ಪುಸ್ತಕದ ಶೀರ್ಷಿಕೆ : ಕಪಿಲಿಪಿಸಾರ
ಲೇಖಕರು : ಡಾ. ಕೆ. ಎನ್. ಗಣೇಶಯ್ಯ
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಥಮ ಮುದ್ರಣ : 2009
ಐದನೆಯ ಮುದ್ರಣ : 2018 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 204
ಬೆಲೆ : 130 ರೂ.
ಕಪಿಲಿಪಿಸಾರ ಇದು ಡಾ. ಕೆ. ಎನ್ ಗಣೇಶಯ್ಯ ಅವರ ರೋಚಕ ಕಾದಂಬರಿ. ಶೀರ್ಷಿಕೆ ವಿಭಿನ್ನವಾಗಿರುವಂತೆಯೇ.. ಶೀರ್ಷಿಕೆ ಒಂದು ಮಟ್ಟಿನ ಕಥೆಯ ಸುಳಿವನ್ನು ಕೊಡುತ್ತದೆ ಎನ್ನಿಸಿತಾದರೂ ಡಿ-ಕೋಡ್ ಮಾಡುವುದು ಖಂಡಿತ ಸುಲಭವಿಲ್ಲ. ಇಲ್ಲಿ ಮಂಗಗಳು ಪ್ರಮುಖ ಪಾತ್ರ ವಹಿಸುತ್ತವೆಯಾದರೂ.. ಕಪಿಲಿಪಿಸಾರ ಎಂದರೆ ಇಲ್ಲಿ ಮಂಗಗಳಿಗೂ ಹಾಗೂ ಲಿಪಿಯವರೆಗೂ ವಿಕಾಸವಾದ ಮನುಷ್ಯನಿಗೂ ಏನಾದರೂ ನಂಟಿರಬಹುದಾ..! ಆ ಸಾಧ್ಯತೆಗಳನ್ನು ಇದು ತೆರೆದಿಡಬಹುದಾ..?! ಎಂದುಕೊಂಡೇ ಓದಲು ತೆರೆದ ಕಾದಂಬರಿ. ಇದು ಸುಧಾ ಪತ್ರಿಕೆಯಲ್ಲಿ ಧಾರಾವಾಹಿಯಾಗಿಯೂ ಪ್ರಕಟವಾಗಿದೆ.
ಲೇಖಕರೇ ಹೇಳುವಂತೆ ಇದು ಅವರ ಅನುಭವ ಹಾಗೂ ಹತ್ತಿರದಲ್ಲೇ ಕಂಡ ಕೆಲವು ಕುತೂಹಲಗಳ ಆಧಾರದ ಮೇಲೆ ಬೆಳೆದ ಕಾದಂಬರಿ. ಭಾರತದ ಸಸ್ಯರಾಶಿಯ ಬಗ್ಗೆ ಮಾಹಿತಿ ಖಜಾನೆಯೊಂದನ್ನು ತಯಾರಿಸುತ್ತಿದ್ದಾಗ ಪಾಶ್ಚಾತ್ಯ ದೇಶದ ಕಂಪನಿಯೊಂದಕ್ಕೆ ಕೆಲಸ ಮಾಡುತ್ತಿದ್ದ ಭಾರತೀಯರೇ ಆದ ಹಿರಿಯರೊಬ್ಬರು ಆ ಮಾಹಿತಿಯನ್ನು ಹಾಗೂ ಸಂಪೂರ್ಣ ಅಧಿಕಾರವನ್ನು, ಅಪಾರವಾದ ಬೆಲೆಗೆ ಕೊಳ್ಳುವ ಅಭಿಲಾಷೆ ವ್ಯಕ್ತಪಡಿಸಿದ್ದು ಲೇಖಕರಿಗೆ ಖುಷಿ ತಂದರೂ. ಅದರ ಬೆನ್ನಲ್ಲಿಯೇ ವಿದೇಶಿಯರು ಮಾಹಿತಿ ಖಜಾನೆಯ ವಾರಸುದಾರಿಕೆಗೆ ಭಾಗಿಯಾಗುವ ಕುತಂತ್ರ ತೋರಿದ್ದು ಗಾಬರಿಯನ್ನೂ ಹುಟ್ಟಿಸಿತ್ತು. ಕಾದಂಬರಿಯಲ್ಲಿ ಈ ಕಥಾಂದರವನ್ನು ಬೇರೆಯದ್ದೇ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ ಲೇಖಕರು.
