ಪುಸ್ತಕದ ಶೀರ್ಷಿಕೆ : ನಡುವೆ ಸುಳಿವ ಆತ್ಮ
ಲೇಖಕರು : ಎಂ. ಎಸ್. ಆಶಾದೇವಿ
ಪ್ರಕಾಶಕರು : ಅಹರ್ನಿಶಿ ಪ್ರಕಾಶನ
ಪ್ರಥಮ ಮುದ್ರಣ : 2021
ಎರಡನೇ ಮುದ್ರಣ : 2021 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 148
ಬೆಲೆ : 145 ರೂ.
ಡಾ. ಎಂ. ಎಸ್. ಆಶಾದೇವಿ
ಡಾ. ಎಂ. ಎಸ್. ಆಶಾದೇವಿಯವರು ಬರಹಗಾರ್ತಿ ಹಾಗೂ ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು.
ಫೆಬ್ರುವರಿ 26 ದಾವಣಗೆರೆಯ ನೇರಳಿಗೆ ಎಂಬ ಸ್ಥಳದಲ್ಲಿ ಸೋಮಶೇಖರ್ ಹಾಗೂ ಅನಸೂಯಾ ದಂಪತಿಗಳ ಮಗಳಾಗಿ ಜನಿಸಿದರು. ಆಶಾದೇವಿಯವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಪದವಿ ಪಡೆದಿದ್ದಾರೆ ಹಾಗೂ ಪ್ರಖ್ಯಾತ ವಿಮರ್ಶಕರಾದ ಪ್ರೊ. ಡಿ.ಆರ್. ನಾಗರಾಜ್ ಅವರ ಮಾರ್ಗದರ್ಶನದಲ್ಲಿ 'ನವೋದಯ ವಿಮರ್ಶೆ ಮೇಲೆ ಪಾಶ್ಚಾತ್ಯ ವಿಮರ್ಶೆಯ ಪ್ರಭಾವ' ಎಂಬ ಮಹಾಪ್ರಬಂಧಕ್ಕಾಗಿ ಪಿಎಚ್.ಡಿ ಗಳಿಸಿದ್ದಾರೆ.
ಆಶಾದೇವಿ ಅವರ ಕೃತಿಗಳು ಇಂತಿವೆ.
'ಸ್ತ್ರೀಮತವನುತ್ತರಿಸಲಾಗದೇ?' ಸಾಹಿತ್ಯ ಸಂಸ್ಕೃತಿ ಕುರಿತ ಲೇಖನಗಳನ್ನೊಳಗೊಂಡಿದೆ. ‘ಉರಿಚಮ್ಮಾಳಿಗೆ' ಎಂಬುದು ಡಿ. ಆರ್.ನಾಗರಾಜ ಅವರ 'ದಿ ಪ್ಲೇಮಿಂಗ್ ಫೀಟ್' ಕೃತಿಯ ಅನುವಾದವಾಗಿದೆ. 'ಭಾರತದ ಬಂಗಾರ ಪಿ.ಟಿ.ಉಷಾ' ಇವರ ಮತ್ತೊಂದು ಕೃತಿ. ‘ಹುದುಗಲಾರದ ದುಃಖ' ವಸಂತ ಕಣ್ಣಬಿರನ್ ಅವರ ಮೂಲದ ಅನುವಾದಿತ ಕೃತಿ. 'ನಡುವೆ ಸುಳಿವ ಆತ್ಮ' ಸ್ತ್ರೀ ಸಂಕಥನದ ಚಹರೆಗಳ ಮೇಲೆ ಬೆಳಕು ಚೆಲ್ಲುವ ಕೃತಿ. 'ನಾರೀಕೇಳಾ' ಪ್ರಜಾವಾಣಿಯ ಭಾನುವಾರದ ಪುರವಣಿ 'ಮುಕ್ತಛಂದ'ದಲ್ಲಿ ಮೂಡಿಬಂದ ಅಂಕಣಗಳ ಸಂಕಲನ. ವಚನ ಪ್ರವೇಶ, ಡಿ.ಆರ್. ನಾಗರಾಜ್ ಬೆಲೆಬಾಳುವ ಬರಹಗಳು, ಗೌರಿ ಲಂಕೇಶ್ ಕಂಡ ಹಾಗೆ, ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಸಂಪುಟದಲ್ಲಿ 'ವಿಮರ್ಶೆ', ನಾಡೋಜ ಕೆ. ಜಿ. ಎನ್. ಕುರಿತ 'ನನ್ನಿಯ ನೇಕಾರ' ಮುಂತಾದವು ಇವರ ಸಂಪಾದನೆಗಳಲ್ಲಿ ಸೇರಿವೆ.
ಆಶಾದೇವಿಯವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯಶ್ರೀ ಪ್ರಶಸ್ತಿ, ಜಿ.ಎಸ್.ಎಸ್ ಪ್ರಶಸ್ತಿ, ವಿ.ಎಂ.ಇನಾಂದಾರ್ ವಿಮರ್ಶಾ ಪ್ರಶಸ್ತಿ, ದೇವದುರ್ಗದ ಖೇಣೆದ್ ಮುರಿಗೆಪ್ಪ ಸ್ಮಾರಕ ಪ್ರಶಸ್ತಿ, ಎಂ. ಕೆ. ಇಂದಿರಾ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ, ಗೌರವಗಳು ಸಂದಿವೆ.
ಇವರ 'ನಾರೀಕೇಳಾ' ಅಂಕಣದ ಕೆಲ ಬರಹಗಳನ್ನು ಓದಿದ್ದೆ. ದಯಾ ಗಂಗನಘಟ್ಟ ಅವರ 'ಉಪ್ಪುಚ್ಚಿ ಮುಳ್ಳು' ಕೃತಿ ಬಿಡುಗಡೆ ಸಮಾರಂಭದಲ್ಲಿ ಇವರ ಮಾತುಗಳನ್ನು ನೇರವಾಗಿ ಕೇಳುವ ಸದವಕಾಶ ದೊರೆತಿತ್ತು. ಅದಾದ ನಂತರ ಅವರ ಮಾತುಗಳ ತುಣುಕುಗಳನ್ನು ಕೇಳಿದ್ದೆ. ಇದು ನಾನು ಓದಿದ ಅವರ ಮೊದಲ ಪುಸ್ತಕ.
"ಮನುಷ್ಯಳಾಗಿ ಉಳಿಯುವ ಅಗತ್ಯವನ್ನು ಮನವರಿಕೆ ಮಾಡಿಸಿದ್ದೇ ಸಾಹಿತ್ಯ." ಎನ್ನುವ ಆಶಾದೇವಿಯವರು ವಿಮರ್ಶೆಯ ಜೊತೆಗೆ ಅದರಲ್ಲೂ ಸ್ತ್ರೀವಾದಿ ಮೀಮಾಂಸೆಯನ್ನು ಅರಿಯುವ ವಿಮರ್ಶಕಿಯಾಗಿಯೇ ಖ್ಯಾತರಾಗಿದ್ದಾರೆ. ನಾನು ಇಂದು ಆಯ್ಕೆ ಮಾಡಿಕೊಂಡಿರುವ ಪುಸ್ತಕದ ಅಡಿ ಶೀರ್ಷಿಕೆ 'ಸ್ತ್ರೀ ಸಂಕಥನದ ಚಹರೆಗಳು' ಹೇಳುವಂತೆ ಈ ಕೃತಿಯಲ್ಲಿ ಹೆಣ್ಣೇ ಕೇಂದ್ರಬಿಂದು. ಹೆಣ್ಣಿನ ನೆಲೆ, ಗ್ರಹಿಕೆ, ಅಧಿಕೃತತೆಯ ಶೋಧನೆಗಳು ಇಲ್ಲಿವೆ. ಹೆಣ್ಣು ವ್ಯಕ್ತಿಯಾಗಿ, ಆಕೆ ತನ್ನ ಚೇತನದ ಬಿಡುಗಡೆಗೆ ತವಕಿಸುವ ಪರಿ, ಪ್ರತಿರೋಧ, ಪ್ರತಿಭಟನೆಯ ಲಕ್ಷಣಗಳನ್ನು ಕಲೆ, ಸಾಹಿತ್ಯ, ಸಂವಹನ ವ್ಯವಸ್ಥೆಗಳಲ್ಲಿ ಕಾಣುವ 19 ವಿವಿಧ 19 ಲೇಖನಗಳನ್ನು ಸೃಷ್ಟಿ ಹಾಗೂ ಸ್ಥಿತಿ ಎಂದು ವಿಭಜಿಸಿದ್ದಾರೆ. ಇಲ್ಲಿನ ಕೆಲ ವಿಚಾರಗಳನ್ನು ಮಾತ್ರ ಪ್ರಸ್ತಾಪಿಸಲು ಇಚ್ಛಿಸುತ್ತೇನೆ.
