ಶನಿವಾರ, ಏಪ್ರಿಲ್ 25, 2026

ಅಸ್ಪೃಶ್ಯರು (ಪುಸ್ತಕ ಯಾನ - 348)



ಪುಸ್ತಕದ ಶೀರ್ಷಿಕೆ : ಅಸ್ಪೃಶ್ಯರು

ಲೇಖಕರು : ವೈದೇಹಿ

ಪ್ರಕಾಶಕರು : ಅಕ್ಷರ ಪ್ರಕಾಶನ

ಪ್ರಥಮ ಮುದ್ರಣ : 1992

ಅಕ್ಷರ ಪ್ರಕಾಶನದ ಪ್ರಥಮ ಮುದ್ರಣ : 2010

ನಾಲ್ಕನೇ ಮುದ್ರಣ : 2025 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 108

ಬೆಲೆ : 150 ರೂ. 


'ಅಸ್ಪೃಶ್ಯ' ಎಂದರೆ ಮುಟ್ಟಬಾರದ ಎಂಬುದು ರೂಢಿಗತ ಅರ್ಥ. ಮುಟ್ಟಲಾಗದ ಎಂದೂ ಇದನ್ನು ಅರ್ಥೈಸಬಹುದು ಎನ್ನುತ್ತಾರೆ ಲೇಖಕಿ ವೈದೇಹಿಯವರು., ಈ ಕಾದಂಬರಿಯಲ್ಲಿ ಈ ಎರಡೂ ಅರ್ಥದ ಅಸ್ಪೃಶ್ಯತೆಗಳನ್ನು ಕಾಣಬಹುದು. ಇಲ್ಲಿ ಕೇವಲ ಜಾತಿ-ಜಾತಿಗಳ ನಡುವಿನ ಅಸ್ಪೃಶ್ಯತೆಯ ಕಥೆ ಮಾತ್ರವಲ್ಲದೆ, ಕುಟುಂಬದಲ್ಲಿಯೂ ಕಾಣಿಸುವ, ಮನೆಯ ಒಳಗಿನ ರೀತಿ-ನೀತಿಗಳನ್ನು.. ಅಲ್ಲದೆ, ಒಂದೇ ಸಮುದಾಯದಲ್ಲಿ ಅವರವರಲ್ಲಿಯೇ ಉಂಟಾಗಿರುವ ಮೇಲು-ಕೀಳಿನ ಚಿತ್ರಣವನ್ನು ಸಹ ಕಾಣಬಹುದಾಗಿದೆ. ಸಂಪ್ರದಾಯವನ್ನು ರೂಢಿಸಿಕೊಂಡು, ಪಾಲಿಸಿಕೊಂಡು ಬಂದ ಕುಟುಂಬಗಳು ಅದನ್ನು ಮೀರಿ ನಿಲ್ಲುವುದು ಸುಲಭವಾದ ಮಾತಲ್ಲ. ಅದರಲ್ಲಿಯೂ ಹಿರಿಯ ಮನಸ್ಸುಗಳು ಅದನ್ನು ಉಸಿರಿನ ಜೊತೆಗೆ ಎಂಬಷ್ಟು ಬೆರೆಸಿಕೊಂಡಂತೆ.. ಪಾಲಿಸಿಕೊಂಡು ಬಂದವರನ್ನು ಅದನ್ನು ಒಮ್ಮೆಲೇ ಬದಲಾಯಿಸುತ್ತೇವೆ ಎಂದು ಹೊರಟರೆ ಅದು ಕಷ್ಟ. 


ಇಲ್ಲಿ ಹೇಳಿರುವುದು ಕುಂದಾಪುರ ಪ್ರಾಂತ್ಯದ ಕಿರು ಕುಟುಂಬವೊಂದರ ಕಥೆ. ಇಂತಹ ಮಹತ್ತರ ಘಟನೆಗಳಿಗೆ ಸಾಕ್ಷಿಯಾಗಿ ನಿಲ್ಲುವುದು ಹೌದಾದರೂ.. ಇದು ನಮ್ಮದೇ ಮನೆಗಳ, ನಮ್ಮದೇ ಕುಟುಂಬಗಳ ಕಥೆಯಂತೆಯೂ ಕಾಣುತ್ತದೆ. ಕಾಲ ಹಾಗೂ ಪ್ರಾಂತ್ಯವನ್ನು ಮೀರಿದ ಕಥನ ಇದು.  ಸಮಾಜದಲ್ಲಿ ಬದಲಾವಣೆ ತಂದಷ್ಟು ಹಾಗೂ ಸಮಾಜದ ರೂಢಿಗತ ಬದಲಾವಣೆಗಳನ್ನು ಬದಲಾಯಿಸಿದಷ್ಟು ಸುಲಭವಲ್ಲ ನಮ್ಮದೇ ಮನೆಗಳಲ್ಲಿನ ಮನಸ್ಸುಗಳನ್ನು ಬದಲಾವಣೆಗೆ ಒಪ್ಪಿಸುವುದು. ಕುಟುಂಬದಲ್ಲಿ ಸಂಘರ್ಷವಂತೂ ಸಾಧ್ಯವಾಗದಲ್ಲ.. ವೈದೇಹಿಯವರ ಕಥೆ ಹೇಳುವ ಶೈಲಿ ಹಾಗೂ ಭಾಷೆ ಸಮರ್ಥವಾಗಿ ಚಿತ್ರಿತವಾಗಿದೆ.


