ಶನಿವಾರ, ಏಪ್ರಿಲ್ 25, 2026

ಉದಯದೆಡೆಗೆ (ಪುಸ್ತಕ ಯಾನ - 347)



ಪುಸ್ತಕದ ಶೀರ್ಷಿಕೆ : ಉದಯದೆಡೆಗೆ

ಲೇಖಕರು : ರೇಖಾ ಕಾಖಂಡಕಿ 

ಪ್ರಕಾಶಕರು : ಪ್ರಕಾಶ ಸಾಹಿತ್ಯ

ಪ್ರಥಮ ಮುದ್ರಣ : 1986

ಪುಟಗಳು : 186


'ಉದಯದೆಡೆಗೆ' ರೇಖಾ ಕಾಖಂಡಕಿ ಅವರ ಎಂಟನೆಯ ಕೃತಿ.  ಉದಯದೆಡೆಗೆ ಎಂಬ ಶೀರ್ಷಿಕೆ ಕಂಡಾಗ ಒಂದು ಹೊಳವು ಮೂಡಿತು. ಕತ್ತಲಿನಿಂದ ಬೆಳಕಿನೆಡೆಗೆ ಸಾಗುವಾಗ ಮಾತ್ರವೇ ಉದಯದೆಡೆಗೆ.. ಎಂದು ಹೇಳುವಂತಹದ್ದು. ಹಾಗೆಂದು, ಕಥೆ ಇಲ್ಲಿ ಶುರುವಾಗುವುದು ಕತ್ತಲಿನಿಂದಲ್ಲ.. ಬದಲಾಗಿ ಬೆಳಕಿನಿಂದಲೇ.. ಉದಯದಿಂದ ಅಸ್ತಮಾನಕ್ಕೆ ಸಾಗಿದ ಕುಟುಂಬವೊಂದು ಮತ್ತೆ ಉದಯದತ್ತ ಸಾಗುವ ಪರಿ ಇಲ್ಲಿದೆ.  ಮನುಷ್ಯ ಅಥವಾ ಕುಟುಂಬ ಯಾವುದಾದರೂ ಬೆಳಕಿನತ್ತ ಹೆಜ್ಜೆ ಹಾಕಲು ಮೊದಲಿಗೆ ಅದಕ್ಕೆ ತಕ್ಕದಾದ ಹಿರಿಮೆ ಹಾಗೂ ಘನತೆಗಳ ಅರಿವಿರಬೇಕು. ರಕ್ತಗತವಾದ ಅಥವಾ ರೂಢಿಗತವಾದ ಸಂಸ್ಕಾರವೂ ಇಲ್ಲಿ ಬಹು ಮುಖ್ಯವಾದ ಪಾತ್ರ ವಹಿಸುತ್ತದೆ. 