ಮಹಿಳೆಯರ ಸ್ಥಿತಿಗಳಲ್ಲಿ ಮೂಲಭೂತವಾದ ಬದಲಾವಣೆಗಳಾಗಿರದಿದ್ದರೂ.. 'ಸ್ವಪ್ರಜ್ಞೆ'ಯೇ ಮೂಲವಾಗಿ ದಾಂಪತ್ಯ, ಕುಟುಂಬದಲ್ಲಿ ಬದಲಾಗುತ್ತಿರುವ ದೃಷ್ಟಿಕೋನದಲ್ಲಿ ಬೇಂದ್ರೆಯವರ ಸಖೀಗೀತದ ನೋಟ ಇಲ್ಲಿದೆ. ಅವಳು 'ದೈವದ ಪುತ್ಥಳಿ' ಮಾತ್ರವಲ್ಲ 'ಜೀವದ ಭೂಮಿ'ಯೂ ಹೌದು ಎನ್ನುತ್ತಾರೆ. ಸಂಸಾರ, ದಾಂಪತ್ಯ ಸಾಕು ಸಾಕು ಎನ್ನಿಸಿದಾಗಲೂ ಇಬ್ಬರೂ ಆ ಅಗ್ನಿದಿವ್ಯವನ್ನು ತೀವ್ರ ಕಷ್ಟದಿಂದಲೇ ಎದುರಿಸಿ ಪಾರಾದುದನ್ನು ಸಖೀಗೀತ ಒತ್ತಿ ಹೇಳುತ್ತದೆ.
ಬೇಂದ್ರೆಯವರ ಮತ್ತೊಂದು ಪ್ರಸಿದ್ಧ ಕವನ 'ಮನದನ್ನೆ'ಯ ಜೊತೆಗೆ ಇದನ್ನಿಟ್ಟು ನೋಡುತ್ತಾರೆ.
'ಮಲಗಿರುವ ಹಾವನ್ನು ಕೆಣಕಬೇಡ. ಕಚ್ಚಿ ವಿಷ ಕಾರಿದರೆ ತಿಣುಕಬೇಡ' ಎನ್ನುವ ಸಾಲನ್ನು ಉಲ್ಲೇಖಿಸಿ ಬಾಳು ಇಡಿಗಾಳಿನಂತೆ ಕೂಡಿರಬೇಕಾದರೆ, 'ಎದುರಾಡದ' ಅಧೀನ ವ್ಯಕ್ತಿತ್ವವನ್ನು ಹೆಣ್ಣು ಒಪ್ಪಿಕೊಳ್ಳುವುದು ಅನಿವಾರ್ಯ ಎನ್ನುವ ಸೂಚನೆಯಲ್ಲಿ ಮುಕ್ತಾಯವಾಗುವ ಮನೆದನ್ನೆಯ ಸಾಲುಗಳ ನೋಟವಿದೆ.
ಮಲೆನಾಡಿನ ಸ್ತ್ರೀಲೋಕದ ಅಪರಿಚಿತತೆಯನ್ನು.. ಪರಿಚಿತತೆಯನ್ನಾಗಿಸುವ ಕುವೆಂಪುರವರ ನೋಟವನ್ನು ಕಟ್ಟಿಕೊಟ್ಟಿದ್ದಾರೆ.
