ಪುಸ್ತಕದ ಶೀರ್ಷಿಕೆ : ನಿಲುಕಿದ ತಾರೆ
ಲೇಖಕರು : ಚಿತ್ರಲೇಖ
ಪ್ರಕಾಶಕರು : ವರ್ಣ ಪಬ್ಲಿಕೇಶನ್ಸ್
ಪ್ರಥಮ ಮುದ್ರಣ : 2003
ದ್ವಿತೀಯ ಮುದ್ರಣ : 2024 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 216
ಬೆಲೆ : 250 ರೂ.
ನಿಲುಕಿದ ತಾರೆ ಚಿತ್ರಲೇಖ ಮೇಡಂ ಅವರ ಮರುಮುದ್ರಣವಾಗಿರುವ ಕಾದಂಬರಿ. ಈ ಕಾದಂಬರಿ ಮಂಗಳ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು. ಕನ್ನಡದ ನಿತ್ಯೋತ್ಸವ ಮೂರನೆಯ ಹಂತದ ಬಹುಮಾನವಾಗಿ ಚಿತ್ರಲೇಖ ಮೇಡಂ ಕಡೆಯಿಂದಲೇ ಈ ಪುಸ್ತಕ ಬಹುಮಾನವಾಗಿ ದೊರೆತಿರುವುದು ಖುಷಿಯ ಸಂಗತಿ.
ನನಗೆ ಚಿತ್ರಲೇಖ ಮೇಡಂ ಅವರ ಕಾದಂಬರಿಗಳನ್ನು ಓದುವಾಗ ಹೆಚ್ಚು ಇಷ್ಟವಾಗುವುದು ಅವರು ಕಟ್ಟಿಕೊಡುವ ಕಥಾ ಪರಿಸರ. ಆಯಾ ಸ್ಥಳಕ್ಕೆ ತಕ್ಕಂತೆ ಭಾಷೆ, ಜನರ ಹೆಸರುಗಳು, ಅಲ್ಲಿನ ತಿಂಡಿ-ತಿನಿಸುಗಳು, ವೇಷಭೂಷಣ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಚೆಂದವಾಗಿ ಚಿತ್ರಿಸುತ್ತಾರೆ. ಇದಕ್ಕೆ ಕಾರಣ ಅವರ ತಂದೆ ಆರ್ಮಿ ಮ್ಯಾನ್ ಆಗಿದ್ದವರು ಹಾಗೂ ಅಣ್ಣ ಏರ್ ಫೋರ್ಸ್ ಮ್ಯಾನ್ ಆಗಿದ್ದವರು. ಅವರಿಬ್ಬರ ಮಿಲಿಟರಿ ಬದುಕಿನ ಅನುಭವಗಳ ಜೊತೆಗೆ ಭಾರತದ ವಿವಿಧ ಪ್ರದೇಶ, ಭಾಷೆಗಳ ಪರಿಚಯ ಇವರಿಗಾಗಿದ್ದು.
ಎಲ್ಲಾ ಅನುಭವಗಳನ್ನು ಸ್ವತಃ ಅನುಭವಿಸಲಾಗದಿದ್ದರೂ.. ಬಲ್ಲವರಿಂದ ಕೇಳಿ ಹಾಗೂ ಹೀಗೆ ಪುಸ್ತಕಗಳಿಂದ ಓದಿದ್ದು ನಮ್ಮ ಅನುಭವವಾಗುತ್ತದೆ. ಅದಕ್ಕೆ ಭಾಷೆ ಹಾಗೂ ಭಾವನೆಗಳು ಮುಖ್ಯ. ಚಿತ್ರಲೇಖ ಮೇಡಂ ಅವರ ಕೃತಿಗಳಲ್ಲಿ ಇದು ಸ್ಪಷ್ಟವಾಗಿ ಅನುಭವಕ್ಕೆ ಬರುತ್ತದೆ.
