ಪುಸ್ತಕದ ಶೀರ್ಷಿಕೆ : ಬಂಗಾರದ ಕಿಡಿ
ಲೇಖಕರು : ಹೆಚ್. ಜಿ. ರಾಧಾದೇವಿ
ಪ್ರಕಾಶಕರು : ಶ್ರೀ ಲಕ್ಷ್ಮೀವೆಂಕಟೇಶ್ವರ ಪ್ರಕಾಶನ
ಪ್ರಥಮ ಮುದ್ರಣ :1996
ಎರಡನೇ ಮುದ್ರಣ : 2018 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 168
ಬೆಲೆ : 180 ರೂ.
ಹೆಚ್. ಜಿ. ರಾಧಾದೇವಿಯವರ 100 ನೇ ಕೃತಿ ಎಂಬ ವಿಶೇಷತೆ ಈ ಕಾದಂಬರಿಯದ್ದು. ಇದು ಕರ್ಮವೀರದಲ್ಲಿ ಪ್ರಕಟಿತವಾಗಿತ್ತು. ಈ ಕಾದಂಬರಿಯಲ್ಲಿ ಮುನ್ನುಡಿ ಕೂಡಾ ವಿಶೇಷವಾಗಿ ಮೂಡಿಬಂದಿದೆ. ನೂರು ಕಾದಂಬರಿಯ ನಂತರ ರಾಧಾದೇವಿಯವರ ಫೋಟೋ ನೋಡುವ ಭಾಗ್ಯ ಅಭಿಮಾನಿಗಳಿಗೆ ಸಿಕ್ಕಿದ್ದು. ಜೊತೆಗೆ ರಾಧಾದೇವಿಯವರ ವೈಯಕ್ತಿಕ ವಿಚಾರಗಳನ್ನು ಸಹಾ ಮುನ್ನುಡಿಯಲ್ಲಿ ಕಾಣಬಹುದಾಗಿದೆ. ಇದೇ ಸಮಯದಲ್ಲಿ ರಾಧಾದೇವಿಯವರಿಗೆ ಅತ್ತಿಮಬ್ಬೆ ಪ್ರಶಸ್ತಿ ಬಂದದ್ದನ್ನೂ ಇಲ್ಲಿ ಸ್ಮರಿಸಬಹುದು.
ಒಲವಿನ ಪೂಜೆ, ಅನುರಾಗದ ಅಂತಃಪುರ ಕಾದಂಬರಿಗಳ ನಂತರ ವೈಯಕ್ತಿಕವಾಗಿ ನನಗಿಷ್ಟವಾದ ರಾಧಾದೇವಿಯವರ ಕಾದಂಬರಿ ಇದು. ಇಲ್ಲಿ ನಾಯಕಿಯ ಗುಣದ ಜೊತೆಗೆ ಕಥಾವಸ್ತುವನ್ನು ಬೆಳೆಸಿರುವ ಪರಿ, ಕೊನೆಯವರೆಗೂ ಗುಟ್ಟು ಬಿಟ್ಟುಕೊಡದ ಕತೆಯ ರೋಚಕತೆಯೂ ಸೆಳೆಯುತ್ತದೆ. ನಾಯಕಿಯ ಸೃಜನಶೀಲತೆ, ಕಲೆ, ಪ್ರತಿಭೆಯಿಂದ ಆಕೆ ಬಂಗಾರದಂತೆ ಹೊಳೆಯುವ ಪರಿ ಆಕರ್ಷಿಸುತ್ತದೆ. ಸಿಕ್ಕ ಚಿಕ್ಕ ಅವಕಾಶವನ್ನೂ ಸಮರ್ಥವಾಗಿ ಬಳಸಿಕೊಂಡರೆ ಬದುಕಿನಲ್ಲಿ ನಾವು ಎಷ್ಟು ಎತ್ತರಕ್ಕೆ ಏರಬಹುದು ಎಂಬುದಕ್ಕೆ ಸ್ಪಷ್ಟವಾಗಿ ಕಾಣುತ್ತದೆ.
