ಶನಿವಾರ, ಏಪ್ರಿಲ್ 25, 2026

ಐದು ಬೆರಳುಗಳು (ಪುಸ್ತಕ ಯಾನ - 336)


ಪುಸ್ತಕದ ಶೀರ್ಷಿಕೆ : ಐದು ಬೆರಳುಗಳು

ಲೇಖಕರು : ಡಾ. ಪ್ರೇಮಲತಾ ಬಿ

ಪ್ರಕಾಶಕರು : ಸೀಮಾ ಬುಕ್ಸ್ 

ಪ್ರಥಮ ಮುದ್ರಣ : 2022

ಪುಟಗಳು : 136

ಬೆಲೆ : 175 ರೂ


ಡಾ. ಪ್ರೇಮಲತಾ ಬಿ ಅವರು ಮೂಲತಃ ತುಮಕೂರಿನವರು. ವೃತ್ತಿಯಲ್ಲಿ ದಂತ ವೈದ್ಯೆ. ಕಳೆದ 20 ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸವಾಗಿದ್ದಾರೆ. ಹಲವಾರು ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ ಹಾಗೂ ಅಂತರ್ಜಾಲ ತಾಣಗಳಲ್ಲಿ ಅಂಕಣ ಬರಹ, ಕಥೆ, ಪ್ರವಾಸ ಕಥನ, ಪ್ರಬಂಧಗಳನ್ನು ಬರೆಯುತ್ತಾ ಬಂದಿದ್ದಾರೆ. ಐದು ಬೆರಳುಗಳು, ತಿರುವುಗಳು ಇವರ ಪ್ರಕಟಿತ ಕಥಾಸಂಕಲನಗಳು. ಕೋವಿಡ್ ಡೈರಿ ಹಾಗೂ ಬಾಯೆಂಬ ಬ್ರಹ್ಮಾಂಡ ಅಂಕಣ ಬರಹ ಹಾಗೂ ಲೇಖನ ಮಾಲೆಗಳು. ಹೀಗೆ ಹಲವಾರು ಬರಹಗಳಿಂದ ಪ್ರಸಿದ್ಧರಾಗಿರುವ ಇವರ ಬಿಡಿ ಬರಹಗಳನ್ನು ನಾನು ಓದಿದ್ದರೂ.. ಇದು ನಾನು ಓದಿದ ಅವರ ಪ್ರಥಮ ಪುಸ್ತಕ. ಅನಿವಾಸಿ ಭಾರತೀಯರಾಗಿರುವ ಇವರ ಕಥೆಯಲ್ಲಿ ವಿದೇಶಿ ಕಥೆಗಳ ಜೊತೆಗೆ ಅಪ್ಪಟ ದೇಸಿ ಕಥೆಗಳು ಸಹಾ ಮಿಳಿತಗೊಂಡಿವೆ.