ನಮಗೆ ರಾಜರತ್ನಂ ಎಂದರೆ ನೆನಪಾಗುವುದು ಅವರ ಪುಟ್ನಂಜಿ. 'ನನ್ ಪುಟ್ನಂಜಿ ರೂಪ' ಎನ್ನುವ ಕವನದ ಜೊತೆಗೆ ರಾಜರತ್ನಂ ಅವರು ಕಟ್ಟಿಕೊಟ್ಟಿರುವ 'ಸತ್ವಗುಣವೇ ಸ್ತ್ರೀ ವ್ಯಕ್ತಿತ್ವದ ಜೀವಾಳ' ಎಂಬ ನಿಲುವನ್ನು ತೋರುತ್ತಾರೆ. ಹೆಣ್ಣಿನ ಅಂತರಂಗ ಮತ್ತು ಬಹಿರಂಗಗಳೆರಡನ್ನು ಒಂದಕ್ಕೊಂದು ಪೂರಕ ಎಂಬಂತೆ ಚಿತ್ರಿಸಿರುವ ವಿಶೇಷತೆಯನ್ನು ಉಲ್ಲೇಖಿಸುತ್ತಾರೆ. ರಾಜರತ್ನಂ ಅವರ ಸಾಹಿತ್ಯದಲ್ಲಿ ಕಂಡು ಬರುವ ಪುಟ್ನಂಜಿ ಹಾಗೂ ಮಲ್ಲಿಯರ ಕುರಿತ ಪ್ರಸ್ತಾಪ ಅದರ ನೋಟವನ್ನು ಕಟ್ಟಿಕೊಡುತ್ತದೆ.
ತೇಜಸ್ವಿಯವರ ಕಥನದಲ್ಲಿ ಇತರರಂತೆ ದಾಂಪತ್ಯದ ಕುರಿತ ಚರ್ಚೆಗಳು ಬಹು ಮುಖ್ಯವಾಗಿ ಬಂದದ್ದು ಕಡಿಮೆ. ಆದರೆ, ಸೂಕ್ಷ್ಮವಾಗಿ ಪ್ರಸ್ತಾಪವಾಗಿರುವ ಅಬಚೂರಿನ ಪೋಸ್ಟ್ ಆಫೀಸ್ ನ ಬೋಬಣ್ಣ ಕ-ವೇರಿ ಚಿದಂಬರ ರಹಸ್ಯದ ಕೃಷ್ಣೇಗೌಡ ಅವನ ಹೆಂಡತಿಯ ಜೊತೆಗೆ, ಮುಖ್ಯವಾಗಿ ಕಿರಗೂರಿನ ಗಯ್ಯಾಳಿಗಳ ಪ್ರಸ್ತಾಪ ಮಾಡಿದ್ದಾರೆ. ಯಾವ ಯಾವ ಕಾರಣಗಳಿಗಾಗಿ ಇವರ ಕೃತಿಗಳಲ್ಲಿ ಗಂಡು-ಹೆಣ್ಣುಗಳು ಸಮಾನಾಂತರ ರೇಖೆಗಳಂತೆ ಕಾಣಿಸುತ್ತಾರೆ ಎಂಬುದರ ನೋಟ ಇಲ್ಲಿದೆ.
ಅಕ್ಕಮಹಾದೇವಿಯನ್ನು ನೆನಪಿಸುವ ಮತ್ತೊಂದು ವ್ಯಕ್ತಿತ್ವ ಕಾಶ್ಮೀರದ ಲಲ್ಲೇಶ್ವರಿಯದ್ದು. ಕುಟುಂಬ ವಿಶ್ವದಿಂದ ಹೆಣ್ಣು.. ವಿಶ್ವ ಕುಟುಂಬಕ್ಕೆ ತನ್ನನ್ನು ತಾನು ವಿಸ್ತರಿಸಿಕೊಳ್ಳುವುದರ ಮೂಲಕ ಮಾದರಿಯಾದ ಈಕೆಯ ಕುರಿತಾಗಿ ಇರುವ ದಂತ ಕಥೆಗಳು ಹಾಗೂ ಆಕೆಯ ಸಿದ್ದಿ, ಅನುಭಾವ, ವೈಚಾರಿಕತೆ, ಭಾಷೆಯ ಮೇಲಿನ ಹಿಡಿತ, ಜನರ ದೃಷ್ಟಿಕೋನ ಹಾಗೂ ನಂಬಿಕೆಗಳೆಲ್ಲವನ್ನು ತೋರುತ್ತಾ.. ಲೋಕಾಂತದಲ್ಲಿಯೇ ಏಕಾಂತವನ್ನು ಕಟ್ಟಿಕೊಂಡವಳ ಒಳಲೋಕದ ಪ್ರಯಾಣ ಮಾಡಿಸುತ್ತಾರೆ. ದಾಂಪತ್ಯ ಹಾಗೂ ಹೆಣ್ಣಿನ ವಿವಿಧ ರೀತಿಯ ನಡೆಗಳನ್ನು ಇದುವರೆಗೂ ದಕ್ಷಿಸಿದ್ದ ನಮಗೆ ಬೇರೆಯದ್ದೇ ಸ್ತ್ರೀ ಲೋಕ ಗೋಚರಿಸುತ್ತದೆ.