ನಿಲುಕಿದ ತಾರೆ ಎಂಬ ಶೀರ್ಷಿಕೆ ಕಂಡಾಗ ಮೊದಲಿಗೆ ಮನಸ್ಸಿಗೆ ಬಂದದ್ದು ಇದರ ಅಂತ್ಯ ಸುಖಾಂತ್ಯವಾಗಿರಬಹುದು ಎಂಬುದು. 'ತಾರೆ' ಎಂದಾಕ್ಷಣವೇ ಪೂರ್ವಗ್ರಹಪೀಡಿತ ಮನಸ್ಸು ಚಲನಚಿತ್ರ ತಾರೆಯನ್ನೇ ನೆನಪಿಸಿಕೊಂಡಿತು. ಆದರೆ, ಇಲ್ಲಿನ ಕಥಾಹಂದರ ಬೇರೆಯದ್ದೇ ಕಥೆಯನ್ನು ಹೇಳುತ್ತದೆ.
ಬಣ್ಣ, ಮುಖಲಕ್ಷಣ, ಮೈಮಾಟ ಇವೆಲ್ಲವನ್ನೂ ಪ್ರಕೃತಿ ಸಾಕ್ಷಿಗೆ ದಯಪಾಲಿಸಿತ್ತು. ತಾರಲೋಕದಲ್ಲಿಯೇ ಪ್ರಥಮ ಸ್ಥಾನದಲ್ಲಿ ನಿಂತು ಮಿಂಚಬಹುದಾಗಿತ್ತು ಅಥವಾ ವಿಶ್ವ ಸುಂದರಿಯ ಕಿರೀಟವನ್ನು ಧರಿಸಬಹುದಾಗಿತ್ತು. ಆದರೆ, ಇದೆಲ್ಲವನ್ನು ದಯಪಾಲಿಸಿದ ವಿಧಿ ಆಕೆಗೆ ಅದೃಷ್ಟವನ್ನು ದಯಪಾಲಿಸಿತ್ತೇ..? ಎಂದರೆ ಇದಕ್ಕೆ ಉತ್ತರವಿಲ್ಲ. ಆದರೂ.. ಅವಳು ಬಯಸಿದ್ದರೆ ಇದನ್ನು ಸಾಧಿಸುವುದು ಕಷ್ಟವೇನೂ ಆಗಿರಲಿಲ್ಲ. ಆದರೆ, ಬಾಳಿನ ಹಲವು ತಿರುವುಗಳನ್ನು ಕಂಡವಳಿಗೆ ಇದೆಲ್ಲದರ ಕುರಿತು ದಿವ್ಯ ನಿರ್ಲಕ್ಷ್ಯ. 28ರ ಹರೆಯದ ಹೊತ್ತಿಗೆ ಆಕೆ ಬದುಕಿನಲ್ಲಿ ಸಾಕಷ್ಟು ಕಷ್ಟಗಳನ್ನುಂಡು ಬದುಕಿದ್ದವಳು. ತಂದೆ-ತಾಯಿಯರಿಂದ ಮಾತ್ರವಲ್ಲದೇ.. ದರ್ಶನ್ ಎಂಬ ಪ್ರೇಮಿಯ ಪ್ರೇಮದಿಂದಲೂ ವಂಚಿತಳಾಗಿದ್ದವಳು. ಇಂದ್ರಜಿತ್ ನ ಜೊತೆಗಿನ ವೈವಾಹಿಕ ಜೀವನದ ಸುಖದಿಂದಲೂ ವಂಚಿತಳಾಗಿದ್ದವಳು. ಇದು ಅವಳ ಬದುಕಲ್ಲಿ ಯಾರ ಸಂಚಾಗಿತ್ತು..?
