ಪುಸ್ತಕದ ಶೀರ್ಷಿಕೆ : ಯಾವ ನಾಳೆಯೂ ನಮ್ಮದಲ್ಲ
ಲೇಖಕರು : ಕೆ. ಉಷಾ ಪಿ. ರೈ
ಪ್ರಕಾಶಕರು : ಪ್ರಿಯದರ್ಶಿನಿ ಪ್ರಕಾಶನ
ಪ್ರಥಮ ಮುದ್ರಣ : 2011
ದ್ವಿತೀಯ ಮುದ್ರಣ : 2021 ( ನನ್ನ ಓದಿಗೆ ಸಿಕ್ಕಿದ್ದು )
ಪುಟಗಳು : 372
ಬೆಲೆ : 280 ರೂ.
ಆತ್ಮಕಥನಕ್ಕೆ ಇಂತಹದ್ದೇ ರೀತಿ, ಇಷ್ಟೇ ಸೀಮಾರೇಖೆ ಎನ್ನುವ ಕಟ್ಟುಪಾಡುಗಳಿಲ್ಲ. ಆದರೆ, ಅವರ ಜೀವನವನ್ನು ಎಷ್ಟು ತೆರೆದಿಡಬೇಕು ಎನ್ನುವ ಆಯ್ಕೆಯಂತೂ ಆಯಾ ಲೇಖಕರದ್ದೇ.. ಪ್ರಾಮಾಣಿಕ ಆತ್ಮಕಥನವನ್ನು ದಾಖಲಿಸುವಾಗ ಯಾರೇನೆಂದುಕೊಳ್ಳಬಹುದು, ಯಾರಿಗೆ ಇದರಿಂದ ನೋವಾಗಬಹುದು ಎಂಬ ಆಲೋಚನೆಗಳಾಚೆಯೂ ದಾಖಲಿಸಿದರಷ್ಟೇ ಅದರ ಮೌಲ್ಯ ಹೆಚ್ಚಾಗುತ್ತದೆ. ಅದರಲ್ಲೂ ಹೆಣ್ಣೊಬ್ಬಳ ಆತ್ಮಕಥನ ದಾಖಲಾಗುವಾಗ ಹೇರಿಕೆಯಾಗಿರುವ ಕಟ್ಟುಪಾಡುಗಳನ್ನೆಲ್ಲಾ.. ಮಿತಿಗಳನ್ನೆಲ್ಲಾ ಮೀರಿ ನಿಲ್ಲಬೇಕು. ಕತೆಗಳು ಕಲ್ಪನೆ ಅಥವಾ ವಾಸ್ತವಮಿಶ್ರಿತ ಕಲ್ಪನೆಗಳಾದರೆ, ಆತ್ಮಕಥನ ನೈಜತೆಯ ಅನಾವರಣ. ವಿಭಿನ್ನ ಅನುಭವಗಳ ನೆಲೆಗಟ್ಟಿನಲ್ಲಿ ನಿಲ್ಲಿಸಲಾದ ಸತ್ಯ. ಭೂತ ಕಾಲದ ಸಿಹಿ - ಕಹಿ ನೆನಪುಗಳು, ಅನುಭವಗಳ ವಾಸ್ತವದೊಡನೆ ಮಿಳಿತವಾದ ಭಾವಗಳು. ಆತ್ಮಕಥನ ಕಲಿಯಬಹುದಾಗಿರುವುದು ಬಹಳಷ್ಟಿದೆ. ಅಂತಹಾ ಪ್ರೇರಣಾದಾಯಕ ಆತ್ಮಕಥನದ ಸಾಲಿನಲ್ಲಿ ನಿಲ್ಲುವುದು ಕೆ. ಉಷಾ ಪಿ. ರೈ ಅವರ ' ಯಾವ ನಾಳೆಯೂ ನಮ್ಮದಲ್ಲ '.
'ಯಾವ ನಾಳೆಯೂ ನಮ್ಮದಲ್ಲ' ಎಂಬ ಶೀರ್ಷಿಕೆ ಬಹಳಷ್ಟು ಧ್ವನಿಸುತ್ತದೆ. ನಿರೀಕ್ಷೆಯಿಲ್ಲದ ನಾಳೆಗಳ ಅನುಭವಕ್ಕೆ ತೆರೆದುಕೊಳ್ಳುವ ಮುನ್ನ ಲೇಖಕಿ ತಮ್ಮ ಬದುಕಿನ ಒಂದೊಂದೇ ಘಟ್ಟವನ್ನು ತೆರೆದಿಡುವಾಗ ಅವರ ಬದುಕು ಸ್ಫೂರ್ತಿಯಾಗಿರುವುದು ಅನುಭವಕ್ಕೆ ಬರುತ್ತಾ ಹೋಗುತ್ತದೆ. ಸಾಕಷ್ಟು ನೋವು ನುಂಗಿ.. ಅದರಲ್ಲಿಯೂ ಇಳಿ ವಯಸ್ಸಿನ ನೆಮ್ಮದಿಯ ಬದುಕು ನಡೆಸುವಾಗ ಬರುವ ಆಘಾತಗಳ ಸರಮಾಲೆ ಅವರನ್ನು ಕುಗ್ಗಿಸಿದರೂ.. ಫೀನಿಕ್ಸ್ ನಂತೆ ಮೇಲೆದ್ದು ಮಾನಸಿಕ ಸಮತೋಲನ ಕಾಯ್ದುಕೊಳ್ಳುವ ಪರಿಯಂತೂ ಶ್ಲಾಘನೀಯ.
