್ 25, 2026

ಸಂಧ್ಯಾ - ವಿಂದ್ಯಾ (ಪುಸ್ತಕ ಯಾನ - 316)


ಪುಸ್ತಕದ ಶೀರ್ಷಿಕೆ : ಸಂಧ್ಯಾ - ವಿಂದ್ಯಾ

ಲೇಖಕರು : ಚಿತ್ರಲೇಖ 

ಪ್ರಕಾಶಕರು : ಲಲಿತಾ ಪ್ರಕಾಶನ

ಮರು ಮುದ್ರಣ : 2023


47 ದಿನಗಳು ಮತ್ತು ಸಂಧ್ಯಾ-ವಿಂದ್ಯಾ ಎರಡೂ ಕಾದಂಬರಿಗಳ ಸಂಯುಕ್ತ ಸಂಪುಟ. ಇದರಲ್ಲಿ ಸಂಧ್ಯಾ-ವಿಂದ್ಯಾ ಕಿರು ಕಾದಂಬರಿ. ಅಲ್ಲದೇ, ಇದು ಚಿತ್ರಲೇಖ ಮೇಡಂ ಅವರ ಸ್ವರಚಿತ ಕಾದಂಬರಿ. 47 ದಿನಗಳು ತಮಿಳು ಮೂಲದಿಂದ ಅನುವಾದಿತ. ಶ್ರೀಮತಿ ಶಿವಶಂಕರಿಯವರ ತಮಿಳು ಕಾದಂಬರಿ "47 ನಾಟ್ ಕಳ್"ನ ಅನುವಾದ. 47 ದಿನಗಳು ಕಾದಂಬರಿಯನ್ನು ಮುಂದಿನ ದಿನಗಳಲ್ಲಿ ಪರಿಚಯಿಸುವೆ. 


ಮನೋಹರಿ ಹಾಗೂ ಗೋಪಾಲಸ್ವಾಮಿ ಆದರ್ಶ ದಂಪತಿಗಳು. ಮಧ್ಯಮ ವರ್ಗದ ಸಂತೃಪ್ತ ಕುಟುಂಬ. ನೆಮ್ಮದಿಯಿದ್ದರೂ.. ಸಂತಾನಪ್ರಾಪ್ತಿ ತಡವಾಗಿ ಆಗಿತ್ತು ಅಷ್ಟೇ.. ಮನೋಹರಿಗಿಂತಲೂ 10 ವರ್ಷದಷ್ಟು ಕಿರಿಯವನಾದ ತಮ್ಮ ಸೋಮಸುಂದರ್ ನನ್ನೇ ಮಗನೆಂದು ಬೆಳೆಸಿದ್ದ ದಂಪತಿಗಳಿಗೆ ಅದೇ ಪುಣ್ಯದ ಫಲವೋ ಏನೋ ಎಂಬಂತೆ ಅವಳಿ ಹೆಣ್ಣುಮಕ್ಕಳು ಸಂಧ್ಯಾ ಹಾಗೂ ವಿಂದ್ಯಾ ಜನಿಸಿದ್ದರು. ಅಷ್ಟರಲ್ಲಾಗಲೇ ಸೋಮಸುಂದರ್ ಅವರ ವಿವಾಹವಾಗಿತ್ತು. ಪತ್ನಿ ವಿನುತಾ ಸಹಾ ಕುಟುಂಬಕ್ಕೆ ಹೊಂದಿಕೊಂಡರೂ.. ಮುಂದಾಲೋಚನೆಯಿಂದ ಈ ದಂಪತಿಗಳೇ ಅವರನ್ನು ಬೇರೆ ಸಂಸಾರ ಹೂಡುವಂತೆ ಕಿವಿಮಾತು ಹೇಳಿದ್ದರು. ಆದರೂ.. ಮನೆಯ ಕಷ್ಟ-ಸುಖಗಳಲ್ಲಿ ಭಾಗಿಯಾಗಿದ್ದರು ಆ ದಂಪತಿಗಳು.


ಸಂಧ್ಯಾ-ವಿಂದ್ಯಾ ನೋಡಲು ಒಂದೇ ತರಹದ ಮಕ್ಕಳು. ಹೆತ್ತವರಿಗೆ ಅದನ್ನು ಗುರುತಿಸಲು ಕೊಂಚ ಕಷ್ಟವಾಗುತ್ತಿತ್ತು. ಆದರೂ ಇಬ್ಬರಿಗೂ ಒಂದು ಮಚ್ಚೆಯಲ್ಲಿ ವ್ಯತ್ಯಾಸವಿತ್ತು.


