ಶನಿವಾರ, ಏಪ್ರಿಲ್ 25, 2026

ಬಣ್ಣ ಬಣ್ಣದ ಬೆಳಕು (ಪುಸ್ತಕ ಯಾನ - 317)


ಪುಸ್ತಕದ ಶೀರ್ಷಿಕೆ : ಬಣ್ಣ ಬಣ್ಣದ ಬೆಳಕು

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 2002

ಎರಡನೇ ಮುದ್ರಣ : 2023


ಹೆಚ್.‌ಜಿ ರಾಧಾದೇವಿಯವರ ಬಣ್ಣ ಬಣ್ಣದ ಬೆಳಕು ಕಾದಂಬರಿ ನಾಲ್ವರು ಅಕ್ಕ-ತಂಗಿಯರ ಬದುಕಿನ ಏರಿಳಿತಗಳನ್ನು ಹಾಗೂ ಆ ಸಮಸ್ಯೆಗಳನ್ನು ದಾಟಿ ಅವರು ಬದುಕನ್ನು ಸರಿಪಡಿಸಿಕೊಂಡ ಬಗೆಯನ್ನು ತೋರುತ್ತದೆ. ಯಾವುದೇ ಸಮಸ್ಯೆ ಬಂದರೂ ಹೆದರದೆ, ಮುನ್ನುಗ್ಗಿ ಅದರಿಂದ ಹೊರಬರುವ ಮಾರ್ಗವನ್ನು ತೋರುವ ಈ ಕಾದಂಬರಿ ಸ್ಪೂರ್ತಿದಾಯಕವಾಗಿಯೂ ಕಾಣುತ್ತದೆ.


ವಾಸಂತಿ, ಜಯಂತಿ, ಆರತಿ ಹಾಗೂ ಭಾರತಿ ನಾಲ್ವರೂ ಅಕ್ಕತಂಗಿಯರು. ವಾಸಂತಿಯ ತಂದೆ ಶಿಕ್ಷಣ ಸಂಸ್ಥೆಯಲ್ಲಿ ಕಾಲೇಜು ವಿಭಾಗದಲ್ಲಿದ್ದರೆ.. ಇವರು ಅದೇ ಶಾಲೆಯ ಶಿಕ್ಷಕಿಯರಾಗಿ ಕೆಲಸ ಮಾಡುತ್ತಿದ್ದರು. ಅವರವರ ವಿವಾಹಕ್ಕೆ ಅವರವರ ದುಡ್ಡು ಕೂಡಿಹಾಕಿಕೊಳ್ಳಬೇಕಿತ್ತು. 


ವಾಸಂತಿ ಜಯಂತಿಗಿಂತ 6 ವರ್ಷ ದೊಡ್ಡವಳು. ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿ ಎಂಟು ವರ್ಷಗಳ ಸರ್ವಿಸ್ ಆಗಿತ್ತು. ಅದೇ ಶಾಲೆಯಲ್ಲಿ ಹೈಸ್ಕೂಲಿನ ವಿಭಾಗದ ಮೇಷ್ಟ್ರಾಗಿದ್ದ ವಿಶ್ವನಾಥ್ ತಾನಾಗಿಯೇ ಅವಳ ಗೆಳೆತನ ಬಯಸಿ ಮುಂದೆ ಬಂದಿದ್ದ. 


ಆರತಿ ಟಿ.ಸಿ.ಎಚ್ ಮಾಡಿಕೊಂಡು ಹಳ್ಳಿಯ ಶಾಲೆಯಲ್ಲಿ ಉಪಾಧ್ಯಾಯನಿಯಾಗಿ ಕೆಲಸ ಮಾಡುತ್ತಿದ್ದಳು. ಸರ್ಕಾರಿ ಕೆಲಸ ಹೊಂದಿದ್ದ ಅವಳು ಅದೇ ಶಾಲೆಯಲ್ಲಿ ಉಪಾಧ್ಯಾಯನಾಗಿದ್ದ ಸುರೇಶನನ್ನು ಪ್ರೀತಿಸಿ ಮದುವೆಯಾಗಿದ್ದಳು. ಸಂಪಾದಿಸುವ ಹುಡುಗಿಗಾಗಿ ಪ್ರೀತಿಯ ನಾಟಕ ಆಡಿ ಸಂಪಾದಿಸುವ ಹುಡುಗಿಯೇ ಬೇಕೆಂದು ವಿವಾಹವಾಗಿದ್ದ. 


ಇನ್ನು ಜಯಂತಿ ಸಹಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಹಿರಿಯ ಇಬ್ಬರಾದ ವಾಸಂತಿ ಹಾಗೂ ಜಯಂತಿಯವರಿಗಿಂತ ಮುನ್ನವೇ ಆರತಿಯ ವಿವಾಹವಾಗಿತ್ತು. ಆದರೆ, ಹಳ್ಳಿಯ ತುಂಬು ಕುಟುಂಬದ ಸೊಸೆಯಾಗಿ ಅವಳು ತನ್ನೆಲ್ಲಾ ಕರ್ತವ್ಯವನ್ನು ನಿರ್ವಹಿಸಲೇಬೇಕಿತ್ತು. 


ಆರತಿಯ ವಿವಾಹವಾದ ಮೇಲಂತೂ ವಾಸಂತಿ ಹಾಗೂ ವಿಶ್ವನಾಥರ ಗೆಳೆತನ ಹೆಚ್ಚಾಗಿತ್ತು. ವಾಸಂತಿಯ ತಾಯಿ ವನಜಮ್ಮ ಸಮಯ ಸಂದರ್ಭ ನೋಡಿಕೊಂಡು ವಿಶ್ವನಾಥನನ್ನು ವಾಸಂತಿಯನ್ನು ವಿವಾಹವಾಗಬಹುದಾ..? ಎನ್ನುವ ಪ್ರಸ್ತಾಪವಿಟ್ಟಾಗ ಆತನೇ ವಾಸಂತಿಯ ಬದಲಾಗಿ ಜಯಂತಿಯನ್ನು ವಿವಾಹವಾಗುವ ಇಚ್ಛೆ ವ್ಯಕ್ತಪಡಿಸಿದ್ದ. ವಾಸಂತಿ ತನಗಿಂತ ಒಂದು ತಿಂಗಳು ಮಾತ್ರ ಚಿಕ್ಕವಳೆಂದೂ.. ವಯಸ್ಸಿನ ಅಂತರ ಜಯಂತಿಗೂ ನನಗೂ ಸರಿ ಹೋಗಬಹುದೆನ್ನುವ ಅಭಿಪ್ರಾಯ ಅವನದ್ದು.


ಈ ವಿಚಾರ ತಿಳಿದ ದಿನವಂತೂ ವಾಸಂತಿ ಕುಗ್ಗಿ ಹೋಗಿದ್ದಳು. ಆಕೆಯನ್ನು ನಿರಾಸೆಯ ಕೂಪದಲ್ಲಿ ತಳ್ಳಿದಂತಿತ್ತು. ಜಯಂತಿ ಅಕ್ಕನೊಡನೆ ಅಷ್ಟು ಒಡನಾಡುತ್ತಿದ್ದ ಹುಡುಗನನ್ನು ವಿವಾಹವಾಗಲು ಒಪ್ಪಲಿಲ್ಲ. ಮೊದಲಿದ್ದ ಸ್ನೇಹ-ಸಲುಗೆಗಳನ್ನು ತೊರೆದು ಅವನ ವಿಷಯದಲ್ಲಿ ಬಿಗಿಯಾದಳು. ಇದಾದ ನಂತರ ವಿಶ್ವನಾಥ್ ಎರಡು ವರ್ಷಗಳಾದರೂ ಮತ್ತೆ ತಿರುಗಿ ವಾಸಂತಿಯ ಮನೆ ಕಡೆ ತಲೆ ಹಾಕಲಿಲ್ಲ.