"ಯಾವ ಘಳಿಗೆಯಲ್ಲೂ ಜೀವನ ಬೇಡವೆನ್ನಿಸಬಾರದು. ಬೇಡವೆನ್ನಿಸಿದಾಗ ಮಾನಸಿಕ ಕುಸಿತ ಕಾಣಿಸಿಕೊಳ್ಳುತ್ತದೆ. ಜೀವನದ ಸೋಲು ಇರುವುದೇ ಮಾನಸಿಕವಾಗಿ ಕುಸಿಯುವುದರಲ್ಲಿ. ಜೀವನ ಇರುವುದು ಸೋತು ಕುಸಿಯುವುದಕ್ಕಲ್ಲ. ಇದ್ದಷ್ಟು ದಿನ ಗೆದ್ದು ಬಾಳುವುದಕ್ಕೆ. ಜೀವನವನ್ನು ಬಂದ ಹಾಗೆ ಇದಿರಿಸುವ ಎದೆಗಾರಿಕೆ ಬೆಳೆಸಿಕೊಳ್ಳುವ ಛಲ ಮುಖ್ಯ" ಎನ್ನುವ ಮಾತು ಸಣ್ಣ - ಪುಟ್ಟ ಸೋಲಿಗೂ ಕುಗ್ಗಿ ಜೀವನವನ್ನೇ ಕೊನೆಗಾಣಿಸಿಕೊಳ್ಳಲು ಹೊರಡುವ ಯುವ ಜನತೆಗೆ ಸ್ಫೂರ್ತಿ.
"ಬಿದ್ದಲ್ಲಿಂದ ಎದ್ದು ಓಡುವುದೇ ಜೀವನ. ಬಿದ್ದಲ್ಲೆ ಕುಸಿದು ಕುಳಿತರೆ ಎಲ್ಲರೂ ನಮ್ಮನ್ನು ಹಿಂದಕ್ಕೆ ಬಿಟ್ಟು ಬಿಟ್ಟು ಮುಂದೋಡುತ್ತಾರೆ. ಆಗ ನಾವು ಒಬ್ಬಂಟಿಯಾಗಿ ಉಳಿಯುತ್ತೇವೆ." ಎನ್ನುವ ಮಾತು ನಿರ್ಲಿಪ್ತತೆಗೆ ಜಾರುವವರ ಅಥವಾ ವಾಸ್ತವವನ್ನು ಅರಗಿಸಿಕೊಳ್ಳದವರಿಗೆ ಬಡಿದೆಬ್ಬಿಸುವಂತಿದೆ.
ಕೆದಂಬಾಡಿ ಉಷಾ ಪ್ರಭಾಕರ ರೈ ಎಂಬ ಹೆಸರಿನ ಮೊದಲು ಕೆ. ಉಷಾದೇವಿ ಶೆಟ್ಟಿಯಾಗಿದ್ದರು ಲೇಖಕಿ. ನಾಮಕರಣ ಹಾಗೂ ಹೆಸರಿನ ಬದಲಾವಣೆಯ ಹಂತಗಳನ್ನು ನೀವೇ ಓದಿ ನೋಡಿ. ಮನೆತನದ ಹಿನ್ನೆಲೆಯನ್ನೂ ಸೊಗಸಾಗಿ ತೆರೆದಿಟ್ಟಿದ್ದಾರೆ ಲೇಖಕಿ.
ಹುಟ್ಟಿದ್ದು ೧೯೪೫ ರ ಮೇ ೨೩ ರಂದು. ಹೊನ್ನಯ್ಯ ಶೆಟ್ಟಿ ಹಾಗೂ ಕೆದಂಬಾಡಿ ಪದ್ಮಾವತಿ ಶೆಟ್ಟಿಯವರ ಹೆಮ್ಮೆಯ ಮಗಳು. ಹಿರಿಯ ಮಗಳಾಗಿದ್ದವರಿಗೆ ಆಲೋಚನೆ ಹಾಗೂ ಜವಾಬ್ದಾರಿಗಳಲ್ಲಿ ಹಿರಿತನವೆನ್ನುವುದು ಜನ್ಮಜಾತವಾಗಿಯೇ ಬಂದಿರುತ್ತದೇನೋ.. ಮುಂದೆ ಉದ್ಯೋಗದ ಸ್ಥಳದಲ್ಲಿಯೂ ' ಉಷಕ್ಕ ' ಎಂದೇ ಕರೆಸಿಕೊಳ್ಳುವುದು ಇದಕ್ಕೆ ಇಂಬು ಕೊಡುವಂತಿದೆ.
