ಪುಸ್ತಕದ ಶೀರ್ಷಿಕೆ : ಪರಕೀಯರು
ಲೇಖಕರು : ಸಿ. ಎನ್. ಮುಕ್ತಾ
ಪ್ರಕಾಶಕರು : ಪಾಂಚಜನ್ಯ ಪಬ್ಲಿಕೇಶನ್ಸ್
ಮರು ಮುದ್ರಣ : 2022
ಪರಕೀಯರು ಕಾದಂಬರಿ ಪ್ರೇಮ ಪಲ್ಲವಿ ಸಂಯುಕ್ತ ಸಂಪುಟದ ಮತ್ತೊಂದು ಕಾದಂಬರಿ. ಪರಕೀಯರು ಕಿರು ಕಾದಂಬರಿ ಸಹ ಮಲ್ಲಿಗೆ ಮಾಸಪತ್ರಿಕೆಯಲ್ಲಿ ಪ್ರಕಟವಾಗಿ ಅಪಾರ ಜನಮನ್ನಣೆ ಗಳಿಸಿತ್ತು.
ಪರಕೀಯರು ಕಾದಂಬರಿಯಲ್ಲಿ ನಮ್ಮವರು ಹಾಗೂ ಪರಕೀಯರ ನಡುವಿನ ವ್ಯತ್ಯಾಸವನ್ನು ಅರಿಯುವುದು ಎಷ್ಟು ಕಷ್ಟ ಎಂಬುದರ ಚಿತ್ರಣವಿದೆ. ಇದರಲ್ಲಿ ಹೆಣ್ಣಿನ ಮುಗ್ಧತೆಯನ್ನು ಬಳಸಿಕೊಂಡು ಅವಳನ್ನು ತಮ್ಮ ಮುಖವಾಡದ ಮೂಲಕ ವಂಚಿಸುವವರ ಚಿತ್ರಣವಿದೆ. ಹೆಣ್ಣು ಮುಗ್ಧತೆಗಿಂತ ಹೆಚ್ಚು ಚಾಲಾಕಿತನ ಹಾಗೂ ಚುರುಕುತನ ತೋರಿದರಷ್ಟೇ ತನ್ನ ಸುತ್ತಮುತ್ತಲಿನ ಸತ್ಯದ ಅರಿವಾಗುತ್ತದೆ ಎನ್ನುವ ನೀತಿ ಇದೆ. ಹಾಗೆಂದು, ಮುಖವಾಡಗಳನ್ನು ಕಳಚುವ ಪ್ರಕ್ರಿಯೆ ಅಷ್ಟು ಸುಲಭವಲ್ಲ. ನಮ್ಮವರು ಯಾರು ಹಾಗೂ ಪರಕೀಯರು ಯಾರು ಎಂಬುದನ್ನು ಅರಿಯಲು ಮನಸ್ಸಿನಲ್ಲಿ ದೊಡ್ಡ ಸಂಘರ್ಷವೇ ನಡೆಯುತ್ತದೆ. ಸುಳ್ಳು ಹೆಚ್ಚು ಕಾಲ ಬಾಳುವುದಿಲ್ಲವಾದರೂ.. ಅದು ಸೃಷ್ಟಿಸುವ ಆತಂಕ ಹಾಗೂ ತಂದೊಡ್ಡುವ ಮೋಸದ ಜಾಲದಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಾಗಿರುವುದಿಲ್ಲ.