 ಸಂಧ್ಯಾ ಮೊದಲು ಹುಟ್ಟಿದ ಕಾರಣ ಅಕ್ಕ ಎನಿಸಿಕೊಂಡರೆ.. ವಿಂದ್ಯಾ ತಂಗಿಯಾದಳು. ಇಬ್ಬರೂ ಚುರುಕಾಗಿ, ಚೂಟಿಯಾಗಿ ಬೆಳೆಯುತ್ತಿದ್ದರು. ಹಣ್ಣು ಕೀಳಲು ಮರ ಹತ್ತಿದ್ದ ಸಂಧ್ಯಾ ಆಕಸ್ಮಿಕವಾಗಿ ಬಿದ್ದಿದ್ದಳು. ಆ ಆಕಸ್ಮಿಕ ಘಟನೆಗೆ ವಿಂದ್ಯಾ ತಾನೇ ಕಾರಣವೆಂಬ ತಪ್ಪಿತಸ್ಥ ಭಾವ ಹೊಂದಿದ್ದರೂ.. ಮನೆಯಲ್ಲಿ ಯಾರೂ ಅದನ್ನು ದೊಡ್ಡದಾಗಿ ಕಂಡು ವಿಂದ್ಯಾಳನ್ನು ದೂಷಿಸಲಿಲ್ಲ. ಆಕಸ್ಮಿಕ ಘಟನೆ ಎನ್ನುವ ಭಾವ ಪೋಷಕರಲ್ಲಿಯೂ ಇತ್ತು. 


ಆಕಸ್ಮಿಕವಾಗಿ ಆದ ಘಟನೆ ಸಂಧ್ಯಾಳ ಬದುಕನ್ನೇ ಬದಲಿಸಿತು. 20 ದಿನಗಳ ಕಾಲ ಅರೆಪ್ರಜ್ಞಾವಸ್ಥೆಯಲ್ಲಿದ್ದವಳು ನಂತರ ಚೇತರಿಸಿಕೊಂಡಳು. ಸಂಧ್ಯಾ ಮೊದಮೊದಲು ಮಂಕಾಗಿದ್ದರೂ ನಂತರ ಚೇತರಿಸಿಕೊಂಡಳು. ಆದರೆ, ವ್ಯಾಸಂಗದಲ್ಲಿ ಹಿಂದಿನ ಆಸಕ್ತಿ ಇರಲಿಲ್ಲ. ಹಠಮಾರಿತನ ಮುಂದುವರಿಯುತ್ತಲೇ ಇತ್ತು. ಸಂಧ್ಯಾಳೇ ಮನೆಯ ಅಕ್ಕರೆಯ ಕೂಸಾದಳು. ತಂಗಿಯನ್ನು ದೂಷಿಸದೆ, ಮತ್ತಷ್ಟು ಪ್ರೀತಿಸಿದಳು. ಸಂಧ್ಯಾ ಓದಿನಲ್ಲಿ ಹಿಂದುಳಿದರೆ, ವಿಂದ್ಯಾ ಜ್ಞಾನ ಸಂಪಾದನೆಯೇ ತನ್ನ ಧ್ಯೇಯವೆಂಬಂತೆ ಓದುತ್ತಿದ್ದಳು. ಮುಂದೆ ಡಾಕ್ಟರ್ ಸಹಾ ಆದಳು. ಅವಳ ವೈದ್ಯಕೀಯ ವ್ಯಾಸಂಗ ನಡೆಯುತ್ತಿರುವಾಗಲೇ ಸಂಧ್ಯಾಳಿಗಾಗಿ ವರಪರೀಕ್ಷೆ ನಡೆಯಿತು. 