ಜಯಂತಿಗೆ ಈಗ ಒಂದು ಹೊಸ ಹೊಣೆ ಸಿಗಲಿತ್ತು. ಸಿಲ್ಕ್ ಕಾರ್ಖಾನೆಯ ಮಾಲೀಕರ ಮಗ ವಿಜಯ್ ಆಕೆಯನ್ನು ಭೇಟಿಯಾಗಲು ಬಂದಿದ್ದರು. ಅವರ ಕಾರ್ಖಾನೆಯ ಅಸೋಸಿಯೇಷನ್ ನವರು ಮಾಡುವ ನಾಟಕಕ್ಕೆ ಬಹದ್ದೂರ್ ಗಂಡು ನಾಟಕದಲ್ಲಿ ನೀನೇ ನಾಯಕಿ ಸರೋಜಾಳ ಪಾತ್ರ ವಹಿಸಬೇಕೆಂದು ಕೇಳಿಕೊಳ್ಳುತ್ತಿದ್ದಾರೆ ಎಂದಿದ್ದರು. ಶಾಲೆಯ ಟೀಚರ್ಸ್ ಡೇ ಸಂಭ್ರಮದಲ್ಲಿ ಆಕೆ ನಾಯಕಿಯಾಗಿದ್ದರೆ, ನಾಯಕನ ಪಾತ್ರವನ್ನು ಮಾಡಿದ್ದು ವಾಸಂತಿ. ಅಂದು ಬಂದಿದ್ದಾಗ ವಿಜಯ್ ಅವರ ಅಮ್ಮ, ಅತ್ತಿಗೆ ಎಲ್ಲರೂ ಜಯಂತಿಯ ಅಭಿನಯವನ್ನು ಇಷ್ಟಪಟ್ಟಿದ್ದಾರೆಂದು.. ಈಗ ವಿಜಯ್ ಅವರ ಅತ್ತಿಗೆ ಸುಹಾರಿಕಾ ಕಡೆಯಿಂದಲೇ ಕರೆ ಬಂದಿದೆ ಎಂದು ಹೇಳಿ ಕಳುಹಿಸಿದ್ದರು.


ಶಾಲೆಯಿಂದ ಆ ಜಾಗ ದೂರವೆಂಬ ನೆಪ ಹೇಳಿ ತಪ್ಪಿಸಿಕೊಳ್ಳಲು ನೋಡಿದರೂ.. ವಿಜಯ್ ಕಾರ್ ಕಳುಹಿಸುವ ವ್ಯವಸ್ಥೆ ಮಾಡುವೆನೆಂದು ಹೇಳಿದರೆ, ಇತ್ತ ಶಾಲೆಯಲ್ಲಿಯೂ ಅವಳ ತರಗತಿಗಳನ್ನು ಬೇರೆಯವರಿಗೆ ವಹಿಸಿಕೊಳ್ಳುವ ವ್ಯವಸ್ಥೆ ಮಾಡಿದ್ದರು. 


ಕಾರ್ ಕಳುಹಿಸಿದ ಮೇಲೆ ಅವರ ಮನೆಗೆ ಹೋಗಬೇಕಾಗಿ ಬಂತು. ಸುಹಾರಿಕಾಳ ಜೊತೆಗೆ ಏಳೆಂಟು ಜನ ಹುಡುಗಿಯರಿದ್ದರು. ನಾಟಕ ಮಾಡಲು ಆಗಿರುವ ವ್ಯವಸ್ಥೆ ಹಾಗೂ ಆಕೆಯ ಸಂಭಾವನೆಯ ಕುರಿತು ಹೇಳಿದರು. ಜಯಂತಿಗೆ ಅದೆಲ್ಲವೂ ಒಪ್ಪಿಗೆಯಾಯಿತು. ಆದರೆ, ಆಕೆಗೆ ಅವಳ ಬ್ಯಾಗ್ ನಲ್ಲಿ ಸಿಕ್ಕ ಒಂದು ಪತ್ರ ಆಕೆಯನ್ನು ದಿಗ್ಭ್ರಮೆಯಲ್ಲಿ ಕೆಡವಿತ್ತು. ಅದರಲ್ಲಿ ಬರೆದವರ ಹೆಸರಿನಲ್ಲಿಲ್ಲ. ಬದಲಾಗಿ ಅವರು ಹಿತೈಷಿ ಎಂದಿತ್ತು. ನಾಟಕದಲ್ಲಿ ಪಾತ್ರ ಮಾಡಲು ಕರೆಸಿಕೊಂಡಿರುವುದು ವಿಷವ್ಯೂಹದಲ್ಲಿ ಸಿಲುಕಿಸಲು ಎಚ್ಚರಿಸಿದ್ದರು. ಅಲ್ಲದೇ, ಪ್ರತಿದಿನವೂ ಅವರ ವ್ಯೂಹವನ್ನು ಕಂಡುಹಿಡಿದು ಆಕೆಗೆ ತಿಳಿಸುವ ವ್ಯವಸ್ಥೆಯನ್ನು ಪತ್ರದ ಮುಖೇನವೇ ಮಾಡುತ್ತೇನೆಂದು ಹೇಳಿದ್ದರು. ಆದರೆ, ಬರೆದವರ ಗುಟ್ಟು ತಿಳಿಯದೆ ಆಕೆ ಮೊದಮೊದಲಿಗೆ ನಂಬುವುದೋ ಬೇಡವೋ ಎಂಬ ಗೊಂದಲದಿಂದಿದ್ದರೂ.. ನಂತರ ನಂಬದೇ ವಿಧಿ ಇರಲಿಲ್ಲ. 