ಸಾಕ್ಷಿಯ ತಂದೆ ಮೇಜರ್ ಅರ್ಜುನ್. ಭೂಮಿಕಾರನ್ನು ಮದುವೆಯಾಗಿದ್ದು ನಿವೃತ್ತಿಯ ಅಂಚಿನಲ್ಲಿದ್ದಾಗ. ಅದಾಗಲೇ ಅವರಿಗಿದ್ದ ಏಕೈಕ ಪುತ್ರ ಪೃಥ್ವಿ ಹೆಂಡತಿ-ಮಗನೊಂದಿಗೆ ಬಾಳ್ವೆ ನಡೆಸುತ್ತಿದ್ದಾಗ. ಮಗ-ಸೊಸೆಯಿಂದ ವಿರೋಧ ಬಾರದೆ, ಈ ವಯಸ್ಸಿನಲ್ಲಿ ತನಗೆ ಸಂಗಾತಿ ಬೇಕೆಂದುಕೊಂಡು ಇಷ್ಟಪಟ್ಟು ಮದುವೆಯಾಗಿದ್ದ ಮರುವರ್ಷವೇ ಸಾಕ್ಷಿ ಹುಟ್ಟಿದ್ದಳು. ವಿಪರ್ಯಾಸವೆಂದರೆ, ಸೇವೆಯಲ್ಲಿದ್ದಾಗ ಆಗದ ದುರ್ಘಟನೆಯೊಂದು ಅರ್ಜುನ್ ರವರು ಅಂಗಡಿಗೆ ಸಾಮಾಗ್ರಿಗಳನ್ನು ಕೊಳ್ಳಲು ಹೋಗಿದ್ದಾಗ ನಡೆದು ಮರಣ ಹೊಂದಿದಾಗ ಸಾಕ್ಷಿಗಿನ್ನೂ ಮೂರು ವರ್ಷ. ಸಾಕ್ಷಿಗಾಗಿಯೇ ತಾಯಿ ಗಟ್ಟಿ ಮನಸ್ಸು ಮಾಡಿಕೊಂಡು ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾಗ.. ಮೆದುಳುಗಡ್ಡೆಯ ಕಾರಣದಿಂದ ನಡೆದ ಶಸ್ತ್ರಚಿಕಿತ್ಸೆ ಅವರ ಪ್ರಾಣಕ್ಕೆ ಕುತ್ತು ತಂದಿತ್ತು. ಆಗಿನ್ನೂ ಸಾಕ್ಷಿಗೆ 10 ವರ್ಷ. ತಾಯಿಯ ಕಡೆಯೂ ಯಾರೂ ಇಲ್ಲದಿದ್ದಾಗ ಆಕೆಯ ಭವಿಷ್ಯದ ಮುಂದೆ ಪ್ರಶ್ನೆಯೊಂದಿತ್ತು.
ಪೃಥ್ವಿಗೆ ಬಲತಂಗಿಯೊಂದಿಗೆ ಹೆಚ್ಚಿನ ಒಡನಾಟ ಇರಲಿಲ್ಲ. ದ್ವೇಷವೂ ಇಲ್ಲ, ಸ್ನೇಹವೂ ಇಲ್ಲ ಎನ್ನುವಂತೆ ಸಾಗುತ್ತಿದ್ದ ಬಂಧಕ್ಕೆ ಹೊಸ ಅರ್ಥ ನೀಡಿದ್ದು ಪೃಥ್ವಿಯ ಹೆಂಡತಿ ದೀಪ್ತಿ. ಅವರಿಬ್ಬರಿಗೂ ಒಬ್ಬನೇ ಮಗ ನಿತಿನ್. ಮಗನಿದ್ದರೂ.. ಸಾಕ್ಷಿಯ ಜವಾಬ್ದಾರಿ ನಮಗಿರಲಿ ಎಂದುಕೊಂಡು ತಮ್ಮೊಂದಿಗೆ ಮುಂಬೈಗೆ ಕರೆತಂದರು. ಆದರೆ, ನಿತಿನ್ ಗೆ ತಾಯಿಯಷ್ಟು ವಿಶಾಲ ಮನೋಭಾವವಿರಲಿಲ್ಲ. ಅದಕ್ಕೆ ಕಾರಣವೂ ಇಲ್ಲದ್ದಿಲ್ಲ.. ಸಂಬಂಧಿಕರಲ್ಲಿ ಕೇಳಿದ್ದ ತಾತನ ವಿವಾಹದ ಕುರಿತಾದ ಕುಹಕ ನುಡಿ ಸಾಕ್ಷಿಯ ಕುರಿತಾಗಿ ತಾತ್ಸಾರ ಮನೋಭಾವ ಬೆಳೆಯುವಂತೆ ಮಾಡಿತ್ತು. ಆತ ಬೋರ್ಡಿಂಗ್ ಸ್ಕೂಲಿನಲ್ಲಿದ್ದರೂ.. ರಜಾದಿನಗಳಿಗೊಂದು ಬಂದಾಗ ಸಾಕ್ಷಿಯ ಮನಸಲ್ಲಿ ತಾನು ಅನಾಥೆ ಎಂಬ ಭಾವ ಪದೇಪದೇ ಕಾಡುತ್ತಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಸೋನುಬಾಯಿಯೊಟ್ಟಿಗೆ ಆಪ್ತಳಾದಳು. ದೀಪ್ತಿ ಸಾಕ್ಷಿಗೆ ಬೇಕಿದ್ದೆಲ್ಲವನ್ನೂ ಒದಗಿಸಿ ಮೇಲ್ವಿಚಾರಣೆ ಮಾಡುತ್ತಿದ್ದಳಾದರೂ.. ಆಪ್ತ ಒಡನಾಟ ಸೋನು ಬಾಯಿಯ ಜೊತೆಗೆ. ಅಲ್ಲಿ ಕರ್ತವ್ಯ ಪ್ರಜ್ಞೆ ಇತ್ತು. ಆಕೆಗೆ ಸಾಕಷ್ಟು ಸ್ವಾತಂತ್ರ್ಯವೂ ಇತ್ತು. ಓದಿನ ವಿಚಾರದಲ್ಲಿಯೂ ಚುರುಕಾಗಿದ್ದಳು ಸಾಕ್ಷಿ. ಆದರೆ, ನಿತಿನ್ ನ ವರ್ತನೆ ಮಾತ್ರ ಅವಳ ಮನಸ್ಸಲ್ಲಿ ಮಾಯದ ಗಾಯ ಮೂಡಿಸಿತ್ತು.
ಪೃಥ್ವಿಗೆ ಮುಂಬೈನಿಂದ ಕೇರಳಕ್ಕೆ ವರ್ಗವಾದಾಗ ಮತ್ತೆ ಸಾಕ್ಷಿ ಅಲ್ಲಿಗೆ ಒಗ್ಗಿಕೊಳ್ಳಬೇಕಿತ್ತು. ಮುಂಬೈ, ಮದ್ರಾಸ್ ಗಿಂತಲೂ ಕೇರಳದ ವಾಸವೇ ಇಷ್ಟವಾಗಿತ್ತು ಸಾಕ್ಷಿಗೆ. ಈಗ ಇವರ ಜೊತೆ ಸೋನುಬಾಯಿಯ ಬದಲಾಗಿ ಅಮ್ಮು ಕುಟ್ಟಿ ಇದ್ದಳು. ಅವಳಷ್ಟು ಆಪ್ತವಾಗಿರದಿದ್ದರೂ.. ಅವಳೊಂದಿಗೆ ಒಡನಾಟ ಇದ್ದೇ ಇತ್ತು. ಆದರೆ, ಇಲ್ಲಿ ಅವಳಿಗೆ ಆಪ್ತವಾಗಿದ್ದು ಪಕ್ಕದ ಮನೆಯಲ್ಲಿ ವಾಸವಾಗಿದ್ದ ಭಾಸ್ಕರ್ ನಾಯರ್ ಹಾಗೂ ಲಕ್ಷ್ಮೀನಾಯರ್ ದಂಪತಿಗಳು. ಅವರ ಮಗ ಶಂಕರ್ ನಾಯರ್ ಪೃಥ್ವಿಯ ಜೊತೆ ಕೆಲಸ ಮಾಡುತ್ತಿದ್ದವನು.