ಲೇಖಕರ ಕುರಿತ ಒಳನೋಟಗಳು ಕಂಡ ನಂತರ ಲೇಖಕಿಯರು ಕಟ್ಟಿಕೊಟ್ಟಿರುವ ಸ್ತ್ರೀಯರ ಬದುಕು ಹೇಗಿತ್ತು ಎಂಬುದನ್ನು ಜನಪ್ರಿಯ ಬರಹಗಾರ್ತಿಯರಾಗಿರುವ ಎಂ. ಕೆ ಇಂದಿರಾ ಹಾಗೂ ತ್ರಿವೇಣಿಯವರ ಸಾಹಿತ್ಯದಲ್ಲಿ ಕಾಣುವ ಪರಿ ಕೂಡಾ ಇಲ್ಲಿದೆ. "ಸ್ವಪ್ರಜ್ಞೆಯ ಪ್ರಜ್ಞಾಪೂರ್ವಕ ಅಭಿವ್ಯಕ್ತಿಯಾಗಿ ತ್ರಿವೇಣಿಯವರ ಕಾದಂಬರಿಗಳನ್ನು, ಸ್ವಪ್ರಜ್ಞೆಯ ಸುಪ್ತಮೂಲಗಳನ್ನು ಹುಡುಕುವ ಮಾರ್ಗದ ಅಭಿವ್ಯಕ್ತಿಯಾಗಿ ಇಂದಿರಾ ಅವರ ಕಾದಂಬರಿಗಳನ್ನು ನೋಡಬಹುದು" ಎನ್ನುತ್ತಾ.. ಇವರ ಕಾದಂಬರಿಗಳ ಸಂಖ್ಯೆ ಹಾಗೂ ಗುಣಮಟ್ಟದ ಕುರಿತಾಗಿಯೂ ಚರ್ಚಿಸುತ್ತಾರೆ. ಇವರ ಕಥೆ, ಕಾದಂಬರಿಗಳ ಕಥಾವಸ್ತುಗಳಾದ ಬಾಲ್ಯ ವಿವಾಹ, ವಿಧವಾ ವಿವಾಹ, ಸ್ತ್ರೀಯರಿಗೆ ಹೆಚ್ಚಿನ ವಿದ್ಯಾಭ್ಯಾಸ, ವರದಕ್ಷಿಣೆ ಅತಿಸಂತಾನದಂತಹಾ ವಸ್ತುಗಳನ್ನು ಎತ್ತಿಕೊಂಡು ಸಮಸ್ಯೆಯ ಪರಿಹಾರ ಹಾಗೂ ಅದನ್ನು ಎದುರಿಸುವ ಹಾಗೂ ಎದುರಿಸದೆ ಇರುವ ಸಂದರ್ಭಗಳ ಸಮೇತ ಚರ್ಚಿಸುತ್ತಾರೆ. ಇಲ್ಲಿ ಅದಕ್ಕೆ ಕಾಲಘಟ್ಟವು ಎಷ್ಟು ಮುಖ್ಯ ಎಂಬುದರ ನೋಟವೂ ಇದೆ.
"ಸಾರಾ ಅಬೂಬಕರ್ ಅವರ 'ಚಂದ್ರಗಿರಿಯ ತೀರದಲ್ಲಿ' ಕೃತಿ ಕಟ್ಟಿ ಕೊಡುವ ಆವರಣದಲ್ಲಿಯೇ ಸಾರಾ ಅವರ ಇತರೆಲ್ಲಾ ಕೃತಿಗಳನ್ನು ಇಟ್ಟು ನೋಡುವುದನ್ನು ಅಚ್ಚಿಗೆ ಹಾಕಿ ತೆಗೆಯುವಷ್ಟರಷ್ಟು ರೂಡಿಗತವಾಗಿದೆ." ಎನ್ನುತ್ತಾ ಸಾರಾ ಅವರ ಕಾದಂಬರಿಗಳಲ್ಲಿ ಸ್ತ್ರೀ ಲೋಕ ಹಾಗೂ ಅವರ ಬದುಕಿನ ಶೋಧ ಹಾಗೂ ಆಯಾಮಗಳನ್ನು ತೆರೆದಿಡುತ್ತಾರೆ. ಸಾರಾ ಅವರ ಕಾದಂಬರಿಗಳಲ್ಲಿನ ಕುತೂಹಲಕಾರಿ ಅಂಶ ಹಾಗೂ ಅವರ ಕೃತಿಗಳಲ್ಲಿ ಮುಖ್ಯವಾಗಿ ಕಾಣುವ ಅಂಶ.. ಹೆಣ್ಣು ಬದುಕಿಗೆ ವಿಮುಖವಾಗದ ಪರಿಯನ್ನು ಎತ್ತಿ ಹಿಡಿಯುತ್ತಾರೆ.