ಬಾಲ್ಯದ ನೆನಪುಗಳ ಜೊತೆಗೆ ತಾಯಿ - ತಂದೆಯ ಕುರಿತಾಗಿ ಇದ್ದ ಗೌರವ, ಪ್ರೀತಿ ಜೊತೆಗೆ ಅವರ ಅನ್ಯೋನ್ಯತೆ, ತಂದೆಯ ಮುಂಗೋಪ ಹಾಗೂ ತಾಯಿಯ ತಾಳ್ಮೆ ಎಲ್ಲವನ್ನು ಬಿಡಿಸಿಟ್ಟಿದ್ದಾರೆ. ಏಳು ಜನ ಮಕ್ಕಳ ಭವಿಷ್ಯವನ್ನು ರೂಪುಗೊಳಿಸುವುದರಲ್ಲಿ ತಂದೆಯ ಶಿಸ್ತು ಹಾಗೂ ತಾಯಿಯ ಸಹನೆ, ಇಬ್ಬರ ಉದಾತ್ತ ಧ್ಯೇಯಗಳನ್ನು ಹೇಳಿರುವ ಅವರು ತಂದೆಯ ಕುರಿತ ಅಪಾರ ಗೌರವ ಭಾವನೆಗಳನ್ನು ಆಪ್ತವಾಗಿ ಬಿಡಿಸಿಟ್ಟಿದ್ದಾರೆ. ತಂದೆಗೆ ತಕ್ಕ ಮಗಳಂತೆಯೇ ಬದುಕುತ್ತಿದ್ದ ಅವರು 'ನವಯುಗ'ದ ಹೊನ್ನಪ್ಪ ಶೆಟ್ಟರ ಉದ್ದಾಮ ವ್ಯಕ್ತಿತ್ವದ ಜೊತೆಗೆ ಸಮೃದ್ಧವಾದ ಬಾಲ್ಯವನ್ನು ಹೇಳುತ್ತಾರೆ.
ನವಯುಗ ಪತ್ರಿಕೆ ನಡೆಸಲು ತಂದೆ ಪಡುತ್ತಿದ್ದ ಪಾಡು ಮಕ್ಕಳ ಗಮನಕ್ಕೆ ಬಂದಿದ್ದರೂ ಅದರ ತೊಂದರೆಯ ಸೋಂಕು ಇಲ್ಲದಂತೆ ಬೆಳೆಸುವಾಗ.. ಜೊತೆಗೆ ಶ್ರೀಮಂತಿಕೆ, ಅನುಕೂಲತೆಗಳನ್ನೇ ಹೊಂದಿದ್ದ ಮಕ್ಕಳಿಗೆ ತಮ್ಮ ಅನಾರೋಗ್ಯದ ಕಾರಣದಿಂದ ಹಣ ಖರ್ಚಾಗುವಾಗ ಮಕ್ಕಳಿಗೆ ಕಷ್ಟದ ಅರಿವಾಗಿಸದಿದ್ದರೂ.. ಕೆಲಸ ನಿಲ್ಲಿಸದ ಅವರ ಕಾರ್ಯನಿರ್ವಹಣೆ, ಜೊತೆಗೆ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು ಎನ್ನುವ ಪಾಠ ಕಲಿಸಿದ ಪರಿಯನ್ನು ಬಿಚ್ಚಿಡುತ್ತಾರೆ.
ಬಂಟರ ಮಾತೃಪ್ರಧಾನ ಕುಟುಂಬದ ಕುರಿತಾಗಿ ಹೇಳಿದವರು ಮುಂದೆ ಕೂಡು ಕುಟುಂಬದ ಮಹತ್ತನ್ನು ಹೇಳುತ್ತಾರೆ. ಕೂಡುಕುಟುಂಬದ ಸಕಾರಾತ್ಮಕ ಅಂಶವೆಂದರೆ ಕಷ್ಟವಿದ್ದಾಗ ಒಬ್ಬರಿಗೊಬ್ಬರು ನೆರವಾಗುವ ರೀತಿ. ಹಾಗೆ ಬೆಳೆಸಿಕೊಂಡಿರುವ ಬಾಂಧವ್ಯ ಅವರ ಬದುಕಲ್ಲಿ ಹಾಸು ಹೊಕ್ಕಾಗಿರುವ ಪರಿ, ಅಮ್ಮನ ಸಾವಿನ ನಂತರ ತಾವು ಹಿರಿಯಕ್ಕನಾಗಿ ನಿಂತು ಕುಟುಂಬದವರಿಗೆ ನೆರವಾದ ಪ್ರೀತಿಯ ಜೊತೆಗೆ.. ಮುಂದೆ ಅಪಘಾತವಾದಾಗ ಅವರನ್ನು ಹಾಗೂ ಅವರ ಪತಿಯನ್ನು ಕುಟುಂಬದವರೆಲ್ಲರೂ ಸೇರಿ ನೋಡಿಕೊಂಡ ರೀತಿಯನ್ನು ಸ್ಮರಿಸುತ್ತಾರೆ. "ಹಿರಿಮೆ ಇರುವುದು ಹಣದಲ್ಲಲ್ಲ.. ಗುಣದಲ್ಲಿ" ಎನ್ನುವ ಮಹತ್ತರ ಪಾಠವನ್ನು ನಾವಿಲ್ಲಿ ಅರ್ಥೈಸಿಕೊಳ್ಳಬಹುದು.