ಲೇಖಕರ ಸಹಪಾಠಿಯೊಬ್ಬರು ನಡೆಸುತ್ತಿದ್ದ ಸಂಶೋಧನೆ ಮಂಗಗಳಲ್ಲೂ.. ತಾನು, ತನ್ನದು, ಸಾವು-ಜೀವ ಮತ್ತು ಸಾಮಾಜಿಕ ಒಳಿತು-ಕೆಡಕುಗಳ ಭಾವನೆಯ ಸಾಧ್ಯತೆಯನ್ನು ತೆರೆದಿಟ್ಟಾಗ.. ಅವುಗಳ ನಡವಳಿಕೆಯ ಅಂಶದ ಜೊತೆಗೆ ರಾಮಾಯಣದ ಹನುಮಂತ ಹಾಗೂ ವಾನರರ ಆಲೋಚನೆಯೂ ಈ ಕಥೆಯನ್ನು ಬೆಳೆಸಿವೆ.
ಹಾಗಿದ್ದರೆ.. ಇದು ರಾಮಾಯಣ ಕಾಲದ ಕಥೆಯಾ..? ಎಂದರೆ ಸಂಪೂರ್ಣವಾಗಿ ಅಲ್ಲ. ಆದರೆ, ರಾಮಾಯಣದಲ್ಲಿ ನಾವು ಕೇಳುವ ಸಂಜೀವಿನಿಯ ಉಲ್ಲೇಖ ಈ ಕಾದಂಬರಿಯ ಕುರಿತ ಓದಿನ ಕುತೂಹಲಕ್ಕೆ ಮತ್ತಷ್ಟು ಕುತೂಹಲ ಸೇರಿಸಿ ಓದಿಗೆ ವೇಗ ಪಡೆಯುವಂತೆ ಮಾಡುತ್ತದೆ.
ಈ ಕಾದಂಬರಿಯು 1991ರ ಕಾಲಘಟ್ಟದಿಂದ ನಾಗಾಗಳಂತೆ ಕಾಣುವ ತಮ್ಮನ್ನು ತಾವೇ ಅಶ್ವಿನಿಗಳು ಎಂದು ಕರೆದುಕೊಳ್ಳುವ ನಿಗೂಢ ಗುಂಪಿನ ಸದಸ್ಯರಿಂದ ತೆರೆದುಕೊಳ್ಳುತ್ತದೆ. ಅಶ್ವಿನಿಗಳ ಗುಂಪನ್ನು ಸೇರಿಕೊಳ್ಳಲು ಹೋದ ಜರೋಠನಿಗೆ ಅದು ಅಷ್ಟು ಸುಲಭವಿರಲಿಲ್ಲ. ಅಪರಿಚಿತರನ್ನು ತಮ್ಮ ಗುಂಪಿನೊಳಗೆ ಅಶ್ವಿನಿಗಳು ಅಷ್ಟು ಸುಲಭವಾಗಿ ಸೇರಿಸಿಕೊಳ್ಳುತ್ತಲೂ ಇರಲಿಲ್ಲ. ಇಷ್ಟಕ್ಕೂ ಜರೋಠ ಅಶ್ವಿನಿಗಳ ಗುಂಪಿಗೆ ಸೇರಲು ಬಯಸುವುದೇಕೆ..? ಅಶ್ವಿನಿಗಳ ರಹಸ್ಯ ವಿದ್ಯೆಯನ್ನು ಕಲಿಯುವ ಸೆಳೆತಕ್ಕೆ ಆತ ಸಿಲುಕಿದ್ದನೇ..? ಆತನಿಗೆ ಉಂಟಾದ ಪರಿಸ್ಥಿತಿ ಏನು..?