ಏನೇ ಅದೃಷ್ಟವಿದ್ದರೂ.. ಪ್ರತಿಭೆಯನ್ನು ಸಮರ್ಥವಾಗಿ ತೋರ್ಪಡಿಸಿದರೆ ಮಾತ್ರವೇ ನಮ್ಮ ಕಲೆಗೆ ತಕ್ಕ ನೆಲೆ ಸಿಗಲು ಸಾಧ್ಯ. ಅಲ್ಲದೇ, ಸಾರ್ವಜನಿಕವಾಗಿ ನಮ್ಮನ್ನು ನಾವು ಪ್ರಸೆಂಟ್ ಮಾಡಿಕೊಳ್ಳುವಾಗ ನಮ್ಮನ್ನು ನಾವು ತೋರಿಸಿಕೊಳ್ಳುವ ಪರಿಯಿಂದ ಜನರ ಮನಸ್ಸಿನಲ್ಲಿ ಮೂಡಿಸುವ ಛಾಪು ಅಚ್ಚಳಿಯದೇ ಉಳಿಯುತ್ತದೆ. ಅದರಲ್ಲಿಯೂ ಕಲಾ ವಿಭಾಗದಲ್ಲಿರುವವರಿಗಂತೂ ಓದು ಎಷ್ಟು ಮುಖ್ಯ ಎಂಬುದನ್ನು ಕಾದಂಬರಿಯ ನಾಯಕಿ ಚಂದ್ರಲೇಖ ಮೂಲಕ ತೋರಿಸುತ್ತಾರೆ.
ಚಂದ್ರಲೇಖ 'ವಸುಂಧರ' ಮಾಸಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಳು. ಅದು ಅವಳ ಪ್ರತಿಭೆಗೆ ತಕ್ಕ ಸಂಬಳವನ್ನು ತರದಿದ್ದರೂ.. ಸಿಕ್ಕಿದ್ದ ಅವಕಾಶದಲ್ಲಿಯೇ ತನ್ನ ಪ್ರತಿಭೆಯನ್ನು ಬಳಸಿಕೊಳ್ಳುತ್ತಿದ್ದಳು. ಆ ಸೃಜನಶೀಲತೆಯಿಂದ ಹೊರ ಬಂದದ್ದೇ ಸುಪ್ರಸಿದ್ದ ನರ್ತಕಿ ಚಂದ್ರಲಲಿತ ಅವರ ಸಂದರ್ಶನ.
ಚಂದ್ರಲಲಿತ ಹಾಗೂ ಪ್ರೇಮಕಲಾಕುಂಜದಿಂದ ಒಂದು ರೀತಿಯಲ್ಲಿ ಚಂದ್ರಲೇಖಳ ಅದೃಷ್ಟದ ಬಾಗಿಲು ತೆರೆಯಿತೆಂದರೂ ತಪ್ಪಾಗಲಾರದು. ತಿಂಗಳಿಗೊಮ್ಮೆ ಹೀಗೆ ಸಾಧನೆ ಮಾಡಿದ ಅನೇಕ ಮಹಿಳೆಯರ ಬಗ್ಗೆ ಸಂದರ್ಶನ ಪ್ರಕಟಿಸಿದ್ದರೂ.. ಚಂದ್ರಲಲಿತ ಹಾಗೂ ಅವರ ಪತಿ ನರ್ತಕ ನಾರಾಯಣ್ ರವರ ಸಂದರ್ಶನ ಚಂದ್ರಲೇಖಾಳಿಗೂ ವಿಭಿನ್ನ ಅನುಭವ ನೀಡಿತ್ತು. ಒಂದು ಮಾದರಿ ಸಂದರ್ಶನ ಹೇಗಿರಬೇಕು ಎಂಬೆಲ್ಲಾ ಅಂಶಗಳನ್ನು ಇದು ತೋರುತ್ತದೆ.