ಬಾಲ್ಯದ ಹಾಗೂ ಕಾಲೇಜು ದಿನಗಳ ಮೆಲುಕು ಹಾಕುವಾಗ. ಅವರಿಗೆ ಇದ್ದ ಶಿಕ್ಷಕರು ಹಾಗೂ ಅವರು ಪಾಠ ಹೇಳುತ್ತಿದ್ದ ರೀತಿ ಹಾಗೂ ವಿಶೇಷತೆಗಳು ಉಲ್ಲೇಖವಾಗಿವೆ. ಇಂದಿನ ದಿನಗಳಲ್ಲಿ ಶಿಕ್ಷಕರ ಹೆಸರನ್ನು ನೆನಪಿಟ್ಟುಕೊಳ್ಳುವುದೇ ಕಷ್ಟ. ಅಂತಹದ್ದರಲ್ಲಿ ಗುರು - ಶಿಷ್ಯರ ಭಾಂದವ್ಯದ ಹಲವಾರು ಆತ್ಮೀಯ ಚಿತ್ರಣಗಳನ್ನು ಇಲ್ಲಿ ಕಾಣಬಹುದು. ಶಿಕ್ಷಣದಲ್ಲಿ ಒಳ್ಳೆಯ ಪ್ರಗತಿಯನ್ನೇ ಸಾಧಿಸುತ್ತಿದ್ದವರು ಡಾಕ್ಟರ್ ಆಗುವ ಕನಸು ಹೊತ್ತು ಅದನ್ನು ನನಸಾಗಿಸಿಕೊಳ್ಳಲು ಹೊರಟಾಗ ಆ ಕನಸು ಕನಸಾಗೇ ಉಳಿದದ್ದೇಕೆ..? ಅದನ್ನು ನೀವೇ ಓದಿ ತಿಳಿಯಿರಿ.
ಆ ಪ್ರಸಂಗ ಓದಿದಾಗ ನನಗನಿಸಿದ್ದು ತಾನೊಂದು ಬಗೆದರೆ ದೈವವೊಂದು ಬಗೆಯುತ್ತದೆ ಎಂದು. ಆದರೆ, ಆ ದೈವದ ಎಣಿಕೆಯಲ್ಲಿ ಭವಿಷ್ಯದ ದಿನಗಳು ರೂಪುಗೊಂಡಿರುತ್ತವೇನೋ.. ಬಹುಶಃ ಅಂದು ಡಾಕ್ಟರ್ ಸೀಟು ಸಿಕ್ಕಿದ್ದರೆ ನಾವು ಕನ್ನಡ ಸಾಹಿತ್ಯಕ್ಕೆ ಸಿಕ್ಕ ಒಳ್ಳೆಯ ಲೇಖಕಿಯನ್ನು ಕಳೆದುಕೊಳ್ಳುತ್ತಿದ್ದೆವೇನೋ ಎನ್ನಿಸಿತು. ಆಗುವುದೆಲ್ಲಾ ಒಳ್ಳೆಯದಕ್ಕೆ ಎನ್ನುವುದನ್ನು ನೆನಪಿಸಿದ ಪ್ರಸಂಗವಿದು. ತಂದೆಯ ಸಹಾಯಕಿಯಾಗಿ ಅವರು ಹೇಳಿದ್ದನ್ನಷ್ಟೇ ಪಾಲಿಸುತ್ತಿದ್ದ ಹಾಗೂ ಬರೆಯುತ್ತಿದ್ದ ರೂಢಿ ಇದ್ದವರು ನವಯುಗ ಪತ್ರಿಕೆಗೆ ಬರುತ್ತಿದ್ದ ಹಲವಾರು ಲೇಖಕರ ಹಾಗೂ ಲೇಖಕಿಯರ ಸಾಹಿತ್ಯದ ಸಮೃದ್ಧ ಓದನ್ನು ತಮ್ಮದಾಗಿಸಿಕೊಂಡಿದ್ದರು. ಆದರೆ, ತಾವು ಬರೆಯುವ ಸಾಹಸ ಮಾಡಿರಲಿಲ್ಲ. ಹಾಗಿದ್ದರೆ ಲೇಖಕಿ ಬರೆಯಲು ಶುರು ಮಾಡಿದ ಆ ಸಂದರ್ಭ ಯಾವುದು..? ಪ್ರಕಟವಾದ ಪರಿ ಹೇಗೆ ಎನ್ನುವ ಪ್ರಸಂಗ ನೀವೇ ಓದಿ ನೋಡಿ.