ವಾಸಂತಿ ಹಾಗೂ ಆನಂದರಾವ್ ದಂಪತಿಗಳು ವೈದ್ಯರಾಗಿದ್ದರು. ಅವರಿಗೆ ವಿಶ್ವಾಸ ಹಾಗೂ ವರ್ಷಾ ಎಂಬ ಇಬ್ಬರು ಮಕ್ಕಳು. ವರ್ಷ ಪ್ರತಿ ಬಾರಿ ರಜೆಯಲ್ಲಿ ಕೆಲವು ದಿನ ತನ್ನ ಸ್ನೇಹಿತರ ಮನೆಗೆ ಹೋಗುವ ರೂಢಿ ಇತ್ತು. ವಿವಿಧ ಊರುಗಳನ್ನು ಇದೇ ನೆಪದಲ್ಲಿ ನೋಡಿದ್ದಳು. ಈಗ ತನ್ನ ಗೆಳತಿ ದೇವಿಕಾಳ ಮನೆ ಇದ್ದ ದಾವಣಗೆರೆಗೆ ಹೋಗಲು ಸಿದ್ಧವಾಗಿದ್ದಳು. ಅದಕ್ಕೆ ರಾವ್ ಅವರ ಒಪ್ಪಿಗೆಯೂ ಇದ್ದು.. ಅದಕ್ಕೆ ಬೇಕಾದ ಸಿದ್ಧತೆಯೂ ಆಗಿತ್ತು. ಆದರೆ, ವಾಸಂತಿಯವರಿಗೆ ಮಾತ್ರ ವರ್ಷಾಳನ್ನು ಅಲ್ಲಿಗೆ ಕಳುಹಿಸಿಕೊಡಲು ಮನಸ್ಸಿರಲಿಲ್ಲ. ಅವರಿಗೆ ದಾವಣಗೆರೆಗೆ ವರ್ಷಾಳನ್ನು ಕಳುಹಿಸಲು ಭಯ ಎನ್ನುವುದು ಸ್ಪಷ್ಟವಾದರೂ.. ಅದು ಯಾತಕ್ಕೆ ಎಂಬುದು ವರ್ಷಾಳಿಗೆ ತಿಳಿದಿರಲಿಲ್ಲ.
ತಂದೆ - ತಾಯಿಯ ಶ್ರೀಮಂತ ಹಾಗೂ ಬೆಚ್ಚಗಿನ ಪ್ರೀತಿಯಲ್ಲಿ ಹಾಗೂ ವಿಶ್ವಾಸ್ ಜೊತೆಗಿನ ಕೋಳಿಜಗಳ ಮಿಶ್ರಿತ ಪ್ರೀತಿಯಲ್ಲಿ ಬೆಳೆದಿದ್ದವಳು ದಾವಣಗೆರೆಗೆ ಹೋಗಿ ಬಂದ ನಂತರ ಸಂಪೂರ್ಣ ಬದಲಾಗಿದ್ದಳು. ಅಲ್ಲದೆ, 15 - 20 ದಿನಕ್ಕೆಂದು ಹೋದವಳು ಒಂದು ವಾರದಲ್ಲಿಯೇ ಬಂದಿದ್ದಳು. ಪ್ರತಿಯೊಂದಕ್ಕೂ ಆಕೆಯ ಮೌನ ಪ್ರತಿಕ್ರಿಯೆ, ನಿರ್ಲಿಪ್ತತೆ ಎಲ್ಲರ ಮನಸ್ಸನ್ನು ಕಸಿವಿಸಿಗೊಳಿಸಿತ್ತು.
ದೇವಿಕಾಳ ಸೋದರತ್ತೆ ಹೇಳಿದ್ದ ಕಥೆ ಕೇಳಿ ವಾಸಂತಿ, ಆನಂದ್ ರಾವ್ ಹಾಗೂ ವಿಶ್ವಾಸ್ ಎಲ್ಲರೂ ಪರಕೀಯರು ಎನಿಸತೊಡಗಿತ್ತು ವರ್ಷಾಳಿಗೆ. ತಾನು ಡಾಕ್ಟರ್ ವಾಸಂತಿಯ ಸ್ವಂತ ಮಗಳಲ್ಲ ಎಂದು ತಿಳಿದು ಅವಳಿಗೆ ಸಿಡಿಲು