ಸಾಹಿತ್ಯದ ನೋಟಗಳು ಇವಿಷ್ಟಾದರೆ.. ಪುರಾಣದ ಸೀತೆಯನ್ನು ಅಪ್ಪಟ ಆಧುನಿಕ ಹೆಣ್ಣು ಎಂದೂ.. ದ್ರೌಪದಿಯನ್ನು ದಿಟ್ಟ ಹೆಣ್ಣಿಗಿಂತ ಚಾಣಾಕ್ಷ ಹೆಣ್ಣಾಗಿ ಗುರುತಿಸುವ ಬಗೆಯನ್ನೂ ಕಾಣಬಹುದು. ಎದುರಾದ ಸಂಕಷ್ಟಗಳನ್ನು ನೋವಿನಲ್ಲೂ ಅಳಿಯದ ಆತ್ಮಗೌರವದಲ್ಲಿಯೂ ಎದುರಿಸುವ ಇವರಿಬ್ಬರ ವ್ಯಕ್ತಿತ್ವಗಳು ಸಮಾಂತರ ರೇಖೆ ಎಂದೇ ಅನ್ನಿಸುವುದೇಕೆ ಎಂದು ವಿಸ್ತೃತವಾಗಿ ಹೇಳುತ್ತಾರೆ.
ಇದಿಷ್ಟೇ ಅಲ್ಲದೆ.. ಲಂಕೇಶರ, ವೈದೇಹಿ, ವೀಣಾ, ಸವಿತಾ ನಾಗಭೂಷಣ ಪ್ರತಿಭಾ ನಂದಕುಮಾರ್, ಚಿತ್ರಾ ಮುದ್ಗಲ್, ಓಲ್ಗಾ, ಲೋಹಿಯಾ ಇವರೆಲ್ಲರ ವಿವಿಧ ನೋಟಗಳನ್ನು ವಿಮರ್ಶಿಸುತ್ತಾರೆ.
ಒಟ್ಟಾರೆ ಸ್ತ್ರೀ ಸಾಹಿತ್ಯ, ಅಭಿವ್ಯಕ್ತಿ, ಸಾಂಸ್ಕೃತಿಕ ಚಹರೆ, ಮಹಿಳಾ ನಿಲುವುಗಳು.. ಹೀಗೆ ಸ್ತ್ರೀ ಸಂಕಥನದ ವಿವಿಧ ಚಹರೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ.
ಈ ವಿಮರ್ಶೆಯನ್ನು ಓದಿದ ನಂತರ ನನಗನ್ನಿಸಿದ್ದು :
* ಸೂಕ್ಷ್ಮವಾದ ವಿಚಾರದ ವಿಮರ್ಶೆ ಮಾಡುವಾಗ ಅದರ ಹೊರನೋಟ ಹಾಗೂ ಒಳನೋಟಗಳನ್ನು ಕಟ್ಟಿಕೊಡುವಾಗ ಓದು ಎಷ್ಟು ಮುಖ್ಯವೋ ಸೂಕ್ಷ್ಮವಾದ ಅವಲೋಕನವೂ ಅಷ್ಟೇ ಮುಖ್ಯ. ಭಾಷೆ ಹಾಗೂ ಭಾವನೆಗಳ ಸಮಾನ ಅಗತ್ಯತೆ ಕಾಣಿಸಿತು.
