ಶನಿವಾರ, ಏಪ್ರಿಲ್ 25, 2026

ಪ್ರೇರಣ (ಪುಸ್ತಕ ಯಾನ - 344)


ಪುಸ್ತಕದ ಶೀರ್ಷಿಕೆ : ಪ್ರೇರಣ 

ಲೇಖಕರು : ವಿಜಯಶ್ರೀ

ಪ್ರಕಾಶಕರು : ಗೀತಾ ಏಜೆನ್ಸೀಸ್ 

ಪ್ರಥಮ ಮುದ್ರಣ : 1992

ಪುಟಗಳು : 207


ಬದುಕಿನಲ್ಲಿ ಪ್ರೇರಣೆಗಳು ಯಾವ ರೀತಿಯಲ್ಲಿ ಬರುತ್ತವೆ ಹಾಗೂ ಯಾರ ಬದುಕಿನ ರೀತಿ ಮತ್ತಾರಿಗೆ ಪ್ರೇರಣೆಯಾಗುತ್ತದೋ ಹೇಳಲು ಸಾಧ್ಯವೇ ಇಲ್ಲ. ಒಬ್ಬರ ಬದುಕನ್ನು ರೂಪಿಸುವುದು ಅವರು ಕಲಿತ ಪಾಠ, ಪಡೆದ ಅನುಭವಗಳು ಎನ್ನುವುದು ಸತ್ಯವೇ ಆದರೂ ಎಲ್ಲವನ್ನೂ ಸ್ವಂತ ಅನುಭವದಿಂದಲೇ ಪಡೆಯಬೇಕಿಲ್ಲ. ಒಬ್ಬ ವ್ಯಕ್ತಿ ಕೇವಲ ಮಿತ್ರರಾಗಿಯೇ ಅಥವಾ ಎತ್ತರದ ಸ್ಥಾನದಲ್ಲಿದ್ದೇ ಮತ್ತೊಬ್ಬರಿಗೆ ಪ್ರೇರಣೆಯಾಗಬೇಕಿಲ್ಲ. ಬದಲಾಗಿ.. ಶತ್ರುವಾಗಿ, ಸಂಗಾತಿಯಾಗಿ, ಹೆತ್ತವರಾಗಿ, ಹಿತೈಷಿಗಳಾಗಿ ಹೀಗೆ ಒಂದೊಂದು ಪಾತ್ರಗಳೂ ನೀಡುವ ಅನುಭವಗಳೇ ಬೇರೆ.  ಕೆಲವು ನೋವುಗಳು, ಕೆಲವು ಖುಷಿಗಳು, ಕೆಲವು ಹಿಂಸೆಗಳು.. ಹೀಗೆ ಎಲ್ಲವೂ ಬದುಕನ್ನು ರೂಪಿಸುತ್ತಾ ಸಾಗುತ್ತವೆ.


 ಲೇಖಕಿ ಮುನ್ನುಡಿಯಲ್ಲಿ ಹೇಳಿರುವಂತೆ "ಒಂದು ಸಣ್ಣ ಘಟನೆ ಈ ಕೃತಿಗೆ ಪ್ರೇರಣೆಯಾದರೂ ಕಥೆಯಲ್ಲಿ ಬರುವ ಪಾತ್ರಗಳೆಲ್ಲವೂ ಲೇಖನಿಯ ಕಲ್ಪನಾ ಕೂಸುಗಳೇ" ಎಂದಿದ್ದಾರೆ.  "ಬರೆದ ನಂತರವೂ ಕೆಲವು ನೋವುಗಳಿಗೆ ಮುಕ್ತಿಯೇ ಇಲ್ಲವೇನೋ ಎನಿಸುತ್ತದೆ" ಎನ್ನುತ್ತಾರೆ.


ಪ್ರೇರಣ ಕಾದಂಬರಿಯಲ್ಲಿ ಮುಖ್ಯವಾಗಿ ಹೆಣ್ಣುಮಕ್ಕಳ ಬದುಕೇ ಪ್ರೇರಣೆಯಾದರೂ ಅದಕ್ಕೆ ಪ್ರತಿಕ್ರಿಯೆ ನೀಡುವ ರೀತಿ ಹಾಗೂ ಕಟ್ಟಿಕೊಟ್ಟಿರುವ ಕಥಾವಸ್ತು ನೋವಿನಲ್ಲಿ ಅದ್ದಿದಂತಿದೆ. ನಂತರ, ಅದರಿಂದ ಹೊರಬಂದು ಅಂತಹ ಪಾತ್ರಗಳೇ ಪ್ರೇರಣೆಯಾಗಿ ಕಾಡುವುದೂ ಹೌದು. ಈ ಕಾದಂಬರಿಯಲ್ಲಿ ಮುಖ್ಯವಾಗಿ ಮೂರು ಪ್ರೇರಕ ಪಾತ್ರಗಳನ್ನು ಕಟ್ಟಿಕೊಟ್ಟಿದ್ದಾರೆ.