ಸಂದರ್ಶನದ ನಡುವೆ ಮಾತಿನಲ್ಲಿ ಬಂದಿದ್ದ ವಿಚಾರವನ್ನು ಗಮನಿಸಿ ಚಂದ್ರಲಲಿತ ಅವರು ಒಂದೊಳ್ಳೆ ಅವಕಾಶವನ್ನು ನೀಡಲು ಪ್ರಯತ್ನಿಸಿದ್ದರು. ಖ್ಯಾತ ಪತ್ರಿಕೆಯಾದ 'ಮಂದರ'ದಲ್ಲಿ ಆಕೆಗೆ ಚಿತ್ರ ಬರೆಯಲು ಅವಕಾಶ ಸಿಕ್ಕಿತ್ತು. ಆ ಸಂದರ್ಭದಲ್ಲಿ ವಿಂಧ್ಯಾ ಹಾಗೂ ಮಂದರ ಎರಡೂ ಖ್ಯಾತ ಪತ್ರಿಕೆಗಳು. ಅವುಗಳಲ್ಲಿ ಒಂದು ಅವಕಾಶಕ್ಕಾಗಿ ಎಲ್ಲರೂ ಹಪಹಪಿಸುತ್ತಿದ್ದರು. ವಸುಂಧರಾದೇವಿ ದೊಡ್ಡ ಮನಸ್ಸು ಮಾಡಿ ತಮ್ಮ ಪತ್ರಿಕೆಯ ಜೊತೆಗೆ ಆ ಕೆಲಸವನ್ನು ನಿರ್ವಹಿಸಲು ಅವಳಿಗೆ ಅನುಮತಿ ನೀಡಿದ್ದರು.
ಹಾಗೆಂದು, ವಸುಂಧರ ಪತ್ರಿಕೆಯ ಮಾಲೀಕರಾಗಿದ್ದ ವಸುಂಧರಾದೇವಿಯನ್ನು ಒಳ್ಳೆಯವರು ಎಂದು ಹೇಳುವಂತಿಲ್ಲ. ಹೆಣ್ಣಿಗೆ ಹೆಣ್ಣೇ ಶತ್ರು ಎನ್ನುವಂತೆ ಚಂದ್ರಲೇಖನ ಪಾಲಿಗೆ ದೊಡ್ಡ ಹಿತಶತ್ರುವಾಗಿದ್ದವರು ಅವರು. ಮಾಜಿ ಮಂತ್ರಿಗಳ ಪತ್ನಿ. ಹತ್ತು ವರ್ಷದಿಂದ ಆ ಪತ್ರಿಕೆ ನಡೆಸುತ್ತಿದ್ದರು. ಐದು ವರ್ಷದಿಂದ ಚಂದ್ರಲೇಖ ಅಲ್ಲಿನ ಉಪಸಂಪಾದಕಿಯಾಗಿದ್ದಳು.