ರತ್ನನ ಹೆರಿಗೆಯ ಸಂದರ್ಭದಿಂದ ಶುರುವಾಗುವ ಕಥೆ ಇದು. ಆರಂಭದಲ್ಲಿಯೇ ಮಿಡ್ ಬಾಯಿಯನ್ನು ಕರೆಯಲು ಹೋಗುವ ಶ್ಯಾಮಲ ಅರ್ಥಾತ್ ಶಾಮಿಗೆ ಪಾರ್ತಕ್ಕ ಅದಾಗಲೇ ಮನೆಯಲ್ಲಿ ಹೇಳಿ ಕಳುಹಿಸಿದ್ದಾಗಿತ್ತು.. "ಅವರ ಮನೆಯಲ್ಲಿ ಏನಾದರೂ ಕೊಟ್ಟರೆ ತಿನ್ನಬೇಡ. ಹೇಳಿದ್ದನ್ನು ಹೇಳಿ ಓಡಿ ಬಂದು ಬಿಡು ಬೇಗ" ಎಂದು. ಶಾಮಿ ಕರೆಯಲು ಹೋಗಿದ್ದ ಮಿಡ್ ಬಾಯಿ ಕ್ರಿಶ್ಚಿಯನ್ ಕೊಂಕಣಿ ಮಾತೃಭಾಷೆಯವರು ಜೊತೆಗೆ ಮಾಂಸ ತಿನ್ನುವವರು. ಎಲ್ಲರ ಮನೆಯ ಹೆರಿಗೆಗೆ ಹೋಗುವುದರಿಂದ ಮಡಿ - ಮೈಲಿಗೆ ಇಲ್ಲದವರು ಎಂಬುದು ಪಾರ್ತಕ್ಕನ ಇಂಗಿತ. ಹೆರಿಗೆಯ ಸಂದರ್ಭಕ್ಕೆ ಅವಳೇ ಅವಶ್ಯಕವಾದರೂ.. ಜಾತೀಯತೆಯ ಅಸ್ಪೃಶ್ಯತೆಯನ್ನು ಮೊದಲ ಸಂದರ್ಭದಲ್ಲಿಯೇ ಕಟ್ಟಿಕೊಟ್ಟಿರುವ ನೋಟ ಇಲ್ಲಿದೆ. ಇದು ಒಂದು ಬಗೆಯದ್ದಾದರೆ.. ಮನೆಯೊಳಗೂ ಕೂಡದೆ ಮನೆ ಕೆಲಸಕ್ಕೆ ಅವರನ್ನೇ ಅವಲಂಬಿಸಿರುವ ಮತ್ತೊಂದು ರೀತಿಯ ಅಸ್ಪೃಶ್ಯತೆಯ ಚಿತ್ರಣವನ್ನು ಮುಂದೆ ಕಥೆಯಲ್ಲಿ ಕಾಣಬಹುದು.


ರತ್ನಳಿಗೆ ಅದು ಎರಡನೆಯ ಮಗು. ಹೆರಿಗೆ ಸುಸೂತ್ರವಾಗಿ ನಡೆದು ಗಂಡು ಮಗುವೇ ಆಯಿತು. ಮೊದಲನೇ ಮಗ ರವಿ.  ಸದ್ಯಕ್ಕೆ ಅವನ ಜವಾಬ್ದಾರಿಯನ್ನು ತಂಗಿ ಸರೋಜ ಹೊತ್ತಿದ್ದಳು. 