ಅದೇ ಸಮಯಕ್ಕೆ ಆಕೆಯ ಅಕ್ಕ ವಾಸಂತಿಗೆ ಇಂಜಿನಿಯರ್ ಹುಡುಗನೊಬ್ಬನ ಸಂಬಂಧ ಬಂದಿತ್ತು. ಅಕ್ಕ-ತಂಗಿಯರಲ್ಲಿ ರಾತ್ರಿ ವಿಚಾರವಿನಿಮಯ ನಡೆಯುವಾಗ.. ಜಯಂತಿ ಹೇಳಿದ ವಿಚಾರ ಕೇಳಿ ವಾಸಂತಿ ಅವರ ಕುಟುಂಬದ ಹಿನ್ನೆಲೆಯನ್ನು ಬಿಚ್ಚಿಟ್ಟಿದ್ದಳು.


ಮಾಧುರ್ಯ ಸಿಲ್ಕ್ ಸಂಸ್ಥೆಯ ಮಾಲೀಕರ ಮಗ ವಿಜಯ್ ಸಂಬಂಧಿಸಿದ್ದು. ಆ ಫ್ಯಾಕ್ಟರಿ ರಾಮರಾವ್ ಒಬ್ಬರದ್ದೇ ಅಲ್ಲ. ಅವರ ತಮ್ಮ ಭೀಮರಾವ್ ಅವರಿಗೂ ಸೇರಿದ್ದು. ಅವರಿಬ್ಬರೂ ಸೇರಿ ಆ ಫ್ಯಾಕ್ಟರಿ ಪ್ರಾರಂಭಿಸಿದ್ದು. ಮುಂದೆ ಅವರ ದೊಡ್ಡ ಮಗ ಸುಜಯಿಂದ್ರನಿಗೆ ವಿವಾಹವಾದಾಗ ಸುಹಾರಿಕಾ ಸೊಸೆಯಾಗಿ ಬಂದಳು. ಆಕೆಯ ಕುಟುಂಬದವರ ಪ್ರಭಾವವೇ ಆ ಫ್ಯಾಕ್ಟರಿಯಲ್ಲಿ ಹೆಚ್ಚಾದಾಗ.. ಭೀಮರಾವ್ ಅವರು ಆ ಕಂಪನಿಯಿಂದ ತನ್ನ ಪಾಲಿನ ಹಣ ತೆಗೆದುಕೊಳ್ಳುವ ವಿಚಾರ ಮಾತನಾಡಿದರು. ವಿಜಯ್ ಭೀಮರಾವ್ ಅವರಿಗೆ ಶಾಸ್ತ್ರೋಕ್ತ ದತ್ತುಪುತ್ರ. ಹಾಗಾಗಿ, ಆ ಆಸ್ತಿ ವಿಜಯ್ ಗೆ ಬರಬೇಕಿತ್ತು. ತನ್ನ ಚಿಕ್ಕಪ್ಪನ ಮಕ್ಕಳಲ್ಲಿ ಯಾರನ್ನಾದರೂ ವಿಜಯ್ ಗೆ ಕೊಟ್ಟು ವಿವಾಹ ಮಾಡಬೇಕೆಂಬುದು ಸುಹಾರಿಕಾಳ ಆಸೆ. ಆದರೆ, ಅದು ನೆರವೇರುವಂತಿರಲಿಲ್ಲ. ವಿಜಯ್ ಅದಾಗಲೇ ಜಯಂತಿಯನ್ನು ಇಷ್ಟಪಟ್ಟ ವಿಚಾರ ಜಯಂತಿಗೆ ಆಗಲೇ ತಿಳಿದಿದ್ದರೆ.. ಆ ಪತ್ರದ ಅರ್ಥ ಆಗಲೇ ಹೊಳೆದಿರುತ್ತಿತ್ತು.