ರಂಗರಾವ್ ಹಾಗೂ ವಿಜಯಂಬಿಕಾ ದಂಪತಿಗಳ ಮಗ ಕಾರ್ತಿಕ್ ಜೊತೆಗೆ ಅವಳ ವಿವಾಹವೂ ಆಯಿತು. ತಂದೆ-ಮಗ ಇಬ್ಬರೂ ಮೃದುಭಾಷಿಗಳು. ವಿಜಯಂಬಿಕಾರವರೇ ಅವರ ಮನೆಯಲ್ಲಿ ಪ್ರಮುಖ ಸ್ಥಾನ ಹೊಂದಿದವರು. ಮೊದಲ ಮಗಳು ಕೋಕಿಲಾಳ ಮದುವೆಯಾಗಿದ್ದರೆ.. ಕಿರಿಯ ಮಗಳು ಕೋಮಲ ಇನ್ನೂ ಓದುತ್ತಿದ್ದಳು. ವಿಜಯಾಂಬಿಕಾ ಹೇಳಿದಂತೆಯೇ ಮನೆಯ ಪ್ರತಿಯೊಂದು ಕೆಲಸವೂ ಸಾಗುತ್ತಿತ್ತು. ಆದರೆ, ಸಂಧ್ಯಾ ಬಂದ ನಂತರ ಎಲ್ಲವೂ ಏರುಪೇರಾಯಿತು. ವಿಜಯಂಬಿಕಾರ ಸ್ವಭಾವವನ್ನೇ ಹೊತ್ತಿದ್ದ ಸಂಧ್ಯಾ ಸೇರಿಗೆ ಸವ್ವಾ ಸೇರು ಎಂಬಂತೆ ನಡೆದುಕೊಳ್ಳಲು ಶುರು ಮಾಡಿದಳು. ಮನೆಯಲ್ಲಿ ಮುದ್ದಿನ ಮಗಳಾಗಿದ್ದವಳಿಗೆ ಅತ್ತೆಯ ಮನೆಯಲ್ಲಿಯೂ.. ಅದೇ ಭಾವ. ಆದರೆ, ಅದಾಗದಿದ್ದಾಗ ಮನೆಯನ್ನೇ ಕುರುಕ್ಷೇತ್ರ ಮಾಡಿದಳು. ಇದರಿಂದಾಗಿ ಅತ್ತೆ ಮನೆಯವರ ಮೇಲೆ ದಿನೇ ದಿನೇ ಕಹಿ ಭಾವನೆ ಬೆಳೆಯುತ್ತಲೇ ಹೋಯಿತು. 


ತಾಯಿಯ ವಂಶವಾಹಿನಿಯ ಪ್ರಭಾವವೋ ಅಥವಾ ಬೇರೆ ಕಾರಣವೋ ಅವಳು ತಾಯಿಯಾಗುವುದು ತಡವಾಯಿತು. ಅಷ್ಟರಲ್ಲಾಗಲೇ ತಂದೆ ಗೋಪಾಲಸ್ವಾಮಿಯವರು ಹೃದಯಾಘಾತದಿಂದ ತೀರಿಕೊಂಡಿದ್ದರು. ಸಂಧ್ಯಾಳ ವಿವಾಹವಾಗಿ 8 ವರ್ಷದ ನಂತರ ಆಕೆ ತಾಯಿಯಾಗುವ ಸೂಚನೆ ಸಿಕ್ಕಿತು. ಸ್ಕ್ಯಾನಿಂಗ್ ನಲ್ಲಿ ಅವಳಿ ಗಂಡು ಮಕ್ಕಳಿರುವುದು ತಿಳಿಯಿತು. ಅತ್ತೆ ಎಷ್ಟೇ ಮೃದು ಧೋರಣೆ ತಳೆದರೂ ಆಕೆ ಅದನ್ನು ಒಪ್ಪಲು ಸಿದ್ಧವಿರಲಿಲ್ಲ. 


ವಿಶ್ರಾಂತಿ ಹಾಗೂ ಆರೈಕೆಗೆಂದು ಕೊನೆಗೂ ತಾಯಿಯ ಮನೆಗೆ ಬಂದು ಸೇರಿದಳು ಸಂಧ್ಯಾ. ಹೆಚ್ಚಿನ ಆರೈಕೆಯಿಂದ ಮತ್ತೆ ಮೊದಲಿನಂತಾಗುತ್ತಾಳೆ ಎನ್ನುವ ನಿರಾಳತೆ ಎಲ್ಲರಿಗೂ.. 


 ಇತ್ತ ವಿಂದ್ಯಾ ತನ್ನ ಸೀನಿಯರ್ ಆಗಿದ್ದ ಅಜಿತ್ ನನ್ನು ಪ್ರೀತಿಸುತ್ತಿದ್ದಳು. ಆತನೂ ಈಗ ಪ್ರೈವೇಟ್ ಆಸ್ಪತ್ರೆಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದರೆ, ವಿಂದ್ಯಾ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಮಾಡುವ ಮೂಲಕ ಬಡವರಿಗೆ ಹಾಗೂ ಕೈಲಾಗದವರಿಗೆ ಸೇವೆ ಮಾಡುತ್ತೇನೆ ಎಂದು ಅಲ್ಲಿಯೇ ಕೆಲಸ ಮಾಡುತ್ತಿದ್ದಳು. ಈಗ ಅಜಿತ್ ವಿಂದ್ಯಾಳನ್ನು ಪರೀಕ್ಷಿಸುವ ಡಾಕ್ಟರ್.