ಇಂದು ನಾವು ಹಳ್ಳಿಗಳಲ್ಲಿಯೂ ಗಮನಿಸುವುದಾದರೆ ತಮ್ಮ ಹೆಸರಿನ ಜೊತೆಗೆ ಅವರ ಕುಟುಂಬದ ಹೆಸರು ತಳುಕು ಹಾಕಿಕೊಂಡಿರುವುದು ಅಥವಾ ಇಂಥವರ ಮೊಮ್ಮಗ ಅಥವಾ ಇಂತಹವರ ಮನೆತನದವರು ಎಂದು ಹೇಳುವ ರೂಢಿಯನ್ನು ಕಾಣಬಹುದಾಗಿದೆ. ಇದಕ್ಕೆ ಕಾರಣವಾಗುವುದು ಆಯಾ ಮನೆತನ ಅಥವಾ ಆ ತಲೆಮಾರಿನ ವ್ಯಕ್ತಿಗಳು ರೂಢಿಸಿಕೊಂಡು ಬಂದ ರೀತಿ - ರಿವಾಜುಗಳು ಹಾಗೂ ಅದರಿಂದಲೇ ಗಳಿಸಿಕೊಂಡು ಬಂದ ಗೌರವ. ಹಣವಿದ್ದ ಮಾತ್ರಕ್ಕೆ ಇಂತಹ ಗೌರವವನ್ನು ನಿರೀಕ್ಷಿಸಲು ಅಥವಾ ಅಪೇಕ್ಷಿಸಲು ಅಸಾಧ್ಯ. ಬದಲಾಗಿ, ಅವರು ಜನಕ್ಕೆ ಮಾಡಿರುವ ಉಪಕಾರಗಳು ಹಾಗೂ ಊರಿಗೆ ಕೊಡುಗೆ ನೀಡಿರುವ ರೀತಿ ಗಮನಾರ್ಹವಾದುದು. ಬಾಳಿದರೆ ಹೀಗೆ ಬಾಳಬೇಕು ಎನ್ನುವುದನ್ನು ತಲೆಮಾರಿನಿಂದ ತಲೆಮಾರಿಗೆ ಮನೆಯಲ್ಲಿ ಹಿರಿಯರು ಹಾಗೂ ಹೆಣ್ಣು ಮಕ್ಕಳು ಅಥವಾ ತಾಯಂದಿರು ಮಾರ್ಗದರ್ಶನ ನೀಡಿದರೂ.. ಕೆಲವೊಮ್ಮೆ ಅಂತಹ ರೂಢಿ ತಪ್ಪಿಯೇ ಹೋಗುವುದು  ದುರದೃಷ್ಟಕರ ಸಂಗತಿ. ಸಹವಾಸದೋಷವೂ ಇದಕ್ಕೆ ಕಾರಣವಾಗಬಹುದು. ಇಲ್ಲಿಯೂ ಅಂತಹ ಹಲವಾರು ಘಟನೆಗಳ ಸರಮಾಲೆಯನ್ನು ಕಾಣಬಹುದಾಗಿದೆ.


ಇದು ಯೋಗಪುರದ ಪಂತರ ಮನೆತನದ ಕಥೆ. ಯೋಗಪುರ ಅಥವಾ ಯೋಗಳ್ಳಿಯ ಉಗಮದ ಕಥೆಯಿಂದ ಶುರುವಾಗುವ ಈ ಕಾದಂಬರಿ ನಂತರ ಪ್ರಮುಖವಾಗಿ ಸೀತಾರಾಮ ಪಂತರ ಮನೆತನದ ಹಿರಿಮೆಯನ್ನು ಹೇಳುತ್ತಾ ಸಾಗುತ್ತದೆ. ದೊಡ್ಡ ಕುಟುಂಬದಲ್ಲಿ ಹುಟ್ಟಿದರೂ.. ಸರಳವಾಗಿದ್ದ ಅವರ ಬದುಕು ಹಾಗೂ ಅವರ ವೈದ್ಯಕೀಯ ಚಿಕಿತ್ಸೆಯಿಂದ ವಿಶಿಷ್ಟ ಸ್ಥಾನ  ಪಡೆದಿದ್ದರು. ಮನೆಯಲ್ಲಿನ ದೇವತಾ ಕಾರ್ಯಗಳು, ಯೋಗಸಿದ್ಧಿಗಳ ವಾತಾವರಣ ಅವರ ವ್ಯಕ್ತಿತ್ವವನ್ನು ರೂಪುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಸೀತಕ್ಕ ತನ್ನ ಮಗನಿಗೆ ತನ್ನ ಅಣ್ಣನ ಮಗಳಾದ ಸುಶೀಲೆಯನ್ನೇ ಸೊಸೆಯನ್ನಾಗಿ ತಂದು ಸಂಭ್ರಮಪಟ್ಟಿದ್ದರು. ಯೋಗಪುರದ ಪಂತರ ಮನೆಯ ಬೆಳಕಿನ ಕಿರಣವಾಗಿ ಉದಯಿಸಿದ್ದು ರಾಘವ.  ಇದರ ಜೊತೆಜೊತೆಗೆ ಅಭಿವೃದ್ಧಿ ಹೊಂದಿದ ಹಾಗೂ ಉಪಕಾರ ಮಾಡುತ್ತಿದ್ದ ಪಂತರ ಮನೆತನದ ಸಮಗ್ರ ಚಿತ್ರಣವನ್ನು ಕಾಣಬಹುದಾಗಿದೆ.