ಇಲ್ಲಿಯೇ ಸಾಕ್ಷಿಯ ಮೊದಲ ಪ್ರೀತಿ ಅಂಕುರವಾಗಿದ್ದು. ಅದು ದರ್ಶನೊಟ್ಟಿಗೆ. ಅದು ವಿವಾಹದವರೆಗೂ ಮುಂದುವರೆದರೂ.. ಇಲ್ಲೊಂದು ನಿರ್ಮಲ ಪ್ರೀತಿ ಕಾಣಿಸುತ್ತದೆ. ಅಷ್ಟಕ್ಕೂ ದರ್ಶನ್ ಯಾರು..? ಇಲ್ಲಿ ಆತನಿಗೂ ಸಾಕ್ಷಿಗೂ ಪರಿಚಯ ಹೇಗಾಯಿತು..? ಅದು ವಿವಾಹದವರೆಗೂ ಸಾಗಿದ್ದು ಹೇಗೆ ಓದಿ ನೋಡಿ.
ಸಾಕ್ಷಿಗೆ ವಿವಾಹದ ಪ್ರಸ್ತಾಪ ಬಂದಾಗ ದರ್ಶನ್ ಕೂಡ ಕಲ್ಕತ್ತೆಯಲ್ಲಿದ್ದ. ಆಗ ಪೃಥ್ವಿಗೆ ಕೂಡಾ ಅಲ್ಲಿಗೇ ವರ್ಗವಾಗಿತ್ತು. ಇಲ್ಲಿ ದುರ್ಗಾಬೆನ್ ಸಾಕ್ಷಿಗೆ ಆಪ್ತಳಾದಳು. ಯಾರೆಷ್ಟೇ ಆಪ್ತರಾದರೂ ಅಲ್ಲಿರುವಷ್ಟು ಕಾಲ ಮಾತ್ರವೇ ಸಾಕ್ಷಿಗೆ ಅವರ ಒಡನಾಟ ದಕ್ಕುವಂತಹದು. ಇದು ಸಾಕ್ಷಿಗೆ ಅನುಭವವಾಗಿದ್ದ ಸತ್ಯ. ಆಕೆಯೇ ಸಂಬಂಧವನ್ನು ಮುಂದುವರಿಸಲು ಹೊರಟರೂ ಅದಾಗುತ್ತಿರಲಿಲ್ಲ. ಅದೇಕೆ ಎಂದು ಓದಿ ತಿಳಿಯಿರಿ.
ಪೈಲೆಟ್ ನ ಭಾವಿ ಪತ್ನಿ ಸಾಕ್ಷಿಗೆ ಮಾತ್ರ ಎತ್ತರದಲ್ಲಿ ಹಾರುವ ವಿಮಾನವನ್ನು ಕಂಡರೆ ಭಯ. ಅವಳ ಆ ಭಯವೇ ನಿಜವಾಗಿ ವಿಮಾನ ಅಪಘಾತದಲ್ಲಿ ದರ್ಶನ್ ಅವಳ ಬದುಕಿನಿಂದ ದೂರವಾಗಿದ್ದ. ತಂದೆ-ತಾಯಿ ಇಲ್ಲದ ತಬ್ಬಲಿಗೆ ಪ್ರೀತಿ ನೀಡಿದ್ದ ದರ್ಶನ್ ಕೂಡಾ ದೂರವಾದಾಗ ಸಾಕ್ಷಿಯ ಬದುಕು ಅಂಧಕಾರದಲ್ಲಿ ಮುಳುಗಿತು. ಆದರೆ, ದೀಪ್ತಿ ಹಾಗೂ ಪೃಥ್ವಿಯ ಸಹಕಾರದಿಂದ ಮತ್ತೆ ಚೇತರಿಸಿಕೊಂಡು ಓದಿನ ಗಮನ ಹರಿಸುವುದರೊಳಗಾಗಿ ಪೃಥ್ವಿಯ ಸಾವು ಸಾಕ್ಷಿಯ ಬದುಕನ್ನೇ ಅಲ್ಲೋಲಕಲ್ಲೋಲಗೊಳಿಸಿತ್ತು. ಪೃಥ್ವಿಯ ಸಾವಿಗೆ ಕಾರಣವೇನು..?