ಈ ಕಥಾ ಸಂಕಲನದಲ್ಲಿ ಒಟ್ಟು 10 ಕಥೆಗಳಿವೆ 


ನೆತ್ತಿಯ ಕಣ್ಣು : ವೃಷಭಾಳಿಗೆ ತನ್ನ ಗಂಡ ಬಸಣ್ಣ ಕರೆತರುವ ಸ್ವಾಮೀಜಿಗಳ ಕುರಿತಾಗಿ ದುಗುಡವೇ ಇತ್ತು. ನೆತ್ತಿಯ ಮೇಲೆ ಕಣ್ಣಿದ್ದ ಆ ಸ್ವಾಮೀಜಿಗೆ ಅತ್ಯಂತ ವಿಶೇಷ ಶಕ್ತಿ ಇರುವ ಪ್ರತೀತಿಗಳಿದ್ದು.. ಆತ ಯಾವಾಗಲೂ ತಲೆಗೆ ಪೇಟ ಸುತ್ತಿ ತನ್ನ ಮೂರನೇ ಕಣ್ಣನ್ನು ಮುಚ್ಚಿಡುತ್ತಾನೆ. ಮುಕ್ಕಣ್ಣನಂತೆ ಜಗತ್ತು ಅಲ್ಲೋಲಕಲ್ಲೋಲವಾಗಬಹುದು ಎಂಬ ನಂಬಿಕೆ ಜನರಲ್ಲಿದ್ದಾಗಲೇ.. ಆತನ ಕುರಿತಾಗಿ ಪವಾಡಗಳು ಜನಜನಿತವಾಗಿರುವ ಸಂದರ್ಭದಲ್ಲಿಯೇ ತಮ್ಮೂರಿಗೆ ಬಂದಿದ್ದ ಆತನನ್ನು ಮನೆಗೆ ಕರೆ ತರಲು ಹೋಗಿದ್ದ ಬಸಣ್ಣನ ಮನಸ್ಸಿನಲ್ಲಿ ಇದ್ದದಾದರೂ ಏನು..? ಬಸಣ್ಣನ ಮನೆಗೆ ದಯಮಾಡಿಸಿದ ಆ ಸ್ವಾಮೀಜಿ ಅಂದು ಬಸಣ್ಣ ಹಾಗೂ ವೃಷಭಾಳಿಗೆ ತೋರಿದ ತನ್ನ ನಿಜರೂಪವಾದರೂ ಏನಿತ್ತು..?


ಈಶ್ವರಿ : ಶಾರದಮ್ಮನ ಮಗಳಾದ ಈಶ್ವರಿ ಹುಟ್ಟಿದಾಗಿನಿಂದ ಸೀಳು ಬಾಯಿಯ ಕುರೂಪಕ್ಕೆ ಹಾಗೂ ವಿಕಾರತೆಗೆ ಒಳಗಾಗಿದ್ದವಳು. ತಂದೆ ಮಗಳಿಗೆ ಬೇಕಾದ ಚಿಕಿತ್ಸೆ ಒದಗಿಸುವುದರ ಬದಲಾಗಿ ಹೆಂಡತಿಯ ಮೇಲೆ ಅಪವಾದ ಹೊರಿಸುತ್ತಾ.. ಮಗಳನ್ನು ಮುಂದಿಟ್ಟುಕೊಂಡು ದೂರವಾಗಿದ್ದ. ಸಮಾಜದಲ್ಲಿ, ಶಾಲೆಯಲ್ಲಿ ಹೀಗೆ ಎಲ್ಲೆಡೆಯಲ್ಲಿಯೂ ಅವಳ ರೂಪದಿಂದ ಆಕೆ ವಿಭಿನ್ನವಾಗಿ ಗುರುತಿಸುತ್ತಿದ್ದ ಹಾಗೆಯೇ ತಾತ್ಸರಕ್ಕೂ ಒಳಗಾಗುತ್ತಿದ್ದಳು. ಇಂತಹಾ ಈಶ್ವರಿ ಬೆಳೆದು ದೊಡ್ಡವಳಾಗಿ ಯೌವ್ವನಕ್ಕೆ ಕಾಲಿಟ್ಟ ದಿನಗಳ ಚಿತ್ರಣ ಇಲ್ಲಿದೆ. ಆಕೆಯ ವಿವಾಹ ಹಾಗೂ ಮನದ ತುಮುಲಗಳ ನಡುವೆ ಆಕೆಯ ಭಾವಗಳ ತಾಕಲಾಟದ ವ್ಯಥೆ ಇಲ್ಲಿ ಕಾಣುತ್ತದೆ.