ತಂದೆ ಇದ್ದಾಗ ತಮ್ಮ ಸಾಹಿತ್ಯದ ಪ್ರತಿಭೆಯನ್ನು ನೋಡಿದ್ದರೆ ಅದೆಷ್ಟು ಖುಷಿಪಡುತ್ತಿದ್ದರು ಎನ್ನುವ ಭಾವ ಒಂದು ಅವರಲ್ಲಿ ಕಾಡಿದ್ದಿದೆ. ತಾಯಿ ಸಹಾ ಅವರ ಸಾಹಿತ್ಯದ ಏಳಿಗೆಯನ್ನು ಅಷ್ಟಾಗಿ ಕಾಣಲಿಲ್ಲ. ತಾಯಿ,ತಂದೆಯರು ಮಕ್ಕಳ ಏಳಿಗೆಯನ್ನು ಬದುಕಿದ್ದಾಗ ಕಾಣದೆ ಹೋದಾಗ ಅವರಲ್ಲಿ ಆ ಹೆಮ್ಮೆಯ ಭಾವ ಹುಟ್ಟಿಸುವುದನ್ನು ಕಣ್ತುಂಬ ಕಾಣಲು ಅಸಾಧ್ಯವಾದರೂ.. ಈ ರೀತಿಯ ಪ್ರಸಂಗಗಳನ್ನು ಕಂಡಾಗ ನನಗನ್ನಿಸುವುದು ಹೀಗೆ. ಅವರು ಸದಾ ನಮ್ಮ ಪ್ರಗತಿಯನ್ನು ಕಾಣುತ್ತಲೇ ಇರುತ್ತಾರೆ. ಅಲ್ಲದೆ, ಅವರೇ ಜೊತೆ ನಿಂತು ನಮ್ಮನ್ನು ಸಾಧನೆಯ ಹಾದಿಯತ್ತ ಹಾಕಿಸುವ ಹೆಜ್ಜೆಯೂ ಇರಬಹುದು ಎಂದೆನಿಸುತ್ತದೆ.
ಕರ್ನಾಟಕದ ಲೇಖಕಿಯರ ಸಂಘದ ಕುರಿತಾಗಿ ಇರುವ ಹೆಮ್ಮೆ ಹಾಗೂ ಸಾಹಿತ್ಯ ಲೋಕದಲ್ಲಿನ ಪಯಣ, ಅಲ್ಲಿಯ ಚುನಾವಣೆಗೆ ನಿಂತದ್ದು, ಅಲ್ಲಿ ಸಿಕ್ಕ ಪ್ರೋತ್ಸಾಹ ಇವರು ಮಾಡಿದ ಕೆಲಸ ಇವೆಲ್ಲವೂ ನಮಗೆ ಕಾಣದ ಆಪ್ತ ಲೋಕವನ್ನು ಕಾಣಿಸುತ್ತದೆ. ಬರವಣಿಗೆಯ ಜೊತೆಜೊತೆಗೆ ಮಾಡಿದ ಸಮಾಜಮುಖಿ ಕೆಲಸಗಳು ಇನ್ನಷ್ಟು ಸ್ಪೂರ್ತಿ ತುಂಬುತ್ತವೆ. 2004ರ ವಿಶ್ವ ಕನ್ನಡ ಸಮ್ಮೇಳನ ಅಕ್ಕದಲ್ಲಿ ಭಾಗವಹಿಸಿದ ಅನುಭವವನ್ನು ಹೇಳುವಾಗ ನಾವೇ ಅಲ್ಲಿ ಪ್ರತ್ಯಕ್ಷವಾಗಿ ಅದನ್ನು ಕಾಣುತ್ತಿದ್ದೇವೇನೋ ಎನ್ನುವಷ್ಟು ಸೊಗಸಾಗಿ ಮೂಡಿಬಂದಿದೆ. ನನಗೆ ಆತ್ಮಚರಿತ್ರೆಯಲ್ಲಿ ಈ ಭಾಗ ಬಹಳ ಇಷ್ಟವಾಯಿತು.