ರಾಮು ಚಿಕ್ಕ ವಯಸ್ಸಿನಲ್ಲಿಯೇ ಮನೆ ಬಿಟ್ಟು ಬಂದಿದ್ದಕ್ಕೆ ಕಾರಣವಿತ್ತು. ಆದರೆ, ರಾಮು ಹಾಗೆಂದು ಹಿಂಜರಿಯದೆ ಬದುಕಿನಲ್ಲಿ ಮುಂದೆ ಸಾಗುತ್ತಿದ್ದ. ಆತ ಪ್ರಜ್ಞಾಶೂನ್ಯನಾಗಿ ಬಿದ್ದಿರುವಾಗ ಆತನ ಪಾಲಿಗೆ ದೇವರಂತೆ ಬಂದದ್ದು ಅಮರ್. ಆತನೇ ಈತನ ಪಾಲಿನ ದೇವರಾದನೋ ಅಥವಾ ಅವನಿಗೆ ಮುಂದೆ ಸಹಾಯವಾಗಲು ದೇವರೇ ರಾಮುವನ್ನು ಜೊತೆ ಮಾಡಿದನೇನೋ ಎನ್ನುವಂತೆ.. ಅವರು ಹೋಗುತ್ತಿದ್ದ ಬಸ್ಸು ಅಪಘಾತವಾಗಿ ಅಮರ್ ಗೆ ಪೆಟ್ಟಾಗಿತ್ತು. ಆ ಸಂದರ್ಭದಲ್ಲಿ ಪ್ರತಿ ಹೆಜ್ಜೆಯಲ್ಲಿಯೂ ಸಹಾಯ ಮಾಡಿದ್ದು ರಾಮುವೇ.


ನಂತರ, ಅಮರ್ ಜೊತೆಗೆ ಅವನ ಮನೆಗೂ ಹೋಗುತ್ತಾನೆ. ಅಮರ್ ಹಾಗೂ ಅವನ ತಾಯಿ ಇಬ್ಬರೇ ಅವರ ಮನೆಯಲ್ಲಿ. ಆದರೆ, ರಕ್ತಸಂಬಂಧಕ್ಕಿಂತ ಮಿಗಿಲಾದ ಮತ್ತೊಂದು ಸಂಬಂಧವನ್ನು ರಾಮು ಅಲ್ಲಿ ಕಂಡ. ಅವಳೇ ಸಂಭ್ರಮ. ಸ್ನೇಹವನ್ನು ಮೀರಿದ ಸಂಬಂಧಗಳೇ ಪ್ರಪಂಚದಲ್ಲಿಲ್ಲ ಎಂದುಕೊಳ್ಳುವಂತೆ ನಡೆದುಕೊಳ್ಳುವಂತಹ ಸಂಭ್ರಮ.  ಆಕೆಗೆ ಅದಾಗಲೇ ವಿವಾಹವಾಗಿತ್ತು. ಆಕೆಯ ಸ್ನೇಹ ಪ್ರಪಂಚದಲ್ಲಿ ಅಮರ್ ನಿಗೇ ಮೊಟ್ಟಮೊದಲ ಸ್ಥಾನವಾದರೂ.. ಅಮರ್ ಆಕೆಗೆ ತನ್ನ ಕುಟುಂಬದಲ್ಲಿ ಅಂತಹ ಸ್ಥಾನವನ್ನು ಕೊಟ್ಟಿರಲಿಲ್ಲ. ಸ್ನೇಹ, ವಿಶ್ವಾಸವನ್ನು ಸರಿಯಾಗಿ ಅರಿಯದೆ ಹೋದನೇನೋ ಎನ್ನಿಸುತ್ತದಾದರೂ.. ಎಷ್ಟೋ ಬಾರಿ ಅವಳ ಸ್ವಾಭಿಮಾನಕ್ಕೆ ಪೆಟ್ಟು ನೀಡುವಂತಹ ಘಟನೆಗಳು ನಡೆದಿದ್ದರೂ.. ಅಮರ್ ಅವಳನ್ನು ಹಗುರವಾಗಿ ಕಂಡದ್ದಿದ್ದರೂ.. ಅವಮಾನಗೊಳಿಸಿದ್ದರೂ ಸಂಭ್ರಮ ಮಾತ್ರ ಸ್ನೇಹಕ್ಕೆ ಬೆಲೆಕೊಟ್ಟು ಆತನಿಗೆ ಪ್ರತಿಬಾರಿಯೂ ಸ್ನೇಹಮಯಿಯಾಗುತ್ತಲೇ ಹೋಗುತ್ತಿದ್ದಳು. ಇಂತಹ ಸಂಭ್ರಮಳನ್ನು ಅಮರ್ ಗಿಂತ ಚೆನ್ನಾಗಿ ಅರ್ಥೈಸಿಕೊಂಡದ್ದು ರಾಮುವೇ. 