ಇದಾದ ನಂತರದ ಕಾಲಘಟ್ಟದಲ್ಲಿ ಸಂಶೋಧನೆಯಲ್ಲಿ ತೊಡಗಿದ್ದ ಡಾ|| ರಾಣಾ ಅವರು ತಮ್ಮ ಪತ್ನಿ ಸೀಮಾ ಅವರಿಗೆ ತಾವು ಕಾಣೆಯಾಗುವ ಮುನ್ನ ಕಳುಹಿಸಿದ ಮೆಸೇಜ್ ನಿಂದ ಅವರನ್ನು ಪತ್ತೆಹಚ್ಚಲು ಹೊರಡುವ ಸೀಮಾಳಿಗೆ ಜೀವನ್ ಜೊತೆಯಾಗುತ್ತಾರೆ. ಇಬ್ಬರೂ ಸೇರಿ ಡಾ|| ರಾಣಾ ಅವರಿಗೆ ನೆರವು ಕೊಡುತ್ತಿದ್ದ ಸಂಸ್ಥೆ ಯಾವುದು ಹಾಗೂ ಅವರು ಯಾವುದರ ಕುರಿತಾಗಿ ಸಂಶೋಧನೆ ನಡೆಸುತ್ತಿದ್ದರು ಎಂಬುದರ ಹಿಂದೆ ಬಿದ್ದಾಗ ಅವರು ಸೇರುವುದು ಬೆಂಗಳೂರಿನ ಅಶೋಕ ವೃಕ್ಷ ಎಂಬ ಸಂಸ್ಥೆಗೆ. ಅಸ್ಸಾಂ ಹಾಗೂ ಅರುಣಾಚಲ ಪ್ರದೇಶದ ಕಾಡುಗಳಲ್ಲಿ ಕೆಲಸ ಮಾಡುತ್ತಿದ್ದ ರಾಣಾ ಈಗ ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ಅಲ್ಲಿನ ಮುಖ್ಯಸ್ಥ ಡಾಕ್ಟರ್ ಬಾಲ್ಡ್ ವಿನ್ ಅವರಿಗೆ ತಿಳಿಸಿದಾಗ ಅವರಲ್ಲಿ ಇವರ ಕುರಿತು ಸಂಶಯ. ಆದರೂ.. ಸೀಮಾಳನ್ನು ಅವರ ಪತ್ನಿ ಎಂದು ಖಚಿತಪಡಿಸಿಕೊಂಡ ನಂತರ ರಾಣಾ ಕೆಲಸ ಮಾಡುತ್ತಿದ್ದ ಪ್ರಾಜೆಕ್ಟ್ 'ಮಂಗರಾಜ' ಕುರಿತ ಮಾಹಿತಿ ನೀಡುತ್ತಾರೆ.
ರಾಣಾ ಅವರ ಪ್ರಾಜೆಕ್ಟ್ ಗೆ ಸ್ಪಾನ್ಸರ್ ಆಗಿದ್ದ ಕಂಪನಿಯ ಮಾಹಿತಿ ತಿಳಿದುಕೊಳ್ಳಲು ಹೊರಟಾಗ ಅಮೆರಿಕಾದ ಆ ಕಂಪನಿ ಮತ್ತೆರಡು ಪ್ರಾಜೆಕ್ಟ್ ಗಳಿಗೆ ಅನುದಾನ ಕೊಟ್ಟಿರುವುದು ತಿಳಿಯುತ್ತದೆ. ಅವುಗಳು ಮೀರಾ ಅವರ 'ಮಾರುತಿ' ಹಾಗೂ ಎಸ್. ಎನ್ ಭಟ್ ಅವರ 'ಮಂಗರಸ'.