ಸಾಧನೆಯ ಹಾದಿಯಲ್ಲಿ ಉಷಾ ಮೇಡಮ್ ಜೊತೆಗೆ ಜೊತೆಗಾರರಾಗಿದ್ದವರು ಸಂಗಾತಿಯಾದ ಬಿ. ಎ ಪ್ರಭಾಕರ ರೈ. ಇವರು ಸಹಾ ಲೇಖಕರು ಹಾಗೂ ಬ್ಯಾಂಕ್ ಉದ್ಯೋಗಿಯಾಗಿದ್ದವರು. ತಮ್ಮ ವಧುಪರೀಕ್ಷೆಯ ಚಿತ್ರಣ ಹಾಗೂ ವರನ ಕುರಿತಾಗಿ ಇದ್ದ ತಮ್ಮ ನಿರೀಕ್ಷೆಗಳು ಜೊತೆಗೆ ವರದಕ್ಷಿಣೆ ಇಲ್ಲದೆ ವಿವಾಹವಾಗಬೇಕೆನ್ನುವ ತಮ್ಮ ಕನಸುಗಳು ಇವೆಲ್ಲಕ್ಕೂ ಕೆಲ ಸಂದರ್ಭದಲ್ಲಿ ತಾಳೆಯಾಗದೇ ಹೋದರೂ ನಂತರ ತಮ್ಮ ಸಂಗಾತಿಯ ಉದಾತ್ತ ನಿಲುವಿನ ಕುರಿತಾಗಿ ಹಾಗೂ ತಮ್ಮ ತಂದೆಗೆ ಅಳಿಯನಾಗದೆ ಮಗನೇ ಆದ ತಮ್ಮ ಪತಿಯ ಕುರಿತಾದ ಹೆಮ್ಮೆಯ ಭಾವವನ್ನು ಕಾಣಬಹುದು. ವರದಕ್ಷಿಣೆ ವಿರೋಧಿ ನಿಲುವುಳ್ಳವರು ಬದುಕಿನ ಅನಿವಾರ್ಯತೆಗೆ ಸಿಲುಕಿ ಆ ಸಂದರ್ಭದಲ್ಲಿ ಹಾಗೆ ನಡೆದುಕೊಂಡಿದ್ದರೂ ನಂತರ ಇಟ್ಟ ಹೆಜ್ಜೆ ನಿಜಕ್ಕೂ ಅಂತಹಾ ಅನಿವಾರ್ಯತೆಗೆ ಸಿಲುಕಿದವರು ಅದರಿಂದ ತಪ್ಪಿಸಿಕೊಳ್ಳಲು ಮಾದರಿ. ಪ್ರಭಾಕರ ರೈ ಅವರ ಪ್ರಾಮಾಣಿಕ ವ್ಯಕ್ತಿತ್ವದ ಹಾಗೂ ದಿಟ್ಟ ನಿಲುವಿನ ಕುರಿತಾಗಿ ಹೇಳುವಾಗ ಅವರ ಪ್ರಾಮಾಣಿಕತೆಗೆ ಸಿಕ್ಕ ಗೆಲುವು ವರ್ಗಾವಣೆ ಎಂಬುದನ್ನು ಪ್ರಾಮಾಣಿಕವಾಗಿ ತೆರೆದಿಡುತ್ತಾರೆ. ತಮ್ಮ ಪತಿಯ ಕುರಿತಾಗಿ ಇರುವ ನಂಬಿಕೆ ಹಾಗೂ ತಂದೆ ರೂಪಿಸಿದ್ದ ವ್ಯಕ್ತಿತ್ವದಿಂದ ಅದನ್ನು ದಿಟ್ಟವಾಗಿ ಎದುರಿಸಿದ್ದ ರೀತಿಯನ್ನು ತೆರೆದಿಡುತ್ತಾರೆ.
ಮದುವೆಯ ನಂತರದ ದಿನಗಳು ಹಾಗೂ ಮಂಡ್ಯದ ವಾಸದಲ್ಲಿ ಜೊತೆಯಾದ ಉಬ್ಬಸ ಹಾಗೂ ಇದೆಲ್ಲದರ ನಡುವೆ ಗರ್ಭಿಣಿಯಾದ ಸಂಭ್ರಮದಲ್ಲಿ ಮಗ ಸುಭಾಷ್ ಹುಟ್ಟಿದ್ದು.. ಮನೆಯವರೆಲ್ಲರ ನೆರವಾಗುವಿಕೆ ಹಾಗೂ ನೆರೆಹೊರೆಯವರು.. ಹೀಗೆ ಗೃಹಿಣಿಯ ಜೀವನ ಸಾಗುತ್ತಿರುವಾಗಲೇ ಎಂ. ಎ ಮಾಡಿಕೊಂಡು ಅಪ್ಪನ ಸಾವಿನ ನಂತರ ಸಿಕ್ಕ ಬ್ಯಾಂಕ್ ಕೆಲಸಕ್ಕೆ ಸೇರುತ್ತಾರೆ. ಹಿಂದೆಯೇ ಸಿಂಡಿಕೇಟ್ ಬ್ಯಾಂಕಿಗೆ ಸೇರಿರುತ್ತಿದ್ದರೆ ಅದಾಗಲೇ 12 ವರ್ಷ ಸರ್ವಿಸ್ ಆಗಿರುತ್ತಿತ್ತು. ಆದರೆ, ಎಲ್ಲದಕ್ಕೂ ಕಾಲ ಕೂಡಿ ಬರಬೇಕಲ್ಲ..!