ರಾಮು ಮುಂದೆ ಓದುತ್ತೇನೆ ಎಂದಿದ್ದರೆ ಎಷ್ಟು ಬೇಕಾದರೂ ಓದುಸುತ್ತಿದ್ದ ಅಮರ್. ಆದರೆ, ನಾಟಕದ ಗೀಳಿಗೆ ಬಿದ್ದ ರಾಮು ಮುಂದೆ ಅಲ್ಲಿಂದಲೂ ಹೊರಟ. ಆತ ಮನೆ ಬಿಟ್ಟು ಬರಲು ಅದೂ ಒಂದು ರೀತಿಯಲ್ಲಿ ಕಾರಣವೆಂದರೂ ತಪ್ಪಾಗಲಾರದು.


ಆತನ ಮನಸ್ಸಿನಲ್ಲಿ ಅವನ ಗೆಳೆಯ ಮೈಲಾರಿಯ ಅಕ್ಕ ಮಂಗಳೆಯ ನೆನಪು ಮಾಸಿರಲಿಲ್ಲ. ಊರ ಗೌಡರ ಮಗ ಶಿವು ಹಾಗೂ ಮಂಗಳೆಯ ಪ್ರೇಮ ಪಯಣ ಎಲ್ಲರಿಗೂ ಗೊತ್ತಿದ್ದರೂ.. ಶಿವು ಅಪ್ಪನ ಮಾತಿಗೆ ಬೆಲೆಕೊಟ್ಟು ಪಕ್ಕದೂರಿನ ಜಮೀನ್ದಾರನ ಮಗಳೊಡನೆ ವಿವಾಹದಾಗ ಅಪವಾದಕ್ಕೆ, ಅವಮರ್ಯಾದೆಗೆ ಒಳಗಾದ ಮಂಗಳೆಯ ಶಾಶ್ವತ ಕಣ್ಮರೆಯನ್ನು ಶಿವು ಎಂದಿಗೂ ಮರೆಯುವಂತಿರಲಿಲ್ಲ.


ಗಂಡಿನ ಅಹಂ ಅನ್ನು ಎತ್ತಿ ತೋರಿಸುವಂತಹ ಈ ಘಟನೆಗಳು ಗಂಡು ಹುಡುಗನಾದರೂ ರಾಮುವಿನ ಮನಸ್ಸಿನಲ್ಲಿ ಹೇಗೆ ಅಚ್ಚಾಗಿದ್ದವೆಂದರೆ.. ತಾನೆಂದೂ ಈ ರೀತಿಯಲ್ಲಿ ಮಾಡಬಾರದೆಂದು ಅದಾಗಲೇ ನಿಶ್ಚಯಿಸಿಯಾಗಿತ್ತು. ಅಲ್ಲದೆ, ಸಲುಗೆ, ಸ್ನೇಹ ಜಾಸ್ತಿಯಾದಾಗ ಅವುಗಳ ಬೆಲೆ ಸರಿಯಾಗಿ ಗೊತ್ತಿಲ್ಲದಿದ್ದವರು ಜೊತೆಯಾದರೆ ಅದಕ್ಕೆ ಸಿಗುವ ಮೌಲ್ಯ ಎಷ್ಟು ಎಂಬುದನ್ನು ಸಹ ಆತ ಅರಿತಿದ್ದ. ಮನುಷ್ಯರ ನಡೆಗಳು ತಮ್ಮ ತಮ್ಮ ಅವಶ್ಯಕತೆ ಮುಗಿಯುವವರೆಗೆ ಒಂದು ರೀತಿ ಹಾಗೂ ಅವಶ್ಯಕತೆ ತೀರಿದ ನಂತರ ಒಂದು ರೀತಿ ಎಂಬುದು ಅವನ ಪುಟ್ಟ ಮನಸ್ಸಿಗೆ ಅರಿವಾಗಿತ್ತು. ವಯಸ್ಸಿಗೆ ಮೀರಿದ ಅರ್ಥೈಸಿಕೊಳ್ಳುವಿಕೆಯಿಂದ ರಾಮು ಒಂದು ರೀತಿಯ ಭಾವನಾತ್ಮಕ ಜೀವಿಯೂ ಹಾಗೂ ಪ್ರಬುದ್ಧನೂ ಆಗುತ್ತಾ ಬೆಳೆಯುತ್ತಾ ಹೋದ.