ಇವರ ಉದಾತ್ತತೆಗೆ ಒಂದು ಉದಾಹರಣೆ ಹೇಳುವುದಾದರೆ.. ಹಳ್ಳಿಗೆ ಬಂದ ಬರಗಾಲದ ಭೀಕರವಾದ ಸಂದರ್ಭ. ಒಂದು ಹನಿಯೂ ಮಳೆ ಇಲ್ಲ. ಎಲ್ಲೆಲ್ಲೂ ಹಸಿವೆಯ ಆಕ್ರಂದನವೇ ತುಂಬಿದ ಸಂದರ್ಭದಲ್ಲಿ ಕೇವಲ ವೈದ್ಯಕೀಯ ವಿದ್ಯೆಯ ಮೂಲಕ ಮಾತ್ರವಲ್ಲದೆ.. ತಮ್ಮ ವಾಡೆಯಲ್ಲಿ ಇದ್ದ ಎಂಟು ಹಗೆವಿನಲ್ಲಿದ್ದ ಜೋಳ ಹಂಚಿಬಿಟ್ಟಿದ್ದರು. ಇದು ಅವರ ನಿಸ್ವಾರ್ಥ ಸೇವೆಗೆ ಹಿಡಿಯಬಹುದಾದ ಕೈಗನ್ನಡಿ. ಇದಕ್ಕೆ ಸಂಪೂರ್ಣ ಪಂತರ ಕುಟುಂಬದ ಸಹಕಾರವೂ ಇತ್ತು.


ರಾಘಣ್ಣ ಪಂತರ ನಂತರ ಎರಡು ತಲೆಮಾರಿನ ನಂತರದ ಕಥೆ ತೆರೆದುಕೊಳ್ಳುತ್ತದೆ. 


ಈಗ ವಾಡೆಯ ಅಳು ಮಕ್ಕಳಿಗೆ ತಾಯಿಯಂತಿದ್ದವರು ಭಾಗಕ್ಕ. ಆಕೆಗೆ ಬೆಂಗಾವಲಾಗಿ ನಿಂತ ವ್ಯಕ್ತಿ ಕಾರಕೂನ ಗೋಪಾಲರಾಯರು. ಭಾಗಕ್ಕನ ಮಗನೇ ಶಾಮಣ್ಣ. ಶಾಮಣ್ಣನೂ ಥೇಟ್ ಆಗಿನ ಪಂತರಂತೆಯೇ.. ಎಲ್ಲಾ ರೀತಿ - ರಿವಾಜು, ಸಂಪ್ರದಾಯಗಳನ್ನು ರೂಢಿಸಿಕೊಂಡು ಬಂದಿದ್ದವರು. ಅವರಿಗೆ ಶಾಮಣ್ಣ ಮಾತ್ರವಲ್ಲದೆ ಸತ್ಯಭಾಮೆ ಎಂಬ ಮಗಳು ಇದ್ದಳು. ಆದರೆ, ಆಕೆಗೆ ಈಗ ವಿವಾಹವಾಗಿತ್ತು. ಶಾಮಣ್ಣನ ವಿವಾಹ ಪಾರ್ವತಿಯ ಜೊತೆಗೆ ನಡೆಯಿತು.  ಪಾರ್ವತಿಯ ತಂದೆ ಗೋವಿಂದಪ್ಪ ಯಾವ ಕುಂದು - ಕೊರತೆಯೂ ಇಲ್ಲದಂತೆ ತಮ್ಮ ಇದ್ದೊಬ್ಬ ಮಗಳನ್ನು ಸಂತೋಷದಿಂದ ಧಾರೆ ಎರೆದು ಕೊಟ್ಟಿದ್ದರು.