ಚಂದ್ರಲಲಿತರಿಂದ ಬಂದಿದ್ದ ಒಂದು ಪಾರ್ಟಿಯ ಆಹ್ವಾನಕ್ಕೆ ಚಂದ್ರಲೇಖಳನ್ನೂ ಜೊತೆಯಲ್ಲಿ ಕರೆದುಕೊಂಡ ಹೊರಟ ವಸಂಧರಾದೇವಿಗೆ ಆಕೆ ಆ ಪಾರ್ಟಿಯಲ್ಲಿ ಹಿತವಾಗಿ ಕಾಣುವುದು ಇಷ್ಟವಿರಲಿಲ್ಲ. ಹಾವು ಸಾಯದಂತೆ ಕೋಲು ಮುರಿಯದಂತೆ ಪರಿಸ್ಥಿತಿಯನ್ನು ನಿಭಾಯಿಸಿದ್ದರು. ಅದಕ್ಕೆ ಕಾರಣವೂ ಇಲ್ಲದ್ದಿಲ್ಲ. ವಿಂಧ್ಯಾ ಪತ್ರಿಕೆಯಲ್ಲಿ ವೈಷ್ಣವಿ ಎನ್ನುವ ಹೆಸರಲ್ಲಿ ಬರೆಯುತ್ತಿದ್ದ ಮಲ್ಲಿಕಾ ವಸುಂಧರಾದೇವಿಯವರ ಸೋದರ ಸೊಸೆ. ಅಂದಿನ ಪಾರ್ಟಿಯಲ್ಲಿ ಚಂದ್ರಲೇಖಳನ್ನು ತನ್ನ ತಮ್ಮನಿಗೆ ಪರಿಚಯಿಸಿ ಆಕೆಯನ್ನು ಆತನ ವಧುವನ್ನಾಗಿಸುವ ಉಪಾಯ ಮಾಡಿದ್ದರು ಚಂದ್ರಲಲಿತ. ಆದರೆ, ಮಲ್ಲಿಕಾಳನ್ನು ಆತನಿಗೆ ಗಂಟು ಹಾಕಬೇಕೆಂದು ಚಂದ್ರಲೇಖಳ ತೇಜೋವಧೆ ಮಾಡಿದ್ದರು ಆತನ ಮುಂದೆ. ಅವಳ ವೇಷಭೂಷಣವೂ ಅಷ್ಟಕ್ಕಷ್ಟೇ ಇದ್ದುದರಿಂದ, ಅವಳ ಪ್ರತಿಭೆಯ ಪರಿಚಯ ಇಲ್ಲದ್ದರಿಂದ ಮೊದಲ ನೋಟದಲ್ಲಿ ಚಂದ್ರಲೇಖ ಕುರಿತು ಒಳ್ಳೆಯ ಮೂಡಲಿಲ್ಲ ಆತನಿಗೆ. ಆತನೇ ಜಯಂತ್. 'ಮಂದರ' ಪತ್ರಿಕೆಯ ಮಾಲೀಕನೆಂದು ತಿಳಿಯಲಿಲ್ಲ ಚಂದ್ರಲೇಖಳಿಗೆ. ಆದರೆ, ಅಂದಿನ ಪಾರ್ಟಿಯಲ್ಲಿ ಸರಿತಾಳ ಪರಿಚಯವಾಗಿತ್ತು. ಆಕೆ ವಿಂಧ್ಯಾ ಪತ್ರಿಕೆಯ ಕತಾ ವಿಭಾಗದ ಉಪಸಂಪಾದಕಿ.
ಚಂದ್ರಲೇಖ ತಾತನ ಜೊತೆಯಲ್ಲಿದ್ದಾಗ ಚಿತ್ರಕಲೆಯನ್ನು ಅಭ್ಯಸಿಸಿದ್ದಳು. ಸಾಹಿತ್ಯದ ಗಂಧವೂ ಅವರಿಂದಲೇ ಬಂದದ್ದು. ಈಗ ತಾತ ತೀರಿಕೊಂಡ ಮೇಲೆ ತಾಯಿ ರತ್ನಮ್ಮನೊಂದಿಗೆ ತನ್ನ ಸ್ವಂತ ಮನೆಯ ಒಂದು ಭಾಗದಲ್ಲಿ ವಾಸಿಸುತ್ತಿದ್ದಳು. ಮನೆಯ ದೊಡ್ಡ ಭಾಗವನ್ನು ಶ್ರೀನಿವಾಸರಾಯರ ಕುಟುಂಬಕ್ಕೆ ಬಾಡಿಗೆಗೆ ಕೊಟ್ಟಿದ್ದರು.