 ರಕ್ತದಲ್ಲಿ ಕಬ್ಬಿಣದ ಕೊರತೆಯಿದುದರಿಂದ ಅವಳ ದೇಹಸ್ಥಿತಿ ಅಷ್ಟು ಸರಿ ಇರಲಿಲ್ಲ. ಆಸ್ಪತ್ರೆಯಲ್ಲಿ ಆರೈಕೆ ನಡೆಯುತ್ತಿತ್ತು. ಎಂಟನೇ ತಿಂಗಳಿಗೆ ತಿಳಿದ ವಿಚಾರವೆಂದರೆ ಸಂಧ್ಯಾಳಿಗೆ ಬ್ರೈನ್ ಟ್ಯೂಮರ್. ಗರ್ಭದಲ್ಲಿರುವ ಮಕ್ಕಳನ್ನು ಬೇರ್ಪಡಿಸಿ ನಂತರವೇ ಅವಳಿಗೆ ಆಪರೇಷನ್ ಮಾಡಲು ಸಾಧ್ಯವಿದ್ದದ್ದು. ಆದರೆ, ಇರುವ ವಿಚಾರವನ್ನು ಕಾರ್ತಿಕ್ ನಿಗೆ ತಿಳಿಸಲು ಸಂಧ್ಯಾ ಒಪ್ಪಲಿಲ್ಲ. ಪೂರ್ವಗ್ರಹಪೀಡಿತ ಮನಸ್ಥಿತಿಯಿಂದ ಅತ್ತೆ ತನ್ನ ಗಂಡನಿಗೆ ಮತ್ತೊಂದು ವಿವಾಹ ಮಾಡಿಬಿಡುತ್ತಾರೆ ಎನ್ನುವ ಭಯ ಅವಳದ್ದು.


 ಅಲ್ಲದೇ, ತನ್ನ ಜಾಗದಲ್ಲಿ ವಿಂದ್ಯಾ ಅಲ್ಲಿ ಮಕ್ಕಳನ್ನು ನೋಡಿಕೊಂಡು ಅಲ್ಲಿ ಇರಬೇಕೆಂಬ ಮನದಾಸೆಯನ್ನು ತೋಡಿಕೊಂಡಾಗ ವಿಂದ್ಯಾ, ಮನೋಹರಿ ಯಾರೂ ಒಪ್ಪಲಿಲ್ಲ. ಸಂಧ್ಯಾ ಹಠ ಹಿಡಿದಾಗ ವಿಂದ್ಯಾಳಿಗೆ ಧರ್ಮಸಂಕಟ. ಅಜಿತ್ ನ ಮನಸ್ಥಿತಿಯೂ ಅದಕ್ಕಿಂತ ಭಿನ್ನವಾಗಿ ಏನೂ ಇರಲಿಲ್ಲ. ಆದರೆ, ಸದ್ಯಕ್ಕೆ ಸಂಧ್ಯಾ ಚೇತರಿಸಿಕೊಳ್ಳಬೇಕಾದ್ದೇ ಮುಖ್ಯವಾಗಿತ್ತು. ಹಾಗಾಗಿ, ಅವಳ ಮಾತಿನಂತೆಯೇ ವಿಂದ್ಯಾ ಅಲ್ಲಿರಲು ಹೊರಟಳು.


 ಪ್ರಜ್ವಲ್ ಹಾಗೂ ಉಜ್ವಲ್ ರನ್ನು ನೋಡಿಕೊಳ್ಳುವ ತಾಯಿಯಾಗಿ ಅಲ್ಲಿಗೆ ಹೋದ ವಿಂದ್ಯಾಳಿಗೆ ಎದುರಾದ ಸಮಸ್ಯೆಗಳು ಹಾಗೂ ಸವಾಲುಗಳೇನು..? ಕಾರ್ತಿಕ್ ದೂರದ ಊರಿನಲ್ಲಿದ್ದ ತನ್ನ ಅಕ್ಕ ಕೋಕಿಲಾಳಿಗೂ ಕ್ಯಾನ್ಸರ್ ಇರುವುದರಿಂದ ಅಲ್ಲಿಗೆ ಹೋಗುವಂತಾಯಿತು. ಮುಂದಿನ ದಿನಗಳಲ್ಲಿ ಸಂಧ್ಯಾಳ ಆರೋಗ್ಯಸ್ಥಿತಿ ಏನಾಯಿತು..? ಕಾರ್ತಿಕ್ ಹಾಗೂ ಅವರ ಮನೆಯವರಿಗೆ ಈ ವಿಚಾರ ತಿಳಿಯಿತೇ..? ಅಜಿತ್ ಹಾಗೂ ಮನೋಹರಿಯವರು ಇದನ್ನು ತೆಗೆದುಕೊಂಡ ಬಗೆ ಹೇಗೆ..? ಎಲ್ಲವನ್ನು ತಿಳಿಯಲು ಓದಿ ಸಂಧ್ಯಾ-ವಿಂದ್ಯಾ ಕಾದಂಬರಿಯನ್ನು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