ಚಂದವಾಗಿ ಬದುಕಬಹುದಾಗಿದ್ದ ಪಾರ್ವತಿಯ ಬದುಕು ಅವಳದಲ್ಲದ ತಪ್ಪಿಗೆ ಬಲಿಯಾಗಿ ಹೋಗಿತ್ತು. ತನ್ನ ಮೇಲೆ ನಡೆದ ಅತ್ಯಾಚಾರವನ್ನು ಯಾರ ಬಳಿಯೂ ಹಂಚಿಕೊಳ್ಳದ ಅವಳು ವಿವಾಹದ ನಂತರ ತಾನು ಗರ್ಭಿಣಿ ಎಂಬ  ಸತ್ಯವನ್ನು ತೆರೆದಿಟ್ಟಿದ್ದಳು. ಭಾಗಕ್ಕ ಈ ರಹಸ್ಯವನ್ನು ಹೊರಗೆಡವದೆ,  ಮಗಳಿಗೂ ಸಹ ಇದನ್ನು ಹೇಳದೆ ಮುಚ್ಚಿಟ್ಟು.. ಅಂತಃಕರುಣಿಯಂತೆ ಆಕೆಯ ತಂದೆಯನ್ನು ಕರೆದು ಗೌರವಯುತವಾಗಿಯೇ ಆಕೆಯನ್ನು ತವರಿಗೆ ಕಳುಹಿಸಿದ್ದರು.  ಈ ಸತ್ಯ ಶಾಮಣ್ಣ ಹಾಗೂ ಭಾಗಕ್ಕನ ಹೊರತಾಗಿ ಬೇರಾರಿಗೂ  ತಿಳಿಯಲಿಲ್ಲ. ಹಾಗೆಂದು ಯಾರದ್ದೋ ಮಗುವನ್ನು ತಮ್ಮ ಮನೆತನದ ಕುಡಿಯನ್ನಾಗಿ ಪೋಷಿಸಲು ಅವರು ಸಿದ್ಧವಿರಲಿಲ್ಲ. ಈ ಕೊರಗಲ್ಲಿಯೇ ಪಾರ್ವತಿ ಕಣ್ಣು ಮುಚ್ಚಿದಳು. ಮಗು ಆಕೆಯ ತವರಲ್ಲಿಯೇ ಉಳಿಯಿತು.


ಶಾಮಣ್ಣನ ವಿವಾಹ ಸಾವಿತ್ರಿಯೊಂದಿಗೆ ನಡೆದು ಅವರಿಗೆ ಪುತ್ರೋತ್ಸವವಾಯಿತು. ಆದರೆ, ಶಾಮಣ್ಣ ನದಿಯಲ್ಲಿ ಈಜಲು ಹೋಗಿ ದುರ್ಘಟನೆಗೀಡಾಗಿ ಬಲಿಯಾದ. ಮಗು ವೆಂಕಣ್ಣ ಅಜ್ಜಿ ಹಾಗೂ ತಾಯಿಯ ಮಮತೆಯ ಜೊತೆಗೆ ಪಂತರ ಮನೆತನದ ಹಿರಿಮೆಯನ್ನು ತಿಳಿದುಕೊಳ್ಳುತ್ತಾ ಅದಕ್ಕೆ ತಕ್ಕಂತೆ  ವ್ಯಕ್ತಿತ್ವವನ್ನು ರೂಪುಗೊಳಿಸಿಕೊಳ್ಳಲು ಶುರು ಮಾಡಿದ.


ಮುಂದೆ ಭಾಗಕ್ಕನೂ ಕಾಲವಾದ ನಂತರ ಅದೇ ಕಾಲಕ್ಕೆ ಕಾಯುತ್ತಿದ್ದನೇನೋ ಎಂಬಂತೆ ಪಾರ್ವತಿಯ ಸೋದರ ಮಾವ ಹಾಗೂ ಆಕೆಯ ಅತ್ಯಾಚಾರಕ್ಕೆ ಕಾರಣನಾದ ರಾಮಣ್ಣ ಪಾರ್ವತಿಯ ಮಗ ಜಗಣ್ಣನನ್ನು ತಂದು ವಾಡೆಗೆ ಸೇರಿಸುವಲ್ಲಿ ಸಫಲನಾದ. ಸಾವಿತ್ರಿ ಇದಾವುದೂ ಗೊತ್ತಿಲ್ಲದ ನಿಷ್ಕಲ್ಮಶ ಹೆಣ್ಣುಮಗಳು. ತನ್ನ ಮಗ ವೆಂಕಣ್ಣನಂತೆಯೇ ಎಂದು ಅದಕ್ಕಿಂತ ಹೆಚ್ಚಾಗಿ ತನ್ನ ಹಿರಿಯ ಮಗನಂತೆ ಜಗಣ್ಣನನ್ನು ಪಾಲಿಸುತ್ತಾ ಹೋದಳು.