ಬಡಿದಂತಾಗಿತ್ತು. ಅಲ್ಲದೆ, ದೇವಿಕಾಳ ಸೋದರತ್ತೆ ಹೇಳಿದ್ದು.. ಆಕೆಯ ತಮ್ಮ ಸೋಮು ವರ್ಷಾಳ ತಾಯಿ ಅಂಬುಜಾಳನ್ನು ವಿವಾಹವಾಗಿದ್ದ. ಅಲ್ಲದೆ, ಅದು ಪ್ರೇಮ ವಿವಾಹವಾಗಿತ್ತು. ದೇವಸ್ಥಾನದಲ್ಲಿ ಅಂಬುಜ ಮತ್ತು ಸೋಮು ಆದ ವಿವಾಹವನ್ನು ಅಂಬುಜಳ ತಂದೆ ಒಪ್ಪಿರಲಿಲ್ಲ. ಜೊತೆಗೆ, ಅಂಬುಜಾಳಿಗೆ ಮೂರು ತಿಂಗಳು ತುಂಬಿದ ನಂತರವೇ ಆಕೆಯ ತಂದೆಗೆ ಆ ವಿಷಯ ತಿಳಿದದ್ದು. ಅಷ್ಟರೊಳಗೆ ವಾಸಂತಿ ಬಂದು ಅಂಬುಜಾಳನ್ನು ಹಾಗೂ ಆಕೆಯ ತಂದೆಯನ್ನು ತನ್ನೊಡನೆ ಕರೆದುಕೊಂಡು ಹೋದಳು. ಅವರು ತಮ್ಮ ಆಸ್ತಿ ಮಾರಿ ಬೆಂಗಳೂರಿಗೆ ಸೇರಿದ್ದರು. ನಂತರ, ವಾಸಂತಿ ಅವರಿಬ್ಬರಿಗೂ ಸ್ಲೋ ಪಾಯಿಸನ್ ಕೊಟ್ಟು ಕೊಂದಳು ಎಂಬುದನ್ನು ಕರುಳು ಕಿವುಚುವಂತೆ ಹೇಳಿ ನಂಬಿಸಿದ್ದರು.
ದೇವಿಕಾಳ ತಾಯಿಗೆ ಈ ಮಾತುಕತೆ ತಿಳಿದಾಗ ಅವರು ಲಕ್ಷ್ಮಿಯ ಮಾತನ್ನು ಸಂಪೂರ್ಣವಾಗಿ ನಂಬಬಾರದೆಂದು.. ಅದರಲ್ಲಿ ಹೆಚ್ಚಿನಂಶ ಸುಳ್ಳೇ ಇರುತ್ತದೆ ಎಂದು ಹೇಳಿದ್ದರು. ಅದಾಗಲೇ ವರ್ಷಾಳ ಮನಸ್ಸು ಕದಡಿ ಆಗಿತ್ತು. ತಾನು ದೇವತೆಯೆಂದು ಭಾವಿಸಿರುವ ಆಕೆ ರಾಕ್ಷಸಿಯಾ..? ಅಷ್ಟು ನೀಚ ಹೆಂಗಸಾ ಎನ್ನುವ ಭಾವ ಅದಾಗಲೇ ವರ್ಷಾಳ ಮನಸ್ಸಿನಲ್ಲಿ ಮೂಡಿ ಆಗಿತ್ತು. ಈಗ ವಾಸಂತಿಯ ಪ್ರತಿ ನಡೆಯನ್ನೂ ಅನುಮಾನದಿಂದಲೇ ನೋಡುತ್ತಿದ್ದಳು ವರ್ಷಾ.
ಈಗ ವರ್ಷಾಳಿಗೆ ತನ್ನ ಸ್ವಂತ ತಂದೆಯನ್ನು ಭೇಟಿಯಾಗುವ ಹಂಬಲ. ಆದರೆ, ಲಕ್ಷ್ಮಿ ಅತ್ತೆಯ ಬಳಿ ಅವರ ಅಡ್ರೆಸ್ ಕೇಳಿದಾಗ ಅವರ ವಿಳಾಸವಿಲ್ಲವೆಂದು.. ಅವಳ ವಿಳಾಸ ಹಾಗೂ ಮೊಬೈಲ್ ನಂಬರ್ ಅನ್ನು ಪಡೆದುಕೊಂಡಿದ್ದರು.