ಶಾಮಿಗೆ ಎಲ್ಲದರಲ್ಲಿಯೂ ಕುತೂಹಲ. ಮಗುವನ್ನು ನೋಡಬೇಕೆಂಬ ಹಾಗೂ ಎತ್ತಿಕೊಳ್ಳಬೇಕೆಂಬ ಆಸೆ ಇದ್ದರೂ ಅದು ಫಲಿಸುವಂತಿರಲಿಲ್ಲ. ಇದು ಮನೆಯಲ್ಲಿನ ಮೈಲಿಗೆಯ ಚಿತ್ರಣ. ಮನೆಯೊಳಗಿನ ಅಸ್ಪೃಶ್ಯತೆಯ ಚಿತ್ರಣ. 


ನರಪಟೆ ಎಂದರೆ ಕೊರಗ ಜಾತಿಯಲ್ಲಿಯ ಬೇಡುವ ಹೆಂಗಸು ಎಂದು. ಆಕೆ ಬಂದು ಮೈಲಿಗೆ ಕಳೆಯುವ ಚಿತ್ರಣವಿದೆ. ಹತ್ತು ದಿನವಿಡೀ ರತ್ನನ ಕೋಣೆಗೆ ಯಾರೂ ಹೋಗುವಂತಿರಲಿಲ್ಲ. ಬಾಣಂತಿಯ ಕೆಲಸಕ್ಕೆಲ್ಲಾ ಆಮೆ ಹೊಂಡವಿತ್ತು. ಈ ಕೆಲಸವನ್ನು ಮಾಡುವುದಕ್ಕೆಂದೇ ಒಬ್ಬರು ಮೀಸಲು.  ಸದ್ಯಕ್ಕೆ ಮನೆಯಲ್ಲಿ ಪಾರ್ತಕ್ಕ ಇರುವುದರಿಂದ ಬೇರೆಯವರಿಗೆ ಇದರ ತಲೆನೋವಿಲ್ಲ.


ಪಾರ್ತಕ್ಕ ಆ ಮನೆಯಲ್ಲಿಯೇ ಒಂದಾಗಿರುವ ಜೀವ. ಮಗ ಭಾಸ್ಕರ ಹುಟ್ಟಿ ನಾಲ್ಕನೆಯ ವರ್ಷಕ್ಕೆ ಆಕೆಯ ಗಂಡ ತೀರಿಕೊಂಡರು. ನಂತರ ಆತ ಓದಲು ಹೊರಗೆ ಹೋದ ಮೇಲೆ ಒಂಟಿಯಾಗಿದ್ದವರನ್ನು ವಾಸುದೇವರಾಯರೇ ಕರೆದು ತಂದು ತಮ್ಮ ಮನೆಯಲ್ಲಿ ಅಕ್ಕನ ಸ್ಥಾನ ನೀಡಿ ಇರಿಸಿಕೊಂಡಿದ್ದರು. ವಾಸುದೇವರ ಪತ್ನಿ ಗೌರಮ್ಮನವರ ಕಡೆ ಕಡೆಯ ಬಾಣಂತನಗಳು ಹಾಗೂ ಮನೆಯ ಉಸ್ತುವಾರಿಗಳೆಲ್ಲವೂ ಪಾರ್ತಕ್ಕನ ಕೈಗೆ ಸೇರಿತ್ತು. ಆದರೆ, ಅದಕ್ಕೂ ಕುತ್ತು ಬರುವಂತೆ ನಡೆದುಕೊಂಡಿದ್ದ ಭಾಸ್ಕರ ವರ್ಷ 40 ಆದರೂ.. ವಿವಾಹವೇ ಬೇಡವೆನ್ನುತ್ತಿದ್ದವನು ಕೊನೆಗೆ ತನ್ನದಲ್ಲದ ಜಾತಿಯ ಹುಡುಗಿಯನ್ನು ಮದುವೆಯಾಗಿದ್ದನು.  


ಮಗನ ಈ ಕೆಲಸ ಕಂಡು ಪಾರ್ತಕ್ಕ ವಾಸುದೇವರಾಯರಿಗೆ ತಾನಿನ್ನು ಈ ಮನೆಯಲ್ಲಿ ಇರಲಾರೆನೆಂದು.. ತನಗೆ ಈ ಮನೆಯ ಋಣ ಹರಿಯಿತೆಂದು.. ಇಲ್ಲವಾದಲ್ಲಿ ನಿನ್ನ ಮಕ್ಕಳ ಮದುವೆ ಮುಂಜಿಗೆ ಇದರಿಂದ ಕಷ್ಟವಾಗಬಹುದು ಎಂದು ಹೊರಟು ಹೋಗಲು ಸಿದ್ಧವಿದ್ದವರನ್ನು ವಾಸುದೇವರಾಯರು ಹೋಗಲು ಬಿಡಲಿಲ್ಲ.