ಅಶೋಕ ವೃಕ್ಷದಲ್ಲಿ ಆ ವರ್ಷದಲ್ಲಿ ಮೂವತ್ತಕ್ಕೂ ಹೆಚ್ಚು ಯೋಜನೆಗಳಿದ್ದು.. 'ಮಾರುತಿ', 'ಮಂಗರಾಜ' ಹಾಗೂ 'ಮಂಗರಸ' ಎಂಬ ಸಮಾನಾರ್ಥ ಅವರಿಗೂ ಅಚ್ಚರಿ ಹುಟ್ಟಿಸಿತ್ತು.
ಡಾಕ್ಟರ್ ಎಸ್. ಎನ್ ಭಟ್ ಅವರ 'ಮಂಗರಸ' ಎನ್ನುವುದು ಹಳೆಯ ಗ್ರಂಥದ ಕುರಿತಾದ ಹೆಸರು. ಅವರು ಆಯುರ್ವೇದ ವೈದ್ಯರು. ಒಂದು ಗ್ರಂಥದಲ್ಲಿನ ಔಷಧಿ ಗಿಡಗಳ ಪಟ್ಟಿ ಮಾಡುವುದರ ಬಗ್ಗೆ ಈ ಸಂಸ್ಥೆಯ ಮೂಲಕ ನೆರವು ಪಡೆದಿದ್ದರು.
ರಾಣಾ ಅವರ ಸಂಶೋಧನೆ ಔಷಧಿ ಗಿಡಗಳ ಬಗ್ಗೆ. ಡಾ|| ಭಟ್ ಅವರ ಸಂಶೋಧನೆಯೂ ಔಷಧಿ ಗಿಡಗಳ ಬಗ್ಗೆ. ಹಾಗಿದ್ದಲ್ಲಿ ಮೂರನೇ ಯೋಜನೆ 'ಮಾರುತಿ'..?
ಮೀರಾ ಅವರ 'ಮಾರುತಿ'ಗೆ ನೀಡಿರುವ ಅನುದಾನ ಅಂಡಮಾನ್ ನಲ್ಲಿ ಜಾರವಾ ಜನಾಂಗದ ಜೀವನ ರೀತಿಯ ಬಗ್ಗೆ ಅಧ್ಯಯನ ಕೈಗೊಳ್ಳಲು ಆಗಿತ್ತು.
ರಾಣಾ ಅವರ ಸಂಶೋಧನೆ ಕೇವಲ ಔಷಧಿ ಗಿಡಗಳ ಬಗ್ಗೆ ಮಾತ್ರವಾಗಿರಲಿಲ್ಲ. ಅದರಲ್ಲಿ ಮಂಗಗಳು ಪ್ರಮುಖ ಪಾತ್ರ ವಹಿಸಿದ್ದು ಸೀಮಾಳಿಗೆ ಗೊತ್ತಿದ್ದ ವಿಷಯ.
ರಾಣಾ ಅವರು ಕಾಣೆಯಾಗಿರುವ ವಿಷಯ ಅನುದಾನ ನೀಡಿದ್ದ ಸಂಸ್ಥೆಯ ಮುಖ್ಯಸ್ಥ ಪ್ರೈಸ್ ವಾರೆನ್ ಗೆ ತಲುಪಿತ್ತು. ಡಾಕ್ಟರ್ ಮೀರಾ ಸಹಾ ಬಾಲ್ಡ್ ವಿನ್ ಅವರ ಬದಲಾಗಿ ಪ್ರೈಸ್ ವಾರೆನ್ ಅವರ ಸಂಪರ್ಕದಲ್ಲಿದ್ದರು. ಆಕೆ ಹಾಗೂ ಭಟ್ ಇಬ್ಬರನ್ನೂ ಅಶೋಕ ವೃಕ್ಷಕ್ಕೆ ಕರೆಸಿಕೊಳ್ಳುವ ಬಾಲ್ಡ್ ವಿನ್ ಅವರ ಪ್ರಯತ್ನ ಏನಾಯಿತು..?