ಕುಮಾರ : ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನಿಲಯದಲ್ಲಿ  ಅಡುಗೆ ಮಾಡುವ ಹೆಡ್ ಕುಕ್ ಹಾಗೂ ಸಹಾಯಕರಾಗಿದ್ದವರನ್ನು ಬಿಟ್ಟು ಮೇಲುಸ್ತುವಾರಿ ಮಾಡುವವರಷ್ಟೇ ಗಂಡಸರು. ಹಾಗೆ ಮೇಲುಸ್ತುವಾರಿ ನೋಡಿಕೊಂಡು ಹೋಗುತ್ತಿದ್ದ ನರಸಿಂಹಮೂರ್ತಿಯವರಿಗೆ ಸಹಾಯಕನಾಗಿ ಭಟ್ಟರ ಶಿಫಾರಸ್ಸಿನ ಮೇಲೆ ಕುಮಾರ ಬಂದಿದ್ದ.  ಬೆಂಗಳೂರನ್ನೇ ನೋಡಿರದವನಿಗೆ, ತಮ್ಮೂರಿನಲ್ಲಿ ಕಿರಿಯ ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಾ.. ಅಪಾಪೋಲಿ ತಿರುಗುತ್ತಿದ್ದವನಿಗೆ ಹೆಣ್ಣುಗಳ ಸಮೂಹದೊಳಗೆ ಬಿಟ್ಟಂತಾಗಿತ್ತು. ಆದರೆ, ಈಗ ಆತ ತನ್ನ ಕಲ್ಯಾಣಗುಣಗಳನ್ನೆಲ್ಲಾ ಬಿಟ್ಟು ಕರ್ತವ್ಯವನ್ನು ಮಾತ್ರ ನಿಭಾಯಿಸಬೇಕಿತ್ತು. ಅದಕ್ಕೆ ಇನ್ನೇನು ಹೊಂದಾಣಿಕೆಯಾಗುತ್ತಿದ್ದಾನೆ ಎಂದುಕೊಳ್ಳುವಷ್ಟರಲ್ಲಿಯೇ ಆತನಿಗೆ ಹುಡುಗಿಯರ ಪ್ರಪಂಚ ಪರಿಚಯಿಸಿದ ಬದುಕಿನ ಮತ್ತೊಂದು ಮಗ್ಗುಲೇನು..? ಕುಮಾರ ಅದನ್ನು ಯಾವ ರೀತಿ ತೆಗೆದುಕೊಂಡ..?


ಸಿರಿಯ ಗರ : ಮಾತಿನಲ್ಲಿ ಪುಟ್ಟ ಸಾಮ್ರಾಜ್ಯವನ್ನು ಸೃಷ್ಟಿಸಿಕೊಂಡಿದ್ದ ಚಾಲೂಕಿನ ವ್ಯಕ್ತಿ ಹಾಗೂ ಆತ ನಡೆಸುತ್ತಿದ್ದ ಸರಣಿ ಕಾರ್ಪೊರೇಟ್ ಆಸ್ಪತ್ರೆಯೊಂದರಲ್ಲಿ ವಾರದಲ್ಲಿ ಎರಡು ದಿನ ಕೆಲಸ ಮಾಡುತ್ತಿದ್ದ ಒಬ್ಬ ಕಿರಿಯ ವೈದ್ಯನ ಕಥೆ ಇಲ್ಲಿದೆ. ಅಸಲಿಗೆ ಆಸ್ಪತ್ರೆ ನಡೆಸುತ್ತಿದ್ದ ಆ ವ್ಯಕ್ತಿಯೂ ವೈದ್ಯನೇ.. ಮೊದಲೆಲ್ಲಾ ವೈದ್ಯ ವೃತ್ತಿ ಮಾಡುತ್ತಿದ್ದವನು ಸರಣಿ ಆಸ್ಪತ್ರೆಯ ನಿರ್ಮಾಣ ಮಾಡಿ ಅದರ ಆಡಳಿತಕ್ಕಷ್ಟೇ ಸಮಯ ಕೊಡುತ್ತಿದ್ದ.  ಇಬ್ಬರ ನಡುವಿನ ವಿಭಿನ್ನ ಆಲೋಚನಾ ಸರಣಿಗಳು ಹಾಗೂ ಕರೋನಾ ಕಾಲದ ಕಥೆ ಇಲ್ಲಿದೆ.