ಶ್ರೀನಿವಾಸರಾಯರಿಗೆ ನಾಲ್ಕು ಹೆಣ್ಣು ಮಕ್ಕಳು. ಹಿರಿಮಗಳು ಪ್ರಮೀಳಾಳದ್ದೇ ಅಲ್ಲಿ ಕಾರುಬಾರು. ಶ್ರೀನಿವಾಸರಾಯರ ಹೆಣ್ಣುಮಗಳ ವಧುಪರೀಕ್ಷೆಗೆ ಬಂದವರು ಚಂದ್ರಲೇಖಳನ್ನೇ ಮೆಚ್ಚಿದಾಗ ಅಲ್ಲಿಯೂ ಮತ್ಸರ ಹೊಗೆಯಾಡಿತು. ಮನೆಯ ರಕ್ಷಣೆ ಹಾಗೂ ಕಚೇರಿಯಲ್ಲಿಯೂ ಶ್ರೀನಿವಾಸರಾಯರ ಬೆಂಬಲ ಅವಶ್ಯಕವಾಗಿತ್ತು. ಅಲ್ಲದೇ, ಆತ ಸಣ್ಣಬುದ್ಧಿಯವರಾಗಿರಲಿಲ್ಲ. ಚಂದ್ರಲೇಖಳಿಗೆ ಒಳ್ಳೆಯದಾಗಲೆಂದು ಮನಸಾರೆ ಬಯಸುತ್ತಿದ್ದ ವ್ಯಕ್ತಿ. ಪರೋಕ್ಷವಾಗಿ ಬೆಂಬಲಿಸುತ್ತಿದ್ದರೂ.. ಎಲ್ಲಿಯೂ ನೇರವಾಗಿ ಸಹಾಯ ಮಾಡಲಾಗದ ಪರಿಸ್ಥಿತಿಯಲ್ಲಿದ್ದರು.
ಮಂದರ ಪತ್ರಿಕೆಯ ಧಾರಾವಾಹಿ ಹಾಗೂ ಕಥೆಗಳಿಗೆ ಸೂಕ್ತ ಚಿತ್ರಗಳನ್ನು ರಚಿಸುತ್ತಲೇ.. ಕಾದಂಬರಿಗಳಿಂದಲೂ ಪ್ರಸಿದ್ದಳಾಗುತ್ತಾಳೆ ಚಂದ್ರಲೇಖ. ಸಾಹಿತ್ಯ, ಕಲೆಯಲ್ಲಿ ಆಸಕ್ತನಾಗಿದ್ದ ಜಯಂತನ ಮನವನ್ನು ಪ್ರತಿಭೆಯ ಮೂಲಕ ಸೆಳೆಯುವಲ್ಲಿ ಯಶಸ್ವಿಯಾಗುತ್ತಾಳೆ ಚಂದ್ರಲೇಖ. ಮಣ್ಣಲ್ಲಿ ಮುಸುಕಿದ್ದ ವಜ್ರದಂತಹಾ ಪ್ರಭೆಯಿಂದ ತಾನು ಬಂಗಾರವೇ ಎಂದು ಸಾಧಿಸಿಕೊಳ್ಳುವಲ್ಲಿ ಚಂದ್ರಲೇಖ ಮುನ್ನಡೆಯುತ್ತಾಳೆ. ಹಣ ಸೇರಿದಂತೆ ಆತ್ಮವಿಶ್ವಾಸವೂ ಹೆಚ್ಚಿ, ವೇಷ-ಭೂಷಣ ಸುಧಾರಿಸುತ್ತದೆ. ವಸುಂಧರಾದೇವಿಯ ಕಿರುಕುಳ ಹೆಚ್ಚಾದಾಗ ಅಲ್ಲಿನ ಕೆಲಸವನ್ನು ಬಿಟ್ಟು ಸ್ವಾಭಿಮಾನದಿಂದ ಮುನ್ನುಗ್ಗುತ್ತಾಳೆ. ಕೈಯ್ಯಲ್ಲಿ ಸಾಕಷ್ಟು ಅವಕಾಶವಿದ್ದದ್ದೂ ಅವಳಿಗೆ ವರದಾನವಾಗುತ್ತದೆ.