ರಾಮಣ್ಣನ ಕುಮ್ಮಕ್ಕು ಹಾಗೂ ಆತನ ದುರ್ಬುದ್ಧಿಯ ದೆಸೆಯಿಂದ ಜಗಣ್ಣ ದಿನೇ ದಿನೇ ದುಷ್ಟನಾಗುತ್ತಲೇ ಹೋದ. ಅಲ್ಲದೆ, ಸಕಲ ದುರ್ಗುಣಗಳನ್ನು ಬೆಳೆಸಿಕೊಂಡು ಸಾವಿತ್ರಿಗೆ ತಿಳಿಯದಂತೆ ಮೋಸ ಮಾಡುತ್ತಲೇ ಹೋದರು. ಕಾರಕೂನಿಕೆಯ ಕಾಲವೂ ಬದಲಾಗಿತ್ತು. ಅಲ್ಲಿಯೂ ಇವರಿಗೆ ಮೋಸವೇ ಆಗುತ್ತಿತ್ತು. ವೆಂಕಣ್ಣನಿಗೆ ಜಗಣ್ಣನ ಬಗ್ಗೆ ತಿಳಿದರೂ ಮಾತನಾಡಲಾಗದ ಪರಿಸ್ಥಿತಿ.


ಹೀಗೆ ಪಂತರ ಮನೆತನ ಉದಯದಿಂದ ಅಸ್ತಮಾನದೆಡೆಗೆ ಸಾಗುತ್ತಲೇ ಹೋಯಿತು. ಮುಂದೆ ಜಗ್ಗಣ್ಣನಿಗೆ ರುಕುಮಾ ಜೊತೆಗೆ ವಿವಾಹವಾಯಿತು. ಪಂತರ ಮನೆತನಕ್ಕೆ ತಕ್ಕ ಸೊಸೆ. ಆದರೆ, ಅವರ ಪಾಲಿಗೆ ಅವರ ಕೂಸುಗಳು ಉಳಿಯಲೇ ಇಲ್ಲ. ಜಗಣ್ಣನ ದುರ್ಗುಣಗಳು ಹೆಚ್ಚುತ್ತಲೇ ಹೋದವು. ವೆಂಕಣ್ಣನಿಗೆ ಸತ್ಯಭಾಮಳ ಮಗಳು ಶಾಂತನೊಂದಿಗೆ ವಿವಾಹವಾಗಿತ್ತು. ಆದರೆ, ಶಾಂತಳ ಸಾವು ಹಾಗು ಅಣ್ಣನ ನಡುವೆ ನಡೆದ ಘಟನೆಗಳು ಆತನನ್ನು ಜರ್ಜರಿತಗೊಳಿಸಿ ಮಗ ಸೀತಾರಾಮುವಿನೊಂದಿಗೆ ಆತ ಊರು ಬಿಟ್ಟೇ ಹೊರಟ.


ಕೆಟ್ಟತನದ ವಿಜೃಂಭಣೆ ಎಷ್ಟು ದಿನ ಇರಲು ಸಾಧ್ಯ..? ಮತ್ತೆ ಪಂತರ ಮನೆತನ ಹಾಗೂ ಯೋಗಪುರ ಉದಯದೆಡೆಗೆ ಸಾಗಿತೇ ಅಥವಾ ಆ ಕನಸು ಹಾಗೆಯೇ ಉಳಿದು ಹೋಯಿತೇ..? ನೀವೇ ಓದಿ ನೋಡಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