ಸಾಗರ : ರೂಪವಂತ ಗೆಳತಿಯೊಬ್ಬಳ ಬದುಕಲ್ಲಿ ಅದುವರೆಗೂ ಕವಿದಿದ್ದ ಕತ್ತಲೆ ಕಳೆದು ಇದೀಗ ಮತ್ತೆ ಬೆಳಕು ಮೂಡುತ್ತಿರುವ ಬಗ್ಗೆ ಶಾಂತಿಗೆ ಸಮಾಧಾನವಿತ್ತು. ಆ ಗೆಳತಿಯೇ ಸುಧಾ ಆದರೆ ಪರಿಸ್ಥಿತಿ ಹೇಗಿತ್ತು ಎಂದರೆ ಸುಧಾಳಿಗೆ ವಿವಾಹವಾಗಿ ಹೆಚ್ಚು ಕಡಿಮೆ 20 ವರ್ಷವೇ ಕಳೆದು ಹೋಗಿತ್ತು. ಹೊರ ನೋಟಕ್ಕೆ ಅತಿ ಆಧುನಿಕ ಎನ್ನುವ ಜೀವನ ನಿಲುವುಗಳನ್ನು ಹೊಂದಿದ್ದರೂ ಒಳಗೊಳಗೆ ಲೋಕದ ವ್ಯವಸ್ಥೆಗೆ ಅಂಜುವವಳೇ ಆಗಿದ್ದ ಸುಧಾಳಿಗೆ ಸಿಕ್ಕ ಸಾಂತ್ವನ ಹಾಗೂ ಹೊಸ ಬದುಕು ಹೇಗಿತ್ತು..?


ಸಮಾನಾಂತರ ದಾರಿಗಳು : ಮಿಸ್ಟರ್. ಕೆ ಅದಾಗಲೇ ಆಸ್ಪತ್ರೆಯಲ್ಲಿ ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದ ವೈದ್ಯ. ಪೂರ್ವ ಯೂರೋಪಿನ ಪೋಲೆಂಡ್ ದೇಶದವನು. ಆತನ ಕಷ್ಟಕರವಾದ ಹೆಸರನ್ನು ಹೇಳಲಾಗದೆ ಕೆ ಎಂದೇ ಕರೆಯುತ್ತಿದ್ದರು. ಪ್ರೀತಿ ಎಂದು ತಂದೆ-ತಾಯಿ ಇಟ್ಟ ಹೆಸರನ್ನು ಪ್ರೆಟ್ಟಿ ಎಂದು ಕರೆಯುತ್ತಿದ್ದವರ ನಡುವೆ ಈಗ ಹೊಸ ಕೆಲಸಕ್ಕೆ ಸೇರಿಯಾಗಿತ್ತು ಆಕೆ. ಹೊಸ ಜಾಗದಲ್ಲಿ ಕೆಲಸಕ್ಕೆ ಸೇರಿದಾಗ ವೃತ್ತಿ ಪ್ರತಿಷ್ಠೆಯನ್ನು ಸಹಾ ಅನುಭವಿಸಬೇಕಾಗುತ್ತದೆ. ಮೊದಮೊದಲಿಗೆ ಕೆ ಜೊತೆಗೆ ಅಷ್ಟು ಹೊಂದಾಣಿಕೆಯಾಗದ ಆಕೆಗೆ ನಂತರದಲ್ಲಿ ಒಳ್ಳೆಯ ಸಹೋದ್ಯೋಗಿಯಾಗಿದ್ದ. ನಂತರ ಆತನ ಬದುಕಿನ ಗಾಥೆ ತೆರೆದಿಟ್ಟ ಸತ್ಯವೇ ಬೇರೆ. ಆರು ತಿಂಗಳು ನಾಪತ್ತೆಯಾಗಿದ್ದ ಮಿಸ್ಟರ್ ಕೆ ಮತ್ತೆ ಬಂದಾಗ ಆತನ ಬದುಕು ಹೇಗಿತ್ತು..?