ನಾಟಕದ ಪ್ರಾಕ್ಟೀಸ್ ಗೆಂದು ಹೋದಾಗ ಸುಹಾರಿಕಾಳನ್ನು ಹಿಂಬಾಲಿಸಿ ಹೋದವಳಿಗೆ ಆಕೆ ಫೋನಿನಲ್ಲಿ ಮಾತನಾಡುತ್ತಿದ್ದ ವಿಚಾರವೆಲ್ಲವೂ ಅರ್ಥವಾಗಿತ್ತು ಹಾಗಾಗಿ ಎಚ್ಚರದಿಂದ ಇರಬೇಕೆಂದುಕೊಂಡಳು. 


ಅಂದು ಬೇಗ ಹೊರಟವಳೇ ಬೇರೇನೋ ಕಾರಣಕ್ಕೆ ಅಕ್ಕ ವಾಸಂತಿಯನ್ನು ವಿವಾಹವಾಗಲಿದ್ದ ವಿಜಯ್ ಕೆಮಿಕಲ್ಸ್ ನ ಸುಧಾಕರ್ ಅವರನ್ನು ಭೇಟಿ ಮಾಡಲೆಂದು ಹೊರಟಳು. ಆಗ ಅವಳಿಗೆ ಇದ್ದ ವಿಚಾರವೂ ಸ್ಪಷ್ಟವಾಗಿತ್ತು. ವಿಜಯ್ ಹಾಗೂ ಸುಧಾಕರ್ ಇಬ್ಬರೂ ಗೆಳೆಯರು. ಆದರೆ, ಆಕೆ ಸುಧಾಕರ್ ಮನೆಗೆ ಹೋಗಿ ಬಂದ ವಿಚಾರವನ್ನು ವಾಸಂತಿಗೆ ಹೇಳುವ ಮೊದಲೇ ಬೇರೆಯವರಿಂದ ಆಕೆಗೆ ವಿಚಾರ ತಲುಪಿತ್ತು. ವಿಶ್ವನಾಥನಂತೆ ಸುಧಾಕರನನ್ನೂ ತನ್ನಿಂದ ದೂರಗೊಳಿಸಲು ಪ್ರಯತ್ನಿಸುತ್ತಿದ್ದಾಳಾ ಎಂಬ ವಿಷಬೀಜವನ್ನು ಬಿತ್ತಿತ್ತು.


ಸುಹಾರಿಕಾಳ ಉಪಾಯ ಕಂಡು ಜಯಂತಿ ತೆಗೆದುಕೊಂಡ ನಿರ್ಧಾರವೇನು..? ಉಪಾಯವಾಗಿ ಪಾರಾದಳೇ ಅಥವಾ ಎದುರು ನಿಂತು ನೇರಾನೇರ ಹೋರಾಟ ಮಾಡಿದಳೇ..? ಜಯಂತಿ ಹಾಗೂ ವಾಸಂತಿಯರ ನಡುವೆ ಮದುವೆ ವಿಚಾರಕ್ಕೆ ಮತ್ತಾವುದಾದರೂ ಮನಸ್ತಾಪ ಉಂಟಾಯಿತೇ..? ವಿಜಯ್ ತನ್ನ ಪ್ರೇಮದ ವಿಚಾರವನ್ನು ಜಯಂತಿಯ ಬಳಿ ಬಿಚ್ಚಿಟ್ಟನೇ..? ರಾಮರಾವ್ ಹಾಗೂ ಭೀಮರಾವ್ ಅವರ ಕಂಪನಿಯ ವಿಚಾರ ಏನಾಯ್ತು.. ಬಣ್ಣ ಬಣ್ಣದ ಬೆಳಕು ಅವರ ಬದುಕನ್ನು ಬೆಳಗಿಸಿತೇ ಅಥವಾ ಚೆಂದವಾಗಿದ್ದ ಬದುಕಿಗೆ ಕಿಡಿ ಹಚ್ಚಿತೇ..? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ನೋಡಿ ಬಣ್ಣ ಬಣ್ಣದ ಬೆಳಕು ಕಾದಂಬರಿಯನ್ನು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