ದೀಪ್ತಿ ಈಗ ಮಗ ಸೊಸೆಯೊಂದಿಗೆ ಅಮೆರಿಕಾ ಸೇರಬೇಕಾಗಿದ್ದ ಅನಿವಾರ್ಯವಿತ್ತು. ಆದರೆ, ದೀಪ್ತಿ ಅವಳನ್ನು ನಡುನೀರಿನಲ್ಲಿ ಕೈಬಿಡದೆ ಅವಳಿಗೆ ಸ್ವತಂತ್ರವಾಗಿ ಬದುಕುವ ಏರ್ಪಾಡು ಮಾಡಿದ್ದಳು. ಹಿರಿಯರ ಸ್ಥಾನದಲ್ಲಿದ್ದ ದೀಪ್ತಿಯ ಮಾರ್ಗದರ್ಶನ ಇನ್ನು ಮುಂದೆ ಸಾಕ್ಷಿಯ ಪಾಲಿಗೆ ಮರೀಚಿಕೆಯಾಗಲಿತ್ತು. ತಂದೆ-ತಾಯಿ ಇಲ್ಲದಿದ್ದರೂ.. ಮನೆಯಲ್ಲಿಯೇ ಬೆಳೆದಿದ್ದವಳಿಗೆ ಹಾಸ್ಟೆಲ್ ನ ವಾಸ ಹಾಗೂ ಲಾಯರ್ ಆಫೀಸಿನಲ್ಲಿ ಪಾರ್ಟ್ ಟೈಮ್ ಜಾಬ್ ಮಾಡುತ್ತಾ ಎಲ್ಲದಕ್ಕೂ ಹೊಂದಿಕೊಂಡು ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳುವುದು ಸುಲಭವಾಗಿರಲಿಲ್ಲ. ಎಲ್ಲವನ್ನು ಹೊಂದಿಸಿಕೊಂಡು ಹೋಗುತ್ತಿದ್ದಾಗಲೇ.. ಅವಳು ಕೆಲಸ ಮಾಡುತ್ತಿದ್ದ ಸ್ಥಳದ ಮಾಲೀಕ ಇಂದ್ರಜಿತ್ ಆಕೆಯ ಮೇಲೆ ಮೋಹಿತನಾಗಿದ್ದ.
ಇಂದ್ರಜಿತ್ ಗೆ ಹಣ, ಕೀರ್ತಿ ಇತ್ತಾದರೂ.. ವಯಸ್ಸಿನ ಅಂತರವೂ ಹೆಚ್ಚಾಗಿತ್ತು. ಸಾಕ್ಷಿಗೆ ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿ ಏನೂ ಸೃಷ್ಟಿಯಾಗದಿದ್ದರೂ.. ಮುಂದಾದರೂ ಅವಳ ಬದುಕಿಗೊಂದು ಆಸರೆ ಬೇಕಿತ್ತು. ಆಕೆ ಇಂದ್ರಜಿತ್ ನನ್ನು ವರಿಸುವ ಪರಿಸ್ಥಿತಿಯಲ್ಲಿ ಆಕೆಯ ಮನಸ್ಥಿತಿ ಹೇಗಿತ್ತು..? ದರ್ಶನ್ ಹಾಗೂ ತನ್ನ ಹಿಂದಿನ ಬದುಕಿನ ಕುರಿತು ಸಾಕ್ಷಿ ಇಂದ್ರಜಿತ್ ಜೊತೆಗೆ ಮುಕ್ತವಾಗಿ ಬಿಚ್ಚಿಟ್ಟಳೇ..? ಅಕ್ಕನ ಸ್ಥಾನದಲ್ಲಿ ನಿಂತ ಸುರೇಖಾ ಹಾಗೂ ಫಾತಿಮಾ ನೀಡಿದ ಸಲಹೆಗಳೇನು..? ಇಂದ್ರಜಿತ್ ನ ಹಿನ್ನೆಲೆಯೇನು..?