ಇತ್ತ ವಾಸಂತಿಗೆ ವರ್ಷಾಳಿಗೆ ತಿಳಿದ ವಿಚಾರವನ್ನು ಕೇಳಿ ಆಘಾತವಾಗಿತ್ತು. ಯಾವುದು ಆಗಬಾರದು ಎಂದುಕೊಂಡಿದ್ದಳೋ ಅದೇ ಆಗಿ ಹೋಗಿತ್ತು. ಈಗ ಅವಳಿಗೆ ವಾಸಂತಿ ನಿಜ ವಿಷಯವನ್ನು ಹೇಳಲು ಹೊರಟರೂ ವರ್ಷಾ ಅದನ್ನು ನಂಬುವ ಸ್ಥಿತಿಯಲ್ಲಿರಲಿಲ್ಲ.
ವಾಸಂತಿಗೆ ಸೋಮಶೇಖರನ ಕುರಿತಾದ ವಿಚಾರ ಗೊತ್ತಿದ್ದರಿಂದ ಬಣ್ಣದ ಮಾತನಾಡಿ ವರ್ಷಾಳನ್ನು ಮರಳು ಮಾಡಿಬಿಡುತ್ತಾನೆಂದು ಹೆದರಿದ್ದಳು. ಅವಳ ಹೆದರಿಕೆ ನಿಜವೂ ಆಗಿತ್ತು.
ಸೋಮಶೇಖರನ ಬಲೆಗೆ ವರ್ಷಾ ಅದಾಗಲೇ ಬಿದ್ದಾಗಿತ್ತು. ತುಮಕೂರಿನಲ್ಲಿದ್ದ ಆತನ ಎರಡನೇ ಸಂಸಾರವನ್ನು ಭೇಟಿ ಮಾಡಿಯೂ ಆಗಿತ್ತು. ಆದರೆ, ಹಠಾತ್ತನೆ ಆಕೆ ಅವರ ಜೊತೆ ಬಂದಿರುವಂತಿರಲಿಲ್ಲ. ಅವಳ ತಾಯಿ ಮಾಡಿದ ವಿಲ್ ಪ್ರಕಾರ 18 ವರ್ಷದ ನಂತರವೇ ಆಕೆಗೆ ಆಸ್ತಿ ಕೈ ಸೇರಲಿತ್ತು. ಅದರ ಜೊತೆಗೆ ಕೆಲ ನಿಬಂಧನೆಗಳೂ ಇದ್ದವು.
ವರ್ಷಾಳ ವರ್ತನೆ ಅದಾಗಲೇ ಬದಲಾಗಿತ್ತು. ಅಷ್ಟು ವರ್ಷ ಪ್ರೀತಿಯಿಂದ ಸಾಕಿ ಸಲಹೆದವರನ್ನೇ ಕಾಮಾಲೆ ಕಣ್ಣಿನಿಂದ ನೋಡುತ್ತಿದ್ದಳು. ತನ್ನವರೇ ಪರಕೀಯರು ಎಂದೆನಿಸಲು ಶುರುವಾಗಿತ್ತು. ಇದೆಲ್ಲವನ್ನು ವಾಸಂತಿ ತೆಗೆದುಕೊಂಡ ಬಗೆ ಹೇಗೆ..? ಇಲ್ಲಿ ವರ್ಷಳ ನೋಟ ಸರಿ ಇತ್ತೇ ಅಥವಾ ವಾಸಂತಿಯ ನಡೆ ಅಸಲಿಯತ್ತೇ..?
ಅಂಬುಜಳ ಡೈರಿಯನ್ನು ಓದಲು ವರ್ಷ ಒಪ್ಪದೇ ಹೋದದ್ದು ಏಕೆ..? ಅಂಬುಜಾ ಬದುಕಿನ ನಿಜ ಘಟನೆ ಏನಿತ್ತು..? ಅಷ್ಟಕ್ಕೂ ವರ್ಷಾ ವಾಸಂತಿಯವರ ಮಗಳಾಗಿ ಬೆಳೆದಿದ್ದೇಕೆ..? ವಿಲ್ ನ ಪ್ರಕಾರ ಇದ್ದ ನಿಬಂಧನೆಗಳೇನು..? ಎಲ್ಲವನ್ನು ತಿಳಿಯಲು ಓದಿ ಸಿ. ಎನ್ ಮುಕ್ತಾ ಅವರ ಪರಕೀಯರು ಕಾದಂಬರಿಯನ್ನು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