ಐದು ಬೆರಳುಗಳು : ಕಥಾ ಸಂಕಲನದ ಶೀರ್ಷಿಕೆಯೂ ಆಗಿರುವ ಈ ಕಥೆ ವಿದೇಶದಲ್ಲಿ ನಡೆಯುವ ಪ್ರಸಂಗದ ಜೊತೆಗೆ ಭಾರತೀಯ ಮನಸ್ಥಿತಿಯ ತಾಕ ಲಾಟವನ್ನು ಎತ್ತಿ ತೋರಿಸುತ್ತದೆ.

"ಪ್ರಪಂಚದಲ್ಲಿ ಹೆಣ್ಣು ಪುರುಷನ ಕಡೆ ತಪ್ಪು ಮಾಡಿದನೆಂದು ಬೆರಳು ಮಾಡಿದರೆ ಅವಳೇ ಗೆಲ್ಲುವುದು. ಗಂಡಸು ಯಾವಾಗಲೂ ಅಪರಾಧಿಯೇ. ಅದರಲ್ಲೂ ಇಂಗ್ಲೆಂಡ್ ಇಲ್ಲಿ ತಮ್ಮ ಹೆಸರಿಗೆ ಏನಾಗುತ್ತದೆ ಎನ್ನುವುದರ ಕುರಿತಾಗಿ ಮಹಿಳೆಯರು ತಲೆಕೆಡಿಸಿಕೊಳ್ಳುವುದಿಲ್ಲ."

ವಿಶ್ವನ ಆಲೋಚನಾ ಸರಣಿಗೆ ಹೀಗೆ ತನ್ನಲ್ಲಿಯೇ ಪರ-ವಿರೋಧಗಳು ಹುಟ್ಟಿಕೊಳ್ಳುತ್ತಿದ್ದವು. ಅಷ್ಟಕ್ಕೂ ಇದು ವೃತ್ತಿಗೆ ಸಂಬಂಧಪಟ್ಟ ವಿಚಾರವಲ್ಲ. ಅಲ್ಲದೇ ಪರದೇಶದವರು ಅನುಭವಿಸಬಹುದಾದ ಕಷ್ಟಗಳ ಉದಾಹರಣೆಯೂ ಆತನ ಕಣ್ಮುಂದಿತ್ತು. ಅಷ್ಟಕ್ಕೂ ವಿಶ್ವನಿಗೆ ಈ ಆಲೋಚನಾ ಸರಣಿ ಬಂದದ್ದೇಕೆ..? ಅಲ್ಲದೆ, ರಾಮಚಂದ್ರನ್ ನೆನಪು ಬಂದದ್ದೇಕೆ..? ಶೀರ್ಷಿಕೆಯ ಗುಟ್ಟೇ ಬಿಟ್ಟು ಕೊಡದೆ ಸಾಗುವ ಕಥಾನಕ.


ಚಡ್ಡ : ತಾನು ಭಾರತಕ್ಕೆ ಕಾಲಿಟ್ಟೇ ಇಲ್ಲ ಎಂದು ನಂಬಿಕೊಂಡಿದ್ದವಳ ಪಾಸ್ಪೋರ್ಟ್ ನಲ್ಲಿ ಜನ್ಮಸ್ಥಳ ಎಂಬ ಜಾಗದಲ್ಲಿ ಇದ್ದ ಕಡೆ ಅಮೃತಸರ್ ಎಂದು ಬರೆದಿತ್ತು. ಹೌದು. ಅದು ಪಂಜಾಬಿನ ಅಮೃತಸರ್. ಆದರೆ, ಬೆಳೆಯುತ್ತಿದ್ದದ್ದೆಲ್ಲವೂ ಇಂಗ್ಲೆಂಡಿನಲ್ಲಿಯೇ.. ಆಕೆಯ ಬದುಕಿನ ದುರಂತ ಸತ್ಯವೊಂದು ಸಂಪೂರ್ಣವಾಗಿ ತಿಳಿಯುವಷ್ಟರಲ್ಲಿಯೇ ಆಕೆಗೆ 35 ವರ್ಷ. ಅಷ್ಟಕ್ಕೂ ಚಡ್ಡ ಎಂದರೆ ಯುದ್ಧದ ನಡುವೆ ಹುಟ್ಟಿದ ವೀರಯೋಧೆ ರಾಜಕುಮಾರಿ ಎಂದರ್ಥ. ಅಷ್ಟಕ್ಕೂ ಇದು ಯಾರ ಯುದ್ಧ.. ಯಾರ ಸೋಲು.. ಯಾರ ಗೆಲುವು.. ಎಂಬುದನ್ನು ತೆರೆದಿಟ್ಟಿರುವ ಕಥೆ ಇದು.