ಮಕ್ಕಳ ಹಣೆಯಲ್ಲಿ ಬರೆದಂತಾಗುತ್ತದೆ. ಅಲ್ಲದೆ, ಊರಿನವರ ಚಿಂತೆ ನಿಮಗೆ ಬೇಡ ಎಂಬ ಮಾತು ಹೇಳಿ ಸಾಂತ್ವನಿಸಿ ಅವರನ್ನು ಅಲ್ಲಿಯೇ ಉಳಿಸಿಕೊಂಡಿದ್ದರು. ಗೌರಕ್ಕನವರಿಗೆ ಇದು ನುಂಗಲಾರದ ತುತ್ತು. ಎಷ್ಟಾದರೂ.. ತಾಯಿಯಾಗಿ ಮಕ್ಕಳ ಭವಿಷ್ಯವನ್ನು ಮಾತ್ರ ಯೋಚಿಸುವಂತಹ ಜೀವವಲ್ಲವೇ..? 


ತನ್ನ ಆಲೋಚನೆಯನ್ನು ಗಂಡನೊಡನೆ ಹಂಚಿಕೊಂಡಾಗ "ಹೊಳೆ ದಾಟಿದ ಮೇಲೆ ದೋಣಿಯವ ಏಕೆ ಎಂಬ ರೀತಿಯ ಆಲೋಚನೆ ಬೇಡ. ಹಾಗೆ ಮಾಡಿದರೆ ನಮ್ಮನ್ನು ಮನುಷ್ಯರು ಎನ್ನುತ್ತಾರೆಯೇ..?" ಎಂದು ಬಾಯಿ ಮುಚ್ಚಿಸಿದ್ದರು. ಪಾರ್ತಕ್ಕನನ್ನು ಬೇರೆ ಇಟ್ಟು ಅವರ ದೇಖಾರೇಖಿ ನೋಡಿಕೊಳ್ಳುವ ಎಂದು ಹೇಳಿದರಾದರೂ.. ವಾಸುದೇವರಾಯರು ಒಪ್ಪಿರಲಿಲ್ಲ. ಗೌರಮ್ಮನವರೇ ಪರಿಸ್ಥಿತಿಗೆ ನಿಧಾನವಾಗಿ ಮನಸ್ಸನ್ನು ಹೊಂದಿಸಿಕೊಂಡಿದ್ದರು. ಆದರೂ.. ಅವರ ಮನಸ್ಸು ಒಮ್ಮೆ ಅತ್ತ ಒಮ್ಮೆ ಇತ್ತ ಓಲಾಡುತ್ತಲೇ ಇತ್ತು. ಊರಿನಲ್ಲಿ ವಾಸುದೇವರಾಯರ ನಡೆಗೆ ಟೀಕೆಗಳು ಇದ್ದರೂ.. ಇವರ ಮುಂದೆ ಹೇಳುವಷ್ಟು ಧೈರ್ಯವನ್ನು ಯಾರೂ ತೋರುತ್ತಿರಲಿಲ್ಲ.


ಸರೋಜ ನಡೆ - ನುಡಿಯಲ್ಲಿ ಅಮ್ಮನಂತಲ್ಲದೆ, ಅಪ್ಪನಂತೆ ಆಲೋಚಿಸುವ ಜೀವಿ. ಅವಳ ವಿವಾಹವೂ ಕೂಡಿ ಬರದೆ, ನಿಧಾನವಾಗುತ್ತಲೇ ಸಾಗುತ್ತಿತ್ತು. ವಾಸುದೇವರಾಯರಿಗೆ ಆ ಕುರಿತು ಅಂತಹ ಚಿಂತೆಯೇನೂ ಇರಲಿಲ್ಲ. ಮಗಳನ್ನು ಸ್ವತಂತ್ರವಾದ ಆಲೋಚನೆ ಮಾಡುವಷ್ಟು ಗಟ್ಟಿಯಾಗಿಯೇ ಬೆಳೆಸಿದ್ದರು. ಆ ಮನೆಯ ಹೆಣ್ಣುಜೀವಗಳಲ್ಲಿ ವಿಭಿನ್ನವಾಗಿ ಆಲೋಚಿಸುವ ಹಾಗೂ ಗಟ್ಟಿಗಿತ್ತಿಯಾಗಿ ಕಾಣುತ್ತಾಳೆ ಸರೋಜ.