ಸರಿತಾಳ ಮೂಲಕ ರಮಾಬಾಯಿ ಹಾಗೂ ರಾಜ್ ಅಯ್ಯಂಗಾರರ ಊದುಬತ್ತಿ ಕಾರ್ಖಾನೆಯ ಪ್ರಕಟಿತ ಕ್ಯಾಲೆಂಡರ್ ಗೆ ಹನ್ನೆರಡು ಚಿತ್ರಗಳನ್ನು ಬರೆಯಲು ಸಿಕ್ಕ ಅವಕಾಶ ಅವಳಿಗೆ ಹೊಸ ಉದ್ಯೋಗಕ್ಕೆ ದಾರಿ ಮಾಡಿಕೊಡುತ್ತದೆ.
ಚಂದ್ರಲೇಖಳ ಮೇಲಿದ್ದ ಜಯಂತನ ಅಭಿಪ್ರಾಯ ಬದಲಾಗಲು ಸಂಕಿರಣ ಕಾರಣವಾಗುತ್ತದೆ. ಆದರೆ, ವಸುಂಧರಾದೇವಿ ಹಿಂಡಿದ ಹುಳಿ ಜಯಂತನ ಮನಸ್ಸಿನಲ್ಲಿ ಅನುಮಾನದ ಬೀಜ ಬಿತ್ತುತ್ತದೆ.
ಅದೇ ಸಂಧರ್ಭದಲ್ಲಿ ರಮಾಬಾಯಿಯವರು ನೀಡಿದ ಮತ್ತೊಂದು ಅವಕಾಶಕ್ಕಾಗಿ ಚಂದ್ರಲೇಖ ರವೀಂದ್ರನ ಜೊತೆಗೆ ಓಡಾಡುತ್ತಿದ್ದ ಸಂಧರ್ಭ ಕಂಡು ಜಯಂತ್ ಬೇರೆಯದ್ದೇ ರೀತಿ ಅರ್ಥೈಸಿಕೊಳ್ಳುತ್ತಾನೆ.
ವಸುಂಧರಾದೇವಿ ಹೇಳಿದ್ದ ವಿಚಾರ ಚಂದ್ರಲೇಖಳಿಗೆ ತಿಳಿದು ತನ್ನ ತಂದೆಯ ಕುರಿತು ತಾಯಿಯನ್ನು ಪ್ರಶ್ನಿಸಿದಾಗ ಅವಳಿಗೆ ಸಿಕ್ಕ ಉತ್ತರವೇನು..?
ಚಂದ್ರಲೇಖಳ ತಂದೆ ಯಾರು..? ರತ್ನಮ್ಮನವರ ಹಿನ್ನೆಲೆಯೇನು..? ಚಂದ್ರಲೇಖಳಿಗೆ ತನ್ನ ತಂದೆಯ ಕುರಿತು ತಿಳಿದ ಸತ್ಯಗಳೇನು..? ಜಯಂತ್ ಹಾಗೂ ಚಂದ್ರಲೇಖ ನಡುವಲ್ಲಿದ್ದ ಭಿನ್ನಾಭಿಪ್ರಾಯ ದೂರವಾದದ್ದು ಯಾರಿಂದ..? ಇಷ್ಟೆಲ್ಲಾ ನಡೆದ ನಂತರ ಜಯಂತ್ ಹಾಗೂ ಚಂದ್ರಲೇಖರ ನಡುವಿನ ಸಂಬಂಧ ಏನಾಯಿತು..?
ಬಂಗಾರದ ಕಿಡಿ ಬೆಳಗಿತೇ ಅಥವಾ ಹೊಳೆದು ಮಾಯವಾಯಿತೇ..? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಹೆಚ್. ಜಿ. ರಾಧಾದೇವಿಯವರ 'ಬಂಗಾರದ ಕಿಡಿ' ಕಾದಂಬರಿಯನ್ನು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