ಅಂಡಮಾನ್ ನಲ್ಲಿ ಮೀರಾ ಅವರು ಮಾಡುತ್ತಿದ್ದ ಸಂಶೋಧನೆಯನ್ನು ಬಿಟ್ಟು ಆಕೆ ಹಿಂದೆ ಬಂದರೇ..? ಮೀರಾ ಅವರು ತನ್ನ ಗೆಳೆಯ ತಂಗರಾಜನ್ ಗೆ ಕಳುಹಿಸಿದ ಚಿತ್ರವೇ ಮುಖಪುಟದಲ್ಲಿರುವ ಚಿತ್ರ. ಚಿತ್ರದ ಡಿ-ಕೋಡಿಂಗ್ ಏನಿತ್ತು..? ಆದರೆ, ಈ ಚಿತ್ರ ಹಾಗೂ ವಿಚಾರ ಪತ್ರಿಕೆಯೊಂದರಲ್ಲಿ ಪ್ರಕಟವಾದ ಮರುದಿನವೇ ತಂಗರಾಜನ್ ಕೊಲೆಯಾಗಿದ್ದು ಏಕೆ..? ಇದರ ಹಿಂದಿನ ಕೈವಾಡ ಯಾರದ್ದು..? ಮೀರಾಳಿಗೆ ಇದರಿಂದ ಆದ ತೊಂದರೆಗಳೇನು..?
ಖಗೇಂದ್ರಮಣಿ ದರ್ಪಣ ಕ್ರಿಸ್ತಶಕ 1340ರ ಸುಮಾರಿನಲ್ಲಿ ಮಂಗರಸ ಎಂಬ ರಾಜ ಬರೆದ ಒಂದು ವಿಷ ವೈದ್ಯಶಾಸ್ತ್ರ. ಅದರ ಮೂಲ ಪ್ರತಿ ಎಲ್ಲಿತ್ತು .? ಅದರ ಮೂಲ ಪ್ರತಿಗೆ ಅಷ್ಟು ಪ್ರಾಮುಖ್ಯತೆ ನೀಡಿದ್ದು ಏಕೆ ಹಾಗೂ ಯಾರು..? ಇದಕ್ಕೂ ಅಶ್ವಿನಿಗಳಿಗೂ ಇರುವ ಸಂಬಂಧವೇನು..?
ರಾಮಾಯಣದಲ್ಲಿ ಬರುವ ಸಂಜೀವಿನಿಗೂ ಇಲ್ಲಿನ ವೈದ್ಯಶಾಸ್ತ್ರಕ್ಕೂ ಇರುವ ಸಂಬಂಧವೇನು ಹಾಗೂ ರಾಮಭಕ್ತನಾದ ಆಂಜನೇಯ ಸಾಗರವನ್ನು ದಾಟಿ ಅಂಡಮಾನ್ ಸೇರಿದ್ದು ಏಕೆ..?
ಸಂಜೀವಿನಿಯ ಕುರಿತ ರಹಸ್ಯ ಬಯಲಾಯಿತೇ..? ಕಾದಂಬರಿಯ ಆರಂಭದಲ್ಲಿ ಬರುವ ಜರೋಠ ಇಲ್ಲಿ ಯಾರಿಗೆ ಸಂಬಂಧಿಸಿದ ವ್ಯಕ್ತಿ..? ರಾಣಾ ಕಾಣೆಯ ಹಿಂದಿನ ರಹಸ್ಯವೇನು..? ಡಾ|| ರಾಣಾ ಮತ್ತೆ ಪತ್ತೆಯಾದರೇ..?
ವಿಜ್ಞಾನ, ಇತಿಹಾಸ, ಪುರಾಣ, ರೋಚಕತೆ ಹೀಗೆ ಎಲ್ಲವೂ ಮಿಳಿತವಾದ ಕಾದಂಬರಿಯ ಓದು. ವಿಭಿನ್ನ ಆಲೋಚನೆಯ ಮಾರ್ಗವನ್ನು ತೆರೆದಿಟ್ಟಂತೆಯೇ.. ಇದರ ಅಂತ್ಯವೂ ಮಾರ್ಮಿಕವಾಗಿದ್ದು, ಅಂತ್ಯದಿಂದ ಹೆಚ್ಚು ಇಷ್ಟವಾದ ಕಾದಂಬರಿ ಇದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