ವಾಸುದೇವರಾಯರು ಭಾಸ್ಕರನ ಮನೆಗೆ ಹೋಗಿ ಬಂದಿದ್ದರು. ಆತನ ಪತ್ನಿಯನ್ನು ಕುಮುದಿನಿ ಎಂದು ಮರುನಾಮಕರಣ ಮಾಡಿದ್ದ. ಅಲ್ಲದೆ, ಎಲ್ಲಾ ನಯನಾಜೂಕುಗಳನ್ನು ಹಾಗೂ ರೀತಿ - ನೀತಿಗಳನ್ನು ಕಲಿಸಿಕೊಡುತ್ತಿದ್ದ. ಕೇವಲ ಭಾಸ್ಕರನ ಮನೆಯಲ್ಲಿ ಮಾತ್ರವಲ್ಲದೆ.. ಆಕೆಯ ಜಾತಿಯಲ್ಲಿಯೂ ಅವರನ್ನು ಬಹಿಷ್ಕಾರ ಮಾಡಿದ್ದರು. ಅವರ ಸುದ್ದಿ ಆಗೀಗ ತಿಳಿಯುತ್ತಿದ್ದದ್ದು ಶೀನನ ಮೂಲಕವೇ.. ವಾಸುದೇವರಾಯರು ಮಾತ್ರವಲ್ಲದೆ ಕಾಲೇಜು ಕಲಿಯುತ್ತಿದ್ದ ಶೀನನೂ ಅಷ್ಟು ಮಡಿ-ಮೈಲಿಗೆಯನ್ನು ಆಚರಿಸುತ್ತಿರಲಿಲ್ಲ. ಆದರೆ ಪಾರ್ತಕ್ಕ ಹಾಗೂ ಗೌರಮ್ಮನಿಗೆ ಇದು ಸರಿ ಬರುತ್ತಿರಲಿಲ್ಲ.


ಮನೆಯಲ್ಲಿನ ಮಡಿ-ಮೈಲಿಗೆಯ ವಿಚಾರವನ್ನು ಹಾಗೂ ಮನೆಯಲ್ಲಿ ಕೆಲಸಕ್ಕೆ ಬರುವ ತೋಟಿ, ನರಪಟೆ ಹಾಗೂ ಕೊರಗರ ರೀತಿ - ನೀತಿಗಳು, ಅವರು ಕೆಲಸಕ್ಕೆ ಬರುವ ಸಂದರ್ಭಗಳು ಹಾಗೂ ಪ್ರಸಂಗಗಳನ್ನು ಬಿಡಿಸಿಡುತ್ತಾರೆ. 


ಭಾಸ್ಕರ ಜೈಲಿಗೆ ಸೇರಿದ ಪ್ರಸಂಗ ಹಾಗೂ ಅದೇ ಸಂದರ್ಭದಲ್ಲಿ ತುಂಬ ಗರ್ಭಿಣಿಯಾಗಿದ್ದ ಕುಮುದಿನಿಯ ಆರೈಕೆಯ ಕುರಿತಾಗಿ ವಾಸುದೇವರಾಯರು ತಳೆದ ನಿರ್ಧಾರವೇನು ಹಾಗೂ ಇದಕ್ಕೆ ಮನೆಯಲ್ಲಿ ಎಲ್ಲರ ಪ್ರತಿಕ್ರಿಯೆ ಹೇಗಿತ್ತು ಓದಿ ನೋಡಿ.


ಹಿರಿಯರ ಪ್ರತಿಕ್ರಿಯೆಯ ಜೊತೆಗೆ ಮನೆಯಲ್ಲಿನ ಮಕ್ಕಳಾದ ಪುಟ್ಟ, ಜಯ, ಶಾಮಿ, ಶಿವ ಹೀಗೆ ವಯಸ್ಸಿನ ಅಂತರದಿಂದ ಅವರ ಮನಸ್ಸಿನಲ್ಲಿ ಮೂಡಿ ಬರುವ ಪ್ರಶ್ನೆಗಳು ಆಯಾ ವಯೋಮಾನಕ್ಕೆ ತಕ್ಕುದಾದ ಆಲೋಚನೆಗಳನ್ನು ತೆರೆದಿಡುತ್ತವೆ.


ಲೇಖಕಿ ಈ ಕಾದಂಬರಿಯನ್ನು 1982 ರಲ್ಲಿ ಸುಧಾ ವಾರಪತ್ರಿಕೆಯ ಯುಗಾದಿ ಕಾದಂಬರಿ ಸ್ಪರ್ಧೆಗಾಗಿ ಬರೆದ ಕಾದಂಬರಿ. ಇದಕ್ಕೆ ವಿಶೇಷ ಬಹುಮಾನ ಸಿಕ್ಕು ಸುಧಾ ಪತ್ರಿಕೆ ಇದನ್ನು ಧಾರವಾಹಿಯಾಗಿ ಪ್ರಕಟಿಸಿತ್ತು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