ಅಮೆರಿಕಾಗೆ ಹೋದ ನಂತರ ದೀಪ್ತಿ ಹಾಗೂ ಸಾಕ್ಷಿಯರ ನಡುವೆ ಸಂಪರ್ಕ ಸಾಧ್ಯವಾಯಿತೇ..? ಇಂದ್ರಜಿತ್ ಹಾಗೂ ಸಾಕ್ಷಿಯರ ವಿವಾಹದ ನಂತರದ ಜೀವನ ಹೇಗಿತ್ತು..? ಇಂದ್ರಜಿತ್ ನ ಸಾವಿಗೆ ಕಾರಣವೇನು.. ಇಂದ್ರಜಿತ್ ನ ಸಾವಿನ ನಂತರ ಇನ್ನೂ 28ರ ಹರೆಯದ ಸಾಕ್ಷಿಯ ಬದುಕು ಏನಾಯಿತು..?
ಈಗ ಸಾಕ್ಷಿಯ ರಕ್ಷಣೆಗೆಂದು ಅಂಗರಕ್ಷಕಿಯಂತೆ ಸದಾ ಸಿದ್ದಳಿರುತ್ತಿದ್ದ ಕರೋಲ್ ಕಣ್ಣು ತಪ್ಪಿಸಿ ಸಾಕ್ಷಿಯ ಬದುಕಿಗೆ ಬರಲು ಹವಣಿಸುತ್ತಿದ್ದವರು ಯಾರು..? ಸಾಕ್ಷಿ ನಿಲುಕಿದ ತಾರೆಯಾದಳೇ..? ಎಲ್ಲವನ್ನೂ ತಿಳಿಯಲು ಓದಿ ಚಿತ್ರಲೇಖ ಮೇಡಂ ಅವರ 'ನಿಲುಕಿದ ತಾರೆ' ಕಾದಂಬರಿಯನ್ನು.
ಎಲ್ಲಿಯೂ ಗುಟ್ಟು ಬಿಟ್ಟು ಕೊಡದೆ ರೋಚಕತೆಯಿಂದ ಸಾಗಿರುವ ಕಥೆಯ ಅಂತ್ಯವನ್ನು ಓದಿ ನೋಡಿ. ಸಾಕ್ಷಿಯ ಗಟ್ಟಿತನ, ಆಕೆಯ ತಾಳ್ಮೆ, ದೃಢ ನಿರ್ಧಾರ, ಮುಗ್ಧತೆಯಿಂದ ಪ್ರಬುದ್ಧತೆಗೆ ಸಾಗುವ ರೀತಿ ಆಕೆಗೆ ಭವಿಷ್ಯವನ್ನು ಯಾವ ರೀತಿಯಲ್ಲಿ ರೂಪುಗೊಳಿಸಿತು ಎಂಬುದರ ಚಿತ್ರಣದ ಜೊತೆಗೆ ಇಲ್ಲಿನ ನಿರ್ಮಲ ಪ್ರೇಮ ಸಾಕಷ್ಟು ಇಷ್ಟವಾಯಿತು. ಸೊಗಸಾದ ಕಾದಂಬರಿಯ ಚೆಂದದ ಓದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