ನಾಟಕದ ಕಂಪನಿಯಲ್ಲಿ ಪುಟ್ಟ ಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದವನಿಗೆ ವೇದಿಕೆಯಲ್ಲಿ ನಟನೆಗೆ ಅವಕಾಶ ದೊರೆತು ಆತ ಪಳಗಿದ ನಟನಂತೆ ಭಾವಾಭಿನಯದಲ್ಲಿ ತಲ್ಲೀನನಾಗಿ ಹೋದ. ರಾಮಾಯಣದ ಲವನಾಗಿ ಹೋದವನಿಗೆ ಸೀತೆಯ ಪಾತ್ರದಲ್ಲಿ ನಟಿಸಿದ್ದ ಆಶಾದೇವಿ ತಾಯಿಯಂತೆಯೇ ಅಕ್ಕರೆ ತೋರಿದಳು. 


ಆಶಾದೇವಿಯ ಜೊತೆಗೆ ಅಕ್ಕನಂತಹ ಬಾಂಧವ್ಯ ಬೆಳೆಯುತ್ತಾ ಹೋದಾಗಲೇ ಆಕೆಯ ಬದುಕಿನ ದುರಂತಗಾಥೆಯೊಂದು ಈತನ ಮನಸ್ಸನ್ನು ಹೊಕ್ಕಾಗಿತ್ತು. ಅದೆಷ್ಟರ ಮಟ್ಟಿಗೆ ಎಂದರೆ.. ಆಕೆ ಆತನ ಬದುಕಿನ ಮತ್ತೊಂದು ಪ್ರೇರಣೆಯಾಗಿ ಬದಲಾಗಿ ಹೋಗಿದ್ದಳು.  


ಆಕೆ ಬದುಕಿದ್ದಾಗ ಒಂದು ರೀತಿಯ ಪ್ರೇರಣೆಯಾದರೆ ಆಕೆ ಸಾವು ರಾಮುವನ್ನು ಮತ್ತಷ್ಟು ವಿಚಲಿತಗೊಳಿಸಿತ್ತು. ಅದು ಆತನ ಮನಸ್ಸಿನಲ್ಲಿ ಅಚ್ಚಳಿಯದ ಛಾಯೆಯನ್ನು ಮೂಡಿಸಿಬಿಟ್ಟಿತ್ತು.  ಆಶಾದೇವಿಯ ಸಾವನ್ನು ಸಹ ಅರ್ಥಪೂರ್ಣವಾಗಿ ಕಂಡವನಿಗೆ ಬದುಕಿನ ಮತ್ತೊಂದು ಮಗುಲಲ್ಲಿ  ಅದು ಬೆಂಬಿಡದ ಕನಸೇ ಆಗಿ ಹೋಗಿತ್ತು.


ರಾಮು ನಟನೆಯಲ್ಲಿ ಎಷ್ಟು ಪಳಗಿದನೆಂದರೆ ಆತನಿಗೆ ಮುಂದೆ ಅವಕಾಶಗಳು ಅರಸಿ ಬಂದವು. ಸತ್ಯನ್ ಅವರ  ಗರಡಿಯಲ್ಲಿ ಆತ ಪ್ರತಿಭಾವಂತ ನಟ ಮಾತ್ರವಲ್ಲದೆ ಸಹ ನಿರ್ದೇಶಕನೂ ಆದ. ಈಗ ರಾಮು ವಿಜೇತ್ ಆಗಿ ಬದಲಾಗಿದ್ದ.


ಬದಲಾದ ವಿಜೇತನನ್ನು ಅಮರ್ ಹಾಗೂ ಸಂಭ್ರಮ ಕಂಡ ಬಗೆ ಹೇಗೆ..? ಆಶಾದೇವಿ ಹಾಗೂ ಮಂಗಳಾರಂತೂ ಅವನ ಪಾಲಿಗೆ ಇರಲಿಲ್ಲವಾದರೂ.. ಅವರನ್ನು ಎಲ್ಲರ ಪ್ರೇರಣೆಯನ್ನಾಗಿಸಿದ ಬಗೆ ಹೇಗೆ..? ಬಾಲ್ಯದಲ್ಲಿ ರಾಮು ಮನೆ ಬಿಟ್ಟು ಬಂದಿದ್ದಕ್ಕೆ ಪೂರ್ತಿ ಕಾರಣವೇನು..? ಮತ್ತೆ ಆತ ತನ್ನ ಮನೆಯವರನ್ನು ಭೇಟಿಯಾದನೇ..? ಅಷ್ಟಕ್ಕೂ ಆಶಾದೇವಿಯ ಬದುಕಿನ ದುರಂತಗಾಥೆ ಏನಿತ್ತು..? ಅವಳ ಸಾವಿಗೆ ಕಾರಣವೇನು..? ಎಲ್ಲದಕ್ಕೂ ಉತ್ತರ ತಿಳಿಯಲು ಮನಕಲಕುವ ಕಾದಂಬರಿಯನ್ನು ನೀವೇ ಓದಿ ನೋಡಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