ಟೋಕನ್ :  ನರ್ಸಿಂಗ್ ಹೋಂನಲ್ಲಿನ ತನ್ನ ರೋಗಿಗಳನ್ನೆಲ್ಲಾ ನೋಡಿ ಸಣ್ಣ-ಪುಟ್ಟ ಸರ್ಜರಿ, ಡೆಲಿವರಿಗಳನ್ನು ಮಾಡಿ ವಾರಕ್ಕೆ ಮೂರು ದಿನ ಮಾತ್ರ ನಡೆಸುತ್ತಿದ್ದ ತನ್ನ ಕ್ಲಿನಿಕ್ ಗೆ ಬಂದಿದ್ದ ಉಮಾದೇವಿ ಪ್ರಸೂತಿ ತಜ್ಞೆ. ಬಂದ ಒಬ್ಬಳು ರೋಗಿಯನ್ನು ಹಾಗೂ ಆಕೆಯ ಹೆಸರನ್ನು ಮರೆಯುವಂತೆಯೇ ಇರಲಿಲ್ಲ. ಅಷ್ಟಕ್ಕೂ ಹೆಸರು ಯಾವುದು ಹಾಗೂ ಆ ಟೋಕನ್ ನೆನಪಿಸಿದ್ದ ಪ್ರಸಂಗವೇನು..?


ತೆರೆದ ಬಾಗಿಲು : ಗ್ರೀಷ್ಮಾಳ ತಲೆಯಲ್ಲಿ ಸೆಕೆಂಡ್ ಹ್ಯಾಂಡ್ ಹುಡುಗಿ ಎನ್ನಿಸಿಕೊಳ್ಳುವ ಅವಮಾನಕ್ಕಿಂತ ಹೆಚ್ಚಿನ ಆತಂಕಗಳಿದ್ದುದಕ್ಕೆ ಕಾರಣವೂ ಇದ್ದವು. ಮಧ್ಯಮ ವರ್ಗದ ಮನೆಯಲ್ಲಿ ಹುಟ್ಟಿ ಸ್ನಾತಕೋತ್ತರ ಪದವಿ ಪಡೆದು ಕೆಲಸದಲ್ಲಿದ್ದರೂ ಮದುವೆಯ ಕುರಿತು ಆಕೆಗೂ ಕನಸುಗಳಿದ್ದವು. ಆದರೆ, ಮದುವೆಯಾದ ಕೆಲ ಸಮಯದಲ್ಲಿಯೇ ಕನಸು ಕಮರಿತ್ತು. ಮೊದಲ ಮದುವೆಯಲ್ಲಿಯೇ ಆಯ್ಕೆಗಳಿದ್ದರೂ ಈಗ ಎರಡನೇ ಮದುವೆಗೆ ಹೆಚ್ಚಿನ ಆಯ್ಕೆಗಳಿರಲಿಲ್ಲ. ಹಿಂದೆ ಆದದ್ದಕ್ಕಿಂತಲೂ.. ಹೆಚ್ಚಿನ ಗಂಭೀರ ತಪ್ಪುಗಳಾದರೆ ಎಂಬ ಆತಂಕ. ತನ್ನದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದವಳಿಗೆ ಎರಡನೇ ವಿವಾಹದ ಸಂದರ್ಭ ತೋರಿದ ದಾರಿಯೇನು..?


ವಿಭಿನ್ನ ಭಾವಗಳ ಚಂದದ ಕಥಾಸಂಕಲನದ ಓದು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