ಬ್ಯಾಂಕ್ ಉದ್ಯೋಗಿಯಾದರೂ.. ಉದ್ಯೋಗದ ಜೀವನಕ್ಕಿಂತ ಕೌಟುಂಬಿಕ ಜೀವನಕ್ಕೆ ಅವರು ಕೊಡುವ ಮಹತ್ವವನ್ನು ನಾವಿಲ್ಲಿ ಕಾಣಬಹುದಾಗಿದೆ. ಹಾಗೆಂದು ಕೆಲಸದಲ್ಲಿ ನಿರಾಸಕ್ತಿ ತೋರಿದವರಲ್ಲ.. ಬದಲಾಗಿ ಮಹತ್ವಾಕಾಂಕ್ಷೆಯ ಸಾಧನೆಯ ಬದಲಾಗಿ ಮನೆ, ಮಕ್ಕಳನ್ನು ಹಾಗೂ ಕುಟುಂಬವನ್ನು ಹವ್ಯಾಸವನ್ನು ಪೋಷಿಸಿಕೊಳ್ಳುತ್ತಲೇ ಎಲ್ಲದರಲ್ಲಿಯೂ ಸಾಧನೆ ಮಾಡುತ್ತಾ ಹೋಗುವುದು ಸುಲಭವಲ್ಲ. ಉಬ್ಬಸವೆಂಬುದು ಬಿಡದೆ ಕಾಡಿದ್ದರ ಜೊತೆಗೆ ಎರಡನೆಯ ಮಗ ಸಾತ್ವಿಕ್ ಜೊತೆಯಾಗುವಾಗ ಅನುಭವಿಸಿದ ಹಲವಾರು ನೋವುಗಳು ಹಾಗೂ ಅನುಮಾನಗಳ ನಡುವೆಯೇ ಮಕ್ಕಳ ವಿದ್ಯಾಭ್ಯಾಸ ಹಾಗೂ ಉನ್ನತಿಯನ್ನು ಹೇಳುತ್ತಾರೆ.
ಮಗ ಸುಭಾಷ್ ವಿವಾಹಕ್ಕೆ ನಮಗೆ ಮಗಳಾಗುವ ಸೊಸೆ ಬರಬೇಕೆಂದು ಆಶಿಸುತ್ತಿರುವಾಗಲೇ.. ಪ್ರೇಮವಿವಾಹಕ್ಕೆ ಮುದ್ರೆ ಒತ್ತುತ್ತಾರೆ. ನಂತರ ಅತ್ಯಂತ ಸಂತಸದ ಗಳಿಗೆಯಾದ ಮೊಮ್ಮಗನ ಹುಟ್ಟನ್ನು ಸಂಭ್ರಮಿಸುತ್ತಲೇ ಮತ್ತೆ ನವಚೈತ್ರ ಕಾಲವನ್ನು ಸಂಭ್ರಮಿಸುತ್ತಿರುತ್ತಾರ ಇತ್ತ ಕಿರಿಯ ಮಗ ಸಾತ್ವಿಕ್ ಸಾಧನೆಯನ್ನು ಸಂಭ್ರಮಿಸುತ್ತಾರೆ.
ದೊಡ್ಡ ಮಗ ಸುಭಾಷ್ ಸೌದಿಗೂ.. ಚಿಕ್ಕ ಮಗ ಸಾತ್ವಿಕ್ ಅಮೆರಿಕಾಗೂ ಹೋದಾಗ ಒಂಟಿತನ ಕಾಡಿದರೂ ಮಕ್ಕಳ ಆಸೆಗೆ ಅಡ್ಡಿಯಾಗುವುದಿಲ್ಲ. ಇಲ್ಲಿಂದ ಮುಂದೆ ಆಘಾತ ಹಾಗೂ ದುರಂತಗಳ ಸರಮಾಲೆಯನ್ನೇ ನೋಡಬೇಕಾಗಿಬರುತ್ತದೆ. ನಿಜಕ್ಕೂ ಅವರು ಅನುಭವಿಸಿದ್ದ ಮಾನಸಿಕ ನೋವಿನ ಜೊತೆಗೆ ಅಪಘಾತ ಸಾಕಷ್ಟು ದೈಹಿಕ ನೋವಿನ ಜೊತೆಗೆ ಮಾನಸಿಕ ಆಘಾತ ಹಾಗೂ ಬದುಕಿನ ಭೀಕರತೆಯನ್ನು ಕಣ್ಮುಂದೆ ತರುತ್ತಾ ಸಾಗುತ್ತದೆ. ಇಬ್ಬರು ಮಕ್ಕಳ ಬದುಕಲ್ಲಿ ಉಂಟಾದ ಅಲ್ಲೋಲಕಲ್ಲೋಲಗಳನ್ನು ನೋಡುತ್ತಲೇ ಅಪಘಾತದಿಂದ ಆದ ದೈಹಿಕ ಆಘಾತ ಜೊತೆಗೆ ಪತಿಯ ಮಾನಸಿಕ ಆಘಾತವನ್ನು ಸರಿಪಡಿಸಿಕೊಳ್ಳುತ್ತಲೇ ಮೊಮ್ಮಗ ನಿಗೆ ಅಜ್ಜಿ ಮಾತ್ರವಲ್ಲ ತಾಯಿಯೂ ಆಗುವ ಸಂದರ್ಭ. ಒಂದು ದುರಂತದಿಂದ ಹೊರ ಬರುವ ಮುನ್ನವೇ ಮತ್ತೊಂ ಮಗದೊಂದು ಹೀಗೆ ಸರಮಾಲೆಯೇ ಎದುರಾದರೂ ಬದುಕಿಗೆ ಎದುರಾಗಿ ನಿಂತು ಗಟ್ಟಿಯಾಗುತ್ತಾ ಸಾಗುತ್ತಾರೆ.0ಅದು ನಿಜಕ್ಕೂ ಸುಲಭದ ಪ್ರಕ್ರಿಯೆಯಲ್ಲ.