*ವಿಮರ್ಶೆಯಲ್ಲಿ ಕೇವಲ ಕಥಾವಸ್ತು, ಕೇವಲ ಭಾವನೆಗಳು ಅಥವಾ ನಡೆದುಕೊಳ್ಳುವ ರೀತಿಯನ್ನು ಲೇಖಕರ ದೃಷ್ಟಿಯಿಂದ ಮಾತ್ರವಲ್ಲದೇ ಓದುಗರಾಗಿ ಜೊತೆಗೆ ನೋಡುಗರಾಗಿಯೂ ಕಾಣಬೇಕಾಗುತ್ತದೆ. ಒಂದೇ ದಿಕ್ಕಿನ ಪರಾಮರ್ಷೆಗಿಂತ ವಿವಿಧ ರೀತಿಯ ಅವಲೋಕನದ ದೃಷ್ಟಿ ಕಾಣಿಸಿತು.
* ವಿಮರ್ಶೆ ಎಂದಾಕ್ಷಣ ಅದು ಒಂದು ವಿಚಾರವನ್ನು ಎತ್ತಿ ಹಿಡಿಯುವುದೂ ಇಲ್ಲ ಅಥವಾ ಮತ್ತೊಂದು ವಿಚಾರವನ್ನು ಕಟುವಾಗಿಯೂ ನೋಡುವುದಿಲ್ಲ. ಬದಲಾಗಿ, ಆ ನೋಟಕ್ಕೊಂದು ಸಮಾನತೆ ಇದೆ.
* ವಿಮರ್ಶೆಗಳಲ್ಲಿ ಅದೇ ಲೇಖಕರ ಬೇರೆ-ಬೇರೆ ಕೃತಿಯ ವಿಸ್ಕೃತ ನೋಟ ಕಾಣುವಂತೆ.. ಬೇರೆ ಲೇಖಕರ ನೋಟಗಳು ಉಲ್ಲೇಖಿತವಾಗಿದ್ದರೂ.. ಅದು ಹೋಲಿಕೆಯಲ್ಲ. ಬದಲಾಗಿ ವಿಭಿನ್ನ ನೋಟ ಎನ್ನಿಸಿತು. ಈ ರೀತಿಯ ನೋಟ ದಕ್ಕುವುದು ಅಗಾಧ ಓದಿನಿಂದ ಹಾಗೂ ವಿಭಿನ್ನ ರೀತಿಯ ಆಲೋಚನೆಗಳಿಂದ ಹಾಗಾಗಿ ಓದು ಮತ್ತು ವಿಭಿನ್ನ ಆಲೋಚನೆಗಳು ವಿಮರ್ಶೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
* ವಿಮರ್ಶೆಯಲ್ಲಿ ನಿರಂತರ ಓದಿನ ಅವಶ್ಯಕತೆ ಇದೆ. ಇಲ್ಲಿ ವಿವಿಧ ಕಾಲಘಟ್ಟ, ಲೇಖಕರು, ಲೇಖಕಿಯರು, ಪುರಾಣದ ಪಾತ್ರಗಳು ಹೀಗೆ ಹಲವಾರು ನೋಟಗಳು ಕಾಣುತ್ತವೆ. ಓದು ಮಿತಿಯಲ್ಲಿದ್ದರೆ ನಮ್ಮ ನೋಟ ಕೂಡ ಮಿತಿಯಲ್ಲಿರಬಹುದು. ಹಾಗಾಗಿ ಪ್ರತಿದಿನ ಹಾಗೂ ಆಯಾ ಕಾಲಘಟ್ಟದ ಓದಿನಷ್ಟೇ.. ಹಿಂದಿನ ಸಾಹಿತ್ಯವನ್ನು ಅಭ್ಯಸಿಸುವುದು ಹಾಗೂ ಇತರರ ವಿಮರ್ಶೆಗಳು ಮತ್ತು ಒಳನೋಟಗಳನ್ನು ತಿಳಿದುಕೊಳ್ಳುವುದು ಸಹಾ ಅವಶ್ಯಕವಾಗುತ್ತದೆ.
ವಿಮರ್ಶೆ ಎಂಬುದು ನನ್ನ ಪ್ರಕಾರ ಗಂಭೀರದ ಬರಹದಷ್ಟೇ.. ಗಂಭೀರವಾದ ಓದು. ಇದನ್ನು ಓದಿದಾಗ ನನ್ನ ಓದಿನ ಪರಿಮಿತಿ ಹಾಗೂ ನೋಟದ ಮಿತಿ ಅರಿವಾಯಿತು. ಅಲ್ಲದೇ, ಇದು ವಿಭಿನ್ನ ಓದಿನ ಅನುಭವವೂ ಹೌದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