ಅವರೇ ಹೇಳುವಂತೆ ಹಿಂದೆ ಎಲ್ಲಿಯಾದರೂ ಹೊರಗೆ ಹೋಗುವಾಗಲೂ ಅಪ್ಪ - ಅಮ್ಮ ಜೊತೆಗಿರಬೇಕಿತ್ತು. ನಂತರ ಪತಿಯ ಜೊತೆಗಿರುತ್ತಿದ್ದವರು ಸಂದರ್ಭಗಳನ್ನು ಎದುರಿಸುತ್ತಾ ಬದುಕಿನಲ್ಲಿ ಗಟ್ಟಿಯಾದ ಪರಿ ನಿಜಕ್ಕೂ ನಂಬಲಸಾಧ್ಯ. ಉದ್ಯೋಗ ಹಾಗೂ ಸಂದರ್ಭಗಳು ಅವರನ್ನು ಹಾಗೆ ಮಾಡಿದವು ಎಂದರೂ ಅದಕ್ಕೆ ಬದಲಾಗುವ ಮನಸ್ಥಿತಿಯೂ ಇರಬೇಕು.
ಇಳಿವಯಸ್ಸಿನಲ್ಲಿಯೂ ಸಕಾರಾತ್ಮಕ ಸ್ಪಿರಿಟ್ ನಲ್ಲಿರುವುದು ನಿಜಕ್ಕೂ ಚಿಕ್ಕ ಮಾತಲ್ಲ. 65ನೇ ವಯಸ್ಸಿನಲ್ಲಿಯೂ ಹೊಸಹೊಸದನ್ನು ಕಲಿಯುವ ಆಸಕ್ತಿ,ಚಿತ್ರಕಲೆ ಹಾಗೂ ಬರವಣಿಗೆಯಲ್ಲಿನ ಅವರ ಸಾಧನೆ ಇವೆಲ್ಲವನ್ನೂ ಈ ಆತ್ಮಕಥನ ಓದಿ ಅರಿಯಬೇಕು.
"ಸರಿಯಾಗಿದ್ದಿದ್ದರೆ ಸಾಧಿಸಲಾಗದನ್ನು ಈ ಅಪಘಾತದ ನಂತರ ನಾನು ಸಾಧಿಸಿದ್ದೇನೆ ಎನ್ನುವುದಕ್ಕಿಂತ ಯಾವುದೋ ಒಂದು ಶಕ್ತಿ ನನ್ನಿಂದ ಈ ಸಾಧನೆ ಮಾಡಿಸಿದೆ ಎನ್ನುವುದು ಹೆಚ್ಚು ಅರ್ಥಪೂರ್ಣ. ನಮ್ಮ ಕೈಯಲ್ಲಿ ಏನೂ ಇಲ್ಲ.. ನಾಳೆಯ ಬಗ್ಗೆ ನಮಗೇನು ಗೊತ್ತು ಆಗುವುದಿಲ್ಲ." ಎನ್ನುವ ಮಾತಿನಲ್ಲಿ ಅವರ ಮಾಗಿದ ಅನುಭವ ಹಾಗೂ ಪ್ರಬುದ್ಧತೆ ಕಾಣಸಿಗುತ್ತದೆ.
ಸಾಕಷ್ಟು ಪಾಠಗಳನ್ನು ಅವರ ಬದುಕಿನ ನೋಟದ ಮೂಲಕ ಕಟ್ಟಿಕೊಟ್ಟಿರುವ ಈ ಆತ್ಮಕಥನದ ಮುಂದಿನ ಭಾಗವೂ ಇದೆ. ಸದ್ಯದಲ್ಲೇ ಅದನ್ನು ಪರಿಚಯಿಸುವೆ. ಲೇಖಕಿಯ ಸಕಾರಾತ್ಮಕ ಶಕ್ತಿಗೊಂದು ಸಲಾಂ ಎನ್ನುವುದಕ್ಕಿಂತ ಹೆಚ್ಚು ಹೇಳಲು ಈಗ ಪದಗಳೇ ಸಿಗುತ್ತಿಲ್ಲ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